ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿರುವುದರ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೇಲ್ಮನವಿ ನ್ಯಾಯಾಧೀಕರಣದ ಮುಂದೆ ಬಾಕಿ ಇರುವಾಗಲೇ, ಅವರ ಪೌರತ್ವವನ್ನು ನಿರ್ಧರಿಸಲು ಮುಂದಾದ ಪ್ರಾಧಿಕಾರದ ಕ್ರಮದ ಕುರಿತು ಕಲ್ಕತ್ತಾ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಕೋರ್ಟ್, ಬಿಲಾಸ್‌ಪುರದ ಪೊಲೀಸ್ ಅಧೀಕ್ಷಕರೂ ಆಗಿರುವ ವಿದೇಶಿಯರ ನೋಂದಣಿ ಅಧಿಕಾರಿಯನ್ನು (ಎಫ್‌ಆರ್‌ಒ) ತರಾಟೆಗೆ ತೆಗೆದುಕೊಂಡಿದೆ.
ಮುರ್ಷಿದಾಬಾದ್‌ನ ಸಂಸೇರಗಂಜ್ ವ್ಯಾಪ್ತಿಯ ಹಿರಾನಂದಪುರ ಗ್ರಾಮದ ನಿವಾಸಿಯಾದ ಮೊಸ್ತಾಕಿಮ್ ಶೇಖ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೃಷ್ಣ ರಾವ್ ಅವರು ಪ್ರಶ್ನೆಗಳನ್ನು ಎತ್ತಿದ್ದು, ಎಸ್‌ಐಆರ್ ಮೇಲ್ಮನವಿ ನ್ಯಾಯಾಧೀಕರಣದ ಮುಂದೆ ಈ ನಾಲ್ವರು ವ್ಯಕ್ತಿಗಳು ಸಲ್ಲಿಸಿರುವ ಮೇಲ್ಮನವಿಗಳ ಶೀಘ್ರ ವಿಚಾರಣೆಯನ್ನು ಕೋರಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಬಾಂಗ್ಲಾದೇಶದ ಪ್ರಜೆಗಳೆಂಬ ಶಂಕೆಯ ಮೇಲೆ ಸೆಪ್ಟೆಂಬರ್ 4ರಂದು ಬಂಧಿಸಲಾದ 23 ಜನರಲ್ಲಿ ಈ ನಾಲ್ವರು ವ್ಯಕ್ತಿಗಳೂ ಸೇರಿದ್ದಾರೆ. ಅವರಲ್ಲಿ 19 ಜನರನ್ನು ಎರಡು ವಾರಗಳ ನಂತರ ಬಿಡುಗಡೆ ಮಾಡಲಾಗಿತ್ತು. ಆದರೆ ಉಳಿದ ನಾಲ್ವರು ಇನ್ನೂ ಕಸ್ಟಡಿಯಲ್ಲೇ ಇದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನಗಳ ಮೇರೆಗೆ ರಚಿಸಲಾದ ಮೇಲ್ಮನವಿ ನ್ಯಾಯಾಧೀಕರಣದ ಮುಂದೆ, ಈ ನಾಲ್ವರು ವ್ಯಕ್ತಿಗಳು ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆದುಹಾಕಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಹಾಕಿದ್ದರು ಎಂದು ಶೇಖ್ ಅವರ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ರಾವ್ ಅವರು, ನ್ಯಾಯಾಧೀಕರಣವು ಈಗಾಗಲೇ ಈ ನಾಲ್ವರು ವ್ಯಕ್ತಿಗಳ ಮೇಲ್ಮನವಿಗಳ ಪರಿಶೀಲನೆಯಲ್ಲಿ ತೊಡಗಿರುವಾಗ, ಅಧಿಕಾರಿಗಳು ಏಕಕಾಲದಲ್ಲಿ ಅವರ ಪೌರತ್ವ ಅಥವಾ ರಾಷ್ಟ್ರೀಯತೆಯನ್ನು ಹೇಗೆ ನಿರ್ಧರಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
“ನಿಮ್ಮ ಅಧಿಕಾರಿಗಳ ಕರ್ತವ್ಯವೇನು? ನ್ಯಾಯಾಧೀಕರಣದ ಕರ್ತವ್ಯವೇನು? ಒಂದು ವೇಳೆ ನಿಮ್ಮ ಅಧಿಕಾರಿಗಳೇ ಏಕಕಾಲದಲ್ಲಿ ಇದನ್ನು ನಿರ್ಧರಿಸುವುದಾದರೆ, ನಾನು ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಉಲ್ಲೇಖಿಸಿ ಆದೇಶ ಹೊರಡಿಸುತ್ತೇನೆ. ಎಲ್ಲರ ರಾಷ್ಟ್ರೀಯತೆಯನ್ನು ಅಧಿಕಾರಿಯೇ ನಿರ್ಧರಿಸುತ್ತಿದ್ದಾನೆ. ನೀವು ಇದನ್ನು ಏಕೆ ಮಾಡುತ್ತಿದ್ದೀರಿ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.
ನ್ಯಾಯಾಲಯವು ಈ ಪರಿಸ್ಥಿತಿಯನ್ನು “ಪರಸ್ಪರ ವಿರೋಧಾತ್ಮಕ” ಎಂದು ಕರೆದಿದೆ. ಅಧಿಕಾರಿಗಳು ಏಕಕಾಲದಲ್ಲಿ ಈ ವ್ಯಕ್ತಿಗಳ ಪೌರತ್ವವನ್ನು ನಿರ್ಧರಿಸುವುದಾದರೆ, ಬಾಕಿ ಉಳಿದಿರುವ ಮೇಲ್ಮನವಿಗಳಿಂದ ಏನು ಪ್ರಯೋಜನ ಎಂದು ಕೋರ್ಟ್ ಪ್ರಶ್ನಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಅವರು ಭಾರತೀಯರಲ್ಲ ಎಂದು ನಿಮ್ಮ ಪ್ರಾಧಿಕಾರವೇ ಹೇಳುತ್ತಿದ್ದರೆ, ಇನ್ನು ಮೇಲ್ಮನವಿ ಪ್ರಾಧಿಕಾರವೇನು ಮಾಡುತ್ತದೆ? ನೀವು ಜನರೊಂದಿಗೆ ಆಟವಾಡುತ್ತಿದ್ದೀರಿ” ಎಂದು ನ್ಯಾಯಮೂರ್ತಿ ರಾವ್ ಪ್ರಶ್ನಿಸಿದ್ದಾರೆ.
ಮೇಲ್ಮನವಿ ನ್ಯಾಯಮಂಡಳಿಯು ಬಂಧಿತರ ಮೇಲ್ಮನವಿಗಳನ್ನು “ಸಕ್ರಿಯವಾಗಿ ವಿಚಾರಣೆ ನಡೆಸುತ್ತಿರುವಾಗ”, ಎಫ್‌ಆರ್‌ಒ ಅವರು ಆ ವ್ಯಕ್ತಿಗಳ ಪೌರತ್ವವನ್ನು ಹೇಗೆ ನಿರ್ಧರಿಸಲು ಸಾಧ್ಯವಾಯಿತು ಎಂದು ನ್ಯಾಯಾಲಯವು ಖಾರವಾಗಿ ಪ್ರಶ್ನಿಸಿದೆ.
“ಅರ್ಜಿದಾರರು ಈಗಾಗಲೇ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂಬುದು ನಿಮಗೆ ತಿಳಿದ ಮೇಲೆ, ನೀವು ಏಕಕಾಲದಲ್ಲಿ ಅವರ ಪೌರತ್ವವನ್ನು ನಿರ್ಧರಿಸುತ್ತಿದ್ದರೆ ಆ ಮೇಲ್ಮನವಿಯ ಪರಿಣಾಮವೇನಾಗುತ್ತದೆ?” ಎಂದು ನ್ಯಾಯಾಲಯ ಕೇಳಿದೆ.
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಈ ವಿಷಯವನ್ನು ನಿರ್ವಹಿಸುತ್ತಿರುವ ರೀತಿಯನ್ನು ನ್ಯಾಯಮೂರ್ತಿ ರಾವ್ ಪ್ರಶ್ನಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಿರುವ ಕುರಿತಾದ ಮೇಲ್ಮನವಿಯು ಬಾಕಿ ಇರುವಾಗಲೇ ರಾಷ್ಟ್ರೀಯತೆಯನ್ನು ನಿರ್ಧರಿಸುವುದು, ಮೇಲ್ಮನವಿ ಪ್ರಕ್ರಿಯೆಯ ಉದ್ದೇಶದ ಮೇಲೆಯೇ ಪ್ರಶ್ನೆಗಳನ್ನು ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
ನಾಲ್ಕು ಜನರನ್ನು ವಿದೇಶಿಯರ ನೋಂದಣಿ ಅಧಿಕಾರಿಯು (ಎಫ್‌ಆರ್‌ಒ) ವಶಕ್ಕೆ ಪಡೆದಿದ್ದಾರೆ ಎಂದು ಹೈಕೋರ್ಟ್‌ಗೆ ತಿಳಿಸಲಾಗಿತ್ತು. ಆದರೆ, ಈ ಕಾನೂನು ಪ್ರಕ್ರಿಯೆಗಳಲ್ಲಿ ಎಫ್‌ಆರ್‌ಒ ಅವರನ್ನು ಒಂದು ಪಾರ್ಟಿ ಅಥವಾ ಪ್ರತಿವಾದಿಯನ್ನಾಗಿ ಮಾಡಿರಲಿಲ್ಲ.
ಆದ್ದರಿಂದ ನ್ಯಾಯಾಲಯವು ಎಫ್‌ಆರ್‌ಒ ಅವರನ್ನು ಈ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಸೇರಿಸಲು ಅರ್ಜಿದಾರರ ಪರ ವಕೀಲರಿಗೆ ನಿರ್ದೇಶಿಸಿದೆ ಮತ್ತು ಈ ಬಂಧನದ ಕುರಿತು ವರದಿಯನ್ನು ಸಲ್ಲಿಸುವಂತೆ ಅವರ ಕಚೇರಿಯನ್ನು ಕೋರಿದೆ. ಅಕ್ಟೋಬರ್ 8ರಂದು ಈ ವಿಷಯವನ್ನು ವಿಚಾರಣೆಗೆ ಪಟ್ಟಿ ಮಾಡಲು ನ್ಯಾಯಾಲಯ ಸೂಚಿಸಿದೆ.
ಅರ್ಜಿದಾರರ ಪರ ವಕೀಲರ ಪ್ರಕಾರ, ಈ ನಾಲ್ವರೂ ವ್ಯಕ್ತಿಗಳ ಹೆಸರುಗಳು 2002ರ ಮತದಾರರ ಪಟ್ಟಿಯಲ್ಲಿದ್ದವು ಮತ್ತು ಅವರು 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲೂ ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು.
ಬಂಧನಕ್ಕೊಳಗಾದ ನಾಲ್ವರು ವ್ಯಕ್ತಿಗಳ ನೆರೆಹೊರೆಯವರಾದ ಶೇಖ್ ಅವರು, ಎಸ್‌ಐಆರ್ ಮೇಲ್ಮನವಿ ನ್ಯಾಯಾಧೀಕರಣದ ಮುಂದೆ ಬಾಕಿ ಇರುವ ಅವರ ಮೇಲ್ಮನವಿಗಳನ್ನು ಶೀಘ್ರವಾಗಿ ಪರಿಶೀಲಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಈ ಅರ್ಜಿಯನ್ನು ಸಲ್ಲಿಸಿದ್ದರು.


