ಅಕ್ಟೋಬರ್ 10 ರಂದು ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗವಹಿಸಲು ನವದೆಹಲಿಗೆ ಪ್ರಯಾಣಿಸುತ್ತಿದ್ದ ಸುಮಾರು 15 ವಿದ್ಯಾರ್ಥಿಗಳನ್ನು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಇಟಾರ್ಸಿ ಜಂಕ್ಷನ್‌ನಲ್ಲಿ ರೈಲಿನಿಂದ ಬಲವಂತವಾಗಿ ಕೆಳಗಿಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿಗಳನ್ನು ರೈಲಿನಿಂದ ಬಲವಂತವಾಗಿ ಕೆಳಗಿಳಿಸುತ್ತಿರುವ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ನಡೆದಿದೆ ಎನ್ನಲಾದ ಅನಿಯಮಿತತೆಗಳ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ಅಕ್ಟೋಬರ್ 10 (ಶನಿವಾರ) ರಂದು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಘೋಷಿಸಿದೆ.
ವರದಿಗಳ ಪ್ರಕಾರ, ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸುಮಾರು 15 ವಿದ್ಯಾರ್ಥಿಗಳು ಗೋವಾ ಎಕ್ಸ್‌ಪ್ರೆಸ್‌ನಲ್ಲಿ ಪುಣೆಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ಆದರೆ, ಅಕ್ಟೋಬರ್ 8, ಗುರುವಾರ ರಾತ್ರಿ ರೈಲು ಇಟಾರ್ಸಿ ಜಂಕ್ಷನ್ ತಲುಪಿದಾಗ ಅವರನ್ನು ರೈಲಿನಿಂದ ಕೆಳಗೆ ಇಳಿಯುವಂತೆ ಮಾಡಲಾಗಿದೆ.
ಈ ಕುರಿತು ಶುಕ್ರವಾರ ಮಾತನಾಡಿದ ಇಟಾರ್ಸಿಯ ಸರಕಾರಿ ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಸಂಜಯ್ ಚೌಕ್ಸೆ, “ವಿದ್ಯಾರ್ಥಿಗಳನ್ನು ರೈಲಿನಿಂದ ಇಳಿಸಲಾಯಿತು, ನಂತರ ಅವರನ್ನು ಗೌರವಯುತವಾಗಿ ಬಿಡುಗಡೆ ಮಾಡಲಾಯಿತು” ಎಂದು ತಿಳಿಸಿದ್ದು, ಈ ಕ್ರಮಕ್ಕೆ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ.
ಅವರೆಲ್ಲರೂ ತಮ್ಮ ಸ್ವಂತ ಇಚ್ಛೆಯಿಂದ ಇಟಾರ್ಸಿಯ ಹೋಟೆಲ್ ಒಂದರಲ್ಲಿ ತಂಗಿದ್ದಾರೆ ಎಂದು ಅವರು ಹೇಳಿದರು.


