ಪತ್ರಕರ್ತರ ಕಾರ್ಯಕ್ರಮಗಳಲ್ಲಿ ಅವರಿಗೆ ಕುರ್ಚಿ ಹಾಕುವ ಜವಾಬ್ದಾರಿ ನಿರ್ವಹಿಸುತ್ತಿದ್ದ ದಿನಗಳಿಂದಲೂ ಮಾಧ್ಯಮಗಳೊಂದಿಗೆ ತಮಗೆ ದೀರ್ಘಕಾಲದ ಸಂಬಂಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ನ.12) ಹೇಳಿದ್ದಾರೆ.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಆಯೋಜಿಸಿದ್ದ ದೀಪಾವಳಿ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದ ಪತ್ರಿಕೋದ್ಯಮವು ಪತ್ರಿಕಾ ಪ್ರಕಟಣೆಗಳ ಕಾಲದಿಂದ ಇನ್ಸ್ಟಾಗ್ರಾಂ ರೀಲ್ಸ್ವರೆಗೂ ಬದಲಾಗಿರುವುದನ್ನು ತಾವು ಕಂಡಿದ್ದೇನೆ ಎಂದರು.
“ಬಹಳ ವರ್ಷಗಳಿಂದ ನಮ್ಮೊಂದಿಗೆ ಒಡನಾಟ ಹೊಂದಿರುವವರಿಗೆ ನಿಮ್ಮೆಲ್ಲರೊಂದಿಗೆ ನನಗೆ ನಿಕಟ ಮತ್ತು ಸೌಹಾರ್ದಯುತ ಸಂಬಂಧವಿದೆ ಎಂಬುದು ತಿಳಿದಿದೆ. ಪತ್ರಿಕಾ ಪ್ರಕಟಣೆಗಳಿಂದ ಹಿಡಿದು ಇನ್ಸ್ಟಾಗ್ರಾಂ ರೀಲ್ಸ್ವರೆಗೆ ಮಾಧ್ಯಮ ಸಂವಹನದ ಸುದೀರ್ಘ ಪಯಣಕ್ಕೆ ನಾನು ಸಾಕ್ಷಿಯಾಗಿದ್ದೇನೆ” ಎಂದು ಪ್ರಧಾನಿ ಹೇಳಿದರು.
1990ರ ದಶಕದ ಆರಂಭದಲ್ಲಿ ಬಿಜೆಪಿ ದೇಶಾದ್ಯಂತ ಯಾತ್ರೆಗಳನ್ನು ಆಯೋಜಿಸುತ್ತಿದ್ದಾಗ ಪತ್ರಕರ್ತರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡುವ ಜವಾಬ್ದಾರಿ ತಮ್ಮದಾಗಿರುತ್ತಿತ್ತು ಎಂದು ಅವರು ನೆನಪಿಸಿಕೊಂಡರು.
“ನಾನು ದೆಹಲಿಗೆ ಬಂದ ನಂತರವೂ ಈ ಜವಾಬ್ದಾರಿಯನ್ನು ಮುಂದುವರಿಸಿದೆ. ಆಗಲೂ ಇಂದಿನ ದೀಪಾವಳಿ ಮಿಲನ ಕಾರ್ಯಕ್ರಮಗಳಂತೆಯೇ ನಿಮಗೆ ಕುರ್ಚಿಗಳನ್ನು ಹಾಕುವುದು ಮತ್ತು ನಿಮ್ಮನ್ನು ಸ್ವಾಗತಿಸುವುದು ನನ್ನ ಕೆಲಸವಾಗಿತ್ತು” ಎಂದು ಮೋದಿ ಹೇಳಿದರು.
“ಆ ದಿನಗಳಲ್ಲಿ ಕ್ಯಾಮೆರಾಗಳ ಸಂಖ್ಯೆ ಕಡಿಮೆಯಿತ್ತು. ಆದರೆ ಸಂಬಂಧಗಳಲ್ಲಿನ ಆತ್ಮೀಯತೆ ಮಾತ್ರ ಇಂದಿನಂತೆಯೇ ಇತ್ತು. ಆಗಲೂ ಬಹಳ ಸಂತೋಷದಾಯಕ ಮತ್ತು ಉತ್ಸಾಹಭರಿತ ವಾತಾವರಣವಿರುತ್ತಿತ್ತು” ಎಂದರು.
2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನರೇಂದ್ರ ಮೋದಿ ಭಾರತದಲ್ಲಿ ಈವರೆಗೆ ಮುಕ್ತವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಏಕಾಂಗಿ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಪೂರ್ವನಿಗದಿಯಿಲ್ಲದ ಪತ್ರಕರ್ತರೊಂದಿಗಿನ ಸಂವಾದಗಳಿಂದಲೂ ಅವರು ದೂರ ಉಳಿದಿದ್ದಾರೆ.
‘ಭಾರತದ ಯಶೋಗಾಥೆಗಳ ಮೇಲೆ ಕೆಲಸ ಮಾಡಿ’
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದ ಯಶೋಗಾಥೆಗಳನ್ನು ಮಾಧ್ಯಮಗಳು ಜನರ ಮುಂದಿಡಬೇಕು ಎಂದು ಮನವಿ ಮಾಡಿದರು. ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಎಂದೂ ಹೇಳಿದರು.
“ಭಾರತದ ಮಾಧ್ಯಮಗಳು ದೇಶದ ಯಶೋಗಾಥೆಗಳ ಕುರಿತು ಕೆಲಸ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ” ಎಂದು ಪ್ರಧಾನಿ ಹೇಳಿದರು.
ಸುದ್ದಿ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಬಿಕ್ಕಟ್ಟು ಮತ್ತು ವಿಪತ್ತುಗಳ ಸಂದರ್ಭಗಳಲ್ಲಿಯೂ ವರದಿಗಾರರು ಎಲ್ಲೆಡೆ ತೆರಳುತ್ತಿದ್ದಾರೆ ಎಂದು ಅವರು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಪ್ರಸ್ತಾಪಿಸಿದ ಮೋದಿ, ಭಾರತ ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
1971ರ ಚುನಾವಣಾ ಪ್ರಚಾರದಲ್ಲಿ ಇಂದಿರಾ ಗಾಂಧಿ ನೀಡಿದ್ದ ‘ಗರೀಬಿ ಹಠಾವೋ’ (ಬಡತನ ನಿರ್ಮೂಲನೆ) ಘೋಷಣೆಯನ್ನು ಉಲ್ಲೇಖಿಸಿ ಪರೋಕ್ಷವಾಗಿ ಟೀಕಿಸಿದ ಅವರು, “ಆಗ ‘ಗರೀಬಿ ಹಠಾವೋ’ ಎಂಬ ಘೋಷಣೆಗಳಿದ್ದವು. ಆದರೆ ಬಡತನವನ್ನು ನಿರ್ಮೂಲನೆ ಮಾಡಿದ್ದು ಈ ಸರ್ಕಾರ” ಎಂದು ಹೇಳಿದರು.
ವಿಶ್ವಬ್ಯಾಂಕ್ನ ದಾಖಲೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಳೆದ 12 ವರ್ಷಗಳಲ್ಲಿ 50 ಕೋಟಿ ನಾಗರಿಕರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲಾಗಿದೆ ಎಂದು ಪ್ರತಿಪಾದಿಸಿದರು.


