ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಿರುವುದಕ್ಕೆ ಕಾರಣ ತಿಳಿಸುವಂತೆ ಪತ್ರಕರ್ತರ ಸಂಘ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಗುರುವಾರ (ನ.12) ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆ, ಭಾರತ ಸರ್ಕಾರದ ವರ್ತನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
“ಹೈದರಾಬಾದ್ನಲ್ಲಿ ಆಯೋಜಿಸಿರುವ ‘ಭಾರತ್ ಸಮ್ಮಿಟ್’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಬೇಕಿತ್ತು. ಭಾರತಕ್ಕೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಹೊರಡುವ ಕೆಲವೇ ನಿಮಿಷಗಳ ಮೊದಲು, ತಮಗೆ ಭಾರತ ಪ್ರವೇಶಿಸಲು ಅನುಮತಿ ಇಲ್ಲ ಎಂದು ನಾರ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ತಿಳಿಸಲಾಯಿತು” ಎಂದು ಲಿಂಗ್ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದಾರೆ. ಈ ವೀಸಾ ರದ್ದತಿಗೆ ಕಾರಣವೇನು ಎಂಬುದು ಇಜಿಐಗೆ ಅರ್ಥವಾಗುತ್ತಿಲ್ಲ. ಹೆಲ್ಲೆ ಲಿಂಗ್ ಒಬ್ಬ ಅಧಿಕೃತ ಮತ್ತು ಗೌರವಾನ್ವಿತ ಅಂತಾರಾಷ್ಟ್ರೀಯ ಪತ್ರಕರ್ತೆ. ಮೇ 2026ರಲ್ಲಿ ಓಸ್ಲೋದಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದೇ ಅವರ ‘ಅಪರಾಧ’ ಎಂದು ತೋರುತ್ತದೆ ಎಂದು ಇಜಿಐ ಹೇಳಿದೆ.
“ಇಂತಹ ಕ್ರಮಗಳು ಅಧಿಕಾರಶಾಹಿಯ ಅತಿಯಾದ ಹಸ್ತಕ್ಷೇಪವನ್ನು ಸೂಚಿಸುತ್ತವೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ವರ್ಚಸ್ಸಿಗೆ ಅಪಾರ ಹಾನಿಯನ್ನುಂಟುಮಾಡುತ್ತವೆ. ವಾಕ್ ಸ್ವಾತಂತ್ರ್ಯವು ಯಾವುದೇ ಕ್ರಿಯಾಶೀಲ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳಲ್ಲಿ ಒಂದಾಗಿದೆ. ಇದು ಸಂವಿಧಾನದ ವಿಧಿ 19(1)(a) ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕು ಕೂಡ ಆಗಿದೆ” ಎಂದಿದೆ.
“ಹೆಲ್ಲೆ ಲಿಂಗ್ ಅವರ ವೀಸಾವನ್ನು ರದ್ದುಗೊಳಿಸಲು ಕಾರಣವೇನು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕೆಂದು ಇಜಿಐ ಆಗ್ರಹಿಸುತ್ತದೆ. ಅಲ್ಲದೆ, ಈ ರದ್ದತಿಯನ್ನು ಹಿಂಪಡೆಯಬೇಕು ಮತ್ತು ಹೆಲ್ಲೆ ಲಿಂಗ್ ಅವರು ಭಾರತೀಯ ಜನರ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತದೆ” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರ್ವೆಗೆ ಭೇಟಿ ನೀಡಿದ್ದಾಗ, ಅವರಿಗೆ ಪ್ರಶ್ನೆ ಕೇಳಿ ಸುದ್ದಿಯಾಗಿದ್ದ ಅಲ್ಲಿನ ಪತ್ರಕರ್ತೆ ಹೆಲ್ಲೆ ಲಿಂಗ್ ಅವರ ಭಾರತ ಭೇಟಿಗೆ ಕೊನೆ ಕ್ಷಣದಲ್ಲಿ ತಡೆಯೊಡ್ಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಗುರುವಾರ (ನ.11) ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಲ್ಲೆ ಲಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
“ಬಹುಷ ನಾನು ಈ ಹಿಂದೆ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳಿದ್ದಕ್ಕೆ ಅಥವಾ ಅವರ ಗೆಳೆಯರು ಎನ್ನಲಾದ ಅದಾನಿ ಮತ್ತು ಅಂಬಾನಿಯ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನ ಭಾರತ ಭೇಟಿಯನ್ನು ತಡೆದಿರಬಹುದು” ಎಂದಿದ್ದಾರೆ.
ಲಿಂಗ್ ಅವರು ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಇದು ಚರ್ಚೆಯ ವಿಷಯವಾಗಿದೆ. ಭಾರತದ ವಿಪಕ್ಷಗಳ ನಾಯಕರು ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


