Homeಅಂಕಣಗಳುನಮ್ಮ ಬೆನ್ನ ಹಿಂದೆ ನಡೆದ ಬೇಸಾಯೋ ಆಟ

ನಮ್ಮ ಬೆನ್ನ ಹಿಂದೆ ನಡೆದ ಬೇಸಾಯೋ ಆಟ

- Advertisement -
- Advertisement -

ಮೊನ್ನೆ ನಾವೆಲ್ಲ ಲಾಕಡೌನಿನ ಛಳಿಯಿಂದ ತಪ್ಪಿಸಿಕೊಳ್ಳಲಿಕ್ಕೆ ಮನಿಯೊಳಗ ಬೆಚ್ಚನೆ ಮಲಗಿದ್ದಾಗ ಹಣಕಾಸು ಸಚಿವೆ ನಿರ್ಮಲಾತಾಯಿ ಅವರು ಮೂರು ಪ್ರಮುಖ ನೀತಿ ಬದಲಾವಣೆಗಳನ್ನ ಘೋಷಣೆ ಮಾಡಿದಾರ.

ಅವು ಯಾವುಪಾ ಅಂದರ ಗುತ್ತಿಗೆ ಬೇಸಾಯ, ಎಪಿಎಂಸಿ ಕಾಯಿದೆ ಬದಲಾವಣೆ ಮತ್ತು ಅವಶ್ಯಕ ವಸ್ತು ಕಾಯಿದೆಗೆ ಅನವಶ್ಯಕ ಬದಲಾವಣೆ. ಇವು ರೈತರ ಬದಕು ಬದಲಾಯಿಸಲಿಕ್ಕೆ ಅವಶ್ಯಕ ಅಂತ ಅವರು ಹೇಳಿದರು.

ಆದರ ಇಷ್ಟ ಗಡಿಬಡಿಯೊಳಗ ರೈತರನ್ನು ಬದಲಾಯಿಸಬೇಕಾಗಿತ್ತೇನು? ಅವರಿಗೆ ಈಗ ಸಧ್ಯಕ್ಕ ಒಂದಿಷ್ಟು ಪರಿಹಾರ ಕೊಟ್ಟರ ಸಾಕಿತ್ತು ಅನ್ನೋ ಪ್ರಶ್ನೆಗೆ. ಹಂಗಲ್ಲಾ, ಈಗಿನ ಕೆಟ್ಟ ಪರಿಸ್ಥಿತಿ ಮುಗಿದ ನಂತರ ಯಾರು ಉಳೀತಾರಲ್ಲಾ, ಅವರನ್ನು ಬದಲಾಯಿಸಿತೇವಿ ಅಂತ ಸರಕಾರದವರ ಉತ್ತರ.

ಎಲ್ಲರಿಗೂ ಕಣ್ಣಿಗೆ ಕಾಣೋ ಕಣ್ಕಟ್ಟು ಅಂದರ ಅವಶ್ಯಕ ವಸ್ತು ಕಾಯಿದೆ ತಿದ್ದುಪಡಿ. ಇದು ಏನಪಾ ಅಂದರ ಕೆಲವು ವಸ್ತುಗಳು ಈ ದೇಶದ ಜನರಿಗೆ ಅವಶ್ಯವಾಗಿ ಬೇಕಾಗಿದ್ದಾವು, ಅವನ್ನು ಯಾರೂ ಕಳ್ಳಸಂತೆಯೊಳಗ ಮಾರಾಟ ಮಾಡಬಾರದು, ವಿನಾಕಾರಣ ಕೊರತೆ ಸೃಷ್ಟಿಸಬಾರದು, ಅಕಾರಣ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದು, ಮಾಡಿದರ ಅವರನ್ನ ಜೈಲಿಗೆ ಹಾಕತೇವಿ ಅಂತ ಒಂದು ಕಾನೂನು. ಸಂಗ್ರಹ ಮಾಡಿ ಇಟ್ಟದ್ದರಿಂದ ಕೊರತೆ ಉಂಟಾದರ ಜಿಲ್ಲಾಧಿಕಾರಿ ಹೋಗಿ ಆ ಆಹಾರ ಪದಾರ್ಥ ಜಪ್ತು ಮಾಡೋ ಅವಕಾಶ ಇದರಾಗ ಐತಿ.

ಈ ಕಾಯಿದೆ ಚೌಕಟ್ಟಿನಾಗ – ಆಹಾರ, ನೀರು, ನಾಣ್ಯ ಹಾಗೂ ನೋಟು, ಪೆಟ್ರೋಲು, ಪೋಸ್ಟು, ದೇಶದ ರಕ್ಷಣೆ, ರಸ್ತೆ- ಚರಂಡಿ ಸ್ವಚ್ಛತೆ, ಚುನಾವಣೆ , ಗೊಬ್ಬರ, ವಿದ್ಯುತ್ತು, ಕಲ್ಲಿದ್ದಲು, ಮಣ್ಣು -ಮಸಿ, ಎಲ್ಲಾ ಬರತಾವು.

ಇದರಾಗಿಂದ ಆಹಾರ ಧಾನ್ಯ, ಅಡುಗೆ ಎಣ್ಣೆ, ತರಕಾರಿ ಇತ್ಯಾದಿಗಳನ್ನು ಹೊರಗಡೆ ತೆಗೆಯೋ ತಯಾರಿ ನಡತೇತಿ. ಯಾಕಂದರ ಅವು ಅವಶ್ಯ ಅಲ್ಲನೋಡ್ರಿ. ಮನುಷ್ಯ ಆಹಾರ ಇಲ್ಲದೇ ಇರಬಹುದು, ಆದರ ಪೆಟ್ರೋಲು, ಗೊಬ್ಬರ ಇಲ್ಲದೇ ಇರಲಿಕ್ಕೆ ಆಗೋದಿಲ್ಲಲಾ. ಅದಕ್ಕ. ಇನ್ನ ಹಿಂಗೆಲ್ಲಾ ಬ್ರಿಟಿಷರ ಕಾಲದ ಕಾನೂನುಗಳಿಂದ ನಮ್ಮ ದೇಶದಾಗ ಆಹಾರ ಸಂಗ್ರಹಣೆ ಕಮ್ಮಿ ಆಗೇತಿ, ಕೃಷಿ ಉತ್ಪನ್ನ ರಫ್ತು ಆಗಲೊಲ್ಲದು, ಆಹಾರ ಸಂಸ್ಕರಣೆ ಉದ್ದಿಮೆ ಹಿಂದ ಉಳದೇತಿ ಅಂತ ಕೆಲವು ವ್ಯಾಪಾರಿಗಳು ತಮ್ಮ ಹಿತೈಷಿಗಳಾದ ಆಳುವ ಪಕ್ಷದ ನಾಯಕರ ಜೊತೆಗೆ ತಕರಾರು ತಗದರು. ಬಡವರು- ಹಿಂದುಳಿದವರು- ಅಧಿಕಾರ ಹೀನರು ಮಾತು ತಗದು ಹಾಕಬಹುದು, ಆದರ ಚುನಾವಣೆ ಖರ್ಚು ಕೊಡೋ ಧಣಿ- ಸೇಠುಗಳ ಮಾತು ಪಾಲಿಸಲಾರದಂಗ ಇರಲಿಕ್ಕೆ ಆಗತದೇನು? ಅದಕ್ಕ ಬಂತು ಒಂದು ಘೋಷಣೆ. ಇನ್ನ ಮ್ಯಾಲೆ ಆಹಾರ ಸಂಸ್ಕರಣೆ- ಸಂಗ್ರಹಣೆ- ರಫ್ತು ಮುಂತಾದ ದಂಧೆ ಮಾಡೋರು ಎಲ್ಲಾ ಎಷ್ಟು ಬೇಕು ಅಷ್ಟು ಆಹಾರ- ಎಣ್ಣೆ- ತರಕಾರಿ ಸಂಗ್ರಹ ಮಾಡಬಹುದು. ಯಾವಾನೂ ಅವರಿಗೆ ಬೈಯಂಗಿಲ್ಲ. ಬರಗಾಲ- ಕ್ಷಾಮದಾಗ ಅವರನ್ನ ಜೈಲಿಗೆ ಹಾಕೋದಿರಲಿ, ಅವರಿಗೆ ನೋಟೀಸು ಕೊಡಂಗಿಲ್ಲ.

ಅವರ ಹತ್ತರ ಹೋಗಿ ಮನವಿ ಮಾಡಬಹುದು ಅಷ್ಟ. ಇದಕ್ಕ ಸಂಬಂಧ ಪಟ್ಟದ್ದು ಅಂದರ ಎಪಿಎಂಸಿ ಕಾಯಿದೆ ತಿದ್ದುಪಡಿ. ಇದರ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನ ಎಪಿಎಂಸಿ ಯಾರ್ಡಿನಾಗ, ಟೆಂಡರ ಪ್ರಕ್ರಿಯೆ ಮೂಲಕ ಮಾಡಬೇಕು. ಯಾವುದರ ಕಂಪನಿಗೆ, ಸರಕಾರಕ್ಕ ಅಥವಾ ಕುಟುಂಬಗಳಿಗೆ ನೇರವಾಗಿ ಮಾರಂಗಿಲ್ಲ. ಕಳೆದ ಆರು ದಶಕಗಳಿಂದ ಇದು ನಡಕೊಂಡು ಬಂದದ. ಇದರಿಂದ ರೈತರಿಗೆ ಮಾರಲಿಕ್ಕೆ ಒಂದು ಜಾಗ ಸಿಕ್ಕದ, ಒಬ್ಬರ ಕಡೆ ಮಾರಿಕೊಂಡು ಕೈ ಕಟ್ಟಿಸಿಕೊಳ್ಳೋ ಅನಿವಾರ್ಯದಿಂದ ತಪ್ಪಿಸೇತಿ.

ಆದರ ಇದನ್ನ ಬದಲಿಸಿ, ಇನ್ನ ಮ್ಯಾಲೆ ದೊಡ್ಡ ದೊಡ್ಡ ಕಂಪನಿಗಳು ರೈತರ ಹೊಲದ ಬಾಗಿಲಿಗೆ ಹೋಗಿ ಖರೀದಿಸುವ ನೀತಿ( ಫಾರ್ಮ ಗೇಟು ಪಾಲಿಸಿ) ತರಾಕ ಹತ್ಯಾರು. ಎಪಿಎಂಸಿಯೊಳಗ ಅನೇಕ ತೊಂದರೆ- ಲಫಡಾ ಇರಬಹುದು. ಆದರ ಅದರ ಸದಸ್ಯರು ರೈತರಿಂದ ಚುನಾಯಿತರಾದವರು. ಅವರನ್ನ ಐದು ವರ್ಷದ ನಂತರ ಬದಲಿಸಬಹುದು. ಬಹುರಾಷ್ಟ್ರೀಯ ಕಂಪನಿಯ ಮಾಲಕರನ್ನ ಬದಲಾಯಿಸಲಿಕ್ಕೆ ನಮ್ಮ ಘಾಳೆಪ್ಪಾ ಧೂಳಪ್ಪಾ ಬಟಾಬಯಲಪ್ಪನವರ್ ಅನ್ನೋ ಹೆಸರಿನ ರೈತರು ಏನು ಷೇರು ಮಾರ್ಕೆಟದಾಗ ಆ ಕಂಪನಿಯ ಷೇರು ಖರೀದಿ ಮಾಡಿದಾರೇನು? ಹಳ್ಳಿಯೊಳಗ ಕುಂತ ರೈತನಿಗೆ ಬಂಬಾಯಿ- ದಿಲ್ಲಿ ಕಂಪನಿಗಳ ವಿರುದ್ಧ ಹೋರಾಡೋ ಶಕ್ತಿ ಎಲ್ಲೆ ಬರತೇತಿ. ಈಗಾಗಲೇ ಕೃಷಿ ವಿಮೆ ಕಂಪನಿಗಳ ವಿರುದ್ಧ ಹೋರಾಟ ಮಾಡಲಿಕ್ಕೆ ಆಗಲಾರದೇ ರೈತರು ಸುಮ್ಮನೆ ಆಗಿದಾರು. ಇನ್ನ ಖರೀದಿದಾರರ ವಿರುದ್ಧ ಏನು ಮಾಡತಾರು.

ಅಲ್ಲದೇ ಆಹಾರ ಕೊರತೆ ಆದಾಗ ಸರಕಾರ ರೈತರಿಂದ ಖರೀದಿಸಿ ಜನರಿಗೆ ಕೊಡಬಹುದು, ಎಪಿಎಂಸಿ ಮ್ಯಾಲೆ ಅವಲಂಬನ ಆಗಬಹುದು. ಅದೆಲ್ಲಾ ಬಿಟ್ಟು ಯಾವಾನೋ ಡೊನಾಲ್ಡ ಟ್ರಂಪನ ಅಳಿಯಾನ ಕಂಪನಿ ಮ್ಯಾಲೆ ಒಬ್ಬ ಜಿಲ್ಲಾಧಿಕಾರಿ ಏನು ಒತ್ತಡ ಹಾಕಲಿಕ್ಕೆ ಬರತೇತಿ?

ಇಷ್ಟರಾಗ ಅತಿ ಎಡವಟ್ಟು ಆಗಿದ್ದು, ಆದರ ಜನರಿಗೆ ಯಾರಿಗೂ ಗೊತ್ತಾಗದೇ ಇರೋದು ಅಂದರ ಗುತ್ತಿಗೆ ಬೇಸಾಯ ಪದ್ಧತಿ. ಇದೇನಪಾ ಅಂದರ ದಶಕಗಳವರೆಗೆ ಬಡಜನರು ಹೋರಾಟ ಮಾಡಿ ಗಿಟ್ಟಿಸಿಕೊಂಡ ಭೂಮಿಯ ಹಕ್ಕಿಗೆ ಬೆನ್ನಿಗೆ ಹಾಕಿದ ಚೂರಿ.

ಮ್ಯಾಲಿನಿಂದ ನೋಡಿದರ ಇದು ಬೆಳೆಯುವವರು ಹಾಗೂ ಖರೀದಿಸುವವರ ನಡುವೆ ಬೀಜಾ ಹಾಕೋ ಟೈಮ್‍ದಾಗ ಒಪ್ಪಂದ ಮಾಡಿಕೊಡಲಿಕ್ಕೆ ಅನುವು ಮಾಡಿಕೊಡೋ ಕಾಯಿದೆ. ಆದರ ಅದರಾಗ ರೈತನ ಬೆಳಿಗೆ ಬೆಲೆ ನಿರ್ಧಾರ ಮಾಡೋದು ಅಂದಿನ ಮಾರುಕಟ್ಟೆ ಅಲ್ಲಾ, ಅವನು ಒಂದು ವರ್ಷದ ಹಿಂದೆ ಯಾವುದೋ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದ ಅಂತ ಆಗತೇತಿ. ಅದು ರೈತನ ಹಿತದ ವಿರುದ್ಧ ಆದರ ಹೆಂಗ?

ಇನ್ನೊಂದು ಮಾತಂದರ ಕೃಷಿ ಭೂಮಿಯನ್ನ ಲೀಸು ಕೊಡಲಿಕ್ಕೆ ಇಲ್ಲಿವರೆಗೂ ಅವಕಾಶ ಇಲ್ಲ. ಹಳ್ಳಿಯೊಳಗ ಉತ್ಪನ್ನ ಹಂಚಿಕೆ ಆಧಾರದ ಮೇಲೆ ಮಾಲಿಕರು – ರೈತರ ನಡುವೆ ಬಾಯಿ ಮಾತಿನ ಒಪ್ಪಂದ ನಡದಾವು. ಅದು ಬ್ಯಾರೆ. ಆದರ ಗುತ್ತಿಗೆ ಬೇಸಾಯ ಕಾನೂನು ಅಂದರ ಬಡ ರೈತರ ಭೂಮಿಯನ್ನ ನೂರು ವರ್ಷ ಯಾವುದೋ ದೊಡ್ಡ ಕಂಪನಿಗೆ ಲೀಸು ಕೊಡಿಸೋ ಕಾಯಿದೆ. ಅಂದರ ಸುಮಾರು ನಾಲ್ಕು ತಲೆಮಾರು ಆ ಜಮೀನಿನ ಕಡೆ ಆ ರೈತರ ಕುಟುಂಬದವರು ನೋಡಂಗಿಲ್ಲ. ನೂರು ವರ್ಷ ರಂಟಿ – ಕುಂಟಿ ಹೊಡಿಯೋ ಅಭ್ಯಾಸ ಬಿಟ್ಟು ಹೋತು ಅಂದರ ಆಮ್ಯಾಲೆ ಏನು ಮಾಡತಾರ? ಆವಾಗ ರೈತರ ಮರಿ ಮಕ್ಕಳಿಗೆ ಬೀಜಾ ಹಾಕೋದು, ನೀರಾವರಿ ಮಾಡೋದು ಯಾರು ಹೇಳಿ ಕೊಡಬೇಕು?

ಬೇಸಾಯ ಅಂದರೆ ನೀ ಸಾಯ, ನಾ ಸಾಯ, ಮನೆ ಮಂದಿಎಲ್ಲ ಸಾಯಾ ಅನ್ನೋದು ಹಳೇ ಮೈಸೂರು ಕಡೆಯ ಹಳೇ ಜೋಕು. ಈ ಗುತ್ತಿಗೆ ಬೇಸಾಯದ ಸ್ಪೆಲಿಂಗ್ ಬದಲಾಗಿ ಗುದ್ದಿಗೆ ಬಿದ್ದು ಸಾಯ ಅಂತ ಆಗಬಾರದು ಅಷ್ಟ.

ಕೃಷಿಗೆ ಅಗ್ರಿಕಲ್ಚರ್ ಅಂತ ಅನ್ನೋದು ಯಾಕಂದರ ಅದು ಬರೇ ವ್ಯಾಪಾರ – ವ್ಯವಹಾರ ಅಲ್ಲ. ಅದು ನಮ್ಮ ಜೀವನ ಶೈಲಿ ಅಂತ ತಿಳಕೊಂಡು ಭಾಳ ಮಂದಿ ರೈತರು ಮಾಡತಾರು. ಬರೇ ಲಾಭ- ನಷ್ಟದ ಲೆಕ್ಕಾಚಾರ ಇದ್ದಿದರ ಅವರು ಜಮೀನು ಬಿಟಗೊಟ್ಟು ಹೋಗಿ ನಾವೆಲ್ಲಾ ಅಕ್ಕಿ ಬದಲಿ ಮ್ಯಾಗಿ ತಿನಬೇಕಾಗಿತ್ತು.

ಅದನ್ನ ಬಿಟ್ಟು ಇದು ಆಹಾರ ತಯಾರಿಕೆ ಉದ್ದಿಮೆ ಅಂತ ಹೇಳಿ ಷೇರು ಮಾರ್ಕೆಟ್ಟಿನ ದಲ್ಲಾಳಿಗಳೆಲ್ಲಾ ಇದರಾಗ ರೊಕ್ಕಾ ಹಾಕಿ ಇದನ್ನ ತೇಜಿ- ಮಂದಿ ವ್ಯಾಪಾರ ಮಾಡಿದರ ಕಷ್ಟ.

ಈ ಎಲ್ಲಾ ತಿದ್ದುಪಡಿಗಳನ್ನ ಎಲ್ಲಾ ರಾಜ್ಯಗಳು ಇದನ್ನು ಪಾಲಿಸಬೇಕು ಅಂತ ಬ್ಯಾರೆ ದೆಹಲಿ ದೊರೆಗಳು ಫರಮಾನು ಹೊರಡಿಸಿದಾರ.

ಒಕ್ಕೂಟ ವ್ಯವಸ್ಥೆಗೆ ಕ್ಯಾರೆ ಅನ್ನದ ಈ ಸರಕಾರ ರಾಜ್ಯಗಳು ಅಂದರ ತಮ್ಮ ಗೊಂಬೆ ಆಟದ ಪಾತ್ರಧಾರಿಗಳು ಅಂತ ತಿಳಕೊಂಡೇತಿ. ಹಿಂಗಾಗಿ ಬ್ಯಾರೆ ದಾರಿ ಇಲ್ಲ.

ಅದೂ ಆಳುವ ಪಕ್ಷದ- ವಿರೋಧ ಪಕ್ಷದ ಸರಕಾರಗಳ ನಡುವೆ ವಿರೋಧ ತಂದು ಇಡಬಹುದು.

ವಿದ್ಯುತ್ ದರ ನಿರ್ಧಾರದ ಬಗ್ಗೆ ಅಧ್ಯಯನ ನಡೆಸಿದ ಅನುಭಾವಿ ಆರ್ಥಿಕ ತಜ್ಞ ಡಾ. ನಂಜುಂಡಪ್ಪ ಅವರು ಒಂದು ಉದಾಹರಣೆ ಕೊಡತಿದ್ದರು.

ಬಿಹಾರದ ಕೆಲವು ಪ್ರದೇಶಗಳಲ್ಲಿ ಎಷ್ಟೋ ವರ್ಷಗಳ ತನಕಾ ವಿದ್ಯುತ ಸಾಗಣೆಯೊಳಗ ಹಾನಿ ಆಗಿರಲಿಲ್ಲ. ಅದನ್ನ ನೋಡಲಿಕ್ಕೆ ಹೋದ ವಿಶ್ವ ಬ್ಯಾಂಕಿನ ತಂಡಕ್ಕ ಇಂಜಿನಿಯರ ಒಬ್ಬರು ಹೇಳಿದರಂತ “ನೋಡ್ರಿ ಸರ್, ಈ ಯೋಜನೆ ಆರಂಭ ಆದಾಗಿನಿಂದ ಇದರಾಗ ವಿದ್ಯುತ್ ಹರದೇ ಇಲ್ಲ. ಇನ್ನ ಹಾನಿ ಆಗಲಿಕ್ಕೆ ಹೆಂಗ ಸಾಧ್ಯ ಐತಿ?”

ಹಂಗನ ಇನ್ನೂವರೆಗೆ ದೇಶದ ಕೆಲವು ಹಿಂದುಳಿದ ರಾಜ್ಯಗಳು- ಬಿಹಾರ- ಒಡಿಷಾ- ಛತ್ತೀಸಗಡ- ಜಾರಖಂಡ ಇತ್ಯಾದಿಗಳೊಳಗ ಎಪಿಎಂಸಿ ವ್ಯವಸ್ಥೆನೇ ಇಲ್ಲ. ಇದ್ದರೂ ಪರಿಣಾಮಕಾರಿಯಾಗಿಲ್ಲ. ಇನ್ನ ಅಲ್ಲಿನ ರೈತರಿಗೆ ಈ ತಿದ್ದುಪಡಿಯಿಂದ ಏನು ಕೇಡು ಆಗಲಿಕ್ಕೆ ಸಾಧ್ಯ ಐತಿ?

ಈ ರೀತಿಯ ನೀತಿಗಳಿಗೆ ಯುರೋಪಿನ್ಯಾಗ `ಲೆಸೇ ಫೇರು’ (`ತಿಳದದ್ದು ಮಾಡಿಕೋಳಿ ಬಿಡ್ರಿ’) ಅಂತ ಅಂತಾರ. ಇದನ್ನೆಲ್ಲಾ ಮಾಡಿದ ಸರಕಾರಕ್ಕ- ಪಕ್ಷಕ್ಕ ನಮ್ಮ ಜನಾ ಮುಂದಿನ ಚುನಾವಣೆಯೊಳಗ ತಿಳದದ್ದು ಮಾಡಿದರ, ಏನು ಗತಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...