Homeಮುಖಪುಟಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ... - ಎ.ನಾರಾಯಣ

ಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ… – ಎ.ನಾರಾಯಣ

ಕಳೆದ ಒಂದು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಕಂಡ ಪತನ, ಸೃಷ್ಟಿಯಾದ ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದ್ದು. ಮೊದಮೊದಲಿಗೆ ಅಂಕಿ-ಅಂಶಗಳನ್ನು ಅಡಗಿಸಲಾಯಿತು, ಬಜೆಟ್‍ನಲ್ಲಿ ಸುಳ್ಳುಗಳನ್ನು ಹೇಳಲಾಯಿತು.

- Advertisement -
- Advertisement -

ಯಾವ ಕಾಲವೂ ಇಷ್ಟೊಂದು ಉತ್ತಮವಾಗಿರಲಿಲ್ಲ, ಯಾವ ಕಾಲವೂ ಇದಕ್ಕಿಂತ ಕೆಟ್ಟದಾಗಿರಲಿಲ್ಲ…(It was the best of times, it was the worst of times…)

ಇಂಗ್ಲಿಷ್ ಲೇಖಕ ಚಾಲ್ರ್ಸ್ ಡಿಕೆನ್‍ಸನ್ ಫ್ರೆಂಚ್ ಕ್ರಾಂತಿಯ ಸುತ್ತಲ ವಿದ್ಯಮಾನಗಳನ್ನು ಆದರಿಸಿ ಬರೆದ ಎ ಟೇಲ್ ಆಫ್ ಟು ಸಿಟೀಸ್ ಕಾದಂಬರಿಯ ಆರಂಭದ ವಾಕ್ಯ ಇದು. ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದು ಪೂರೈಸಿದ ಒಂದು ವರ್ಷವನ್ನು ಮೆಲುಕು ಹಾಕುವಾಗ ಈ ಸಾಲುಗಳು ನೆನಪಾಗುತ್ತವೆ.

ಹೌದು, ಕೆಲವರ ದೃಷ್ಟಿಯಲ್ಲಿ ಸಂದ ವರ್ಷಕ್ಕಿಂತ ಉತ್ತಮ ಕಾಲವೇ ಇರಲಿಲ್ಲ. ಯಾರ ದೃಷ್ಟಿಯಲ್ಲಿ ಹಾಗೆ?

ದೆಹಲಿಯ ಇಂಗ್ಲಿಷ್ ಲೇಖಕರೊಬ್ಬರು ಬರೆದರು. ಯಾವುದರದ್ದೇ ಆಗಿರಲಿ ಎರಡನೆಯ ಇನ್ನಿಂಗ್ಸ್ ನಲ್ಲಿ ವಿಶೇಷ ಸತ್ವ ಉಳಿದಿರುವುದಿಲ್ಲ ಅಂತ. ಸಚಿನ್ ತೆಂಡೂಲ್ಕರ್ ಅವರ ಎರಡನೆಯ ಇನ್ನಿಂಗ್ಸ್ ಆಟದಿಂದ ಹಿಡಿದು, ಹಲವು ಕಾದಂಬರಿಗಳ, ಸಿನೆಮಾಗಳ ಎರಡನೆಯ ಭಾಗದವರೆಗೆ ನೋಡಿದರೆ, ನಂತರದ್ದು ಮೊದಲಿನಷ್ಟು ಗಮನ ಸೆಳೆಯುವುದಿಲ್ಲ ಎನ್ನುತ್ತಾ ಇದಕ್ಕೆ ತದ್ವಿರುದ್ಧವಾಗಿ ಕಂಡದ್ದು ನರೇಂದ್ರ ಮೋದಿಯವರ ಸರಕಾರದ ಎರಡನೆಯ ಆವೃತ್ತಿ ಎನ್ನುತ್ತಾರೆ ಆ ಲೇಖಕ. ಯಾಕೆ?

ಯಾಕೆಂದರೆ ಗಮನ ಸೆಳೆಯುವುದೊಂದೇ ಸರಕಾರವೊಂದರ ಸಾಧನೆ ಎನ್ನುವುದಾದರೆ ಎರಡನೆಯ ಆವೃತ್ತಿಯಲ್ಲಿ ನರೇಂದ್ರ ಮೋದಿಯವರ ಸರಕಾರ ಮಾಡಿದ್ದೇನು ಕಡಿಮೆಯಲ್ಲ. ಯಾರ ಗಮನ, ಯಾತಕ್ಕಾಗಿ ಗಮನ, ಎಲ್ಲಿಗೆ ಗಮನ ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ ಹೋದಾಗ ಮಾತ್ರ ಈ ಸಾಧನೆಗಳ ಹಲವು ಬಗೆಯ ಜ್ಞಾತ, ಅಜ್ಞಾತ ಮುಖಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುವುದು.

ಭಾರತೀಯ ಜನತಾ ಪಕ್ಷದವರು ಮತ್ತು ಅವರ ಸೈದ್ಧಾಂತಿಕ ಮಾರ್ಗದರ್ಶಕರು ದಶಕಗಳಿಂದ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಮಾದರಿಯನ್ನು ಒಪ್ಪಿಕೊಂಡು, ಅದರ ಅಮಲನ್ನು ನಖಶಿಖಾಂತವಾಗಿ ಏರಿಸಿಕೊಂಡವರಿಗೆ ಎರಡನೆಯ ಬಾರಿಗೆ ಮೋದಿ ಅಧಿಕಾರ ವಹಿಸಿಕೊಂಡ ನಂತರ ಸಂದ ಒಂದು ವರುಷ ಅಂತಿಂತಹಾ ಸಮಯವಲ್ಲ. ಅವರ ಪಾಲಿಗೆ ಇಂತಹ ಸುಸಮಯವೇ ಇರಲಿಲ್ಲ. ಹೇಳಿ ಕೇಳಿ ಅವರದ್ದೇ ಏಕಚಕ್ರಾಧಿಪತ್ಯ. ಹನ್ನೆರಡು ತಿಂಗಳುಗಳ ಈ ಅವಧಿಯಲ್ಲಿ ಎಷ್ಟೋ ಕಾಲ ಬಿಜೆಪಿಯ ‘ರಾಷ್ಟ್ರೀಯ’ ಅಜೆಂಡಾದಲ್ಲೇ ಬಾಕಿ ಉಳಿದಿದ್ದ ಎಷ್ಟೊಂದು ಯೋಜನೆಗಳೆಲ್ಲಾ ಸಾಕಾರವಾಗಿ ಬಿಟ್ಟವು? ಸಂವಿಧಾನದ 370ನೆಯ ವಿಧಿಯ ಅಡಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ಮುಸ್ಲಿಂ ಧರ್ಮದ ಕೆಲ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿದ್ದ ತ್ರಿವಳಿ ತಲಾಕ್ ಮೂಲಕ ವಿಚ್ಛೇದನ ನೀಡುವ ಸಂಪ್ರದಾಯವನ್ನು ರದ್ದು ಪಡಿಸಲಾಯಿತು.

ಭಯೋತ್ಪಾದನಾ ವಿರೋಧಿ ಕಾನೂನುಗಳಿಗೆ ಮತ್ತಷ್ಟೂ ಹಲ್ಲುಗಳನ್ನು ಸೇರಿಸಿ ಯಾರಿಗಾದರೂ ಭಯೋತ್ಪಾದಕರ ಪಟ್ಟ ಕಟ್ಟುವ ಅಧಿಕಾರವನ್ನು ಆಂತರಿಕ ಭದ್ರತಾ ಪಡೆಯವರಿಗೆ ನೀಡಲಾಯಿತು. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಜನ್ಮಭೂಮಿ ವಿವಾದವನ್ನು ಸುಪ್ರೀಂಕೋರ್ಟ್ ಹಿಂದೂಗಳ ಪರವಾಗಿ ಇತ್ಯರ್ಥಗೊಳಿಸುವ ಮೂಲಕ ಬಿಜೆಪಿಯ ಬಹುದಿನದ ಭರವಸೆಯಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿತು. ಹಿಂದೂ ವಲಸಿಗರಿಗೆ ನೆರವಾಗಲು ಸಿಎಎ, ಮುಸ್ಲಿಂ ನುಸುಳುಕೋರರನ್ನು ಹೊಡೆದೋಡಿಸಲು ಎನ್‍ಆರ್‍ಸಿ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಅನನ್ಯ ಬಾಂಧವ್ಯ… ಹೀಗೆ ಹಿಂದೂ ರಾಷ್ಟ್ರವಾದಿಗಳ ಬಹುದಿನದ ಕನಸುಗಳೆಲ್ಲಾ ನನಸಾದ ವರ್ಷ ಇದು. ದಿ ಬೆಸ್ಟ್ ಆಫ್ ದಿ ಟೈಮ್ಸ್.

ಮೇಲ್ನೋಟಕ್ಕೆ ‘ರಾಷ್ಟ್ರನಿರ್ಮಾಣ’ದ ದೊಡ್ಡ ದೊಡ್ಡ ಆಧಾರ ಸ್ಥಂಭಗಳಂತೆ ಕಾಣಿಸುವ ಈ ಸಾಧನೆಗಳನ್ನು ಸಾವಿರ ಪಾಲು ಹಿಗ್ಗಿಸಿ, ವಿಜೃಂಭಿಸಿ ಜನರ ಮುಂದಿಡುವ ಮೂಲಕ ಇನ್ನೇನು ರಾಮರಾಜ್ಯ ಸ್ಥಾಪನೆ ಆಗಿಯೇಬಿಟ್ಟಿತು ಎನ್ನುವ ಜನಾಭಿಪ್ರಾಯ ರೂಪಿಸುವ ಪ್ರಯತ್ನ ಎಂದಿನಂತೆ ನಡೆಯಿತು. ಅದೇ ವೇಳೆ ಇನ್ನೊಂದೆಡೆ ಮೊದಲೇ ಹಲ್ಲುಕಿತ್ತ ಹಾವಿನಂತಾಗಿದ್ದ ವಿರೋಧ ಪಕ್ಷಗಳ ಚರ್ಮ ಸುಲಿದು, ಬಾಲ ತುಂಡರಿಸಿ ಮಲಗಿಸುವ ಮೂಲಕ, ಮಾಧ್ಯಮಗಳನ್ನು ದಾನ, ಬೇಧ, ದಂಡ ಎಲ್ಲವನ್ನೂ ವಿಧಿವತ್ತಾಗಿ ಪ್ರಯೋಗಿಸಿ ಮಕ್ಕಾಡೆ ಮಲಗಿಸುವ ಮೂಲಕ ಯಾವುದೇ ಪ್ರತಿಮತ ಇಲ್ಲದಂತೆ, ಎರಡನೆಯ ಅಭಿಪ್ರಾಯಕ್ಕೆ ಅನುವೇ ಇಲ್ಲದಂತೆ, ಪ್ರಶ್ನೆಗಳಿಗೆ ಅವಕಾಶವೇ ಇಲ್ಲದಂತೆ ಮಾಡಿ ಸಾಧನೆಗಳ ಸೊಗಸನ್ನು ಜನರಿಗೆ ಯಾವುದೇ ಅಡೆತಡೆ ಇಲ್ಲದೆ ಉಣಬಡಿಸಲಾಯಿತು.

ಇನ್ನು ನ್ಯಾಯಾಂಗ. ಅದು ತಾನಾಗಿಯೇ ರಾಜಕೀಯ ಅಧಿಕಾರದ ಅಬ್ಬರಕ್ಕೆ ಒಲಿಯಿತೋ, ಅಥವಾ ಅದನ್ನು ಒಲಿಸಿಕೊಳ್ಳಲಾಯಿತೋ? ಈ ಪ್ರಶ್ನೆಗೆ ಚರಿತ್ರೆ ಮುಂದೊಂದು ದಿನ ಉತ್ತರ ನೀಡಿತು. ಸದ್ಯಕ್ಕಂತೂ ಸರಕಾರವೊಂದು ನ್ಯಾಯಾಂಗದಿಂದ ಎದುರಿಸಬಹುದಾದ ಯಾವ ಅಡೆತಡೆಗಳು ಇಲ್ಲ. ಎಲ್ಲವೂ ಸುಗಮ. ಎಲ್ಲವೂ ಸಲೀಸು. ಆನೆ ನಡೆದದ್ದೇ ದಾರಿ. ಕಾಶ್ಮೀರ ಭಾರತದಲ್ಲಿ ಈಗ ಸಂಪೂರ್ಣ ವಿಲೀನ ಆಗಿದೆ ಎನ್ನುವ ವಾದ ಸರಿಯೇ? ಒಂದು ರಾಜ್ಯ ಭಾರತೀಯ ಒಕ್ಕೂಟದೊಂದಿದೆ ವಿಲೀನವಾಗುವುದು ಎಂದರೆ ಅದು ಜನರ ಮನಸ್ಸುಗಳನ್ನು ಬೆಸೆಯುವುದೇ ಅಥವಾ ಭೂಬಾಗವನ್ನು ಭೂಪಟದಲ್ಲಿ ಜೋಡಿಸುವುದೇ? ಈ ಪಶ್ನೆ ಕೇಳುವವರಿರಲಿಲ್ಲ. ಹೌದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಆದರೆ ಅಲ್ಲಿನ ಪರಿಸರ ಪರಿಸ್ಥಿತಿ ಹಾಗಿತ್ತು ಮತ್ತು ಹಾಗಿದೆ ಎನ್ನುವ ಸತ್ಯ ಬದಲಾಗಿದೆಯೇ? ಈ ಪ್ರಶ್ನೆ ಕೇಳುವವರಿಲ್ಲ. ವಿಶೇಷ ಸ್ಥಾನಮಾನ ನೀಡಿದ ಕಾರಣ ಭಯೋತ್ಪಾದನೆ ಹೆಚ್ಚಾಯಿತು ಎನ್ನುವ ವಾದವನ್ನು ಸಮರ್ಥನೆಗಾಗಿ ಮುಂದಿಡಲಾಯಿತು. ಹಾಗಾದರೆ ವಿಶೇಷ ಸ್ಥಾನಮಾನ ಕಿತ್ತುಕೊಂಡ ನಂತರ ಭಯೋತ್ಪಾದನೆಯ ಹುಟ್ಟಡಗಿದೆಯೇ? ಅಲ್ಲಿನ ಪರಿಸ್ಥಿತಿ ಸಂಪೂರ್ಣ ಸರಕಾರದ ಹತೋಟಿಗೆ ಬಂದಿದೆಯೇ? ಬಂದಿದ್ದರೆ ಇನ್ನೂ ಭಾರತದ ಪರವಾಗಿಯೇ ಇಷ್ಟು ವರ್ಷ ರಾಜಕೀಯ ಮಾಡಿದ್ದ ಅಲ್ಲಿನ ಜನನಾಯಕರನ್ನೆಲ್ಲಾ ಯಾಕೆ ಇನ್ನೂ ಬಂಧನದಲ್ಲಿ ಇಟ್ಟಿರುವುದು? ತ್ರಿವಳಿ ತಲಾಕ್ ಕೊನೆಯಾಯಿತು? ಸರಿ. ಮುಸ್ಲಿಮರಲ್ಲಿ ಒಂದು ಪಂಗಡದ ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ಸಮಸ್ಯೆಯನ್ನು ಕಾನೂನಿನಲ್ಲಿ ಪರಿಹರಿಸಲಾಯಿತು ಅಂತ ಇಟ್ಟುಕೊಳ್ಳೋಣ. ಆದರೆ ಅದೇ ವೇಳೆ ಇಡೀ ಮುಸ್ಲಿಂ ಸಮುದಾಯ ಹಿಂದೆಂದಿಗಿಂತಲೂ ಹೆಚ್ಚು ಅಭದ್ರತೆಯನ್ನು ಎದುರಿಸುತ್ತಿರುವಂತೆ ಯಾಕಾಯಿತು?

ಸಿಎಎ ಮತ್ತು ಎನ್‍ಆರ್‌ಸಿ ದೇಶಾದ್ಯಂತ ಅನುಷ್ಠಾನಗೊಂಡರೆ ದೇಶ ಎದುರಿಸಬೇಕಾದ ಸಾಂವಿಧಾನಿಕ ಮತ್ತು ಮಾನವೀಯ ಬಿಕ್ಕಟ್ಟು ಹೇಗಿರಬಹುದು? ಸಿಎಎ ಮತ್ತು ಎನ್‍ಆರ್‌ಸಿ ಈ ದೇಶದಲ್ಲಿ ಹುಟ್ಟುಹಾಕಿದ ಸಾಮಾಜಿಕ-ಧಾರ್ಮಿಕ ಕಂದರಗಳು ಮತ್ತು ಅಭದ್ರತೆ ಮುಂದೆ ದೇಶವನ್ನು ಹೇಗೆ ಕಾಡಬಹುದು? ಅಯೋಧ್ಯೆಯ ರಾಮ ಮಂದಿರ ಈ ದೇಶದ ಬಹುದೊಡ್ಡ ಅಗತ್ಯವೇ? ಹೀಗೆ ಸಾಧನೆ ಎಂದು ಯಾವುದನ್ನು ಮುಂದಿಡಲಾಯಿತೋ, ಅವುಗಳಲ್ಲಿ ಪ್ರತಿಯೊಂದರ ಸುತ್ತಲೂ ಎಷ್ಟೋ ಪ್ರಶ್ನೆಗಳಿವೆ. ನೋವಿನ ಚಿತ್ರಗಳಿವೆ. ಈ ಪ್ರಶ್ನೆಗಳನ್ನು ಕೇಳುವವರಿಲ್ಲ. ಪ್ರಶ್ನೆಗಳನ್ನು ಕೊಲ್ಲಲಾಗುವುದಿಲ್ಲ. ಆದರೆ ಪ್ರಶ್ನೆ ಕೇಳುವ ಸಾಂಸ್ಥಿಕ ನಾಲಿಗೆಗಳನ್ನು ಕೊಲ್ಲಬಹುದು ಅಥವಾ ಕೊಳ್ಳಬಹುದು. ಆಗ ಪ್ರಶ್ನೆಗಳು ಕೇಳಿಸುವುದಿಲ್ಲ. ಪ್ರಶ್ನೆಗಳೇ ಇಲ್ಲದಲ್ಲಿ ಹೇಳಿದೆಲ್ಲವೂ ಸಾಧನೆಗಳೇ ಆಗುತ್ತವಲ್ಲ.

ಇದು ಸಾಧನೆಗಳೆಂದು ಬಿಂಬಿಸಲಾದ ಬೆಳವಣಿಗೆಗಳಲ್ಲಿ ಹುದುಗಿರುವ ವೈಫಲ್ಯದ ಕತೆಯಾದರೆ, ಇನ್ನು ಏನು ಮಾಡಿದರೂ ಅಡಗಿಸಿಡಲಾಗದ ವೈಫಲ್ಯಗಳ ಕತೆಯೇ ಬೇರೆ. ಕಳೆದ ಒಂದು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಕಂಡ ಪತನ, ಸೃಷ್ಟಿಯಾದ ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದ್ದು. ಮೊದಮೊದಲಿಗೆ ಅಂಕಿ-ಅಂಶಗಳನ್ನು ಅಡಗಿಸಲಾಯಿತು, ಬಜೆಟ್‍ನಲ್ಲಿ ಸುಳ್ಳುಗಳನ್ನು ಹೇಳಲಾಯಿತು.

ಕೋರೋನಾ ಪೂರ್ವದಲ್ಲೇ ಉದ್ಯೋಗ ಕಳೆದುಕೊಂಡವರೆಷ್ಟೋ? ವರಮಾನ ಕಡಿತ ಅನುಭವಿಸಿದವರೆಷ್ಟೋ? ನಿರಾಶೆಯಿಂದ ಕುಸಿದು ಆತ್ಮಹತ್ಯೆಗೆ ಶರಣಾದವರೆಷ್ಟೋ? ಅರ್ಥ ವ್ಯವಸ್ಥೆಯನ್ನು ನಿಭಾಯಿಸುವ ಕನಿಷ್ಠ ಸಾಮಥ್ರ್ಯವಾದರೂ ಸರಕಾರಕ್ಕೆ ಇದೆಯೇ ಎನ್ನುವ ಪ್ರಶ್ನೆ ದೇಶದಲ್ಲಿ ದೊಡ್ಡದಾಗಿ ಅನುರಣಿಸಬೇಕಿತ್ತು. ಆದರೆ ಅಂತಹ ಪ್ರಶ್ನೆ ಎತ್ತುವವರು ಯಾರು? ಕೋರೋನಾ ಕಾಲಿಟ್ಟ ನಂತರವಂತೂ ಅದನ್ನು ನಿಭಾಯಿಸಿದ ರೀತಿಯಲ್ಲಿ ಆಡಳಿತ ನೈಪುಣ್ಯವನ್ನೂ, ನಾಯಕತ್ವದ ಹೆಚ್ಚುಗಾರಿಕೆಯನ್ನು ಕಾಣಬೇಕಾದರೆ ಅಂತಿತಹಾ ಭಕ್ತಿಯ ಕಣ್ಣುಗಳು ಸಾಲದು. ಕೊರೋನ ಬಂದದ್ದು ಇಡೀ ವಿಶ್ವದ ದುರ್ದೈವ ಇರಬಹುದು. ಆದರೆ ಮೋದಿ ಸರ್ಕಾರಕ್ಕೆ ಮಾತ್ರ ಇದೊಂದು ಬಯಸದೆ ಬಂದ ಅನುಕೂಲ. ಇನ್ನು ಮುಂದೆ ಎಲ್ಲಾ ವೈಫಲ್ಯಗಳನ್ನು, ವಿಶೇಷವಾಗಿ ಅರ್ಥ ವೈಫಲ್ಯಗಳನ್ನು ಕೋರೋನ ಸಂಕಷ್ಟದತ್ತ ಬೊಟ್ಟು ಮಾಡಿ ಪಾರಾಗಬಹುದು. ಕೋರೋನ ಒಂದು ಬಾರದೆ ಇದ್ದರೆ ಭಾರತವನ್ನು ಪ್ರಪಂಚದ ಏಕಮೇವಾದ್ವಿತೀಯ ಆರ್ಥಿಕ ಶಕ್ತಿಯನ್ನಾಗಿ ಕಟ್ಟುತಿದ್ದೆವು ಅಂತ ಈ ಸರಕಾರದ ಮಂದಿ ಇನ್ನೇನು ಹೇಳಲು ಪ್ರಾರಂಭಿಸುತ್ತಾರೆ. ಕೊರೋನಾ ಎಷ್ಟೇ ಸಂಖ್ಯೆಯ ಸಾವು ನೋವುಗಳನ್ನು ತರಲಿ ಅದು ಸರಕಾರವನ್ನು ಬಾಧಿಸದೆ ಇರುವ ಹಾಗೆ, ‘ನಮ್ಮ ಆಡಳಿತ, ನಮ್ಮ ನಾಯಕ ಇಲ್ಲದೆ ಹೋಗಿದ್ದರೆ ಈ ಸಂಖ್ಯೆ ಇನ್ನೂ ನೂರು ಪಾಲು ಹೆಚ್ಚಾಗಿರುತ್ತಿತ್ತು’ ಎನ್ನುವ ಸಂಕಥನ ಹುಟ್ಟಲಿದೆ. ಇವನ್ನೆಲ್ಲಾ ಜನ ನಂಬುವಂತೆ ಮಾಡಲು ಏನೇನು ಮಾಡಬೇಕೋ ಅದಕ್ಕೆ ಬೇಕಾದ ವ್ಯವಸ್ಥೆ ಈಗಗಾಲೇ ಆಗಿರುತ್ತದೆ.

ಕೆಲವರ ಪ್ರಕಾರ ಕೊರೋನಾ ಮುಂದಿನ ಚುನಾವಣೆಯನ್ನೂ ನಿರ್ಣಯಿಸಿ ಬಿಟ್ಟಿದೆ. ಆದುದರಿಂದ ಸಂದ ವರ್ಷ ಏನಾಯಿತು, ಮುಂದಿನ ನಾಲ್ಕು ವರ್ಷಗಳಲ್ಲಿ ಏನೇನಾಗಲಿವೆ ಇತ್ಯಾದಿಗಳೆಲ್ಲಾ ಒಂದರ್ಥದಲ್ಲಿ ಅಪ್ರಸ್ತುತ ವಿಷಯಗಳು. ಆದರೆ, ಭವಿಷ್ಯದ ಹಾದಿ ಅಷ್ಟೊಂದು ನೇರವಾಗಿ ಇರುವುದಿಲ್ಲ. ಅಲ್ಲಿ ಅನಿರೀಕ್ಷಿತ ತಿರುವುಗಳು ಇದ್ದೇ ಇರುತ್ತವೆ. ಸದ್ಯ ಅಂತಹ ತಿರುವುಗಳ ನಿರೀಕ್ಷೆ ಮಾತ್ರವೇ ಭರವಸೆ.

ಸದ್ಯಕ್ಕಂತೂ ಸಂದ ವರುಷ ನೋಡುವವರ ದೃಷ್ಟಿಯನ್ನು ಅನುಸರಿಸಿ ಅತ್ಯುತ್ತಮ ಕಾಲ ಅಥವಾ ಅತೀ ಕೆಟ್ಟ ಕಾಲ.


ಇದನ್ನೂ ಓದಿ: ಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು – ಅಭದ್ರತೆಯೇ ಆಡಳಿತ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...