Homeಅಂತರಾಷ್ಟ್ರೀಯಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

2006ರಿಂದ ಎರಿಟ್ರಿಯಾದಲ್ಲಿ ಖಾಸಗಿ ಮಾಧ್ಯಮಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸ್ವತಂತ್ರ ಪತ್ರಕರ್ತರು ಜೈಲಿನಲ್ಲಿದ್ದಾರೆ. ಇಡೀ ಜಗತ್ತಿನಲ್ಲಿ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾದ ದೇಶಗಳಲ್ಲಿ ಎರಿಟ್ರಿಯಾ ಅಗ್ರ ಸ್ಥಾನಗಳನ್ನು ಅಲಂಕರಿಸುತ್ತಿದೆ.

- Advertisement -
- Advertisement -

ಅಮಾನ್ಯುವೆಲ್ ಅಸ್ರತ್ ಎಂಬ ಎರಿಟ್ರಿಯಾ ದೇಶದ ಪತ್ರಕರ್ತ 2001ರಲ್ಲಿ ಬಂಧನಕ್ಕೆ ಒಳಗಾದರು. ಅವರು ಜೆಮೆನ್ (ದ ಟೈಮ್ಸ್) ಎಂಬ ದಿನಪತ್ರಿಕೆಯ ಪ್ರಧಾನ ಸಂಪಾದಕ. ಅಮಾನ್ಯುವೆಲ್ ಎರಿಟ್ರಿಯಾದ ಪ್ರಶಸ್ತಿ ವಿಜೇತ ಕವಿ, ಜನಪ್ರಿಯ ಗೀತರಚನೆಕಾರರೂ ಹೌದು. ಎರಿಟ್ರಿಯಾದಲ್ಲಿ ನಡೆಯುತ್ತಿರುವ ಸರ್ವಾಧಿಕಾರಿ ಆಡಳಿತದ ವಿರುದ್ಧ ಕಾವ್ಯ ಕಥನಗಳ ಮೂಲಕ ಬಂಡಾಯ ಸಾರಿದ್ದವರು.

ಅಣ್ಣತಮ್ಮಂದಿರಂತೆ ಬದುಕಬೇಕಿದ್ದ ಎರಿಟ್ರಿಯಾ-ಇಥಿಯೋಪಿಯಾ ದೇಶಗಳು ಸತತ ಯುದ್ಧದಲ್ಲಿ ನರಳುತ್ತಿರುವುದನ್ನು ಅವರು ಸಹಿಸುತ್ತಿರಲಿಲ್ಲ. ಅಮಾನ್ಯುವೆಲ್ ಅಸ್ರತ್ ಕೇವಲ ಪತ್ರಿಕೆಯನ್ನು ನಡೆಸುತ್ತಿರಲಿಲ್ಲ. ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸಾಟರ್ಡೇಸ್ ಸಪ್ಪರ್ ಎಂಬ ಹೆಸರಿನ ಸಾಹಿತ್ಯ ಕೂಟವನ್ನು ರಚಿಸಿದ್ದರು. ಎರಿಟ್ರಿಯಾದಲ್ಲಿ ಸಾಹಿತ್ಯದ ಅಭಿರುಚಿ ಪ್ರೋತ್ಸಾಹಿಸುವುದು ಅವರ ಗುರಿಯಾಗಿತ್ತು. ಅವರ ಜೆಮೆನ್ ಪತ್ರಿಕೆ ಕೂಡ ದೇಶದ ಪ್ರಮುಖ ಸಾಹಿತ್ಯ ಪತ್ರಿಕೆಯಾಗಿಯೇ ಗುರುತಿಸಿಕೊಂಡಿತ್ತು. ಅಮಾನ್ಯುವೆಲ್ ಯುದ್ಧದ ಕರಾಳತೆಯ ಕುರಿತು, ಜನಸಾಮಾನ್ಯರ ಸಮಸ್ಯೆಗಳ ಕುರಿತು ಬರೆದ ಪದ್ಯಗಳು ಜನಪ್ರಿಯವಾಗಿದ್ದವು. ಯಾವಾಗ ಅಮಾನ್ಯುವೆಲ್ ತಮಗೆ ಎದುರಾಳಿ ಎನಿಸಿತೋ, ಸರ್ಕಾರ ಅವರನ್ನು ನಾಪತ್ತೆ ಮಾಡಿಬಿಟ್ಟಿತು.

2001ರ ಸೆಪ್ಟೆಂಬರ್ 23ರಂದು ಅಮಾನ್ಯುವೆಲ್ ಸೇರಿದಂತೆ ಒಂದೇ ದಿನ ಹದಿನಾರು ಪ್ರಮುಖ ಪತ್ರಕರ್ತ/ಸಂಪಾದಕರನ್ನು ಬಂಧಿಸಲಾಯಿತು. ಎರಿಟ್ರಿಯಾ ಅಧ್ಯಕ್ಷ ಇಸಿಯಾಸ್ ಅಫ್ವೀರ್ಕಿಯ ದುರಾಡಳಿತದ ವಿರುದ್ಧ ಎರಿಟ್ರಿಯಾದ ರಾಜಕಾರಣಿಗಳು ಬರೆದ ಬಹಿರಂಗ ಪತ್ರವನ್ನು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಬಂಧನ ಕಾರ್ಯಾಚರಣೆ ನಡೆದಿತ್ತು. ಪತ್ರಕರ್ತರ ಜತೆಗೆ ಬಹಿರಂಗ ಪತ್ರ ಬರೆದ ರಾಜಕಾರಣಿಗಳನ್ನೂ ಬಂಧಿಸಲಾಯಿತು, ಹತ್ತೊಂಭತ್ತು ವರ್ಷಗಳು ಕಳೆದುಹೋಗಿವೆ. ಈವರೆಗೆ ಅವರ ಬಿಡುಗಡೆಯಾಗಿಲ್ಲ. ಬಿಡುಗಡೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅದಕ್ಕಿಂತ ಕ್ರೂರವೆಂದರೆ, ಇವರನ್ನೆಲ್ಲ ಎಲ್ಲಿ, ಹೇಗೆ ಕೂಡಿಡಲಾಗಿದೆ ಎಂಬುದರ ಮಾಹಿತಿಯನ್ನೂ ಎರಿಟ್ರಿಯಾ ಸರ್ಕಾರ ನೀಡುತ್ತಿಲ್ಲ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಅಮಾನ್ಯುವೆಲ್ ಅವರ ಸಂಪರ್ಕಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಅವರ ಆರೋಗ್ಯ ಸ್ಥಿತಿಗತಿಯ ಕುರಿತೂ ಯಾವ ಮಾಹಿತಿಯಿಲ್ಲ. ಕೊನೆಯದಾಗಿ ಅಮಾನ್ಯುವೆಲ್ ಬದುಕಿದ್ದಾರಾ, ಸತ್ತಿದ್ದಾರಾ ಎಂಬ ಮಾಹಿತಿಯೂ ಇಲ್ಲ. ಎರಿಟ್ರಿಯಾದಲ್ಲಿ ಹಾಗೆಯೇ ಜನರು ಇದ್ದಕ್ಕಿದ್ದಂತೆ ಕಾಣೆಯಾಗಿಬಿಡುತ್ತಾರೆ. ಅವರು ಮುಂದೇನಾದರು ಎಂಬುದು ಯಾರಿಗೂ ತಿಳಿಯುವುದೇ ಇಲ್ಲ.

2017ರ ಮೇ ತಿಂಗಳಿನಲ್ಲಿ ಆಫ್ರಿಕನ್ ಮಾನವ ಹಕ್ಕುಗಳ ಆಯೋಗ ಈ ವಿಷಯದಲ್ಲಿ ತೀರ್ಪೊಂದನ್ನು ನೀಡಿ, ಅಮಾನ್ಯುವೆಲ್ ಅಸ್ರತ್ ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ, ಎರಿಟ್ರಿಯಾ ಸರ್ಕಾರ ಈ ಕೂಡಲೇ ಎಲ್ಲ ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿತು. ಎರಿಟ್ರಿಯಾ ಸರ್ಕಾರ ಈ ಆಯೋಗದ ತೀರ್ಪಿಗೆ ಕ್ಯಾರೇ ಎನ್ನಲಿಲ್ಲ. ಬಿಡುಗಡೆ ಮಾಡುವುದಿರಲಿ, ಕೈದಿಗಳ ಕುರಿತು ಮಾಹಿತಿಗಳನ್ನೂ ನೀಡಲಿಲ್ಲ. ಒಂದು ಅಂತಾರಾಷ್ಟ್ರೀಯ ಸಂಸ್ಥೆಯ ಒತ್ತಡಕ್ಕಾದರೂ ಬಂಧಿತರಿಗೆ ಮುಕ್ತ ವಿಚಾರಣೆ, ಕಾನೂನು ಸೌಲಭ್ಯ, ವಕೀಲರನ್ನು ಇಟ್ಟುಕೊಳ್ಳುವ ಅವಕಾಶವನ್ನೂ ನೀಡಲಿಲ್ಲ.

ಎರಿಟ್ರಿಯಾ ಆಫ್ರಿಕಾ ಖಂಡದ ಪೂರ್ವಭಾಗದಲ್ಲಿರುವ ದೇಶ. ನೆರೆಯ ಇಥಿಯೋಪಿಯಾ ಜತೆಗೆ ಎರಿಟ್ರಿಯಾ ಸತತ ಸಂಘರ್ಷ ನಡೆಸುತ್ತಲೇ ಬಂದಿದೆ. ಒಂದಿಲ್ಲೊಂದು ಬಗೆಯ ಯುದ್ಧ. ಇತ್ತೀಚಿಗೆ, ಎರಡು ವರ್ಷಗಳ ಕೆಳಗೆ 2018ರ ಸೆಪ್ಟೆಂಬರ್‌ನಲ್ಲಿ ಇಥಿಯೋಪಿಯಾ ಜತೆ ಐತಿಹಾಸಿಕ ಒಪ್ಪಂದದ ಮೂಲಕ ಸಂಘರ್ಷವನ್ನು ಅಂತ್ಯಗೊಳಿಸಲಾಯಿತು. ಆದರೆ ಯುದ್ಧದ ಹೆಸರಲ್ಲಿ ಹೇರಲಾದ ಸರ್ವಾಧಿಕಾರ ಎರಿಟ್ರಿಯಾದಲ್ಲಿ ಕೊನೆಗೊಳ್ಳಲೇ ಇಲ್ಲ.

ನ್ಯಾಷನಲ್ ಸರ್ವಿಸ್ ಪ್ರೋಗ್ರಾಂ ಹೆಸರಿನಲ್ಲಿ ಎರಿಟ್ರಿಯಾ ಸರ್ಕಾರ ತನ್ನ ದೇಶದ ಪ್ರಜೆಗಳ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಗೆ ಕೊನೆಮೊದಲಿಲ್ಲ. ಸರ್ಕಾರದ ಹುಚ್ಚಾಟಗಳಿಂದ ನರಳಿದ ಜನರು ದೇಶ ಬಿಟ್ಟು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದೂ ಸಾಧ್ಯವಾಗುತ್ತಿಲ್ಲ. ಎರಿಟ್ರಿಯಾ ಸರ್ಕಾರ ದೇಶದ ಗಡಿಗಳನ್ನು ಬಂದ್ ಮಾಡಿ ಕುಳಿತಿದೆ. ದೇಶ ಬಿಟ್ಟುಹೋಗಲು ಯತ್ನಿಸಿದವರು ದೇಶದ್ರೋಹಿಗಳೆನಿಸಿಕೊಂಡು ಸೆರೆಮನೆಗಳಲ್ಲಿ ಕೊಳೆಯುತ್ತಿದ್ದಾರೆ ಅಥವಾ ಈ ಅಪರಾಧಕ್ಕಾಗಿ ಜೀವ ಕಳೆದುಕೊಂಡಿದ್ದಾರೆ.

ಎರಿಟ್ರಿಯಾದಲ್ಲಿ ನ್ಯಾಷನಲ್ ಸರ್ವಿಸ್ ಪ್ರೋಗ್ರಾಂ ಹೆಸರಿನಲ್ಲಿ ಹೈಸ್ಕೂಲ್ ಕೊನೆಯ ವರ್ಷ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ಹದಿನೆಂಟು ತಿಂಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹದಿನೆಂಟು ತಿಂಗಳು ಅವರು ದೇಶಕ್ಕಾಗಿ, ಅರ್ಥಾತ್ ಸರ್ಕಾರಕ್ಕೆ, ಅಲ್ಲಿನ ಅಧ್ಯಕ್ಷನಿಗಾಗಿ ಅಕ್ಷರಶಃ ಜೀತ ಮಾಡಬೇಕು. ವಿಶೇಷವೆಂದರೆ ಈ ಹದಿನೆಂಟು ತಿಂಗಳು ಮುಗಿದರೂ ಒಂದಲ್ಲ ಒಂದು ಕಾರಣವೊಡ್ಡಿ ಅವರ ಕಾರ್ಯಾವಧಿಯನ್ನು ವಿಸ್ತರಿಸುತ್ತ ಬರಲಾಗುತ್ತಿದೆ, ವರ್ಷಗಳಾದರೂ ಅವರಿಗೆ ಮುಕ್ತಿ ಇಲ್ಲ. ಈ ಸಣ್ಣ ಮಕ್ಕಳಿಗೆ ಆರು ತಿಂಗಳ ಕಾಲ ಸೇನಾ ತರಬೇತಿ ನೀಡಲಾಗುತ್ತದೆ, ಆದರೆ ಅವರನ್ನು ಸೇನೆಯ ಕಾರ್ಯಗಳಿಗೆ ಮಾತ್ರ ಬಳಕೆ ಮಾಡಲಾಗುವುದಿಲ್ಲ. ರಸ್ತೆಗಳ ನಿರ್ಮಾಣ ಸೇರಿದಂತೆ ಸರ್ಕಾರದ ಯೋಜನೆಗಳಲ್ಲಿ ಇವರು ಪುಕ್ಕಟೆ ಕೂಲಿಗಳು. ಎರಿಟ್ರಿಯಾದ ಶೇ.೫ರಷ್ಟು ಜನಸಂಖ್ಯೆ `ದೇಶದ’ ಹೆಸರಿನಲ್ಲಿ ಭೀಕರವಾದ ಸರ್ಕಾರಿ ಜೀತದಿಂದ ನರಳುತ್ತಿದೆ.

ಅಮಾನ್ಯುವೆಲ್ ಅಸ್ರತ್

2001ರಲ್ಲಿ ಸರ್ಕಾರದ ವಿರುದ್ಧ ಧ್ವನಿ ತೆಗೆದ ರಾಜಕಾರಣಿಗಳು, ಸ್ವತಂತ್ರ ಧರ್ಮ-ಪಂಥಗಳನ್ನು ಅನುಸರಿಸುತ್ತಿರುವವರನ್ನು ಬಂಧಿಸಲಾಯಿತು. ಅದು ತನ್ನ ದೇಶದ ನಾಗರಿಕರಿಗೆ ನೀಡಲಾದ ಕೊನೆಯ ಎಚ್ಚರಿಕೆ. ಸರ್ಕಾರದ ವಿರುದ್ಧ ಧ್ವನಿ ತೆಗೆದರೆ ಏನಾಗುತ್ತದೆ ಎಂಬುದರ ಪ್ರದರ್ಶನ. ಬಂಧನವೆಂದರೆ ಬಂಧಿತರಿಗೆ ವಕೀಲರ ಸೌಲಭ್ಯ, ಕುಟುಂಬದವರಿಗೆ ಭೇಟಿ ಮಾಡುವ ಅವಕಾಶ, ಎಲ್ಲಿ ಯಾವ ಜೈಲಿನಲ್ಲಿ ಹೇಗೆ ಇಡಲಾಗಿದೆ ಎಂಬುದರ ಮಾಹಿತಿಗಳು ಇರಬೇಕಲ್ಲವೇ? ಇದ್ಯಾವುದೂ ಎರಿಟ್ರಿಯಾದಲ್ಲಿ ಇಲ್ಲ. ಬೇರೆಯವರ ವಿಷಯ ಇರಲಿ, ಎರಿಟ್ರಿಯಾದ ಮಾಜಿ ಹಣಕಾಸು ಸಚಿವ ಬರ್ಹಾನೆ ಅಬ್ರೆಹೆಯವರನ್ನು ಎರಿಟ್ರಿಯಾದ ರಾಜಧಾನಿ ಅಸ್ಮಾರದಲ್ಲಿ 2018ರಲ್ಲಿ ಬಂಧಿಸಲಾಯಿತು. ಅವರ ಪುತ್ರನ ಪ್ರಕಾರ ಅಪ್ಪ ಎಲ್ಲಿದ್ದಾರೆ ಎಂಬುದನ್ನು ಸರ್ಕಾರ ಹೇಳುತ್ತಿಲ್ಲ. `ಎರಿಟ್ರಿಯಾ ಮೈ ಕಂಟ್ರಿ’ ಎಂಬ ತಮ್ಮ ಕೃತಿಯಲ್ಲಿ ಅವರು ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಬಂಧಿಸಲಾಗಿತ್ತು.

2006ರಿಂದ ಎರಿಟ್ರಿಯಾದಲ್ಲಿ ಖಾಸಗಿ ಮಾಧ್ಯಮಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಸ್ವತಂತ್ರ ಪತ್ರಕರ್ತರು ಜೈಲಿನಲ್ಲಿದ್ದಾರೆ. ಇಡೀ ಜಗತ್ತಿನಲ್ಲಿ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾದ ದೇಶಗಳಲ್ಲಿ ಎರಿಟ್ರಿಯಾ ಅಗ್ರ ಸ್ಥಾನಗಳನ್ನು ಅಲಂಕರಿಸುತ್ತಿದೆ.

ಅಮಾನ್ಯುವೆಲ್ ರೀತಿಯಲ್ಲೇ ಎರಿಟ್ರಿಯಾ ಪ್ರಭುತ್ವ ಬಂಧಿಸಿ ಕಣ್ಮರೆಯಾಗಿಸಿದ ಇನೊಬ್ಬ ಪತ್ರಕರ್ತ ದಾವಿತ್ ಇಸಾಕ್. ಎರಿಟ್ರಿಯಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಬೇಕು ಎಂದು ಪ್ರಬಲವಾಗಿ ವಾದಿಸುತ್ತಿದ್ದರು ಇಸಾಕ್. 1990ರಲ್ಲಿ ಸೆಟಿಟ್ ಎಂಬ ಹೆಸರಿನ ಪತ್ರಿಕೆ ಆರಂಭಿಸಿದ್ದ ಇಸಾಕ್ ಅದರ ಮೂಲಕ ತನ್ನ ಪ್ರಜಾಪ್ರಭುತ್ವವಾದಿ ಹೋರಾಟವನ್ನು ನಡೆಸುತ್ತಿದ್ದರು. ಸೆಟಿಟ್ ಎಂಬುದು ಎರಿಟ್ರಿಯಾದ ಒಂದು ನದಿಯ ಹೆಸರು. ತನ್ನ ಪತ್ರಿಕೆಯೂ ನದಿಯಂತೆ ಯಾವ ಅಡೆತಡೆಯಿಲ್ಲದೆ ಹರಿಯಬೇಕು ಎಂದು ಅವರು ಬಯಸಿದ್ದರು. ಆದರೆ ಅವರ ಈ ಆಸೆ ನೆರವೇರಲಿಲ್ಲ. ಇಥಿಯೋಪಿಯಾ ಜತೆ ಮತ್ತೊಂದು ಸುತ್ತಿನ ಸಂಘರ್ಷ ಆರಂಭಗೊಂಡಿತ್ತು. ಯುದ್ಧವೆಂದರೆ ಗೊತ್ತಲ್ಲ, ಸರ್ಕಾರ ತನ್ನ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನೇ ಮೊದಲು ಕಿತ್ತುಕೊಳ್ಳುತ್ತದೆ.

ಇಸಾಕ್ ಪ್ರಾಣಭಯದಿಂದ ಸ್ವೀಡನ್‌ಗೆ ಪರಾರಿಯಾದರು. ಸ್ವೀಡಿಶ್ ನಾಗರಿಕತ್ವವನ್ನೂ ಪಡೆದುಕೊಂಡರು. ಆದರೆ ಅವರ ತಾಯ್ನಾಡಿನ ಸೆಳೆತ ಮತ್ತೆ ದೇಶಕ್ಕೆ ಬರುವಂತೆ ಪ್ರಚೋದಿಸಿತು. ೨೦೦೧ರಲ್ಲಿ ಎರಿಟ್ರಿಯಾದಲ್ಲಿ ಪರಿಸ್ಥಿತಿ ಸುಧಾರಿಸದೇ ಇದ್ದರೂ ವಾಪಾಸು ಬಂದರು. ಅಮಾನ್ಯುವೆಲ್ ಅವರ ಹಾಗೆಯೇ ಇಸಾಕ್ ಕೂಡ ಎರಿಟ್ರಿಯಾ ಅಧ್ಯಕ್ಷರಿಗೆ ಅಲ್ಲಿನ ಕೆಲವು ರಾಜಕಾರಣಿಗಳು ಬರೆದ ಬಹಿರಂಗ ಪತ್ರವನ್ನು ತಮ್ಮ ಸೆಟಿಟ್ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದನ್ನೇ ಕಾಯುತ್ತಿದ್ದ ಹಾಗೆ ಎರಿಟ್ರಿಯಾ ಸರ್ಕಾರ ಅವರನ್ನು ಬಂಧಿಸಿ ಜೈಲಿಗಟ್ಟಿತು.

ಇಸಾಕ್ ಅವರ ಸಹೋದರ ಇಸಾಯಸ್ ಈಗಲೂ ಸಣ್ಣ ಆಶಾವಾದ ಇಟ್ಟುಕೊಂಡು ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ ಅವರ ಸಹೋದರನ ಕುರಿತು ಕಿಂಚಿತ್ತು ಮಾಹಿತಿಯನ್ನೂ ಅಲ್ಲಿನ ಪ್ರಭುತ್ವ ನೀಡುತ್ತಿಲ್ಲ. ಯುನೆಸ್ಕೋ ಇಸಾಕ್ ಅವರಿಗೆ `ವಿಶ್ವ ಪತ್ರಿಕಾ ಸ್ವಾತಂತ್ರ‍್ಯ ಪ್ರಶಸ್ತಿ’ಯನ್ನು ನೀಡಿದೆ. ಆದರೆ ಪ್ರಶಸ್ತಿ ಸ್ವೀಕರಿಸಲು ಇಸಾಕ್ ಬದುಕಿದ್ದಾರೋ ಇಲ್ಲವೋ, ಬದುಕಿದ್ದರೂ ಹೇಗಿದ್ದಾರೋ ಯಾರಿಗೂ ಗೊತ್ತಿಲ್ಲ. ೨೦೦೧ರ ನಂತರ ಹತ್ತೊಂಭತ್ತು ವರ್ಷಗಳು ಉರುಳಿ ಹೋಗಿವೆ. ಸೆಟಿಟ್ ನದಿಯಲ್ಲಿ ಅದೆಷ್ಟು ನೀರು ಹರಿದುಹೋಯಿತೋ? ಪ್ರಜಾಪ್ರಭುತ್ವ ನೆಲೆಗೊಳ್ಳಬೇಕೆಂಬ ಆಕಾಂಕ್ಷೆಯ ಸೆಳೆತಕ್ಕೆ ಇಸಾಕ್ ಕೊಚ್ಚಿ ಹೋದರು.

2001ರಲ್ಲಿ ಬಂಧನಕ್ಕೆ ಒಳಗಾದ ಹದಿನಾರು ಪ್ರಮುಖ ಪತ್ರಕರ್ತರ ಪೈಕಿ ಮತ್ತೊಬ್ಬರು ಇದ್ರಿಸ್ ಸಯೀದ್ ಅಬಾ ಅರೆ ಕೂಡ ಒಬ್ಬರು. ಮಾತೃಭಾಷಾ ಶಿಕ್ಷಣ ನೀತಿಯ ಹೆಸರಿನಲ್ಲಿ ಒಂದೇ ಭಾಷೆಯನ್ನು ಹೇರುವ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸುತ್ತಿದ್ದವರು ಇದ್ರಿಸ್ ಸಯೀದ್. ಟೈಗ್ರಿನ್ಯಾ ಭಾಷೆಯನ್ನೇ ಸಮಸ್ತ ಎರಿಟ್ರಿಯನ್ನರ ಮೇಲೆ ಹೇರುವುದನ್ನು ಇದ್ರಿಸ್ ವಿರೋಧಿಸುತ್ತಿದ್ದರು. ಟೈಗ್ರಿನ್ಯಾ ಎರಿಟ್ರಿಯಾದ ಶೇ. 50ರಷ್ಟು ಜನರು ಮಾತನಾಡುವ ಭಾಷೆ ಆದರೂ, ಅಲ್ಲಿರುವ ಇತರ ಭಾಷಿಕ ಜನರಿಗೆ ತಮ್ಮದೇ ಭಾಷೆಯಲ್ಲಿ ಕಲಿಯುವ ಅವಕಾಶ ನೀಡಬೇಕು ಎಂಬುದು ಇದ್ರಿಸ್ ಅವರ ವಾದವಾಗಿತ್ತು.

ಎರಿಟ್ರಿಯಾದಲ್ಲಿ ಒಟ್ಟು ಒಂಭತ್ತು ಅಧಿಕೃತ, ರಾಷ್ಟ್ರಭಾಷೆಗಳಿವೆ. ಅವುಗಳ ಪೈಕಿ ಒಂದನ್ನು ಮಾತ್ರ ಮೆರೆಸುವುದು ಇತರ ಭಾಷೆಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಿದ್ದರು. ಬಂಧನಕ್ಕೆ ಒಳಗಾಗುವ ಮೊದಲು ಇದ್ರಿಸ್ ಶಿಕ್ಷಣ ಮಾಧ್ಯಮ ಕುರಿತ ವಿಸ್ತೃತ ಲೇಖನವೊಂದನ್ನು ಪ್ರಕಟಿಸಿದ್ದರು. ಎರಿಟ್ರಿಯಾದ ಎಲ್ಲ ಒಂಭತ್ತು ಭಾಷೆಗಳಲ್ಲೂ ಕಲಿಕೆಗೆ ಅವಕಾಶ ನೀಡಬೇಕು ಎಂದು ಅವರು ತಮ್ಮ ಲೇಖನದಲ್ಲಿ ಆಗ್ರಹಿಸಿದ್ದರು. ಒಂದು ವೇಳೆ ಟೈಗ್ರಿನ್ಯಾ ಹೊರತಾಗಿ ಇತರ ಭಾಷೆಗಳನ್ನು ಶಿಕ್ಷಣ ಮಾಧ್ಯಮದಿಂದ ಹೊರಗೆ ಇಟ್ಟರೆ ದೇಶದಲ್ಲಿ ಇತರ ಭಾಷಿಕರು ಅನಕ್ಷರಸ್ಥರಾಗಿ ಉಳಿದುಬಿಡುತ್ತಾರೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.

ಎರಿಟ್ರಿಯಾ ಸರ್ಕಾರ ಇದ್ರಿಸ್ ಅವರನ್ನೂ ಬಂಧಿಸಿತು. 2016ರವರೆಗೆ ಇದ್ರಿಸ್ ಅವರನ್ನು ಈರಿಯಾರೋ ಎಂಬಲ್ಲಿ ಜೈಲಿನಲ್ಲಿ ಇಡಲಾಗಿತ್ತು, ನಂತರ ಅವರನ್ನು ಎಲ್ಲಿಗೆ ಸಾಗಿಸಲಾಯಿತು ಎಂಬುದು ತಿಳಿದಿಲ್ಲ ಎನ್ನುತ್ತವೆ ಕೆಲವು ವರದಿಗಳು. ಇದ್ರಿಸ್ ಪತ್ರಕರ್ತರೇ ಅಲ್ಲ, ಅವರೊಬ್ಬ ಸರ್ಕಾರಿ ನೌಕರ ಎಂದು 2017ರಲ್ಲಿ ಸರ್ಕಾರಿ ಒಡೆತನದ ಎರಿಟ್ರಿಯನ್ ನ್ಯೂಸ್ ಏಜೆನ್ಸಿ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳಿಗೆ ಸ್ಪಷ್ಟನೆ ನೀಡಿತು. ಆದರೆ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಮಾಹಿತಿಯನ್ನು ಈ ನ್ಯೂಸ್ ಏಜೆನ್ಸಿ ಕೂಡ ನೀಡಲಿಲ್ಲ.

ದಾವಿಸ್ ಇಸಾಕ್

ಪೆನ್ ಇಂಟರ್ ನ್ಯಾಷನಲ್ ಸಂಸ್ಥೆ ಅಬಾ ಅರೆ ಅವರ ಬಿಡುಗಡೆಗಾಗಿ ಸಾಕಷ್ಟು ಪ್ರಯತ್ನ ನಡೆಸಿ ವಿಫಲವಾಯಿತು. ಉಕ್ರೇನ್ ನಲ್ಲಿ 2017ರಲ್ಲಿ ಪೆನ್ ಇಂಟರ್‌ನ್ಯಾಷನಲ್ ನಡೆಸಿದ ವಿಶ್ವ ಅಧಿವೇಶನದಲ್ಲಿ ಇದ್ರಿಸ್ ಅಬಾ ಅರೆಯವರಿಗೆ ಖಾಲಿ ಖುರ್ಚಿಯ ಗೌರವ ನೀಡಲಾಯಿತು.

ಎರಿಟ್ರಿಯಾ ಇದುವರೆಗೆ ಜಾಗತಿಕ ಮಾನವ ಹಕ್ಕು ಸಂಘಟನೆಗಳ ಮನವಿಗಳನ್ನು ಧಿಕ್ಕರಿಸುತ್ತಲೇ ಬಂದಿದೆ. ಆಫ್ರಿಕನ್ ಮಾನವ ಹಕ್ಕು ಆಯೋಗದ ತೀರ್ಪನ್ನು ಅದು ಜಾರಿಗೆ ತರಲಿಲ್ಲ. ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಪೆನ್ ಇಂಟರ್‌ನ್ಯಾಷನಲ್‌ನಂಥ ಸಂಸ್ಥೆಗಳು ಮೇಲಿಂದ ಮೇಲೆ ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರೂ ಅದಕ್ಕೆ ತಲೆ ಕೆಡಿಸಿಕೊಂಡಿಲ್ಲ.

ಎರಿಟ್ರಿಯಾವನ್ನು 1993ರಿಂದ ಆಳುತ್ತಿರುವುದು ಇಸಾಯಿಸ್ ಅಫ್ವೆರ್ಕಿ ಎಂಬ ಸರ್ವಾಧಿಕಾರಿ. ಎರಿಟ್ರಿಯಾದಲ್ಲಿ ಏಕಪಕ್ಷದ ಆಡಳಿತ ವ್ಯವಸ್ಥೆಯಿದೆ. ಪೀಪಲ್ಸ್ ಫ್ರಂಟ್ ಫಾರ್ ಡೆಮಾಕ್ರಸಿ ಅಂಡ್ ಜಸ್ಟಿಸ್ (ಪಿಎಫ್‌ಡಿಜೆ) ಎರಿಟ್ರಿಯಾದ ಆಡಳಿತ ನಡೆಸುತ್ತಿರುವ ಏಕೈಕ ರಾಜಕೀಯ ಪಕ್ಷ. ಈ ಪಕ್ಷದ ಹೆಸರಿಗೂ, ಅದು ಕಾರ್ಯನಿರ್ವಹಿಸುತ್ತಿರುವ ಶೈಲಿಗೂ ಕಿಂಚಿತ್ತು ಸಂಬಂಧವೂ ಇಲ್ಲ. ಸತತ ಇಪ್ಪತ್ತೇಳು ವರ್ಷಗಳಿಂದ ಎರಿಟ್ರಿಯಾವನ್ನು ಆಳುತ್ತಿರುವ ಇಸಾಯಿಸ್ ಪಾಶ್ಚಾತ್ಯ ಶೈಲಿಯ ಪ್ರಜಾಪ್ರಭುತ್ವವನ್ನು ಗೇಲಿ ಮಾಡುತ್ತಾನೆ. ಆತ ತಾನು ಅಧಿಕಾರಕ್ಕೆ ಬಂದಾಗಿನಿಂದ ಎರಿಟ್ರಿಯಾದಲ್ಲಿ ನ್ಯಾಯಬದ್ಧ ಚುನಾವಣೆಗಳನ್ನೇ ನಡೆಸಿಲ್ಲ. 2003ರ ನಂತರ ಅಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವುದನ್ನೂ ಈತ ನಿಲ್ಲಿಸಿಬಿಟ್ಟಿದ್ದಾನೆ. ಅಲ್ ಜಜೀರಾಗೆ ನೀಡಿದ ಸಂದರ್ಶನವೊಂದಲ್ಲಿ ಈತ ಯಾವಹಿಂಜರಿಕೆ, ನಾಚಿಕೆಯೂ ಇಲ್ಲದೆ ಎರಿಟ್ರಿಯಾದಲ್ಲಿ ಚುನಾವಣೆ ನಡೆಸುವಂತಾಗಲು ಇನ್ನೂ ಮೂವತ್ತು-ನಲವತ್ತು ವರ್ಷಗಳು ಬೇಕಾಗಬಹುದು ಎಂದುಹೇಳಿಕೊಂಡಿದ್ದ. 20011ರಲ್ಲಿ ಎರಿಟ್ರಿಯಾದಲ್ಲಿ ರಾಷ್ಟ್ರೀಯ ಚುನಾವಣೆಗಳನ್ನು ಘೋಷಿಸಲಾಗಿತ್ತಾದರೂ ಅದು ನಡೆಯಲಿಲ್ಲ. ಎರಿಟ್ರಿಯಾದ ಶೇ.20ರಷ್ಟು ಭೂಭಾಗ ಶತ್ರು ದೇಶದ ವಶದಲ್ಲಿದೆ, ಹೀಗಾಗಿ ಚುನಾವಣೆ ನಡೆಸಲಾಗದು ಎಂದು ಇಸಾಯಿಸ್ ಹೇಳಿಕೊಂಡಿದ್ದ. ಆದರೆ ಅದು ಅವನು ತಾನು ಅಧ್ಯಕ್ಷನಾಗಿ, ಸರ್ವಾಧಿಕಾರಿಯಾಗಿ ಮೆರೆಯಲು ಕೊಟ್ಟುಕೊಂಡು ಬರುತ್ತಿರುವ ಸಬೂಬು ಅಷ್ಟೆ. ಇಥಿಯೋಪಿಯಾ ಜತೆಗಿನ ಯುದ್ಧ ಮುಗಿದರೂ ಆತ ಚುನಾವಣೆ ನಡೆಸಲಿಲ್ಲ.

ಇದ್ರಿಸ್ ಸಯೀದ್ ಅಬಾ ಅಲೆ

ಜಗತ್ತಿನ ಯಾವುದೇ ರೂಪದ ಫ್ಯಾಸಿಸ್ಟ್ ಪ್ರಭುತ್ವಗಳು ಮೊದಲು ಗುರಿ ಮಾಡುವುದೇ ಪತ್ರಕರ್ತರು, ನ್ಯಾಯವಾದಿಗಳು, ಪ್ರಾಧ್ಯಾಪಕರು, ಮಾನವ ಹಕ್ಕು ಹೋರಾಟಗಾರರನ್ನು. ಭಾರತದಲ್ಲಿ ಇದು ಕಳೆದ ಆರು ವರ್ಷಗಳಿಂದ ತೀವ್ರ ಸ್ವರೂಪ ತಾಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ಪ್ರಭುತ್ವಗಳು ಸ್ವತಂತ್ರ ಚಿಂತನೆಗಳನ್ನು, ಭಿನ್ನ ಧ್ವನಿಗಳನ್ನು, ಜನರಲ್ಲಿ ಜಾಗೃತಿ ಮೂಡಿಸಬಹುದಾದ ವಿದ್ಯಾವಂತರನ್ನು ಸಹಿಸುವುದೇ ಇಲ್ಲ. ಇಂಥವರನ್ನು ಸರ್ಕಾರಿ ಅಥವಾ ಸರ್ಕಾರಿ ಪ್ರಾಯೋಜಕತ್ವದ ಖಾಸಗಿ ಪಡೆಗಳು ಕೊಲ್ಲುತ್ತವೆ ಅಥವಾ ಜೈಲಿಗೆ ಅಟ್ಟಲಾಗುತ್ತದೆ. ಎರಿಟ್ರಿಯಾದಲ್ಲಿ ನಡೆಯುತ್ತಿರುವುದು ಇದರ ತೀವ್ರ ಸ್ವರೂಪ. ಸರ್ವಾಧಿಕಾರದ ಕ್ರೂರ ನರ್ತನದಿಂದಾಗಿ ಪ್ರತಿಭಾವಂತ ಪತ್ರಕರ್ತರು ಅಕ್ಷರಶಃ ಕೊಳೆತುಹೋಗಿದ್ದಾರೆ.

(ಪೆನ್ ಇಂಟರ್‌ನ್ಯಾಷನಲ್ ಸಾಲಿಡಾರಿಟಿ ಬರಹಗಳನ್ನು ಅನುಸರಿಸಿ)
ಟಿ ದಿನೇಶ್ ಕುಮಾರ್ ಎಸ್. ಸಿ ಪತ್ರಕರ್ತರು


ಇದನ್ನೂ ಓದಿ: ಅಮೆರಿಕದ ಶಾಖಕ್ಕೆ ಭಾರತದಲ್ಲಿ ಬೆವರಿದ ಫೇಸ್‌ಬುಕ್ – ರಾಜಾರಾಂ ತಲ್ಲೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...