Homeಮುಖಪುಟಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

ಸರಕಾರದಿಂದ ನಿಯೋಜಿಸಲಾದ ಟ್ರಾಲ್ ಸೇನೆಗಳಿಗೆ ಅರ್ಥವಾಗದ ಅಮರ್ತ್ಯ ಸೇನ್

- Advertisement -
- Advertisement -

ಅಮರ್ತ್ಯ ಸೇನ್ ಅವರು ಕಾಲಕಾಲಕ್ಕೆ ಆಡಳಿತಾರೂಢ ಎನ್‌ಡಿಎ ಸರಕಾರವನ್ನು ಸಕಾರಣವಾಗಿ ಟೀಕಿಸುತ್ತಾ ಬಂದಿದ್ದಾರೆ ಮತ್ತು ಅದು ಭಾರತದಲ್ಲಿಯ ಬಲಪಂಥೀಯರು ಅವರನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಟ್ರಾಲ್ ಮಾಡುತ್ತಲೇ ಇರುವುದಕ್ಕೆ ಕಾರಣವಾಗಿದೆ. ಐಟಿ ಸೆಲ್‌ಗಳಿಂದ ಸೃಷ್ಟಿಸಲಾದ ಹ್ಯಾಷ್‌ಟ್ಯಾಗ್‌ಗಳಿಂದ, ಒಪ್‌ಎಡ್‌ಗಳಿಂದ(ಹೊರಗಿನ ಲೇಖಕರು ಬರೆಯುವ ಸಂಪಾದಕೀಯ ಬರಹಗಳು), ಟಿವಿ ವಾಹಿನಿಗಳಲ್ಲಿ ಮಾಡುವ ಚರ್ಚೆಗಳಿಂದ ಮಾಡಲಾಗುವ ಈ ಮಸಿ ಎರಚುವ ಪ್ರಚಾರವು ಎಂದಿಗೂ ಸೇನ್‌ರಂತಹ ತತ್ವಶಾಸ್ತ್ರದ- ಆರ್ಥಿಕತೆಯ ದೈತ್ಯಪ್ರತಿಭೆಯ ಪರಿಕಲ್ಪನೆಗಳ ಮೇಲೆ ಚರ್ಚಿಸುವುದಿಲ್ಲ. ಈ ಪರಿಕಲ್ಪನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗದೆ, ಅದರ ಬದಲಿಗೆ ಯಾವಾಗಲೂ ಅವರ ಚಾರಿತ್ರ್ಯ, ರಾಷ್ಟ್ರೀಯತೆ ಮತ್ತು ಅವರ ವೈಯಕ್ತಿಕ, ಧಾರ್ಮಿಕ ನಂಬಿಕೆಗಳನ್ನು ಮುಂದಿಟ್ಟುಕೊಂಡು ಅವರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಇತ್ತೀಚಿಗೆ ಅವರು ಪ್ರಸಕ್ತ ನಡೆಯುತ್ತಿರುವ ರೈತರ ಆಂದೋಲನಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ, ಅದರೊಂದಿಗೆ ಈ ಕೃಷಿ ಕಾನೂನುಗಳನ್ನು ಪರಾಮರ್ಶಿಸಬೇಕು ಎಂತಲೂ ಸೂಚಿಸಿದ್ದರು; ಈ ಕಾರಣಕ್ಕಾಗಿ ಅವರ ಮೇಲೆ ಮತ್ತೊಮ್ಮೆ ದಾಳಿ ಶುರುವಾಗಿದೆ. ಕೇವಲ ಸರಕಾರಿ ನೀತಿಗಳನ್ನು ವಿಮರ್ಶಿಸಿದ್ದಕ್ಕಾಗಿ, ನಮ್ಮ ಕಾಲದ ಅತ್ಯಂತ ಪ್ರಭಾವಿ ಅರ್ಥಶಾಸ್ತ್ರಜ್ಞರ ಮೇಲೆ ಆಗುತ್ತಿರುವ ದಾಳಿಯನ್ನು ನೋಡಿದಾಗ, ಈ ಹಿಂದು ಬಹುಸಂಖ್ಯಾತವಾದಿ ಸರಕಾರದ ಅಡಿಯಲ್ಲಿಯ ಭಾರತೀಯ ಪ್ರಜಾಪ್ರಭುತ್ವದ ಬಿರುಕುಗಳನ್ನು ಮತ್ತೊಮ್ಮೆ ಎತ್ತಿತೋರಿಸಿದೆ.

ಸದ್ಯಕ್ಕೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಭಾರತೀಯ ಅರ್ಥಶಾಸ್ತ್ರಜ್ಞ ಮತ್ತು ತತ್ವಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ 1998ರಲ್ಲಿ ಆರ್ಥಿಕ ವಿಜ್ಞಾನದ ಕ್ಷೇತ್ರದ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು ಹಾಗೂ 1999ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನದಿಂದ ಪುರಸ್ಕರಿಸಲಾಗಿತ್ತು. ಸಮಾಜಕಲ್ಯಾಣ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ, ನೈತಿಕ ತತ್ವಶಾಸ್ತ್ರ ಮತ್ತು ಗಣಿತದ ತರ್ಕದಲ್ಲಿ ಅವರು ಮಾಡಿದ ಸಾಧನೆ ಅಗಾಧವಾದದ್ದು. ಈ ಕ್ಷೇತ್ರಗಳಲ್ಲಿ ಅವರು ಮಾಡಿದ ಸಾಧನೆಯು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಅವರನ್ನು ವಿಶ್ವದಲ್ಲೇ ಅಗ್ರಗಣ್ಯ ಸ್ಥಾನ ಪಡೆಯುವಂತೆ ಮಾಡಿದೆ. ಅವರ ಆರು ದಶಕಗಳ ದೀರ್ಘ ಕಾರ್ಯಾವಧಿಯಲ್ಲಿ ಹತ್ತಕ್ಕಿಂತಲೂ ಹೆಚ್ಚು ಬಹುಚರ್ಚಿತ ಪುಸ್ತಕಗಳನ್ನು ಹೊರತಂದಿದ್ದಾರೆ ಹಾಗೂ ಬಹುತೇಕ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಅವರು ಬರೆದಿದ್ದಾರೆ. ಅವರ ಪರಿಕಲ್ಪನೆಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ, ಎಲ್ಲೆಡೆ ಉಲ್ಲೇಖಿಸಲಾಗಿದೆ ಹಾಗೂ ಅಭಿವೃದ್ಧಿ ಪಡಿಸಲಾಗಿದೆ.

ಸೇನ್ ಅವರನ್ನು ಕೇವಲ ಅವರ ಅಕ್ಯಾಡೆಮಿಕ್ ಸಾಧನೆಗಾಗಿ ಗುರುತಿಸಲಾಗುವುದಿಲ್ಲ. ಅದರೊಂದಿಗೆ ಉದಾರವಾದಿ ಆರ್ಥಿಕ ಸಿದ್ಧಾಂತದ ವ್ಯಾಪ್ತಿಯಲ್ಲಿಯೇ ಮಾನವನ ಸ್ವಾತಂತ್ರ ಮತ್ತು ಸಾಮರ್ಥ್ಯಗಳ ಮೇಲೆ ಒತ್ತು ನೀಡಿದ್ದಕ್ಕಾಗಿಯೂ ಅವರನ್ನು ಗುರುತಿಸಲಾಗುತ್ತದೆ. ಅವರು ವೈಯಕ್ತಿಕ ಆಯ್ಕೆ ಮತ್ತು ನಿರ್ಣಯ ಮಾಡುವುದರ ಮೇಲೆ ನೀಡಿದ ಒತ್ತಿನ ಕಾರಣಕ್ಕಾಗಿ ಉಪಯೋಗಸಿಂಧು ಅಥವಾ ಉಪಯೋಗದ ದೃಷ್ಟಿಯಿಂದ ಮಾತ್ರ ನೋಡುವ(ಯುಟಿಲಿಟೇರಿಯನ್) ಚೌಕಟ್ಟನ್ನು ಆಳವಾಗಿ ಅಧ್ಯಯನ ಮಾಡಿ ಅದನ್ನು ಟೀಕಿಸಿದರು ಹಾಗೂ ಈ ತಿಳಿವಳಿಕೆಯನ್ನು ಮೀರಬೇಕೆಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಯಾವ್ಯಾವ ’ಪರಿಸ್ಥಿತಿಗಳು’ ಜನರು ನಿರ್ದಿಷ್ಟ ಆಯ್ಕೆ ಮಾಡುವಂತೆ ಮಾಡುತ್ತವೆ ಎಂಬುದು ಸೇನ್ ಅವರ ಅಧ್ಯಯನದ ತಿರುಳು ಎನ್ನಬಹುದು. ಅವರು ಸಾಮಾಜಿಕ ಮೌಲ್ಯಮಾಪನದ ಪ್ರಸಿದ್ಧ ಚೌಕಟ್ಟನ್ನು ನೀಡಿದರು ಹಾಗೂ ’ಸಾಮರ್ಥ್ಯದ ವಿಧಾನ(ಅಪ್ರೋಚ್)’ನ ಸ್ವರೂಪದಲ್ಲಿ ವೈಯಕ್ತಿಕ ಯೋಗಕ್ಷೇಮದ ಮೌಲ್ಯಮಾಪನವನ್ನು ನೀಡಿದ್ದಾರೆ.

ಆದ್ಯತೆಗಳನ್ನು ಪೂರೈಸುವ ಉಪಯೋಗಸಿಂಧು (ಯುಟಿಲಿಟೇರಿಯನ್) ನೋಟಕ್ಕೆ ವಿರುದ್ಧವಾಗಿರುವ ಮತ್ತು ಸಂಪನ್ಮೂಲಗಳನ್ನು ಸಮಾನವಾಗಿ ಹಂಚುವ ಇರಾದೆ ಇರುವ ಇವರ ವಿಧಾನವು ಮಾನವನ ಸ್ವಾತಂತ್ರ್ಯಗಳ ದೃಷ್ಟಿಯಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯನ್ನು ನೋಡುತ್ತದೆ. ಇಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಸಕಾರಾತ್ಮಕ ಸ್ವಾತಂತ್ರ್ಯದ ಪರಿಕಲ್ಪನೆಯಾಗಿದೆ ಅಂದರೆ, ನಿಜವಾಗಿಯೂ ಏನನ್ನಾದರೂ ’ಮಾಡುವ’ ಮತ್ತು ಏನಾದರೂ ’ಆಗುವ’ ಸ್ವಾತಂತ್ರ್ಯ. ಸೇನ್ ಹೇಳುವುದೇನೆಂದರೆ, ಇಂತಹ ಸ್ವಾತಂತ್ರ್ಯವು ಆಯಾ ವ್ಯಕ್ತಿಗೆ ಲಭ್ಯವಿರುವ ಅವಕಾಶಗಳ ಮೂಲಕ ಪೂರ್ಣಗೊಳಿಸಬಹುದು ಎಂದು. ಶಿಕ್ಷಣ, ಆಹಾರ, ನೈರ್ಮಲ್ಯ, ರಾಜಕೀಯ ಭಾಗವಹಿಸುವಿಕೆ, ಸಾಮಾಜಿಕ ತೊಡಗಿಸುವಿಕೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಇಂತಹವುಗಳಿಗೆ ಇರುವ ಪ್ರವೇಶಾವಕಾಶದಂತಹ ಸಂಗತಿಗಳು ಒಬ್ಬ ವ್ಯಕ್ತಿಯು ಸಾಮರ್ಥ್ಯವನ್ನು ರೂಪಿಸುತ್ತವೆ ಹಾಗೂ ಆ ವ್ಯಕ್ತಿಗೆ ಇರುವ ಆಯ್ಕೆಗಳನ್ನು ನಿರ್ಧರಿಸುತ್ತವೆ.

ಈ ಚೌಕಟ್ಟಿನಲ್ಲಿ ವೈಯಕ್ತಿಕ ಸ್ವಾತಂತ್ರವು ಒಬ್ಬ ವ್ಯಕ್ತಿಗೆ ಮೇಲ್ನೋಟದಲ್ಲಿ ಆ ವ್ಯಕ್ತಿಯು ಏನು ಬೇಕಾದರೂ ಮಾಡಲು ಅನುವು ಮಾಡಿಕೊಡುವುದಿಲ್ಲ ಅದರ ಬದಲಿಗೆ, ಅವರಿಗೆ ಲಭ್ಯವಿರುವ ಪರಿಸ್ಥಿತಿಗಳು, ಸಾಧ್ಯತೆಗಳು, ಜೀವನಾವಕಾಶಗಳು, ಇವೆಲ್ಲವುಗಳು ಕೂಡಿ, ಆ ಒಬ್ಬ ವ್ಯಕ್ತಿ ನಿಜವಾಗಿಯೂ ಏನು ಮಾಡಬಹುದು ಅಥವಾ ಏನು ಆಗಬಹುದು ಎಂಬುದನ್ನು ತೀರ್ಮಾನಿಸುತ್ತವೆ. ಸೇನ್ ಅವರ ನ್ಯಾಯದ ಪರಿಕಲ್ಪನೆ ಇರುವುದು ಜನರ ಸಾಮರ್ಥ್ಯಗಳ ಸಮುಚ್ಛಯವನ್ನು ವಿಸ್ತರಿಸುವಲ್ಲಿ; ಹಾಗಾಗಬೇಕಾದರೆ, ಶಿಕ್ಷಣ, ಆರೋಗ್ಯ ಸೇವೆ, ಮೂಲಸೌಕರ್ಯಗಳು, ಸಾಮಾಜಿಕ-ರಾಜಕೀಯ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮುಂತಾದವುಗಳ ಮೇಲೆ ಸಮಾಜವು ಕೆಲಸ ಮಾಡಬೇಕಾಗುತ್ತದೆ. ಈ ಅಂಶಗಳೇ ಸೇನ್ ಅವರ ಪರಿಕಲ್ಪನೆಗಳನ್ನು ಅತ್ಯಂತ ಪ್ರಸ್ತುತಗೊಳಿಸುವುದು.

ಬಂಡವಾಳಶಾಹಿ ಪ್ರಜಾಪ್ರಭುತ್ವಗಳಲ್ಲಿ ಯೋಗಕ್ಷೇಮ ಮತ್ತು ಅಭಿವೃದ್ಧಿಯ ಬಗ್ಗೆ ಇಂತಹ ತಿಳಿವಳಿಕೆಯು ಜನರಿಗೆ ಜೀವನಾಧಾರದ ಮೂಲಗಳನ್ನು ನೀಡಲು ಮತ್ತು ಅವುಗಳನ್ನು ವಿಸ್ತರಿಸಲು ಬೇಕಾದ ಕೆಲಸಗಳನ್ನು ಮಾಡಲು ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿಯು ಜಿಡಿಪಿ ಆಧಾರಿತ ದೃಷ್ಟಿಕೋನದಿಂದ ಮುಂದೆ ಹೋಗಿ ಮಾನವ ಸಾಮರ್ಥ್ಯಗಳ ವಿಸ್ತರಣೆಯನ್ನು ಒಳಗೊಳ್ಳಬೇಕು ಎಂಬ ಅಭಿವೃದ್ಧಿಯ ಪರಿಕಲ್ಪನೆಯು ಅತ್ಯಂತ ಪ್ರಭಾವಕಾರಿಯಾಗಿದೆ. ಈ ಪರಿಕಲ್ಪನೆಯು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಚೌಕಟ್ಟು, ನೀತಿಗಳು ಮತ್ತು ಅಭಿವೃದ್ಧಿಯ ಗುರಿಗಳ ಮೇಲೆ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿದೆ, ಇದರಿಂದಲೇ ಮಾನವ ಅಭಿವೃದ್ಧಿ ಸೂಚ್ಯಂಕಗಳು ಮತ್ತು ವರದಿಗಳು ಶುರುವಾದವು. ಸ್ವಾತಂತ್ರ್ಯ, ಸಾಧ್ಯತೆ, ನ್ಯಾಯ ಮತ್ತು ಪ್ರಜಾಪ್ರಭುತ್ವಗಳು ಸೇನ್ ಅವರ ಅಧ್ಯಯನದ ಮೂಲ ಸಾರಗಳಾಗಿವೆ ಹಾಗೂ ಬಂಡವಾಳಶಾಹಿ ವಿಶ್ವದ ವ್ಯವಸ್ಥೆಗೆ ಅಪಾರ ಮಹತ್ವವನ್ನು ಒದಗಿಸುತ್ತವೆ; ಕೇಯ್ನೇಷಿಯನ್ ಕಲ್ಯಾಣ ಮಾದರಿ ಮತ್ತು ನವಉದಾರೀಕರಣ ನೀತಿಗಳನ್ನು ಅಳವಡಿಸಿಕೊಳ್ಳ್ಳುವುದನ್ನು ಸಕ್ರಿಯವಾಗಿ ತೊರೆಯಬೇಕೆಂದು ಪ್ರತಿಪಾದಿಸುತ್ತವೆ.

ಭಾರತೀಯ ಪ್ರಜಾಪ್ರಭುತ್ವವನ್ನು ಪರಾಮರ್ಶಿಸಲು ಸೇನ್ ಅವರ ಪರಿಕಲ್ಪನೆಗಳು ಅತ್ಯುತ್ತಮ ಚೌಕಟ್ಟನ್ನು ಒದಗಿಸುತ್ತವೆ. ಅದರಲ್ಲೂ ವಿಶೇಷವಾಗಿ ಹಿಂದೂ ಬಹುಸಂಖ್ಯಾವಾದದ ಸಮಯದಲ್ಲಿ ಇದು ಮುಖ್ಯವಾಗಿದೆ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಭಾರತೀಯ ಪ್ರಜಾಪ್ರಭುತ್ವದ ಭರವಸೆಯು ಒಂದು ವೇಳೆ ಪ್ರಜೆಗಳಿಗೆ ಮೂಲ ಸಂಪನ್ಮೂಲಗಳಿಗೆ ಅವಕಾಶ ಮತ್ತು ಅವುಗಳನ್ನು ಬಳಸುವ ಸ್ವಾತಂತ್ರ್ಯ ಇಲ್ಲದೇ ಹೋದಲ್ಲಿ ಆ ಭರವಸೆ ಪೊಳ್ಳು ಭರವಸೆಯಾಗುತ್ತದೆ. ಉದಾಹರಣೆಗೆ, ಒಂದು ಮುಸ್ಲಿಮ್ ಕುಟುಂಬವು ಆರ್ಥಿಕ ಸ್ಥಿರತೆಯನ್ನು ಹೊಂದಬೇಕಾದರೆ, ಒಂದು ಸುಭದ್ರ ಉದ್ಯೋಗವಿದ್ದರೆ ಸಾಲದು, ಅದರೊಂದಿಗೆ ಆ ಉದ್ಯೋಗದಲ್ಲಿ ಮುಂದುವರೆಯಲು ಸಾಮಾಜಿಕ ಸುರಕ್ಷತೆ ಮತ್ತು ತಾರತಮ್ಯವಿಲ್ಲದ ವಾತಾವರಣವೂ ಬೇಕು.

ಇದೇ ಈ ಹೊಸ ಕೃಷಿ ನೀತಿಗಳಿಗೂ ಅನ್ವಯವಾಗುತ್ತದೆ, ಹಾಗೂ ಸೇನ್ ಸ್ವಾಭಾವಿಕವಾಗಿಯೇ ಕಾನೂನುಗಳ ವಿಮರ್ಶೆ ಮಾಡಿದರು ಹಾಗೂ ಅದಕ್ಕಾಗಿ ಅವರ ಮೇಲೆ ದಾಳಿ ಮಾಡಲಾಯಿತು. ಸರಕಾರವು ಪ್ರದರ್ಶಿಸುತ್ತಿರುವ ’ಆಯ್ಕೆ’ಯ ಭ್ರಮಾತ್ಮಕ ಭರವಸೆಗೆ ಒಂದೇ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಾದ ರೈತರು ಮತ್ತು ಕಾರ್ಪೊರೇಟ್‌ಗಳ ನಡುವೆ ಇರುವ ಅಸಮಾನ ಅಧಿಕಾರ ಮತ್ತು ಸಂಪನ್ಮೂಲಗಳ ಪರಿಸ್ಥಿತಿಯಲ್ಲಿ ಯಾವುದೇ ಅರ್ಥ ಕಾಣಿಸುವುದಿಲ್ಲ. ಆದರೆ, ಸರಕಾರದಿಂದ ನಿಯೋಜಿಸಲಾದ ಟ್ರಾಲ್‌ಗಳಿಗೆ ಸೇನ್ ಹೇಳಿದ ಈ ಮಾತುಗಳು ತಿಳಿಯುವುದಿಲ್ಲ ಹಾಗೂ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ವಿಫಲಗೊಳ್ಳುತ್ತಿರುವ ಪ್ರಜಾಪ್ರಭುತ್ವದ ಬಗ್ಗೆ ಸೇನ್ ಬರೆದಿರುವ ವಿಮರ್ಶೆಗಳನ್ನು ಈ ಟ್ರಾಲ್‌ಗಳು ಅರ್ಥಮಾಡಿಕೊಳ್ಳಬೇಕು ಎಂದು ನಿರೀಕ್ಷಿಸುವುದೂ ತಪ್ಪಾಗಿದೆ.

ಅಮರ್ತ್ಯ ಸೇನ್ ಅವರು ಬಂಡವಾಳಶಾಹಿ ಚೌಕಟ್ಟಿನೊಳಗೆ ಕೆಲಸ ಮಾಡುತ್ತಿರುವ ಉದಾರವಾದಿ ಆರ್ಥಿಕಶಾಸ್ತ್ರಜ್ಞರಾಗಿದ್ದಾರೆ. ಕಲ್ಯಾಣ ನೀತಿಗಳನ್ನು ಪ್ರತಿಪಾದಿಸುತ್ತ ಬಂಡವಾಳಶಾಹಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಸೇನ್ ಅವರನ್ನು ಖಂಡಿತವಾಗಿಯೂ ಟೀಕಿಸಬಹುದು. ಅವರು ಬಂಡವಾಳಶಾಹಿ ವ್ಯವಸ್ಥೆಯ ರ್‍ಯಾಡಿಕಲ್ ವಿಶ್ಲೇಷಣೆಯನ್ನು ನೀಡುವುದಿಲ್ಲ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಡಗಿರುವ ಬಿಕ್ಕಟ್ಟನ್ನೂ ನೋಡುವುದಿಲ್ಲ. ಅವರ ಪರಿಕಲ್ಪನೆಗಳಿಗೆ ನವಶಾಸ್ತ್ರೀಯ, ನವಉದಾರ ಹಾಗೂ ಮಾರ್ಕ್ಸಿಸ್ಟ್‌ರ ಆರ್ಥಿಕ ವಿಚಾರಧಾರೆಯನ್ನು ಹೊಂದಿರುವವರಿಂದ ಕಟು ಟೀಕೆಗಳು ವ್ಯಕ್ತವಾಗುತ್ತವೆ. ಹಾಗೂ ಸೇನ್ ಅವರು ಇಂತಹ ಟೀಕೆಗಳನ್ನು ಸ್ವಾಗತಿಸುತ್ತಾರೆ. ಆದರೆ, ಇತ್ತೀಚಿಗೆ ಮತ್ತೊಮ್ಮೆ ಕಾಣಿಸಿಕೊಂಡ ಬಲಪಂಥೀಯರ ದಾಳಿಗಳು, ಸೇನ್ ಅವರ ಪರಿಕಲ್ಪನೆಗಳನ್ನು ಆಧಾರವಾಗಿಸಿಕೊಂಡಿಲ್ಲ.

ಇದು ಕೇವಲ ಮಸಿ ಬಳಿಯುವ ಕೆಲಸವಾಗಿದೆ, ಅವರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಎಂದು ಕರೆಯುವುದು, ಪಶ್ಚಿಮದ ಗುಲಾಮ ಎನ್ನುವುದು, ಹಿಂದೂ ದ್ವೇಷಿ ಎಂದು ಕರೆಯುವುದು ಮತ್ತು ಇನ್ನೂ ಕೀಳುಮಟ್ಟದಲ್ಲಿ ಅವರ ಕುಟುಂಬದ ಸದಸ್ಯರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ಮಾಡುವುದು ಎಲ್ಲವೂ ಮಸಿ ಬಳಿಯುವ ಪ್ರಯತ್ನವಷ್ಟೆ. ಸೇನ್ ಅವರು ನಮ್ಮ ಕಾಲದ ಅತ್ಯಂತ ಪ್ರಮುಖ ಅಕ್ಯಾಡೆಮಿಕ್ ಚಿಂತಕರಾಗಿದ್ದಾರೆ ಹಾಗೂ ಭಾರತೀಯ ರಾಷ್ಟ್ರತ್ವದ ಬಗ್ಗೆ ವೈಭವವನ್ನು ತಂದವರು, ಅದನ್ನು ಬಲಪಂಥೀಯರು ತಮ್ಮ ರಾಜಕೀಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ, ಅದೂ ಅವರು ಪರಿಣಿತಿಯನ್ನು ಹೊಂದಿದ ವಿಷಯದ ಮೇಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಮಾಡುತ್ತಿರುವ ದಾಳಿಗಳನ್ನು ವ್ಯಾಪಕವಾಗಿ ಖಂಡಿಸಬೇಕಿದೆ.

(ಕನ್ನಡಕ್ಕೆ): ರಾಜಶೇಖರ ಅಕ್ಕಿ

ಶಿವ

ಶಿವ
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಮಾಜಶಾಸ್ತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳು ಬಗ್ಗೆ ವಿಶಿಷ್ಟ ಒಳನೋಟಗಳೊಂದಿಗೆ ಸಕ್ರಿಯವಾಗಿ ಸ್ಪಂದಿಸುತ್ತಾರೆ.


ಇದನ್ನೂ ಓದಿ: ನೇತಾಜಿ, ಠಾಗೋರರ ಉತ್ತರಾಧಿಕಾರಿಗಳಾಗಲು ಕೋಮುವಾದ ತಿರಸ್ಕರಿಸಿ: ಬಂಗಾಳಿಗಳಿಗೆ ಅಮರ್ತ್ಯ ಸೇನ್ ಕರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...