Homeಅಂಕಣಗಳುಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

ಕರ್ನಾಟಕದ ಗೃಹ ಸಚಿವರಾಗಿದ್ದ ಸಿ.ಎಂ ಪೂಣಚ್ಚರವರು ಮತ್ತು ಅವರ ಪೂರ್ಣಿಮಾ ಎಸ್ಟೇಟ್

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -4

ಪೂಣಚ್ಚನವರಿಗೆ ತಮ್ಮ ಮಕ್ಕಳು ಯಾರಾದರೂ ಸಕಲೇಶಪುರದ ತೋಟದಲ್ಲಿ ನೆಲೆಸಲಿ ಎಂದು ಆಸೆಯಿತ್ತು. ಗಂಡು ಮಕ್ಕಳು ಹೇಗೂ ಕೊಡಗಿನಲ್ಲಿಯೇ ನೆಲೆ ನಿಂತರು. ಹಿರಿಯ ಮಗಳು ವಿಜಯಾ ಮತ್ತು ಅಳಿಯ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ ಅವರಿಗೆ ಕೊಡಗಿನಲ್ಲಿ ಪಿತ್ರಾರ್ಜಿತ ತೋಟವಿತ್ತು. ಆದ್ದರಿಂದ ಕಿರಿಯ ಮಗಳು ಕಾವೇರಿ ನಂಬೀಶನ್ ಇಲ್ಲಿ ಆಸ್ಪತ್ರೆಯೊಂದನ್ನು ಸ್ಥಾಪಿಸಲು ಪ್ರಯತ್ನಿಸಿ, ಅವರು ಮೊದಲು ಯೋಚಿಸಿದಂತೆ ಸ್ಥಳ ದೊರೆಯದೆ ಅವರೂ ಕೊಡಗಿನಲ್ಲಿಯೇ ಆಸ್ಪತ್ರೆ ಪ್ರಾರಂಭಿಸಿದ್ದರಿಂದ ಪೂಣಚ್ಚನವರು ಇಲ್ಲಿ ತೋಟವನ್ನು ಇಟ್ಟುಕೊಂಡು ಮಾಡುವುದೇನು ಎಂಬ ತೀರ್ಮಾನಕ್ಕೆ ಬಂದರು. ಆ ವೇಳೆಯಲ್ಲಿ ರವೀಂದ್ರನಾಥರು ಕೂಡಾ ಗಣಪಯ್ಯನವರ ಕಾಲದಿಂದ ಹಾರ್ಲೆ ಮ್ಯಾನೇಜ್ ಮೆಂಟಿನಲ್ಲಿದ್ದ ಕೆಲವು ತೋಟಗಳನ್ನು ಬಿಟ್ಟುಕೊಟ್ಟಿದ್ದರು.

ಪೂರ್ಣಿಮಾ ಎಸ್ಟೇಟ್

ಈ ಎಲ್ಲ ಕಾರಣಗಳಿಂದ ಪೂಣಚ್ಚನವರೂ ತಮ್ಮ ಪೂರ್ಣಿಮಾ ಎಸ್ಟೇಟನ್ನು ಮಾರಾಟ ಮಾಡಲು  ನಿರ್ಧರಿಸಿದರು. 1989ರಲ್ಲಿ ಪೂರ್ಣಿಮಾ ಎಸ್ಟೇಟ್ ಪಕ್ಕದಲ್ಲಿಯೇ ಇದ್ದ ರಕ್ಷಿದಿಯ ಜಾನ್ ಲೋಬೋರವರ ಕುಟುಂಬವರ್ಗದವರಿಗೆ ಮಾರಾಟ ಮಾಡಿದರು. ಈಗ ಆ ತೋಟ ಅವರಲ್ಲಿಯೇ ಇದೆ.

ತೋಟ ಮಾರುವ ನಿರ್ಧಾರವೇನು ಪೂಣಚ್ಚನವರಿಗೆ ಸಂತಸದ ವಿಚಾರವಾಗಿರಲಿಲ್ಲ. ಅವರಿಗೆ ಗಣಪಯ್ಯನವರ ಸ್ನೇಹದಿಂದಾಗಿ ಸಕಲೇಶಪುರವೂ ತಮ್ಮ ಕೊಡಗಿನಷ್ಟೇ ಪ್ರಿಯವಾದ ಸ್ಥಳವಾಗಿತ್ತು. ತೋಟ ಮಾರಾಟವಾಗಿ ಹಸ್ತಾಂತರಿಸುವ ದಿನ ತೋಟದ ಎಲ್ಲ ಕಾರ್ಮಿಕರಿಗೂ ಒಂದಷ್ಟು ಕೊಡುಗೆ ಮತ್ತು ನೆನಪಿನ ಕಾಣಿಕೆಗಳನ್ನು ಕೊಟ್ಟರು. ಮತ್ತು ಕಾನೂನಾತ್ಮಕವಾಗಿ ಅವರು ಕೊಡಬೇಕಿದ್ದ ಎಲ್ಲ ಹಣವನ್ನೂ ಕೆಲಸಗಾರರಿಗೆ ನೀಡಿದರು. ಕೊನೆಯಲ್ಲಿ ನಿಮ್ಮೆಲ್ಲರಿಗೆ ನಾನು ಕೃತಜ್ಞ ಎಂದು ಹೇಳಿ ದುಖಃ ತಡೆಯಲಾಗದೆ ಕಣ್ಣೀರುಗರೆದರು. ಅಷ್ಟು ವರ್ಷಗಳ ಕಾಲ ಒಂದು ಕುಟುಂಬದಂತೆ ಬದುಕಿದ ಎಲ್ಲ ಕೆಲಸಗಾರರಿಗೂ ಇದು ಬಹಳ ನೋವಿನ ದಿನವಾಗಿತ್ತು.

ಪೂರ್ಣಿಮಾ ಎಸ್ಟೇಟ್ ಮಾರಾಟಮಾಡಿದ ಹಣದಲ್ಲಿ ಪೂಣಚ್ಚನವರು ಸಕಲೇಶಪುರದ ರೋಟರಿ ಶಾಲೆಗೆ ಐದು ಲಕ್ಷ ರೂಪಾಯಿಗಳ ಕೊಡುಗೆಯನ್ನು ನೀಡಿದರು. ಆ ಹಣವನ್ನು ಬಳಸಿಕೊಂಡು ಕಟ್ಟಿದ ಕಟ್ಟಡವನ್ನು ಸಿ.ಎಂ.ಪೂಣಚ್ಚ ಬ್ಲಾಕ್ ಎಂದು ಕರೆಯಲಾಗಿದೆ.

ಪೂಣಚ್ಚ ಬ್ಲಾಕ್

ನಾನೂ ಸೇರಿದಂತೆ ಎಲ್ಲ ಕೆಲಸಗಾರರಿಗೆ ಮುಂದೇನು ಎಂಬ ಪ್ರಶ್ನೆಯಿತ್ತು. ಅಪ್ಪ ಕೆಲಸದಿಂದ ನಿವೃತ್ತರಾಗಿದ್ದರು. ಮನೆಯ ಎಲ್ಲ ಜವಾಬ್ದಾರಿ ನನ್ನ ಮೇಲಿತ್ತು. ನಾನು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ನಿರ್ಧಾರದಿಂದ ಸ್ವಲ್ಪ ದೂರದಲ್ಲೇ ಮನೆಯೊಂದನ್ನು ಕಟ್ಟಿಕೊಳ್ಳುತ್ತಿದ್ದೆ. ಅದನ್ನು ಅವಸರದಲ್ಲಿ ಒಂದಿಷ್ಟು ವಾಸಕ್ಕೆ ಆಗುವಷ್ಟು ವ್ಯವಸ್ಥೆ ಮಾಡಿಕೊಂಡೆ. ನಾನು ಇಷ್ಟಪಟ್ಟಿದ್ದರೆ ಪೂರ್ಣಿಮಾ ಎಸ್ಟೇಟಿನಲ್ಲಿಯೇ ಕೆಲಸದಲ್ಲಿ ಮುಂದುವರೆಯಬಹುದಿತ್ತು. ಹೊಸ ಮಾಲಿಕರು ಅದರ ಪ್ರಸ್ತಾಪವನ್ನೂ ಮಾಡಿದ್ದರು. ಆದರೆ ನನಗೆ ಸ್ವತಂತ್ರವಾಗಿ ಬದುಕಲು ಇದೊಂದು ಅವಕಾಶ ಎಂದುಕೊಂಡು ನಾನು ಅವರ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ.

ಕಾರ್ಮಿಕರಲ್ಲಿ ಹಲವರಿಗೆ ಈ ಹಿಂದೆಯೇ ನಾವು ಅಲ್ಲಲ್ಲಿ ಸ್ವಂತ ಮನೆ ಮಾಡಿಸಿಕೊಟ್ಟಿದ್ದೆವು. ಅವರು ಅಲ್ಲಿ ವಾಸಕ್ಕೆ ಹೋಗಿ ಅವರ ಇಷ್ಟಬಂದಲ್ಲಿಗೆ ಕೆಲಸಕ್ಕೆ ಹೋಗಬಹುದಿತ್ತು. ಆದರೆ ಆ ರೀತಿ ಸ್ವಂತ ಮನೆ ಇಲ್ಲದವರೂ ಕೆಲವರಿದ್ದರು. ಅವರು ಏನು ಮಾಡುವುದೆಂದು ಇಕ್ಕಟ್ಟಿನಲ್ಲಿದ್ದರು.

ನಾನು ಬೇರೆ ಹಲವು ಯೋಜನೆಗಳಲ್ಲಿ ಇದ್ದೆ. ಹಾಸನದಲ್ಲಿ ಹೊಸ ಪತ್ರಿಕೆಯೊಂದು ಪ್ರಾರಂಭವಾಗುವುದರಲ್ಲಿತ್ತು. ನನಗೆ ಅಲ್ಲಿ ಕೆಲಸಮಾಡಲು ಆಹ್ವಾನವಿತ್ತು. ಆದರೆ ಅದು ಕೂಡಾ ನಿಗದಿತ ಸಮಯಕ್ಕೆ ಪ್ರಾರಂಭವಾಗದೆ ಮುಂದೆ ಹೋಗುತ್ತ ಇತ್ತು. ಹೆಚ್ಚು ಸಮಯ ಕೆಲಸವಿಲ್ಲದೆ ಕೂರಲು ನನಗೆ ಮನೆಯ ಪರಿಸ್ಥಿತಿ ಕಷ್ಟವಿತ್ತು. ಅಷ್ಟರಲ್ಲಿ ಒಂದು ದಿನ ರವೀಂದ್ರನಾಥರು “ದೇವಾಲಕೆರೆಯಲ್ಲಿನ ಆಶೀರ್ವಾದ್ ಎಸ್ಟೇಟ್ ಅನ್ನು ನೋಡಿಕೊ, ಅಲ್ಲಿ ಸರಿಯಾಗಿ ಯಾವುದೂ ನಡೆಯುತ್ತ ಇಲ್ಲ, ಅಲ್ಲಿ ಹಲವು ತೊಂದರೆಗಳವೆ, ನಿನಗೆ ಅದು ಹೇಗೂ ಸಾಕಷ್ಟು ಗೆಳೆಯರಿರುವ ಊರು” ಎಂದರು.

ಸಕಲೇಶಪುರ ರೋಟರಿ ಶಾಲೆ 98 ರಲ್ಲಿ

ನಾನು ಸದ್ಯಕ್ಕೆ ಒಂದು ಉದ್ಯೋಗವಾಯಿತೆಂದು ಒಪ್ಪಿಕೊಂಡೆ. ನಮ್ಮ ಪುಟ್ಟ ಮನೆಗೆ ವಾಸಕ್ಕೆ ಬಂದೆವು. ಇಲ್ಲಿ ವಿದ್ಯುತ್, ನೀರು ಇತ್ಯಾದಿ ಯಾವ ವ್ಯವಸ್ಥೆಯೂ ಇರಲಿಲ್ಲ. ಅಂತೂ ಇರಲೊಂದು ಸೂರಿತ್ತು. ಫರ್ಲಾಂಗ್ ದೂರದಲ್ಲೊಂದು ಬೋರ್ ವೆಲ್ ಇತ್ತು.

ನಾನು ದೇವಾಲಕೆರೆ ತೋಟದ ಉಸ್ತುವಾರಿ ವಹಿಸಿಕೊಂಡದ್ದು ತಿಳಿದ ಕೂಡಲೇ ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸಮಾಡುತ್ತಿದ್ದ ಸ್ವಂತ ಮನೆಯಿಲ್ಲದ ಹಲವರು ತಾವೂ ದೇವಾಲಕೆರೆಗೆ ಬರುತ್ತೇವೆಂದು ಅಲ್ಲಿಗೆ ಬಂದರು. ಇದರಿಂದಾಗಿ ನನಗೆ ಅಲ್ಲಿ ಕೂಡಾ ಒಂದು ಒಳ್ಳೆಯ ಕೆಲಸಗಾರರ ತಂಡವನ್ನು ಕಟ್ಟಲು ಸಾಧ್ಯವಾಯಿತು.

ಅಲ್ಲಿ ಜಮೀನಿನ ದಾಖಲೆಗಳನ್ನು ಸರಿಪಡಿಸುವುದರಿಂದ ಹಿಡಿದು, ಕಳ್ಳತನ ಇತ್ಯಾದಿ ಹಲವಾರು ನಾನಾ ರೀತಿಯ ಸಮಸ್ಯೆಗಳಿದ್ದವು. ಎಲ್ಲವನ್ನೂ ಒಂದೊಂದಾಗಿ ಬಗೆಹರಿಸಿಕೊಳ್ಳುತ್ತ ತೋಟವನ್ನು ಅಭಿವೃದ್ಧಿ ಮಾಡಬೇಕಿತ್ತು. ಮುಂದಿನ ಆರು ವರ್ಷಗಳಲ್ಲಿ ಅದು ಒಂದು ಅತ್ಯುತ್ತಮ ತೋಟವಾಯಿತು. ಇದಕ್ಕೆ ನನ್ನೊಂದಿಗಿದ್ದ ಮೇಸ್ತ್ರಿ, ಕೆಲಸಗಾರರು ಮತ್ತು ಅಲ್ಲಿ ಸುತ್ತ ಇದ್ದಂತಹ ನನ್ನ ಶಾಲಾ ಸಹಪಾಠಿ ಗೆಳೆಯರ ಬೆಂಬಲ ಕಾರಣವಾಯಿತು. ಇದೆಲ್ಲದರ ಜೊತೆಯಲ್ಲಿ ಗಣಪಯ್ಯನವರ ಕಾಲದಲ್ಲಿ ಜನತಾ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್ ಪಕ್ಷ ಸೇರಿದ್ದ ಡಿ.ಎಸ್. ಲೋಕೇಶ ಗೌಡರ ಸಹಕಾರ ಮುಖ್ಯವಾಗಿತ್ತು. ರಾಜಕಾರಣದಲ್ಲಿ ಸೋತಿದ್ದರೂ ಲೋಕೇಶಗೌಡರು ಸಾಮಾಜಿಕ ಕಳಕಳಿಯನ್ನು ಕಳೆದುಕೊಂಡಿರಲಿಲ್ಲ. ಅನುಭವದ ಜೊತೆಯಲ್ಲಿ ಸಾಹಿತ್ಯ, ರಾಜಕಾರಣ ಎಂದು ತುಂಬ ಓದಿಕೊಂಡಿದ್ದ ಅವರು ಹಲವಾರು ಯುವಕರಿಗೆ ಮಾರ್ಗದರ್ಶಕರಾಗಿದ್ದರು. ದೇವಾಲಕೆರೆಯ ಬಸ್ ಸ್ಟಾಪಿನ ಪಕ್ಕದ ಭಟ್ಟರ ಹೋಟೆಲ್ ಅಡ್ಡಾದಲ್ಲಿ ನಾವು ಪದೇ ಪದೇ ಭೇಟಿಯಾಗುತ್ತಿದ್ದೆವು. ಪ್ರತಿ ಬಾರಿಯೂ ಅವರಲ್ಲಿ ಹೊಸತೊಂದು ವಿಷಯವಿರುತ್ತಿತ್ತು.

ನಮ್ಮ ಮನೆಯಿಂದ ದೇವಾಲಕೆರೆಯ ತೋಟಕ್ಕೆ ಸುಮಾರು ಇಪ್ಪತ್ತೈದು ಕಿ.ಮಿ.ದೂರವಿತ್ತು. ಅಲ್ಲದೆ ನಾಲ್ಕು ಕಿ.ಮಿ. ಕಚ್ಚಾ ರಸ್ತೆಯಲ್ಲಿ ಕಡಿದಾದ ಗುಡ್ಡ ಹತ್ತಿ ಇಳಿದು ಸಾಗಬೇಕಿತ್ತು. ಆದ್ದರಿಂದ ಪ್ರತಿದಿನ ಸೈಕಲಿನಲ್ಲಿ ಹೋಗಲು ಸಾಧ್ಯವಿರಲಿಲ್ಲ. ಬ್ಯಾಂಕಿನಲ್ಲಿ ಸಾಲ ಪಡೆದು ಬೈಕೊಂದನ್ನು ಕೊಂಡುಕೊಂಡೆ.

ಸೈಕಲ್ಲಿನಲ್ಲಿ ಕುಳಿತು ಹೆಲಿಕಾಪ್ಟರ್ ಸವಾರಿ ಮಾಡುತ್ತಿದ್ದ ನನಗೀಗ ಸೂಪರ್ ಸಾನಿಕ್ ಜೆಟ್ ಸಿಕ್ಕಿದಂತಾಗಿತ್ತು. ಪೂರ್ಣಿಮಾ ಎಸ್ಟೇಟಿನ ಮಾರಾಟದಿಂದಾಗಿ ನಮ್ಮ ನಾಟಕ ತಂಡ ಹರಿದು ಹಂಚಿಹೋಗಿತ್ತು. ಅದನ್ನು ಮತ್ತೆ ಕಟ್ಟಬೇಕಿತ್ತು. ಜೊತೆಯಲ್ಲಿ ತೋಟದ ಕೆಲಸ, ಇತರ ಸಂಘಟನಾತ್ಮಕ ಕಾರ್ಯಗಳು, ಸ್ಥಳೀಯ ರಾಜಕಾರಣ, ಹೋರಾಟಗಳು, ಸಾಕ್ಷರತಾ ಆಂದೋಲನ, ಇತರ ಸುತ್ತಾಟಗಳು ಎಲ್ಲದಕ್ಕೂ ಅನುಕೂಲವಾಯಿತು.

ಪೂರ್ಣಿಮಾ ಎಸ್ಟೇಟ್ ಮಾರಾಟವಾಗಿ ಒಂದು ವರ್ಷವಾಗುವಷ್ಟರಲ್ಲೇ ಅಂದರೆ 1990ರಲ್ಲಿ ಪೂಣಚ್ಚನವರು ತೀರಿಕೊಂಡರು. ಅಲ್ಲಿಗೆ ಕೊಡಗು ಸಕಲೇಶಪುರಗಳ ಕಾಫಿ ವಲಯದ ಇನ್ನೊಂದು ಸಾಂಸ್ಕೃತಿಕ ಕೊಂಡಿಯೂ ಕಳಚಿದಂತಾಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ನಮ್ಮ ರಾತ್ರಿ ಶಾಲೆ ಮತ್ತು ನಾಟಕ ತಂಡದ ಬೆಳವಣಿಗೆ: ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...