ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ (83) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಮನೆಯಲ್ಲಿ ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದ್ದ ಅವರನ್ನು ಸೀತಾ ಸರ್ಕಲ್ ಬಳಿಯ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವ ಹೆಚ್ಚಾಗಿತ್ತು. ವಯಸಸಿನ ಕಾರಣಕ್ಕೆ ಸರ್ಜರಿ ಮಾಡಲು ಆಗಿರಲಿಲ್ಲ. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಶಿವರಾಂ ಅವರ ಕಾರು ಅಪಘಾತಕ್ಕೆ ಒಳಗಾಗಿತ್ತು. ಬಳಿಕ ಅವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಇದಾದ ಬಳಿಕ ಮತ್ತೆ ಮನೆಯಲ್ಲಿ ಅಯ್ಯಪ್ಪ ದೇವರ ಪೂಜೆ ಮಾಡುವಾಗ ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಅವರನ್ನು ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳ ಕಾಲ ಪೋಷಕನಟನಾಗಿ, ಹಾಸ್ಯನಟನಾಗಿ ಸಿನಿಮಾಸಕ್ತರನ್ನು ರಂಜಿಸಿರುವ ಎಸ್. ಶಿವರಾಂ ಅವರು 1938ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಹಳ್ಳಿಯಲ್ಲಿ ಜನಿಸಿದ್ದರು. ಕೇವಲ ನಟನೆ ಜೊತೆಗೆ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.
ತಮ್ಮ ಸಹೋದರ ಎಸ್.ರಾಮನಾಥನ್‍ರವರೊಂದಿಗೆ ಸೇರಿ ರಾಶಿ ಬ್ರದರ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ‘ಗೆಜ್ಜೆಪೂಜೆ’, ‘ಉಪಾಸನೆ’, ‘ನಾನೊಬ್ಬ ಕಳ್ಳ’, ‘ಡ್ರೈವರ್ ಹನುಮಂತು, ‘ಬಹಳ ಚೆನ್ನಾಗಿದೆ’ ಸೇರಿ ಹಲವಾರು ಚಿತ್ರಗಳನ್ನು ನಿರ್ಮಿಸಿದರು.
ಇದನ್ನೂ ಓದಿ: ಅಪ್ಪು ನಿಧನ: ಹೃದಯಾಘಾತದ ಬಗ್ಗೆ ಪ್ಯಾನಿಕ್ ಆಗುವ ಅಗತ್ಯವಿಲ್ಲ- ವೈದ್ಯರು
ಚಂದನವನದಲ್ಲಿ ನಟನಾಗಿ ಹಲವಾರು ದಿಗ್ಗಜರೊಂದಿಗೆ ಕೆಲಸ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಪುಟ್ಟಣ್ಣ ಕಣಗಾಲ್ ಅವರ ಎಲ್ಲಾ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. 1958-1965 ರವರೆಗೆ ಶಿವರಾಂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನಗಳ ಪ್ರಭಾವಕ್ಕೆ ಒಳಗಾಗಿ, ಚಿತ್ರ ತಯಾರಿಕೆ ಮತ್ತು ನಟನೆಯತ್ತ ಆಸಕ್ತಿ ತಳೆದು ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ನಟ ಶಿವರಾಂ ಅವರು 1965ರಲ್ಲಿ ಕು.ರಾ. ಸೀತಾರಾಮಶಾಸ್ತ್ರಿ ಅವರ ನಿರ್ದೇಶನದ, ಕಲ್ಯಾಣ್ ಕುಮಾರ್ ನಟನೆಯ ಬೆರೆತ ಜೀವ ಚಿತ್ರದಲ್ಲಿ ನಟನಾಗಿ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರು.
‘ಶರಪಂಜರ’, ‘ನಾಗರಹಾವು’ , ‘ಶುಭಮಂಗಳ’, ‘ಚಲಿಸುವ ಮೋಡಗಳು’ , ‘ಶ್ರಾವಣ ಬಂತು’ , ‘ಹಾಲು ಜೇನು’, ‘ಹೊಂಬಿಸಿಲು’, ‘ಹೊಸ ಬೆಳಕು’, ‘ಗುರು ಶಿಷ್ಯರು’ , ‘ಸಿಂಹದಮರಿ ಸೈನ್ಯ’ , ‘ಮಕ್ಕಳ ಸೈನ್ಯ’, ‘ಆಪ್ತಮಿತ್ರ’, ‘ಹುಚ್ಚ’ ಮುಂತಾದ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.


