Homeಸಾಹಿತ್ಯ-ಸಂಸ್ಕೃತಿಕಥೆಪಿಸುಮಾತಿನ ರಾತ್ರಿಗಳು; ಮಾಂಟೋ ಜನ್ಮದಿನಕ್ಕೊಂದು ಕತೆ

ಪಿಸುಮಾತಿನ ರಾತ್ರಿಗಳು; ಮಾಂಟೋ ಜನ್ಮದಿನಕ್ಕೊಂದು ಕತೆ

- Advertisement -
- Advertisement -

ಭಾರತದ ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ರವರ ಜನ್ಮದಿನ ಇಂದು. ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಾಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಕೇವಲ 43 ವರ್ಷ ಬದುಕಿದ್ದ ಮಾಂಟೋ ಸೃಷ್ಟಿಸಿದ ಸಾಹಿತ್ಯ ಮರೆಯಲಾಗದು. ಅವರ ಜನ್ಮದಿನದಂದು ಒಂದು ಕತೆ ನಿಮಗಾಗಿ.

ಮೂಲ : ಹಸನ್ ಸಾದತ್ ಮಾಂಟೋ
ಅನುವಾದ : ಪುನೀತ್ ಅಪ್ಪು

ಪಿಸುಮಾತಿನ ರಾತ್ರಿಗಳು

‘ನೋಡಿ, ದಯವಿಟ್ಟು ಕೆಣಕ್ಬೇಡಿ ನನ್ನನ್ನ…. ಅಯ್ಯೋ ದೇವ್ರೇ… ಸ್ವಲ್ಪ ದೂರ ಹೋಗಿಂದ್ರೇ….’

‘ಬರ್ತಾ ಬರ್ತಾ ನಿನ್ನ್ ಮನಸ್ಸು ಎಂತಹಾ ಕಲ್ಲುಮನಸ್ಸಾಗಿಬಿಟ್ಟಿದೆ ನೋಡು’

‘ಹೌದೌದು ಅದು ಸರೀನೇ… ನಾನು ಕಲ್ಲಾಗಿ ಬಿಟ್ಟಿದೀನಿ’

‘ನೋಡು… ಅದು ಉತ್ತರವಲ್ಲ’

‘ಅದೇ ನನ್ನ ಉತ್ತರ, ಅದನ್ನೇ ನಿಮಗೆ ಕೊಡ್ತಾ ಬಂದಿರೋದು ನಾನು’

‘ಇವತ್ತು ಈ ಉತ್ತರಗಳನ್ನೆಲ್ಲಾ ಕೇಳ್ಕೊಂಡು ಇರಲ್ಲ ನಾನು’

‘ಅಯ್ಯೋ… ಸುಮ್ನೆ ನನಗೆ ಕಿರುಕುಳ ಕೊಡ್ಬೇಡಿ. ದೇವ್ರೇ… ನೋಡಿ ಹೀಗೆ ನೀವು ಕೆಣಕ್ತಾ ಇದ್ರೆ ನಾನು ಜೋರಾಗಿ ಕಿರುಚಿ ಬಿಡುವೆ’

‘ನೋಡು ಸುಮ್ನೆ ನಿನ್ನ ಗಂಟಲು ಏರಿಸಿ ಮಕ್ಕಳನ್ನು ಎಬ್ಬಿಸಿಬಿಡ್ಬೇಡ’

‘ ನಿಮ್ಗೆ ಮಕ್ಕಳ ಗುಂಪು ಗುಂಪೇ ನೆರಿಬೇಕು ತಾನೇ ಮನೇಲಿ’

‘ಹಿಂಗೇ ನೀನು ನನ್ನ ಗೋಳೊಯ್ಸಿಕೊಂಡಿರಾದು’

‘ಹಾಗಿದ್ರೆ ನೀವೇ ಸ್ವಲ್ಪ ಯೋಚನೆ ಮಾಡಬೇಕಿತ್ತು, ನನಗಂತೂ ಸಾಕಾಗಿ ಹೋಯ್ತು’

‘ಸತ್ಯ…ಅದರೆ..’

‘ಅದೂ ಇದೂ ಎಲ್ಲಾ ಬೇಡ ಈಗ’

‘ನಿಜ ಹೇಳ್ಬೇಕಂದ್ರೆ ನಿನಗೆ ನನ್ ಮೇಲೆ ಕಾಳಜೀನೇ ಇಲ್ಲ… ವಿಷಯ ಏನಂದ್ರೇ ನೀನು ಇತ್ತೀಚೆಗೆ ನನ್ನನ್ನ ಪ್ರೀತಿಸ್ತಾನೇ ಇಲ್ಲ…. ಎಂಟು ವರ್ಷಗಳ ಹಿಂದೆ ಇದ್ದ ಹಾಗೆ ಇಲ್ಲ… ಒಬ್ಬ ಮನುಷ್ಯ ಅಂತಾನೂ ನಿನಗೆ ನನ್ ಮೇಲೆ ಆಸಕ್ತಿ ಇಲ್ಲ’

‘ಹೌದು ಸ್ವಾಮಿ’

‘ಮದುವೆ ಆದ ದಿನಗಳಲ್ಲಿ ನೋಡ್ಬೇಕಿತ್ತು.. ಎಂತಹಾ ಕಾಳಜಿ ವಹಿಸ್ತಾ ಇದ್ದೆ ನೀನು…ಹಾಲು ಸಕ್ಕರೆ ತರಾ ಇದ್ವಿ, ಆದ್ರೆ ಈಗ! ಏನೇನ್ ನೆಪಾ ಹೇಳ್ತೀಯಾ ನೀನು, ಕೆಲವೊಮ್ಮೆ ನಿದ್ದೆ ಬರುತ್ತೆ ನಿಂಗೆ, ಅದಿಲ್ಲಾಂದ್ರೆ ಸುಸ್ತಾಗಿರುತ್ತೆ, ಇನ್ ಕೆಲವೊಮ್ಮೆ ಎರಡೂ ಕಿವಿಗಳನ್ನೂ ಮುಚ್ಕೊಂಡು ಏನೂ ಕೇಳಿಸದವಳ ತರಾ ಇದ್ದ್ ಬಿಡ್ತೀಯಾ’

‘ನಾನು ಏನೂ ಕೇಳಕೂಡ್ದು ಅಂತಾನೇ ಅಂದ್ಕೋಂಡಿದೀನಿ’

‘ನಿನಗೆ ದಯೆ ದಾಕ್ಷಿಣ್ಯ ತೋರಿಸುವಂತ ತಾಕತ್ತೇ ಇಲ್ಲ ಬಿಡು’

‘ಆಯ್ತು.. ದಯವಿಟ್ಟು ಈಗ ಮಲಗೋಕೆ ಬಿಡಿ ನನ್ನ’

‘ಆಯ್ತು ಹೋಗ್ ಮಲಕ್ಕೋ ಹಾಗಾದ್ರೆ… ನಾನು ಮಾತ್ರ ಸುಮ್ನೇ ರಾತ್ರಿ ಇಡೀ ಹಾಸಿಗೆ ಮೇಲೆ ಹೊರಳಾಡ್ಕೊಂಡಿರ್ತೀನಿ… ಆದ್ರೇ ಯಾರಿಗೇನು!’

‘ದಯವಿಟ್ಟು ನಿಮ್ಮ ಗಂಟಲು ಸ್ವಲ್ಪ ಕಡಿಮೆ ಮಾಡಿ.. ನೆರೆಹೊರೆಯವರ ಬಗ್ಗೆಯೂ ಸ್ವಲ್ಪ ಯೋಚಿಸಿ’

‘ಹಾಳಾಗೋಗ್ಲಿ ನನಗೇನು’

‘ಅಬ್ಬಾ ಅಸಾಧ್ಯ ಕಣ್ರಿ ನೀವು… ಇದನ್ನೆಲ್ಲಾ ಕೇಳಿಸ್ಕೊಂಡ್ರೆ ಏನಂದ್ಕೊಂಡಾರೋ ಅವ್ರೆಲ್ಲಾ’

‘ ಇನ್ನೇನು? ಎಂತಹಾ ಸೊಕ್ಕಿನ ಹೆಂಡ್ತಿ ನೀನು ಅಂತಾರೆ’

‘ ಓಹೋ!’

‘ನೋಡು, ಈಗ ಸ್ವರ ಏರಿಸಿದ್ದು ಯಾರು ಅಂತಾ… ಸಣ್ಣವಳು ಎದ್ದೇ ಬಿಟ್ಳು’

‘ ಅಯ್ಯೋ ಅಯ್ಯೋ ದೇವ್ರೇ… ಮಲಗು ಪುಟ್ಟಾ…ಮಲಗು ಚಿನ್ನಾ… ಹ್ಞೂಂ ಹ್ಞೂಂ… ಜೋ ಜೋಜೋ… ದೇವ್ರೇ ನನ್ ಕರ್ಮ ಕರ್ಮ..’

‘ಓ ದೇವರೇ ಒಂದು ಮಗುವನ್ನು ಹೇಗೆ ಮಲಗಿಸ್ಬೇಕು ಅಂತಾನೂ ಗೊತ್ತಿಲ್ಲವಲ್ಲ ನಿನಗೆ’

‘ಆದ್ರೆ ನಿಮಗೆ ಗೊತ್ತಲ್ಲ… ಅದನ್ನೇ ತಾನೇ ದಿನವಿಡೀ ಮನೇಲಿ ನೀವು ಮಾಡ್ತಿರೋದು’

‘ಇಡೀ ದಿನ ಮನೇಲೇ ಇರು ಅಂದ್ರೆ ಹೇಗ್ ಸಾಧ್ಯ…. ಆದ್ರೂ ಸಾಧ್ಯವಾದಾಗಲೆಲ್ಲಾ ಮನೆಗೆ ಬಂದು ನಿನಗೆ ಸಹಾಯ ಮಾಡೋದಿಲ್ವೆ ನಾನು?’

‘ನನಗೆ ಅದರ ಅಪೇಕ್ಷೇನೂ ಇಲ್ಲ… ದಯವಿಟ್ಟು ಮನೆಯಿಂದ ಹೊರಗಡೇನೇ ಇದ್ದು ನಿಮ್ಮ ಆಪ್ತ ಮಿತ್ರರೊಂದಿಗೆ ಸಂತೋಷದಿಂದ ಇರಿ’

‘ ಸಂತೋಷದಿಂದ?’

‘ನಾನು ಜಾಸ್ತಿ ಮಾತಾಡೋಕೆ ಹೋಗಲ್ಲ’

‘ ಸರಿ ಹಾಗಾದ್ರೆ… ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಡು’

‘ದೇವ್ರಾಣೆಗೂ ನನ್ನನ್ನು ಕೆಣಕ್ಬೇಡಿ’

‘ನಾನೆಲ್ಲಿಗೆ ಹೋಗ್ಲಿ’

‘ನಿಮ್ಗೆ ಎಲ್ಲಿ ಇಷ್ಟ ಆಗುತ್ತೋ ಅಲ್ಲಿಗೆ ಹೋಗಿ’

‘ನಿಜವಾಗಿಯೂ’

‘ನಿಮಗೆ ಸುಮ್ನಿರೋಕೆ ಆಗೋದೇ ಇಲ್ವಾ’

‘ಇಲ್ಲ… ನಾನು ರಾತ್ರಿಯಿಡೀ ಮಾತಾಡ್ತಾನೇ ಇರ್ತೀನಿ….ನಾನೂ ಮಲಗಲ್ಲ ನಿನ್ನನ್ನೂ ಬಿಡಲ್ಲ’

‘ನಿಜವಾಗ್ಲೂ ಹೇಳ್ತಿದೀನಿ, ನನ್ನನ್ನು ಬೀದಿಪಾಲು ಮಾಡ್ತೀರಾ ನೀವು… ಎಂತಹಾ ಮನುಷ್ಯ ಇದು ದೇವ್ರೆ! ಅರ್ಥ ಮಾಡ್ಕೊಳ್ಳೋದೇ ಇಲ್ಲ….ಯಾವಾಗ ನೋಡಿದ್ರೂ ಯಾವಾಗಾನೂ…’

‘ನೋಡೂ ನೀನೀಗ ಖಂಡಿತಾ ಮಕ್ಕಳನ್ನು ಎಬ್ಬಿಸ್ತೀಯಾ…’

‘ಹಾಗಾದ್ರೆ ಅವುಗಳನ್ನು ನೀವು ಹುಟ್ಲಿಕ್ಕೇ ಬಿಡಬಾರದಿತ್ತು’

‘ಅರೇ ! ಹುಟ್ಟಿಸೋದಿಕ್ಕೆ ನಾನು ಯಾರು….ಅವೆಲ್ಲಾ ದೇವರ ಉಡುಗೊರೆಗಳು… ನಿದ್ದೆ ಮಾಡು ಪುಟ್ಟಾ… ನಿದ್ದೆ ಮಾಡೂ…’

‘ ನೋಡಿ ನೋಡಿ ಎಬ್ಸೇ ಬಿಟ್ರಿ ಮಗೂನಾ’

‘ಸಾರಿ ಸಾರಿ’

‘ಎಲ್ಲಾ ಆದ್ಮೇಲೆ ನೀವು ತಗೊಂಡು ಬರೋದು ಈ ‘ಸಾರಿ’ಯನ್ನೇ..ಆಗದಿಂದ ಗಂಟಲು ಹರಿಯೋ ತರಾ ಬೊಬ್ಬೆ ಹಾಕ್ತಾ ಇದ್ದೀರಾ.. ಅಕ್ಕಪಕ್ಕದಲ್ಲಿ ಯಾರಾದ್ರೂ ಇರ್ತಾರೇ ಅನ್ನೋ ಪರಿವೇ ಇಲ್ಲದಿರೋರ ತರಾ… ಯಾರಾದ್ರೂ ಅಂದಾರು ಎಂಬ ನಾಚಿಕೇನೂ ಇಲ್ಲ, ದೇವ್ರೇ… ನನ್ನನ್ನೇ ಹುಚ್ಚು ಹಿಡಿಸಿ ಮರ ಹತ್ತಿಸ್ಬೇಕು ಅಂತಿದ್ದೀರೇನೋ..’

‘ಮರಕ್ಕೆ ನಿನ್ನ ಶತ್ರುಗಳು ಹತ್ಲಿ’

‘ನೀವೇ ನನ್ನ ಶತ್ರು’

‘ಹಾಗಾದ್ರೆ ದೇವ್ರು ನನ್ನ ಮರಕ್ಕೆ ಹತ್ತಿಸ್ಲಿ’

‘ನೀವು ಅಲ್ಲೇ ಇದ್ದೀರ ಈವಾಗ’

‘ಹೌದು, ಅದು ಸರಿ. ನನಗೆ ಹುಚ್ಚು ಹಿಡಿದಿದೆ, ಆದ್ರೆ ನಾನು ನಿನಗಾಗಿ ಹುಚ್ಚ ಆಗ್ಬಿಟ್ಟಿದ್ದೀನಿ ನೋಡು’

‘ಸಾಕ್ಸಾಕು, ನನ್ನನ್ನ ಉಬ್ಬಿಸೋಕೆ ಬರಬೇಡಿ’

‘ಅದೊಂದು ಮಾತ್ರ ನನಗೆ ಸಾಧ್ಯವಾಗದೆ ಇರೋದು’

‘ನನಗೀಗ ಮಲಗ್ಬೇಕು’

‘ನೀನು ಮಲಗು ಹೋಗು, ನಾನು ಮಾತ್ರ ಈ ಅಧಿಕ ಪ್ರಸಂಗ ಮಾತಾಡ್ತಾನೇ ಇರ್ತೀನಿ’

‘ ಈ ಅಧಿಕಪ್ರಸಂಗ ಅಷ್ಟು ಮುಖ್ಯವಾದದ್ದಾ ಈವಾಗ?’

‘ಹ್ಞೂಂ… ಹೌದು… ಸ್ವಲ್ಪ ಈ ಕಡೆ ತಿರುಗು ನೋಡೋಣ’

‘ನೋಡಿ…ದಯವಿಟ್ಟು ಮುಟ್ಬೇಡಿ ನನ್ನನ್ನು… ಅತ್ತ್ ಬಿಡ್ತೀನಿ ನಾನು’

‘ನೀನ್ಯಾಕಿಷ್ಟೋಂದು ದ್ವೇಷಿಸ್ತೀಯಾ ನನ್ನ? ನೀನೇ ನನ್ನ ಬದುಕು, ನನ್ನ ಸಂಪೂರ್ಣ ಬದುಕು, ಆದ್ರೆ ನಿನಗೇನು ಮೆಟ್ಕೊಂಡಿದೆ ಅಂತಾನೂ ಗೊತ್ತಾಗ್ತಿಲ್ಲ, ನಾನೇನಾದ್ರೂ ತಪ್ಪು ಮಾಡಿದ್ರೆ ಹೇಳು ಏನು ತಪ್ಪು ಮಾಡ್ದೇಂತ’

‘ ನಿಮ್ಮ ಮೂರು ತಪ್ಪುಗಳು ಹಾಸಿಗೆ ಮೇಲೆ ಕೈಕಾಲು ಚಾಚ್ಕೊಂಡು ಪಾಚ್ಕೊಂಡಿವೆ ನೋಡಿ’

‘ಈ ಪಶ್ಚಾತಾಪಗಳು ಯಾವಾಗ ಕೊನೆಯಾಗ್ತಾವೇ ಹೇಳು?’

‘ಮತ್ತು ಈ ನಿಮ್ಮ ಬೇಡಿಕೆಗಳು ಯಾವಾಗ ನಿಲ್ತಾವೇ ಹೇಳಿ?’

‘ಸರಿ, ನೀನು ನನ್ನ ಯಾವ ಮಾತುಗಳನ್ನೂ ಕೇಳಿಸ್ಕೋಳಲ್ಲ ಈ ಕ್ಷಣದಲ್ಲಿ. ಮಲಗು ಹೋಗು, ನಾನು ನೆಲಮಹಡಿಗೆ ಹೋಗ್ತೀನಿ’

‘ಎಲ್ಲಿಗೇ?’

‘ನರಕಕ್ಕೆ’

‘ಇದೆಂತಹಾ ಹುಚ್ಚಾಟ ನಿಮ್ದು!, ನೆಲಮಹಡೀಲಿ ಸೊಳ್ಳೆಗಳು ತುಂಬ್ಕೊಂಡಿವೆ… ಫ್ಯಾನ್ ಬೇರೆ ಇಲ್ಲ… ನೋಡಿ ನಿಜವಾಗಿಯೂ ಹೇಳ್ತಿದೀನಿ ಹುಚ್ಚುಚ್ಚಾಗಿ ಆಡ್ಬೇಡಿ, ನಾನು ಹೋಗೋಕೆ ಬಿಡಲ್ಲ ನಿಮ್ಮನ್ನ…’

‘ಇಲ್ಲಿದ್ದು ನಾನೇನ್ ಮಾಡ್ಲಿ… ಕೆಳಗಡೆ ಸೊಳ್ಳೆಗಳಿರಬಹುದು, ಫ್ಯಾನ್ ಕೂಡಾ ಇಲ್ಲ… ಆದ್ರೂ ತೊಂದರೆ ಇಲ್ಲ, ನಾನು ಕಷ್ಟದ ಬದುಕುಗಳನ್ನು ಕಂಡವನು ಈ ಸೊಳ್ಳೆ ಸೌಲಭ್ಯಗಳಿಗೆಲ್ಲಾ ತಲೆಕೆಡಿಸ್ಕೋ ಜನ ಅಲ್ಲ ನಾನು…’

‘ನೀವು ರಾತ್ರಿ ಪೂರ್ತಿ ಮಲಗಲ್ಲ ಅಲ್ಲಿ’

‘ಹೋಗ್ಲಿ… ಯಾರಿಗೇನು?’

‘ನಾನು ನಿಮ್ಮನ್ನು ಹೋಗೋಕೆ ಬಿಡೂದಿಲ್ಲ…ಹುತ್ತವನ್ನು ಪರ್ವತ ಮಾಡೋದ್ರಲ್ಲಿ ನಿಸ್ಸೀಮರು ನೀವು’

‘ನಾನೇನು ಸಾಯೋದಿಲ್ಲ… ಹೋಗೋಕೆ ಬಿಡು ನನ್ನ’

‘ಅಬ್ಬಾ ನಿಮ್ಮ ಮಾತೇ! ನೋಡಿ ಹೋಗ್ಬೇಡಿ ಅಂತಿದೀನಿ ನಾನು’

‘ನನಗೆ ಇಲ್ಲಿ ಮಲಗೋದಿಕ್ಕೆ ಆಗಲ್ಲ’

‘ತೊಂದ್ರೆ ಇಲ್ಲ’

‘ಎಂತಹಾ ವಿಚಿತ್ರ ತರ್ಕ ನಿನ್ನದು… ನಾನೇನು ನಿನ್ನಲ್ಲಿ ಜಗಳ ಮಾಡ್ಕೊಂಡು ಹೋಗ್ತಾ ಇಲ್ವಲ’

‘ಜಗಳವಾಡೋದಿಕ್ಕೆ ಇನ್ನೇನಾದ್ರೂ ಬಾಕಿ ಉಳಿದಿದ್ರೆ ತಾನೇ! ದೇವ್ರೇ… ಕೆಲವೊಮ್ಮೆ ಮಕ್ಕಳಿಗಿಂತ ಕಡೆ ಮಾಡ್ತೀರಿ ನೀವು… ಅಲ್ಲ ಆ ಸೊಳ್ಳೆಕೊಂಪೇಲಿ ಮಲಗ್ಬೇಕು ಅಂತ ಏನಿವಾಗ ನಿಮ್ಗೆ… ನನ್ನ ಜಾಗದಲ್ಲಿ ಇನ್ಯಾರಾದ್ರೂ ಇದ್ದಿದ್ದ್ರೆ ಸತ್ತೇ ಹೋಗ್ತಿದ್ರೇನೋ…’

‘ಅದೆಲ್ಲಾ ನಿನಗ್ಯಾಕೆ’

‘ಆಯ್ತು ಸರಿ ಸರಿ… ಏನು ಬೇಕು ನಿಮಗೀಗ’

‘ನೋಡು ಈಗ ಸರಿಯಾಗಿ ಮಾತಾಡ್ತಿದಿ ನೀನು’

‘ಅಂತಹಾ ಭ್ರಮೆ ಎಲ್ಲಾ ಇಟ್ಕೋಬೇಡಿ, ಅದೆಲ್ಲಾ ನಡೆಯಲ್ಲ ಇವತ್ತು’

‘ಆಯ್ತು… ಬಾ ಈವಾಗ’

‘ಅಯ್ಯೋ ದೇವ್ರೇ..’

‘ಜರೀ ಹಾಕೋಕೆ ಅಂತ ಕೊಟ್ಟಿರೋ ಸೀರೆ ಬಂತಾ’

‘ಇಲ್ಲ’

‘ಎಂತಾ ಬೇವರ್ಸಿ ಅವ್ನು ದರ್ಜಿ…ಇವತ್ತೇ ತಂದ್ಕೊಡ್ತೀನಿ ಅಂದಿದ್ನಲ’

‘ಬಂದಿದ್ದ… ನಾನೇ ವಾಪಾಸ್ ಕಳಿಸ್ದೆ’

‘ಯಾಕೇ?’

‘ಇನ್ನೂ ಸ್ವಲ್ಪ ಕೆಲಸ ಮಾಡೋದಿತ್ತು’

‘ಓ …ಹಾಗೆ, ಸರಿ ನಾಳೆ ‘ಬರ್ಸಾತ್’ ಚಿತ್ರ ನೋಡ್ಕೊಂಡು ಬರೋಣ, ಗೌರವ ಚೀಟಿ ಸಿಕ್ಕಿದೆ’

‘ಎಷ್ಟು?’

‘ಎರಡೇ ಎರಡು. ಯಾಕೇ?’

‘ದೊಡ್ಡಕ್ಕನೂ ಬರ್ತೀನಿ ಅಂತಿದ್ಳು’

‘ದೊಡ್ಡಕ್ಕ ಇರ್ಲಿ ಅಲ್ಲಿ, ಅವ್ರು ಇನ್ನೊಮ್ಮೆ ನೋಡ್ತಾರೆ ಬಿಡು, ಬಿಡುಗಡೆ ಆದ ಮೊದಲವಾರದಲ್ಲೇ ಗೌರವ ಟಿಕೇಟ್ ಪಡ್ಕೊಳ್ಳೋದೇನು ಸುಲಭ ಅಂದ್ಕೊಂಡಿದೀಯಾ… ಆಹಾ ನಿನ್ನ ಮೈಯ್ಯೆಲ್ಲಾ ಹೇಗೆ ಫಳ ಫಳಾ ಅಂತಿಂದೆ ನೋಡು ಬೆಳದಿಂಗಳಿಗೆ !’

‘ಥೂ… ಈ ಬೆಳದಿಂಗಳೆಂದ್ರೆ ಆಗಲ್ಲ ನನಗೆ… ಬೆಳಕು ಕಣ್ಣಿಗೇ ಕುಕ್ಕುತ್ತವೆ, ನಿದ್ದೇನೇ ಬರಲ್ಲ’

‘ನಿನಗೆ ನಿದ್ದೆ ಮಾತ್ರ ಬೇಕಾಗಿರೋದು’

‘ಮೂರು ಮೂರು ಮಕ್ಕಳನ್ನ ನೋಡ್ಕೊಂಡಿದ್ರೆ ನಿಮ್ಗೂ ಗೊತ್ತಾಗಿರೋದು…ಆಗಿದ್ರೆ ನಾನು ಯಾಕೆ ಮಾತಾಡ್ತಿದಿನೀಂತ ನಿಮ್ಗೆ ಗೊತ್ತಾಗ್ತಿತ್ತು. ಒಬ್ಬಳ ಬಟ್ಟೆ ಬದಲಿಸೋದ್ರೊಳಗೆ ಇನ್ನೊಬ್ಳು ಚೆಡ್ಡಿ ವದ್ದೆ ಮಾಡಿರ್ತಾಳೆ, ಒಬ್ಳನ್ನ ಮಲಗಿಸೋಷ್ಟರಲ್ಲಿ ಇನ್ನೊಬ್ಳು ಏದ್ದಿರ್ತಾಳೆ, ಮೂರನೆಯದು ಅಡುಗೆ ಮನೆಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಮುಕ್ತಿರುತ್ತೆ’

‘ಮನೇಲೆ ಎರಡೆರಡು ಕೆಲಸದವರಿದ್ದಾರಲ್ಲ?’

‘ಕೆಲಸದವರೇನೂ ಮಾಡೋದಿಲ್ಲ’

‘ಬಿಸಾಕು ಅವರನ್ನ ಹಾಗಾದ್ರೆ’

‘ನಿಮ್ಮ ಗಂಟಲು ಸ್ವಲ್ಪ ತಗ್ಗಿಸಿ, ನೋಡಿ ಸಣ್ಣವಳು ಹೊರಳೋಕೆ ಶುರುಹಚ್ಚಿದ್ಳು’

‘ಸಾರಿ, ಸ್ವಲ್ಪ ಬೆನ್ನಿಗೆ ತಟ್ಟು ಅವ್ಳಿಗೆ’

‘ಮಧ್ಯದವಳೂ ಎದ್ಳೂಂತ ಕಾಣ್ಸುತ್ತೆ’

‘ಅವ್ಳನ್ನ ಮಲಗಿಸೋದಕ್ಕೆ ಮುಂಚೆ ಬಚ್ಚಲು ಮನೆಗೆ ಕರಕೊಂಡು ಹೋಗಿದೀಯಾ?’

‘ಹ್ಞೂಂ’

‘ಮತ್ತೆ ಯಾಕೇ?’

‘ಇವತ್ತು ತುಂಬಾ ಸೆಖೆ ಇದೆ…ದಯವಿಟ್ಟು ಸ್ವಲ್ಪ ದೂರ ಮಲಿಕ್ಕೊಳ್ಳಿ ನೀವು’

‘ಹ್ಞೂಂ ಹ್ಞೂಂ’

‘ಅಬ್ಬಾ ಕೊನೆಗೆ ನಾನೇ ಸೋಲೊಪ್ಪಿಕೊಳ್ಬೇಕು’

‘ನಿನ್ನ ಸೋಲು ಅದು ಸೋಲೇ ಅಲ್ಲ ಬಿಡು, ಅದು ಮಹಾವಿಜಯ… ನಾನಿನ್ನ ಎಷ್ಟು ಪ್ರೀತಿಸ್ತೀನಿ ಅಂತ ಆ ದೇವ್ರಿಗೆ ಮಾತ್ರ ಗೊತ್ತು’

‘ನಿಮ್ಮ ಪ್ರೀತಿಗಳೆಲ್ಲಾ ಇಂತಹ ಸಮಯದಲ್ಲೇ ಮೇಲೆ ಬರೋದು’

‘ಮತ್ತೆ ಬೀದೀಲಿ ಹೋಗ್ಬೇಕಾದ್ರೆ ನನ್ನ ಪ್ರೀತಿ ತೋರಿಸ್ಬೇಕೇನು? ನೋಡು… ಇಲ್ಲಿ ಸ್ವಲ್ಪ ನೋಡಿಲ್ಲಿ’

‘ನಿಮ್ಗೆ ಎಲ್ಲಾ ದಾರೀನೂ ಗೊತ್ತು ಅಲ್ವಾ?’

‘ಯಾಕಂದ್ರೆ ನೀನು ನನ್ನ ಚಿನ್ನ ಅಲ್ವಾ?’

‘ಈಗ ಸ್ವಲ್ಪ ಪಕ್ಕಕ್ಕೆ ಸರಿಕೊಳ್ಳಿ’

‘ಯಾಕೇ?’

‘ದೊಡ್ಡವಳು ಎದ್ಬಿಟ್ಟಿದಾಳೆ ಕಾಣಿಸ್ತಾ ಇಲ್ವಾ?’

‘ಓ..’

‘ಕೇಳಿಸ್ಲಿಲ್ವಾ ನಿಮ್ಗೇ..’

‘ಏನೂ..?’

‘ಅವ್ಳಿಗೆ ಹಾಲು ಬೇಕು,’ಡಾಡಾ ದೂದಾ’ ಅಂತ ಕೇಳಿದ್ಳು ಈವಾಗ’

‘ಹ್ಞಾಂ ಕೇಳಿಸ್ತು… ಹಾಲು ಕೊಡು ಅವ್ಳಿಗೆ’

‘ನಾನು ನೆಲಮಹಡೀಲೇ ಬಿಟ್ಟುಬಂದೆ’

‘ಕೆಳಗಡೇನಾ’

‘ಹ್ಞೂಂ, ಅಡುಗೆ ಮನೇಲಿ, ಹೋಗಿ ತನ್ನಿ ಬೇಗ’

‘ಆಯ್ತು ತರ್ತೀನಿ’

‘ಬೇಗ ಹೋಗಿ, ಈಗ ಅಳೋಕೆ ಶುರುಹಚ್ಚಿ ಬಿಡ್ತಾಳೆ’

‘ಹ್ಞಾಂ ಹೊರಟೆ’

‘ಕೇಳಿಂದ್ರೇ…ಬರುತ್ತಾ ಆ ಹಾಲನ್ನ ಸ್ವಲ್ಪ ಕಾಯಿಸ್ಕೊಂಡು ಬನ್ನಿ’

‘ಹ್ಞಾಂ… ಆಯ್ತು.. ಕೇಳಿಸ್ತು’


ಇದನ್ನೂ ಓದಿ: ಮಾಂಟೋ ಚುಟುಕು ಕತೆಗಳು


ವಿಡಿಯೋ ನೋಡಿ: ಸದ್ದು… ಈ ಸುದ್ದಿಗಳೇನಾದವು?-6 ನೇ ಸಂಚಿಕೆ – ಮಾಧ್ಯಮಗಳು ಹೇಳದ ಮಾಹಿತಿಗಳು, ಕೇಳದ ಪ್ರಶ್ನೆಗಳು ಇಲ್ಲಿವೆ..!!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...