“ನಿಮ್ಮ ಕಸ ನಿಮಗೆ” ಅಭಿಯಾನದ ಮೂಲಕ ಪ್ಲಾಸ್ಟಿಕ್‌ ವಿರುದ್ಧ ರಚನಾತ್ಮಕ ಪ್ರತಿಭಟನೆಗಿಳಿದಿರುವ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆ ನಮ್ಮ ಹೆಮ್ಮೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು ” ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳು ಇಡೀ ರಾಜ್ಯದ ಮಕ್ಕಳ ಮುಂದೆ ಒಂದು ಆದರ್ಶದ ದಾರಿಯನ್ನು ತೆರೆದಿಟ್ಟಿದ್ದಾರೆ. ಮಕ್ಕಳು ದನಿ ಎತ್ತಿದರೆ, ಹೆಗ್ಗಡಹಳ್ಳಿಯ ಮಕ್ಕಳ ರೀತಿ ಸಾತ್ವಿಕ ಪ್ರತಿಭಟನೆ ಮಾಡಿದರೆ ಪರಿಣಾಮಕಾರಿಯಾಗಿರುತ್ತದೆ” ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ.

ನಮ್ಮ ನಾಳೆಗಳಿಗೆ ನೀವು ಪ್ಲಾಸ್ಟಿಕ್ ಕೊಳೆಯನ್ನು ನೀಡಬೇಡಿ. ನಾಳೆಗಳು ನಮ್ಮದು. ನಮ್ಮ ನಾಳೆಗೆ ಸುಂದರ ಪರಿಸರವನ್ನು ಉಳಿಸಿಕೊಡಲು ಕೈಜೋಡಿಸಿ. ಅದಕ್ಕಾಗಿ ನಿಮ್ಮ ಕಸವನ್ನು ನೀವು ವಾಪಾಸು ಪಡೆದು ಅದನ್ನು ಪುನರ್ಬಳಕೆ ಮಾಡಿ. ಹೊಸ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಲ್ಲಿಸುವ ಯೋಜನೆಯನ್ನು ರೂಪಿಸಿಕೊಳ್ಳಿ ಎಂದು ದೇಶದಲ್ಲಿ ಮಕ್ಕಳ ತಿಂಡಿಗಳನ್ನು ಉತ್ಪಾದಿಸುವ ಇಪ್ಪತ್ತಕ್ಕೂ ಹೆಚ್ಚು ಪ್ರಖ್ಯಾತ ಕಂಪೆನಿಗಳಿಗೆ ಪತ್ರಕಳಿಸಿ ಆಗ್ರಹಿಸುವ ವಿನೂತನ ಅಭಿಯಾನವನ್ನು ಹೆಗ್ಗಡಹಳ್ಳಿಯ ಮಕ್ಕಳು ಕಳೆದೊಂದು ವರ್ಷದಿಂದ ಆರಂಭಿಸಲಿದ್ದಾರೆ.

ಇದರ ಕುರಿತು ಮಾತನಾಡಿದ ಸಚಿವರು ’ಶಿಕ್ಷಣ ಇಲಾಖೆಯವರು ಈ ಶಾಲೆಯನ್ನು ಗುರುತಿಸಿದ್ದಕ್ಕಿಂತ ಹೆಚ್ಚು ದೊಡ್ಡ ದೊಡ್ಡ ಕಂಪೆನಿಗಳು ಗುರುತಿಸಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ ತಿಳುವಳಿಕೆ ಬುದ್ಧಿ ಹೇಳಿರುವಂತ ಶಾಲೆ ಇದ್ದರೆ ಅದು ಹೆಗ್ಗಡಹಳ್ಳಿಯ ಶಾಲೆ. ಇಡೀ ರಾಜ್ಯದಲ್ಲಿ ಈ ರೀತಿಯ ಮತ್ತೊಂದು ಶಾಲೆ ಎಲ್ಲೂ ಇಲ್ಲ. ಅಂತಹ ಶಾಲೆಗೆ ಎರಡನೇ ಬಾರಿ ನಾನಿಂದು ಬಂದಿದ್ದೇನೆ’ ಎಂದು ಹರ್ಷವ್ಯಕ್ತಪಡಿಸಿದರು.

ಪ್ಲಾಸ್ಟಿಕ್ಕಿನಿಂದಾಗುವ ಅಪಾಯ ಎಲ್ಲರಿಗೂ ತಿಳಿದಿದೆ, ಆದರೆ ಅದನ್ನು ಬಿಡಲಿಕ್ಕೆ ಆಗುತ್ತಿಲ್ಲ. ಬಿಡದೆ ಇದ್ದರೆ ಅದು ಭಸ್ಮಾಸುರ ಆಗುತ್ತದೆ. ನಿಮ್ಮ ಭವಿಷ್ಯಕ್ಕಾಗಿ ನಿಮ್ಮ ಹೋರಾಟ ನಿರಂತರವಾಗಿರಲಿ. ಕೇವಲ ಪ್ಲಾಸ್ಟಿಕ್ ವಿರುದ್ಧವಷ್ಟೇ ಅಲ್ಲ ಸಮಾಜದಲ್ಲಿ ನಡೆಯುವ ಯಾವುದೇ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆಯ ದನಿ ಇರಬೇಕು. ಮುಂದೆ ಪರೀಕ್ಷೆ ಹತ್ತಿರ ಬರುತ್ತಿದೆ ಚನ್ನಾಗಿ ಓದಿ. ಮೊಬೈಲ್ ನಿಂದ ದೂರವಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಕುರಿತ ನಾಗೇಶ್‌ ಹೆಗಡೆಯವರ ಪುಸ್ತಕವನ್ನು ವಿದ್ಯಾರ್ಥಿಗಳು ಸಚಿವರಿಗೆ ಉಡುಗೊರೆಯಾಗಿ ನೀಡಿದರು. ಆಗ ಸಚಿವರು ನಿಮ್ಮಲ್ಲಿ ಯಾರು ಗ್ರೇಟಾ? ಎಂದು ಕೇಳಿದಾಗ, “ನಾವೆಲ್ಲರೂ” ಎಂದು ವಿದ್ಯಾರ್ಥಿಗಳು ಉತ್ತರಿಸಿದರು.

ಇದೇ ಸಂದರ್ಭದಲ್ಲಿ ನಿಮ್ಮ ಕಸ ನಿಮಗೆ ಅಭಿಯಾನದ ಎಂಟನೇ ಕಂತಿನ ಕಸವನ್ನು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮತ್ತು ಶಾಸಕರು ಮತ್ತು ಮಕ್ಕಳು ಪೋಸ್ಟ್ ಮಾಸ್ಟರ್ ಸುರೇಶ್ ಅವರಿಗೆ ಹಸ್ತಾಂತರಿಸಿದರು.

ಶಾಸಕ ಹರ್ಷವರ್ಧನ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿ.ಎನ್. ರಾಜು, ಇಲಾಖೆಯ ಹಿರಿಯ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರಾದ ಎ.ಎಂ. ಲಿಂಗರಾಜು ಮತ್ತು ಮಕ್ಕಳ ಈ ಚಟುವಟಿಕೆಗಳಿಗೆ ಪ್ರೇರಣೆಯಾದ ರಂಗ ಶಿಕ್ಷಕರಾದ ಸಂತೋಷ್‌ ಗುಡ್ಡಿಯಂಗಡಿ ಕೂಡ ಉಪಸ್ಥಿತಿರಿದ್ದರು.


ಇದ್ನನೂ ಓದಿ: ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here