2019 ಮೇ 25 ಮತ್ತು 26ನೇ ತಾರೀಖಿನಂದು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೋಕಿನ, ಐಮಂಗಲ ಹೋಬಳಿಯ ವದ್ದಿಕೆರೆಯಲ್ಲಿ, ಬೆಳಕಿನ ಬೇಸಾಯ ಅಥವಾ ನೈಸರ್ಗಿಕ ಕೃಷಿ ಕಾರ್ಯಾಗಾರ ನಡೆಯಲಿದೆ. ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಪರಿಣಿತಿಯನ್ನು ಪಡೆದಿರುವ ಅವಿನಾಶ್.ಟಿ.ಜಿ.ಎಸ್ ಅದನ್ನು ನಡೆಸಿಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೃಷಿ ಪದ್ಧತಿಯ ಕೆಲವು ಸಂಗತಿಗಳ ಕುರಿತು ಸ್ವತಃ ಅವಿನಾಶ್ ಅವರೇ ಇಲ್ಲಿ ಬರೆದಿದ್ದಾರೆ. ಓದಿ ಮತ್ತು ತರಬೇತಿಯ ಕುರಿತು ಆಸಕ್ತಿ ಇದ್ದವರು, ಲೇಖನದ ಕೊನೆಯಲ್ಲಿರುವ ಫೋನ್ ನಂಬರ್‍ಗಳನ್ನು ಸಂಪರ್ಕಿಸಿ.
ನೈಸರ್ಗಿಕ ಕೃಷಿ ವಿಜ್ಞಾನ, ಬಿದ್ದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ವಿಧಾನ, ಸಸ್ಯಗಳ ಬೆಳವಣಿಗೆಯಲ್ಲಿ ಬೆಳಕಿನ ಮಹತ್ವವನ್ನು ತಿಳಿಸುವುದರ ಜೊತೆಗೆ ಹ್ಯೂಮಸ್ ಮತ್ತು ಸಾವಯವ ಇಂಗಾಲದ ಮಹತ್ವವನ್ನು ತಿಳಿಸುತ್ತಾ ನಮ್ಮ ಭೂಮಿಯಲ್ಲಿ ಸಹಜವಾಗಿ ಹೇಗೆ ಉತ್ಪತ್ತಿ ಮಾಡುವುದು ಎನ್ನುವುದರ ಮಾಹಿತಿಯನ್ನು ತಿಳಿಸಿಕೊಡಲಾಗುವುದು.
ನೈಸರ್ಗಿಕ ಕೃಷಿ ಪದ್ದತಿ ಪ್ರಚಾರಕ್ಕೆ ಬಂದ ಮೇಲೆ ಬಹುತೇಕ ಎಲ್ಲಾ ರೈತರದು ಒಂದೆ ಪ್ರಶ್ನೆ. ಏನೆಂದರೆ – ನಮ್ಮಲ್ಲಿ ಮಳೆ ಕಡಿಮೆ, ಅಂತರ್ಜಲ ಬತ್ತಿ ಹೋಗಿದೆ, ಭೂಮಿಗೆ ಬಿದ್ದ ಬೀಜ ಭಸ್ಮವಾಗುತ್ತಿದೆ. ಹೀಗಿರುವಾಗ ಏನನ್ನು ತಿಳಿದುಕೊಂಡು ತಾನೇ ಏನು ಪ್ರಯೋಜನ?. ಈ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ.
ಸಮಸ್ಯೆ ಹೇಗೆ ಸೃಷ್ಟಿಯಾಯಿತು ಎಂದು ತಿಳಿದುಕೊಂಡರೆ, ಪರಿಹಾರವೂ ತಿಳಿಯುತ್ತದೆ ಮತ್ತು ನೈಸರ್ಗಿಕ ಕೃಷಿಯೇ ಏಕೆ ಪರಿಹಾರ ಎಂಬುದೂ ಅರಿವಾಗುತ್ತದೆ. ಕೆಲವೇ ವರ್ಷಗಳ ಹಿಂದೆ ಈ ರೀತಿಯ ಮಾತುಗಳು ಇರಲಿಲ್ಲ. ಆಗ ಅಂತರ್ಜಲ ಭೂಮಿಯ ಹತ್ತಿರ ಇತ್ತು. ಭೂಮಿ ತಂಪಾಗಿತ್ತು. ಮಳೆಯು ಸಾಕಷ್ಟು ಬೀಳುತ್ತಿತ್ತು. ಹಾಗಾದರೆ ಈಗ ಏನಾಯಿತು…?
ನಾವು ಪರಿಸರಕ್ಕೆ ಮಾಡಿದ ಹಾನಿ, ಅಂದರೆ ಮರಗಿಡಗಳನ್ನು ಕಡಿದು ಮಳೆ ನೀರು ಹಿಂಗದಂತೆ ಭೂಮಿಯನ್ನು ನಿರ್ಜಲ ಮಾಡಿದ್ದು, ವ್ಯವಸಾಯಕ್ಕೆ ರಾಸಾಯನಿಕಗಳನ್ನು ಬಳಸಿ ಭೂಮಿಯನ್ನು ಕಣ್ಣು ಮುಚ್ಚುವಂತೆ ಮಾಡಿರುವುದು, ವಿವೇಚನೆ ಇಲ್ಲದ ಏಕಬೆಳೆ ಪದ್ಧತಿ, ಟ್ರಾಕ್ಟರ್ ಉಪಯೋಗಿಸಿ ನೆಲವನ್ನು ರಸ್ತೆಯಂತೆ ಗಟ್ಟಿಮಾಡಿ ಜೀವಾಣುಗಳನ್ನು ಕೊಲೆಮಾಡಿರುವುದು ಇತ್ಯಾದಿ ಇತ್ಯಾದಿಗಳು ಭೂಮಿ ನೀರನ್ನು ಕುಡಿಯದಂತೆ ಮಾಡಿಬಿಟ್ಟಿದ್ದು – ಇವೆಲ್ಲವೂ ಬೀಜ ಹಾಕಿದರೆ ಭಸ್ಮವಾಗುವುದಕ್ಕೆ ಕಾರಣವಲ್ಲವೇ? ಇಂತಹ ಬೇಸಾಯವನ್ನು ಉತ್ತೇಜಿಸಿದ ಸರ್ಕಾರ ಹಾಗೂ ನಾವೂ ಕೂಡಾ ಇದಕ್ಕೆಲ್ಲಾ ಕಾರಣವಲ್ಲವೇ? ಇದು ಸ್ವಯಂಕೃತ ಅಪರಾಧವಲ್ಲದೆ ಮತ್ತೇನು?
ಇಂದು ಭೂಮಿಗೂ ಮನುಷ್ಯನಿಗೂ ಇರುವ ಅವಿನಾಭಾವ ಸಂಬಂಧದ ಎಳೆ ತಪ್ಪಿದೆ. ಅಂತ:ಕರಣ ಕಳೆದುಕೊಂಡಿರುವ ಮನುಷ್ಯ ಭೂಮಿಯನ್ನು ಧ್ವಂಸಿಸುತ್ತ ಭೂಮಿಯನ್ನು ಅಸ್ಥಿಪಂಜರವಾಗಿಸಿಬಿಟ್ಟಿದ್ದಾನೆ. ಮನುಷ್ಯ ತಾನು ಪ್ರಕೃತಿಗಿಂತ ಬೇರೆ ಅಂದುಕೊಂಡಿರುವುದೇ ಈ ಎಲ್ಲಾ ದುರತಂಕ್ಕೆ ಕಾರಣವಾಗಿದೆ. ಇಂತಹ ಪರಿಸ್ಧಿತಿಯಲ್ಲಿ ನಾವು ಮಾಡಬೇಕಾಗಿರುವುದು ಏನು? ಈ ಜ್ವಲಂತ ಸಮಸ್ಯೆಗೆ ಬೆಳಕಿನ ಬೇಸಾಯ ಕೃಷಿ ಪದ್ಧತಿ (ಸಹಜ ಕೃಷಿ) ನಮಗೆ ಒಂದು ದಾರಿ ದೀಪವಾಗಿ ಕಾಣುತ್ತದೆ. ಭೂಮಿಯನ್ನು ಬದುಕಿಸಿ ತನ್ಮೂಲಕ ನಾವು ಬದುಕುವ ದಾರಿ ಕಾಣಿಸತೊಡಗಿದೆ ಎನ್ನಿಸುತ್ತದೆ.
ಇಂದು ಬಹು ಮುಖ್ಯವಾಗಿ ತಿಳಿಯಬೇಕಾಗಿರುವ ಅಂಶವೆಂದರೆ:
ಸಾವಯವ ಇಂಗಾಲ – ಇದನ್ನು ಭೂಮಿಯ ಫಲವತ್ತತೆಯನ್ನು ಅಳೆಯುವ ಮಾಪನ ಎನ್ನಬಹುದು. ಭೂಮಿಯಲ್ಲಿ ಸಾವಯವ ಇಂಗಾಲ ಸಾಕಷ್ಟು ಪ್ರಮಾಣದಲ್ಲಿದ್ದು, ಹ್ಯೂಮಸ್ ಉಂಟಾದರೆ ಗಿಡಮರಗಳಿಗೆ ಬೇಕಾಗಿರುವ ಪೌಷ್ಟಿಕಾಂಶಗಳನ್ನು, ಪೌಷ್ಠಿಕ ಪದಾರ್ಥಗಳನ್ನು ನಿಸರ್ಗದತ್ತವಾಗಿಯೇ ಬೆಳೆಗಳಿಗೆ ಒದಗುವಂತೆ ಮಾಡುತ್ತದೆ. ಸಾವಯವ ಇಂಗಾಲ ಹೆಚ್ಚಿರುವ ಭೂಮಿಯ ಮಣ್ಣು ಸ್ಪಂಜಿನಂತಾಗಿಬಿಡುವುದರಿಂದ ಆ ಭೂಮಿಯ ಮೇಲೆ ಬಿದ್ದ ಹನಿ ಹನಿ ನೀರು ಹಾಗು ಬೆಳಗಿನ ಇಬ್ಬನಿ ಕೂಡಾ ಹಿಂಗುತ್ತದೆ. ಹಾಗೆಯೇ ಹ್ಯೂಮಸ್‍ಗೆ ವಾತಾವರಣದಿಂದ ನೀರನ್ನು ಹೀರಿಕೊಂಡು ಹಿಡಿದಿಟ್ಟುಕೊಳ್ಳುವ ಅದ್ಭುತ ಶಕ್ತಿ ಸಾಮಥ್ರ್ಯವೂ ಇದೆ. ಇಂತಹ ವಾತಾವರಣದಲ್ಲಿ ಬೆಳೆಗಳಿಗೆ ಕಡಿಮೆ ಪ್ರಮಾಣದ ನೀರೇ ಸಾಕಾಗುತ್ತದೆ. ಭೂಮಿ ತಂಪಾಗುವುದರಿಂದ ಸಸಿಗಳು ನೀರಿನ ಕೊರತೆಯಲ್ಲೂ ಬದುಕುಳಿಯುತ್ತವೆ. ಹಾಗೂ ಸೂಕ್ಷ್ಮ ಜೀವಾಣುಗಳಿಗೆ ಬೇಕಾದ ಸೂಕ್ಷ್ಮವಾತಾವರಣವನ್ನು ಒದಗಿಸುವಲ್ಲಿ ಹ್ಯೂಮಸ್ ಸಹಕರಿಸುತ್ತದೆ. ಇದರಿಂದ ಭೂಮಿ ಜೀವಂತವಾಗುತ್ತದೆ, ಬಿತ್ತಿದ ಬೀಜ ಬೆಳೆಯುತ್ತದೆ.
ಬೆಳಕಿನ ಸಂಯೋಜನೆ – ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ಪೌಷ್ಟಿಕಾಂಶಗಳನ್ನು ಶೇ.98%ರಷ್ಟು ವಾತಾವರಣದಿಂದ ದೊರಕುತ್ತವೆ. ಇನ್ನುಳಿದ ಶೇ.2%ರಷ್ಟು ಭೂಮಿಯಿಂದ ದೊರಕುತ್ತವೆ. ನಾವು ಸಹಜವಾಗಿ ಭೂಮಿಯನ್ನು ಬಲಗೊಳಿಸಿ ಅಂದರೆ ಹ್ಯೂಮಸ್ ಮತ್ತು ಸಾವಯವ ಇಂಗಾಲವನ್ನು ವೃದ್ಧಿಮಾಡಿದರೆ ಭೂಮಿಯಲ್ಲಿರುವ ಪೌಷ್ಟಿಕಾಂಶಗಳನ್ನು ನಿಸರ್ಗದತ್ತವಾಗಿ ಬೆಳೆಗಳಿಗೆ ಒದಗುತ್ತದೆ. ಶೇ.98%ರಷ್ಟು ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ವಾತಾವರಣಕ್ಕೆ ಹೆಚ್ಚಿನ ಒತ್ತು ಕೊಡುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಕಡೆ ಗಮನ ಹರಿಸುವುದು ಪ್ರಸ್ತುತ ಬಹುಮುಖ್ಯ.
ಇದನ್ನು ಓದಿ: ರಾಜ್ಯಮಟ್ಟದ ಜಲಕಾರ್ಯಕರ್ತರ ತರಬೇತಿ ಸಮಾವೇಶ
ಇದಕ್ಕಿರುವ ಮುಖ್ಯ ಕಾರಣ ಬೆಳಕು (Foot Candle / Light Intensity)
ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ, ಸಸ್ಯಗಳು ಭೂಮಿಯಲ್ಲಿ ದೊರೆಯುವ ಪೌಷ್ಟಿಕಾಂಶಗಳನ್ನುಗಳನ್ನು ಮತ್ತು ವಾತಾವರಣದಲ್ಲಿ ದೊರೆಯುವ ಪೌಷ್ಟಿಕಾಂಶಗಳನ್ನು ತನ್ನ ಅಡುಗೆ ಮನೆಯಾದ ಎಲೆಗಳಲ್ಲಿರುವ ಪತ್ರಹರಿತ್ತು ರಂಧ್ರಗಳು ಸ್ವೀಕರಿಸುತ್ತವೆ. ಈ ಎಲೆಗಳಿಗೆ ಸರಿ ಪ್ರಮಾಣದ ಬೆಳಕು (ಎಲ್ಲ ಬೆಳೆಗಳಿಗೂ ಒಂದೇ ತೀವ್ರತೆಯಿಂದ ಕೂಡಿದ ಬೆಳಕು ಅವಶ್ಯವಿರುವುದಿಲ್ಲ) ತಾಗಿದಾಗ ಮಾತ್ರ (ಅಂದರೆ ಆಯಾ ಬೆಳಗಳ ಶಕ್ತಿಗನುಗುಣವಾಗಿ ಬೆಳಕಿನ ತೀವ್ರತೆಯನ್ನು ಒದಗಿಸಿದರೆ) ಈ ಎಲ್ಲಾ ಪೌಷ್ಟಿಕಾಂಶಗಳು ಸಕ್ಕರೆ ಅಂಶವಾಗಿ ಪರಿವರ್ತನೆಗೊಳ್ಳುತ್ತವೆ. ಈ ಸಕ್ಕರೆ ಅಂಶ ಸಸ್ಯಗಳ ಆಹಾರ. ಆದರೆ ಇಂದು ಹಲವಾರು ಕಾರಣಗಳಿಂದ ಬೆಳಕಿನ ತೀವ್ರತೆ ಹೆಚ್ಚಾಗುತ್ತಿದೆ. ಇನ್ನೊಂದು ಕಡೆ ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಯನ್ನು ಮರೆತಿದ್ದೇವೆ. ಹಾಗಾಗಿ ಹೆಚ್ಚಿನ ತೀವ್ರತೆಯಿಂದ ಕೂಡಿದ ಬೆಳಕು ಬೆಳೆಗಳಿಗೆ ತಗುಲುತ್ತಿರುವುದರಿಂದ ದ್ಯುತಿ ಸಂಶ್ಲೇಷಣಾ ಕ್ರಿಯೆಯ ಕಾರ್ಯಕ್ಷಮತೆ ಕ್ಷಿಣಿಸುತ್ತಿದ್ದು ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ.
ಈ ಕಾರಣದಿಂದ ನಾವು ಇಂದು ನಮ್ಮ ವ್ಯವಸಾಯ ಪದ್ಧತಿಯನ್ನು ಉಲ್ಟಾಪಲ್ಟಾ ಮಾಡಬೇಕಾಗಿದೆ. ಅಂದರೆ ಮಣ್ಣನ್ನು ಸಹಜವಾಗಿ ಬಲಗೊಳಿಸಿ ಶೇ.98%ರಷ್ಟು ಆಹಾರೋತ್ಪಾದನೆಗೆ ಕಾರಣವಾಗುವ ವಾತಾವರಣಕ್ಕೆ ಪರಿಸರಕ್ಕೆ ಹೆಚ್ಚು ಗಮನ ಕೊಡಬೇಕಾಗಿದೆ. ಅಂದರೆ ಸೂಕ್ತ ಬೆಳೆಗಳ ಆಯ್ಕೆ, ಆ ಬೆಳೆಗಳ ಪರಸ್ಪರ ಪೂರಕ ಬೆಳೆಗಳನ್ನು ಅರಿತುಕೊಂಡು ವಿವಿಧ ಬೆಳೆಗಳನ್ನು ಆಯೋಜಿಸಿ, ಗಿಡಗಳ ಅಗತ್ಯಕ್ಕೆ ತಕ್ಕಂತೆ ಬೆಳಕು ಸಿಗುವಂತೆ ವಾತಾವರಣ ಉಂಟುಮಾಡಿ ಇಡೀ ಕೃಷಿಗೆ ಜೀವ ಕೊಡಬೇಕಾಗಿದೆ.
ಈ ಕಾರ್ಯಾಗಾರದಲ್ಲಿ ಹ್ಯೂಮಸ್ ಎಂದರೆ ಏನು, ಉತ್ಪತ್ತಿ ಮಾಡುವುದು ಹೇಗೆ, ಸಾವಯವ ಇಂಗಾಲವನ್ನು ಪ್ರಸ್ತುತ ಇರುವ ಶೇ.0.03ರಿಂದ ಶೇ.3ರಷ್ಟಕ್ಕೆ ಹೆಚ್ಚಿಸುವುದು ಹೇಗೆ, ಬಿದ್ದ ಮಳೆಗಾಲದ ನೀರನ್ನು ನಮ್ಮದೆ ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವ ವಿಧಾನ, ದ್ವಿದಳ ಧಾನ್ಯಗಳ ಮಹತ್ವ, ಸಹಜ ಎರೆಹುಳುಗಳ ಮಹತ್ವ, ಸೂಕ್ಷ ಜೀವಾಣುಗಳು ಹೇಗೆ ಗಿಡ ಮರಗಳ ಬೆಳವಣಿಗೆಯಲ್ಲಿ ಸಹಕರಿಸುತ್ತವೆ, ನಾಟಿ ಬೀಜಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ ಮತ್ತು ಆ ಬೀಜಗಳನ್ನು ಸಹಜವಾಗಿ ಸಂರಕ್ಷಿಸಿಕೊಳ್ಳುವ ವಿಧಾನಗಳನ್ನು ಸವಿವರವಾಗಿ ತಿಳಿಸಿಕೊಡುವ ಪ್ರಯತ್ನವೇ ಈ ಕಾರ್ಯಾಗಾರದ ಉದ್ದೇಶ. ತಿಳಿಯೋಣ ಬನ್ನಿ ಜೊತೆ ಜೊತೆಗೆ…
ಬರ ಮುಕ್ತ ನಾಡಿಗಾಗಿ ಒಂದು ದೃಢ ಹೆಜ್ಜೆ: ನಮ್ಮ ವ್ಯವಸಾಯ ಭೂಮಿಯನ್ನು ಫುಡ್ ಪಾರೆಸ್ಟ್ ಆಗಿ ಬದಲಾಯುಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 09916030272, 09900003891, 08197705157
Sir namgu mahiti Kodi nammurige banni plz sir….. ??