ಸುವರ್ಣ ಚಾನೆಲ್‌ನ ಸುದ್ದಿ ವೆಬ್‌ಸೈಟ್‌ನಲ್ಲಿ ಮಹಿಳೆಯರ ಕುರಿತು ಬರುತ್ತಿರುವ ನಿಂದನಾತ್ಮಕ ಸುದ್ದಿಗಳಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ನಟಿ ಸಂಜನಾ ಗಲ್ರಾನಿಯವರು ಸುವರ್ಣ ವಾಹಿನಿಗೆ ಕರೆ ಮಾಡಿ ಛೀ ಮಾರಿ ಹಾಕಿದ್ದರು. ಆಕ್ಷೇಪಾರ್ಹ ಸುದ್ದಿಗಳನ್ನು, ಊಹಾಪೋಹಗಳನ್ನು ಸುವರ್ಣ ಸುದ್ದಿ ವಾಹಿನಿ ಹರಡುತ್ತಿದೆ ಎಂದು ಆರೋಪಿಸಿದ್ದರು. ‘ಇನ್ನು ಮುಂದೆ ಸಂಜನಾ ಅವರಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಸಾರ ಮಾಡುವುದಿಲ್ಲ” ಎಂದು ಸವರ್ಣ ವಾಹಿನಿಯ ಸಿಬ್ಬಂದಿ ಸ್ಪಷ್ಟಪಡಿಸಿದ್ದರು. ಇಷ್ಟೆಲ್ಲ ಆದ ಮೇಲೂ ಸುವರ್ಣ ವೆಬ್‌ಸೈಟ್‌ನಲ್ಲಿ ನಟಿಯರ ಕುರಿತು, ಮಹಿಳೆಯರ ಕುರಿತು ಬರುತ್ತಿರುವ ತೃತೀಯ ದರ್ಜೆಯ ಸುದ್ದಿಗಳು ನಿಂತಿಲ್ಲ.
ಇದನ್ನೂ ಓದಿರಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ
“ವಿಚ್ಛೇದನಾ ನಂತರ ಸಮಂತಾ ಗರ್ಭಿಣಿ; ಅಭಿಮಾನಿಗಳು ಶಾಕ್” ಎಂದು ಸವರ್ಣ ಇತ್ತೀಚೆಗೆ ವರದಿ ಮಾಡಿತ್ತು. ಅದಕ್ಕಿಂತ ಮತ್ತಷ್ಟು ವಿಕೃತವಾಗಿ ಮತ್ತೊಂದು ವರದಿ ಮಾಡಲಾಗಿದೆ. “ಬ್ರಾ ಧರಿಸದ ಮಲೈಕಾ ಮಾರ್ನಿಂಗ್ ವಾಕ್, ಕಾಲೆಳೆದ ನೆಟ್ಟಿಗರು” ಎಂದು ಹೆಲ್‌ಲೈನ್‌ನೊಂದಿಗೆ ಮಾಡಿರುವ ವರದಿ ಜನಾಕ್ರೊಶಕ್ಕೆ ಕಾರಣವಾಗಿದೆ.
ಚಿಂತಕ ನಾ.ದಿವಾಕರ್ ಅವರು ಈ ಕುರಿತು ಫೇಸ್‌ಬುಕ್ ಪೋಸ್ಟ್ ಮಾಡಿ, ಸುದ್ದಿ ವಾಹಿನಿಗಳ ನೈತಿಕ ಅಧಃಪಥನವನ್ನು ಪ್ರಶ್ನಿಸಿದ್ದಾರೆ.
“ಕೆಲವು ದಶಕಗಳ ಹಿಂದೆ ಪತ್ರಿಕಾ ರಂಗ ಇನ್ನೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡಿದ್ದ ಕಾಲದಲ್ಲಿ, ಮಾಧ್ಯಮಗಳು ಮಾರುಕಟ್ಟೆಯ ಸರಕುಗಳನ್ನು ಮಾರಾಟ ಮಾಡುವ ಜಗುಲಿ ಕಟ್ಟೆಗಳಾಗಿಲ್ಲದಿದ್ದ ಕಾಲದಲ್ಲಿ, ಪತ್ರಿಕಾ ರಂಗ ಮತ್ತು ಮಾಧ್ಯಮಗಳಲ್ಲಿ ನೈತಿಕತೆ ಕೊಂಚ ಮಟ್ಟಿಗೆ ಕಾಣಬಹುದಾಗಿದ್ದ ಕಾಲದಲ್ಲಿ, ರತಿ ವಿಜ್ಞಾನ ಮುಂತಾದ ಅದೇ ತೆರನಾದ ಅಶ್ಲೀಲ ಪತ್ರಿಕೆಗಳು ಮಾರುಕಟ್ಟೆಗೆ ದಾಳಿ ಇಟ್ಟಿದ್ದವು. ಕೀಳು ಮಟ್ಟದ ಅಶ್ಲೀಲತೆ ಮತ್ತು ಅಸಭ್ಯ ಭಾಷೆಯ ಮೂಲಕ ಪಡ್ಡೆ ಹುಡುಗರನ್ನು ಆಕರ್ಷಿಸುತ್ತಿದ್ದ ಪತ್ರಿಕೆಗಳಿವು. ಅಯ್ಯೋ, ಪತ್ರಿಕಾರಂಗ ನೈತಿಕವಾಗಿ ಅಧೋಗತಿಗಿಳಿಯುತಿದೆ ಎಂಬ ಮಾತುಗಳು ಸಹಜವಾಗಿಯೇ ಕೇಳಿಬರುತ್ತಿದ್ದವು. ಆಗಲೂ ಸಹ ಮುಖ್ಯವಾಹಿನಿಯ ಪತ್ರಿಕೆಗಳು ತಮ್ಮ ಘನತೆ ಉಳಿಸಿಕೊಂಡು ಬಂದಿದ್ದವು” ಎಂದು ಅವರು ಹೇಳಿದ್ದಾರೆ.
ಮುಂದುವರಿದು, “ಈಗ, ಡಿಜಿಟಲ್ ವಿದ್ಯುನ್ಮಾನ ಯುಗದಲ್ಲಿ ಮಾಧ್ಯಮಗಳೇ ಮಾರಾಟವಾಗಿ ಮಾರುಕಟ್ಟೆಯ ಜಾಹೀರಾತು ಜಗುಲಿಗಳಾಗಿಬಿಟ್ಟಿವೆ. ವ್ಯತ್ಯಾಸ ಎಂದರೆ ಮುಖ್ಯವಾಹಿನಿಯ ಮಾಧ್ಯಮಗಳೇ ರತಿವಿಜ್ಞಾನಕ್ಕಿಂತಲೂ ಕೀಳುಮಟ್ಟದ ‘ಮನರಂಜನೆ’ ಒದಗಿಸಲು ಸಜ್ಜಾಗಿಬಿಟ್ಟಿವೆ. ಇದನ್ನು ನೈತಿಕ ಅಧಃಪತನ ಎನ್ನುವುದಕ್ಕೂ ಮುಜುಗರವಾಗುತ್ತದೆ ಏಕೆಂದರೆ ಈ ವಾಹಿನಿಗಳಿಗೆ ನೈತಿಕತೆ, ಘನತೆ ಮುಂತಾದ ಪರಿಚಯವೇ ಇರಲಾರದಷ್ಟು ಮಾರಿಕೊಂಡುಬಿಟ್ಟಿವೆ. ಇನ್ನು ಇವುಗಳಿಂದ ಲಿಂಗ ಸೂಕ್ಷ್ಮತೆ, ಸ್ತ್ರೀ ಸಂವೇದನೆ , ಸಭ್ಯತೆ ಮುಂತಾದುವನ್ನು ನಿರೀಕ್ಷಿಸುವುದು ಸಾಧ್ಯವೇ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಸಾಮಾಜಿಕ ಸೌಜನ್ಯ, ಮಾನವೀಯ ಘನತೆ, ಸಾರ್ವಜನಿಕ ಸಭ್ಯತೆ ಈ ಲಕ್ಷಣಗಳೇ ಇಲ್ಲದ ಇಂತಹ ಮಾಧ್ಯಮಗಳಿಂದ, ಸುದ್ದಿವಾಹಿನಿಗಳಿಂದ ಸ್ತ್ರೀ ಸಂವೇದನೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ ! ನೈತಿಕ ಅಧಃಪತನಕ್ಕೂ ಒಂದುಮಿತಿ ಇರುತ್ತದೆ. ತಮ್ಮನ್ನೇ ತಾವು ಮಾರಿಕೊಳ್ಳುವುದಕ್ಕೂ ಒಂದು ಮಿತಿ ಇರುತ್ತದೆ. ಹಣಕ್ಕಾಗಿ ಎಂತಹ ಕೀಳುಮಟ್ಟಕ್ಕಿಳಿಯುವುದಕ್ಕೂ ಒಂದು ಮಿತಿ ಇರುತ್ತದೆ. ಈ ಎಲ್ಲ ಮಿತಿಗಳನ್ನೂ ಮೀರಿ ಸುವರ್ಣ ವಾಹಿನಿ ಬೆತ್ತಲಾಗಿಬಿಟ್ಟಿದೆ. ನೈತಿಕ ಅಧಃಪತನದ ಪರಾಕಾಷ್ಠೆಗೆ ಸುವರ್ಣವಾಹಿನಿ ಸಮಾನಾಂತರ ಪದವಾಗಿ ಬಳಸಬಹುದು. ಇನ್ನೇನು ಹೇಳಲು ಸಾಧ್ಯ” ಎಂದಿದ್ದಾರೆ.
ಸುವರ್ಣ ವಾಹಿನಿಯ ಫೇಸ್‌ಬುಕ್ ಪೇಜ್‌ನಲ್ಲಿ ಹಾಕಿರುವ ಈ ಸುದ್ದಿಗೆ ಸುಮಾರು ಐದು ನೂರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಅಲ್ಲಿ ಬಂದಿರುವ ಕೆಲವು ಕಮೆಂಟ್‌ಗಳನ್ನು ಓದಿದರೂ ಸಾಕು. ಸುವರ್ಣ ವಾಹಿನಿ ವಿರುದ್ಧ ಜನರ ಆಕ್ರೋಶ ಹೇಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿರಿ: ಅನಿಮೇಷನ್ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್ ಫಸ್ಟ್ ಕನ್ನಡ?’
“ಹೆಣ್ಣು ಮಕ್ಕಳ ಬಗ್ಗೆ ಹೀಗೆಲ್ಲ ಬರೆಯೋದಕ್ಕೆ ನಾಚಿಕೆ ಆಗಲ್ವ? ನಿಮ್ಮ ಅಕ್ಕಾ ತಂಗೀರ ವಿಚಾರದಲ್ಲಿ ಕೂಡಾ ಹೀಗೇ ಆಡ್ತೀರಾ?” ಎಂದು ಸಮೀರ್ ಎಂಬವರು ಪ್ರಶ್ನಿಸಿದ್ದಾರೆ.
“ಯಾವಾಗ ನೋಡಿದ್ರೂ ನೆಟ್ಟಿಗರು ನೆಟ್ಟಿಗರು ಅಂತೀರಾ. ಯಾರ್ರಪ್ಪ ಅವ್ರು, ಅಷ್ಟೊಂದು ನೆಟ್ಟಗೆ ಇರೋವ್ರು? ನಿಮಗೆ ಬರ್ಯೋಕೆ ಬೇರೆ ವಿಷ್ಯ ಸಿಗ್ದೆ ಇದ್ರೆ ನಂಗ್ ಹೇಳಿ.. ನಮ್ಮ್ ಊರಲ್ಲಿ, ನಮ್ಮ್ ತಾಲೂಕ್ ಅಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ದಿನ ಪಬ್ಲಿಶ್ ಮಾಡಿ. ಲಜ್ಜೆಗೇಡಿ ರಾಜಕೀಯ ನಾಯಕ್ರುಗಳಿಗೆ ತಿಳ್ಸಿದಾಗೆ ಆಗುತ್ತೆ” ಎಂದು ಎ.ಆರ್.ಅನಿತಾ ಎಂಬವರು ಕಮೆಂಟ್ ಮಾಡಿದ್ದಾರೆ.
“ಇದು ವೈಯಕ್ತಿಕವಾದ ವಿಚಾರ. ಇದನ್ನು ಮಾಧ್ಯಮದಲ್ಲಿ ತೋರಿಸುವುದು ನಿಮ್ಮ ನಾಚಿಕೆಗೇಡಿನ ಕೆಲಸ. ಮಹಿಳೆಯರ ಸಮಸ್ಯೆಗಳು ಇರುವುದರಿಂದ ಕೆಲವರು ಒಳಉಡುಪಿನಿಂದ ದೂರ ಸರಿಯುತ್ತಾರೆ ಅದರಲ್ಲಿ ತಪ್ಪೇನಿದೆ?” ಎಂದು ಉಷಾ ಎಂಬವರು ಪ್ರಶ್ನಿಸಿದ್ದಾರೆ.
“ಡಿಯರ್ ಸುವರ್ಣ ವೆಬ್, ಈಚೆಗಷ್ಟೇ ಸಂಜನಾ ಅವರಿಂದ ಮಂಗಳಾರತಿ ಮಾಡಿಸಿಕೊಂಡದ್ದು ಸಾಲಲಿಲ್ಲವೇ? ಅವರು ಯಾವ ಬಟ್ಟೆ ಹಾಕೊಂಡು ವಾಕಿಂಗ್ ಹೋದ್ರೆ ನಿಮಗೇನು? ನಿವೇನಾದರೂ ಕೊಡಿಸುತ್ತಿದ್ದಾರಾ? ಇಂತಹ ವಿಷಯಗಳಲ್ಲಿರುವ ಆಸಕ್ತಿಯನ್ನು ನೊಂದವರ ಪರವಾಗಿ ತೋರಿಸಿ, ಜನ ಕೈಮುಗಿಯುತ್ತಾರೆ…” ಎಂದು ಮೈಸೂರು ನಿವಾಸಿಯೊಬ್ಬರು ಕೋರಿದ್ದಾರೆ.
“ನಿಮ್ಮಂತ ಹಲ್ಕೆಟ್ ಮಾಧ್ಯಮಗಳಿಂದ ಎಲ್ಲಾ, ಮಾಧ್ಯಮಗಳಿಗೂ ಕೆಟ್ಟ ಹೆಸರು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡ್ರಪ್ಪ ಅಂದ್ರೆ ನಿಮ್ಮಗಳ ಯೋಗ್ಯತೆ ತೋರ್ಸೋ ಪೋಸ್ಟ್ ಹಾಕ್ತಿರಲ್ಲ” ಎಂದು ಕವಯತ್ರಿ ಸೌಮ್ಯಾ ಹೆಗ್ಗಡಹಳ್ಳಿ ಬುದ್ಧಿ ಹೇಳಿದ್ದಾರೆ.
ಇದನ್ನೂ ಓದಿರಿ: ನಟಿಯ ಬಗ್ಗೆ ಅಸಂಬದ್ದ ಸುದ್ದಿ ಪ್ರಕಟಿಸಿ ‘ವಿಕೃತಿ’ ಮೆರೆದ ವಿಜಯವಾಣಿ.ನೆಟ್