Homeಚಳವಳಿಶಬರಿಮಲೆಗೆ ಮಹಿಳೆಯರ ಪ್ರವೇಶ: ಅಯ್ಯಪ್ಪ ಅಯೋನಿಜ ಸರಿ? ಪೂಜಕರೆಲ್ಲ ಯೋನಿಜರಲ್ಲವೇ?

ಶಬರಿಮಲೆಗೆ ಮಹಿಳೆಯರ ಪ್ರವೇಶ: ಅಯ್ಯಪ್ಪ ಅಯೋನಿಜ ಸರಿ? ಪೂಜಕರೆಲ್ಲ ಯೋನಿಜರಲ್ಲವೇ?

- Advertisement -
- Advertisement -

ಕೇರಳದ ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿ ಅಯೋನಿಜ ಇರಬಹುದು?! ಆದರೆ ಅಂತಹ ಅಯೋನಿಜ ಅಯ್ಯಪ್ಪನನ್ನು ಪೂಜಿಸುವವರೆಲ್ಲ ಯೋನಿಜರಲ್ಲವೇ? ದೇವಳದ ಅರ್ಚಕರು, ಭಕ್ತರು ಕೂಡ ಯೋನಿಜರೇ ಆಗಿದ್ದಾರೆ. ಅಂದರೆ ಅವರೆಲ್ಲ ಜನಿಸಿರುವುದು ಮಹಿಳೆಯರ ಗರ್ಭದಿಂದಲೇ ಅಲ್ಲವೇ? ಯೋನಿಜ ಪುರುಷಭಕ್ತರು ಅಯ್ಯಪ್ಪನ ಸನ್ನಿಧಿಗೆ ಹೋಗಬಹುದಾದರೆ, ಮಹಿಳೆಯರಿಗೆ ಏಕೆ ಪ್ರವೇಶವಿಲ್ಲ. ಇಂತಹ ಸಾಮಾನ್ಯ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ. ಕೇವಲ ಮುಟ್ಟಿನ ಕಾರಣಕ್ಕೆ ಮಹಿಳಾ ಭಕ್ತರಿಗೆ ಪ್ರವೇಶ ನಿರಾಕರಿಸುವುದಾದರೆ ಪುರುಷಭಕ್ತರೂ ಹೋಗುವಂತಿಲ್ಲ.

ಮಹಿಳೆ-ಪುರುಷ ಏಕವಾಗಿ ಮುಟ್ಟೆಂಬುದು ನಿಂತ ಮೇಲೆಯೇ ಮತ್ತೊಂದು ಕೂಸಿನ ಜನನ. ಇದು ಪ್ರಕೃತಿ ಸಹಜ. ವೇದ- ಶಾಸ್ತ್ರ-ಪುರಾಣ ಗ್ರಂಥಗಳು ‘ಪ್ರಕೃತಿ ಮಾತೆ’ ಎಂದು ಕರೆದಿವೆ. ಪ್ರಕೃತಿಯೇ ಎಲ್ಲ ಸೃಷ್ಟಿಗೂ ಕಾರಣವೆಂಬ ಸತ್ಯ ಒಪ್ಪಿಕೊಳ್ಳಲು ಹಿಂದೆಮುಂದೆ ನೋಡುವುದೇಕೆ? ಅಯ್ಯಪ್ಪನೇ ‘ಪ್ರಕೃತಿಮಾತೆ’ ಮಡಿಲಲ್ಲಿ ಇದ್ದಾಗ ಅಂತಹ ಸಷ್ಟಿಗೆ ಕಾರಣರಾದ ಮಹಿಳೆಯರನ್ನೇಕೆ ದೇವಳಕ್ಕೆ ಪ್ರವೇಶ ನಿರಾಕರಿಸುವುದು? ಹೋಗಲಿ ನಾವು ರಾಜಪ್ರಭುತ್ವ ಕಾಲದಲ್ಲಿದ್ದೇವೆಯೇ? ಇಲ್ಲವಲ್ಲ. ರಾಜ ಮಾಡಿದ  ಆಜ್ಞೆ ಉಲ್ಲಂಘಿಸಿದರೆ ಅದು ಶಕ್ಷೆಗೆ ಗುರಿಪಡಿಸುತ್ತದೆ. ಆದರೆ ಈಗ ಇರುವುದು ರಾಜಪ್ರಭುತ್ವವಲ್ಲ, ಪ್ರಜಾಪ್ರಭುತ್ವ. ಇಲ್ಲಿ ನಾವೆಲ್ಲರೂ ಸಮಾನರು.

ಭಾರತದ ಸಂವಿಧಾನವನ್ನು ನಮಗೆ ನಾವೇ ಒಪ್ಪಿಕೊಂಡಿದ್ದೇವೆ.”ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ಕಾನೂನಿನ ಮುಂದೆ ಸಮಾನ ಸ್ಥಾನಮಾನ ಮತ್ತು ಅವಕಾಶಗಳು; ಮತ್ತು ಕಾನೂನು ಮತ್ತು ಸಾರ್ವಜನಿಕ ಸದಾಚಾರದ ಮಿತಿಗಳಲ್ಲಿನ ಮಾತು, ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಆರಾಧನೆ, ಉದ್ಯೋಗ, ಸಂಗ-ಸಹವಾಸ ಮತ್ತು ಕೃತ್ಯಗಳ ಮೂಲಭೂತ ಹಕ್ಕುಗಳು ಆಶ್ವಾಸಿತವಾಗಿದೆ ಮತ್ತಿವುಗಳು ಒದಗಿಸಲ್ಪಡುತ್ತವೆ;” ಅಂದರೆ ತಾರತಮ್ಯ ನೀತಿಯಿಂದ ಯಾರೊಬ್ಬರ ಹಕ್ಕುಗಳು ಬಾಧಿತವಾಗಬಾರದು ಎಂಬುದು ಸಂವಿಧಾನದ ಆಶಯ. ನಂಬಿಕೆಯೊಂದರ ನೆಪದಲ್ಲಿ ಸಂವಿಧಾನದ ಆಶಯಗಳನ್ನು ಉಲ್ಲಂಘಿಸುವುದು ಸರಿಯಾದ ಕ್ರಮವಲ್ಲ.

ಪುರಾಣ-ಶಾಸ್ತ್ರಗಳನ್ನು ಒಪ್ಪುವ ಮಹಿಳಾ ವಿರೋಧಿಗಳು ಮಹಿಳೆ ಕ್ಷಮಯಾಧರಿತ್ರಿ ‘ಯತ್ರಾ ನಾರೀ ಪೂಜ್ಯಂತೆ ರಮಂತೇ’ ಎನ್ನುವ ಪುರೋಹಿತಶಾಹಿ ಮನಸ್ಥಿತಿಗಳು ಅದೇ ಹೆಣ್ಣಿನ ಮೇಲೆ ಪಾಶ್ವದೃಷ್ಟಿ ಹರಿಸುವುದೇಕೆ? ಹೆಣ್ಣು ಭೂಮಿಯಾದರೆ ಮುಟ್ಟಿನ ಕಾರಣಕ್ಕೆ ಅಯ್ಯಪ್ಪ ಸ್ವಾಮಿ ಅಲ್ಲಿರಲು ಹೇಗೆ ಅರ್ಹ? ಭೂಮಿಗೆ ಮಹಿಳೆಯನ್ನು ಹೋಲಿಸುವುದಾದರೆ ಅದೇ ಭೂಮಿಯ ಮೇಲೆ ನೆಲೆಸಿರುವ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಅಡ್ಡಿಪಡಿಸುವುದೇಕೆ? ಇದು ಪುರೋಹಿತಶಾಹಿಗಳು ಮತ್ತು ಅವರ ಬೆಂಬಲಿಗರ ದ್ವಂದ್ವವೂ, ಪುರುಷ ಪ್ರಧಾನ ದೌರ್ಜನ್ಯವೂ  ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಮಹಿಳೆಯರಿಗೆ ಅಯ್ಯಪ್ಪ ದೇವಳ ಪ್ರವೇಶ ಕಲ್ಪಿಸದೆ ಅವಮಾನಿಸುವುದು ಭೂಮಿಯನ್ನೇ ಅವಮಾನಿಸಿದಂತೆ.

ಅಯ್ಯಪ್ಪ ಸ್ವಾಮಿಗೆ ಪಡಿ ಹೊರುವವರು ಬೀಡಿ, ಸಿಗರೇಟು, ಗುಟುಕ, ಮಾಂಸ ಮಹಿಳೆಯ ಸಂಪರ್ಕ ಹೀಗೆ ಎಲ್ಲಾ ತ್ಯಜಿಸುತ್ತಾರೆ ಎನ್ನುವುದು ಸತ್ಯ. ಅವುಗಳನ್ನು ತೊರೆದ ಮಾತ್ರಕ್ಕೆ ಅವರು ದೇವಳಕ್ಕೆ ಹೋಗಬಹುದಾದರೆ, ಮಹಿಳೆಯರು ಯಾಕೆ ಹೋಗಬಾರದು? ಆದ್ಯವಚನಕಾರ ದೇವರ ದಾಸಿಮಯ್ಯ ತನ್ನ ವಚನವೊಂದರಲ್ಲಿ ‘ಬರಿ ಸಟಗನ ಭಕ್ತಿ ನೆಚ್ಚಲು ಬೇಡ, ಮಠದ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯ್ತು’ ಎನ್ನುತ್ತಾನೆ. ಅಂದರೆ ಒಂದು ತಿಂಗಳು ಮಾತ್ರ ಎಲ್ಲವನ್ನೂ ತ್ಯಜಿಸಿದವರದು ಬೆಕ್ಕಿನ ಭಕ್ತಿ. ಭಕ್ತಿ ಮುಗಿದ ಮೇಲೆ ಕಾಮನೆಗಳು ಚಿಮ್ಮುತ್ತವೆ. ಇಂಥ ಸುಳ್ಳಿನ ಭಕ್ತಿ ಬೇಡ ಎನ್ನುತ್ತಾನೆ ದಾಸಿಮಯ್ಯ.

“ಕಿರಣ ಸೋಂಕದ ಮುನ್ನ, ಅಳಿ ಮುಟ್ಟದ ಹೂ, ಎಂಜಲಾಗದ ನೀರು ತಂದು” ಪೂಜಿಸು ಎನ್ನುತ್ತಾನೆ ಹರಿಹರ. ಅಯ್ಯಪ್ಪನಿಗೆ ನೀವು ತೆಗೆದುಕೊಂಡು ಹೋಗುವುದು ಅದೇ ಮಹಿಳೆಯರು ಮುಟ್ಟಿದ ವಸ್ತುಗಳನ್ನು ತಾನೆ? ಎಲ್ಲೋ ಒಂದು ಕಡೆ ಅಯ್ಯಪ್ಪ ಭಕ್ತರು ತೆಗೆದುಕೊಂಡು ಹೋಗುವ ಮುಡಿ ಮತ್ತು ಅದರಲ್ಲಿನ ವಸ್ತುಗಳನ್ನು ಮಹಿಳೆ ಮುಟ್ಟಿಯೇ ಮುಟ್ಟಿರುತ್ತಾಳೆ. ಅಂಥ ಮುಟ್ಟಿನ ವಸ್ತುವನ್ನು ಅಯ್ಯಪ್ಪನಿಗೆ ಅರ್ಜಪಿಸಿದಾಗ ಮೈಲಿಗೆಯಾಗುವುದಿಲ್ಲವೇ? ಅಯ್ಯಪ್ಪನೇ ಹುಟ್ಟೇ ವಿಚಿತ್ರದ್ದು ಎಂದು ನಂಬಿರುವ ಭಕ್ತರು ಅದನ್ನು ಪ್ರಶ್ನಿಸಲು ಹೋಗುವುದಿಲ್ಲ. ಇಬ್ಬರು ಯೋನಿಜರೇ ಕೂಡಿಯೇ ಅಯ್ಯಪ್ಪ ಹುಟ್ಟಿದ್ದು. ಅಂದಮೇಲೆ ಮಹಿಳೆಯರಿಗೆ ಪ್ರವೇಶ ನೀಡುವುದು ಉಚಿತವಾದ ಕ್ರಮ.

ನೈಸರ್ಗಿಕ ನ್ಯಾಯದ ಪ್ರಕಾರ ಮಹಿಳೆ ಎಲ್ಲಾ ದೇವಾಲಯ ಪ್ರವೇಶಕ್ಕೂ ಹಕ್ಕಿದೆ. ನೈಸರ್ಗಿಕ ನ್ಯಾಯವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯುವಂತಹ ತೀರ್ಪುಗಳನ್ನು ನೀಡಿದಾಗ ಸಾಮಾನ್ಯ ಜನರು ನ್ಯಾಯಾಲಯದ ಬಗ್ಗೆ ಹೆಚ್ಚಿನ ನಂಬಿಕೆ ಇಟ್ಟುಕೊಳ್ಳುತ್ತಾರೆ. ನೈಸರ್ಗಿಕ ನ್ಯಾಯ ಎಲ್ಲ ಜೀವಿಗಳು ಸಮಾನವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಸಮಾನತೆಯೇ ನೈಸರ್ಗಿಕ ನ್ಯಾಯದ ಜೀವಾಳ. ಈ ಹಿನ್ನೆಲೆಯಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶ ಏಕೆ ಕೂಡದು? ಎಂಬುದನ್ನು ಎಲ್ಲರೂ ಕೇಳಬೇಕಾಗಿದೆ.

(ವಿವಿಧ ಲೇಖಕರು ತಮ್ಮ ಲೇಖನಗಳಲ್ಲಿ ಬರೆಯುವ ಅಭಿಪ್ರಾಯಗಳು ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...