Homeಮುಖಪುಟಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-3

ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-3

- Advertisement -
- Advertisement -

ಪ್ರಯಾಣ ಮತ್ತು ಪ್ರವಾಸೋದ್ಯಮ

38) ಗುರಿ: ಜಾಗತಿಕವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಬರುವಿಕೆಯಲ್ಲಿ (FTA) ಏರಿಕೆಯ ದರವನ್ನು ಶೇ.1.2ರಿಂದ ಶೇ.3ಕ್ಕೆ ಏರಿಸುವುದು.

ಸಾಧನೆ:

(ಮಾಹಿತಿ ಮೂಲ UNWTO Barometer)

39) ಗುರಿ: 100 ಸ್ಮಾರ್ಟ್ ಪ್ರವಾಸಿಧಾಮಗಳನ್ನು ರೂಪಿಸುವುದು.

ಸಾಧನೆ: ಒಕ್ಕೂಟ ಸರ್ಕಾರ 2015-16ರ ನಡುವೆ 100 ಸ್ಮಾರ್ಟ್‌ಸಿಟಿಗಳನ್ನು ಗುರುತಿಸುವ ಪ್ರಕ್ರಿಯೆ ಮುಗಿಸಿದ್ದು, ಅವುಗಳನ್ನು ಸ್ಮಾರ್ಟ್ ಸಿಟಿಗಳಾಗಿ ರೂಪಿಸುವ ಯೋಜನೆಗಳು ಮತ್ತು ಕಾಮಗಾರಿಗಳು ನಡೆದಿವೆ. ಇವೇ ನಗರಗಳು ಸ್ಮಾರ್ಟ್ ಪ್ರವಾಸಿಧಾಮಗಳು ಎಂದೂ ಪರಿಗಣನೆ ಆಗಲಿವೆಯೇ ಅಥವಾ ಹೊಸದಾಗಿ ನೂರು ಬೇರೆಯೇ ಪ್ರವಾಸಿಧಾಮಗಳನ್ನು ಗುರುತಿಸಲಾಗುತ್ತದೆಯೇ ಎಂಬುದು ಖಚಿತವಿಲ್ಲ.

40) ಇ-ವಿಸಾ ಕುರಿತು ಅರಿವು ಮೂಡಿಸುವುದು; ಇ ಮೆಡಿಕಲ್ ವಿಸಾ (ವೈದ್ಯಕೀಯ ಚಿಕಿತ್ಸೆಗಾಗಿ ಪ್ರವಾಸ ಬರುವವರು) ಅಡಿಯಲ್ಲಿ ಬರುವ ವಾರ್ಷಿಕ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವುದು.

ಸಾಧನೆ: ಇ-ವಿಸಾ ಅಡಿಯಲ್ಲಿ ಬರುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ.

(ಮಾಹಿತಿ ಮೂಲ: ಪ್ರವಾಸೋದ್ಯಮ ಇಲಾಖೆ)

41) ಗುರಿ: 1 ಕೋಟಿಗಿಂತ ಹೆಚ್ಚಿನ ಪ್ರವಾಸೋದ್ಯಮ ಯೋಜನೆಗಳನ್ನು ಮೂಲಸೌಕರ್ಯ ಯೋಜನೆಗಳೆಂದು ಪರಿಗಣಿಸುವುದು.

ಸಾಧನೆ: ಈ ಚಿಂತನೆ ಇನ್ನೂ ಕಾಗದದ ಮೇಲೆ ಮಾತ್ರ ಇದ್ದು, ಯಾವುದೇ ತೀರ್ಮಾನ ಆದಂತಿಲ್ಲ.

ಗಣಿಗಾರಿಕೆ

42) ಗುರಿ: ಗಣಿಗಾರಿಕೆಯ ಸರಾಸರಿ ಬೆಳವಣಿಗೆಯನ್ನು ಶೇ.8.5ಕ್ಕೆ ಏರಿಸುವುದು ಮತ್ತು ಗಣಿಗಾರಿಕೆಯ ಪ್ರದೇಶವನ್ನು Obvious Geological Potential-OGPಯ 10% ನಿಂದ 20%ಗೆ ಏರಿಸುವುದು.

ಸಾಧನೆ:

(ಮಾಹಿತಿ ಮೂಲ: ಸ್ಟ್ಯಾಟಿಸ್ಟಾ 2021)

ಈಗ ಭಾರತದ ಬೌಗೋಳಿಕ ಗಣಿಗಾರಿಕಾ ಸಾಮರ್ಥ್ಯವಾದ (Obvious Geological Potential-OGP) 10%ಗಿಂತ ಅರ್ಧದಷ್ಟು ಅಂದರೆ 5% ಮಾತ್ರ ಗಣಿಗಾರಿಕೆ ನಡೆಯುತ್ತಿದೆ. ಇದನ್ನು 20%ಗೆ ಏರಿಸಲು ಅನುವಾಗುವಂತೆ, ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಗಣಿಗಳು ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ 2021ಕ್ಕೆ, ಮಾರ್ಚ್ 22, 2021ರಂದು ಸಂಸತ್ತು ಅನುಮೋದನೆ ನೀಡಿದೆ.

43) ಗುರಿ: ’ಎಕ್ಸ್‌ಪ್ಲೋರ್ ಇನ್ ಇಂಡಿಯಾ’ಕ್ಕೆ ಆಂದೋಲನದ ಸ್ವರೂಪ ನೀಡುವುದು ಮತ್ತು ಖನಿಜ ಗಣಿಗಾರಿಕೆ ಲೈಸನ್ಸಿಂಗ್ ನೀತಿಯಲ್ಲಿ ಸಮಗ್ರ ಬದಲಾವಣೆ ತರುವುದು.

ಸಾಧನೆ: ಈಗಾಗಲೇ ಗಣಿಗಾರಿಕೆ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ 2021ಕ್ಕೆ ಸಂಸತ್ತು ಅಂಗೀಕಾರ ನೀಡಿದೆ. ಭಾರತದಲ್ಲಿ 5.71 ಲಕ್ಷ ಚದರ ಕಿ.ಮೀ. ಭೂಭಾಗ ಗಣಿಗಾರಿಕೆಗೆ ಅರ್ಹ ಎಂದು ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ಕಂಡುಕೊಂಡಿದ್ದು, ಅದರಲ್ಲಿ 10% ವರೆಗೆ ಮಾತ್ರ ಗಣಿಗಾರಿಕೆ ಆಗುತ್ತಿದೆ. ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟು ಇದನ್ನು ದುಪ್ಪಟ್ಟು ಮಾಡುವುದು ಸರ್ಕಾರದ ಉದ್ದೇಶ.

44) ಗುರಿ: ಗಣಿಗಾರಿಕೆಗೆ ಪರಿಸರ ಮತ್ತು ಅರಣ್ಯ ಅನುಮತಿಗಳನ್ನು ನೀಡಲು ಸಮಯಬದ್ಧವಾದ ಸಿಂಗಲ್ ವಿಂಡೊ ವ್ಯವಸ್ಥೆ ರೂಪಿಸುವುದು.

ಸಾಧನೆ: ದಿನಾಂಕ 11.1.2021ರಂದು ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ’ಗಣಿಗಾರಿಕೆ ಕ್ಷೇತ್ರಕ್ಕೆ ಸಿಂಗಲ್ ವಿಂಡೊ ಕ್ಲಿಯರೆನ್ಸ್ ಸಿಸ್ಟಮ್’ ವೆಬ್ ಪೋರ್ಟಲ್‌ಅನ್ನು ಉದ್ಘಾಟಿಸಿದರು.

45) ಗುರಿ: ರಾಷ್ಟ್ರೀಯ ಖನಿಜ ನಿಯಂತ್ರಣ ಪ್ರಾಧಿಕಾರ ಮತ್ತು ಆದೇ ರೀತಿಯ ರಾಜ್ಯಮಟ್ಟದ ಪ್ರಾಧಿಕಾರಗಳನ್ನು ರಚಿಸುವುದು.

ಸಾಧನೆ: ರಾಷ್ಟ್ರೀಯ ಖನಿಜ ನಿಯಂತ್ರಣ ಪ್ರಾಧಿಕಾರ, ರಾಜ್ಯಮಟ್ಟದ ಪ್ರಾಧಿಕಾರಗಳು, ರಾಷ್ಟ್ರೀಯ ಖನಿಜ ದತ್ತಾಂಶ ರೆಪಾಸಿಟರಿಯಂತಹ ಬದಲಾವಣೆಗಳು ಇನ್ನೂ ಅನುಷ್ಠಾನ ಆಗಿಲ್ಲ.

ಇಂಧನ

46) ಗುರಿ: 24×7 ವಿದ್ಯುತ್ ಎಲ್ಲರಿಗೂ ಸಿಗುವಂತೆ ಮಾಡುವುದು ಮತ್ತು ರಿನಿವೆಬಲ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 175 GWಗೆ ಹೆಚ್ಚಿಸಿಕೊಳ್ಳುವುದು.

ಸಾಧನೆ: 05.8.2021ರಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ವಿದ್ಯುತ್ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ 2015-16ರಲ್ಲಿ ಸರಾಸರಿ 12 ಗಂಟೆ ವಿದ್ಯುತ್ ನೀಡುತ್ತಿದ್ದು, ಈಗ ಸರಾಸರಿ 20.50 ಗಂಟೆಗೆ ಏರಿದೆ ಮತ್ತು ನಗರ ಪ್ರದೇಶಗಳಲ್ಲಿ ಅದು 22-23 ಗಂಟೆಗಳಿಗೆ ಏರಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ 25.3.21ರಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, (ಚುಕ್ಕೆ ಗುರುತಿನ ಪ್ರಶ್ನೆ 437) ದಿನಾಂಕ 28.2.21ಕ್ಕೆ ದೇಶದಲ್ಲಿ 92.97 MW ನವೀಕರಿಸಬಲ್ಲ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ. ಇದಲ್ಲದೇ 50.15 GW ಸಾಮರ್ಥ್ಯದ ಯೋಜನೆಗಳು ಅನಷ್ಠಾನದ ಬೇರೆ ಬೇರೆ ಹಂತದಲ್ಲಿವೆ ಮತ್ತು 27.02 GW ಸಾಮರ್ಥ್ಯದ ಯೋಜನೆಗಳು ಬಿಡ್ಡಿಂಗ್‌ನ ಹಂತದಲ್ಲಿವೆ ಎಂದು ಹೇಳಿದೆ.

47) ಗುರಿ: ತೈಲ, ನೈಸರ್ಗಿಕ ಅನಿಲ, ವಿದ್ಯುತ್ ಮತ್ತು ಕಲ್ಲಿದ್ದಲುಗಳನ್ನು GST ವ್ಯಾಪ್ತಿಗೆ ತಂದು ಇನ್‌ಪುಟ್ ತೆರಿಗೆ ಕ್ರೆಡಿಟ್‌ಗೆ ಅವಕಾಶ ಮಾಡಿಕೊಡುವುದು.

ಸಾಧನೆ: ಕಲ್ಲಿದ್ದಲು ಈಗಾಗಲೇ GST ವ್ಯಾಪ್ತಿಗೆ ಬಂದಿದೆ. ವಿದ್ಯುತ್, ನೈಸರ್ಗಿಕ ಅನಿಲ, ತೈಲಗಳನ್ನು GST ವ್ಯಾಪ್ತಿಗೆ ತರುವ ಹಾದಿಯಲ್ಲಿ ಸರ್ಕಾರ ಶ್ರಮಿಸುತ್ತಿದೆ.

48) ಗುರಿ: ವಿದ್ಯುತ್ ವಿತರಣೆಗೆ ಸ್ಮಾರ್ಟ್ ಗ್ರಿಡ್ ಮತ್ತು ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ.

ಸಾಧನೆ: ಈ ನಿಟ್ಟಿನಲ್ಲಿ ವಿದ್ಯುತ್ (ತಿದ್ದುಪಡಿ) ಮಸೂದೆ 2021ನ್ನು ಸರ್ಕಾರ ಸಿದ್ಧಪಡಿಸಿದ್ದು, ಸಂಸತ್ತಿನಲ್ಲಿ ಅದರ ಅಂಗೀಕಾರಕ್ಕಾಗಿ ಸಮಯ ಕಾಯುತ್ತಿದೆ.

ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಆರಂಭವಾಗಿದ್ದು, ದೇಶದಲ್ಲಿ ಈಗಾಗಲೇ 27,29,472 ಸ್ಮಾರ್ಟ್ ಮೀಟರ್‌ಗಳು ಸ್ಥಾಪನೆಗೊಂಡು ಕಾರ್ಯಾಚರಿಸುತ್ತಿವೆ.

(ಮಾಹಿತಿ: nsgm.gov.in)

49) ಗುರಿ: ಮಿತವ್ಯಯಕಾರಿ ಪವರ್‌ಗ್ರಿಡ್ ಸಂತುಲನಕ್ಕೆ ಅಗತ್ಯ ಇರುವ ತಂತ್ರಜ್ಞಾನವನ್ನು ಒದಗಿಸುವುದು.

ಸಾಧನೆ: ಇನ್ನೂ ಚಿಂತನೆಯ ಹಂತದಲ್ಲಿದೆ.

ಭೂಸಾರಿಗೆ

50) ಗುರಿ: ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು ದುಪ್ಪಟ್ಟು ಮಾಡುವುದು, ರಸ್ತೆ ಅಪಘಾತ ಮತ್ತು ಸಾವುನೋವುಗಳನ್ನು 50%ನಷ್ಟು ತಗ್ಗಿಸುವುದು.

ಸಾಧನೆ: ರಸ್ತೆಗಳ ನಿರ್ಮಾಣದ ಅಂಕಿ ಸಂಖ್ಯೆಗಳು ಈ ಕೆಳಗಿನಂತಿವೆ.

(ಮಾಹಿತಿ: rbi.org.in ಮತ್ತು ಭೂಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆ)

ರಸ್ತೆ ಅಪಘಾತಗಳು- ಸಾವುನೋವಿನ ಪ್ರಮಾಣ

(ಮಾಹಿತಿ: ಭೂಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆ ರಸ್ತೆ ಅಪಘಾತಗಳ ವರದಿ 2019)

51) ಗುರಿ: ಭಾರತ್‌ಮಾಲಾ ಪರಿಯೋಜನಾ- ಹಂತ 1 ಮತ್ತು ಇಂತಹ ಪ್ರಮುಖ ಯೋಜನೆಗಳನ್ನು ಪೂರೈಸುವುದು. ಭಾರತ್‌ಮಾಲಾ ಮೊದಲ ಹಂತದಲ್ಲಿ 24,800 ಕಿಮೀ (ಬಂದರುಗಳನ್ನು ಸಂಪರ್ಕಿಸುವ 2000 ಕಿಮೀ ಕರಾವಳಿ ರಸ್ತೆಗಳು ಸೇರಿದಂತೆ) ಪೂರ್ಣಗೊಳಿಸುವುದು; ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಮೊದಲ ಹಂತ ಪೂರೈಸುವುದು, ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು 2 ಲಕ್ಷ ಕಿಮೀಗೆ ಹೆಚ್ಚಿಸುವುದು, ರಸ್ತೆ ಅಗಲೀಕರಣಕ್ಕೆ ಬಾಕಿ ಇರುವ ಪ್ರಮಾಣವನ್ನು 26.46% ನಿಂದ 10% ಒಳಗೆ ಸೀಮಿತಗೊಳಿಸಿಕೊಳ್ಳುವುದು; ಚಾರ್‌ಧಾಮ್ ಮಹಾಮಾರ್ಗ್ ವಿಕಾಸ್ ಪರಿಯೋಜನಾ ಪೂರ್ಣಗೊಳಿಸುವುದು.

ಸಾಧನೆ:

* ಭಾರತ್‌ಮಾಲಾ ಯೋಜನೆಯ ಗೋಲ್ ಪೋಸ್ಟ್ ನಾಲ್ಕು ವರ್ಷ ಮುಂದೂಡಲಾಗಿದೆ. 2020 ಅಕ್ಟೋಬರ್ ಹೊತ್ತಿಗೆ ಕೇವಲ 2921 ಕಿಮೀ ರಸ್ತೆ ನಿರ್ಮಾಣಗೊಂಡಿದೆ.

* ಎರಡು ಲಕ್ಷ ಕಿಮೀ ದಾಟಬೇಕಾಗಿದ್ದ ರಾಷ್ಟ್ರೀಯ ಹೆದ್ದಾರಿಗಳ ಉದ್ದ 1.32 ಲಕ್ಷ ಕಿಮೀಗಳಿಗೆ ಸೀಮಿತಗೊಂಡಿದೆ.

* ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಉದ್ದೇಶಿತ 61,703 ಕಿ.ಮೀ ರಸ್ತೆಗಳಲ್ಲಿ ಕೇವಲ 9152 ಕಿ.ಮೀ ಪೂರ್ಣಗೊಂಡಿದೆ.

* ಚಾರ್‌ಧಾಮ್ ಮಹಾಮಾರ್ಗ್ ವಿಕಾಸ ಪರಿಯೋಜನೆಯ 889 ಕಿ.ಮೀ ಉದ್ದದ ರಸ್ತೆಯಲ್ಲಿ 589 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ.

52) ಗುರಿ: ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಸೊತ್ತುಗಳನ್ನು ನಿರ್ವಹಿಸಲು ಒಂದು ವ್ಯವಸ್ಥೆಯನ್ನು ರೂಪಿಸುವುದು.

ಸಾಧನೆ: 2020ರ ಅಂತ್ಯದ ಹೊತ್ತಿಗೆ ರೋಡ್ ಅಸೆಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RAMS) ಇನ್ನೂ ಚಿಂತನೆಯ ಹಂತದಲ್ಲಿತ್ತು.

53) ಗುರಿ: ರಸ್ತೆ ಮತ್ತು ಹೆದ್ದಾರಿಗಳ ನಿರ್ವಹಣೆಗೆ ವಾರ್ಷಿಕ ಬಜೆಟ್‌ನ 10% ನ್ನು ಮೀಸಲಿರಿಸುವುದು.

ಸಾಧನೆ: 2021-22ನೇ ಸಾಲಿನಲ್ಲಿ ರಸ್ತೆಗಳ ನಿರ್ವಹಣೆಗೆ ಬಜೆಟ್‌ನಲ್ಲಿ 2680 ಕೋಟಿ ರೂಗಳನ್ನು ಮೀಸಲಿರಿಸಲಾಗಿದ್ದು, ಇದು 2019-20ಕ್ಕೆ ಹೋಲಿಸಿದರೆ, 26% ಏರಿಕೆಯಾಗಿದ್ದರೂ, ಒಟ್ಟು ಹೆದ್ದಾರಿ ಬಜೆಟ್‌ನ ಕೇವಲ 2% ಮೀಸಲಿರಿಸಿದಂತಾಗಿದೆ. (ಮಾಹಿತಿ: prsindia.org)

ರೈಲ್ವೇ

54) ಗುರಿ: ಪರಿಣಾಮಕಾರಿ, ಸುರಕ್ಷಿತ, ಮಿತವ್ಯಯಿ ಮತ್ತು ಎಲ್ಲರಿಗೂ ಎಟುಕುವ ರೈಲು ಜಾಲ ಸೃಷ್ಟಿಸುವುದು ಮತ್ತು ರೈಲ್ವೇ ಅಪಘಾತದಲ್ಲಿ ಸಾವುನೋವುಗಳನ್ನು ಶೂನ್ಯಕ್ಕಿಳಿಸುವುದು. ಅದರ ಭಾಗವಾಗಿ, ರೈಲು ಮಾರ್ಗ ನಿರ್ಮಾಣವನ್ನು ದಿನಕ್ಕೆ 7 ಕಿ.ಮೀನಿಂದ 19 ಕಿ.ಮೀಗೆ ಏರಿಸುವುದು, 16-17ನೇ ಸಾಲಿನಲ್ಲಿ 40% ಇದ್ದ ರೈಲು ಬ್ರಾಡ್‌ಗೇಜ್ ವಿದ್ಯುದೀಕರಣವನ್ನು 100%ಗೆ ಸಾಧಿಸುವುದು; ಸರಕು ಸಾಗಣೆಯ ವೇಗವನ್ನು ಗಂಟೆಗೆ 24 ಕಿ.ಮೀನಿಂದ ಗಂಟೆಗೆ 60 ಕಿ.ಮೀಗೆ ಏರಿಸುವುದು; 16-17ನೇ ಸಾಲಿನಲ್ಲಿ ಇದ್ದ 238 ರೈಲು ಅಪಘಾತಗಳಲ್ಲಿನ ಸಾವುನೋವನ್ನು ಶೂನ್ಯಕ್ಕಿಳಿಸುವುದು.

ಸಾಧನೆ:

* ಆದ್ಯತೆಯ ಸರಕು ಕಾರಿಡಾರ್ ಯೋಜನೆಯ ನಿರ್ಮಾಣ ವೇಗ ದಿನಕ್ಕೆ 0.6 ಕಿ.ಮೀನ ಆಮೆಗತಿಯಲ್ಲಿ ನಡೆದಿದೆ (ಮಾಹಿತಿ ಮೂಲ: DFCCIL, ರೈಲ್ವೇ ಇಲಾಖೆ)

* ಮೇ 2021ರ ಹೊತ್ತಿಗೆ, 71% ಬ್ರಾಡ್‌ಗೇಜ್ ರೈಲ್ವೇ ಜಾಲ ವಿದ್ಯುದೀಕರಣಗೊಂಡಿದೆ. (ಮಾಹಿತಿ ದಿ ಹಿಂದೂ ವರದಿ)

* 2020-21ರ ಹೊತ್ತಿಗೆ ಸರಕು ಸಾಗಣೆಯ ವೇಗ ಗಂಟೆಗೆ 24 ಕಿ.ಮೀನಿಂದ ಗಂಟೆಗೆ 42.9 ಕಿ.ಮೀಗೆ ಏರಿದೆ. (ಡಿಸೆಂಬರ್ 26, 2020 ರಂದು ರೈಲ್ವೇ ಮಂಡಳಿ ಅಧ್ಯಕ್ಷರ ಹೇಳಿಕೆ)

(ಮಾಹಿತಿ ಮೂಲ: ರೈಲ್ವೇ ಇಲಾಖೆ ವಾರ್ಷಿಕ ವರದಿ 2019-20)

55) ಗುರಿ: ರೈಲು ದರಗಳನ್ನು, ಸಬ್ಸಿಡಿಗಳನ್ನು ತರ್ಕಬದ್ಧಗೊಳಿಸಿ, ಆದಾಯ ಹೆಚ್ಚಿಸಲು ಆಸ್ತಿಗಳನ್ನು ಮಾನೆಟೈಸ್ ಮಾಡುವುದು.

ಸಾಧನೆ: ರೈಲ್ವೇ ಆದಾಯ ಮತ್ತು ವೆಚ್ಚಗಳ ನಡುವಿನ ಅನುಪಾತ (ಆಪರೇಟಿಂಗ್ ರೇಷ್ಯೂ) ಸತತವಾಗಿ ಕಂಠಮಟ್ಟ ಇದ್ದು, ವೆಚ್ಚ ಸರಿತೂಗಿಸುವುದಕ್ಕಾಗಿ ಬಜೆಟ್ ಅನುದಾನಕ್ಕೆ ಹೊರತಾದ ಸಾಲ ಮತ್ತಿತರ ಬೆಂಬಲಗಳನ್ನು (EBR – Extra budgetary Resources) ಪಡೆಯಲಾಗುತ್ತಿದೆ. ರೈಲ್ವೇಯ ಆಪರೇಟಿಂಗ್ ರೇಷ್ಯೂ ಹೀಗಿದೆ:

(ಮಾಹಿತಿ ಮೂಲ: prsindia.org)

ಆಗಸ್ಟ್ 2021ರ ನಡುವಿನಲ್ಲಿ ರಾಷ್ಟ್ರೀಯ ಮಾನೆಟೈಸೇಷನ್ ಪೈಪ್‌ಲೈನ್‌ಅನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವರು 90 ಪ್ರಯಾಣಿಕ ರೈಲುಗಳು, 400 ರೈಲುನಿಲ್ದಾಣ, ಸ್ಟೇಡಿಯಂ, ಕಾಲನಿಗಳು ಮತ್ತು ಕೊಂಕಣ ರೈಲ್ವೇ ಹಾಗೂ ಹಿಲ್ ರೈಲ್ವೇಗಳನ್ನು ಖಾಸಗಿಯವರಿಗೆ ಮಾರಿ, ಅದರಿಂದ 2025ರೊಳಗೆ 1.52 ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರದ ಬೊಕ್ಕಸಕ್ಕೆ ತರುವ ಯೋಜನೆ ಪ್ರಕಟಿಸಿದ್ದಾರೆ.

56) ಗುರಿ: ಡಾ. ಕಾಕೋಡ್ಕರ್ ನೇತೃತ್ವದ ಸಮಿತಿ ನೀಡಿದ್ದ 22 ರೈಲ್ವೇ ಸುರಕ್ಷಾ ಸಲಹೆಗಳನ್ನು ಅನುಷ್ಠಾನಕ್ಕೆ ತರುವುದು.

ಸಾಧನೆ: ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನ ಆಗಿಲ್ಲ. ಸದ್ಯಕ್ಕೆ ರೈಲ್ವೇ ಮಂಡಳಿಯನ್ನು 2020 ಸೆಪ್ಟಂಬರ್‌ನಲ್ಲಿ ಪುನರ್‌ರಚಿಸಿ, ಅದರ ಅಧ್ಯಕ್ಷರನ್ನು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂದು ಕರೆದು ಹೆಸರು ಬದಲಾಯಿಸಲಾಗಿದೆ. ಉಳಿದ ಬದಲಾವಣೆಗಳು ಇನ್ನೂ ಚಿಂತನೆಯ ಹಂತದಲ್ಲಿವೆ.

57) ಗುರಿ: ಭಾರತೀಯ ರೈಲ್ವೇಗೆ ಸ್ವತಂತ್ರ ನಿಯಂತ್ರಕ ವ್ಯವಸ್ಥೆಯ ನೇಮಕ.

ಸಾಧನೆ: 2018 ಫೆಬ್ರವರಿಯಲ್ಲಿ ರೈಲ್ವೇ ಅಭಿವೃದ್ಧಿ ಪ್ರಾಧಿಕಾರ (RDA) ಎಂಬ ಸ್ವತಂತ್ರ ನಿಯಂತ್ರಕ ವ್ಯವಸ್ಥೆಯನ್ನು ರೂಪಿಸಲಾಗಿದೆ.

ನಾಗರಿಕ ವಿಮಾನಯಾನ

58) ಗುರಿ: ದೇಶದೊಳಗೆ ವಿಮಾನ ಟಿಕೆಟು ಮಾರಾಟವನ್ನು 10.3ಕೋಟಿಯಿಂದ 30 ಕೋಟಿಗೆ ಏರಿಸುವುದು ಮತ್ತು ವಿಮಾನ ಸರಕು ಸಾಗಣೆಯ ಪ್ರಮಾಣವನ್ನು ದುಪ್ಪಟ್ಟು (ಅಂದರೆ 65 ಲಕ್ಷ ಟನ್) ಮಾಡುವುದು.

ಸಾಧನೆ:


(ಮಾಹಿತಿ ಮೂಲ: Association of Private Airport Operators and AAI annual report 19-20)

59) ಗುರಿ: UDAN ವಿಮಾನ ನಿಲ್ದಾಣಗಳನ್ನು ಸಕಾಲದಲ್ಲಿ ಪೂರೈಸುವುದು ಮತ್ತು ಟೈರ್ 1 ನಗರಗಳ ವಿಮಾನ ನಿಲ್ದಾಣಗಳನ್ನು ಖಾಸಗೀಕರಿಸುವುದು.

ಸಾಧನೆ: UDAN ಯೋಜನೆಯಡಿ 2024ರ ಒಳಗೆ 100 ವಿಮಾನ ನಿಲ್ದಾಣಗಳನ್ನು ಮತ್ತು 1000 RCS ರೂಟ್‌ಗಳಲ್ಲಿ ವಿಮಾನಯಾನ ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿತ್ತು. ಆದರೆ, ಮಾರ್ಚ್ 31, 2021ರಂದು ಇವುಗಳಲ್ಲಿ 52 ವಿಮಾನ ನಿಲ್ದಾಣಗಳು ಮತ್ತು 357 ರೂಟ್‌ಗಳು ಮಾತ್ರ ಚಾಲನೆಯಲ್ಲಿವೆ. ಅಂದರೆ ಈ ಯೋಜನೆಯಡಿ 47% ರೂಟ್‌ಗಳು ಮತ್ತು 39% ವಿಮಾನನಿಲ್ದಾಣಗಳು ಮಾತ್ರ ಕಾರ್ಯಾಚರಿಸುತ್ತಿವೆ.

ದೇಶದಲ್ಲಿ 126 ವಿಮಾನ ನಿಲ್ದಾಣಗಳನ್ನು ಹೊಂದಿರುವ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಹದಿಮೂರು ವಿಮಾನ ನಿಲ್ದಾಣಗಳನ್ನು ಮಾತ್ರವಲ್ಲದೇ ದೇಶದ ವಿಮಾನಯಾನ ವ್ಯವಹಾರದ ಅರ್ಧಕ್ಕಿಂತಲೂ ಹೆಚ್ಚು ಪಾಲನ್ನು ಹೊಂದಿರುವ ಮತ್ತು ಈಗಾಗಲೇ ಖಾಸಗಿಯವರೂ ತಮ್ಮ ಭಾಗೀದಾರತ್ವ ಹೊಂದಿರುವ ದಿಲ್ಲಿ, ಬೆಂಗಳೂರು, ಮುಂಬಯಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಪೂರ್ಣಪ್ರಮಾಣದಲ್ಲಿ ಪರಭಾರೆ ಮಾಡಲು ಉದ್ದೇಶಿಸಲಾಗಿದ್ದು, ಅದರಿಂದ ಸರ್ಕಾರ ತನ್ನ ಬೊಕ್ಕಸಕ್ಕೆ 2.5 ಲಕ್ಷ ಕೋಟಿ ರೂ.ಗಳನ್ನು ತರುವುದಾಗಿ ಹೇಳಲಾಗಿದೆ.

60) ಗುರಿ: MRO (Maintenance Repair and Operations) ಸೇವೆಗಳ ಮೇಲಿನ ತೆರಿಗೆಯನ್ನು ತಗ್ಗಿಸುವುದು ಮತ್ತು ಅದಕ್ಕೆ ಮೂಲಸೌಕರ್ಯ ದರ್ಜೆಯನ್ನು ನೀಡುವುದು.

ಸಾಧನೆ: ವಿಮಾನಯಾನ ಕ್ಷೇತ್ರದಲ್ಲಿ ಇಂಧನ ಬಿಟ್ಟರೆ ಅತಿ ಹೆಚ್ಚಿನ ವೆಚ್ಚ ಇರುವ ನಿರ್ವಹಣೆ, ದುರಸ್ತಿ, ಓವರಾಲಿಂಗ್ ಸೇವೆಗಳಿಗೆ 2014ರ ಜನವರಿಯಲ್ಲೇ ಮೂಲಸೌಕರ್ಯ ಸೇವೆಯ ದರ್ಜೆ ನೀಡಲಾಗಿದೆ. 18% ಇದ್ದ MRO ಮೇಲಿನ GSTಯನ್ನು 2020 ಮಾರ್ಚ್ ತಿಂಗಳಲ್ಲಿ 5%ಗೆ ಇಳಿಸಲಾಗಿದೆ.

61) ಗುರಿ: ಟ್ರಾನ್ಸ್ಶಿಪ್ಮೆಂಟ್ ಹಬ್‌ಗಳನ್ನು ರೂಪಿಸುವ ಮೂಲಕ ’ಫ್ಲೈ-ಫ್ರಂ-ಇಂಡಿಯಾ’ಕ್ಕೆ ಪ್ರೋತ್ಸಾಹ

ಸಾಧನೆ: ದಿಲ್ಲಿ, ಚೆನ್ನೈ, ಮುಂಬಯಿ ಮತ್ತು ಕೋಲ್ಕತಾಗಳಲ್ಲಿ ಅಧ್ಯಯನ ನಡೆಸಲಾಗಿದೆ. ಅಂತಿಮವಾಗಿ ದಿಲ್ಲಿ ಮಾತ್ರ ಟ್ರಾನ್ಸ್ಶಿಪ್ಮೆಂಟ್ ಹಬ್ ಆಗಿ 2019ರಿಂದ ಕಾರ್ಯಾಚರಿಸುತ್ತಿದೆ.

ಬಂದರು, ನೌಕಾಯಾನ ಮತ್ತು ಒಳನಾಡು ಜಲಸಾರಿಗೆ

62) ಗುರಿ: ಕರಾವಳಿಯಲ್ಲಿ ಶಿಪ್ಪಿಂಗ್ ಮತ್ತು ಒಳನಾಡು ಜಲಸಾರಿಗೆ ಬಳಸಿ ಸರಕು ಸಾಗಣೆಯನ್ನು 6%ನಿಂದ 12%ಗೆ ಹೆಚ್ಚಿಸುವುದು; ಬಂದರುಗಳ ಸರಕು ನಿಭಾವಣೆ ಸಾಮರ್ಥ್ಯವನ್ನು 2500 ಮಿಲಿಯ ಮೆಟ್ರಿಕ್ ಟನ್ನಿಗೆ ಹೆಚ್ಚಿಸುವುದು; ಪ್ರಮುಖ ಬಂದರುಗಳಲ್ಲಿ ಸರಕು ಹ್ಯಾಂಡ್ಲಿಂಗ್ ಟರ್ನ್‌ಅರೌಂಡ್ ಸಮಯವನ್ನು 3.44ದಿನಗಳಿಂದ 1-2ದಿನಗಳಿಗೆ ಇಳಿಸುವುದು; ಒಳನಾಡು ಜಲಸಾರಿಗೆಯಲ್ಲಿ ಸರಕು ಸಾಗಣೆಯನ್ನು 55.2 ಮಿಲಿಯ ಮೆಟ್ರಿಕ್ ಟನ್ನಿನಿಂದ 60-70 ಮಿಲಿಯ ಮೆಟ್ರಿಕ್ ಟನ್ನಿಗೆ ಹೆಚ್ಚಿಸುವುದು.

ಸಾಧನೆ:

* ಬಂದರುಗಳ ಸರಕು ನಿಭಾವಣೆ ಸಾಮರ್ಥ್ಯ 2019ರಲ್ಲಿ 699ಮಿಲಿಯ ಮೆಟ್ರಿಕ್ ಟನ್ ಇತ್ತು ಅದು 2020ರಲ್ಲಿ 704 ಮಿಲಿಯ ಮೆಟ್ರಿಕ್ ಟನ್ ಆಗಿದೆ. (ಮಾಹಿತಿ ಮೂಲ: ಇಂಡಿಯನ್ ಪೋರ್ಟ್ಸ್ ಅಸೋಸಿಯೇಷನ್)

* ಪ್ರಮುಖ ಬಂದರುಗಳಲ್ಲಿ ಸರಕು ಹ್ಯಾಂಡ್ಲಿಂಗ್ ಟರ್ನ್‌ಅರೌಂಡ್ ಸಮಯ 2014-15ರಲ್ಲಿ 4 ದಿನಗಳಿದ್ದುದು, 2019-20ರ ಹೊತ್ತಿಗೆ 2.59 ದಿನಗಳಿಗೆ ಇಳಿದಿದೆ. (ಮಾಹಿತಿ ಮೂಲ: ಮನಿ ಕಂಟ್ರೋಲ್)

* ಒಳನಾಡು ಜಲಸಾರಿಗೆಯಲ್ಲಿ ಸರಕು ಸಾಗಣೆ 2012-13ರಲ್ಲಿದ್ದ 63.8 ಮಿಲಿಯ ಮೆಟ್ರಿಕ್ ಟನ್‌ನಿಂದ 2020-21ರಲ್ಲಿ 83.61 ಮಿಲಿಯ ಮೆಟ್ರಿಕ್ ಟನ್ನಿಗೆ ಹೆಚ್ಚಿದೆ (ಮಾಹಿತಿ ಮೂಲ: shipmin.gov.in)

63) ಗುರಿ: ಸಾಗರಮಾಲಾ ಯೋಜನೆಯನ್ನು ಪೂರ್ಣಗೊಳಿಸುವುದು ಮತ್ತು ಡ್ರೆಜಿಂಗ್ ಮಾರುಕಟ್ಟೆಯನ್ನು ಖಾಸಗೀಕರಿಸುವುದು

ಸಾಧನೆ:

* ಡ್ರೆಡ್ಜಿಂಗಿಗೆ ಪಿಪಿಪಿ ಮಾದರಿಯನ್ನು ಅಳವಡಿಸುವ ಹೊಸ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ 2021 ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿದೆ.

* ಸಾಗರಮಾಲಾ ಯೋಜನೆಯ ಗೋಲ್ ಪೋಸ್ಟನ್ನು 2035ಕ್ಕೆ ಮುಂದೂಡಲಾಗಿದ್ದು, ಸದ್ಯ 6,01,483 ರೂ ವೆಚ್ಚದ ಒಟ್ಟು 574 ಯೋಜನೆಗಳಲ್ಲಿ, 30,228 ರೂ. ವೆಚ್ಚದ 121 ಯೋಜನೆಗಳು ಪೂರ್ಣಗೊಂಡಿವೆ ಮತ್ತು 3,09,048 ರೂ ವೆಚ್ಚದ ಸುಮಾರು 201 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. (ಮಾಹಿತಿ: sagaramala.gov.in)

64) ಗುರಿ: ಹೊಸ ಮರ್ಚಂಟ್ ಶಿಪ್ಪಿಂಗ್ ಕಾಯ್ದೆ ಜಾರಿಗೆ ತರುವುದು.

ಸಾಧನೆ: ಹೊಸ ಮರ್ಚಂಟ್ ಶಿಪ್ಪಿಂಗ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುವುದು ಬಾಕಿ ಇದೆ.

65) ಗುರಿ: ಒಳನಾಡು ಜಲಸಾರಿಗೆ ದೋಣಿಗಳಿಗೆ ಬಂಡವಾಳ ಪ್ರೋತ್ಸಾಹ ಮತ್ತು ಅದನ್ನು ಆದ್ಯತೆಯ ಸಾಲವಾಗಿ ಪರಿಗಣಿಸುವುದು.

ಸಾಧನೆ: ಸಂಸತ್ತು ಒಳನಾಡು ಜಲಸಾರಿಗೆ ದೋಣಿಗಳ ಕಾಯಿದೆ, 2021ಕ್ಕೆ 2, ಆಗಸ್ಟ್ 2021ರಂದು ಅಂಗೀಕಾರ ನೀಡಿದೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1

ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-2

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...