ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಅಪ್ರಾಪ್ತ ಬಾಲಕಿಯ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ್ದು, ಬಾಲಕಿ ಗರ್ಭಾವತಿಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ನಾಲ್ವರು ಶಂಕಿತರನ್ನು ಕಡಪಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತೆಯು ಪ್ರದ್ದಟೂರು ಪಟ್ಟಣದ ದೇವಸ್ಥಾನದ ಬಳಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಕುರಿತು ವರದಿಯಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಾಲಕಿಯು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಗ್ರಾಮೀಣ ಮಹಿಳಾ ಪೊಲೀಸ್ ಸಿಬ್ಬಂದಿ (ಗ್ರಾಮ ಮಹಿಳಾ ಸಂರಕ್ಷಣಾ ಕಾರ್ಯದರ್ಶಿ) ಗಮನಿಸಿದ್ದು, ಬಾಲಕಿಯನ್ನು ಆಶ್ರಯ ಮನೆಗೆ ಸ್ಥಳಾಂತರಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಕುರಿತು ಬಾಲಕಿ ಮಾತನಾಡಿರುವ ವಿಡಿಯೊ ಕೂಡ ಆನ್‌ಲೈನ್‌ನಲ್ಲಿ ಹರಿದಾಡಿದೆ.
“ಸ್ಥಳೀಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ಅಪರಾಧವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ” ಎಂದು ಪ್ರತಿಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ. ಆದರೆ ಕಡಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನ್ಬುರಾಜನ್ ಆರೋಪವನ್ನು ನಿರಾಕರಿಸಿದ್ದಾರೆ. “ಪ್ರಕರಣ ದಾಖಲಿಸಲು ವಿಳಂಬವಾಗಿದೆ. ಮೇ 11ರ ಬುಧವಾರದಂದು ಪ್ರಕರಣ ದಾಖಲಿಸಲಾಗಿದ್ದು, ನಾಲ್ವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿರಿ: ತಮಿಳುನಾಡು: ‘ದನದ ಮಾಂಸ’ ಇಲ್ಲದ ಅಂಬೂರ್ ಬಿರಿಯಾನಿ ಹಬ್ಬ; ದಲಿತರಿಂದ ವ್ಯಾಪಕ ಟೀಕೆ
“ಬಾಲಕಿಯ ಕುಟುಂಬ ಸದಸ್ಯರು ಯಾವುದೇ ಔಪಚಾರಿಕ ದೂರು ನೀಡಿರಲಿಲ್ಲ” ಎಂದು ‘ದಿ ಹಿಂದೂ’ ವರದಿ ಮಾಡಿದೆ.
“ನಾವು ಅವರೊಂದಿಗೆ ಸಮಾಲೋಚಿಸಲು ಮತ್ತು ದೂರು ತೆಗೆದುಕೊಳ್ಳಲು ಪ್ರಯತ್ನಿಸಿದ್ದೇವೆ. ಆದರೆ ಅವರು ದೂರು ನೀಡಲಿಲ್ಲ. ಆಕೆಯ ತಂದೆ ಮಾನಸಿಕವಾಗಿ ನೊಂದಿದ್ದರು, ದೂರು ನೀಡಲು ಸಾಧ್ಯವಾಗಲಿಲ್ಲ. ನಿನ್ನೆ (ಬುಧವಾರ) ಬೆಳಗ್ಗೆ ಐಸಿಡಿಎಸ್ (ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವಿಸಸ್) ಅಧಿಕಾರಿಯೊಬ್ಬರು ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ನಂತರ ವೀಡಿಯೊವನ್ನು ಪರಿಶೀಲಿಸಲಾಗಿದೆ. ನಾಲ್ವರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ” ಎಂದು ಎಸ್‌ಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಮೇ 4 ರಂದು ಗ್ರಾಮ ಮಹಿಳಾ ಸಂರಕ್ಷಣಾ ಕಾರ್ಯದರ್ಶಿ (ಜಿಎಂಎಸ್‌ಕೆ) ಗರ್ಭಿಣಿ ಬಾಲಕಿಯನ್ನು ಮೊದಲು ಗಮನಿಸಿ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಮಾಹಿತಿ ನೀಡಿದ್ದರು. ಆದರೆ ಬಾಲಕಿ ಜಿಎಂಎಸ್‌ಕೆ ಸಹಾಯವನ್ನು ನಿರಾಕರಿಸಿ ಅಲ್ಲಿಂದ ತೆರಳಿದ್ದಳು” ಎಂದು ಹೆಚ್ಚುವರಿ ಎಸ್ಪಿ ಪೂಜಿತಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಂತರ ಮೇ 8 ರಂದು, ಜಿಎಂಎಸ್‌ಕೆ ಬಾಲಕಿಯನ್ನು ಮತ್ತೆ ಪತ್ತೆಹಚ್ಚಿ ಪೊಲೀಸ್ ಠಾಣೆಗೆ ಕರೆದೋಯ್ದರು. ಬಾಲಕಿ ತನ್ನ ಕುಟುಂಬ ಅಥವಾ ಪೋಷಕರ ಬಗ್ಗೆ ವಿವರಗಳನ್ನು ಹಂಚಿಕೊಳ್ಳದ ಕಾರಣ ಪೊಲೀಸ್ ಅಧಿಕಾರಿಗಳು ಬಾಲಕಿಯನ್ನು ಆಶ್ರಯ ಮನೆಗೆ ಕಳುಹಿಸಿದರು. ಮೇ 9 ರಂದು ಪೊಲೀಸರು ಆಕೆಯ ತಂದೆ ಮತ್ತು ಸಂಬಂಧಿಕರನ್ನು ಪತ್ತೆ ಹಚ್ಚಿದರು. ಆದರೆ ಪೋಷಕರು ಪ್ರಕರಣ ದಾಖಲಿಸಲು ನಿರಾಕರಿಸಿದರು. ಮೇ 11ರಂದು, ಐಸಿಡಿಎಸ್ ಅಧಿಕಾರಿಯ ದೂರಿನ ಆಧಾರದ ಮೇಲೆ, ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ
ಆರು ತಿಂಗಳ ಹಿಂದೆ ಇಬ್ಬರು ಯುವಕರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನಾಲ್ಕು ತಿಂಗಳ ಹಿಂದೆ ಮತ್ತಿಬ್ಬರು ಯುವಕರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಎಸ್ಪಿ ಪೂಜಿತಾ ಅವರನ್ನು ಪ್ರದತ್ತೂರಿಗೆ ಕಳುಹಿಸಲಾಗಿದೆ. ಲೈಂಗಿಕ ಅಪರಾಧ ಮಕ್ಕಳ ರಕ್ಷಣೆ ಕಾಯ್ದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
“ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಹುಟ್ಟೂರು ಕಡಪಾ ಜಿಲ್ಲೆಯಲ್ಲಿ ನಡೆದ ಘಟನೆಯ ಕುರಿತು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ” ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ವೈಎಸ್ಆರ್ ಕಾಂಗ್ರೆಸ್ (ವೈಎಸ್ಆರ್ಸಿಪಿ) ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಪರಾಧಿಗಳನ್ನು ಹಿಡಿಯುವ ಪ್ರಯತ್ನ ಮಾಡುವ ಬದಲು ಸಾಮೂಹಿಕ ಅತ್ಯಾಚಾರವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಪೊಲೀಸರು ನಿಯಮ ಉಲ್ಲಂಘಿಸಿ ಬಾಲಕಿಯನ್ನು ಖಾಸಗಿ ಮನೆಗೆ ಸ್ಥಳಾಂತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.