ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು.
ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ ದೃಷ್ಟಿಕೋನವು ಸಂವಿಧಾನ ವಿರೋಧಿಯಾಗಿದೆ. ಸೋದರತ್ವಕ್ಕೆ ಮತ್ತು ದೇಶದ ಏಕತೆಗೆ ಮಾರಕವಾಗಿರುವ ಇವರ ಮಾತುಗಳು, ಮತದಾನದ ಹಕ್ಕು ಉಳಿಯಬೇಕು ಎಂದು ಕೇಳುವವರ ಮೇಲೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟುವ ಮೂಲಕ ಸುಳ್ಳುಗಳನ್ನು ಹರಡುತ್ತಿವೆ. ಈ ಸುಳ್ಳುಗಳ ಮುಖವಾಡವನ್ನು ನಾವು ಬಯಲು ಮಾಡಬೇಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ದೃಷ್ಟಿಕೋನದಿಂದ ನೋಡುವುದಾದರೆ, ಇ-ಶ್ರಮ್ ಕಾರ್ಡ್ ಪಡೆದ ಒಂದು ಕೋಟಿ ಏಳು ಲಕ್ಷ ಮಂದಿ, ಕಟ್ಟಡ ಕಾರ್ಮಿಕರು ಹಾಗೂ ಶಾಪ್ ಅಂಡ್ ಎಸ್ಟಾಬ್ಲಿಷ್ಮೆಂಟ್ ಕಾಯ್ದೆಯಡಿ ಇರುವ ಲಕ್ಷಾಂತರ ಕಾರ್ಮಿಕರಲ್ಲಿ ಸುಮಾರು 60 ಪ್ರತಿಶತದಷ್ಟು ಮಂದಿ ವಲಸೆ ಕಾರ್ಮಿಕರು. ಈ ನಾಡನ್ನು ಕಟ್ಟುತ್ತಿರುವ ಇವರ ಬಳಿ 2002ರ ದಾಖಲೆಗಳನ್ನು ಕೇಳುವುದು ಎಷ್ಟರಮಟ್ಟಿಗೆ ಸರಿ? ಇವರನ್ನು ಹೊರಗಿಡುವ ಕೆಲಸ ಖಂಡನೀಯ. ರಾಜ್ಯ ಸರ್ಕಾರವೂ ಸಹ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಸೌಲಭ್ಯಗಳನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕುತ್ತಿದ್ದು, ಇದನ್ನು ವಿರೋಧಿಸಬೇಕಿದೆ. ನಾವು ಕರ್ನಾಟಕದಲ್ಲಿ ಎಸ್ಐಆರ್ ಅನ್ನು ಸೋಲಿಸಲೇಬೇಕಿದೆ ಎಂದು ಅವರು ಕರೆ ನೀಡಿದರು.
ಹಿಂದೆ ಇದೇ ಪ್ರೀಡಂ ಪಾರ್ಕ್ನಲ್ಲಿ 25 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ದಾಖಲೆಗಳನ್ನು ಕೇಳುವ ಸರ್ಕಾರದ ವಿಧಾನದ ವಿರುದ್ಧ ಹೋರಾಡಿದ್ದೆವು. ಐದು ಕೋಟಿ ನಾಲ್ಕು ಲಕ್ಷ ಜನರ ಮ್ಯಾಪಿಂಗ್ ಕೆಲಸದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ದೊಡ್ಡದು. ಆದರೆ, ಈ ಕೆಲಸದ ನಂತರ ಕಾರ್ಯಕರ್ತೆಯರು ಜೈಲಿಗೆ ಹೋಗುವ ಆತಂಕವಿದೆ ಎಂದು ಆಗಲೇ ಸರ್ಕಾರಕ್ಕೆ ಎಚ್ಚರಿಸಿದ್ದೆವು. ಬಿಎಲ್ಒಗಳು 2002ರ ನಂತರದ ದಾಖಲೆಗಳನ್ನು ಕೇಳುತ್ತಿದ್ದಾರೆ. 2001ರ ದಾಖಲೆಗಳಿಲ್ಲದ ಸೊಸೆಯಂದಿರನ್ನು ಮನೆಯ ಮಗಳು ಅಥವಾ ಮೊಮ್ಮಗಳೆಂದು ದಾಖಲಿಸಲು ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಇದರಿಂದ ಕೆಲಸ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಹಿಂದುಳಿದ ವರ್ಗಗಳ ವಾಸಸ್ಥಳಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ತಮಿಳುನಾಡು-ಕೇರಳದಲ್ಲಿ ನಡೆಯದ ಈ ಕುತಂತ್ರ ಕರ್ನಾಟಕದಲ್ಲಿ ನಡೆಯದಂತೆ ಸರ್ಕಾರ ನೋಡಿಕೊಳ್ಳಬೇಕು. ಜನರು ದಾಖಲೆ ಒದಗಿಸುವ ರೀತಿ ಸರ್ಕಾರ ಕೆಲಸ ಮಾಡಬೇಕೇ ಹೊರತು, ದಾಖಲೆ ಕೇಳಿ ಅವರನ್ನು ಸತಾಯಿಸಬಾರದು ಎಂದು ವರಲಕ್ಷ್ಮಿ ಅವರು ಸರ್ಕಾರವನ್ನು ಒತ್ತಾಯಿಸಿದರು.
ʼಚುನಾವಣಾ ಆಯೋಗಕ್ಕೆʼ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಅತಾರ್ತಿಕ ʼಲಾಜಿಕಲ್ ಡಿಸ್ಕ್ರಿಪೆನ್ಸಿʼ ಸಾಫ್ಟ್ವೇರ್ ಅನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.
- ನೀವು ತಯಾರಿಸುವ ಮತದಾರರ ಪಟ್ಟಿಯ ಕರಡು ಪ್ರತಿಯನ್ನು (ಪರಿಶೀಲನೆಗೆ ಅವಕಾಶವಿರುವಂತೆ) ಕಂಪ್ಯೂಟರ್ ಓದುವ ಮಾದರಿಯಲ್ಲಿ ಕೊಡಬೇಕು.
- ಚುನಾವಣಾ ಮ್ಯಾನ್ಯೂಯಲ್ನಲ್ಲಿ ನೀಡಲಾಗಿರುವ ನಿರ್ದೇಶನದಂತೆ, ಕರಡು ಮತದಾರರ ಪಟ್ಟಿಯನ್ನು ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಸಾರ್ವಜನಿಕ ಪರಿಶೀಲನೆಗೆ ಮತ್ತು ತಿದ್ದುಪಡಿಗೆ ಒಳಪಡಿಸಬೇಕು.
- ಅಪೀಲ್ ಸಲ್ಲಿಸಲು ಕನಿಷ್ಟ ಆರು ತಿಂಗಳ ಸಮಯಾವಕಾಶ ನೀಡಲೇ ಬೇಕು.
‘ರಾಜ್ಯ ಸರಕಾರಕ್ಕೆʼ ಪ್ರತಿರೋಧ ಸಮಾವೇಶದ ಆಗ್ರಹಗಳು:
- ಸರಳ ವಿಧಾನ ಬಳಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ, ಚೆಕ್ ಲಿಸ್ಟ್ ರೀತಿ ಕೆಲಸ ಮಾಡುವ, ರಾಜ್ಯದ ಸ್ವಾಲಂಬಿ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಬೇಕು.
- ಅರ್ಹ ಮತದಾರರಿಗೆ ಗ್ಯಾರಂಟಿಯಾಗಿ ಸ್ಮಾರ್ಟ್ ಕಾರ್ಡ್ ವಿತರಿಸಬೇಕು.
- ಎಸ್ಐಆರ್ ಕೇಳುವ ದಾಖಲೆಗಳಲ್ಲಿದ ಅರ್ಹ ಮತದಾರರಿಗೆ ಸ್ಥಳದಲ್ಲೇ ಅಗತ್ಯ ದಾಖಲೆ ಒದಗಿಸಬೇಕು.


