Homeಮುಖಪುಟದ್ವೇಷ ಪ್ರಚಾರಕರ, ನಕಲಿ ಸುದ್ದಿ ಸೃಷ್ಟಿಕರ್ತರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಜುಬೇರ್ ಬಂಧನ

ದ್ವೇಷ ಪ್ರಚಾರಕರ, ನಕಲಿ ಸುದ್ದಿ ಸೃಷ್ಟಿಕರ್ತರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಜುಬೇರ್ ಬಂಧನ

ದ್ವೇಷ ಪ್ರಚಾರಕರ, ನಕಲಿ ಸುದ್ದಿ ಸೃಷ್ಟಿಕರ್ತರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಜುಬೇರ್ ಬಂಧನ

- Advertisement -
- Advertisement -

ಬೂಮ್ ಲೈವ್, ಫ್ಯಾಕ್ಟ್ಲಿ, ಕ್ವಿಂಟ್ ವೆಬ್‌ಕೂಫ್, ಫ್ಯಾಕ್ಟ್‌ಚೆಕರ್, ಲಾಜಿಕಲ್ ಇಂಡಿಯಾ, ಆಲ್ಟ್‌ನ್ಯೂಸ್.. ಹೀಗೆ ಇಂಗ್ಲಿಷ್ ಭಾಷೆಯಲ್ಲಿ 10ಕ್ಕೂ ಹೆಚ್ಚು ಫ್ಯಾಕ್ಟ್‌ಚೆಕ್ ಮಾಡುವ, ಸುಳ್ಳ ಸುದ್ದಿಗಳನ್ನು ಬಯಲುಗೊಳಿಸುವ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿವೆ. ನೂರಾರು ಪತ್ರಕರ್ತರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಇವರು ಪ್ರಜಾತಂತ್ರವನ್ನು ಬಲಗೊಳಿಸಲು, ಅಪರಾಧಗಳನ್ನು ಕಡಿಮೆ ಮಾಡಲು ಪೊಲೀಸರಿಗೆ ಸಹಾಯ ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ಸರ್ಕಾರಕ್ಕೆ ಅಭಿಮಾನವಿರಬೇಕು. ಆದರೆ ನಮ್ಮಲ್ಲಿ ಎಲ್ಲಾ ಉಲ್ಟಾ! ಪ್ರತಿನಿತ್ಯ ಸುಳ್ಳು ಹೇಳುವ, ದ್ವೇಷ ಹರಡುವ ಟಿವಿ ಚಾನೆಲ್‌ಗಳನ್ನು ಕಂಡರೆ ಸರ್ಕಾರಕ್ಕೆ ಪ್ರೀತಿ. ಬದಲಿಗೆ ಸತ್ಯ ಹೇಳುವವರನ್ನು ಕಂಡರೆ ದ್ವೇಷ. ಅದಕ್ಕಾಗಿಯೇ ಆಲ್ಟ್‌ನ್ಯೂಸ್‌ನ ಸಹ ಸಂಪಾದಕರಾದ ಮೊಹಮ್ಮದ್ ಜುಬೇರ್‌ರನ್ನು ದೆಹಲಿ ಪೊಲೀಸರು 2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿ ಬಂಧಿಸಿದ್ದಾರೆ!

ಸುಳ್ಳು ಸುದ್ದಿಗಳನ್ನು, ತಪ್ಪು ಮಾಹಿತಿಗಳನ್ನು ಬಯಲುಗೊಳಿಸುವುದು ಆಳುವ ಸರ್ಕಾರಕ್ಕೆ ಮಾರಕವೇ? ಹೌದು ಸರ್ಕಾರವೊಂದು ಸುಳ್ಳಿನ ಮೇಲೆ, ಅರ್ಧ ಸತ್ಯ, ತಪ್ಪು ಮಾಹಿತಿಯ ಮೇಲೆ ಅಧಿಕಾರ ಹಿಡಿದಿದ್ದಾಗ ಅದನ್ನು ಬಯಲುಗೊಳಿಸುವವರನ್ನು ಕಂಡರೆ ಅದಕ್ಕೆ ಭಯ. ಸದ್ಯ ಬಂಧನವಾಗಿರುವ ಜುಬೇರ್ ಕೇವಲ ಸುಳ್ಳು ಸುದ್ದಿಗಳನ್ನು ಮಾತ್ರ ಬಯಲುಗೊಳಿಸುತ್ತಿರಲಿಲ್ಲ, ಅದರೊಟ್ಟಿಗೆ ದ್ವೇಷ ಉಗುಳುವವರನ್ನು, ಧಾರ್ಮಿಕ ದ್ವೇಷ ಹರಡುವವರನ್ನು ಬೆತ್ತಲುಗೊಳಿಸುತ್ತಿದ್ದರು. ಹೇಟ್ ಸ್ಪೀಚ್ ಎಂಬುದು ಭಾರತದಲ್ಲಿ ಪ್ರಚಾರ, ಅಂಧಭಕ್ತರು, ಹಣ ಮತ್ತು ಅಧಿಕಾರ ತಂದುಕೊಡುವ ದೊಡ್ಡ ದಂಧೆಯಾಗಿರುವ ಸಂದರ್ಭದಲ್ಲಿ ಅಂತಹ ದ್ವೇಷ ಪ್ರಚಾರಕರ, ಸುಳ್ಳುಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಜುಬೇರ್‌ರನ್ನು ಬಂಧಿಸಿ, ಹೆದರಿಸುವುದು ಸರ್ಕಾರದ ಕೊನೆಯ ಅಸ್ತ್ರವಾಗಿದೆ.

ಮೊಹಮ್ಮದ್ ಜುಬೇರ್ ಯಾರು?

ಮೂಲತಃ ಕರ್ನಾಟಕದವರಾದ 33 ಆಸುಪಾಸಿನ ವಯಸ್ಸಿನ ಮೊಹಮ್ಮದ್ ಜುಬೇರ್ 2017ರಲ್ಲಿ ಪ್ರತೀಕ್ ಸಿನ್ಹರವರ ಜೊತೆಗೂಡಿ ಆಲ್ಟ್‌ನ್ಯೂಸ್ ಫ್ಯಾಕ್ಟ್ ಚೆಕ್ ವೆಬ್‌ಸೈಟ್ ಆರಂಭಿಸಿದರು. ಟ್ವಿಟರ್‌ನಲ್ಲಿ ಸಕ್ರಿಯವಾಗಿರುವ ಅವರು ಏಕಾಂಗಿಯಾಗಿಯೇ ನೂರಾರು ದ್ವೇಷಭಾಷಣಗಳನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯಾವುದೇ ರಾಜ್ಯದ, ಯಾವುದೇ ಜಿಲ್ಲೆಯಲ್ಲಿ ದ್ವೇಷ ಭಾಷಣ ವರದಿಯಾದಲ್ಲಿ ಅದನ್ನು ಟ್ವಿಟರ್ ಮೂಲಕ ಅಲ್ಲಿನ ಪೊಲೀಸ್ ಮುಖ್ಯಸ್ಥರಿಗೆ ಟ್ಯಾಗ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಅತಿ ಹೆಚ್ಚು ದ್ವೇಷ ಭಾಷಣಗಳಿಗೆ ಕುಖ್ಯಾತಿಯಾಗಿರುವ ಆಳುವ ಬಿಜೆಪಿ ಪಕ್ಷದ ಮುಖಂಡರು ಮತ್ತು ಅದನ್ನು ಬೆಂಬಲಿಸುವ ಸ್ವಾಮೀಜಿಗಳಿಗೆ ಇದು ಮಾರಕವಾಗಿ ಪರಿಣಮಿಸಿತ್ತು.

ಯತಿ ನರಸಿಂಗಾನಂದ ಸರಸ್ವತಿ

2020ರ ದೆಹಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಯತಿ ನರಸಿಂಗಾನಂದ ಸರಸ್ವತಿ ಎಂಬುವವರು ಮುಸ್ಲಿಮರ ವಿರುದ್ಧ ದ್ವೇಷ ಹರಡುವುದರಲ್ಲಿ ನಿಷ್ಣಾತರು. ಇವರ ಹಿಂದೆ ಬಿದ್ದ ಜುಬೇರ್ ಕನಿಷ್ಟ 50 ದ್ವೇಷ ಭಾಷಣಗಳನ್ನು ಹೆಕ್ಕಿ ತೆಗೆದು ಪೊಲೀಸರಿಗೆ ಮುಟ್ಟಿಸಿದ್ದಾರೆ. ಇದರಿಂದ ಯತಿ ನರಸಿಂಗಾನಂದರ ಮೇಲೆ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ. ಕಳೆದ ವರ್ಷ ನಡೆದ ಧರ್ಮ ಸಂಸದ್‌ನಲ್ಲಿನ ದ್ವೇಷ ಭಾಷಣಗಳನ್ನು ಹೈಲೈಟ್ ಮಾಡಿದ್ದು ಸಹ ಇದೇ ಜುಬೇರ್. ಇವರಿಂದಾಗಿ ಹಲವಾರು ಜನರು ತಮ್ಮ ತಪ್ಪು ಮಾಹಿತಿಗಳ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.

ಇತ್ತೀಚಿಗೆ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿವಾದವನ್ನು ಸಹ ಬಯಲಿಗೆಳೆದಿದ್ದು ಜುಬೇರ್. ಟೈಮ್ಸ್‌ನೌ ಚರ್ಚೆಯಲ್ಲಿ ಬಿಜೆಪಿ ವಕ್ತಾರೆಯಾಗಿದ್ದ ನೂಪರ್ ಶರ್ಮಾ ಪ್ರವಾದಿ ನಿಂದನೆ ಮಾಡಿದ್ದರು. ಅದನ್ನು ಜುಬೇರ್ ಆಕ್ಷೇಪಿಸಿದರು. ಚಾನೆಲ್ ತನ್ನ ಎಲ್ಲಾ ಫ್ಲಾಟ್‌ಫಾರಂಗಳಿಂದ ಆ ವಿಡಿಯೋ ಡಿಲೀಟ್ ಮಾಡಿ ಶರ್ಮಾ ಹಾಗೆ ಹೇಳಿಲ್ಲ ಎಂದು ವಾದಿಸಿತು. ಬುದ್ಧಿವಂತ ಜುಬೇರ್ ಆ ವಿಡಿಯೋವನ್ನು ಅಷ್ಟರಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಂಡಿದ್ದರು. ಅದನ್ನು ಟ್ವೀಟ್ ಮಾಡುವ ಮೂಲಕ ಪ್ರಪಂಚಕ್ಕೆ ತಿಳಿಯುವ ಹಾಗೆ ಮಾಡಿದರು. ನಂತರ ನಡೆದಿದ್ದು ನಮಗೆ ಗೊತ್ತೆ ಇದೆ. 16 ರಾಷ್ಟ್ರಗಳು ಭಾರತದ ವಿರುದ್ಧ ಕಿಡಿಕಾರಿ, ಕ್ಷಮೆಯಾಚನೆಗೆ ಪಟ್ಟು ಹಿಡಿದವು. ಕೆಲ ರಾಷ್ಟ್ರಗಳು ಭಾರತ ಮೂಲದ ವಸ್ತುಗಳ ಮಾರಾಟವನ್ನು ಸ್ಥಗಿತಗೊಳಿಸಿ ಬೆದರಿಕೆಯೊಡ್ಡಿದವು.
ಇದು ನರೇಂದ್ರ ಮೋದಿಯವರಿಗೆ ಮುಜುಗರ ತಂದಿಟ್ಟಿತು. ಅನಿವಾರ್ಯವಾಗಿ ಬಿಜೆಪಿ ಪ್ರತಿಕ್ರಿಯಿಸಲೇಬೇಕಾಯ್ತು. ನೂಪೂರ್ ಶರ್ಮಾರನ್ನು ಫ್ರಿಂಜ್ ಎಲಿಮೆಂಟ್ ಎಂದು ಕರೆದು ಪಕ್ಷದಿಂದ ಉಚ್ಚಟಿಸಿತು.

ಟ್ವಿಟರ್‌ನಲ್ಲಿ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಜುಬೇರ್ ಇಸ್ಲಾಮೋಫೋಬಿಯ ವಿರುದ್ಧ ಎಡೆಬಿಡದೆ ಹೋರಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಅಪರಾಧಿಗಳೆಂದು ಬಿಂಬಿಸುವ ಸಂಘಪರಿವಾರ-ಬಿಜೆಪಿಯ ಸಂಚನ್ನು ವಿಫಲಗೊಳಿಸಿದ್ದಾರೆ. ಅದಕ್ಕಾಗಿ ಅವರಿಗೆ ಹಲವಾರು ಬಾರಿ ಜೀವಬೆದರಿಕೆ ಬಂದದ್ದಿದೆ. ಈ ಹಿಂದೆ ಎರಡು ಬಾರಿ ಪೊಲೀಸರು ಅವರ ಮೇಲೆ ಎಫ್‌ಐಆರ್ ಮಾಡಿ ಬಂಧನದ ಬೆದರಿಕೆ ಹಾಕಿದ್ದರು. ಆದರೆ ಜುಬೇರ್ ಮಾತ್ರ ಒಂದಿಂಚು ಹಿಂದೆ ಸರಿಯಲಿಲ್ಲ. ಸತ್ಯ ಮತ್ತು ನ್ಯಾಯಕ್ಕಾಗಿ ಅವರ ಅವಿರತ ಹೋರಾಟವನ್ನು ಮತ್ತಷ್ಟು ಬದ್ಧತೆಯೊಂದಿಗೆ ಮುಂದುವರೆಸಿದ್ದರು.

ಜುಬೇರ್‌ರವರ ಈ ಜನಪರ, ಪ್ರಜಾಪ್ರಭುತ್ವದ ಪರವಾಗಿ ಮಾಡಿದ ಕೆಲಸಗಳನ್ನು ಪರಿಗಣಿಸಿ ಅವರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಾಂತಿ ಸಂಶೋಧನಾ ಸಂಸ್ಥೆ ಓಸ್ಲೊ (PRIO) ನಾಮನಿರ್ದೇಶನ ಮಾಡಿತ್ತು. “ಸತ್ಯ ಪರಿಶೀಲನೆಯ ವೆಬ್‌ಸೈಟ್ ಮೂಲಕ ಗಮನಾರ್ಹ ಕೊಡುಗೆ ನೀಡಿದ ಪ್ರತೀಕ್ ಸಿನ್ಹಾ ಮತ್ತು ಜುಬೇರ್ ಅವರನ್ನು ’ಯೋಗ್ಯ ಅಭ್ಯರ್ಥಿಗಳು’ ಎಂದು ಪರಿಗಣಿಸಲಾಗಿದೆ. ಆಲ್ಟ್ ನ್ಯೂಸ್ ಬರೆದ ಸತ್ಯಶೋಧನಾ ಲೇಖನಗಳು ಹಲವು ನಕಲಿ ಸುದ್ದಿಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ನಿಂದಿಸುವ ನಿಟ್ಟಿನಲ್ಲಿ ಹಬ್ಬುತ್ತಿರುವ ಹಲವು ಸುಳ್ಳುಸುದ್ದಿಗಳ ಫ್ಯಾಕ್ಟ್‌ಚೆಕ್ ನಡೆಸಿದ ಹಿರಿಮೆ ಅವರಿಗಿದೆ” ಎಂದು ತಿಳಿಸಿತ್ತು.

ಜುಬೇರ್ ಕೆಲಸ ಪ್ರಜಾತಂತ್ರವಾದಿಗಳ ಮೆಚ್ಚುಗೆಗೆ ಪಾತ್ರವಾದಂತೆ ಬಲಪಂಥೀಯರ, ಅಂಧಭಕ್ತರ ಕೆಂಗಣ್ಣಿಗೂ ಗುರಿಯಾಗಿದೆ. ಅವರ ಮೇಲೆ ಆನ್‌ಲೈನ್ ದಾಳಿ ಹಿಂದಿನಿಂದಲೂ ನಡೆಯುತ್ತಿದೆ. 2020ರಲ್ಲಿ ಅಶ್ಲೀಲವಾಗಿ, ಅಸಹ್ಯವಾಗಿ ನಿಂದಿಸಿದ್ದ ಜಗದೀಶ್ ಸಿಂಗ್ ಎಂಬ ಬಲಪಂಥೀಯನ ಪ್ರೊಫೈಲ್ ಫೋಟೊ ಹಾಕಿ ಜುಬೇರ್ ಟ್ವೀಟ್ ಒಂದನ್ನು ಮಾಡಿದ್ದರು. “ಹಲೋ ಜಗದೀಶ್ ಸಿಂಗ್, ನಿಮ್ಮ ಮುದ್ದಾದ ಮೊಮ್ಮಗಳಿಗೆ ನೀವು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ಕೆಲಸದ ಬಗ್ಗೆ ತಿಳಿದಿದೆಯೆ? ನಾನು ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಸಲಹೆ ನೀಡುತ್ತೇನೆ” ಎಂದು ಜಗದೀಶ್ ಸಿಂಗ್ ಜೊತೆಗೆ
ಬಾಲಕಿಯೊಬ್ಬರು ನಿಂತಿರುವ ಫೋಟೋವನ್ನು ಬ್ಲರ್ ಮಾಡಿ ಪೋಸ್ಟ್ ಮಾಡಿದ್ದರು. ಅಷ್ಟಕ್ಕೆ “ಅಪ್ರಾಪ್ತ ಬಾಲಕಿಗೆ ಆನ್‌ಲೈನ್ ಕಿರುಕುಳ ಮತ್ತು ಚಿತ್ರಹಿಂಸೆ” ಆರೋಪದಲ್ಲಿ ಜುಬೇರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆ ನಂತರ ಜುಬೇರ್ ಹೈಕೋರ್ಟ್‌ನಲ್ಲಿ ಬಂಧನದಿಂದ ರಕ್ಷಣೆ ಪಡೆದಿದ್ದರು. ಆ ಪ್ರಕರಣದ ಕುರಿತು ವಿಚಾರಣೆಗೆಂದು ಕರೆದ ದೆಹಲಿ ಪೊಲೀಸರು ಮತ್ತೊಂದು ಟ್ವೀಟ್‌ಅನ್ನು ಉಲ್ಲೇಖಿಸಿ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಹರಡುವ ಆರೋಪ ಹೊರಿಸಿ ಬಂಧಿಸಿದ್ದಾರೆ. ನ್ಯಾಯಾಲಯ ಮೊದಲು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಈಗ ಅದನ್ನು ನಾಲ್ಕು ದಿನಗಳ ಕಾಲ ವಿಸ್ತರಿಸಲಾಗಿದೆ. ಜೆಎನ್‌ಯುಗೆ ನುಗ್ಗಿ ಹೆಣ್ಣು ಮಕ್ಕಳ ಮೇಲೆ ಹಲ್ಲೆ ಮಾಡಿದ ಕೋಮಲ್ ಶರ್ಮಾ ಆಗಲಿ, ಪ್ರವಾದಿ ನಿಂದಿಸಿದ ನೂಪುರ್ ಶರ್ಮಾ ಅವರನ್ನಾಗಲಿ ಸರ್ಕಾರ ಇದುವರೆಗೂ ಬಂಧಿಸಿಲ್ಲ. ಏಕೆಂದರೆ ಅವರ ಜಾತಿಸೂಚಕ ಹೆಸರು ಅವರನ್ನು ಎಂತಹ ತಪ್ಪಿನಿಂದಲೂ ಕಾಪಾಡುತ್ತದೆ. ಆದರೆ ಜುಬೇರ್ ಅವರ ಹೆಸರು ಮತ್ತು ನಂಬಿಕೆ ತಪ್ಪೇ ಮಾಡಿಲ್ಲದಿದ್ದರೂ ಬಂಧನಕ್ಕೆ ಒಳಗಾಗುವಂತೆ ಮಾಡುತ್ತದೆ.

ಒಂದು ಟ್ವೀಟ್‌ಗೆ ನಡುಗುವ ಸರ್ಕಾರ

ಜುಬೇರ್ ಮಾಡಿದ್ದ ಆ ಟ್ವೀಟ್ ಯಾವುದೆಂದು ನೋಡಿದರೆ ನಿಮಗೆ ಖಂಡಿತ ನಗು ಬರುತ್ತದೆ. ಜುಬೇರ್ ಅವರನ್ನು ಬಂಧಿಸಲು ಕಾರಣವಾಗಿರುವ ಆ ’ಚಿತ್ರ’ ಎಡಿಟ್ ಮಾಡಿರುವ ಚಿತ್ರವಲ್ಲ, ಬದಲಾಗಿ ಅದು 1983ರ ಹಿಂದಿ ಚಲನಚಿತ್ರವಾದ ’ಕಿಸ್ಸಿ ಸೆ ನಾ ಕೆಹನಾ’ದ (ಯಾರಿಗೂ ಹೇಳ್ಬೇಡಿ) ದೃಶ್ಯವಾಗಿದೆ. ಈ ರೊಮ್ಯಾಂಟಿಕ್ ಹಾಸ್ಯ ಚಲನಚಿತ್ರವನ್ನು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದು, ಚಲನಚಿತ್ರ ಮಂಡಳಿಯೂ ಅದಕ್ಕೆ ’ಯು’ (ಯೂವಿವರ್ಸಲ್-ಎಲ್ಲರೂ ನೋಡಬಹುದಾದ) ಪ್ರಮಾಣಪತ್ರ ನೀಡಿದೆ. ಅಲ್ಲದೆ ಈ ಚಿತ್ರ ಮತ್ತು ದೃಶ್ಯ ಇನ್ನೂ ಯೂಟ್ಯೂಬ್‌ನಲ್ಲಿ ಇವೆ. ಆ ಪೋಸ್ಟ್‌ನ ಚಿತ್ರದಲ್ಲಿ, ’ಹನಿಮೂನ್ ಹೋಟೆಲ್’ ಎಂಬ ಬೋರ್ಡಿಗೆ ಬಣ್ಣ ಬಳಿದು, ’ಹನುಮಾನ್ ಹೋಟೆಲ್’ ಎಂದು ಹಿಂದಿಯಲ್ಲಿ ಬರೆದಂತೆ ತೋರಿಸಲಾಗಿದೆ. ಅದರೊಟ್ಟಿಗೆ ’2014ಕ್ಕೆ ಮುಂಚೆ ಹನಿಮೂನ್ ಹೋಟೆಲ್ ಇದ್ದಿದ್ದು, 2014ರ ನಂತರ ಹನುಮಾನ್ ಹೋಟೆಲ್’ ಆಗಿ ಬದಲಾಗಲಿದೆ. ಸಂಸ್ಕಾರಿ ಹೋಟೆಲ್ ಎಂದು ಜುಬೇರ್ ಟ್ವೀಟ್ ಮಾಡಿದ್ದರು. ಪ್ರೇಮಿಗಳ ದಿನಕ್ಕೆ ತಡೆಯೊಡ್ಡುತ್ತಿದ್ದ ಬಲಪಂಥೀಯ ಕಾರ್ಯಕರ್ತರ ಧೋರಣೆ ಖಂಡಿಸಿ ವ್ಯಂಗ್ಯವಾಗಿ ಮಾಡಿದ್ದ ಪೋಸ್ಟ್ ಅದಾಗಿತ್ತು.

ನೂಪುರ್ ಶರ್ಮಾ

ಅಷ್ಟಕ್ಕೂ ಈ ಸಿನಿಮಾದ ದೃಶ್ಯವನ್ನು ಮೀಮ್ ಆಗಿ ಬಳಸಿಕೊಂಡವರಲ್ಲಿ ಜುಬೇರ್ ಮೊದಲಿಗರೇನಲ್ಲ. 2018ರಲ್ಲಿ, ’ಅವೆಂಜರ್ಸ್: ಇನ್ಫಿನಿಟಿ ವಾರ್’ ಅಭಿಮಾನಿಗಳು ಇದನ್ನೆ ಬಳಸಿಕೊಂಡಿದ್ದವು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಅದೇ ಚಿತ್ರವನ್ನು ತನ್ನ ಸುದ್ದಿಯಲ್ಲಿ ಪ್ರಕಟಿಸಿದೆ. ಅಲ್ಲದೆ ನೂರಾರು ಜನರು ಅದನ್ನು ಟ್ವೀಟ್ ಮಾಡಿದ್ದಾರೆ. ಆದರೆ ಅವರೆಲ್ಲರನ್ನು ಬಿಟ್ಟು ಜುಬೇರ್‌ರನ್ನು ಮಾತ್ರ ಬಂಧಿಸಿದ್ದು ಯಾಕಾಗಿ? ಜುಬೇರ್ ಮುಸ್ಲಿಂ ಸಮುದಾಯದವರು; ಅವರು ಸುಳ್ಳು ಮತ್ತು ದ್ವೇಷ ಭಾಷಣಗಳ ವಿರುದ್ಧ ಕೆಲಸ ಮಾಡುತ್ತಿದ್ದಾರೆ; ಅವರು ಪ್ರಜಾಪ್ರಭುತ್ವವನ್ನು ನಂಬುತ್ತಾರೆ; ಸಂವಿಧಾನದ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ; ಈ ನಾಲ್ಕು ಮೂಲ ಕಾರಣಗಳಿಂದಾಗಿ, ಫೇಕ್ ಅಕೌಂಟ್ ಒಂದು ನೀಡಿದ ದೂರಿನ ಮೇಲೆ ಅವರನ್ನು ಬಂಧಿಸಲಾಗಿದೆ. ಮಾತ್ರವಲ್ಲದೆ 4 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಅಂದರೆ ಅವರ ನಂಬಿಕೆ ಮತ್ತು ಅವರ ಅಸ್ಮಿತೆ ಈ ದೇಶದ ಸರ್ವಾಧಿಕಾರಿಗಳ ಎದೆ ನಡುಗಿಸುತ್ತದೆ ಎಂಬುದು ಜಗಜ್ಜಾಹೀರಾಗುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಹಿಜಾಬ್‌ಗೆ ವಿರುದ್ಧವಾಗಿ ಕೇಸರಿ ಶಾಲು ಧರಿಸುವ ಪರಿಪಾಠ ಬೆಳೆದಿತ್ತು. ಆಗ ಸಂಘಪರಿವಾರ ಮತ್ತು ಬಿಜೆಪಿ ಮುಖಂಡರು ಕುಶಾಲನಗರದ ಕಾಲೇಜೊಂದಕ್ಕೆ ಕಾರಿನಲ್ಲಿ ಹೋಗಿ ಕೇಸರಿ ಶಾಲುಗಳನ್ನು ಹಂಚುತ್ತಿದ್ದರು. ಈ ವಿಡಿಯೋವನ್ನು ನಾನುಗೌರಿ ಟ್ವಿಟರ್ ಹ್ಯಾಂಡಲ್‌ಗೆ ಕಳಿಸಿದ ಜುಬೇರ್ ’ಇದು ನಿಜವೆ? ಎಂದು ಪರಿಶೀಲಿಸಿ ಪೂರ್ಣ ಮಾಹಿತಿ ಕೊಡಿ ಎಂದು’ ಕೇಳಿದರು. ನಾವು ಪರಿಶೀಲಿಸಿ ಅದು ನಿಜ ಎಂದು ಹೇಳಿದ ನಂತರವೇ ಅವರು ಅದನ್ನು ಟ್ವೀಟ್ ಮಾಡಿದ್ದು. ಅಂದರೆ ಅಷ್ಟು ಹುಷಾರಾಗಿ, ಸೂಕ್ಷ್ಮವಾಗಿ ಎರಡೆರಡು ಬಾರಿ ಚೆಕ್ ಮಾಡಿ ಅವರು ತಮ್ಮ ವಿಚಾರ ಮಂಡಿಸುತ್ತಾರೆ. ಅಂತಹ ತಾಳ್ಮೆಯ, ಸತ್ಯ ಮಾತ್ರ ಹೇಳಬೇಕೆಂಬ ಹಂಬಲವಿರುವ, ನೈಜ ಪತ್ರಿಕೋದ್ಯಮ ಮಾಡುತ್ತಿರುವ ಯುವಜನರ ಮೇಲೆ ಸರ್ಕಾರ ಸುಳ್ಳು ಕೇಸು ಹಾಕಿ ಬಂಧಿಸುತ್ತದೆ ಅಂದರೆ ಸರ್ವಾಧಿಕಾರಿ ಧೋರಣೆಯ ಸರ್ಕಾರಕ್ಕೆ ಸತ್ಯ ಹೇಳುವವರನ್ನು ಕಂಡರೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಇತಿಹಾಸ ಬೇರೆಯೇ ಹೇಳುತ್ತದೆ. ಈ ರೀತಿಯ ಸರ್ವಾಧಿಕಾರಿಗಳು ಇತಿಹಾಸದಲ್ಲಿ ನಾಮಾವಶೇಷವಾಗಿರುವುದು ನಮ್ಮ ಕಣ್ಣ ಮುಂದಿದೆ. ಹಾಗೆಯೇ ಜನಪರವಾಗಿ ಹೋರಾಡಿದ ವ್ಯಕ್ತಿಗಳು ಜನಮಾನಸದಲ್ಲಿ ಉಳಿಯುತ್ತಾರೆ. ಜುಬೇರ್ ಅಂತವರ ಸಾಲಿಗೆ ಸೇರುತ್ತಾರೆ.


ಇದನ್ನೂ ಓದಿ: ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...