Homeನ್ಯಾಯ ಪಥJNU: ಕಟ್ಟಲು ಬರೀ ಕೆಲವರು! ಕೆಡವಲು ಮಾತ್ರ ಹಲವರು - ಸುಕನ್ಯಾ ಕನಾರಳ್ಳಿ

JNU: ಕಟ್ಟಲು ಬರೀ ಕೆಲವರು! ಕೆಡವಲು ಮಾತ್ರ ಹಲವರು – ಸುಕನ್ಯಾ ಕನಾರಳ್ಳಿ

ಭಾರತ ಎಂಬ ರಾಷ್ಟ್ರ, ಜೆಯೆನ್ಯು ಎಂಬ ರಾಷ್ಟ್ರೀಯ ವಿಶ್ವವಿದ್ಯಾಲಯ, ಕನ್ನಡ ಎಂಬ ಅಧ್ಯಯನ ಪೀಠ, ಹೀಗೆ ಎಲ್ಲವೂ ಅಸ್ತಿತ್ವಕ್ಕೆ ಬರುವುದು ದೀರ್ಘವಾದ ಬೌದ್ಧಿಕ ಸಂಧಾನಗಳಿಂದ; ಕಟ್ಟುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಷ್ಟೋ ಮಂದಿಯ ಶ್ರಮ ಮತ್ತು ತ್ಯಾಗಗಳಿಂದ ಎನ್ನುವ ಸರಳ ಸತ್ಯ ಬಹುಶಃ ಪ್ರಜ್ಞಾವಂತರಿಗೆ ಮಾತ್ರ ಗೊತ್ತಿರುವಂಥದ್ದು.

- Advertisement -
- Advertisement -

ಈ ಲೇಖನವನ್ನು ಬೆಚ್ಚಗಿನ ದೂರದಿಂದ ಬರೆಯುತ್ತಿಲ್ಲ. ನನ್ನ ವೈಯಕ್ತಿಕ ಕೆಲಸಗಳ ಸಲುವಾಗಿ ಬೆಂಗಳೂರಿಗೆ ಬಂದಿದ್ದರಿಂದ ಮೊನ್ನೆ ದೆಹಲಿಯ ಜೆಯೆನ್ಯುವಿನ ಕನ್ನಡ ಅಧ್ಯಯನ ಪೀಠ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾಲ್ಕು ಮಾತನಾಡಲು ನನ್ನನ್ನೂ ಆಹ್ವಾನಿಸಲಾಗಿತ್ತು. ಕನ್ನಡ ಪೀಠ ಅಸ್ತಿತ್ವಕ್ಕೆ ಬರುವ ಸ್ವಲ್ಪ ಮುಂಚೆಯೇ ನಾನು ಜೆಯೆನ್ಯು ಬಿಟ್ಟಾಗಿದ್ದರಿಂದ ಅದು ನಡೆಸುತ್ತಿದ್ದ ಹತ್ತು ಹಲವು ಕಾರ್ಯಕ್ರಮಗಳನ್ನು ದೂರದಿಂದಲೇ ‘ಛೆ, ನಾನಿರುವಾಗ ಈ ಪೀಠ ಇದ್ದಿದ್ದರೆ ನನ್ನ ಕನ್ನಡಕ್ಕೆ ಸಂಬಂಧಿಸಿದ ಬೌದ್ಧಿಕ ಮತ್ತು ಭಾವನಾತ್ಮಕ ಒಂಟಿತನ ಸ್ವಲ್ಪ ಮಟ್ಟಿಗಾದರೂ ಕಮ್ಮಿಯಾಗಿರುತ್ತಿತ್ತೋ ಏನೋ’ ಅಂತ ಹಳಹಳಿಸಿಕೊಳ್ಳುತ್ತಲೇ ಉತ್ಸಾಹದಿಂದ ಗಮನಿಸುತ್ತಿದ್ದೆ. ಈಗ ಕನ್ನಡ ಪೀಠಕ್ಕೆ ಭೇಟಿ ನೀಡಿ ಕಣ್ಣಾರೆ ನೋಡುವ ಮತ್ತು ಒಂದೇ ರೀತಿಯ ಪ್ರೀತಿಯಿಂದ ಹಲವಾರು ವಿದ್ವಾಂಸರನ್ನು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡಿರುವ ಈ ಪೀಠದ ರಾಜ್ಯೋತ್ಸವದಲ್ಲಿ ಭಾಗಿಯಾಗುವ ಉತ್ಸಾಹ ನನ್ನಲ್ಲಿ ಲವಲವಿಕೆಯನ್ನು ಮೂಡಿಸಿತ್ತು.

 

ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಬಗ್ಗೆ ಮಹತ್ವದ ಒಳನೋಟಗಳನ್ನು ನೀಡುವ ಜಾರ್ಜ್ ಲುಕಾಚ್ ಎಂಬ ಚಿಂತಕನ ಪ್ರಕಾರ ಆಧುನಿಕ ಅರ್ಥದಲ್ಲಿ ರಾಷ್ಟ್ರ ಎಂಬ ಪರಿಕಲ್ಪನೆಯ ಹಿಂದೆ ಸುಲಭವಾಗಿ ಊಹೆಗೆ ನಿಲುಕದ ಅಗಾಧವಾದ ಬೌದ್ಧಿಕ ಶ್ರಮವಿದೆ. ಅದನ್ನು ಒಂದು ಸ್ಥಿತಿಯಿಂದ ಇನ್ನೊಂದು ಹಂತಕ್ಕೆ ನಯವಾಗಿ ಸಾಗುವ ಸಾಮಾಜಿಕ ಸಾತತ್ಯ ಎಂಬ ಪರಿಕಲ್ಪನೆಗೆ ಸುಲಭವಾಗಿ ತಳುಕು ಹಾಕಲು ಬಾರದು.

ರಾಷ್ಟ್ರೀಯ ಹೋರಾಟದ ಆಳ ಅಗಲಗಳನ್ನು ಗ್ರಹಿಕೆಗೆ ದಕ್ಕಿಸಿಕೊಳ್ಳಬಲ್ಲವರಿಗೆ ಮಾತ್ರ ಜೆಯೆನ್ಯು ಎನ್ನುವುದು ಭಾರತವೆಂಬ ರಾಷ್ಟ್ರವನ್ನು ಕಟ್ಟುವಾಗಿನ ಆಶಯ ಮತ್ತು ಕಾಳಜಿಗಳ ಸಾರಸಂಗ್ರಹ ಎಂದು ಅರ್ಥವಾಗಬಲ್ಲದು. ಅಂತೆಯೇ ಜೆಯೆನ್ಯು ಭಾರತ ಎಂಬ ರಾಷ್ಟ್ರದ ನೈತಿಕ ಪಡಿಜೀವ ಅಥವಾ ಆತ್ಮಸಮ ಎನ್ನುವ ಸತ್ಯ ಅರ್ಥವಾಗುವುದು ಒಂದೋ ರಾಷ್ಟ್ರೀಯ ಹೋರಾಟದಲ್ಲಿ ಪ್ರಾಣವನ್ನೂ ಪಣಕ್ಕಿಟ್ಟು ಮಾಡಿ ಮಡಿದವರಿಗೇ ಹೊರತು ಅದರಿಂದ ಪಲಾಯನ ಮಾಡಿದವರಿಗಲ್ಲ.

ಹಾಗೆಯೇ ಇರುವೆಗಳು ಕಣಕಣವನ್ನೂ ಹೊತ್ತು ಕಟ್ಟಿದ ಹುತ್ತದಲ್ಲಿ ಬಂದು ನೆಲೆಯೂರಿ ಬುಸ್ ಎಂದು ತಲೆಯೆತ್ತುವ ಹಾವಿನಂತಹ ಹುಸಿ ರಾಷ್ಟ್ರಪ್ರೇಮಿಗಳಿಗೂ ಅಲ್ಲ. ಅಂತಹ ಶ್ರಮ, ಭಾಷಾಪ್ರೀತಿ ಮತ್ತು ಜನಪರತೆಯನ್ನು ಅರ್ಥಮಾಡಿಕೊಳ್ಳಲು ಬೌದ್ಧಿಕ ಪ್ರಾಮಾಣಿಕತೆಯಾದರೂ ಬೇಕು. ಅದೂ ಇಲ್ಲದೇ ತೆರೆಮರೆಯಲ್ಲಿ ಅಡಗಿ ಹಸಿಹಸಿಯಾದ ಸುಳ್ಳುಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುತ್ತಾ ದೇಶಪ್ರೇಮವನ್ನು ಮೆರೆಯುವ ಹುಸಿ ಸರದಾರರಿಗೆ ಒಂದು ವಿಶ್ವವಿದ್ಯಾಲಯದ ಸ್ಥಾಪನೆಗೆ ಅದೆಷ್ಟು ಕಾಲ ಮತ್ತು ಶ್ರಮ ವ್ಯಯವಾಗಿದೆ, ಅದು ಇಡೀ ದೇಶವನ್ನು ಹೇಗೆ ಒಳಗೊಂಡು ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಹರವನ್ನು ಪಡೆದುಕೊಂಡಿದೆ ಮತ್ತು ಅಂತಹ ವಿಶ್ವವಿದ್ಯಾಲಯ ದೇಶಕ್ಕೆ ಅದೆಷ್ಟರಮಟ್ಟಿಗೆ ಅತ್ಯುತ್ತಮ ಚಿಂತಕ ಮನಸ್ಸುಗಳನ್ನು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದ್ವಾಂಸರನ್ನು ನೀಡಿದೆ ಎನ್ನುವುದರ ಕಲ್ಪನೆ ಸುಲಭವಾಗಿ ದಕ್ಕಲಾರದು.

ಪ್ರೊ.ರಾಕೇಶ್ ಬಾಟಬ್ಯಾಲ್ ಬರೆದಿರುವ JNU: The Making of a University ಎಂಬ ಆಳವಾದ ಸಂಶೋಧನೆಯಿಂದ ಹೊರಹೊಮ್ಮಿದ ಕೃತಿ 2015ರಲ್ಲಿ ಪ್ರಕಟವಾಯಿತು. ಅದು 1964ರಲ್ಲಿ ಅಸ್ತಿತ್ವಕ್ಕೆ ಬಂದ ಈ ವಿಶ್ವವಿದ್ಯಾಲಯದ ಹಿಂದಿನ ಬೌದ್ಧಿಕ ಮತ್ತು ರಾಜಕೀಯ ಸಂಕಲ್ಪಶಕ್ತಿಯ ಚರಿತ್ರೆಯನ್ನು ನಿರೂಪಿಸುತ್ತಾ ಹೋಗುತ್ತದೆ. ಜೊತೆಗೆ 1989ರಿಂದ ಈ ಜೆಯೆನ್ಯು, ಪ್ರಾಬಲ್ಯವನ್ನು ಪಡೆದುಕೊಳ್ಳುತ್ತಿದ್ದ ರಾಜಕೀಯ ಶಕ್ತಿಗಳ ಹಿನ್ನೆಲೆಯಲ್ಲಿ ಹೇಗೆ ವಿರುದ್ಧ ನೆಲೆಗೆ ಜಾರಿಕೊಳ್ಳುತ್ತಿದೆ ಎನ್ನುವುದನ್ನೂ ನಿರಚಿಸುತ್ತಾ ಸಾಗುತ್ತದೆ. ಈ ಎಲ್ಲಾ ಸಂಘರ್ಷಗಳ ನಡುವೆಯೂ ಜೆಯೆನ್ಯುವಿನ ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಅದರ ರಾಷ್ಟ್ರೀಯ ಗುಣಗಳನ್ನು ಕಾಯ್ದುಕೊಳ್ಳುವ ಜೊತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಬೌದ್ಧಿಕ ಸ್ಪಷ್ಟತೆಯನ್ನು ಕಾಪಾಡಿಕೊಂಡು ಹೋರಾಟದ ಸ್ವರೂಪವನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋಗುತ್ತದೆ. ಪಾರ್ಲಿಮೆಂಟರಿ ಚರ್ಚೆಗಳು, ಪತ್ರಿಕಾ ವರದಿಗಳು, ಸಂದರ್ಶನಗಳು, ಘೋಷಣಾ ಪತ್ರಗಳು…..

ಹೀಗೆ ಹತ್ತು ಹಲವಾರು ಚಾರಿತ್ರಿಕ ಮೂಲಗಳಿಂದ ದಟ್ಟವಾದ ಮತ್ತು ಆಪ್ತವಾದ ವಿವರಗಳನ್ನು ನೀಡುವ ಈ ಕೃತಿ ಬರೀ ಒಂದು ವಿಶ್ವವಿದ್ಯಾಲಯದ ಚರಿತ್ರೆಯನ್ನು ನಿರೂಪಿಸುವುದಷ್ಟೇ ಅಲ್ಲ, ಅದು ಭಾರತವೆಂಬ ರಾಷ್ಟ್ರದ ಬೌದ್ಧಿಕ ಇತಿಹಾಸವನ್ನೂ ವಿದ್ವತ್ಪೂರ್ಣ ಆತ್ಮವಿಶ್ವಾಸದಲ್ಲಿ ನೀಡುತ್ತದೆ. ವಾಟ್ಸ್ ಆಪ್ ವಿಶ್ವವಿದ್ಯಾಲಯದ ಯೋಧರಿಗೆ ಆ ಮಟ್ಟಿಗಿನ ಸಂಶೋಧನೆ, ಸ್ಪಷ್ಟತೆ ಮತ್ತು ಬೌದ್ಧಿಕ ನಿಷ್ಠೆಗಳ ಅರಿವಿರಲು ಸಾಧ್ಯವೇ ಇಲ್ಲ. ಮರೆಯಲ್ಲಿ ನಿಂತು ಬಾಯಿಗುಂಡುಗಳನ್ನು ಹಾರಿಸುವುದೇ ದೇಶಪ್ರೇಮವೆಂದು ಕರೆಸಿಕೊಳ್ಳುವ ಕಾಲದಲ್ಲಿ ಯಾರಾದರೂ ಅಂತಹ ವಿದ್ವತ್ಪೂರ್ಣ ಕೃತಿಯನ್ನು ಓದುವುದಿರಲಿ, ಕಣ್ಣು ಹಾಯಿಸುವ ತಾಳ್ಮೆಯನ್ನೂ ಹೊಂದಿರುವುದಿಲ್ಲ.

ಇದೇ ರೀತಿಯ ಸನ್ನಿವೇಶವನ್ನು ಜೆಯೆನ್ಯು ಕನ್ನಡ ಅಧ್ಯಯನ ಪೀಠಕ್ಕೂ ಅನ್ವಯಿಸಬಹುದು. ‘ಕೆಡವು, ಕೊಚ್ಚು, ಕೊಲ್ಲು’ ಎಂಬ ಭಾರತೀಯ KKK ವೀರರ ಕಾರ್ಯತಂತ್ರ ಯಾವತ್ತಿಗೂ ಒಂದೇ ಆಗಿರುವುದರಿಂದ ಅದನ್ನು ಅರ್ಥೈಸಲು ಯಾವ ವಿದ್ವತ್ತಿನ ಹಂಗೂ ಇಲ್ಲವೆ! ಅವರ ಕೆಟ್ಟ ಕಣ್ಣೀಗ ಕನ್ನಡ ಅಧ್ಯಯನ ಪೀಠದ ಮೇಲೆ ತಿರುಗಿದೆ. ಕಟ್ಟುವಾಗ ತಮ್ಮ ಅಂತಃಶಕ್ತಿಯ ಬಲದಿಂದಲೇ ಮಾಯವಾದವರು ಕೆಡವುವ ಕೆಲಸಕ್ಕೆ ಮಾತ್ರ ತೋಳೇರಿಸಿಕೊಂಡು ಬರುವುದು ಚಾರಿತ್ರಿಕ ವ್ಯಂಗ್ಯಗಳಲ್ಲೇ ಒಂದು.

2015ರಲ್ಲಿ ಕನ್ನಡ ಅಧ್ಯಯನ ಪೀಠ ಅಸ್ತಿತ್ವಕ್ಕೆ ಬಂದದ್ದು ಯಾವ ಛೂಂಕಾಳಿ ಮಂತ್ರದಿಂದಲೂ ಅಲ್ಲ. ಭಾರತದಂತಹ ಬಹುಭಾಷಾ ರಾಷ್ಟ್ರದಲ್ಲಿ, ರಾಜಧಾನಿಯಲ್ಲಿರುವ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ, ಸಂವಿಧಾನದ ಮಾನ್ಯತೆಯನ್ನು ಪಡೆದುಕೊಂಡಿರುವ ಎಲ್ಲ ಭಾಷೆಗಳ ಅಧ್ಯಯನ ಪೀಠ ಇರಲೇಬೇಕು ಎನ್ನುವುದು ಅಕಡೆಮಿಕ್ ನೀತಿಸಂಹಿತೆಯಲ್ಲಿ ಅಡಕವಾಗಿರುವ ಒಂದು ಭಾಗ. ಭಾರತ ಎಂಬ ರಾಷ್ಟ್ರ, ಜೆಯೆನ್ಯು ಎಂಬ ರಾಷ್ಟ್ರೀಯ ವಿಶ್ವವಿದ್ಯಾಲಯ, ಕನ್ನಡ ಎಂಬ ಅಧ್ಯಯನ ಪೀಠ, ಹೀಗೆ ಎಲ್ಲವೂ ಅಸ್ತಿತ್ವಕ್ಕೆ ಬರುವುದು ದೀರ್ಘವಾದ ಬೌದ್ಧಿಕ ಸಂಧಾನಗಳಿಂದ; ಕಟ್ಟುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಎಷ್ಟೋ ಮಂದಿಯ ಶ್ರಮ ಮತ್ತು ತ್ಯಾಗಗಳಿಂದ ಎನ್ನುವ ಸರಳ ಸತ್ಯ ಬಹುಶಃ ಪ್ರಜ್ಞಾವಂತರಿಗೆ ಮಾತ್ರ ಗೊತ್ತಿರುವಂಥದ್ದು.

ಅಂತಹ ಭಾಷಾಪ್ರೀತಿ ಮತ್ತು ಬದ್ಧತೆಯ ಬಲದಿಂದ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಜೆಯೆನ್ಯುಗಳು ಪರಸ್ಪರ ಮಾಡಿಕೊಂಡ ಒಪ್ಪಂದದ ಮೇರೆಗೆ ಅಸ್ತಿತ್ವಕ್ಕೆ ಬಂದಿರುವಂಥದ್ದು. ಕನ್ನಡ ಪೀಠದ ಮುಖ್ಯಸ್ಥ ಪ್ರೊ.ಪುರುಷೋತ್ತಮ ಬಿಳಿಮಲೆಯವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಾಗ ಪೀಠ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ಮೇಲೆಯೂ ಸುಮಾರು ತಿಂಗಳ ಮಟ್ಟಿಗೆ ಹೇಗೆ ತಮಗೊಂದು ಕೋಣೆಯೊಂದನ್ನು ಪಡೆದುಕೊಳ್ಳಲೂ ಒದ್ದಾಡಬೇಕಾಯಿತು ಎನ್ನುವುದನ್ನು ಹಗುರವಾದ ಹಾಸ್ಯದಲ್ಲಿ ವ್ಯಕ್ತಪಡಿಸುತ್ತಿದ್ದದ್ದು ನೆನಪಿಗೆ ಬರುತ್ತದೆ.

ಆದರೂ ನಡೆದಂತೆ ಬಿಚ್ಚಿ ಬೆಳೆದ ಹಾದಿ ಏನೆಲ್ಲಾ ಕಾರ್ಯಕ್ರಮಗಳನ್ನು ಮತ್ತು ಎಷ್ಟೆಲ್ಲಾ ಜನರನ್ನು ಒಳಗೊಂಡಿತು ಎನ್ನುವುದು ಮಾತ್ರ ಕನ್ನಡತಿಯಾಗಿ ನನಗೆ ಹೆಮ್ಮೆಯನ್ನು ಮೂಡಿಸಿತ್ತು. ಕನ್ನಡ ಪೀಠ ಗಂಭೀರವಾದ ಜಿಜ್ಞಾಸೆಗಳಿಗೆ, ಗೋಷ್ಠಿಗಳಿಗೆ, ವಿಚಾರ ಸಂಕಿರಣಗಳಿಗೆ, ಕಮ್ಮಟಗಳಿಗೆ ಒದಗುವಂತೆಯೇ ಸಮಾನಮನಸ್ಕರು ಸುಮ್ಮನೇ ಸಂಧಿಸಿ, ಬಿಸಿಯಾದ ಸಮೋಸ ಮತ್ತು ಚಹಾಗಳನ್ನಿಟ್ಟುಕೊಂಡು ಯಾವುದಾದರೊಂದು ಉಪಯುಕ್ತ ವಿಷಯದ ಸುತ್ತ ಹೊಡೆಯುವ ಹರಟೆಗಳಿಗೂ ಸಾಕ್ಷಿಯಾಗಿತ್ತು ಎನ್ನುವುದು ಅವರು ಫೇಸ್‍ಬುಕ್ ಇತ್ಯಾದಿಗಳಲ್ಲಿ ಹಾಕುವ ಫೋಟೋ ಮತ್ತು ಆ ಹರಟೆಯಲ್ಲಿ ಹೊರಬಂದ ಒಳನೋಟಗಳ ಬಗ್ಗೆ ಓದುವಾಗ ತಿಳಿಯುತ್ತಿತ್ತು.

ಅಸ್ತಿತ್ವಕ್ಕೆ ಬಂದ ಈ ನಾಲ್ಕು ವರ್ಷಗಳಲ್ಲಿ (2014-2019) ಕನ್ನಡ ಅಧ್ಯಯನ ಪೀಠ ಎಷ್ಟೆಲ್ಲಾ ಕಟ್ಟುವ ಕೆಲಸಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದಿದೆ ಎನ್ನುವುದು ಗೋಡೆ ಮೇಲಿನ ಬರಹದಷ್ಟು ಸ್ಪಷ್ಟವಾಗಿಯೇ ಇದೆ. ‘ಪ್ರಾಚೀನ ಪಠ್ಯಗಳು ಆಧುನಿಕ ಭಾಷೆಯಲ್ಲಿ ಬರದಿದ್ದರೆ ಆಪತ್ತು’ ಎನ್ನುವ ಆತ್ಮದೆಚ್ಚರದಲ್ಲಿ ಇಂಗ್ಲೀಷಿನಲ್ಲಿ ಪ್ರಕಟಿಸಿರುವ ರನ್ನನ ಗದಾಯುದ್ಧ, ಕವಿರಾಜಮಾರ್ಗ, ಏಣಗಿ ಬಾಳಪ್ಪ, ಅಮೀರ್ ಬಾಯಿ ಕರ್ನಾಟಕಿ ಮುಂತಾದವರ ಜೀವನ ಚರಿತ್ರೆಗಳು, ಕಾರಂತರ ಅಳಿದಮೇಲೆ, ತುಳು ಜನಪದ ಕತೆಗಳು; ನಡೆಸಿರುವ ಕನ್ನಡ, ಮಲೆಯಾಳಂ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿನ ಮಹಾಭಾರತಗಳ ಸಮೀಕ್ಷೆಯನ್ನು ಒಳಗೊಳ್ಳುವ ‘ಭಾರತೀಯ ಅಭಿಜಾತ ಭಾಷೆಗಳಲ್ಲಿ ಮಹಾಭಾರತ’, ಕನ್ನಡ, ಹಿಂದಿ, ಉರ್ದು ಮತ್ತು ಪಂಜಾಬೀ ಭಾಷೆಗಳ ವಿದ್ವಾಂಸರಿಂದ ಪ್ರಬಂಧಗಳನ್ನು ಮಂಡಿಸಿಕೊಂಡ ‘ಭಾರತೀಯ ಭಕ್ತಿ ಪರಂಪರೆ ಮತ್ತು ಕನಕದಾಸ’, ಮಾಧ್ಯಮಗಳು ಹಿಡಿಯುತ್ತಿರುವ ದಿಕ್ಕು, ತಾಯ್ನುಡಿಗಳು ಮತ್ತು ರಾಷ್ಟ್ರೀಯತೆ, ಕರ್ನಾಟಕದ ಪರಿಕಲ್ಪನೆ, ಬಹುಭಾಷಾ ಕವಿಗೋಷ್ಠಿ, ಕನ್ನಡದ ಮಹಿಳಾ ಅತ್ಮಕಥೆಗಳು, ಭಕ್ತಿಯ ಹಲವು ಮಾರ್ಗಗಳು ಇತ್ಯಾದಿ ವಿಷಯಗಳ ಸುತ್ತ ನಡೆದಿರುವ ರಾಷ್ಟ್ರೀಯ ವಿಚಾರ ಸಂಕಿರಣಗಳು, ಕಮ್ಮಟಗಳು, ಗೋಷ್ಠಿಗಳು, ಪುಸ್ತಕ ಪ್ರಕಟಣೆಗಳು, ಗೊಂಬೆಯಾಟ, ಗಮಕವಾಚನ, ಹರಿಕತೆ, ಯಕ್ಷಗಾನದಂತ ದೃಶ್ಯಪ್ರದರ್ಶನಗಳು; ಸುಮಾರು ಆರುಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ಮುಖ್ಯ ಗ್ರಂಥಾಲಯದ ಆರನೆಯ ಮಹಡಿಯ ಮೇಲಕ್ಕೆ ಪುಸ್ತಕಗಳನ್ನು ಭುಜದ ಮೇಲೆ ಹೊತ್ತೊಯ್ದು ಸ್ಥಾಪಿಸಿರುವ ಕನ್ನಡ ಗ್ರಂಥಾಲಯ; ಕನ್ನಡ ಕಲಿಕೆಗೆ ರೂಪಿಸಿರುವ ಜಾಲತಾಣ; ನಡೆಸುತ್ತಿರುವ ಕನ್ನಡ ತರಗತಿಗಳು, ಇತ್ಯಾದಿ ಚಟುವಟಿಕೆಗಳ ಮೂಲಕ ಬೌದ್ಧಿಕ ಲವಲವಿಕೆಯನ್ನು ಹರಡಿದ, ಕನ್ನಡದ ನೆಲೆಯಿಂದ ಎಲ್ಲೋ ದೂರದಲ್ಲಿ ಭಾಷೆಯ ಜೀವಂತಿಕೆಗೆ ಶ್ರಮಿಸಿದ ಹಾಗೂ ಜೀವಪರ ಮನಸ್ಸುಗಳನ್ನು ಬೆಸೆಯಲು ತಾಣವೊಂದನ್ನು ಒದಗಿಸಿದ ಕನ್ನಡ ಪೀಠ ಈಗ ‘ಕೆಡವು ಕೊಚ್ಚು, ಕೊಲ್ಲು’ ಶಕ್ತಿಗಳ (ಅವು ನಿಜವಾಗಿಯೂ ‘ಶಕ್ತಿ’ಗಳೆ ಅಥವಾ ದೌರ್ಬಲ್ಯಗಳೆ ಎಂಬ ಜಿಜ್ಞಾಸೆಯನ್ನು ಸದ್ಯಕ್ಕೆ ಅತ್ತ ಸರಿಸಿ) ಅಪಪ್ರಚಾರಕ್ಕೆ ಗುರಿಯಾಗಿದೆ.

ಎಂದಿನಂತೆ ಈ ಅಪಪ್ರಚಾರ ಕನ್ನಡ ಪೀಠ ನಡೆಸುತ್ತಿರುವ ಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆಯೋ ಅಥವಾ ಹೇಳಿಯೂ ಮಾಡದಿರುವ ಕೆಲಸಗಳ ಬಗ್ಗೆಯೋ ಎತ್ತಿರುವ ಪ್ರಶ್ನೆಯಾಗದೇ ಕೇವಲ ‘ಹಣದ ದುರ್ಬಳಕೆ’ ಎಂಬ ಸಾರಾಸಗಟಾದ ತೆರೆಮರೆಯ ಬಾಯಿಗುಂಡಾಗಿಯೇ ಮುಂದುವರೆದಿದೆ. ನಿಮಗೆ ಮಾಹಿತಿ ಬೇಕೆಂದಲ್ಲಿ ಕನ್ನಡ ಪೀಠದ ಮುಖ್ಯಸ್ಥರಿಗೇ ಬರೆಯಬಹುದಲ್ಲ? ಮಾಹಿತಿ ಹಕ್ಕು ಕಾಯ್ದೆಯ ಅಡಿ ವಿವರಗಳನ್ನು ತರಿಸಿಕೊಳ್ಳಬಹುದಲ್ಲ? ಎಂದು ಹೇಳಿದರೆ ಮೌನವೇ ಉತ್ತರವಾಗುತ್ತದೆ. ಬದಲಿಗೆ ಸುಲಭವಾಗಿ ನಂಬಬಲ್ಲ ಬಕರಾಗಳನ್ನು ಹುಡುಕುತ್ತಾ ಪ್ರಹಾರ ಬೇರೆ ದಿಕ್ಕುಗಳನ್ನು ಆಯ್ದುಕೊಳ್ಳುತ್ತದೆ. ಕಟ್ಟುವ ಕೆಲಸದಲ್ಲಿ ಮಗ್ನರಾಗಿರುವ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಈ ಅಪಪ್ರಚಾರದ ಬಗ್ಗೆ ಮಂಡೆ ಬಿಸಿ ಮಾಡಿಕೊಳ್ಳಲೂ ಸಿದ್ಧರಿಲ್ಲ. ಸಾತ್ವಿಕ ನಿರ್ಲಕ್ಷ್ಯದಲ್ಲಿ ನಕ್ಕು ತಮ್ಮ ಕನ್ನಡದ ಕೆಲಸಕ್ಕೆ ಸಾಗುತ್ತಾರೆ.

ಇಂದಿನ ಸನ್ನಿವೇಶದಲ್ಲಿ ಯಾಕೋ ಯೇಟ್ಸ್ ಕವಿ ನೆನಪಾಗುತ್ತಾನೆ:

The best lack all conviction,
while the worst
Are full of passionate intensity!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...