ಅಸ್ಸಾಂ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಇದವರೆಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷವು ಬಿಜೆಪಿ ಜೊತೆಗಿನ ಮೈತ್ರಿ ತೊರೆದು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಕುರಿತು ಅಧಿಕೃತವಾಗಿ ಭಾನುವಾರ ಘೋಷಣೆ ಮಾಡಲಾಗುತ್ತದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದು ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಬಲ ತಂದುಕೊಟ್ಟರೆ ಆಡಳಿತರೂಢ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಕಳೆದ 2016ರ ಚುನಾವಣೆಯಲ್ಲಿ ಅಸ್ಸಾಂನ ಒಟ್ಟು 126 ಸ್ಥಾನಗಳಲ್ಲಿ ಬಿಪಿಎಫ್ 12 ಸ್ಥಾನಗಳಲ್ಲಿ ಜಯಗಳಿಸಿತ್ತು. ನಂತರ ಬಿಜೆಪಿ ಜೊತೆಗೂಡಿ ಸರ್ಕಾರದ ಭಾಗವಾಗಿತ್ತು. ಆದರೆ ಬಿಜೆಪಿಯು ಕಳೆದ ವರ್ಷ ಬಿಪಿಎಫ್ ಅನ್ನು ಬದಿಗೊತ್ತಿ, ಹೊಸ ಪಕ್ಷಗಳನ್ನು ಆಡಳಿತಕ್ಕೆ ಸೇರಿಸಿಕೊಂಡಿತ್ತು. ಅಲ್ಲದೇ ಅಸ್ಸಾಂನ ಬೋಡೋ ಪ್ರಾಬಲ್ಯದ ಪ್ರದೇಶಗಳಲ್ಲಿ ಸ್ವ-ಆಡಳಿತ ಮಂಡಳಿಯಾದ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಯನ್ನು ಸಹ ಬಿಜೆಪಿ ಆಳಿತು.
ಇದರಿಂದ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿರುವ ಬಿಪಿಎಫ್ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. “ಶಾಂತಿ, ಐಕ್ಯತೆ, ಅಭಿವೃದ್ದಿ, ಸ್ಥಿರ ಸರ್ಕಾರ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷವು ಮಹಾಜಾಥ್ ಮೈತ್ರಿ ಸೇರಲು ನಿರ್ಧರಿಸಿದೆ. ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಮಹಾಜಾಥ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಬಿಜೆಪಿಯೊಂದಿಗೆ ಇನ್ನು ಮುಂದೆ ಯಾವುದೇ ಮೈತ್ರಿ ಇರುವುದಿಲ್ಲ” ಎಂದು ಬಿಪಿಎಫ್ ಮುಖಂಡ ಹಗ್ರಮ ಮೊಹಿಲರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಸ್ಸಾಂ ರಾಜ್ಯದ ಸರ್ಬಾನಂದ ಸೋನೊವಾಲ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮೂವರು ಮಂತ್ರಿಗಳನ್ನು ಹೊಂದಿದ್ದ ಬಿಪಿಎಫ್, ಡಿಸೆಂಬರ್‌ನಲ್ಲಿ ನಡೆದ ಬಿಟಿಸಿ ಸ್ಥಳೀಯ ಚುನಾವಣೆಯಲ್ಲಿ 40 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ಆದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 12 ಸ್ಥಾನಗಳನ್ನು ಗೆದ್ದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಯನ್ನು ಅಭಿನಂದಿಸಿದರು ಮತ್ತು ತಮ್ಮ ಟ್ವೀಟ್‌ನಲ್ಲಿ ಪಕ್ಷವನ್ನು “ಮಿತ್ರ” ಎಂದು ಬಣ್ಣಿಸಿದ್ದರು. ಬಿಜೆಪಿ ಬೆಂಬಲದೊಂದಿಗೆ ಯುಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೊರೊ ಬಿಟಿಸಿಯಲ್ಲಿ ಹೊಸ ಮುಖ್ಯ ಕಾರ್ಯನಿರ್ವಾಹಕ ಸದಸ್ಯ (ಸಿಇಎಂ) ಆಗಲಿದ್ದಾರೆ ಎಂದು ಸಿಎಂ ಸೋನೊವಾಲ್ ಘೋಷಿಸಿದ್ದರು.
ಇದನ್ನೂ ಓದಿ: ಮೋದಿ ಹೆದರಿದ್ದಾರೆ ಎಂದು ಚೀನಾಕ್ಕೆ ಗೊತ್ತಾಗಿದೆ: ಅತಿಕ್ರಮಣದ ವಿರುದ್ಧ ರಾಹುಲ್ ವಾಗ್ದಾಳಿ