Homeಕರ್ನಾಟಕಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಹವಣಿಕೆ; ಧರ್ಮಸ್ಥಳದ "ಮಾತಾಡುವ ಮಂಜುನಾಥ"ನ ಭಕ್ತರ ಬಾಯಲ್ಲಿ ಕಡಿಯುವ-ಕೊಲ್ಲುವ ಭಾಷೆ!

ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಹವಣಿಕೆ; ಧರ್ಮಸ್ಥಳದ “ಮಾತಾಡುವ ಮಂಜುನಾಥ”ನ ಭಕ್ತರ ಬಾಯಲ್ಲಿ ಕಡಿಯುವ-ಕೊಲ್ಲುವ ಭಾಷೆ!

- Advertisement -
- Advertisement -

ಹನ್ನೊಂದು ವರ್ಷದ ಹಿಂದೆ ಕಾಲೇಜಿಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಮುಗ್ಧ ಹುಡುಗಿ ಸೌಜನ್ಯ ಗೌಡಳನ್ನು ಧರ್ಮಸ್ಥಳದ ದೇವಸನ್ನಿಧಿಯಲ್ಲಿ ವಿಕೃತವಾಗಿ ಅತ್ಯಾಚಾರ ಮಾಡಿ-ಭೀಭತ್ಸವಾಗಿ ಕಚ್ಚಿ-ಚುಚ್ಚಿ ನರಳಾಡಿಸಿ ಕೊಂದುಹಾಕಿರುವ ಪ್ರಕರಣದ ಮರುತನಿಖೆಗೆ ರಾಜ್ಯದಾದ್ಯಂತ ಹೋರಾಟ ಜೋರಾಗುತ್ತಿದೆ. ಮತ್ತೊಂದೆಡೆ ನ್ಯಾಯಕ್ಕಾಗಿ ಹೋರಾಡುತ್ತಿರುವವರ ಸೊಲ್ಲಡಗಿಸುವ, ನ್ಯಾಯದ ಹೋರಾಟದ ದಿಕ್ಕುತಪ್ಪಿಸುವ ಸಂಚೊಂದು ಆರಂಭವಾಗಿದೆ. ತಮ್ಮನ್ನೇ ಗುರಿಯಾಗಿಸಿಕೊಂಡು ಸೌಜನ್ಯ ಪ್ರಕರಣದ ಪ್ರತಿಭಟನೆಗಳಾಗುತ್ತಿವೆ ಅಂದುಕೊಂಡಿರುವ ಧರ್ಮಸ್ಥಳದ ಕೋಟ್ಯಾಂತರ ರೂ ಆದಾಯದ ದೇವಳದ “ದೊರೆ” ಪರಿವಾರ ’ಪ್ರತಿ ಪ್ರತಿಭಟನೆ’ ಮೂಲಕ ಅಮಾಯಕ ಭಕ್ತರನ್ನು ಬೀದಿಗಿಳಿಸುತ್ತಿದ್ದಾರೆ. ಕಳೆದ ಅಗಸ್ಟ್ 4ರಂದು ಧರ್ಮಸ್ಥಳಕ್ಕೆ ಕೂಗಳತೆ ದೂರದಲ್ಲಿರುವ ಉಜಿರೆಯಲ್ಲಿ ಸೌಜನ್ಯ ಪ್ರಕರಣದ ಮರುತನಿಖೆ ಆಗ್ರಹದ ಮೂಲಕ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಮರ್ಯಾದೆ ಮುಕ್ಕುಮಾಡಲಾಗುತ್ತಿದೆ ಎಂದು ಆರೋಪಿಸಿ ಅದಕ್ಕೆ ವಿರುದ್ಧವಾಗಿ ಹತಾಶೆ, ಆಕ್ರೋಶ, ಜಿದ್ದಿನಿಂದ ಕೂಡಿದ ಪ್ರತಿಭಟನೆಯೊಂದು ನಡೆಯಿತು! ಈ ಸಭೆಯಲ್ಲಿ ದೇವಮಾನವ ಪ್ರಭಾವಳಿಯ ವೀರೇಂದ್ರ ಹೆಗ್ಗಡೆಯವರ ಮರ್ಜಿ-ಮುಲಾಜಿನಲ್ಲಿರುವ ಕಾಂಗ್ರೆಸ್, ಬಿಜೆಪಿಯ ಕೆಲವು ಹಾಲಿ ಮತ್ತು ಮಾಜಿ ಶಾಸಕರು, ಮಾಜಿ ಮಂತ್ರಿಗಳು, ಧರ್ಮಸ್ಥಳ ಸಂಸ್ಥಾನದ ಗ್ರಾಮೀಣಾಭಿವೃದ್ದಿ ಸಂಘದ ಸದಸ್ಯರು ಮತ್ತು ಧರ್ಮಾತ್ಮರು ನಡೆಸುವ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲಪಡೆದ ಪಾಪದ ಮಂದಿ “ಅನಿವಾರ್ಯ”ವಾಗಿ ಜಮೆಯಾಗಿದ್ದರೆನ್ನಲಾಗಿದೆ.

ಈ ಸಮಾವೇಶಕ್ಕೂ ಎರಡು ವಾರ ಮೊದಲು “ಧರ್ಮಸ್ಥಳದ ಮಾತಾಡುವ ಮಂಜುನಾಥನೆಂದು ಆಸ್ತಿಕರು ಭಾವಿಸಿರುವ ಸಾಕ್ಷಾತ್ ವೀರೇಂದ್ರ ಹೆಗ್ಗಡೆ ತಮ್ಮ ದೇವಳದ ನೌಕರರ ಸಭೆ ಕರೆದು, “ನಮ್ಮ ಅಭಿಮಾನಿಗಳು ಏನನ್ನಾದರೂ ಮಾಡಲು ಸಿದ್ದರಿದ್ದಾರೆ ಆದರೆ ನಾವೇ ಬೇಡವೆಂದು ತಡೆದಿದ್ದೇವೆ” ಎಂದು ಹೇಳಿದ್ದರು. ಈ “ಪ್ರವಚನ” ವೈರಲ್ ಆಗುತ್ತಿದ್ದಂತೆಯೆ ಸೌಜನ್ಯ ಪ್ರಕರಣ ಆಕೆಯೊಂದಿಗೆ ಮಣ್ಣಾಗಿದೆ ಎಂದು ಭಾವಿಸಿದ್ದ ಒಂದು ದಶಕದ ನಂತರ, ದುರಂತ-ದೌರ್ಜನ್ಯದ ನೆನಪುಗಳು ಇದ್ದಕ್ಕಿದ್ದಂತೆ ಗೋರಿಯಿಂದ ಎದ್ದುಬಂದಿರುವುದರಿಂದ ಹೆಗ್ಗಡೆ ಪರಿವಾರ ಹತಾಶೆ-ಅಸಹನೆಯ ಕೊನೆ ತಲುಪಿದಂತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದೀಗ ನಿಜವಾಗಿದೆ; ಮೊನ್ನೆ ಉಜಿರೆಯಲ್ಲಿ ಜರುಗಿದ ಅಖಿಲ ಕರ್ನಾಟಕ ಮುಂಜುನಾಥ ಸ್ವಾಮಿ ಭಕ್ತ ವೃಂದ ಬ್ಯಾನರ್ ಅಡಿಯಲ್ಲಾದ ಸಮಾವೇಶದಲ್ಲಿ ಮೊಳಗಿದ ಹೊಡಿ, ಬಡಿ, ಕಡಿ, ಕೊಲ್ಲು ಶೈಲಿಯ ಭೀಕರ ಭಾಷಣಗಳು ಮತ್ತು ಸೌಜನ್ಯ ಕುಟುಂಬದ ಮೇಲೆ ದಾಳಿಗೆ ನಡೆದ ಪ್ರಯತ್ನಗಳು, ಎಚ್ಚರಿಕೆಯ ಧಮ್ಕಿಗಳು ಹೆಗ್ಗಡೆ ಭಕ್ತರು ಈಗ “ಏನನ್ನಾದರೂ” ಮಾಡಲು ಹಠತೊಟ್ಟಿರುವುದು ಖಾತ್ರಿ ಪಡಿಸುವಂತಿದೆ; “ನಾವೇ ಅಭಿಮಾನಿಗಳನ್ನು ನಿಯಂತ್ರಿಸಿಟ್ಟುಕೊಂಡಿದ್ದೇವೆ” ಎಂದಿದ್ದ ಹೆಗ್ಗಡೆಯವರೇ ಪ್ರತಿ “ಹೋರಾಟ”ಕ್ಕೆ ಪ್ರಚೋದಿಸಿ ಛೂ ಬಿಡುತ್ತಿದ್ದಾರಾ ಎಂಬ ದುಗುಡದ ಚರ್ಚೆಗಳೀಗ ನಡೆಯಲಾರಂಭಿಸಿವೆ.

ಕಳೆದ ಜೂನ್ 16ರಂದು ಸೌಜನ್ಯ ಕೇಸ್‌ನ ಆರೋಪ ಹೊರಿಸಲಾಗಿದ್ದ ಮಾನಸಿಕ ಖಿನ್ನತೆಯ ನಿಷ್ಪಾಪಿ ಸಂತೋಷ್ ರಾವ್ ನಿರ್ದೋಷಿಯೆಂದು ಸಿಬಿಐ ನ್ಯಾಯಾಲಯ ಖುಲಾಸೆ ಮಾಡಿತ್ತು. ಮರುಗಳಿಗೆಯೇ ಸೌಜನ್ಯ ತಾಯ್ತಂದೆ, ಮಾವ ಮತ್ತು ನ್ಯಾಯ ಸಮರದ ಮುಂಚೂಣಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಎರಡನೇ ಸುತ್ತಿನ ಹೋರಾಟಕ್ಕೆ ಅಣಿಯಾದರು. ಸದಾ ನೊಂದವರ ಪಕ್ಷಪಾತಿಯಾಗಿ ಸಂಘರ್ಷಕ್ಕೆ ಧುಮುಕುವ ಮೈಸೂರಿನ “ಒಡನಾಡಿ” ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಇವರಿಗೆ ಜತೆಯಾದರು. ಯಾವಾಗ ಒಡನಾಡಿ ಸೌಜನ್ಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೊಯ್ಯಲು ನಿರ್ಧರಿಸಿತೋ ಆಗ ಹೋರಾಟದ ಕಿಚ್ಚು ರಾಜ್ಯದ ದಶದಿಕ್ಕಿಗೆ ಹಬ್ಬಿತು. ರಾಜ್ಯದ ಮೂಲೆಮೂಲೆಯಲ್ಲಿರುವ ಮನುಷ್ಯತ್ವಕ್ಕೆ ತುಡಿಯುವ ನಾನಾ ಸಂಘಟನೆಗಳು ಈ ಜೀವಪರ ಅಭಿಯಾನದಲ್ಲಿ ಸೇರಿಕೊಂಡವು. ಆಗ ಅಕ್ಷರಶಃ ಧರ್ಮಸ್ಥಳ ಸಂಸ್ಥಾನ ನಡುಗಿ ಹೋಯಿತು; ತಮ್ಮ ಅಚ್ಚ ಬಿಳಿ ಮುಂಡಾಸಿನಡಿ ಅಡಗಿರುವ ಕಡು ಕೆಂಪು ನೆತ್ತರಿನ ಕಲೆಗಳು ಒಂದೊಂದಾಗಿ ಅನಾವರಣ ಆಗುತ್ತಿರುವಂತೆ ಭಾಸವಾಗಿ “ಧರ್ಮಾತ್ಮರು” ಬೆಚ್ಚಿಬಿದ್ದರು! ಮಹೇಶ್ ಶೆಟ್ಟಿ, ಸೌಜನ್ಯ ತಾಯ್ತಂದೆ, ಮಾವ ಮತ್ತಿತರ ಹೋರಾಟಗಾರರು ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೆಸರೆತ್ತದಂತೆ ಹೆಗ್ಗಡೆ ಕುಟುಂಬದವರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಅದರೊಂದಿಗೇ ಹಗ್ಗಡೆ ಪರಿವಾರದ ಮಾನಹಾನಿಯಾಗುವಂಥ ಸುದ್ದಿ ಮಾಡದಂತೆ ಪತ್ರಿಕೆ, ಟಿವಿ ಮತ್ತು ಯೂಟ್ಯೂಬರ್‌ಗಳಿಗೆ ನಿಷೇಧ ಹೇರುವ ತಡೆಯಾಜ್ಞೆಯನ್ನೂ ತರಲಾಗುತ್ತದೆ.

ಇದಕ್ಕೆ ಸಮಾನಾಂತರವಾಗಿ ಧರ್ಮಸ್ಥಳ ದೇವರ ಭಕ್ತ ಗಣದ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ಫೇಕ್ ಐಡಿಗಳನ್ನು ಸೃಷ್ಟಿಸಿಕೊಂಡು ಸೌಜನ್ಯ ನ್ಯಾಯ ಕಾಳಗದ ಹೋರಾಟಗಾರರನ್ನು ಮೂದಲಿಸುವ, ಅವಮಾನಿಸುವ, ಹಿಂಸಿಸುವ ಅಪಪ್ರಚಾರ ವ್ಯವಸ್ಥಿತವಾಗಿ ನಡೆಯುತ್ತದೆ; ಧರ್ಮಸ್ಥಳದ ಮಂಜುನಾಥನ ಭಕ್ತಾಗ್ರೇಸರು ಮತ್ತು ಹೆಗ್ಗಡೆ ಅಭಿಮಾನಿಗಳು ಸೌಜನ್ಯ ಕುಟುಂಬ ಮತ್ತು ಹೋರಾಟಗಾರರ ಅವಹೇಳನ ಅಭಿಯಾನ ಶುರುಹಚ್ಚಿಕೊಳ್ಳುತ್ತಾರೆ; ಸೌಜನ್ಯ ತಾಯಿ ಮತ್ತು ತಿರೋಡಿ ಶೆಟ್ಟಿ ದಂಧೆಕೋರರು; ಸೌಜನ್ಯ ಹೆಸರಲ್ಲಿ ಹಣ ಮಾಡುತ್ತಿದ್ದಾರೆ ಎಂದು ನಿರಂತರವಾಗಿ ಸುಳ್ಳುಗಳನ್ನು ಫೇಸ್‌ಬುಕ್‌ನಲ್ಲಿ ಗೀಚಲಾಗುತ್ತದೆ. ತಮ್ಮ ಅಡಿಕೆ ತೋಟದಲ್ಲಿ ಬೆವರು ಬಸಿದು ಈಚೆಗೆ ಸೌಜನ್ಯ ತಂದೆತಾಯಿ ಕಟ್ಟಿಸಿದ್ದ ಮನೆಯ ಫೋಟೋ ಜಾಲತಾಣದಲ್ಲಿ ಹಾಕಿ- “ಇದು 11 ವರ್ಷ ಸೌಜನ್ಯ ಹೆಸರಲ್ಲಿ ಸುಲಿಗೆ ಮಾಡಿದ ಹಣದ ಮನೆ” ಎಂದು ಆ ಮಗಳನ್ನು ಕಳೆದುಕೊಂಡ ಹೆತ್ತ ಒಡಲಿನ ಉರಿ ಮತ್ತಷ್ಟು ಹೆಚ್ಚಿಸುವ ಸ್ಯಾಡಿಸ್ಟ್ ಕಾರ್ಯಾಚರಣೆ ಆಯಿತು. ಇದಕ್ಕಿಂತಲೂ ನೀಚತನವೆಂದರೆ, ಮಹೇಶ್ ಶೆಟ್ಟಿ ಮತ್ತು ಮಾವ ವಿಠ್ಠಲರೆ ಸೌಜನ್ಯಳ ರೇಪ್-ಮರ್ಡರ್ ಮಾಡಿದ್ದಾರೆ; ಸಂತೋಷ್ ಸೌಜನ್ಯಳ ಚಲನವಲನದ ಮಾಹಿತಿಕೊಟ್ಟು ವಿಠ್ಠಲ ಗೌಡ ಕೊಲೆ ಮಾಡಿಸಿದ್ದಾರೆಂದು ಮಾತಾಡುವ ಮಂಜುನಾಥನ ಭಕ್ತರು ಫೇಸ್‌ಬುಕ್‌ನಲ್ಲಿ ಪೇಜ್‌ಗಟ್ಟಲೆ ಬರೆದು “ತಮ್ಮತನ” ಪ್ರದರ್ಶಿಸಿಕೊಂಡರು!! ನಿಸ್ಪೃಹವಾಗಿ ಸೌಜನ್ಯ ಹೋರಾಟ ಮಾಡುತ್ತಿರುವ ಒಡನಾಡಿ ಸಂಸ್ಥೆಯ ಬಗ್ಗೆಯೂ ಬಾಯಿಗೆ ಬಂದಂತೆ ಬರೆದು ವಿಕೃತಾನಂದ ಅನುಭವಿಸತೊಡಗಿದರು.

ಸೌಜನ್ಯ ಪ್ರಕರಣದ ಮರುತನಿಖೆ ಆಗ್ರಹದ ಹೋರಾಟಗಾರರ ಮೇಲೆ ಗೂಬೆಕೂರಿಸಿ ತಮ್ಮ “ದೇವಪಿತೃಗಳು” ಸುಬಗರೆಂದು ಬಿಂಬಿಸುವ ರಹಸ್ಯ ಮಸಲತ್ತಿನ ಕ್ಲೈಮ್ಯಾಕ್ಸೇ ಮೊನ್ನಿನ ಉಜಿರೆಯ ಪ್ರತಿ ಪ್ರತಿಭಟನೆ ಪ್ರಹಸನ ಎನ್ನಲಾಗುತ್ತಿದೆ. ವೀರೇಂದ್ರ ಹೆಗ್ಗಡೆಯವರ ದೇವಮಾನವ ಪ್ರತೀತಿಯ ಪ್ರಭಾವಳಿಗೆ ಧಕ್ಕೆಯಾಗುತ್ತಿರುವುದನ್ನು ತಡೆಯುವ ಸದ್ರಿ “ಚಳವಳಿ”ಗೆ ಎರಡು ಆಯಾಮಗಳಿವೆಯೆಂದು ವ್ಯಾಖ್ಯಾನಿಸಲಾಗುತ್ತಿದೆ. ಒಂದು, ಸೌಜನ್ಯಳಿಗೆ ನ್ಯಾಯ ಕೊಡಿಸಲು ಶತಾಯಗತಾಯ ಪ್ರಯತ್ನ ಪಡುತ್ತಿರುವವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ನೈತಿಕವಾಗಿ ಕುಗ್ಗಿಸಿ ಹಿಮ್ಮೆಟ್ಟಿಸುವುದು. ಇನ್ನೊಂದು, ಜನರನ್ನು ಸೇರಿಸಿ ಮರುತನಿಖೆಗೆ ಮುಂದಾಗದಂತೆ ಸರಕಾರವನ್ನು ದಿಕ್ಕು ತಪ್ಪಿಸುವ ತಂತ್ರಗಾರಿಕೆ. ಸಮಾವೇಶಕ್ಕೆ ಧರ್ಮಸ್ಥಳ ಮೈಕ್ರೋ ಫೈನಾನ್ಸ್ ಸಂಘದಿಂದ 18% ಬಡ್ಡಿಗೆ ಸಾಲಪಡೆದು ಹೈರಾಣಾಗಿರುವ ಅಸಹಾಯಕ ಬಡ ಮಂದಿಯನ್ನು ವಾಹನದಲ್ಲಿ ತುಂಬಿ ತರಲಾಗಿತ್ತು; ಸೌಜನ್ಯ ಪ್ರಕರಣದ ಮರುತನಿಖೆಗೆ ಒತ್ತಾಯಿಸುವ ಸಭೆಯಿದೆಂದು ಹೇಳಿ ಜನರನ್ನು ಒಟ್ಟುಗೂಡಿಸಲಾಗಿತ್ತೆನ್ನಲಾಗಿದೆ. ವೇದಿಕೆಯಲ್ಲಿ ಬೆಳ್ತಂಗಡಿಯ ಬಿಜೆಪಿ ಶಾಸಕ-ಹರೀಶ್ ಪೂಂಜಾ, ಬಿಜೆಪಿ ಎಮ್ಮೆಲ್ಸಿ ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್ ಎಮ್ಮೆಲ್ಸಿ ಹರೀಶ್ ಕುಮಾರ್ ಪೂಜಾರಿ, ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳಾದ ವಿನಯ್ ಕುಮಾರ್ ಸೊರಕೆ, ಅಭಯ್ ಚಂದ್ರ ಜೈನ್ ಮುಂತಾದ ಖಾವಂದರಿಗೆ ನಡುಬಗ್ಗಿಸುವ ಘಟಾನುಘಟಿಗಳಿದ್ದರು.

ಮಹೇಶ್ ಶೆಟ್ಟಿ ತಿಮರೋಡಿ

ಸಮಾವೇಶದ ಸಂಘಟಕರು ತಮ್ಮ ವಿರೋಧಿಗಳೆಂದು ಬಗೆದವರ ಮೇಲಿನ ಸಿಟ್ಟು-ಸೇಡಿನ ಬರಹದ ಪ್ಲಕಾರ್ಡ್‌ಗಳೇ ಮೆರವಣಿಗೆ ಮತ್ತು ಸಭೆಯಲ್ಲಿ ಜನರಿಗಿಂತ ಹೆಚ್ಚಿದ್ದವು. ಸಭೆಯಲ್ಲಿ ಸೌಜನ್ಯ ಪ್ರಕರಣದ ಮರುತನಿಖೆ ಎಂಬ ಕ್ಷೀಣ ಸ್ವರದ ಒಂದು ವಾಕ್ಯ ಬಂದಿದ್ದು ಬಿಟ್ಟರೆ ಸೌಜನ್ಯ ಸಾವಿಗೆ ನ್ಯಾಯ ಬೇಕೆಂಬ ಗಟ್ಟಿ ದ್ವನಿ ಕೇಳಿಸಲೇ ಇಲ್ಲ!! ಸೌಜನ್ಯಳ ಫೋಟೋ ಪ್ಲಕಾರ್ಡಾಗಲಿ, ಸೌಜನ್ಯಳ ರೇಪ್-ಮರ್ಡರ್ ದುರಂತ ಖಂಡನೆಯ ವಾಕ್ಯಗಳ ಪ್ಲಕಾರ್ಡ್‌ಗಳು ಕಾಣಿಸಲಿಲ್ಲ. ವೇದಿಕೆಯಲ್ಲಿ ನಡೆದದ್ದೆಲ್ಲ- ಸೌಜನ್ಯಳಿಗೆ ನ್ಯಾಯ ಕೇಳುತ್ತಿರುವವರು ಧರ್ಮಸ್ಥಳ ಕ್ಷೇತ್ರ ಮಹಿಮೆ ಕೆಡಿಸುತ್ತಿದ್ದಾರೆ; ವೀರೇಂದ್ರ ಹೆಗ್ಗಡೆಯವರ ದೈವೀಸ್ವರೂಪಕ್ಕೆ ಕಳಂಕ ಮೆತ್ತುತ್ತಿದ್ದಾರೆಂಬ- ಭಟ್ಟಂಗಿತನದ ಬೇಗುದಿ ಮತ್ತು ಸೌಜನ್ಯ ಕೇಸ್ ಕೈಗೆತ್ತಿಕೊಂಡು ಹೋರಾಟ ಕಟ್ಟುತ್ತಿರುವವರನ್ನು ಹೀನವಾಗಿ ಹೀಯಾಳಿಸುವ, ನೀಚಾತಿನೀಚ ಶಬ್ದಗಳಿಂದ ಬೈಯ್ಯುವ ಆರ್ಭಟವಷ್ಟೇ.

ಧರ್ಮಸ್ಥಳ ಸಂಸ್ಥಾನದ ಮತ್ತು ಹೆಗ್ಗಡೆ ಬಗ್ಗೆ ಮಾತಾಡಿದರೆ ಬುಲ್ಡೋಜರ್ ತಂದು ಹೂತುಹಾಕುವ, ಎದೆ ಸೀಳುವ ಬೆದರಿಕೆ ಮಾತುಗಳು ಪುಂಖಾನುಪುಂಖವಾಗಿ ಹೊರಬಂದವು. ಮಾಜಿ ಮಂತ್ರಿ ಅಭಯಚಂದ್ರ ಜೈನ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಾರ್ಯನಿರ್ವಾಹಕ ಮಂಜುನಾಥ್ ಅಮಾಯಕ ಜನರನ್ನು “ಹೆಗ್ಗಡೆ ಕೀರ್ತಿಗಾಗಿ” ಕಾಪಾಡಲು ದಂಗೆಗೆ ಪ್ರಚೋದಿಸುವ ಶೈಲಿಯಲ್ಲಿ ಅರಚಾಡಿದ್ದು ಎಷ್ಟು ಅಸಹ್ಯವಾಗಿತ್ತೋ ಅಷ್ಟೇ ಆತಂಕಕಾರಿಯಾಗಿತ್ತು!! ಇಲ್ಲಿ ಬರೆಯಲಾಗದ ಕೊಳಕು ಶಬ್ದಗಳು ಪ್ರಯೋಗವಾದವು! ಅಲ್ಲಿಗೆ ಧರ್ಮಾಧಿಕಾರಿ ಇಮೇಜಿನ ಹೆಗ್ಗಡೆಯ ಶಿಷ್ಯ ಕೋಟಿಯ ಅಧರ್ಮ-ಅನ್ಯಾಯ-ಅಹಂಕಾರದ ಮನಃಸ್ಥಿತಿ ಅನಾವರಣವಾಗಿಹೋಯಿತು. ಅಷ್ಟೇ ಅಲ್ಲ ಧರ್ಮಸ್ಥಳ ಸಂಸ್ಥಾನಾಧಿಪತಿಗಳ ಪರಿವಾರದ ಬಗೆಗಿನ ಅನುಮಾನ-ಆತಂಕ ಮತ್ತಷ್ಟು ಜಾಸ್ತಿಮಾಡಿಬಿಟ್ಟಿತು. ಊರಿಗೆಲ್ಲಿ ನೀತಿ ಬೋಧಿಸುವವರ ಕಾಲಬುಡದಲ್ಲಿ ಇರುವ ಧರ್ಮ-ನ್ಯಾಯ ಇದೇನಾ?

ಇದನ್ನೂ ಓದಿ: ಸೌಜನ್ಯ ಪ್ರಕರಣ: ಧರ್ಮಾಧಿಕಾರಿಯ ಮಂಪರು ಪರೀಕ್ಷೆಗೆ ಮಾಡೋದ್ರಲ್ಲಿ ತಪ್ಪೇನಿದೆ?; ಪ್ರಕಾಶ್ ರಾಜ್ ಪ್ರಶ್ನೆ

ಅತ್ತ ವೇದಿಕೆಯಲ್ಲಿ ಭೀಷಣ ಭಾಷಣಗಳ ಅಬ್ಬರವಾಗುತ್ತಿದ್ದರೆ, ಇತ್ತ ವೇದಿಕೆಯ ಹತ್ತಿರ ಸೌಜನ್ಯ ಸಹೋದರಿಯರು, ಸೋದರ ಮತ್ತು ತಾಯಿ ಕುಸುಮಾವತಿಯವರ ಮೇಲೆ ದಾಳಿಗೆ ಯತ್ನಗಳಾದವು; ಕುಸುಮಾವತಿ “ಜಸ್ಟಿಸ್ ಫಾರ್ ಸೌಜನ್ಯ” ಎಂಬ ಪ್ಲಕಾರ್ಡ್ ಹಿಡಿದುಕೊಂಡು ತನ್ನಿಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಸಮಾವೇಶಕ್ಕೆ ಬಂದಿದ್ದರು; ತನ್ನ ಮಗಳ ಹೆಸರಲ್ಲಿ ನಡೆಯುತ್ತಿರುವ ಸಭೆಯಾದ್ದರಿಂದ ವೇದಿಕೆಯಲ್ಲಿ ನಿಂತು ನೆರೆದ ಜನರೊಂದಿಗೆ ಒಡಲುರಿ ಹಂಚಿಕೊಳ್ಳುವ ಮನಸ್ಸು ಕುಸುಮಾವತಿಯವರದಾಗಿತ್ತು. ಆದರೆ ನೋಡುನೋಡುತ್ತಿದ್ದಂತೆ ಕುಸುಮಾವತಿ ಮತ್ತವರ ಕುಟುಂಬವನ್ನು ಸುತ್ತುವರಿದ ಬೌನ್ಸರ್‌ಗಳು ವೇದಿಕೆ ಏರದಂತೆ ತಡೆದರು; ಧಿಕ್ಕಾರ ಕೂಗಿ ಅಣಕಿಸಿದರು. ಬೆದರಿಕೆ ಹಾಕಲಾಯಿತು. ಮಗಳನ್ನು ಕಳೆದುಕೊಂಡು ದಶಕದಿಂದ ನೊಂದಿರುವ ಜೀವವನ್ನು ಮತ್ತಷ್ಟು ಘಾಸಿಗೊಳಿಸಿದರು. ವೇದಿಕೆಯ ಮೇಲಿದ್ದ ಮಹಾನುಭಾವರಾದರೂ ಬಂದು “ಬಾ ತಾಯಿ ಮೇಲೆ ಬಾ ನಿನ್ನ ಮನಸ್ಸಿನಲ್ಲೇನಿದೆ ಹೇಳುವೆಯಂತೆ ಬಾ” ಎಂದು ಪ್ರಾಂಜಲವಾಗಿ ಬರಮಾಡಿಕೊಂಡಿದ್ದರೆ, ಹೆಗ್ಗಡೆ ನಿಷ್ಠರು ಧರ್ಮಸ್ಥಳ ಕ್ಷೇತ್ರಕ್ಕೆ ಮತ್ತು ಖಾವಂದರಿಗೆ ಮೆತ್ತಲಾಗಿದೆ ಎಂದು ಭಾವಿಸಿರುವ ಕಳಂಕ ಕ್ಷಣ ಮಾತ್ರದಲ್ಲಿ ತೊಳೆದುಹೋಗುತ್ತಿತ್ತೇನೋ!!

ಆದರೆ ಹಾಗಾಗಲಿಲ್ಲ; ಸೌಜನ್ಯಳ ತಾಯಿಯನ್ನು ಎಳೆದಾಡಿ ವೇದಿಕೆ ಹತ್ತಿರ ಬರದಂತೆ ಬೆದರಿಸಲಾಯಿತು; ಸೌಜನ್ಯಳ ತಮ್ಮ ಜಯರಾಮನ ಕೊರಳ ಪಟ್ಟಿ ಹಿಡಿದೆಳೆದು ಥಳಿಸಲು ಧಾಂಡಿಗನೊಬ್ಬ ಪದೇಪದೇ ಮುನ್ನುಗ್ಗುತ್ತಿದ್ದ; ಆತ ರೋಷಾವೇಶದಿಂದ ಹಲ್ಲು ಕಡಿಯುತ್ತ-ನಾಲಿಗೆ ಹೊರಚಾಚುತ್ತ ಸೌಜನ್ಯ ಕುಟುಂಬದ ಮೇಲೆರಗಲು ಮುಂದಾದಂತೆ ಲೇಡಿ ಪೊಲೀಸರು ಹಿಂದಕ್ಕೆ ಸರಿಸುತ್ತಿದ್ದರು. ಪೊಲೀಸರೆದುರೆ ಸೌಜನ್ಯಳ ತಾಯಿ ಮತ್ತು ಸಹೋದರನಿಗೆ ಧಮ್ಕಿ ಹಾಕುತ್ತಿದ್ದ. ಪೊಲೀಸರು ತಡೆಯದಿದ್ದರೆ ಧರ್ಮ”ದಂಡ” ಅಧಿಕಾರಿ ಹಗ್ಗಡೆಯವರೇ ಹೇಳುವಂತೆ ಅವರ ಅಭಿಮಾನಿಗಳು “ಏನನ್ನಾದರೂ” ಮಾಡಲು ಹೇಸುತ್ತಿರಲಿಲ್ಲವೆಂಬುದು ಆ ಘಟನೆಯ ಲೈವ್ ವಿದೇವ್ ಕಂಡರೆ ನಿಸ್ಸಂಶಯವಾಗಿ ಸಾಬೀತಾಗುತ್ತದೆ. ಗೂಂಡಾನ ದುಂಡಾವರ್ತನೆ ಸಮಾವೇಶದ ಲೈವ್ ವರದಿ ಮಾಡುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ನೇರಪ್ರಸಾರವಾಯಿತು; ಆ ಬಳಿಕ ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ನಡೆದ ಪ್ರಯತ್ನದ ಚಿತ್ರಣದ ತುಣುಕು ವೈರಲ್ ಆಯಿತು. ಅದರ ಬೆನ್ನಿಗೇ ಸೌಜನ್ಯ ಕುಟುಂಬ ಮತ್ತು ಸೌಜನ್ಯ ಹೋರಾಟದ ವಿರುದ್ಧವಿರುವ ಈತ ಸೌಜನ್ಯ ಪರ ನಡೆಯುವ ಹೋರಾಟ, ಧರಣಿ, ಸಭೆಗಳಲ್ಲಿ ಪ್ರತ್ಯಕ್ಷನಾಗಿ ಪುಂಡಾಟ ಮಾಡಿದ್ದು ಬಹಿರಂಗವಾಯಿತು.

ಕಳೆದ ವಾರ ಸೌಜನ್ಯ ಪ್ರಕರಣದ ಮರುತನಿಖೆಗಾಗಿ ಹಲವು ಸಂಘಟನೆಗಳು ಒಂದಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆಸಿದ ಧರಣಿ-ಸತ್ಯಾಗ್ರಹದಲ್ಲಿದ್ದ ಈತ ಧರ್ಮಸ್ಥಳದ ಅಧರ್ಮದ ಬಗ್ಗೆ ವಿದೇವ್‌ಗಳನ್ನು ಮಾಡುತ್ತಿದ್ದ ಯೂಟ್ಯೂಬರ್ ಜಗದೀಶ್‌ಗೆ ಹೊಡೆಯಲು ಹೋಗಿದ್ದ; ಮೈಸೂರಲ್ಲಿ ಒಡನಾಡಿ ಸಂಸ್ಥೆ ಸಂಘಟಿಸಿದ್ದ ಪ್ರತಿಭಟನೆಯಲ್ಲೂ ಈತ ಸೇರಿಕೊಂಡು ತಂಟೆಮಾಡಿದ್ದ. ಸಹಜವಾಗಿಯೇ ಈತನ ಜಾತಕವನ್ನು ಹೋರಾಟಗಾರರು ಜಾಲಾಡಿದ್ದಾರೆ. ಯಾರು ಈ ಆಸಾಮಿ? ಈತನ ಹೆಸರೇನು? ಯಾಕೀತ ಸೌಜನ್ಯ ಪರ ಹೋರಾಟಕ್ಕೆ ಬರುತ್ತಾನೆ? ಏನಿವನ ಉದ್ದೇಶ? ದೇವದೂತರ ಗುಪ್ತಚರನೇ? ಸೌಜನ್ಯ ತಾಯಿ- ಕುಟುಂಬದವರ ಮೇಲೆ ಹಲ್ಲೆಮಾಡಲು ಅಥವಾ ಹತ್ಯೆಗೇನಾದರೂ ಸ್ಕೆಚ್ ಹಾಕಿಕೊಂಡು ಹಿಂಬಾಲಿಸುತ್ತಾನಾ? ತನ್ನ “ಸ್ವಾಮಿ”ಗೇನಾದರೂ ಸೌಜನ್ಯ ಹೋರಾಟದ ಸಾಕ್ಷಾತ್ ವರದಿ ಕೊಡಲು ಬರುತ್ತಾನಾ? ಆತನಿಗೆ ಯಾಕಿಂಥ ಆವೇಗ-ಆವೇಷ? ಸೌಜನ್ಯ ಕುಟುಂಬದ ಮೇಲೆ ಯಾಕಿಷ್ಟು ದ್ವೇಷ? ಈತನ ಹಿಂದೆ ಯಾರಿದ್ದಾರೆ? ಎಂಬಿತ್ಯಾದಿ ಶೋಧಗಳು ನಡೆದಾಗ ಈತ ಬೇರ್‍ಯಾರೂ ಅಲ್ಲ, ಖುದ್ದು ಧರ್ಮಸ್ಥಳದ ಪಾರಪತ್ಯಗಾರ ವೀರೇಂದ್ರ ಹಗ್ಗಡೆಯವರ ಪರಿವಾರದ ಪರಮಾಪ್ತ ಬಂಟನೆಂಬುದು ಸ್ಪಷ್ಟವಾಗಿದೆ!

ಈತನ ಹೆಸರು ಮಹಾವೀರ ಜೈನ್; ಧರ್ಮಸ್ಥಳ ಸಂಸ್ಥಾನದ ಯಜಮಾನ-ರಾಜ್ಯಸಭೆಯ ಬಿಜೆಪಿ ಒಲವಿನ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯವರ ಸಹೋದರ ಸುರೇಂದ್ರ ಹೆಗ್ಗಡೆಯವರ ಪರಮಾಪ್ತ! ಬೆಂಗಳೂರಲ್ಲಿ ಪ್ರಮುಖ ಉದ್ಯಮಿಯಾಗಿರುವ ಸುರೇಂದ್ರ ಹೆಗ್ಗಡೆಯವರ ವ್ಯವಹಾರ ಮಹಾವೀರ್ ಜೈನ್ ನಿಭಾಯಿಸುತ್ತಾನೆ ಎನ್ನಲಾಗುತ್ತಿದೆ. ಈ ಮಹಾವೀರ್ ಜೈನ್ ಆಗಾಗ ಧರ್ಮಾಧಿಕಾರಿ-ಎಂಪಿ ವೀರೇಂದ್ರ ಹೆಗ್ಗಡೆಯವರ ಅಕ್ಕಪಕ್ಕದಲ್ಲೂ ಕಾಣಿಸಿಕೊಳ್ಳುತ್ತಾನೆ. ಹೆಗ್ಗಡೆ ಕುಟುಂಬದ ಕೃಪಾಕಟಾಕ್ಷದಿಂದ ಮಹಾವೀರ್ ಜೈನ್ ಬಿಜೆಪಿಯ ಆಯಕಟ್ಟಿನ ರಾಜಕಾರಣಿಗಳ ಸಖ್ಯವೂ ಕುದುರಿಸಿಕೊಂಡಿರುವ ಸುದ್ದಿಗಳೂ ಸದ್ದುಮಾಡುತ್ತಿವೆ. ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಹಾರಾಡಿದ ಮಹಾವೀರ್ ಜೈನ್ ವಿದೇವ್ “ವೈರಲ್” ಆಗುತ್ತಿದ್ದಂತೆಯೆ ಆತ ಕೇಂದ್ರದ ಮಾಜಿ ಮಂತ್ರಿ ದಿವಂಗತ ಅನಂತಕುಮಾರ್, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಡಿಸಿಎಂ ಅಶ್ವತ್ಥನಾರಾಯಣ- ಇವರುಗಳೊಂದಿಗಿನ ಆಪ್ತ ಒಡನಾಟದ ಸಂಗತಿ ಮತ್ತು ಅವರೊಂದಿಗಿರುವ ಫೋಟೋಗಳು ಜಾಲತಾಣದಲ್ಲಿ ಯಥೇಚ್ಛವಾಗಿ ಹರಿದಾಡಿದೆ. ಸೌಜನ್ಯ ತಾಯಿ ಕುಸುಮಾವತಿ ಉಜಿರೆಯಲ್ಲಿ ಅಖಿಲ ಕರ್ನಾಟಕ ಮಂಜುನಾಥ ಸ್ವಾಮಿ ಭಕ್ತ ವೃಂದದ ಹೆಸರಲ್ಲಿ ಸಮಾವೇಶವಾದ ಹೊತ್ತಲ್ಲಿ ತನ್ನನ್ನು ಎಳೆದಾಡಿ ಮಾನಹರಣಕ್ಕೆ ಯತ್ನವಾಯಿತೆಂದು ಅಪರಿಚಿತನ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕಂಪ್ಲೇಂಟು ದಾಖಲಿಸಿದ್ದಾರೆ. ಈ “ಅಪರಿಚಿತ” ಹೆಗ್ಗಡೆಗಳ ಹಿಂಬಾಲಕ ಮಹಾವೀರ್ ಜೈನ್ ಎಂಬುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ!

ಈಗ ಸೌಜನ್ಯ ಬರ್ಬರ ಬಲಾತ್ಕಾರ ಮತ್ತು ಭೀಭತ್ಸ ಹತ್ಯೆಯ ಸುತ್ತ ಪ್ರತಿಭಟನೆ-ಪ್ರತಿ ಪ್ರತಿಭಟನೆಗಳಾಗುತ್ತಿವೆ; ಮುಖ್ಯವಾಹಿನಿಯ ಪತ್ರಿಕೆ-ಸುದ್ದಿ ವಾಹಿನಿಗಳು “ಮಂಜುನಾಥ ಸ್ವಾಮಿ”ಯ ಹಂಗಿನಲ್ಲಿರುವಂತೆ ಸುಮ್ಮನಿವೆ. ಹಿಂದು ಹೆಣ್ಣಿನ ಮಾನ-ಪ್ರಾಣದ ಹೆಸರಲ್ಲಿ ಬೀದಿಗಿಳಿದು ಬೊಬ್ಬೆ ಹಾಕುವ ಹಿಂದುತ್ವವಾದಿಗಳಿಗಂತೂ ಸೌಜನ್ಯ ಮಾನ-ಪ್ರಾಣ ಲೆಕ್ಕಕ್ಕೇ ಇಲ್ಲದಂತಾಗಿದೆ. ಆದರೆ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್‌ಗಳ ಮೂಲಕ ಧರ್ಮಸ್ಥಳ ಸಾಮ್ರಾಜ್ಯದಲ್ಲಿ ನಲವ್ವತ್ತೈವತ್ತು ವರ್ಷಗಳಿಂದ ಆಗಿರುವ ಅಸಂಖ್ಯ ಅಪಹರಣ, ಅಸಹಜ ಸಾವು, ಭೂ ದಾಹದ ಕೊಲೆಗಳ ಕತೆ-ಉಪಕತೆಗಳು ಜನಮಾನಸವನ್ನು ತಲುಪುತ್ತಿವೆ; ಜನಜಾಗೃತಿ ಪ್ರಾರಂಭವಾಗಿದೆ. ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೊರಡುವ ಮೊದಲು ಹತ್ತಾರು ಬಾರಿ ಯೋಚಿಸಬೇಕಾದ ಪರಿಸ್ಥಿತಿಯ ಅರಿವಾಗಿದೆ. ಇದರಿಂದ ಕಂಗಾಲಾದವರು ಅಸ್ತಿತ್ವಕ್ಕಾಗಿ ಪ್ರತಿ ಹೋರಾಟ ಮಾಡಬೇಕಾಗಿಬಂದಿದೆ. ಮತ್ತೊಂದೆಡೆ ಸೌಜನ್ಯ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನದ ಮನುಷ್ಯತ್ವದ ಸಂಘರ್ಷ ಜೋರಾಗುತ್ತಿದೆ. ಈ ವರದಿ ಸಿದ್ಧವಾಗುತ್ತಿರುವ ವೇಳೆಗೆ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸುಳ್ಯ-ಪುತ್ತೂರು ಭಾಗದಲ್ಲಿ ಕಾಲ್ನಡಿಗೆ ಜಾಥಾದ ಮೂಲಕ ’ಸೌಜನ್ಯಳಿಗೆ ನ್ಯಾಯ ಹೋರಾಟ’ವನ್ನು ದಕ್ಷಿಣ ಕನ್ನಡದಾದ್ಯಂತ ಬಿರುಸಾಗಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ವೀರೇಂದ್ರ ಹೆಗಡೆ ಬೆಂಬಲಿಗರಿಂದ ಸೌಜನ್ಯ ತಾಯಿ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು

ಇಂಥ ಹೋರಾಟಗಳಿಗೆ ಸೌಜನ್ಯಳ ತಾಯಿ, ತಂದೆ, ಸೋದರ ಮಾವ ಮತ್ತು ಹೋರಾಟಗಾರ ತಿಮರೋಡಿ ಶೆಟ್ಟಿ ಹೋಗಿಬರುತ್ತಿದ್ದರು. ಆದರೆ ಮೊನ್ನೆ ಉಜಿರೆಯಲ್ಲಿ ಹಗ್ಗಡೆ ಕುಟುಂಬದ ಖಾಸಾ ಆದ್ಮಿ ಮಹಾವೀರ್ ಜೈನ್ ಸೌಜನ್ಯ ಕುಟುಂಬದ ಮೇಲೆರಗಿದ ಬಳಿಕ ಭಯ ಎದುರಾಗಿದೆ. ಯಾರೇನೇ ಹೇಳಿದರೂ ಈ ಸೂತಕದ ಮನೆಗೆ ಸಿಎಂ ಸಿದ್ದು ಸಾಂತ್ವನವೆ ಮುಖ್ಯವಾಗಿದೆ. ಸಂತೋಷ್ ರಾವ್ ಖುಲಾಸೆಯ ಸಿಬಿಐ ನ್ಯಾಯಾಲಯದ ತೀರ್ಪು ಓದಿ ಮರುತನಿಖೆಯ ನಿರ್ಧಾರ ಮಾಡುವುದಾಗಿ ಸ್ವತಃ ಲಾಯರ್ ಆಗಿರುವ ಸಿಎಂ ಹೇಳಿದ್ದಾರೆ. ಸೌಜನ್ಯಳ ತಾಯಿ ಸಿಎಂ ಸಿದ್ದು ಬದ್ಧತೆ ಮೇಲೆ ಭರವಸೆ ಇಟ್ಟಿದ್ದಾರೆ; ಹೋರಾಟಗಾರರು ಸಿಎಂ ಸಿದ್ದು ತೀರ್ಮಾನ ಕಾತರದಿಂದ ಕಾಯುತ್ತಿದ್ದಾರೆ.

ಮಾಜಿ ಶಾಸಕ ಬಂಗೇರಾರ ಭಯದ “ರಹಸ್ಯ”!

ಅಗಸ್ಟ್ 4ರಂದು ಉಜಿರೆಯಲ್ಲಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೇಳುತ್ತಿರುವವರ ವಿರುದ್ಧ ಅರ್ಥಾತ್ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಷ್ಠೆ ಪ್ರದರ್ಶನಕ್ಕಾಗಿ ನಡೆದ “ಪ್ರತಿ” ಪ್ರತಿಭಟನೆಯಲ್ಲಿ ಕರಾವಳಿಯ ಹಲವು ಮಾಜಿ ಮತ್ತು ಹಾಲಿ ಶಾಸಕರು, ಮಾಜಿ ಸಚಿವರು ಭಾಗವಹಿಸಿದ್ದರು. ಇವರೆಲ್ಲರಿಗೂ ವಿಕೃತರಿಂದ ಚಿತ್ರಹಿಂಸೆಗೀಡಾಗಿ ಮಾನ-ಪ್ರಾಣ ಕಳೆದುಕೊಂಡ ಪಾಪ ಹುಡುಗಿ ಸೌಜನ್ಯ ಅಥವಾ ಕರುಳ ಕುಡಿಯನ್ನು ಕಳೆದುಕೊಂಡು 11 ವರ್ಷದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಸೌಜನ್ಯಳ ಹೆತ್ತವರ ಸಂಕಟಕ್ಕಿಂತ ಧರ್ಮಸ್ಥಳ ಕ್ಷೇತ್ರ ಮತ್ತು ಕ್ಷೇತ್ರದ ಯಜಮಾನ ವೀರೇಂದ್ರ ಹೆಗ್ಗಡೆ ಮನೆತನದ ಮಾನದ ಕಾಳಜಿಯೇ ಪ್ರಧಾನವಾಗಿತ್ತು. ಸಭೆಯಲ್ಲಿ ಮಾತಾಡಿದ ರಾಜಕಾರಣಿಗಳೆಲ್ಲ ಹೆಗ್ಗಡೆಯವರ ಮಾನಾಪಮಾನದ ಬಗ್ಗೆಯೇ ಮಮ್ಮಲ ಮರುಗಿದರು.

ಕರಾವಳಿಯ ಗ್ರಾಮ ಪಂಚಾಯತ್ ಸದಸ್ಯರಿಂದ ಹಿಡಿದು ಅಷ್ಟೂ ಶಾಸಕ, ಸಂಸದ, ಸಚಿವರು ಖಾವಂದರ ಕೃಪಾಕಟಾಕ್ಷಕ್ಕಾಗಿ ಹಾತೊರೆಯುತ್ತಾರೆ; ಖಾವಂದರಿಗೆ ಬೇಸರವಾಗದಂತೆ ಎಚ್ಚರ ವಹಿಸುತ್ತಾರೆ. ಆದರೆ

ಐದು ಬಾರಿ ಬೆಳ್ತಂಗಡಿ ಎಮ್ಮೆಲ್ಲೆಯಾಗಿದ್ದ ನಿಷ್ಠುರವಾದಿ ವಸಂತ ಬಂಗೇರ ಮಾತ್ರ ಧರ್ಮಸ್ಥಳದ ದೇವಮಾನವ ಪರಿವಾರಕ್ಕೆ ಎಂದೂ ಡೊಗ್ಗು ಸಲಾಮು ಹಾಕಿದವರಲ್ಲ! ವಸಂತ ಬಂಗೇರ ಒಬ್ಬರು ಮಾತ್ರ ಲಾಗಾಯ್ತಿನಿಂದಲೂ ಧರ್ಮಸಂಸ್ಥಾನದ ಕಣ್ಕಟ್ಟು, ಢೋಂಗಿತನವನ್ನು ಎತ್ತಿಆಡುತ್ತಲೇ ಬಂದಿದ್ದಾರೆ. ಹಾಗಾಗಿ ದೇವಧೂತರು ಬಂಗೇರರನ್ನು ಸಂಸ್ಥಾನದ ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ; ಕರೆದರೂ ಬಂಗೇರ ಹೋಗುವ ಪೈಕಿಯೂ ಅಲ್ಲ. ಸಹಜವಾಗಿಯೇ ಮೊನ್ನೆಯ ’ಪ್ರತಿ-ಸಮಾವೇಶ’ದಲ್ಲೂ ಬಂಗೇರಾ ಇರಲು ಸಾಧ್ಯವಿರಲಿಲ್ಲ. ಸೌಜನ್ಯ ಪ್ರಕರಣದ ಹೋರಾಟದಲ್ಲಿ ಆರಂಭದಿಂದಲೂ ಇರುವ ಏಕೈಕ ಶಾಸಕ ವಸಂತ ಬಂಗೇರ!! ಈಗವರು ಮಾಜಿ ಶಾಸಕನಾದರೂ ನ್ಯಾಯದ ಹೋರಾಟದ ಮುಂಚೂಣಿಯಲ್ಲಿದ್ದಾರೆ.

ವಸಂತ ಬಂಗೇರ

ಹೆಗ್ಗಡೆ ಭಕ್ತಾದಿಗಳ ಶೋ ನಡೆದ ಮೂರೇ ದಿನಕ್ಕೆ ಬಂಗೇರಾ ಸ್ಫೋಟಕ ಮಾತಾಡಿದ್ದಾರೆ. ಸೌಜನ್ಯ ಪ್ರಕರಣದ ತನಿಖೆಯ ದಾರಿ ತಪ್ಪಿಸಿದ ರಹಸ್ಯ ನನಗೆ ಗೊತ್ತಿದೆ. ಅದನ್ನು ಬಹಿರಂಗವಾಗಿ ಹೇಳಿದರೆ ನನ್ನ ಕೊಲೆಯಾದರೂ ಆಗಬಹುದು. ಸದ್ಯಕ್ಕೆ ಸಾರ್ವಜನಿಕವಾಗಿ ಆ ಬಗ್ಗೆ ನಾನೇನೂ ಮಾತಾಡಲಾರೆ. ಸಿಬಿಐಗೆ ಸೌಜನ್ಯ ಪ್ರಕರಣ ವಹಿಸುವಂತೆ ಮಾಡಿದ್ದೇ ನಾನು. ಅಂದು ನಾನು ಶಾಸಕನಾಗಿದ್ದೆ. ಸಿದ್ದರಾಮಯ್ಯ ಸಿಎಂ ಆಗಿದ್ದರು; ಮೊದಲು ಪ್ರಕರಣ ಸಿಬಿಐಗೆ ವಹಿಸಲು ಸಿದ್ದು ಸಿದ್ದರಾಗಲಿಲ್ಲ. ನಾನು ಪ್ರಕರಣದ ಗಂಭೀರತೆ ಮನಗಾಣಿಸಿದ ಬಳಿಕ ಒಪ್ಪಿದ್ದರು. ಆದರೆ ಸಿಬಿಐ ತನಿಖೆ ಶುರುವಾದಾಗ ಏನೋ ಮೋಸ ಆಗುತ್ತಿರುವಂತೆ ನನಗೆ ಅನಿಸಿತು. ಸಿಬಿಐ ಇಡೀ ಪ್ರಕರಣದ ದಿಕ್ಕುತಪ್ಪಿಸಿತ್ತು. ಅದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ಒಂದಲ್ಲ ಒಂದು ದಿನ “ರಹಸ್ಯ” ಹೇಳುವ ಸಂದರ್ಭ ಬಂದೇಬರುತ್ತದೆ ಎಂದು ಬಂಗೇರಾ ಬೆಳ್ತಂಗಡಿಯ ಸಭೆಯೊಂದರಲ್ಲಿ ಹೇಳಿದ್ದಾರೆ.

ಆದರೆ ಬಂಗೇರಾ ಬಾಯಿಬಿಡಲು ಇದೇ ಸರಿಯಾದ ಸಮಯ. ಪ್ರಭಾವಿಗಳು ನ್ಯಾಯದ ಹೋರಾಟವನ್ನು ಅಡಗಿಸುವ ಷಡ್ಯಂತ್ರವನ್ನು ನಾಜೂಕಾಗಿ ಮಾಡುತ್ತಿದ್ದಾರೆ; ಸೌಜನ್ಯಳನ್ನು ಹೆತ್ತವರು ಆರೋಪಿಸುತ್ತಿರುವ ಮೂವರು ಜೈನ್ ಪರಿವಾರದವರ ತನಿಖೆ ಬುದ್ಧಿಪೂರ್ವಕವಾಗಿಯೇ ಮಾಡಲಿಲ್ಲ. ಪ್ರಕರಣದ ಮರುತನಿಖೆಗೆ ರಾಜ್ಯದಾದ್ಯಂತ ನಡೆಯುತ್ತಿರುವ ಹೋರಾಟ ಕಾವೇರುತ್ತಿದೆ. ಈಗ ಬಂಗೇರಾ ಗುಟ್ಟು ರಟ್ಟು ಮಾಡಿದರೆ ಸೌಜನ್ಯ ಪ್ರಕರಣವನ್ನು ಬಹುಬೇಗ ತಾರ್ಕಿಕ ಅಂತ್ಯ ತಲುಪಿಸಲು ಅನುಕೂಲವಾಗಬಹುದು ಎಂಬ ಮಾತಗಳು ಕೇಳಿಬರುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...