ಗೃಹ ಸಚಿವ ಆರಗ ಜ್ಞಾನೇಂದ್ರರವರ ಸ್ವಗ್ರಾಮ ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ತಾಲ್ಲೂಕಿನ ಆರಗದಲ್ಲಿ ದಲಿತ ಮಹಿಳೆಯನ್ನು ಕಾಡಿಗೆ ಎಳೆದೊಯ್ದು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿರುವ ಅಮಾನವೀಯ ಘಟನೆ ಜರುಗಿದೆ.
ಸಂತ್ರಸ್ತ ಮಹಿಳೆಯು ತನ್ನ ಪತಿಯೊಂದಿಗೆ ಪಟ್ಟಣದಲ್ಲಿ ಚಿಕಿತ್ಸೆ ಪಡೆದು ಹಿಂತಿರುವಾಗ ಸಂಪತ್, ಆದರ್ಶ್ ಮತ್ತು ಅವರ ಸಹಚರರು ಬೈಕುಗಳಲ್ಲಿ ಅಡ್ಡಗಟ್ಟಿ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೋಮವಾರ ರಾತ್ರಿ 10.30ರ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ಬುಧವಾರ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾವು ಚಿಕಿತ್ಸೆ ಪಡೆದು ವಾಪಸ್ ಬರುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ನನ್ನ ಪತಿ ಮೇಲೆ ಬೈಕ್ ಹತ್ತಿಸಿ ಹಲ್ಲೆ ನಡೆಸಿದರು. ನನ್ನನ್ನು ಕಾಡಿಗೆ ಎಳೆದೊಯ್ದು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದರು. ಆ ಸಂದರ್ಭದಲ್ಲಿ ನಾನು ಮತ್ತು ನನ್ನ ಪತಿ ಜೋರಾಗಿ ಕೂಗಿಕೊಂಡಿದ್ದರಿಂದ ಸ್ಥಳೀಯರು ಸ್ಥಳಕ್ಕೆ ಬಂದರು. ಆಗ ಆ ದುಷ್ಕರ್ಮಿಗಳು ಪರಾರಿಯಾದರು ಎಂದು ಸಂತ್ರಸ್ತ ದೂರಿದ್ದಾರೆ.
ಸದ್ಯ ಗಾಯಗೊಂಡಿರುವ ಸಂತ್ರಸ್ತೆ ಮತ್ತು ಅವರ ಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳ ಮೇಲೆ ಎಸ್‌ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಇತರ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಪ್ರಕರಣ ಮುಚ್ಚಿ ಹಾಕುವ ಹುನ್ನಾರ: ಬಿ.ಕೆ ಹರಿಪ್ರಸಾದ್ ಆರೋಪ
ಘಟನೆ ನಡೆದು 2 ದಿನಗಳಾದರೂ ಪೊಲೀಸರು ಪ್ರಕರಣ ದಾಖಲಿಸಲು ವಿಳಂಬ ಮಾಡಿರುವುದು ಯಾಕೆ? ಘಟನೆಯಲ್ಲಿ ಸಂತ್ರಸ್ತೆಯ ಪತಿಯ ಮೇಲೂ ದುಷ್ಕ್ರರ್ಮಿಗಳು ಹಲ್ಲೆ ನಡೆಸಿದ್ದಾರೆ. ಸಂಪತ್, ಆದರ್ಶ ಹಾಗೂ ಇನ್ನಿಬ್ಬರು ಯುವಕರಿಬ್ಬರು ಬೈಕ್ ಮೇಲೆ ಬಂದು ದುಷ್ಕ್ರತ್ಯ ಎಸೆಗಿದ್ದಾರೆಂದು ಸಂತ್ರಸ್ತರೇ ಗುರುತಿಸಿರುವಾಗ ಇಲ್ಲಿವರೆಗೂ ಆರೋಪಿಗಳನ್ನು ಪೊಲೀಸರು ಬಂಧಿಸದಿರುವುದಕ್ಕೆ ಕಾರಣವೇನು ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಪಿಕ್ನಿಕ್‌ಗೆ ಬಂದಿದ್ದ ಮುಸ್ಲಿಂ ಕುಟುಂಬದ ಮೇಲೆ ಶ್ರೀರಾಮಸೇನೆ ವಾಗ್ದಾಳಿ
ಸ್ವಗ್ರಾಮದಲ್ಲೇ ನಡೆದಿರುವ ಅಮಾನವೀಯ ಘಟನೆ ಇಲ್ಲಿವರೆಗೆ ಗೃಹ ಸಚಿವರ ಗಮನಕ್ಕೇ ಬಂದಿಲ್ಲವೇ? ಅಪಘಾತದಲ್ಲಿ ಗಲಾಟೆಯಾಗಿ ಯುವಕನ ಕೊಲೆ ಎರಡೇ ನಿಮಿಷಕ್ಕೆ ಮಾಹಿತಿ ಸಿಗುತ್ತೆ. ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ನಿಮ್ಮ “ಮಾಹಿತಿಯ ಮೂಲ” ಇನ್ನೂ ಮಾಹಿತಿಯೇ ನೀಡಿಲ್ಲವೇ? ಅಥವಾ ಸ್ಥಳೀಯ ದಲಿತ ಸಂಘರ್ಷ ಸಮಿತಿಯ ಮುಖಂಡರ ಆರೋಪದಂತೆ ಪ್ರಕರಣ ಮುಚ್ಚಿ ಹಾಕುವ ಯತ್ನವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘದ ಪರ್ಮೀಷನ್ ಬೇಕಲ್ಲಾ … ಅದಕ್ಕೆ ಕಾಯುತ್ತಿದ್ದಾರೆ…