ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ 1967 ರಂತಹ ವಿಶೇಷ ಕಾನೂನುಗಳಲ್ಲಿಯೂ ಸಹ ‘ಜಾಮೀನು ನಿಯಮ, ಜೈಲು ವಿನಾಯಿತಿ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಆಗಸ್ಟ್ 13) ಹೇಳಿದೆ.
ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ತರಬೇತಿ ಶಿಬಿರ ನಡೆಸಲು ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಗೆ ತನ್ನ ಮನೆಯನ್ನು ಬಾಡಿಗೆಗೆ ನೀಡಿದ ಪ್ರಕರಣ ಆರೋಪಿಗೆ ಜಾಮೀನು ನೀಡುವ ವೇಳೆ ಮೇಲಿನಂತೆ ತಿಳಿಸಿದೆ.
“ಜಾಮೀನು ಮಂಜೂರಾತಿ ನೀಡುವ ಪ್ರಕರಣವಿದ್ದಾಗ ನ್ಯಾಯಾಲಯವು ಜಾಮೀನು ನೀಡಲು ಹಿಂಜರಿಯಬಾರದು. ಪ್ರಾಸಿಕ್ಯೂಷನ್‌ನ ಆರೋಪಗಳು ತುಂಬಾ ಗಂಭೀರವಾಗಿರಬಹುದು, ಆದರೆ ನ್ಯಾಯಾಲಯದ ಕರ್ತವ್ಯವು ಕಾನೂನಿನ ಪ್ರಕಾರ ಜಾಮೀನಿಗಾಗಿ ಪ್ರಕರಣವನ್ನು ಪರಿಗಣಿಸುವುದು. ನ್ಯಾಯಾಲಯಗಳು ಅರ್ಹ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಲು ಪ್ರಾರಂಭಿಸಿದರೆ, ಅದು ಆರ್ಟಿಕಲ್ 21 ರ ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ” ಎಂದು ನ್ಯಾಯಾಧೀಶ ಅಭಯ್ ಓಕಾ ಅವರು ಹೇಳಿದ್ದಾರೆ.
ಜಾಮೀನು ನಿರಾಕರಿಸಿದ ಪಾಟ್ನಾ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ಜಲಾಲುದ್ದೀನ್ ಖಾನ್‌ಗೆ ನ್ಯಾಯಾಲಯ ಜಾಮೀನು ನೀಡಿದೆ.
ಮೇಲ್ಮನವಿದಾರ ಜಲಾಲುದ್ದೀನ್ ಖಾನ್ ಅವರು ಬಿಹಾರಕ್ಕೆ ಪ್ರಧಾನಿ ಮೋದಿಯವರ ಭೇಟಿಗೆ ಅಡ್ಡಿಪಡಿಸುವ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ನಿಷೇಧಿತ ಪಿಎಫ್‌ಐಗೆ ಸಂಬಂಧಿಸಿದ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಐಪಿಸಿಯ ಸೆಕ್ಷನ್ 120, 120 ಬಿ, 121,121 ಎ, 153 ಎ, 153 ಬಿ, 34 ಮತ್ತು ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಲಾಲುದ್ದೀನ್ ಖಾನ್ ಅವರು ಬಾಡಿಗೆಗೆ ನೀಡಿದ್ದ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಅವರು ಜುಲೈ 6 ಮತ್ತು 7, 2022 ರಂದು ಪಿಎಫ್‌ಐ ತರಬೇತಿ ಶಿಬಿರಕ್ಕೆ ತಮ್ಮ ಮನೆಯ ಮೊದಲ ಮಹಡಿಯನ್ನು ಬಾಡಿಗೆಗೆ ನೀಡಿದ್ದರು. ಬಿಹಾರದ ಹೊರಗಿನ ವ್ಯಕ್ತಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ, ಈ ತರಬೇತಿ ಶಿಬಿರವು ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ ಮತ್ತು ಪಿಎಫ್‌ಐ ಮಾಜಿ ಸದಸ್ಯರನ್ನು ಹೊಸ ಗುಂಪಾಗಿ ಮರುಸಂಘಟಿಸುವ ವಿಶಾಲ ಯೋಜನೆಯ ಭಾಗವಾಗಿದ್ದು, ಭಾರತದಲ್ಲಿ ಮುಸ್ಲಿಮರ ವಿರುದ್ಧದ ದೌರ್ಜನ್ಯಗಳಿಗೆ ಪ್ರತೀಕಾರವಾಗಿ ಹಿಂಸಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶ ಹೊಂದಿತ್ತು.
ಮೇಲ್ಮನವಿದಾರ ಜಲಾಲುದ್ದೀನ್ ತಾನು ಪಿಎಫ್‌ಐ ಅಥವಾ ಯಾವುದೇ ನಿಷೇಧಿತ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ. ನನ್ನ ಮನೆಯನ್ನು ಬಾಡಿಗೆಗೆ ನೀಡಿದ್ದೆ ಅಷ್ಟೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಈ ಹಿಂದೆ ವಿಶೇಷ ಎನ್‌ಐಎ ನ್ಯಾಯಾಲಯವೂ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನೂ ಓದಿ : ಪೂರ್ಣಗೊಳ್ಳದ ಅದಾನಿ ವಿರುದ್ದದ ಸೆಬಿ ತನಿಖೆ : ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಿದ ವಕೀಲ ವಿಶಾಲ್ ತಿವಾರಿ