ಸಾಂಸ್ಕೃತಿಕವಾಗಿ ಕ್ರಿಯಾಶೀಲವಾದ ವಿಜಯನಗರ ಪ್ರದೇಶಕ್ಕೆ ರಂಗಾಯಣಕ್ಕಾಗಿ ಕಲಾವಿದರಿಂದ ಒತ್ತಾಯ..‌

ವಿಜಯನಗರ ಸಾಮ್ರಾಜ್ಯ ಎನ್ನುವುದು ಕನ್ನಡ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ ಭಾಷೆಗೆ ಸಂಬಂಧಿಸಿ ಮತ್ತೆ ಮತ್ತೆ ಪ್ರಸ್ತಾಪವಾಗುವ ಇತಿಹಾಸವುಳ್ಳ ನಾಡಾಗಿದೆ. ಈ ಮಧ್ಯಕರ್ನಾಟಕದ ತುದಿಯಲ್ಲಿರುವ ಈ ವಿಜಯನಗರಕ್ಕೊಂದು (ಹಂಪಿ) ರಂಗಾಯಣ ಅವಶ್ಯಕತೆಯಿದೆ.

“ಹಂಪಿಯ ಸುತ್ತಮುತ್ತಲಿನ ದೊಡ್ಡಾಟದಲ್ಲಿ ಹಾಡುತ್ತಿದ್ದ ಧಾಟಿಗಳು ಹಾಡಿನ‌ಮಟ್ಟುಗಳ ಪ್ರಭಾವ ಆರಂಭದ ತೆಲಗು ಸಿನಿಮಾಗಳ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಆಗಿತ್ತು..” ಎಂಬ ಮಾತನ್ನು ನನ್ನ ಗುರುಗಳಾದ ಬಸವರಾಜ ಮಲಶೆಟ್ಟರ್ ಸರ್ ಆಗಾಗ ಹೇಳುತ್ತಿದ್ದರು. ಅಲ್ಲದೆ ವಿಜಯನಗರದಲ್ಲಿಯೇ ಮೊಟ್ಟಮೊದಲು ಯಕ್ಕಲಗಾಣ ಪ್ರದರ್ಶನ ಆಗುತ್ತಿತ್ತು ಎಂಬ ಮಾತನ್ನು ನೆನಪಿಸುತ್ತಿದ್ದರು. ಮತ್ತೂ ಇಂದಿನ ಯಕ್ಷಗಾನ ಕಲಾಪ್ರಕಾರವನ್ನು ಇದೇ ಸಾಮ್ರಾಜ್ಯದ ಕೂಚಿಪುಡಿ ಗ್ರಾಮದ ಸಿದ್ಧೇಂದ್ರ ಯತಿಗಳು ಉಡುಪಿ ಸೀಮೆಗೆ ಕೊಂಡೊಯ್ದು ಯಕ್ಷಗಾನ ರೂಪಿಸಿದರೆಂಬ ಬಗ್ಗೆಯೂ ಇತಿಹಾಸ ಹೇಳುತ್ತದೆ.

ಮಹಾದೇವ ಹಡಪದ

ಈ ಸೀಮೆಯ ದರೋಜಿಯ ಬುರ್ರಕತೆ, ಗೊಂದಲಿಗರ ಹಾಡು, ಕೊಟ್ಟೂರಿನ ಗೊಂಬೇಯಾಟ, ಹಳ್ಳಿಹಳ್ಳಿಗಳಲ್ಲಿ ನಡೆಯುವ ಆಹೋರಾತ್ರಿಯ ಬಯಲಾಟಗಳು ಸಾಕಷ್ಟು ಪ್ರಮಾಣದಲ್ಲಿ ನಾಟಕ ಕಂಪನಿಗಳ ಹುಟ್ಟಿಗೂ ಕಾರಣವಾಗಿವೆ. ಗರುಡ ಸದಾಶಿವರಾಯರು, ಜೋಳದರಾಶಿ ದೊಡ್ಡನಗೌಡರು, ಹಣ್ಣಿ ವೀರಭದ್ರಪ್ಪ, ದುರ್ಗಾದಾಸರು ಬಳ್ಳಾರಿ ರಾಘವಾಚಾರರು ಹೀಗೆ ಸಾಲುಸಾಲು ವೃತ್ತಿರಂಗಭೂಮಿಯ ಮೇರುನಟರು ಇದೇ ಸೀಮೆಯವರು. ಇನ್ನು ನಾಟಕದ ನಟನಟಿಯರಿಗೇ ಹೆಸರಾದ ಊರುಗಳೂ ಈ ಸೀಮೆಯಲ್ಲಿವೆ.

ಮರಿಯಮ್ಮನಹಳ್ಳಿ, ಹೂವಿನಹಡಗಲಿ, ಬಳ್ಳಾರಿಗಳಲ್ಲಿ ಅಸಂಖ್ಯಾತ ಕಲಾವಿದರಿದ್ದಾರೆ. ರಾಜಕಾರಣದಲ್ಲಿದ್ದೂ ನಾಟಕರಂಗದೊಂದಿಗೆ ನಂಟನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ ಈ ನಾಡಿನ ಗೃಹಮಂತ್ರಿಗಳೂ ಆಗಿದ್ದ ದಿ. ಎಂ.ಪಿ. ಪ್ರಕಾಶ ಅವರು ಇದೇ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಹಂಪಿ ಉತ್ಸವ ಆರಂಭಿಸುವ ಮೂಲಕ ಉತ್ಸವಗಳದ್ದೊಂದು ಪರಂಪರೆಯನ್ನೇ ಆರಂಭಿಸಿದ್ದರು. ಅದಕ್ಕೂ ಮಿಗಿಲಾಗಿ ಕನ್ನಡ ಭಾಷೆಗೆ ಸೀಮಿತವಾದ ವಿಶ್ವವಿದ್ಯಾಲಯವೂ ಹಂಪಿಯಲ್ಲಿಯೇ ಇದೆ.

ಇಷ್ಟೆಲ್ಲ ಕನ್ನಡ ನಾಡಿಗೆ ಕೊಡುಗೆ ಕೊಟ್ಟಿರುವ ಈ ಸೀಮೆಯಲ್ಲೊಂದು ಸಾಂಸ್ಕೃತಿಕ ಕೇಂದ್ರದ ಅಗತ್ಯವಿದೆ.
ಈ ಭಾಗಕ್ಕೆ ಸಂಬಂಧಿಸಿದ ರಂಗಾಯಣವು ದೂರದ ಕಲಬುರ್ಗಿಯಲ್ಲಿದ್ದು ಅದು ಯಾವ ರೀತಿಯಲ್ಲೂ ಬಳ್ಳಾರಿ-ಕೊಪ್ಪಳ ರಾಯಚೂರು ಜಿಲ್ಲೆಗಳನ್ನು ಪರಿಗಣಿಸಿ ಸ್ವತಂತ್ರವಾದ ಕಾರ್ಯಕ್ರಮ ರೂಪಿಸಿದ್ದ ದಾಖಲೆ ಇಲ್ಲ. ಅಲ್ಲದೆ ಇತ್ತ ಧಾರವಾಡ ರಂಗಾಯಣವೂ, ಶಿವಮೊಗ್ಗ ರಂಗಾಯಣಗಳೂ ಸಮಾನ ದೂರದಲ್ಲಿವೆ.

ಕರ್ನಾಟಕದ ಮೇರು ವೃತ್ತಿಕಲಾವಿದರು, ದೊಡ್ಡಾಟ ಕಲಾವಿದರು, ಹೆಸರಾಂತ ಸಾಹಿತಿಗಳಿರುವ, ಸಾಕಷ್ಟು ನಾಟಕ ಕಂಪನಿಗಳ ಹುಟ್ಟಿಗೂ ಕಾರಣವಾಗಿರುವ ಮತ್ತು ವಂಶಪಾರಂಪರ್ಯವಾಗಿ ಕೆಲವು ಕುಟುಂಬಗಳು ಈಗಲೂ ಕಲಾಪ್ರಕಾರಗಳನ್ನು ಈ ಭಾಗದಲ್ಲಿ ಪೋಷಿಸಿಕೊಂಡು ಬಂದಿವೆ. ಈ ಎಲ್ಲ ಹಿನ್ನೆಲೆ ಈ ಸೀಮೆಗಿದ್ದರೂ ಸಾಂಸ್ಕೃತಿಕವಾದ ಅಧ್ಯಯನಕ್ಕೊಂದು ರಂಗಾಯಣ ಇಲ್ಲದಿರುವುದು ಬೇಸರದ ಸಂಗತಿ. ಇಂಥ ನಾಡನ್ನು ಕಡೆಗಣಿಸಿ ದೂರದೂರದಲ್ಲಿ ರಂಗಾಯಣ ಸ್ಥಾಪಿಸಿದ್ದು ಸ್ಥಳಿಯವಾಗಿ ಸಾಂಸ್ಕೃತಿಕ ಲೋಕಕ್ಕೆ ಅಡಚಣೆಯಾಗಿದೆ.

ದಯಮಾಡಿ ಸರಕಾರವು ಈ ಭಾಗದ ರಂಗಭೂಮಿಗೆ ಜೀವ ಕೊಡಲು ಹಂಪಿಯನ್ನು ಕೇಂದ್ರವಾಗಿಸಿಕೊಂಡು ಒಂದು ರಂಗಾಯಣವನ್ನು ಸ್ಥಾಪಿಸಿದರೆ ಈ ಗಡಿನಾಡ ಭಾಗದಲ್ಲಿ ರಂಗಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕವಾದ ವಾತಾವರಣ ಕಟ್ಟಲು ಹೆಚ್ಚು ಉಪಯೋಗವಾಗುತ್ತದೆ.

ಮಹಾದೇವ ಹಡಪದ, ರಂಗ ನಿರ್ದೇಶಕರು

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here