ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನ 204 ಕೆರೆಗಳ ಉಸ್ತುವಾರಿ ವಹಿಸಿದ್ದು, ಈ ಪೈಕಿ 20 ಕೆರೆಗಳು ಮಾತ್ರ ಯಾವುದೇ ಒತ್ತುವರಿಯಿಲ್ಲದೆ ಮುಕ್ತವಾಗಿವೆ ಎಂದು ಬಿಬಿಎಂಪಿ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.
ಒಟ್ಟು 6,426.47 ಎಕರೆ ಪ್ರದೇಶದಲ್ಲಿ ಕೆರೆಗಳು ಹರಡಿಕೊಂಡಿದ್ದು, ಒಟ್ಟು 941.67 ಎಕರೆ ಕೆರೆ ಒತ್ತುವರಿಯಾಗಿದ್ದು, ಇದುವರೆಗೆ 38.30 ಎಕರೆಯಲ್ಲಿ ಮಾತ್ರ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಯಶಸ್ವಿಯಾಗಿದೆ ಎಂದು ಬಿಬಿಎಂಪಿ ಅಂಕಿ ಅಂಶಗಳು ತಿಳಿಸಿವೆ.
28 ಕೆರೆಗಳ ಆಸುಪಾಸಿನ 764.32 ಎಕರೆ ಪ್ರದೇಶವನ್ನು ರೈಲ್ವೆ ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಸ್ತೆಗಳಿಂದ ಒತ್ತುವರಿ ಮಾಡಲಾಗಿದೆ. 131 ಕೆರೆಗಳನ್ನು ಖಾಸಗಿ ಮತ್ತು ಸರ್ಕಾರಿ ಆಸ್ತಿಗಳಿಂದ ಒತ್ತುವರಿ ಮಾಡಲಾಗಿದೆ. ಈ 131 ಕೆರೆಗಳಲ್ಲಿ 324.827 ಎಕರೆ ಸರಕಾರಿ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿದ್ದರೆ, 248.98 ಎಕರೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬೇಗೂರು ಕೆರೆ ಉಳಿಸಿ ಹೋರಾಟಕ್ಕೆ ಕೋಮು ಬಣ್ಣ: ಹೈಕೋರ್ಟ್ ಆದೇಶ ಧಿಕ್ಕರಿಸಿ ಕೆರೆ ಮಧ್ಯೆ ಶಿವ ವಿಗ್ರಹ ಅನಾವರಣ
ಹತ್ತೊಂಬತ್ತು ಕೆರೆಗಳನ್ನು “ಬಳಕೆಯಲ್ಲಿಲ್ಲ” ಎಂದು ಬಿಬಿಎಂಪಿ ವರ್ಗೀಕರಿಸಿದೆ. ಬಳಕೆಯಾಗದ ಕೆರೆಗಳು ಒಣ ಅಥವಾ ಬಂಜರು ಭೂಮಿಯಾಗಿದ್ದು, ಇವುಗಳು ಅತಿಕ್ರಮಣಕ್ಕೆ ಗುರಿಯಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಕೆಯಾಗದ ಕೆರೆಗಳು 251.37 ಎಕರೆಯಲ್ಲಿ ಇದ್ದು, ಅದರಲ್ಲಿ 230.62 ಎಕರೆ ಈಗಾಗಲೇ ಒತ್ತುವರಿಯಾಗಿದೆ.
ಕೆರೆಗಳ ಒತ್ತುವರಿ ತೆರವಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದ ಮೇರೆಗೆ ನಾವು ಕ್ರಮಕೈಗೊಳ್ಳುತ್ತಿದ್ದೇವೆ. ಆದರೆ, ಸರ್ಕಾರಿ ಆಸ್ತಿಗಳನ್ನು ತೆರುವುಗೊಳಿಸುವುದು ತುಂಬಾ ಕಷ್ಟ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಇಂತಹ ಪ್ರದೇಶಗಳಲ್ಲಿ ಲೇಔಟ್‌ಗಳನ್ನು ನಿರ್ಮಿಸಿರುವುದು ಹೆಚ್ಚಾಗಿ ಕಂಡುಬಂದಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು, ನಗರದ ಐದು ಕೆರೆಗಳ ಉಸ್ತುವಾರಿಯನ್ನು ಬಿಡಿಎ ನಡೆಸುತ್ತಿದ್ದರೆ, ಒಂದು ಕೆರೆಯ ಉಸ್ತುವಾರಿಯನ್ನು ಕರ್ನಾಟಕ ಅರಣ್ಯ ಇಲಾಖೆ ವಹಿಸಿದೆ.