Homeಕರ್ನಾಟಕಗೀತೆ ಮತ್ತು ಸರಕಾರ

ಗೀತೆ ಮತ್ತು ಸರಕಾರ

- Advertisement -
- Advertisement -

ಸರಕಾರದಿಂದ ಜನತೆಗೆ ದಸರೆಯ ಉಡುಗೊರೆ ಬಂದಿದೆ. ಜನರು ಉದ್ಯೋಗ ಬಯಸುತ್ತಿದ್ದಾರೂ ಮತ್ತು ಗಗನಕ್ಕೇರುತ್ತಿರುವ ಬೆಲೆಗಳಿಂದ ಬಿಡುಗಡೆ ಬಯಸುತ್ತಿದ್ದರೂ ಅವೆಲ್ಲ ಗಂಭೀರ ಸಮಸ್ಯೆಗಳಲ್ಲ. ಹೊಸ ತಲೆಮಾರಿನ ನೈತಿಕ ಮೌಲ್ಯಗಳನ್ನು ಸುಧಾರಿಸಲು ಸರಕಾರವು ಧರ್ಮಶಾಸ್ತ್ರವನ್ನು ಬೋಧಿಸಲು ಹೊರಟಿದೆ. ಕರ್ನಾಟಕದ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರು ಈ ವರ್ಷದ ಕೊನೆಯೊಳಗೆ ’ನೈತಿಕ ಶಿಕ್ಷಣ’ದ ಭಾಗವಾಗಿ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸುವುದಾಗಿ ಇತ್ತೀಚೆಗೆ ಹೇಳಿದ್ದಾರೆ. ಈ ಯೋಜನೆಯ ಮೇಲೆ ಒಂದು ಸಮಿತಿಯು ಈಗಾಗಲೇ ಕೆಲಸ ಮಾಡುತ್ತಿದೆ ಎಂದು ಕೂಡ ಅವರು ತಿಳಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು 6ನೆಯ ತರಗತಿಯಿಂದ 10ನೆಯ ತರಗತಿಯ ವಿದ್ಯಾರ್ಥಿಗಳಿಗೆ ’ನೈತಿಕ ಶಿಕ್ಷಣ’ದ ಭಾಗವಾಗಿ ಭಗವದ್ಗೀತೆಯನ್ನು ಒಳಗೊಳ್ಳುವುದನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದರು. ಇಂತಹ ತೀರ್ಮಾನಕ್ಕೆ ಸರಕಾರವನ್ನು ಅಭಿನಂದಿಸಬೇಕೋ ಅಥವಾ ಟೀಕಿಸಬೇಕೋ ಎಂದು ನಿರ್ಧರಿಸುವುದು ಕಷ್ಟ. ಮೊದಲಿಗೆ ಸರಕಾರವು ಗೀತೆ ಬಗ್ಗೆ ಚಿಂತನೆ ಮಾಡಿದ್ದಕ್ಕಾಗಿ ಅಭಿನಂದಿಸಲು ನಾನು ನನ್ನ ಕಾರಣಗಳನ್ನು ನೀಡುತ್ತೇನೆ.

ಮಹಾತ್ಮ ಗಾಂಧಿಯವರು ಗೀತೆಯಿಂದ ಪ್ರಭಾವಿತರಾಗಿದ್ದರು. ಏಕೆಂದರೆ ಅದು ಹಿಂಸೆಗೆ ದುರಾಸೆಯೇ(ಲೋಭ) ಮೂಲ ಕಾರಣವೆಂದು ಹೇಳುತ್ತದೆ. ಗಾಂಧಿಯವರು ದುರಾಸೆಯಿಲ್ಲದ ಅಥವಾ ಲೋಭವಿಲ್ಲದ (ಅಪಿಗ್ರಹ) ತತ್ವವನ್ನು ತಮ್ಮ ಜೀವನದಲ್ಲಿ ಪಾಲಿಸಿದ್ದರು. ಲೋಭವು ಕ್ರೋಧ ಮತ್ತು ಹಿಂಸೆಗೆ ಎಡೆಮಾಡಿಕೊಡುವ ಬಯಕೆಯೆಂದು, ಕ್ರೋಧವು ಭ್ರಾಂತಿಯ ತಾಯಿಯೆಂದೂ ಹಾಗೂ ಭ್ರಾಂತಿಯು ನೆನಪು ಮತ್ತು ಬುದ್ಧಿವಂತಿಕೆಯ ಇಲ್ಲವಾಗುವುದಕ್ಕೆ ದಾರಿಯೆಂದೂ ಗೀತೆ ಹೇಳುತ್ತದೆ. (ಕ್ರೋಧತ್ ಭವತಿ ಸಮ್ಮೋಹ, ಸಮ್ಮೋಹತ್ ಸ್ಮೃತಿವಿಭ್ರಮ). ಕರ್ನಾಟಕದಲ್ಲಿ ಈ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೂ ಗೀತೆ ಉಪಯುಕ್ತವಾಗಬಲ್ಲದು ಏಕೆಂದರೆ, ಬೊಮ್ಮಾಯಿ ಆಳ್ವಿಕೆಯು ಈಗಾಗಲೇ ’40 ಪರ್ಸೆಂಟ್ – ರಾಜ್ (ಆಳ್ವಿಕೆ)’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭ್ರಷ್ಟಾಚಾರ ತನ್ನ ತಾರಕಕ್ಕೇರಿದೆ. ಭ್ರಷ್ಟಾಚಾರವು ಒಂದು ಹಂತದ ತನಕ ವೃತ್ತಿಪರ ಜೀವನದ ಭಾಗ ಎಂದು ಭಾವಿಸಿದವರೂ ಈಗ ಹೊರಗೆ ಬಂದು ಸಾರ್ವಜನಿಕವಾಗಿ ಮಾತನಾಡಿದ್ದಾರೆ ಹಾಗೂ ಇಡೀ ಸರಕಾರದ ನೀಗಿಸಿಕೊಳ್ಳಲಾಗದ ಲೋಭದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅವರ ನೇಮಕಕ್ಕಿಂತ ಒಂದು ತಿಂಗಳ ಮುನ್ನ, ಬಿಲ್ಡರ್‌ಗಳ ಮತ್ತು ಗುತ್ತಿಗೆದಾರರ ಸಂಘವು ಪ್ರಧಾನ ಮಂತ್ರಿ ಕಚೇರಿಯ ಕದ ತಟ್ಟಿ, ಸರಕಾರದ ಭ್ರಷ್ಟಾಚಾರದಲ್ಲಿ ಆದ ತೀವ್ರ ಏರಿಕೆಯ ವಿರುದ್ಧ ಪ್ರತಿಭಟಿಸಿತು.

ಬಿ.ಸಿ ನಾಗೇಶ್

ಅವರು ಬರಹರೂಪದಲ್ಲೇ ಹೇಳಿದ್ದೇನೆಂದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇಳುತ್ತಿರುವ ಲಂಚವು 40% ಆಗಿದೆ ಎಂದು. ಇದು ಎಲ್ಲರಿಗೂ ಬಹಿರಂಗವಾಗಿ ಗೊತ್ತಾದ ಪ್ರಕರಣ. ಆದರೆ ಇನ್ನೂ ಬಹಿರಂಗವಾಗದ ಅನೇಕ ಇಂತಹ ಭ್ರಷ್ಟಾಚಾರದ ಪ್ರಕರಣಗಳು ಇದ್ದವು ಹಾಗೂ ಇನ್ನೂ ಇವೆ, ಇದು ಭ್ರಷ್ಟಾಚಾರವನ್ನು ಅತ್ಯಂತ ತುರ್ತಿನ ಸವಾಲಾಗಿಸುತ್ತದೆ. ಬೊಮ್ಮಾಯಿಯವರು ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಬಿಜೆಪಿಯ ಯಡಿಯೂರಪ್ಪ ನಂತರ ಮುಖ್ಯಮಂತ್ರಿಯಾದರು, ಹಾಗೂ ಇತರ ಪಕ್ಷಗಳಿಂದ ದೊಡ್ಡ ಸಂಖ್ಯೆಯಲ್ಲಿ ಪಕ್ಷಾಂತರ ಮಾಡಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಅವರ ಪಕ್ಷ ತೋರಿಸಿಕೊಟ್ಟಿದೆ. ಈ ಪಕ್ಷಾಂತರಕ್ಕೆ ಅತ್ಯಂತ ದೊಡ್ಡ ಮೊತ್ತದ ಲಂಚವೇ ಕಾರಣ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಹಿಂಸೆ ಮತ್ತು ಕೋಮು ದ್ವೇಷವು ಸಾರ್ವಜನಿಕವಾಗಿ ಪ್ರದರ್ಶಿತವಾಗುತ್ತಿರುವ ಲೋಭಕ್ಕೆ ಆಳವಾಗಿ ತಳಕು ಹಾಕಿಕೊಂಡಿದೆ ಎಂಬುದನ್ನು ಗೀತೆಯ ಮೂಲಕ ಕರ್ನಾಟಕದ ಮಕ್ಕಳು ಕಲಿತರೆ, ಅದು ನಿಜವಾಗಿಯೂ ಶ್ರೇಷ್ಠ ನೈತಿಕ ಪಾಠವಾದೀತು. ಕರ್ನಾಟಕದಲ್ಲಿಯ ಭ್ರಷ್ಟಾಚಾರ ಮತ್ತು ಹಿಂಸೆಗೆ ಈ ಪವಿತ್ರ ಗ್ರಂಥದಲ್ಲಿ ಮಾನ್ಯತೆ ಇಲ್ಲ ಎಂಬುದನ್ನು ಮಕ್ಕಳು ಅರಿತುಕೊಳ್ಳುವುದಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ನಾನು ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ಈ ನಿರ್ಧಾರವನ್ನು ಟೀಕಿಸಲು ನನ್ನ ಕಾರಣ ಗೀತೆಯಲ್ಲಿ ಇರುವುದೆಲ್ಲವೂ ಭಾರತದ ಸಂವಿಧಾನಕ್ಕೆ ಪೂರಕವಾಗಿಲ್ಲ ಎಂಬುದಕ್ಕೆ. ನಮ್ಮ ಸಂವಿಧಾನವು ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಪರಿಗಣಿಸುತ್ತದೆ, ಆ ಹಕ್ಕುಗಳನ್ನು ಖಾತ್ರಿಪಡಿಸುತ್ತದೆ. ಆದರೆ ಭಗವದ್ಗೀತೆಯು ಬೇರೊಂದು ಕಾಲದ ಗ್ರಂಥವಾಗಿದ್ದು, ಅದು ಸಮಾನತೆಯ ಆಧಾರದ ಸಮಾಜವನ್ನು ಒಂದು ಆದರ್ಶ ಸಮಾಜ ಎಂದು ಪರಿಗಣಿಸುವುದಿಲ್ಲ. ಅದು ’ವರ್ಣ-ಶುದ್ಧತೆ’ಯನ್ನು ಎತ್ತಿಹಿಡಿಯುವುದರ ಬಗ್ಗೆ ಹಾಗೂ ’ಕುಲ-ಕ್ಷಯ’ದ ಬಗ್ಗೆ ಹಾಗೂ ’ವರ್ಣ-ಸಂಕರ’ (ಬೇರೆ ಬೇರೆ ಸಾಮಾಜಿಕ ವರ್ಗಗಳ ರಕ್ತ ಮಿಶ್ರಣವಾಗುವುದು) ಭಯಾನಕವಾಗಿದೆ ಎಂದೆಲ್ಲ ಚರ್ಚಿಸುತ್ತದೆ. ಈ ಪರಿಕಲ್ಪನೆಯನ್ನು ಭಾರತದ ಸಂವಿಧಾನ ಒಪ್ಪುವುದಿಲ್ಲ. ಗೀತೆಯು ಪುನರ್ಜನ್ಮದ ಪರಿಕಲ್ಪನೆಯನ್ನು ನ್ಯಾಯಸಮ್ಮತಗೊಳಿಸುತ್ತದೆ ಹಾಗೂ ’ಕರ್ಮ’ದ ಆಧಾರದ ಮೇಲೆ ಸಾಮಾಜಿಕ ವಿಭಜನೆಗಳನ್ನು ವಿವರಿಸುತ್ತದೆ ಹಾಗೂ ಈ ಕರ್ಮವು ಕಪೋಲಕಲ್ಪಿತ ಹಿಂದಿನ ಜನ್ಮಗಳ ತನಕ ಹೋಗುತ್ತೆ. ಭಾರತದ ಪ್ರಜೆಗಳ ಅಥವಾ ಮಕ್ಕಳ ಮೇಲೆ ಭಾರತದ ಸಂವಿಧಾನವು ಈ ಕಲ್ಪನೆಯನ್ನು ಹೇರಲು ಅವಕಾಶ ನೀಡುವುದಿಲ್ಲ. ಸಂವಿಧಾನದ ದೃಷ್ಟಿಯಲ್ಲಿ ಇದು ’ಅಸಂವಿಧಾನಿಕ’ವಾಗುತ್ತದೆ ಏಕೆಂದರೆ ಇದು ಕ್ರಿಶ್ಚಿಯಾನಿಟಿಯ ತತ್ವವಾದ ’ಮೂಲ ಪಾಪ’ವನ್ನು (original sin) ಹೇರಿದಂತಾಗುತ್ತದೆ. ಗೀತೆ ಮತ್ತು ಸಂವಿಧಾನದ ನಡುವೆ ಇರುವ ಇಂತಹ ಮೂಲಭೂತ ವ್ಯತ್ಯಾಸಗಳ ಕಾರಣದಿಂದ ಎಲ್ಲಾ ಧರ್ಮದ ವಿದ್ಯಾರ್ಥಿಗಳಿಗೆ ಗೀತೆಯನ್ನು ಕಡ್ಡಾಯ ಮಾಡಲಾಗುವುದಿಲ್ಲ. ಜನರ ಪ್ರತಿನಿಧಿಗಳಿಗೆ ಇರುವ ಸಾಂವಿಧಾನಿಕ ನಿಬಂಧನೆಗಳ ಮೂಲಕ ಸರಕಾರಗಳು ರಚಿತವಾಗುತ್ತವೆ. ಹಾಗಾಗಿ ಸರಕಾರಗಳು ತಮ್ಮ ಕೆಲಸ ಮತ್ತು ಕಾರ್ಯಗಳನ್ನು ಸಾಂವಿಧಾನಕ ಚೌಕಟ್ಟಿನೊಳಗೇ ಇರಿಸಬೇಕು. ಶಾಲೆಗಳಲ್ಲಿ ಗೀತೆಯನ್ನು ಪರಿಚಯಿಸುವ ಆಸೆ ಇದ್ದರೂ ಸರಕಾರ ಹಾಗೆ ಮಾಡಬಾರದು. ವಿಜ್ಞಾನ ಮತ್ತು ಧರ್ಮದ ನಡುವಿನ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ಕಲಿಸಲು ಇತರ ಧರ್ಮಗಳ ಪವಿತ್ರ ಗ್ರಂಥಗಳನ್ನೂ ಪರಿಚಯಿಸಲು ಸಿದ್ಧವಾಗದ ಹೊರತು ಇದನ್ನು ಮಾಡಬಾರದು.

ಬಸವರಾಜ್ ಬೊಮ್ಮಾಯಿ

ಆದರೆ, ಸರಕಾರ ಇದನ್ನು ಏಕೆ ಮಾಡುತ್ತಿದೆ ಎಂಬುದರ ಬಗ್ಗೆ ನನಗಿನ್ನೂ ಖಚಿತತೆ ಇಲ್ಲ. ಸರಕಾರ ನಿಜವಾಗಿಯೂ ಗೀತೆಯನ್ನು ಪ್ರಚಾರ ಮಾಡಲು ಬಯಸುತ್ತಿದೆಯೋ ಅಥವಾ ಚುನಾವಣಾ ಲಾಭಕ್ಕಾಗಿ ಮಾಡುತ್ತಿದೆಯೋ ಎಂಬುದರ ಬಗ್ಗೆ ನನಗೆ ಗೊಂದಲವಿದೆ. ಈ ತೀರ್ಮಾನವನ್ನು ಜಾರಿಗೊಳಿಸಲು ಒತ್ತಾಯ ಮಾಡಿದರೆ, ಅದು ನ್ಯಾಯಾಲಯದ ದೀರ್ಘವಾದ ಪ್ರಕರಣವಾಗಿ ಸಿಲುಕಿಕೊಳ್ಳುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಬಿಜೆಪಿ ಹೇಳಿಕೊಳ್ಳುವುದೇನೆಂದರೆ, ತಾನು ಗೀತೆಯನ್ನು ಕಲಿಸಬಯಸುತ್ತಿದ್ದರೆ, ಹಿಂದೂ ವಿರೋಧಿಗಳು ಈ ಯೋಜನೆಯನ್ನು ತಡೆಯುತ್ತಿದ್ದಾರೆ ಹಾಗೂ ಇದರಿಂದ ಸಮಾಜವನ್ನು ಇನ್ನಷ್ಟು ಧ್ರುವೀಕರಿಸುತ್ತಿದ್ದಾರೆಂದು!

ಇತ್ತೀಚಿನ ತಿಂಗಳುಗಳಲ್ಲಿ ಕರ್ನಾಟಕವು ಈಗಾಗಲೇ ಹಲವು ಧ್ರುವೀಕರಣದ ಕ್ರಮಗಳ ಸರಣಿಯಿಂದ ಸಾಗಿ ಬಂದಿದೆ. ಮತಾಂತರ ನಿಷೇಧ ಕಾಯಿದೆ, ಹಿಜಾಬ್‌ಅನ್ನು ಒಂದು ಇಷ್ಯೂ ಆಗಿಸಿದ್ದು, ದೇವಸ್ಥಾನಗಳ ಅವರಣದ ಸುತ್ತ ಮುಸ್ಲಿಂ ವ್ಯಾಪಾರಿಗಳನ್ನು ನಿರ್ಬಂಧಿಸುವ ಅಸಂಬದ್ದವಾದ ಕಾನೂನು, ಹಲಾಲ್ ಮಾಂಸದ ಬಹಿಷ್ಕಾರ ಪ್ರೇರೇಪಿಸುವುದು ಹಾಗೂ ಅಲ್ಪಸಂಖ್ಯಾತರ ಸಂಸ್ಥೆಗಳನ್ನು ಸ್ಕ್ಯಾನರ್ ಅಡಿಯಲ್ಲಿ ತರುವುದು, ಈ ಎಲ್ಲ ಕ್ರಮಗಳು ಕರ್ನಾಟಕದ ಸಮಾಜವನ್ನು ಹಿಂದೆಂದೂ ಕಾಣದ ರೀತಿಯಲ್ಲಿ ವಿಭಜಿತಗೊಳಿಸಿವೆ. ಈ ಗೀತೆಯ ವಿಷಯದ ಸುತ್ತಲಿನ ನಿಲುವುಗಳು ಇನ್ನಷ್ಟು ಸಂಕಷ್ಟಕ್ಕೆ ದೂಡಲಿವೆ. ಕರ್ನಾಟಕದ ಸಾಮಾಜಿಕ ನೇಯ್ಗೆಯನ್ನು ಭಗ್ನಗೊಳಿಸುವುದರಿಂದ ಆಗುವ ದೀರ್ಘಕಾಲೀನ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸರ್ಕಾರ ಚಿಂತನೆ ಮಾಡಿದೆಯೇ?

ಇದರಿಂದ ಆಗಬಹುದಾದ ಪರಿಣಾಮಗಳು ಅಂದುಕೊಂಡಂತೆ ಇರದೇ, ಕರ್ನಾಟಕದ ’ಮೆಜಾರಿಟಿ’ ಜನರು ಈ ಕ್ರಮವನ್ನು ಮೆಚ್ಚದೇ ಇರಬಹುದಾಗಿದೆ. 2011ರ ಜನಗಣತಿಯ ’ತಾರ್ಕಿಕ’ ಅಂಕಿಅಂಶಗಳು ಕರ್ನಾಟಕದಲ್ಲಿ ಹಿಂದೂಗಳ ಜನಸಂಖ್ಯೆ 24% ಇದೆ ಹಾಗೂ ಮುಸ್ಲಿಮರ 12%, ಕ್ರಿಶ್ಚಿಯನ್ನರು 1.87% ಮತ್ತು ಜೈನರ, ಬೌದ್ಧರ, ಸಿಕ್ಖರ ಮತ್ತು ಇತರರ 1.2% ಜನಸಂಖ್ಯೆ ಇದೆ ಎಂದು ತೋರಿಸಬಹುದು. ಆದರೆ, ಕರ್ನಾಟಕದಲ್ಲಿ ’ಹಿಂದೂ’ ಅನ್ನುವುದು ಏಕರೂಪವಾದ ಕೆಟಗರಿ ಅಲ್ಲ.

ಈ ವಿಭಾಗ ಭಿನ್ನಭಿನ್ನ ನಂಬಿಕೆಗಳ ಮತ್ತು ವೈದಿಕ ವಿರೋಧಿ ಗುಂಪುಗಳಾದ ಪರಿಶಿಷ್ಟ ಜಾತಿಗಳು (19.5%), ಲಿಂಗಾಯತರು (14%), ಒಕ್ಕಲಿಗರು (11%) ಮತ್ತು ಕುರುಬರು (7%), ಇವೆಲ್ಲವುಗಳನ್ನು ಒಳಗೊಂಡಿದೆ. ಅವರೆಲ್ಲ ಭಾವನಾತ್ಮಕವಾಗಿ ಅಥವಾ ಆಧ್ಯಾತ್ಮಿಕವಾಗಿ ಗೀತೆಯೊಂದಿಗೆ ಹೇಗೆ ಸ್ಪಂದಿಸಬಲ್ಲರು? ಗೀತೆಯ ಮುಕ್ತಾಯದ ಅಧ್ಯಾಯ, 18ನೆಯ ಅಧ್ಯಾಯವು ವರ್ಣ ವ್ಯವಸ್ಥೆಯನ್ನು ಸಮರ್ಥಿಸುತ್ತದೆ. ಈ ಸಮರ್ಥನೆಯನ್ನು 21ನೆಯ ಶತಮಾನದ ಎಸ್‌ಸಿ ಸಮುದಾಯದ ಮಕ್ಕಳು ಒಪ್ಪಿಕೊಳ್ಳುವರು ಎಂದು ನಿರೀಕ್ಷಿಸಬಹುದೇ? ಲಿಂಗಾಯತ ಮಕ್ಕಳು ಗೀತೆಯ ಬದಲಿಗೆ ಅಲ್ಲಮ ಪ್ರಭು (12ನೆಯ ಶತಮಾನದ ಲಿಂಗಾಯತ ಶರಣ) ಅವರ ವಚನಗಳನ್ನು ಓದಲು ಬಯಸಬಹುದಲ್ಲವೇ ಹಾಗೂ ಕುರುಬ ಸಮುದಾಯದ ಮಕ್ಕಳು 16ನೆಯ ಶತಮಾನದ ಕವಿ ಕನಕದಾಸರ ರಚನೆಗಳನ್ನು ಓದಲು ಬಯಸಬಹುದಲ್ಲವೇ? ಅದರೊಂದಿಗೆ, ಕರ್ನಾಟಕದಲ್ಲಿನ ಕಳೆದ ಸಾವಿರ ವರ್ಷಗಳ ಗೀತ-ಭಾಷೆಯ ಶ್ರೀಮಂತವಾದ ತಾತ್ವಿಕ ಪರಂಪರೆಯು ಗೀತೆಯನ್ನು ’ದೇವರ ಮೂಲವನ್ನು ಪೂಜಿಸುವ ಸಾಧ್ಯತೆಯಲ್ಲಿ, ಅದನ್ನು ಒಂದು ಅವತಾರದ ಏಕೀಕೃತ ನೋಟದಂತೆ ಕಾಣದೆ, ಬದಲಿಗೆ ದೈವಶಾಸ್ತ್ರದ ಒಕ್ಕೂಟ’ದಂತೆ ಬಿಂಬಿಸುವ ಸಾಧ್ಯತೆ ಇದೆ. ಈ ಪರಂಪರೆಯು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ತತ್ವಜ್ಞಾನದಲ್ಲಿ ಆಳವಾಗಿ ಸೇರಿಕೊಂಡಿದೆ. ಇದನ್ನು ರಾಷ್ಟ್ರಕವಿ ಎಂದೇ ಕರೆಯಲಾದ ಕವಿ ಕುವೆಂಪು (1904-1994) ಅವರ ಕೃತಿಗಳಲ್ಲಿ ನೋಡಬಹುದು. ಕೊನೆಯದಾಗಿ, ಒಂದು ವೇಳೆ ಗೀತೆಯನ್ನು ಪರಿಚಯಿಸಲಾದರೂ, ದೇವನಾಗರಿಯ ಲಿಪಿಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅದನ್ನು ಒಂದು ಕಿರಿಕಿರಿ ಎಂದೇ ಕಾಣಲಿದ್ದಾರೆ.

ಕೃಷ್ಣ ಅಥವಾ ರಾಮನಿಗಿಂತ ಶಿವ, ಮಹಾವೀರ ಮತ್ತು ಶಕ್ತಿ ದೇವತೆಯರು ಹೆಚ್ಚು ಜನಪ್ರಿಯವಾಗಿರುವ ಈ ರಾಜ್ಯದ ಪ್ರಾದೇಶಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸವಾಲುಗಳನ್ನು ಇಟ್ಟುಕೊಂಡು, ಮುಖ್ಯಮಂತ್ರಿ ಬೊಮ್ಮಾಯಿಯವರು ಶಾಲೆಗಳಲ್ಲಿ ಗೀತೆಯನ್ನು ಪರಿಚಯಿಸುವ ದಾರಿಯನ್ನು ಏಕೆ ಆಯ್ಕೆ ಮಾಡಿಕೊಂಡಿದ್ದಾರೆ? ಮೇಲ್ನೋಟಕ್ಕೆ ಇದು ಬಿಜೆಪಿಯ ಸ್ವಯಂ ವಿನಾಶದ ದಾರಿ ಎಂದು ಕಾಣುತ್ತಿದೆ. ಆದರೆ, ಚುನಾವಣಾ ಗಣಿತವನ್ನು ನೋಡಿದರೆ, ಮುಂದಿನ ವರ್ಷ ಬರಲಿರುವ ಚುನಾವಣೆಯಲ್ಲಿ ಅಹಿಂದ ಗಟ್ಟಿಯಾಗುವುದನ್ನು ಎದುರಿಸಲು ಅವರು ಬಯಸುವುದಿಲ್ಲ. ಅಹಿಂದ ಪದವನ್ನು ಮೊದಲಿಗೆ ದೇವರಾಜ್ ಅರಸ್ ಅವರು ಬಳಸಿದ್ದರು. ಅಹಿಂದ ಎಂದರೆ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಪದಗಳ ಸಂಕ್ಷಿಪ್ತ ರೂಪ. ಸಿದ್ದರಾಮಯ್ಯ, ಕುರುಬ ನಾಯಕರಾದ ಇವರು ಈ ಪರಿಕಲ್ಪನೆಯನ್ನು ಸಕ್ರಿಯವಾಗಿ ಪ್ರಚುರಪಡಿಸುತ್ತಿದ್ದಾರೆ. ಬಿಜೆಪಿ ಬಗ್ಗೆ ಲಿಂಗಾಯತರ ಅಸಮಧಾನವು ಹೆಚ್ಚುತ್ತಿದೆ. ಒಂದು ವೇಳೆ ಲಿಂಗಾಯತರ ಒಂದು ಸಣ್ಣ ಭಾಗದ ಬೆಂಬಲದಿಂದಲಾದರೂ ಅಹಿಂದಾದ ಒಂದು ಮೈತ್ರಿಕೂಟ ಹೊರಹೊಮ್ಮಿದರೆ, ಬಿಜೆಪಿಯು ತನ್ನ 2013ರ ಅಥವಾ 2018ರ ಪರಿಸ್ಥಿತಿಗೆ ಅಥವಾ ಅದಕ್ಕಿಂತ ಕೆಟ್ಟ ಪರಿಸ್ಥಿಗೆ ಮರಳಬಹುದು. ದಕ್ಷಿಣದಲ್ಲಿಯ ಒಂದೇಒಂದು ನೆಲೆಯು ಗಣನೀಯವಾಗಿ ದುರ್ಬಲಗೊಂಡಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ರಾಕ್ಷಸರಂತೆ ಬಿಂಬಿಸುವ, ಅದರಿಂದ ಧ್ರುವೀಕರಣಕ್ಕೆ ಪ್ರೇರೇಪಿಸಿ, ಲಾಭ ಪಡೆಯುವ ಬಿಜೆಪಿಯ ಈ ಕಟ್ಟ ಲೋಭವು, ಈಗ ಹೇಗಾದರೂ ಮಾಡಿ ತನ್ನ ಹಿಂಡುಗಳನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳುವ ಹಾಗೂ ಲಿಂಗಾಯತರನ್ನು ಬಿಜೆಪಿಯ ಕ್ಯಾಂಪಿನಲ್ಲಿ ಉಳಿಸಿಕೊಳ್ಳುವುದೇ ಅವರ ಪ್ರಯತ್ನವಾಗಿದೆ. ಇನ್ನೊಂದೆಡೆ, ಈ ರೀತಿಯ ರಾಜಕೀಯದ ಯಶಸ್ಸಿನಿಂದ ಭಾರತದ ಸಂವಿಧಾನಕ್ಕೆ ಧಕ್ಕೆಯಾಗುತ್ತಲೇ ಇದೆ. ಕರ್ನಾಟಕದ ಮುಖ್ಯಮಂತ್ರಿಯ ಮುಂದಿನ ಹಾದಿ ಅತ್ಯಂತ ಅಪಾಯಕಾರಿಯದ್ದಾಗಿದೆ ಅಥವಾ ಉಪನಿಷದ್‌ನ ಒಂದು ವಾಕ್ಯ ಹೇಳಿದಂತೆ ’ಕ್ಷುರಾಸ್ಯ ಧಾರ ನಿಸಿಹ್ತಿ ದುರ್ತ್ಯಾಯ’ ಅಂದರೆ ಕತ್ತಿಯ ಅಲಿಗಿನ ಮೇಲೆ ನಡೆದಂತೆ ಆಗಿದೆ.

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಡಿಸೆಂಬರ್‌ನಿಂದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ತರಗತಿ: ಶಿಕ್ಷಣ ಸಚಿವ ಬಿಸಿ ನಾಗೇಶ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....