HomeUncategorized‘ನಮ್ಮ ಕೈಗಳಿಗೆ ರಕ್ತ ಮೆತ್ತಿಕೊಂಡಿದೆ...’ - ಸಂಪಾದಕರೊಬ್ಬರ ತಪ್ಪೊಪ್ಪಿಗೆ!

‘ನಮ್ಮ ಕೈಗಳಿಗೆ ರಕ್ತ ಮೆತ್ತಿಕೊಂಡಿದೆ…’ – ಸಂಪಾದಕರೊಬ್ಬರ ತಪ್ಪೊಪ್ಪಿಗೆ!

‘ಈ ದೇಶವನ್ನು ಬಾಧಿಸುತ್ತಿರುವ ಎಲ್ಲಾ ತೊಂದರೆಗಳಿಗೆ ಏಕೈಕ ಕಾರಣವೆಂದರೆ ಅಲ್ಪಸಂಖ್ಯಾತರ ಅಸ್ತಿತ್ವ ಎಂದು ಬಿಂಬಿಸಿದೆವು’

- Advertisement -
- Advertisement -

ನಾಲ್ಕು ದಿನಗಳ ಹಿಂದೆ `ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಸಂಪಾದಕರು ಬರೆದ ಈ ಸಂಪಾದಕೀಯ ಬರಹ ಮಾಧ್ಯಮಗಳಲ್ಲಿರುವ ಪ್ರಭುತ್ವದ ಆರಾಧಕರು, ನಮ್ಮ ಮಧ್ಯಮ-ಮೇಲ್ಮಧ್ಯಮ ವರ್ಗದವರೂ ಪ್ರಾಯಶ್ಚಿತ ಮಾಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸುತ್ತದೆ….ನಮ್ಮ ಓದುಗರಿಗಾಗಿ ಅದರ ಅನುವಾದವನ್ನು ಇಲ್ಲಿ ನೀಡುತ್ತಿದ್ದೇವೆ.

ಮಾಧ್ಯಮಗಳು ಮತ್ತು ನ್ಯಾಯಾಂಗ ಸೇರಿದಂತೆ ಜನರಿಗೆ ಜವಾಬ್ದಾರರಾಗಿರುವ ಎಲ್ಲಾ ಸಂಸ್ಥೆಗಳು ಸರ್ಕಾರಕ್ಕೆ ಕನ್ನಡಿ ಹಿಡಿಯುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರೆ, ಕೋವಿಡ್ ಬಿಕ್ಕಟ್ಟು ಈ ದುರಂತದ ಮಟ್ಟಕ್ಕೆ ಮುಟ್ಟುತ್ತಿರಲಿಲ್ಲ.

ಈ ವಾರದ ಆರಂಭದಲ್ಲಿ ಹಿರಿಯ ರಾಜಕೀಯ ಮುಖಂಡರೊಂದಿಗೆ ಆಸಕ್ತಿದಾಯಕ ಸಂಭಾಷಣೆ ನಡೆದಿತ್ತು, ಇದು ರಾಜ್ಯ ಚುನಾವಣೆಯ ಸಂಭವನೀಯ ಫಲಿತಾಂಶದೊಂದಿಗೆ ಪ್ರಾರಂಭವಾಯಿತು. ನಂತರ ಈ ಚರ್ಚೆ ದೇಶಾದ್ಯಂತ ಸಾಂಕ್ರಾಮಿಕ ರೋಗಕ್ಕೆ ಜನರು, ಸುಡುವ ತಾಪಮಾನದಲ್ಲಿ ಹಕ್ಕಿಗಳು ನೆಲಕ್ಕೆ ಉರುಳುವಂತೆ ಜನ ಸಾಯುತ್ತಿರುವುದರ ಕಡೆ ತಿರುಗಿತು. ಈ ಸರ್ಕಾರವು ಅಧಿಕಾರದಲ್ಲಿದ್ದ ಏಳು ವರ್ಷಗಳಲ್ಲಿ, ಇದು ಅನೇಕ ಬಿಕ್ಕಟ್ಟುಗಳನ್ನು ಸೃಷ್ಟಿಸಿತು. ಅವುಗಳಲ್ಲಿ ಹೆಚ್ಚಿನವು ಆಧಾರರಹಿತ, ದೂರದೃಷ್ಟಿಯಿಲ್ಲದ ನಿರ್ಧಾರಗಳ ಮೂಲಕ ಜನರ ಮೇಲೆ ಹೇರಿದ ಬಿಕ್ಕಟ್ಟುಗಳಾಗಿದ್ದವು.. ಆದರೆ ಈ ಬಾರಿ, ಆ ರಾಜಕಾರಣಿ ಹೇಳಿದಂತೆ, ಸರ್ಕಾರ ಅಥವಾ ಪಕ್ಷವು ಒಂದು ಕತೆ ಕಟ್ಟಲು (ಸುಳ್ಳು ನಿರೂಪಣೆಯನ್ನು ರಚಿಸಲು) ಅಥವಾ ಹಿನ್ನಡೆಯನ್ನು ಎದುರಿಸಲು ಮಾಯಾಜಾಲವನ್ನು ನಿರ್ಮಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಕೋವಿಡ್ ಎರಡನೇ ಅಲೆಯನ್ನು ವಿನಾಶಕಾರಿಯಾಗಿ ನಿಭಾಯಿಸಿದ್ದಕ್ಕಾಗಿ ನರೇಂದ್ರ ಮೋದಿ ಸರ್ಕಾರ ಇಂದು ಬೆಂಕಿಯ ಮೇಲೆ ನಿಂತಿದೆ. ಸ್ವಲ್ಪ ಸಮಯದ ಹಿಂದೆ, 2021 ರ ಜನವರಿಯಲ್ಲಿ, ಈ ಸರ್ಕಾರವು ವಿಶ್ವದ ಬೇರೆ ನಾಯಕರಿಗೆ ಬೊಬ್ಬೆ ಹೊಡೆದು, ವೈರಸ್ ಅನ್ನು ಹೇಗೆ ಸೋಲಿಸುವುದು ಎಂಬುದರ ಬಗ್ಗೆ ಭಾರತದ ಉದಾಹರಣೆಯನ್ನು ನೀಡಿತು. ಜನರು ಅದನ್ನು ನಂಬಿದ್ದರು. ಇದಾಗಿ ಒಂದು ತಿಂಗಳ ನಂತರ, ಸಾಂಕ್ರಾಮಿಕ ರೋಗದ ಮೊದಲ ಅಲೆಯನ್ನು ನಿಭಾಯಿಸುವಲ್ಲಿ ಮೋದಿ ನಾಯಕತ್ವವನ್ನು ಬಿಜೆಪಿ ಹೊಗಳಿಕೊಂಡಿತು. ಬಿಜೆಪಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಬಗ್ಗೆ ನಾವು ನಂಬಿಕೆ ಇಟ್ಟುಕೊಂಡಿದ್ದೇವೆ. ಒಂದೆರಡು ವಾರಗಳ ನಂತರ, ಕಳೆದ ಒಂದು ವರ್ಷದಲ್ಲಿ ಹನ್ನೆರಡು ಬಾರಿ ರಾಜೀನಾಮೆ ನೀಡಬೇಕಾಗಿದ್ದ ಆರೋಗ್ಯ ಸಚಿವರು, ನಾವು ಕೊರೊನಾ ಬಿಕ್ಕಟ್ಟಿನ ಕೊನೆಯ ಹಂತದಲ್ಲಿದ್ದೇವೆ ಎಂದು ಘೋಷಿಸಿದರು.

ಅದೇ ಅವಧಿಯಲ್ಲಿ ಪ್ರತಿ-ಎಚ್ಚರಿಕೆಗಳು, ಮುನ್ನೆಚ್ಚರಿಕೆಗಳು ಇದ್ದವು. ಆದರೆ ಯಾವುದಕ್ಕೂ ಗಮನ ಹರಿಸಲಿಲ್ಲ. ಫೆಬ್ರವರಿಗೂ ಮೊದಲೇ, ರಾಹುಲ್ ಗಾಂಧಿ (ಪ್ರತಿಸ್ಪರ್ಧಿ ಬಿಜೆಪಿಯಿಂದ ’ಪಪ್ಪು’ ಎಂದು ಕರೆಯಲ್ಪಟ್ಟವರು) ವೈರಸ್‌ನಿಂದ ಉಂಟಾಗುವ ಬೆದರಿಕೆ ತುಂಬಾ ಅಪಾಯಕಾರಿಯಾಗಲಿದೆ ಎಂದು ಎಚ್ಚರಿಸಿದರು. ಅದನ್ನು ತಡೆಯಲು ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಆದರೆ ಅವರ ಮಾತನ್ನು ಸರ್ಕಾರ ಏಕೆ ಕೇಳಬೇಕು? ಅವರಿಗೆ ಏನೂ ತಿಳಿದಿಲ್ಲ ಎಂಬ ಸಾಮೂಹಿಕ ತಿರಸ್ಕಾರಗಳನ್ನು ಮುನ್ನೆಲೆಗೆ ತರಲಾಗಿತು. ವೈರಾಲಜಿಸ್ಟ್‌ಗಳು ಮತ್ತು ಇತರ ತಜ್ಞರು ಕೂಡ ಎಚ್ಚರಿಕೆಯ ಗಂಟೆಯನ್ನು ಧ್ವನಿಸಿದರು. ವಿಶ್ವದ ಪ್ರತಿಯೊಂದು ದೇಶವು ಎರಡನೇ, ಮೂರನೇ ಮತ್ತು ನಾಲ್ಕನೇ ಅಲೆಗಳನ್ನು ಎದುರಿಸಿದೆ ಮತ್ತು ಭಾರತವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಆದರೆ ನಾವು ಕುಂಭಮೇಳ ಮತ್ತು ಚುನಾವಣೆಗಳೊಂದಿಗೆ ಮುಂದೆ ಹೋದೆವು. ದೇಶದಲ್ಲಿ 2.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಾದ ದಿನದಲ್ಲಿ, ನಾವು “ಬಂಗಾಳದಲ್ಲಿ ಇದುವರೆಗಿನ ಅತಿದೊಡ್ಡ ರ್‍ಯಾಲಿಗಳ” ಬಗ್ಗೆ ಸಂತೋಷಪಟ್ಟಿದ್ದೇವೆ.

ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ರ್‍ಯಾಲಿಗಳು ಮತ್ತು ಕುಂಭಗಳ ಹೊರತಾಗಿಯೂ ಬಂಗಾಳ ಅಥವಾ ಉತ್ತರಾಖಂಡದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿಲ್ಲ ಎಂಬ ನಿರೂಪಣೆಯನ್ನು ಹರಡಲಾಗಿತು. ಎರಡೂ ರಾಜ್ಯಗಳು ಪ್ರಕರಣಗಳ ತ್ವರಿತ ಏರಿಕೆಗೆ ಪ್ರಾರಂಭವಾದ ನಂತರ, ಈ ನಿರೂಪಣೆತನ್ನು ಕೈ ಬಿಡಲಾಗಿತು. ಬದಲಾಗಿ, ಈಗ ನಮಗೆ ಏನು ಹೇಳಲಾಗಿದೆ? ’ಎರಡನೇ ಅಲೆಯನ್ನು ನಿರೀಕ್ಷಿಸಲಾಗಿತ್ತು, ಆದರೆ ಕೊರೊನಾ ’ಸುನಾಮಿ’ಯನ್ನು ಅಲ್ಲ’ ಎಂದು.

ಆದರೆ, ಸಾಮೂಹಿಕ ಶವಸಂಸ್ಕಾರಗಳಿಗೆ ಕಾರಣವಾದ ಎರಡನೆಯ ಅಲೆಯನ್ನು ನಿರ್ವಹಿಸಲಾಗದ ಸುನಾಮಿಯಾಗಿ ಪರಿವರ್ತಿಸಿದವರು ಯಾರು? ಬಂಗಾಳದಲ್ಲಿ ಕೇವಲ ದೀದಿ ಹಟಾವೊ ಅಭಿಯಾನದಲ್ಲಿ ನಿರತರಾಗುವ ಬದಲು ನಾವು ಜಾಗರೂಕರಾಗಿದ್ದರೆ, ಕೇಂದ್ರ ಮತ್ತು ರಾಜ್ಯಗಳು ಒಂದು ತಂಡವಾಗಿ ಕೆಲಸ ಮಾಡಿದ್ದರೆ ಮತ್ತು ಕಳೆದ ವರ್ಷದ ಅನುಭವಗಳಿಂದ ಕಲಿತ ಪಾಠಗಳ ನೆರಳಿನಲ್ಲಿ ಸಾಧ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಒಟ್ಟಗೂಡಿಸಿದ್ದರೆ, ಇತರ ದೇಶಗಳು ಮಾಡಿದಂತೆ ನಾವು ವಿದೇಶಿ ಲಸಿಕೆಗಳಿಗೆ ಆದೇಶಗಳನ್ನು ನೀಡಿದ್ದರೆ…..(ಈ ಪಟ್ಟಿಗೆ ಅಂತ್ಯವಿಲ್ಲ) ಈ ಸುನಾಮಿಗೆ ಒಂದು ಬ್ರೇಕ್ ಹಾಕಬಹುದಿತ್ತು ಅಲ್ಲವೆ?

ಆಂಬ್ಯುಲೆನ್ಸ್‌ಗಳ ಉದ್ದದ ಸಾಲುಗಳು, ಸ್ಮಶಾನದಲ್ಲಿ ಕಟ್ಟಿಗೆ ಪೇರಿಸಿ ಸುಡುವುದು ಮತ್ತು ಆಮ್ಲಜನಕ ಕಿಟ್‌ಗಳೊಂದಿಗಿನ ರೋಗಿಗಳು ಆಸ್ಪತ್ರೆಗಳ ಹೊರಗೆ ಪ್ರವೇಶಕ್ಕಾಗಿ ಅನಂತವಾಗಿ ಕಾಯುವುದು ಮುಂದುವರೆಯುತ್ತಲೆ ಇದೆ. ಇದನ್ನು ಮರೆಮಾಚಲು ವಾಮಮಾರ್ಗದ ಪ್ರಯತ್ನಗಳು ಇನ್ನೂ ನಡೆಯುತ್ತಿವೆ, ಆದರೆ ಎಲ್ಲವು ಕಣ್ಣಿಗೆ ರಾಚುವಂತಿದೆ.

ಇದನ್ನೂ ಓದಿ: ನಟಿ ಕಂಗನಾ ರಣಾವತ್‌ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿದ ಟ್ವಿಟರ್‌!

ಕೇಂದ್ರವು ಕಳೆದ ವರ್ಷವೇ 162 ಆಮ್ಲಜನಕ ಸ್ಥಾವರಗಳನ್ನು ಮಂಜೂರು ಮಾಡಿತು. ಆದರೆ ರಾಜ್ಯಗಳು / ಆಸ್ಪತ್ರೆಗಳು ಅವುಗಳನ್ನು ನಿರ್ಬಧಿಸಿದವು ಎಂದು ಈಗ ಆರೋಪ ಮಾಡುತ್ತಿದ್ದಾರೆ. ಕ್ಷಮಿಸಿ, ದೇಶದಲ್ಲೇ ಉತ್ತಮವಾಗಿ ನಿರ್ವಹಿಸಲ್ಪಡುವ ರಾಜ್ಯವಾದ ಉತ್ತರ ಪ್ರದೇಶಕ್ಕೆ ಅಂತಹ 14 ಸ್ಥಾವರಗಳನ್ನು ಮಂಜೂರು ಮಾಡಲಾಗಿತ್ತು ಆದರೆ ಒಂದನ್ನು ಮಾತ್ರ ಸ್ಥಾಪಿಸಲಾಗಿದೆ. ಯಾರನ್ನು ದೂಷಿಸುವುದು? ನಾವು ಈಗ ಮಾಡುತ್ತಿರುವುದು ಆಮ್ಲಜನಕಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡುವ ಅಥವಾ ಮನವಿ ಮಾಡುವ ಜನರ ವಿರುದ್ಧ ಎಫ್‌ಐಆರ್ ದಾಖಲಿಸುವುದು.

ಹೌದು, ಕಾರ್ಪೊರೇಟ್ ಆಸ್ಪತ್ರೆಗಳು ತಮ್ಮದೇ ಆದ ಕ್ಯಾಪ್ಟಿವ್ ಆಕ್ಸಿಜನ್ ಸ್ಥಾವರಗಳನ್ನು ನಿರ್ಮಿಸಿರಬೇಕು. ಸಾಂಕ್ರಾಮಿಕ ರೋಗದಿಂದ ಆರೋಗ್ಯ ಕ್ಷೇತ್ರವನ್ನು ಸ್ವಾಧೀನಪಡಿಸಿಕೊಂಡ ನಂತರ, ಕೇಂದ್ರವು ಅಂತಹ ನಿರ್ದೇಶನವನ್ನು ನೀಡುವುದನ್ನು ಅಥವಾ ರಾಜ್ಯಗಳು ಅದನ್ನು ಮಾಡಬೇಕೆಂದು ಒತ್ತಾಯಿಸುವುದನ್ನು ಯಾರು ನಿಲ್ಲಿಸಿದರು. ಅವರನ್ನು ಯಾವುದು ತಡೆಯಿತು? ಭಿನ್ನಮತೀಯರ ವಿರುದ್ಧ ಪ್ರಕರಣಗಳನ್ನು ಜಡಿಯಲು ಪುರಾತನ ಕಾಯಿದೆಗಳನ್ನು ಅಗೆಯುವ ಸರ್ಕಾರಕ್ಕೆ, ಇದು ಸುಲಭದ ಕೆಲಸವಾಗಿತ್ತು.

ಈ ಎಲ್ಲ ಪ್ರಶ್ನೆಗಳು ರಾಷ್ಟ್ರವಿರೋಧಿ ಎಂದು ಬ್ರಾಂಡ್ ಮಾಡಬಹುದಾದ ’ಸಾಮಾನ್ಯ ಶಂಕಿತರಿಂದ’ ಬಂದಿದ್ದರೆ ಇದನ್ನೂ ಕಡೆಗಣಿಸಲಾಗುತ್ತಿತ್ತು. ಆದರೆ ಈ ಎಲ್ಲ ಪ್ರಶ್ನೆಗಳು ಈಗ ಬಿಜೆಪಿಯ ಪ್ರಮುಖ ಬೆಂಬಲಿಗರು ಎನ್ನಲಾದ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳಿಂದ ಬರುತ್ತಿವೆ. ನೋಟು ಅಮಾನ್ಯೀಕರಣವು ನಿಜವಾಗಿಯೂ ಶ್ರೀಮಂತರ ಸಂಪತ್ತಿಗೆ ಕೊಕ್ಕೆ ಹಾಕುವ ಉದ್ದೇಶ ಹೊಂದಿದೆ ಎಂದು ಈ ವರ್ಗಗಳು ನಂಬಿದ್ದವು. ಆದರೆ ಅದರಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವವರು ಬಡವರು ಎಂದು ವಿಷಾದಿಸಿದ ಅತ್ಯುತ್ತಮ ತಜ್ಞರನ್ನು ನಾವು ಲೇವಡಿ ಮಾಡಿದ್ದೇವೆ. ಈ ದೇಶವನ್ನು ಬಾಧಿಸುತ್ತಿರುವ ಎಲ್ಲಾ ತೊಂದರೆಗಳಿಗೆ ಏಕೈಕ ಕಾರಣವೆಂದರೆ ಅಲ್ಪಸಂಖ್ಯಾತರ ಅಸ್ತಿತ್ವ! ಕಳೆದ ವರ್ಷ ತಬ್ಲಿಘಿ ಜಮಾಅತ್ ವಿರುದ್ಧದ ದಾಳಿಯನ್ನು ನೆನಪಿಸಿಕೊಳ್ಳಿ.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ಒಂದು ಪ್ರಭುತ್ವ ಅಥವಾ ಸರ್ಕಾರವು ನೀಡುವ ಎಲ್ಲಾ ಸವಲತ್ತುಗಳನ್ನು (ಪಕ್ಷವನ್ನು ಲೆಕ್ಕಿಸದೆ) ಯಾವಾಗಲೂ ನಿರೀಕ್ಷಿಸುವ ಮತ್ತು ಸ್ವೀಕರಿಸುವ ಒಂದು ವಿಭಾಗಕ್ಕೆ ಮೀಸಲಾತಿ ಕ್ರಮದ ಬಗ್ಗೆ ಅಸಡ್ಡೆಯಿದೆ. ಈ ಎರಡನೇ ಅಲೆ ಸುರಕ್ಷಿತ ವಲಯದಲ್ಲಿರುವ ಗೇಟೆಡ್ ಸಮುದಾಯಗಳನ್ನೂ ಮುಳುಗಿಸುತ್ತಿದೆ. ಉನ್ನತ ಮತ್ತು ಪ್ರಬಲರು ಅನಿಸಿದ ನ್ಯಾಯಾಧೀಶರು, ಅಧಿಕಾರಿಗಳು, ಪತ್ರಕರ್ತರು ಮತ್ತು ಸಂಸದರು ಹಾಸಿಗೆಗಳು ಅಥವಾ ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ಮಧ್ಯಮ ವರ್ಗದವರು ಇದ್ದಕ್ಕಿದ್ದಂತೆ ಈ ನೋವಿನ ಪ್ರಜ್ಞೆಯನ್ನು ಅನುಭವಿಸುತ್ತಿದ್ದಾರೆ. ಆಸ್ಪತ್ರೆಗಳು ಬೆಲೆಗಳನ್ನು ಹೆಚ್ಚಿಸುವುದರೊಂದಿಗೆ ಈ ವರ್ಗದ ಉಳಿತಾಯವು ವೇಗವಾಗಿ ಖಾಲಿಯಾಗುತ್ತಿರುವಾಗಿದೆ. ತಮ್ಮನ್ನು ಅನಾಥರನ್ನಾಗಿ ಮಾಡಲಾಗಿದೆ ಅಥವಾ ತಮ್ಮನ್ನು ಕೈಬಿಡಲಾಗಿದೆ ಎಂದು ಈ ವರ್ಗದ ಜನಕ್ಕೆ ಭಾವನೆ ಮೂಡುತ್ತಿದೆ. ಪ್ರತಿ ಔಷಧಿ / ಉಪಕರಣಗಳು ಎಂಆರ್‌ಪಿಯ ಎರಡು-ಮೂರು ಪಟ್ಟು ದರದಲ್ಲಿ ಮಾರಾಟವಾಗುವ ಸ್ಥಿತಿಯಿಂದ ಈ ಮಧ್ಯಮ ವರ್ಗ ಆಘಾತ ಅನುಭವಿಸುತ್ತಿದೆ.

ಕಳೆದ ವರ್ಷ ಸಾವಿರಾರು ವಲಸಿಗರು ಅವೈಜ್ಞಾನಿಕ ಮತ್ತು ಹಠಾತ್ ಲಾಕ್‌ಡೌನ್‌ನಲ್ಲಿ ಸಿಕ್ಕಿಕೊಂಡು, ತಮ್ಮ ಮನೆಗಳನ್ನು ತಲುಪಲು ನೂರಾರು ಕಿಲೋಮೀಟರ್ ನಡೆದಾಗ ನಾವು ಅದರ ಬಗ್ಗೆ, ಆ ದಾರುಣತೆಯ ಬಗ್ಗೆ ಕೇರ್ ಮಾಡಲೇ ಇಲ್ಲ. ಸರ್ಕಾರದ ಕಾನೂನು ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ, ’ಅಂತಹ ಪರಿಸ್ಥಿತಿಗೆ ಯಾವುದೇ ಪುರಾವೆಗಳಿಲ್ಲ’ ಎಂದು ಹೇಳಿದಾಗ ನಾವು ಆಘಾತಕ್ಕೊಳಗಾಗಲಿಲ್ಲ. ಆದರೆ ಅದೇ ಹದ್ದುಗಳು ಈಗ ನ್ಯಾಯಾಲಯಗಳಿಗೆ ಅಳುವ ಮಗು ಆಗಬೇಡಿ-ಡೋಂಟ್ ಬಿ ಎ ಕ್ರೈ ಬೇಬಿ- ಎಂದು ಹೇಳಿದಾಗ, ನಾವು ಗಾಬರಿಗೊಳ್ಳುತ್ತೇವೆ. ಏಕೆಂದರೆ ಈಗ ವೈರಸ್ ನಮ್ಮ ಮನೆ ಬಾಗಿಲಿಗೆ ತಲುಪಿದೆ.ಒಂದು ವರ್ಷ ಕಾಲ ಆರಾಮಾಗಿದ್ದ ನಮ್ಮ ಸುರಕ್ಷಿತ ತಾಣಗಳಿಗೂ ವೈರಸ್ ಬಂದಿದೆ. ಹಾಸಿಗೆಗಳು, ಆಮ್ಲಜನಕ ಅಥವಾ ಔಷಧಿಗಳಿಗಾಗಿ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಹಿಂದೆಂದೂ ನಮಗೆ ಬಂದಿರಲಿಲ್ಲ.

ಇದನ್ನೂ ಓದಿ: ವಾರಣಾಸಿ, ಅಯೋಧ್ಯ, ಮಥುರಾ ಪಂಚಾಯತ್‌ ಚುನಾವಣೆ: ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಮುಖಭಂಗ!

ನಮ್ಮ ಆತ್ಮನಿರ್ಭರತಾ ಎಂಬುದು ಎಂದೂ ಪ್ರಬಲವಾಗಿಲ್ಲ. ನಾವು ಮೂಲತಃ ಒಂದು ಅಸಮಾನ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಎಲ್ಲ ಸರ್ಕಾರಗಳು ಅವಕ್ಕೆ ನಿಯೋಜಿಸಲಾದ ಎರಡು ಪ್ರಮುಖ ಕರ್ತವ್ಯಗಳಾದ ಆರೋಗ್ಯ ಮತ್ತು ಶಿಕ್ಷಣವನ್ನು ನಿರ್ಲಕ್ಷ್ಯ ಮಾಡುತ್ತ ಬಂದಿದ್ದು ಈ ಪ್ರಮಾಣದ ಬಿಕ್ಕಟ್ಟಿಗೆ ಕಾರಣವಾಗಿದೆ. ಎಲ್ಲಿಯವರೆಗೆ ಬಡವರಿಗೆ ಮಾತ್ರ ಆರೋಗ್ಯ ಮತ್ತು ಶಿಕ್ಷಣವನ್ನು ನಿರಾಕರಿಸಲಾಗಿತ್ತೋ ಅಲ್ಲಿಯವರೆಗೆ ನಾವು ಅದರ ಬಗ್ಗೆ ಕೇರ್ ಮಾಡಲಿಲ್ಲ. ಈಗ, ಇದನ್ನು ನಮಗೂ ನಿರಾಕರಿಸಲಾಗುತ್ತಿದೆ, ಅದಕ್ಕಾಗಿಯೇ ಇಷ್ಟು ದೊಡ್ಡ ದೇಶಕ್ಕೆ ದಿನಕ್ಕೆ 3 ಸಾವಿರಕ್ಕಿಂತ ಹೆಚ್ಚು ಸಾವುಗಳು ತೀರಾ ಕಡಿಮೆ ಎಂಬ ಬಿಜೆಪಿ ಬೆಂಬಲಿಗರ ಟ್ವೀಟ್‌ಗಳು ಈಗ ನಮ್ಮನ್ನು ರಂಜಿಸುತ್ತಿಲ್ಲ ಅಥವಾ ಅದರ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ.

ನಾಗರಿಕರನ್ನು ಕೇವಲ ಅಂಕಿಅಂಶಗಳಿಗೆ ಇಳಿಸಿದಾಗ ಇದು ಸಂಭವಿಸುತ್ತದೆ. ಸಾವುಗಳು ಕನಿಷ್ಠ 3-5 ಸಾವಿರ ಎಂದು ಅಧಿಕೃತ ದಾಖಲೆಗಳು ತಿಳಿಸುವಾಗ, ಸ್ಮಶಾನಗಳಲ್ಲಿ ಶವ ಸಂಸ್ಕಾರಕ್ಕೆ ಪಾಳಿ ಇರುವಾಗ ಇದು ಈಗ ಎಲ್ಲರನ್ನೂ ತಟ್ಟುತ್ತಿದೆ.

ಪ್ರಜಾಪ್ರಭುತ್ವ ಕೇವಲ ಚುನಾವಣೆಗಳನ್ನು ಗೆಲ್ಲುವುದು ಮಾತ್ರವಲ್ಲ. ಮುಖ್ಯವಾಹಿನಿಯ ಮಾಧ್ಯಮಗಳು (ನಾನು ಅದರ ಒಂದು ಭಾಗವಾಗಿರುವೆ), ನ್ಯಾಯಾಂಗ ಮತ್ತು ಜನರಿಗೆ (ಸರ್ಕಾರಕ್ಕೆ ಅಲ್ಲ!) ಜವಾಬ್ದಾರರಾಗಿರುವ ಇತರ ಸಂಸ್ಥೆಗಳು ವಾಸ್ತವಕ್ಕೆ ಕನ್ನಡಿಯನ್ನು ಎತ್ತಿ ಹಿಡಿಯುವ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರೆ, ನಾವು ಈ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ತಪ್ಪುಗಳನ್ನು ತೋರಿಸಿದಾಗ ಆಡಳಿತ ಶಕ್ತಿಗಳು ಕೂಡ ಅದನ್ನು ತಿದ್ದಿಕೊಳ್ಳುವ ಸಾಧ್ಯತೆಗಳಿದ್ದವು. ಸಹೋದ್ಯೋಗಿ ಹೇಳಿದಂತೆ, ನಾವು ನಮ್ಮ ಮತಗಳನ್ನು ಚಲಾಯಿಸಿ ಸತ್ತವರನ್ನು ಎಣಿಸುವ ಒಂದು ಹಂತಕ್ಕೆ ಬಂದಿದ್ದೇವೆ. ನೀವು ಇನ್ನೂ ಹಲವಾರು ರಾತ್ರಿಗಳ ಕಾಲ ಮಲಗಲು ಹೋದಾಗ ನಮ್ಮ ಕೈಗಳಿಗೆ ರಕ್ತ ಮೆತ್ತಿದೆ ಎಂಬ ಭಾವನೆಯೊಂದಿಗೆ ಮಲಗಬೇಕಿದೆ.

ಜಿ.ಎಸ್. ವಾಸು

(ಜಿ.ಎಸ್. ವಾಸು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಸಂಪಾದಕರು)
ಕನ್ನಡಕ್ಕೆ: ಪಿ.ಕೆ.ಮಲ್ಲನಗೌಡರ್

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...