ರಾಜಕೀಯ ಪ್ರತಿಸ್ಪರ್ಧಿಗಳನ್ನು ಮೂಲೆಗುಂಪು ಮಾಡಲು ಕಾನೂನು ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಶಿವಸೇನೆ ಬುಧವಾರ ಹೇಳಿದೆ.
ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮಾಡಿದ್ದ ಭ್ರಷ್ಟಾಚಾರದ ಆರೋಪದಲ್ಲಿ ಬಾಂಬೆ ಹೈಕೋರ್ಟ್ ಸಿಐಡಿ ತನಿಖೆಗೆ ಸೂಚಿಸಿದೆ. ಆದರೆ, ವಕೀಲೆ ಜೈಶ್ರೀ ಪಾಟೀಲ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯಲ್ಲಿ ಆರೋಪಗಳನ್ನು ಹುಡುಕಿದೆ ಎಂದು ಶಿವಸೇನೆಯ ಮುಖವಾಣಿ “ಸಮನಾ” ದ ಸಂಪಾದಕೀಯದಲ್ಲಿ ತಿಳಿಸಲಾಗಿದೆ.
“ಕಾನೂನಿಗಿಂತ ಯಾರು ಮೇಲಲ್ಲ. ಆದರೆ, ರಾಜಕೀಯ ಪ್ರತಿಸ್ಪರ್ಧಿಗಳನ್ನು ಮೂಲೆಗುಂಪಾಗಿಸಲು ಕಾನೂನು ಮತ್ತು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಮರಾಠಿ ಮಾಧ್ಯಮ ಹೇಳಿದೆ.
ಇದನ್ನೂ ಓದಿ: ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ
“ಮಹಾರಾಷ್ಟ್ರ ಸರ್ಕಾರವನ್ನು ಹೀಗೆ ದುರ್ಬಲಗೊಳಿಸುವಲ್ಲಿ ಸಾಂವಿಧಾನಿಕ ಅಧಿಕಾರಿಗಳು ಕೂಡ ಭಾಗಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದೆ. ಶಿವಸೇನೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಂಡಿದೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಎನ್‌ಸಿಪಿ ನಾಯಕ ಅನಿಲ್ ದೇಶ್ಮುಖ್ ವಿರುದ್ಧದ ಭ್ರಷ್ಟಾಚಾರದ ಆರೋಪದ ಬಗ್ಗೆ 15 ದಿನಗಳೊಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ಹೈಕೋರ್ಟ್ ಸೋಮವಾರ ಸಿಬಿಐಗೆ ನಿರ್ದೇಶನ ನೀಡಿದೆ. ತೀರ್ಪಿನ ನಂತರ ಅನಿಲ್ ದೇಶ್ಮುಖ್ ರಾಜ್ಯ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅನಿಲ್ ದೇಶ್ಮುಖ್ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ, ಆದರೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 10 ವರ್ಷಗಳ ಹಳೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಅನಿಲ್ ದೇಶ್ಮುಖ್ ಮತ್ತು ಕರ್ನಾಟಕ ಮುಖ್ಯಮಂತ್ರಿ ಇಬ್ಬರ ವಿಚಾರದಲ್ಲಿ ಏಕೆ ವಿಭಿನ್ನ ನಿರ್ಧಾರಗಳು? ನೈತಿಕತೆಯು ಶಿವಸೇನೆ ಮತ್ತು ಎನ್‌ಸಿಪಿಗೆ ಮಾತ್ರವೇ?” ಎಂದು ಶಿವಸೇನೆ ಪ್ರಶ್ನಿಸಿದೆ.
ಅಕ್ರಮ ಡಿನೋಟಿಫಿಕೇಶನ್ ಭ್ರಷ್ಟಾಚಾರದ ಪ್ರಕರಣದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯುರಪ್ಪ 2006 ರಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದರು. ಈ ಅಧಿಕಾರಾವಧಿಯಲ್ಲಿ ಅಕ್ರಮವಾಗಿ ಭೂಮಿಯ ಡಿ-ನೋಟಿಫೈ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ತಿಂಗಳಿಗೆ 100 ಕೋಟಿ ಲಂಚ ಸಂಗ್ರಹಕ್ಕೆ ಗೃಹ ಸಚಿವರ ಸೂಚನೆ- ಪರಮ್ ಬೀರ್ ಸಿಂಗ್ ಆರೋಪ
