2018 ರ ಚೆಕ್ ಬೌನ್ಸ್ ಪ್ರಕರಣದಲ್ಲಿ ತಮಿಳು ನಟ, ಸಂಸದ ಶರತ್‌ಕುಮಾರ್ ಮತ್ತು ಅವರ ಪತ್ನಿ ನಟಿ ರಾಧಿಕಾ ಶರತ್‌ಕುಮಾರ್‌ಗೆ ಚೆನ್ನೈನ ಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಬುಧವಾರ ವಿಚಾರಣೆ ನಡೆಸಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
2018 ರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಕೋಟಿ ರೂಪಾಯಿಗಳ ದಂಡವನ್ನೂ ನ್ಯಾಯಾಲಯ ವಿಧಿಸಿದೆ. ಇವರ ಜೊತೆಗೆ ಮತ್ತೊಬ್ಬ ವ್ಯಕ್ತಿಗೂ ಶಿಕ್ಷೆ ನೀಡಲಾಗಿದೆ.
ಕಲಾವಿದರು, ನಿರ್ಮಾಪಕರಾಗಿರುವ ಈ ದಂಪತಿ 2015ರಲ್ಲಿ ‘ಇದು ಎನ್ನ ಮಾಯಾಂ’ ಎಂಬ ಸಿನಿಮಾವನ್ನು ಲಿಸ್ಟಿನ್ ಸ್ಟೀಫನ್ ಜೊತೆಗೆ ಪಾಲುದಾರರಾಗಿ ನಿರ್ಮಿಸಿದ್ದರು. ಮುಖ್ಯ ಪಾತ್ರದಲ್ಲಿ ನಟಿ ಕೀರ್ತಿ ಸುರೇಶ್ ಮತ್ತು ನಟ ವಿಕ್ರಮ್ ಪ್ರಭು ನಟಿಸಿದ್ದರು. ಇದಕ್ಕಾಗಿ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ 1.50 ಕೋಟಿ ರೂಪಾಯಿಗಳನ್ನು ಸಾಲ ಪಡೆದಿದ್ದರು.
ಇದನ್ನೂ ಓದಿ: ‘ಬಿರಿಯಾನಿ’ ಚಿತ್ರ ಬಿಡುಗಡೆಗೆ ಥಿಯೇಟರ್ ಮಾಲೀಕರ ಹಿಂದೇಟು: ಮಲಯಾಳಂ ನಿರ್ದೇಶಕನ ಆಕ್ರೋಶ
ಮತ್ತೆ ಶರತ್ ಕುಮಾರ್ ರೇಡಿಯನ್ಸ್ ಮೀಡಿಯಾದಿಂದ 50 ಲಕ್ಷ ರೂ.ಗಳ ಕೈ ಸಾಲವನ್ನು ಪಡೆದಿದ್ದರು. ಇದನ್ನು ಹಿಂತಿರುಗಿಸಲು ತಲಾ 10 ಲಕ್ಷ ರೂ.ಗೆ ಐದು ಚೆಕ್ ನೀಡಿದ್ದರು. ಆದರೆ, ಎಲ್ಲಾ ಚೆಕ್ ಬೌನ್ಸ್ ಆಗಿದ್ದವು. ಈ ಸಂಬಂಧ 2018 ರಲ್ಲೇ ರೇಡಿಯನ್ಸ್ ಗ್ರೂಪ್ ನ್ಯಾಯಾಲಯದ ಮೊರೆ ಹೋಗಿತ್ತು. ಇದೀಗ ವಿಚಾರಣೆ ನಡೆಸಿದ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿದೆ.
ಇದಕ್ಕೂ ಮೊದಲು ಸೈದಾಪೇಟೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಶ್ನಿಸಿ ಈ ತಾರಾ ದಂಪತಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆದರೆ, 2019 ರ ಮೇ ತಿಂಗಳಲ್ಲಿ, ಶರತ್‌ಕುಮಾರ್, ರಾಧಿಕಾ ಮತ್ತು ಇತರ ಇಬ್ಬರು ವಿರುದ್ಧ ಬಾಕಿ ಇರುವ ಎರಡು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ನ್ಯಾಯಮೂರ್ತಿ ಜಿ.ಕೆ. ಇಲಾಂತಿರಾಯನ್ ನಿರಾಕರಿಸಿದರು.
ಆರು ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ನ್ಯಾಯಾಧೀಶರು ಸೈದಾಪೇಟೆಯ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದರು. ಈ ಮಧ್ಯೆ, ಈ ಪ್ರಕರಣವನ್ನು ಚೆನ್ನೈ ಕಲೆಕ್ಟರೇಟ್ ಸಂಕೀರ್ಣದಲ್ಲಿನ ಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಇದನ್ನೂ ಓದಿ: ಕಮಲ್ ಹಾಸನ್ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ: ನಟ, ರಾಜಕಾರಣಿ ಶರತ್ ಕುಮಾರ್ ಘೋಷಣೆ
