Homeಕರ್ನಾಟಕಕರಾವಳಿ: ಹಿಂದುತ್ವದ ಹುಲಿ ಸವಾರಿ ಹೊರಟವರಿಗೆ ಆ ಹುಲಿಯೆ ನುಂಗುತ್ತಿದೆ!!

ಕರಾವಳಿ: ಹಿಂದುತ್ವದ ಹುಲಿ ಸವಾರಿ ಹೊರಟವರಿಗೆ ಆ ಹುಲಿಯೆ ನುಂಗುತ್ತಿದೆ!!

- Advertisement -
- Advertisement -

ಹಿಂದುತ್ವದ ಪ್ರಯೋಗ ಶಾಲೆ ಎನ್ನಲಾಗುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟರ್ ಕೇಸರಿ ರಾಜಕಾರಣವೀಗ ಸಂಘ ಪರಿವಾರಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಒಟ್ಟ್ಟು 13 ಕ್ಷೇತ್ರಗಳಲ್ಲಿ 11ರಲ್ಲಿ ಹಿಂದುತ್ವದ ಹಿಕಮತ್ತಿನಿಂದ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿಗೆ ಇನ್ನು ಹತ್ತೇ ತಿಂಗಳಲ್ಲಿ ಬರಲಿರುವ ಪಾರ್ಲಿಮೆಂಟ್ ಇಲೆಕ್ಷನ್‌ನಲ್ಲಿ ಇಷ್ಟೇ ಸುಲಭವಾಗಿ ಗೆಲ್ಲುವ ಧೈರ್ಯವಿಲ್ಲದಾಗಿದೆ. ಕಳೆದ ಎರಡು ದಶಕದಿಂದ ಇಸ್ಲಾಮೋಫೋಬಿಯಾ ಧರ್ಮಕಾರಣವನ್ನು ಮಜಬೂತಾಗಿ ಕರಾವಳಿಯಲ್ಲಿ ಕಟ್ಟಿಕೊಂಡಿದ್ದ ಸಂಘೀ ಸರದಾರರಿಗೆ, ಕೇಸರಿ ಸಂಘಟನೆಯಲ್ಲಿ ಎಂಪಿ, ಎಮ್ಮೆಲ್ಲೆ ಆಗುವ ಆಸೆಯ ಹಿಂದುತ್ವದ “ಹುಲಿ”ಗಳು ಗುಟುರು ಹಾಕುತ್ತಿರುವುದು ಬೆಚ್ಚಿಬೀಳಿಸಿದೆ! ಯಾವ ಹುಲಿಗಳ ಮೇಲೆ ಸಂಘಪರಿವಾರದ ರಿಂಗ್‌ಮಾಸ್ಟರ್‌ಗಳು ಸವಾರಿ ಹೊರಟಿದ್ದರೋ ಆ ಹುಲಿಗಳೇ ಈಗವರನ್ನು ನುಂಗಲು ಬಾಯಿ ತೆರೆದುಕೊಂಡು ಹವಣಿಸುತ್ತಿವೆ.

ದಕ್ಷಿಣ ಕನ್ನಡದ ಸಂಸದ-ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಕ್ಷೇತ್ರದಲ್ಲಿ ಸಮಾಧಾನವಿಲ್ಲ; ಕಳೆದೆರಡು ದಶಕದಿಂದ ಅವಿಭಜಿತ ದಕ್ಷಿಣ ಕನ್ನಡದ ಸಂಘ ಪರಿವಾರ ಸಾಮ್ರಾಜ್ಯದ ಅನಭಿಷಕ್ತ ದೊರೆಯಂತೆ ಕಾರುಬಾರು ನಡೆಸಿದ ಆರೆಸ್ಸೆಸ್ ಕಟ್ಟಾಳು ಕಲ್ಲಡಕ ಪ್ರಭಾಕರ್ ಭಟ್ಟರೂ ಮೊದಲಿನ ವರ್ಚಸ್ಸು ಕಳೆದುಕೊಂಡಿದ್ದಾರೆ. ಈ ನಾಯಕ-ನಾಯಕಿಯರು ತಮ್ಮನ್ನು ಹಿಂದುತ್ವದ ಹೆಸರಲ್ಲಿ ಕೆರಳಿಸಿ ಬಳಸಿಕೊಂಡು ತಾವು ಅಧಿಕಾರ-ಸ್ಥಾನ-ಮಾನ ಅನುಭವಿಸುತ್ತಿದ್ದಾರೆ; “ಧರ್ಮಯುದ್ಧ”ದ ಸಾವು-ನೋವಾದಾಗ, ಕೋರ್ಟು-ಕಚೇರಿ ಅಲೆಯುವಾಗ ಇವರ್‍ಯಾರೂ ನೆರವಿಗೆ ಬರುವುದಿಲ್ಲ ಎಂಬ ಆಕ್ರೋಶ ಹಿಂದುತ್ವದ ಆವೇಶದಲ್ಲಿ ಮುನ್ನುಗ್ಗುವ ಶೂದ್ರ ಹುಡುಗರಲ್ಲಿ ಮಡುಗಟ್ಟಿದೆ. ಸುಳ್ಯದ ಭಜರಂಗಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಸಂಸದ ನಳೀನ್ ಇದ್ದ ಕಾರನ್ನೇ ಅಲ್ಲಾಡಿಸಿ ಮಗುಚಿಹಾಕಲು ನಡೆದ ಪ್ರಯತ್ನದಲ್ಲಿದು ವ್ಯಕ್ತವಾಗಿತ್ತು.

ಸಂಘ ಸೂತ್ರಧಾರರ ನಾಜೂಕಾದ ಇಸ್ಲಾಮ್ ವಿರೋಧಿ “ಪ್ರವಚನ” ಹುಟ್ಟುಹಾಕಿರುವ ಭೀತಿಯಿಂದ ಹಿಂಸಾತ್ಮಕ ಹಿಂದುತ್ವ ನೆಚ್ಚಿಕೊಂಡಿರುವ ಬಿಲ್ಲವ, ಅರೆಭಾಷೆ ಗೌಡ, ಮೊಗವೀರ, ಬಂಟ ಮತ್ತು ಸಣ್ಣ-ಪುಟ್ಟ ಹಿಂದುಳಿದ ವರ್ಗದ ಯುವಕರು ಹಿಂದುತ್ವ ಬೇಕು; ಆದರೆ ನಳಿನ್, ಶೋಭಾ, ಕಲ್ಲಡ್ಕ ಭಟ್ರು ಬೇಡ ಎಂಬ ತೀರ್ಮಾನಕ್ಕೆ ಕಳೆದ ಅಸೆಂಬ್ಲಿ ಚುನಾವಣೆಯ ಹೊತ್ತಲ್ಲಿ ಬಂದಿದ್ದಾರೆ. ಈ ಬಂಡುಕೋರ ಸಮೂಹಕ್ಕೆ ಪುತ್ತೂರಿನ ಶಿವಳ್ಳಿ ಬ್ರಾಹ್ಮಣ ಜಾತಿಯ ಕಟ್ಟರ್ ಹಿಂದುತ್ವವಾದಿ ಅರುಣ್‌ ಕುಮಾರ್ ಪುತ್ತಿಲ ನವ ನೇತಾರನಾಗಿ ಅವತರಿಸಿದ್ದಾರೆ! ಈ ಅರುಣ್ ಪುತ್ತಿಲ ಅಯೋಧ್ಯೋತ್ತರ ಅಸಹಿಷ್ಣು ಮತೀಯವಾದದ ಗೊಂದಲ-ಗಲಭೆಯ ಬೈಪ್ರಾಡಕ್ಟ್; ಎರಡು ದಶಕದ ಹಿಂದೆ ದಕ್ಷಿಣ ಕನ್ನಡದಲ್ಲಿ ಬೆಂಕಿಯುಗುಳುವ ಹಿಂದುತ್ವದ ಅಭಿಯಾನದ ಮುಂಚೂಣಿಯಲ್ಲಿದ್ದ ಪ್ರವೀಣ್ ವಾಳ್ಕೆ, ಸತ್ಯಜಿತ್ ಸುರತ್ಕಲ್, ಮಹೇಶ್ ಶೆಟ್ಟಿ ತಿಮರೋಡಿಗಳ ಸಮಕಾಲೀನ. ಇವರೆಲ್ಲ ಆ ಕಾಲಕ್ಕೆ ಕೇಸರಿ ಪಡೆಯ ಎಂಪಿ, ಎಮ್ಮೆಲ್ಲೆ ಮೆಟೇರಿಯಲ್ ಎಂದು ಝಗಮಗಿಸುತ್ತಿದ್ದವರು. ಆದರೆ ಪುರೋಹಿತಶಾಹಿ ಯಜಮಾನಿಕೆಯಲ್ಲಿದ್ದ ಸಂಘ ಪರಿವಾರಕ್ಕೆ ಈ ಹಿಂದುಳಿದ ವರ್ಗದ “ಉದ್ಧಟ”ರು ಅಧಿಕಾರಕ್ಕೇರುವುದು ಬೇಡವಾಗಿತ್ತು; ಪುತ್ತಿಲ ಬ್ರಾಹ್ಮಣ ವಂಶಸ್ಥನಾದರೂ ಶೂದ್ರ ಸಮೂಹವನ್ನು ಕಟ್ಟಿಕೊಂಡು ಸ್ವಜಾತಿಯ ಸಂಘ ಶ್ರೇಷ್ಠರ ಕೆಂಗಣ್ಣಿಗೆ ತುತ್ತಾಗಿದ್ದರು.

ಸತ್ಯಜಿತ್, ತಿರೋಡಿ, ಪುತ್ತಿಲ- ಮುಂತಾದ ಹಿಂದುತ್ವ ಕಾಳಗದ ಸ್ಥಾನಿಕ ಸೇನಾಧಿಪತಿಗಳನ್ನು ಯೋಜನಾಬದ್ಧವಾಗಿ ಮೂಲೆಗೆ ಒತ್ತಲಾಯಿತು; ಬರೀ ಭೀಕರ ಭಾಷಣ, ಬ್ರಹ್ಮ ಕಳಶೋತ್ಸವ ತಯಾರಿಯಂಥ ಸುಲಭದ ಹಿಂದುತ್ವದಲ್ಲಿ ಠಳಾಯಿಸುತ್ತಿದ್ದ ಡಿ.ವಿ.ಸದಾನಂದ ಗೌಡ, ನಳಿನ್ ಕಟೀಲ್, ಶೋಭಾ ಕರಂದ್ಲಾಜೆ, ಮಲ್ಲಕಾ ಪ್ರಸಾದ್, ಹರೀಶ್ ಪೂಂಜಾ, ಡಾ.ಭರತ್ ಶೆಟ್ಟಿ, ಉಮಾನಾಥ್ ಕೊಟ್ಯಾನ್, ಸುನಿಲ್‌ಕುಮಾರ್, ರಘುಪತಿ ಭಟ್ಟ ಥರದವರು ಶಾಸಕ-ಸಂಸದರಾದರು. ಇವರಿಗೆಲ್ಲ ಹೆಡ್ ಮಾಸ್ಟರ್‌ನಂತಿದ್ದ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಶಿಷ್ಯರ “ಖಡ್ಡಾಯ ದೇಣಿಗೆ”ಯಿಂದ ತಮ್ಮ ಶೈಕ್ಷಣಿಕ ಸಂಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್ ಸಂಸ್ಥಾನವನ್ನು ವೃದ್ಧಿಸಿಕೊಂಡರೆಂದು ಈಗ ಕೆರಳಿರುವ ಹಿಂದುತ್ವದ ಹುಡುಗರೇ ಆರೋಪಿಸುತ್ತಾರೆ. ಸಂಘ ಪರಿವಾರದ ಮೇಲ್ವರ್ಗದ ನಾಯಕತ್ವದ ಸಂಚಿನಿಂದ ಹೈರಾಣಾದ ವಾಳ್ಕೆ, ಸತ್ಯಜಿತ್, ಪುತ್ತಿಲ, ಭಜಲಕೆರೆ, ತಿಮರೋಡಿ ಬಿಜೆಪಿ ಸಹವಾಸದಿಂದ ದೂರಾದರು. ಆದರೆ ಪುತ್ತೂರಿನ ಪುತ್ತಿಲ ಮಾತ್ರ ಹಿಂದುತ್ವದ ತಂಡದ ನಂಟುಬಿಟ್ಟಿರಲಿಲ್ಲ; ಹಿಂದುತ್ವದ ಗಲಾಟೆಯಲ್ಲಿ ಸಾವು-ನೋವಾದಾಗ ಪೊಲೀಸ್ ಠಾಣೆ, ಕೋರ್ಟು-ಕಚೇರಿ, ಆಸ್ಪತ್ರೆ ಎಂದೆಲ್ಲ ಓಡಾಡುತ್ತ ಕೇಸರಿ ಪಡೆಯ ಶೂದ್ರ ಸಂಕುಲದ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಂತರ ಸಂಸದ ಕಟೀಲ್ ಮತ್ತು ಆರೆಸ್ಸೆಸ್‌ನ ನಾಯಕಾಗ್ರೇಸ ಕಲ್ಲಡ್ಕ ಪ್ರಭಾಕರ ಭಟ್ ಹಿಂದುತ್ವದ ಹುಡುಗರ ಪ್ರತಿರೋಧ ಎದುರಿಸಬೇಕಾಗಿಬಂತು. ಆ “ಸಂಘರ್ಷ”ದಲ್ಲಿ ಅರುಣ್ ಪುತ್ತಿಲ ಮತ್ತೆ ಹಿಂದುತ್ವದ ಹುಡುಗರ ಕಣ್ಮಣಿಯಾಗಿ ಮಂಚೂಣಿಗೆ ಬಂದರು.

ಹಿಂದುತ್ವ ಸಂಘಟನೆಗಳ ಅಖಂಡ ಬೆಂಬಲದಿಂದ ಪುಳಕಿತರಾದ ಪುತ್ತಿಲ ಕಳೆದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್‌ಗೆ ಪಟ್ಟುಹಿಡಿದರು. ಇದು ಬಿಜೆಪಿ ಮತ್ತು ಸಂಘೀ ಪರಿವಾರದಲ್ಲಿ ಪುತ್ತಿಲ ಮೇಲೇಳದಂತೆ ಹಿಂದಿನಿಂದಲೂ ಚಿವುಟಿಹಾಕುತ್ತ ಬಂದಿದ್ದರೆನ್ನಲಾದ ಮಾಜಿ ಸಿಎಂ ಸದಾನಂದ ಗೌಡ, ಸಂಸದ ನಳಿನ್ ಮತ್ತು ಕರಾವಳಿ ಸಂಘ ಪರಿವಾರದ ಹೈಕಮಾಂಡ್ ಕಲ್ಲಡ್ಕ ಭಟ್‌ರಲ್ಲಿ ಒಂಥರಾ ಅಲವರಿಕೆ ಮೂಡಿಸಿತು. ಪುತ್ತಿಲ ಕೇಸರಿ ಟಿಕೆಟ್‌ಗಾಗಿ ಬಿರುಸಿನ ಪ್ರಯತ್ನ ನಡೆಸಿದಂತೆ ಅಷ್ಟೇ ಜೋರಾಗಿ ಕಾಲೆಳೆಯುವ ಪ್ರತಿ ತಂತ್ರಗಾರಿಕೆಯೂ ಆಯಿತು. ಬಿಜೆಪಿಯಲ್ಲಿ ಪ್ರಭಾವಿಯಾಗಿರುವ ಬಿ.ಎಲ್.ಸಂತೋಷ್ ರಾಜಿಗೆ ವಿಫಲ ಪ್ರಯತ್ನ ನಡೆಸಿದರು. ಪುತ್ತಿಲ ಪರಿವಾರ ನಳಿನ್ ಎದುರು ತಲೆಬಾಗಲು ತಯಾರಿರಲಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಕಟೀಲ್‌ರ ಗಾಡ್‌ಫಾದರ್ ಸಂತೋಷ್, ಶಿಷ್ಯನ ಮನದಿಂಗಿತದಂತೆಯೇ ನಡೆದುಕೊಂಡರು; ಪುತ್ತಿಲರಿಗೆ ಸುಮ್ಮನಾಗಿಸಲು ಸಾಮ-ಭೇದ-ದಂಡ ಪ್ರಯೋಗಿಸಿದರು. ಕಲ್ಲಡ್ಕ ಭಟ್ಟರು-“ಪುತ್ತಿಲ ರೌಡಿ ಶೀಟರ್… ದೇವಸ್ಥಾನದ ಹಣ ನುಂಗಿದವನು… ಇವನೆಂಥ ಹಿಂದುತ್ವವಾದಿ…?” ಎಂದು ಬಹಿರಂಗವಾಗೇ ಮೂದಲಿಸಿದರು. ಆದರೆ ಸಂಘ ಪರಿವಾರದ ಭಜರಂಗ ದಳ, ಹಿಂದು ಜಾಗರಣಾ ವೇದಿಕೆಯೇ ಮುಂತಾದ ತರಹೇವಾರಿ ಸಂಘಟನೆಯ ಉಪಾಧ್ಯಾಯ, ಭಟ್ಟ, ಗೋಖಲೆ ವಗೈರೆಗಳ ಬ್ರಾಹ್ಮಣ ಲಾಬಿ ಅರುಣ್ ಪುತ್ತಿಲರ ಬೆನ್ನಿಗೆ ಬಲವಾಗಿ ನಿಂತಿತ್ತು. ಹೀಗಾಗಿ ಪುತ್ತಿಲ ಸೆಟೆದುನಿಂತರು.

ಅರುಣ್‌ಕುಮಾರ್ ಪುತ್ತಿಲ

ಶಾಸಕರಾಗಿದ್ದ ಸೌಮ್ಯ ಹಿಂದುತ್ವವಾದಿ ಸಂಜೀವ್ ಮಠಂದೂರ್, ಕಾರ್ಯಕರ್ತರ ಅಸಹನೆ ಮತ್ತು ಕಟೀಲ್, ಕಲ್ಲಡ್ಕರಂಥ ನಾಯಕರ ದುರಾಗ್ರಹಕ್ಕೆ ತುತ್ತಾಗಿದ್ದರು. ಬಹುಸಂಖ್ಯಾತ ಅರೆ ಭಾಷೆ ಗೌಡ ಸಮುದಾಯದ ಮಠಂದೂರ್‌ಗೆ ಟಿಕೆಟ್ ಕೊಡದೆ ಅದೇ ಜಾತಿಗೆ ಅವಕಾಶ ಕಲ್ಪಿಸಿ ಪುತ್ತಿಲರನ್ನು ಬದಿಗೆ ಸರಿಸುವ ಯೋಜನೆ ಕಟೀಲ್-ಕಲ್ಲಡ್ಕ ಕಮಿಟಿಯದಾಗಿತ್ತು. ಕಾರ್ಯಕರ್ತರ ಒಡನಾಟವಾಗಲಿ, ಕ್ಷೇತ್ರದ ಜನರ ಸಂರ್ಕವಾಗಲೀ ಇಲ್ಲದ ಕ್ಷೇತ್ರದ ಹೊರಗಿನ ಸುಳ್ಯದ ಆಶಾ ತಿಮ್ಮಪ್ಪ ಗೌಡರಿಗೆ ಬಿಜೆಪಿ ಟಿಕೆಟ್ ಕೊಡಲಾಯಿತು. ಸಿಟ್ಟಿಗೆದ್ದ ಪುತ್ತಿಲ ಬಳಗ ಬಂಡಾಯದ ಬಾವುಟ ಹಾರಿಸಿತು. ಸಂಘ ಪರಿವಾರ ವರ್ಸೆಸ್ ಪುತ್ತಿಲ ಪರಿವಾರದ ಪ್ರತಿಷ್ಠೆಯ ಪೈಪೋಟಿ ಜೋರಾಯಿತು. ಕಲ್ಲಡ್ಕ ಭಟ್ ಮತ್ತು ಕಟೀಲ್ ವಿರೋಧಿಗಳಾಗಿದ್ದರೂ ಪುತ್ತಿಲ ಮೇಲಿನ ಸಿಟ್ಟಿಂದ ಒಂದಾಗಿದ್ದರು. ಆದರೆ ಬಹುತೇಕ ಸಂಘ ಪರಿವಾರ ಪುತ್ತಿಲ ಪರಿವಾರದಲ್ಲಿ ಲೀನವಾಗಿತ್ತು. ಕೇಸರಿ ಪರಿವಾರದ ಕಿತ್ತಾಟದಿಂದ ಕಾಂಗ್ರೆಸ್‌ನ ಅಶೋಕ್‌ಕುಮಾರ್ ರೈ ಶಾಸಕ ಭಾಗ್ಯ ಕಾಣುವಂತಾಯಿತು. ಮುಸಲ್ಮಾನ ಸಮುದಾಯದ ಮತ ಏಕಗಂಟಿನಲ್ಲಿ ಕಾಂಗ್ರೆಸ್‌ನ ಅಶೋಕ್ ರೈ ಪಡೆದರೆ ಬಿಜೆಪಿ ಮತ ಬ್ಯಾಂಕ್ ಎರಡಾಗಿ ಒಡೆಯಿತು. 62,458 ಮತ ಪಡೆದ ಹಿಂದುತ್ವ ಪರಿವಾರದ ಕ್ಯಾಂಡಿಡೇಟ್ ಪುತ್ತಿಲ ತೀರಾ ಸಣ್ಣ ಅಂತರ(4,149)ದಲ್ಲಿ ಎಡವಿದರೂ ಬಿಜೆಪಿಯನ್ನು ಮೂರನೆ ಸ್ಥಾನಕ್ಕೆ ತಳ್ಳಿ ಖುಷಿಪಟ್ಟರು. ಪುತ್ತಿಲ ಪರಾಕ್ರಮದಿಂದ ಬಿಜೆಪಿಯ ಘಟಾನುಘಟಿಗಳಾದ ಕಲ್ಲಡ್ಕ-ಕಟೀಲ್-ಸಂತೋಷ್-ಸದಾನಂದ ಗೌಡ ಮುಖಭಂಗಿತರಾದರು.

ಇದನ್ನೂ ಓದಿ: ಒಂದು ಸಂಶೋಧನಾ ಪ್ರಬಂಧಕ್ಕೆ ಸರಕಾರ ಹೆದರಿತೇಕೆ?

ಕಲ್ಲಡ್ಕ-ಕಟೀಲ್ ಬಿತ್ತಿಬೆಳೆದ ಮತೀಯ ಮಸಲತ್ತಿನ ಹಿಂದುತ್ವವೇ ಈಗವರಿಗೆ ಬೂಮರಾಂಗ್ ಆಗಿದೆ; ಅಮಾಯಕ ಜನರನ್ನು ಭಾವನಾತ್ಮಕವಾಗಿಸಿದೆ ದಿಕ್ಕು ತಪ್ಪಿಸುವ ಅಸ್ತ್ರ ಕೈಜಾರಿ ಪುತ್ತಿಲ ಪರಿವಾರದ ಪಾಲಾಗಿದೆ. ಚುನಾವಣೆಯಲ್ಲಿ ಸೋತರೂ, ಫಲಿತಾಂಶದ ಬಳಿಕ ಬಿಜೆಪಿಗರ ಹತಾಶೆ-ಸೇಡಿನ ಕಾರ್ಯಾಚರಣೆಯಿಂದ ಕೆರಳಿರುವ ಅರುಣ್ ಪುತ್ತಿಲ ಉಗ್ರ ಧರ್ಮಕಾರಣದ ಬಲಾಢ್ಯ ನಾಯಕಾಗ್ರೇಸನಾಗಿ ಅವತರಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಮೂರ್‍ನಾಲ್ಕು ದಿನದ ನಂತರ ಪುತ್ತೂರಿನ ಆಯಕಟ್ಟಿನ ಪ್ರದೇಶದಲ್ಲಿ ಎಡ-ಬಲದಲ್ಲಿ ಸದಾನಂದ ಗೌಡ ಮತ್ತು ನಳಿನ್ ಕಟೀಲ್ ಭಾವಚಿತ್ರವಿದ್ದ, “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ-ನೊಂದ ಬಿಜೆಪಿ ಕಾರ್ಯಕರ್ತರು” ಎಂಬ ಒಕ್ಕಣೆಯ ಆಕರ್ಷಕ ಪೋಸ್ಟರ್‌ಗಳು ಕಂಡುಬಂದಿದ್ದವ್ತು. ಈ ಪೋಸ್ಟರ್ ಅಂಟಿಸಿದ್ದಾರೆಂಬ ಅನುಮಾನದಿಂದ ಪೊಲೀಸರು ಪುತ್ತಿಲ ಪರಿವಾರದ ಮೂರ್‍ನಾಲ್ಕು ಮಂದಿಯನ್ನು ಠಾಣೆಗೊಯ್ದು ರಕ್ತ ಹರಿವಂತೆ ಬಡಿದರು. ಇದು ಸಂಘ ಪರಿವಾರದಲ್ಲಿ ಅಲ್ಲೋಲಕಲ್ಲೋಲವನ್ನೇ ಉಂಟುಮಾಡಿತು. ಕೆರಳಿಸುವ ಹಿಂದುತ್ವದ ಮುಂದಾಳು ಪ್ರಮೋದ್ ಮುತಾಲಿಕ್, ಬಸನಗೌಡ ಯತ್ನಾಳ್‌ರಂಥವರು ಗಾಯಾಳುಗಳ ನೋಡಲು ಓಡೋಡಿ ಪುತ್ತೂರಿಗೆ ಬಂದರು. ಆಗಿನ್ನೂ ಸಿದ್ದು ಸರಕಾರ ಅಸ್ತಿತ್ವಕ್ಕೆ ಬಂದಿರಲಿಲ್ಲ; ಬೊಮ್ಮಾಯಿ ಉಸ್ತುವಾರಿ ಸಿಎಂ ಆಗಿದ್ದರು. ನಳಿನ್ ಮತ್ತು ಸದಾನಂದ ಗೌಡ ಪೊಲೀಸರನ್ನು ಛೂಬಿಟ್ಟು ಸೇಡು ತೀರಿಸಿಕೊಂಡರೆಂಬ ಆರೋಪಗಳು ಜೋರಾಗಿ ಕೇಳಿಬಂದವು.

ಗಾಯಗೊಂಡ ತಮ್ಮ ಪರಿವಾರದ ಹುಡುಗರ ಪಾಡನ್ನೇ ಮುಂದಿಟ್ಟುಕೊಂಡು ದಾಳ ಉರುಳಿಸಿದ ಅರುಣ್ ಪುತ್ತಿಲ ಪಡೆಯ ತಂತ್ರಗಾರರಾದ ಭಟ್ಟ, ಉಪಾಧ್ಯಾಯ, ಗೋಖಲೆ ಮುಂತಾದ ವಿಪ್ರ ಶ್ರೇಷ್ಠರ ಬಳಗ ಎದುರಾಗಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ  ಹೈಕಮಾಂಡ್ ಮತ್ತೆ ನಳಿನ್‌ಗೆ ಅಭ್ಯರ್ಥಿ ಮಾಡದಂಥ ಪರಿಸ್ಥಿತಿ ನಿರ್ಮಾಣಕ್ಕೆ ಯೋಜನೆ ಹೆಣೆಯಿತು; ಮೂರು ಬಾರಿ ಸಂಸದನಾದರೂ ಕ್ಷೇತ್ರದ ನೋವು-ನಲಿವಿಗೆ ಸ್ಪಂದಿಸುವ ಮೂರು ಬಿಲ್ಲಿ ಕೆಲಸ ಮಾಡದ ನಳಿನ್ ಬಗ್ಗೆ ಜನರಲ್ಲಿರುವ ಬೇಸರ, ಸಿಟ್ಟು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುವಂತೆ ನೋಡಿಕೊಳ್ಳಲಾಯಿತು. ನಳಿನ್‌ಗೆ ಮತ್ತೆ ಟಿಕೆಟ್ ಕೊಟ್ಟರೆ ಪುತ್ತೂರಲ್ಲಾದ ಪತನವೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ಆಗಲಿದೆ ಎಂಬ ಸಂದೇಶ ಬಿಜೆಪಿ ದೊಡ್ಡವರಿಗೆ ತಲುಪುವಂತೆ ಮಾಡಲಾಯಿತು. ಹಿಂದುತ್ವದ ಉಳಿವಿಗಾಗಿ, ಬಿಜೆಪಿ ಭದ್ರತೆಗಾಗಿ ಅರುಣ್ ಪುತ್ತಿಲರನ್ನೇ ಎಂಪಿ ಕ್ಯಾಂಡಿಡೇಟ್ ಆಗಿ ಘೋಷಿಸಬೇಕು ಎಂಬ ಕೂಗು ಜಿಲ್ಲೆಯಾದ್ಯಂತ ಹಿಂದುತ್ವದ ಬಂಡಾಯಗಾರರು ಎಬ್ಬಿಸಿದರು.

ಸದಾನಂದ ಗೌಡ

ದಕ್ಷಿಣ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಅರುಣ್ ಪುತ್ತಿಲರಿಗೆ ಕೇಸರಿ ಪಾರ್ಟಿಯ ಹುರಿಯಾಳು ಮಾಡಬೇಕೆಂಬ ಒತ್ತಾಯದ ಮೂರು ಲಕ್ಷ ಪೋಸ್ಟ್ ಕಾರ್ಡ್ ಪ್ರಧಾನಿ ಕಚೇರಿ ಮತ್ತು ಬಿಜೆಪಿಯ ದಿಲ್ಲಿ ಆಫೀಸಿಗೆ ಕಳಿಸುವ ಅಭಿಯಾನ ನಳಿನ್-ಕಲ್ಲಡ್ಕ ವಿರೋಧಿ ಸಂಘಿಗಳು ಹಮ್ಮಿಕೊಂಡರು. ವಿಧಾನಸಭಾ ಚುನಾವಣೆ ವೇಳೆ ಪುತ್ತಿಲ ಪರಿವಾರದ ಚಿಂತನ ಚಿಲುಮೆ ಸೃಷ್ಟಿಸಿ ಜಾಲತಾಣಕ್ಕೆ ಬಿಟ್ಟಿದ್ದ “ಪುತ್ತೂರಿಗೆ ಪುತ್ತಿಲ” ಎಂಬ ವಾಟ್ಸಪ್ ಲಾಂಛನ “ತುಳು ನಾಡಿಗೆ ಪುತ್ತಿಲ” ಎಂಬ ಆಪ್ ಆಗಿ ಬದಲಾಯಿಸಲಾಯಿತು. ಪುತ್ತಿಲ ಪರಿವಾರದ ಇನ್‌ಸ್ಟ್ರಾಗ್ರಾಮ್ ಖಾತೆಯನ್ನೂ ತೆರೆಯಲಾಯಿತು. ನೂರಾರು ವಾಟ್ಸಪ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಜಿಲ್ಲೆಯ ಉದ್ದಗಲಕ್ಕೆ ಅರುಣ್ ಪುತ್ತಿಲರ ಆಳೆತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ. ಅರುಣ್ ಪುತ್ತಿಲ ಜಿಲ್ಲೆಯನ್ನು ಸುತ್ತುತ್ತಾ ಬಿಜೆಪಿ ಟಿಕೆಟ್ ಕೊಡದಿದ್ದರೆ ಬಂಡುಕೋರ ಕೇಸರಿ ಅಭ್ಯರ್ಥಿಯಾಗಲು ಶಸ್ತ್ರಸನ್ನದ್ಧರಾಗುತ್ತಿದ್ದಾರೆ. ಜಾಲತಾಣದಲ್ಲಿ ಪುತ್ತಿಲ ಹಿಂದುತ್ವದ ಕಾಲಾಳುಗಳನ್ನು ಕಾಪಾಡಬಲ್ಲ ಸಮರ್ಥ ಕೇಸರಿ ಸಂಸದನಾಗಬಲ್ಲನೆಂದು ಬಿಂಬಿಸುವುದರ ಜತೆಗೆ ನಳಿನ್ ನಾಲಾಯಕ್ ಸಂಸದ-ಢೋಂಗಿ ಹಿಂದುತ್ವದ ಹಿರೇಮಣಿ ಎಂದು ಜರಿಯಲಾಗುತ್ತಿದೆ.

ಪುತ್ತೂರಿಗೆ ಸೀಮಿತವಾಗಿದ್ದ ಸಂಘ ಪರಿವಾರ-ಪುತ್ತಿಲ ಪರಿವಾರದ ರಾಜಕೀಯ ಹಿತಾಸಕ್ತಿಯ ಹಿಂದುತ್ವ ಸಿದ್ಧಾಂತದ ಸಂಘರ್ಷವೀಗ ಇಡೀ ತುಳುನಾಡಿಗೆ ವ್ಯಾಪಿಸಿಬಿಟ್ಟಿದೆ.

ದಕ್ಕಿಣ ಕನ್ನಡ ಬಿಜೆಪಿಯೊಳಗಿನ ಬೆಳವಣಿಗೆ ಸಹಜವಾಗೆ ಕೇಸರಿ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್, ಕರಾವಳಿ ಸಂಘ ಪರಿವಾರದ ಸುಪ್ರಿಮೋ ಕಲ್ಲಡ್ಕ ಪ್ರಭಾಕರ ಭಟ್ಟ ಮತ್ತು ಸಂಸದ ಕಮ್ ರಾಜ್ಯ ಬಿಜೆಪಿ ಕ್ಯಾಪ್ಟನ್ ನಳಿನ್ ಕಟೀಲ್‌ರನ್ನು ಕಂಗಾಲಾಗಿಸಿದೆ. ಒಂದು ಹಂತದಲ್ಲಿ ಅರುಣ್ ಪುತ್ತಿಲ ಮತ್ತವರ ಬೆನ್ನಿಗಿರುವ ಸಂಘಿ ಸರದಾರನ್ನು ದಿಲ್ಲಿಗೆ ಕರೆಸಿ ಸಂಧಾನಕ್ಕೂ ಪ್ರಯತ್ನ ಮಾಡಲಾಯಿತು. ಸಂಸದ ಟಿಕೆಟ್ ಬೇಡಿಕೆ ಇಡಬೇಡ; ಮುಂದೆ ಎಮ್ಮೆಲ್ಲೆ, ಎಂಪಿ ಆಗುವ ಅವಕಾಶ ಬರುತ್ತದೆ ಎಂದು ಪುತ್ತಿಲರನ್ನ ಸಮಾಧಾನಿಸುವ ಕೆಲಸ ಸಂತೋಷ್ ಮತ್ತಿತರ ಹಿರಿಯರು ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಪುತ್ತಿಲ ಸದ್ಯಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷತೆ ಕೊಡುವಂತೆ ಕೇಳಿದರೆನ್ನಲಾಗಿದೆ. ಅದಕ್ಕೆ ನಳಿನ್-ಸಂತೋಷ್ ಒಪ್ಪುತ್ತಿಲ್ಲವೆಂದು ಬಿಜೆಪಿಯ ಬಲ್ಲ ಮೂಲಗಳು ಪಿಸುಗುಡುತ್ತಿವೆ.

ಹಾಗೊಮ್ಮೆ ಪುತ್ತಿಲ ಹಠಬಿಟ್ಟು ಸಂಧಾನಕ್ಕೆ ಸಿದ್ಧರಾದರೂ ನಳಿನ್‌ಗೆ ಪುನಃ ಕಣಕ್ಕಿಳಿಸಲಾಗದ ಇಕ್ಕಟ್ಟಿಗೆ ಬಿಜೆಪಿ ಹೈಕಮಾಂಡ್ ಸಿಲುಕಿದೆ. ಪ್ರಬಲ ಎಂಟಿ-ಇನ್‌ಕಂಬೆನ್ಸ್ ಸುತ್ತಿಕೊಂಡಿರುವ ನಳಿನ್‌ಗೆ ಜಿಲ್ಲೆಯಲ್ಲಿನ ಪ್ರಚಂಡ ಹಿಂದುತ್ವದ ಪ್ರಭಾವವೂ ಬಚಾಯಿಸಲಾರದು ಎಂಬುದು ಹೈಕಮಾಂಡಿಗೆ ಮನದಟ್ಟಾಗಿದೆ. ಹದಿನೈದು ವರ್ಷ ಸಂಸದಗಿರಿಯನ್ನು ವ್ಯರ್ಥವಾಗಿ ಕಳೆದಿರುವ ನಳಿನ್ ಬಗ್ಗೆ ಜನರಲ್ಲಿ ತಾತ್ಸಾರವಿದೆ; ಹಿಂದುತ್ವದ ವಲಯದಲ್ಲಂತೂ ನಳಿನ್ ಹೆಸರೆತ್ತಿದರೆ ಕೆರಳುವವರೇ ಜಾಸ್ತಿ. ಸಂಸದ ಹುದ್ದೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷತೆ ನಿಭಾಯಿಸಲಾಗದೆ ಮತ್ತೆಮತ್ತೆ ಮುಗ್ಗರಿಸಿದ ನಳಿನ್ ಲಂಗುಲಗಾಮಿಲ್ಲದ ಮಾತುಗಾರಿಕೆ, ಹಾಸ್ಯಾಸ್ಪದ ವರ್ತನೆಯಿಂದ ನಿರಂತರ ಟ್ರೋಲ್‌ಗೆ ಒಳಗಾಗುತ್ತಲೇ ಇದ್ದಾರೆ. ಇಂಥ ನಳಿನ್‌ಗೆ ಮತ್ತೆ ಆಖಾಡಕ್ಕಿಳಿಸಿದರೆ ಸೋಲು ನಿಶ್ಚಿತವೆಂಬುದು ಬಿಜೆಪಿ ಹೈಕಮಾಂಡ್‌ಗೆ ಖಾತ್ರಿಯಾಗಿದೆ.

ಹಾಗಾಗಿ ಕ್ಯಾ.ಬ್ರಿಜೇಶ್ ಚೌಟರನ್ನು ಕೇಸರಿ ಕಲಿಯಾಗಿಸುವ ಯೋಚನೆ ಕೇಶವಕೃಪಾದ ಟಿಕೆಟ್‌ಧಾತರದೆಂಬ ಸುದ್ದಿಗಳು ಕರಾವಳಿಯಲ್ಲಿ ಹರಿದಾಡುತ್ತಿದೆ. ಅಸೆಂಬ್ಲಿ ಅಥವಾ ಪಾರ್ಲಿಮೆಂಟ್ ಚುನಾವಣೆ ಬಂದಾಗೆಲ್ಲ ಬ್ರಿಜೇಶ್ ಚೌಟರ ಹೆಸರು ಬಿಜೆಪಿ ಟಿಕೆಟ್ ಕಮಿಟಿಯ ಪರಿಶೀಲನೆಯಲ್ಲಿ ಬಂದುಹೋಗುತ್ತಿದೆ. ಮತೀಯ ಮಾತುಗಾರಿಕೆಯಲ್ಲಿ ಪಳಗಿರುವ ಚೌಟ ನಿಷ್ಠಾವಂತ ಆರೆಸ್ಸೆಸ್ಸಿಗ; ಸಂಘದ ಗುರು-ಹಿರಿಯರಿಗೆ ವಿಧೇಯ. ಕ್ಷೇತ್ರದ ಪ್ರಬಲ ಬಂಟ ಸಮುದಾಯದವರು. ಆ ಜಾತಿಗೆ ಸೇರಿದ ಕಟೀಲ್‌ಗೆ ಕೊಕ್ ಕೊಟ್ಟರೆ ಸರಿಯಾದ ಸಬ್‌ಸ್ಟಿಟ್ಯೂಟ್ ಆಗಬಲ್ಲವರೆಂಬ ಲೆಕ್ಕಾಚಾರ ಬಿಜೆಪಿ ನೀತಿ ನಿರೂಪಕರದು ಎನ್ನಲಾಗುತ್ತಿದೆ. ಸುರತ್ಕಲ್ (ಮಂಗಳೂರು ಉತ್ತರ) ಶಾಸಕ ಡಾ.ಭರತ್ ಶೆಟ್ಟಿಗೆ ಎಂಪಿಯಾಗುವ ಆಸೆಯಿದೆ. ನಳಿನ್ ತನಗಲ್ಲದಿದ್ದರೆ ತನ್ನ ಜಾತಿ(ಬಂಟ)ಯ ಭರತ್ ಶೆಟ್ಟರ ಪರ ವಕಾಲತ್ತು ಮಾಡುತ್ತಾರೆನ್ನಲಾಗುತ್ತಿದೆ. ಪುತ್ತೂರಿನಲ್ಲಿರುವಷ್ಟು ಪ್ರಭಾವ ಅರುಣ್ ಪುತ್ತಿಲರಿಗೆ ಕ್ಷೇತ್ರದ ಉಳಿದ ತಾಲೂಕುಗಳಲ್ಲಿಲ್ಲ. ನಳಿನ್ ಬಿಜೆಪಿ ಕ್ಯಾಂಡಿಡೇಟಾದರಷ್ಟೇ ಅವರ ಆಟ. ಪುತ್ತಿಲರ ಮೇಲೆ ಸಿಟ್ಟಾಗಿರುವ ಸಂತೋಷ್ ತಂತ್ರ ಬದಲಿಸಿ ಡಾ.ಭರತ್ ಶೆಟ್ಟಿ ಅಥವಾ ಚೌಟರಂಥವರರಿಗೆ ಆಖಾಡಕ್ಕಿಳಿಸುವ ಯೋಜನೆ ಹಾಕಿದರೆ ನಳಿನ್ ಕೂಡ ಪುತ್ತಿಲರನ್ನು ಹಣಿಯುವ ಇರಾದೆಯಿಂದ ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಪುತ್ತಿಲರನ್ನು ರಾಜಕೀಯವಾಗಿ ಮುಗಿಸುವ ಪ್ಲಾನ್‌ಅನ್ನು ಬಿಜೆಪಿ ಲೀಡರ್‌ಗಳು ಕರಾರುವಾಕ್ಕಾಗಿ ಹೆಣೆಯುತ್ತಿದ್ದಾರೆಂಬ ವಿಶ್ಲೇಷಣೆಗಳು ಜಿಲ್ಲೆಯಲ್ಲಿ ನಡೆಯುತ್ತಿದೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಪೈಪೋಟಿಯಿಲ್ಲ. ಕ್ಷೇತ್ರದಲ್ಲಿನ ಹಿಂದುತ್ವದ ಆರ್ಭಟಕ್ಕೆ ಕಾಂಗ್ರೆಸ್ ಕಳಾಹೀನವಾಗಿ ಎರಡು ದಶಕವೇ ಕಳೆದುಹೋಗಿದೆ. ಪಕ್ಷವನ್ನು ಪುನಶ್ಚೇತನಗೊಳಿಸುವ ರಣತಂತ್ರ ಯಾವ ಕಾಂಗ್ರೆಸ್ಸಿಗನಿಂದಲೂ ಆಗಿಲ್ಲ. ಮುಸ್ಲಿಮರು ಪ್ರಥಮ ಬಹು ಸಂಖ್ಯಾತರಾದ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಬದ್ಧತೆಯಿಂದ ಪ್ರಯತ್ನ ಮಾಡಿದರೆ ಗೆಲ್ಲುವುದು ಕಷ್ಟವೇನಲ್ಲ. ಆದರೆ ಸೋಲುತ್ತೇವೆಂಬ ಮನಃಸ್ಥಿತಿಯಲ್ಲಿ ಸ್ಪರ್ಧೆಗಿಳಿಯುವ ಅಭ್ಯರ್ಥಿ ಚುನಾವಣಾ ಖರ್ಚಿಗೆಂದು ಹಣ ಸಂಗ್ರಹಿಸಿ ದೊಡ್ಡ ಗಂಟು ಕಟ್ಟುವ ವ್ಯಾವಹಾರಿಕ ಕಾರ್ಯಾಚರಣೆ ಮಾಡುತ್ತಾರೆಂದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಅಲವತ್ತುಕೊಳ್ಳುತ್ತಾರೆ. ಪಾರ್ಟಿ ಕರೆದು ಟಿಕೆಟ್ ಕೊಟ್ಟರೆ ಸ್ಪರ್ಧಿಸುವ ಯೋಚನೆಯಲ್ಲಿ ಕೆಲವರಿದ್ದಾರೆ. ಈ ಸಾಲಿನಲ್ಲಿ ಮಾಜಿ ಮಂತ್ರಿ ರಮಾನಾಥ್ ರೈ, ವಿನಯ್‌ಕುಮಾರ್ ಸೊರಕೆ, ಪುಷ್ಪರಾಜ್, ಪಿ.ವಿ.ಮೋಹನ್ ಮುಂತಾದವರಿದ್ದಾರೆ. ಇವರ್‍ಯಾರಿಗೂ ಬಿಜೆಪಿಯ ಉದ್ರೇಕಕಾರಿ ಹಿಂದತ್ವವನ್ನು ಬಂಧುತ್ವದಿಂದ ಕೌಂಟರ್ ಮಾಡಿ ಪೈಪೋಟಿ ಕೊಡುವ ಚಾಕಚಕ್ಯತೆಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ನೀರಸ ಕಾಳಗದ ಆಖಾಡದಲ್ಲಿ ಹಿಂದುತ್ವದ ಹುಲಿ ಸವಾರಿ ಹೊರಟವರ ಪಾಡು ಮಾತ್ರ ದಿನಗಳೆದಂತೆ ರೋಚಕವಾಗುತ್ತಿದೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...