Photo Courtesy: The Hans India

ಬೇಸಿಕ್ ಸಂಗತಿಗಳಲ್ಲಿ ಅಂತಹ ದೊಡ್ಡ ಬದಲಾವಣೆಗಳೇನೂ ಇಲ್ಲದ ಕೊರೊನಾ ಎರಡನೇ ಅಲೆ ಬಂದಿದೆ. ಹಿಂದಿನದ್ದಕ್ಕಿಂತ ಹೆಚ್ಚು ಹರಡುತ್ತದೆ, ಗುಣಲಕ್ಷಣಗಳಲ್ಲಿ ಕೆಲವು ವ್ಯತ್ಯಾಸಗಳಿವೆ ಮತ್ತು ಹಿಂದಿಗಿಂತ ಕಡಿಮೆ ಮಾರಣಾಂತಿಕವಾಗಿದೆ ಎಂಬ ಕೆಲವು ಭಿನ್ನತೆಗಳನ್ನು ಹೇಳಲಾಗುತ್ತಿದೆಯಾದರೂ, ಈಗ ಬೀಸುತ್ತಿರುವ ಅಲೆಯ ಯಾವ ಲಕ್ಷಣಗಳೂ ಹೊಸದಲ್ಲ. ಹಾಗೆ ನೋಡಿದರೆ ಚೀನಾದಿಂದ ಇಟಲಿಗೆ ಹೋದ ಕೊರೊನಾ ಸೋಂಕು ಅಲ್ಲಿ ಉಂಟುಮಾಡಿದ ಪರಿಣಾಮಗಳು ಭಾರತದಲ್ಲೂ ಈಗ ಕಾಣಿಸಿವೆ. ಅಂದರೆ ಸರಿಯಾಗಿ ಒಂದು ವರ್ಷದ ಕೆಳಗೆ ಏಪ್ರಿಲ್ 2020ರಲ್ಲಿ ಇಟಲಿಯಲ್ಲಿ ಈ ರೀತಿ ಆಗಿತ್ತು; ಇಂಗ್ಲೆಂಡಿನಲ್ಲಿ ನವೆಂಬರ್ 2020ರ ಹೊತ್ತಿಗೆ ಎರಡನೇ ಅಲೆ ಬೀಸಿದ್ದು, ಈಗ ಬೆಂಗಳೂರು, ಮುಂಬಯಿ, ದೆಹಲಿ, ಸೂರತ್, ಲಖನೌಗಳಲ್ಲಿ ಕಾಣಿಸುತ್ತಿರುವ ಸಮಸ್ಯೆಯೇ ಅಲ್ಲಿ ಕಂಡಿತ್ತು.

ಅಂದರೆ, ಎರಡನೇ ಅಲೆ ಬೀಸುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ನಾವು ಆಕ್ಸಿಜನ್ ಸೌಲಭ್ಯ ಇರುವ ಹಾಸಿಗೆಗಳ ಸಂಖ್ಯೆ ಮತ್ತು ಐಸಿಯು (ವೆಂಟಿಲೇಟರ್ ಸೌಲಭ್ಯ) ಇರುವ ಆಸ್ಪತ್ರೆಗಳು ಇವಕ್ಕೆ ಸಿದ್ಧವಾಗಿರಬೇಕು ಎಂಬುದು ಎಂದೋ ಖಚಿತವಾಗಿತ್ತು. ಒಂದುವೇಳೆ ಕುಟುಂಬಗಳೊಳಗೆ ಅಥವಾ ಸಮುದಾಯಗಳೊಳಗೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕೆಂದರೆ ಯಾರಿಗೆ ತಮ್ಮ ಮನೆಯೊಳಗೇ ಪ್ರತ್ಯೇಕವಾಗಿರಲು ಸೌಲಭ್ಯವಿಲ್ಲವೋ ಅಂಥವರಿಗೆ ಕೋವಿಡ್ ಕೇರ್ ಸೆಂಟರ್‌ನ ಅಗತ್ಯವಿತ್ತು.

ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?

ಆದರೆ ಇಲ್ಲೇನು ನಡೆಯಿತು? ಇಲ್ಲಿ ತೆರೆದಿದ್ದ ಕೋವಿಡ್ ಕೇರ್ ಸೆಂಟರ್‌ಅನ್ನು ಮುಚ್ಚಲಾಯಿತು. ಐಸಿಯು ಮತ್ತು ಆಕ್ಸಿಜನ್ ಸರಬರಾಜು ಇರುವ ಹಾಸಿಗೆಗಳನ್ನು ಹೆಚ್ಚಿಸುವುದು ಹೋಗಲಿ, ಆಕ್ಸಿಜನ್ ಉತ್ಪಾದನೆ ಹಾಗೂ ಸರಬರಾಜೇ ಅಗತ್ಯಕ್ಕನುಗುಣವಾಗಿ ಇರದಂತೆ ಆಯಿತು. ಬದಲಿಗೆ ವ್ಯಾಕ್ಸಿನ್ ಕುರಿತು, ರೆಮೆಡಿಸಿವರ್ ಮಾತ್ರೆಯ ಕುರಿತು ಸಾಕಷ್ಟು ಮಾತಾಡಲಾಯಿತು. ಮಾಸ್ಕ್ ಹೆಚ್ಚೆಚ್ಚು ಹಾಕಿಕೊಳ್ಳಬೇಕೆಂದು ಜನರಿಗೆ ಹೇಳಲಾಯಿತು; ಅವರು ಮಾಡದೇ ಹೋಗಬಹುದೆಂಬ ಕಾರಣಕ್ಕೆ ದಂಡ ವಿಧಿಸಲು ಜನರನ್ನು ನಿಯೋಜಿಸಲಾಯಿತು.

ರೆಮೆಡಿಸಿವರ್ ಮಾತ್ರೆಯಿಂದ ಅಂತಹ ಪ್ರಯೋಜನ ಆಗದು ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಗಳು ಆಗಿ, ಆ ಕುರಿತಂತೆ ದೊಡ್ಡ ದೊಡ್ಡ ಸಂಸ್ಥೆಗಳೇ ಮಾಹಿತಿಯನ್ನು ಹೊರಗೆಡಹಿದವು. ವ್ಯಾಕ್ಸಿನ್ ಎರಡೂ ಡೋಸ್ ಹಾಕಿಸಿಕೊಂಡ ನಂತರದ ಕೆಲವು ವಾರಗಳಲ್ಲಿ ರೋಗನಿರೋಧಕ ಶಕ್ತಿ ಶೇ.90ರಷ್ಟು ಬರಬಹುದು ಎಂಬುದು ಮುಂಚೆಯೇ ಗೊತ್ತಿತ್ತು. ಆದರೆ ಅಗತ್ಯವಿದ್ದಷ್ಟು ಜನರಿಗೆ ಅಗತ್ಯವಿದ್ದಷ್ಟು ಡೋಸ್‌ಗಳ ವ್ಯಾಕ್ಸಿನ್ ಲಭ್ಯತೆಯನ್ನು ಖಾತರಿಪಡಿಸಲಿಲ್ಲ. ಈಗ ಇದ್ದಕ್ಕಿದ್ದಂತೆ ಅಲೆ ಬೀಸುತ್ತಿದೆಯೆಂದೂ, ಜನರದ್ದೇ ತಪ್ಪೆಂದೂ ಬೊಬ್ಬೆ ಹೊಡೆಯಲಾಗುತ್ತಿದೆ.

ಇಂತಹ ಹೊತ್ತಿನಲ್ಲಿ ಲಾಕ್‌ಡೌನ್ ಬಗ್ಗೆ ಮಾತಾಡಲು ಯಾವ ಸರ್ಕಾರಕ್ಕೂ ಧೈರ್ಯ ಇಲ್ಲ. ಏಕೆಂದರೆ ಅಗತ್ಯವೇ ಇಲ್ಲದ ಸಂದರ್ಭದಲ್ಲಿ ಅಗತ್ಯವಿರದಷ್ಟು ಪ್ರಮಾಣದ ಲಾಕ್‌ಡೌನ್‌ಅನ್ನು ಕಳೆದ ವರ್ಷ ಹೇರಿ, ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ಲಾಕ್‌ಡೌನ್‌ನಿಂದ ಸೋಂಕು ನಿಲ್ಲುವುದಿಲ್ಲ; ಅದು ಹರಡುವುದು ತಡವಾಗುತ್ತದೆ ಅಷ್ಟೇ. ಆ ತಡವಾಗುವ ಅವಧಿಯನ್ನು ಬಳಸಿಕೊಂಡು ಅಗತ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನು ಮತ್ತು ಸೂಕ್ತವಾದ ಮೂಲಭೂತ ಸೌಕರ್ಯಗಳನ್ನು ಹಾಗೂ ತಕ್ಷಣದಲ್ಲಿ ಕಾರ್ಯಪ್ರವೃತ್ತವಾಗುವ ಯಂತ್ರಾಂಗ ಮತ್ತು ಯೋಜನೆಯನ್ನು ತಯಾರಿಸಿಕೊಳ್ಳಬೇಕು. ಇಷ್ಟೇ ಅದರಿಂದ ಪ್ರಯೋಜನ ಎಂಬುದು ನಮ್ಮ ದೇಶದಲ್ಲಿ ಲಾಕ್‌ಡೌನ್ ಹೇರುವ ಹೊತ್ತಿಗೇ ತಜ್ಞರು ಹೇಳಿದ್ದರು. ವಿಸ್ತಾರವಾಗುತ್ತಾ ಹೋದ ಲಾಕ್‌ಡೌನ್‌ನ ಅವಧಿಯಲ್ಲಿ ಅಂತಹ ವಿಶೇಷ ತಯಾರಿ ಏನೂ ನಡೆಯಲಿಲ್ಲ.

ಬದಲಿಗೆ ಲಾಕ್‌ಡೌನ್ ದೇಶದ ಜನರ ಮೇಲೆ, ಅದರಲ್ಲೂ ವಲಸೆ ಕಾರ್ಮಿಕರ, ಬಡವರ, ನಿರ್ಗತಿಕರ, ಸಣ್ಣ ಪುಟ್ಟ ಉದ್ದಿಮೆಗಳ, ಸೇವಾವಲಯಗಳ ಬದುಕು ಧ್ವಂಸಗೊಂಡಿತು. ಇದನ್ನೂ ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಹಲವು ಆರ್ಥಿಕ ತಜ್ಞರು ಲಾಕ್‌ಡೌನ್ ಶುರುವಾದ ಮೊದಲ ವಾರದಲ್ಲೇ ಹೇಳಿದರು. ಆ ರೀತಿ ಹೇಳಿದವರಲ್ಲಿ ನೊಬೆಲ್ ಪುರಸ್ಕೃತ ಅಮರ್ತ್ಯಸೇನ್, ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್‌ಡಫ್ಲೋ ಇದ್ದರು. ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಂ ರಾಜನ್ ಮತ್ತು ಯುಪಿಎ ಕಾಲದಲ್ಲಿ ಆರ್ಥಿಕ ಸಲಹೆಗಾರರಾಗಿದ್ದ ಕೌಶಿಕ್ ಬಸು ಇದ್ದರು. ಅಷ್ಟೇ ಏಕೆ ಸ್ವತಃ ಮೋದಿ ಆಡಳಿತದಲ್ಲಿ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ ಸುಬ್ರಮಣಿಯಂ ಸಹಾ ಇದ್ದರು. ಅವರೆಲ್ಲರೂ ಹೇಳಿದ್ದಿಷ್ಟೇ: ದುರುಪಯೋಗ, ಪೋಲು, ಅನರ್ಹರಿಗೆ ತಲುಪಬಹುದು ಇತ್ಯಾದಿ ವಿಚಾರಗಳನ್ನು ಪಕ್ಕಕ್ಕಿಟ್ಟು ಎಲ್ಲಾ ಜನರ ಕೈಗೆ ಅವರ ಬದುಕು ನಡೆಯಲು ಬೇಕಾದಷ್ಟು ಹಣವನ್ನು ಕೂಡಲೇ ತಲುಪಿಸಿ. ಇದರಿಂದ ಅವರೂ ಬದುಕುತ್ತಾರೆ; ಕೊರೊನಾ ಸಹಾ ನಿಯಂತ್ರಣಕ್ಕೆ ಬರುತ್ತದೆ; ಆರ್ಥಿಕತೆಯೂ ಉಳಿದುಕೊಳ್ಳುತ್ತದೆ ಎಂದು. ಇದನ್ನು ಎಲ್ಲಾ ಜನರಿಗೆ ಹೇಗೆ ತಲುಪಿಸಬಹುದು ಎಂಬ ಬಗ್ಗೆಯೂ ಜಯತಿ ಘೋಷ್ ಥರದ ಸಾಮಾಜಿಕ ಅರ್ಥಶಾಸ್ತ್ರಜ್ಞರು ದಾರಿಗಳನ್ನು ಸೂಚಿಸಿದರು.

ಅವ್ಯಾವನ್ನೂ ನಮ್ಮ ಸರ್ಕಾರ ಮಾಡಲಿಲ್ಲ. ಕನಿಷ್ಠ ಸುಮಾರು 9 ಲಕ್ಷ ಕೋಟಿ ರೂ.ಗಳಷ್ಟು ಆರ್ಥಿಕ ಪರಿಹಾರದ ಪ್ಯಾಕೇಜ್ ಬೇಕು ಮತ್ತು ಅದನ್ನು ಜನರಿಗೆ ತಲುಪಿಸಬೇಕು ಎಂದು ಅವರು ಹೇಳಿದ್ದರು. ಸರ್ಕಾರದ ವತಿಯಿಂದ ಇದ್ದಕ್ಕಿದ್ದಂತೆ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಲಾಯಿತು. ದುರಂತ ಎನ್ನಬೇಕೋ, ಅಸಹ್ಯ ಎನ್ನಬೇಕೋ, ಆಘಾತಕಾರಿ ಎನ್ನಬೇಕೋ ಹೇಳಲಾಗದು. ಅದರಲ್ಲಿ ಕೇವಲ 90,000 ಕೋಟಿ ರೂ.ಗಳಷ್ಟು ಮಾತ್ರ ಆ ಸಮಯದಲ್ಲಿ ಜನರ ಕೈಗೆ ತಲುಪುವ ಯೋಜನೆಯಿತ್ತು. ಉಳಿದುದೆಲ್ಲವೂ ಕೇವಲ ಕಾಗದದ ಮೇಲಿನ ಲೆಕ್ಕವಷ್ಟೇ. ಹೀಗಾದ್ದರಿಂದ ಆರ್ಥಿಕತೆ ಧ್ವಂಸವಾಗಿ ಹೋಯಿತು. ಬಡತನ ರೇಖೆಯ ಮೇಲಿದ್ದ 7.5 ಕೋಟಿ ಜನರು ಬಡತನಕ್ಕೆ ತಳ್ಳಲ್ಪಟ್ಟರು ಎಂದು ಅಧ್ಯಯನಗಳು ಹೇಳಿವೆ.

PC : Scroll.in

ಇಂತಹ ವಿಧ್ವಂಸಕಾರಿ ನೀತಿಗಳನ್ನು ಜಾರಿಗೆ ತಂದಿದ್ದು ಒಕ್ಕೂಟ ಸರ್ಕಾರ. ಆದರೀಗ ಮಾತ್ರ ರಾಜ್ಯ ಸರ್ಕಾರಗಳನ್ನು ನೀವು ನಿಭಾಯಿಸಿಕೊಳ್ಳಿ ಎಂದು ಹೇಳಿ ಕೈಬಿಟ್ಟಿವೆ. ರಾಜ್ಯ ಸರ್ಕಾರಗಳು ಲಾಕ್‌ಡೌನ್ ಎಂದರೇ ಬೆಚ್ಚಿ ಬೀಳುತ್ತಿವೆ. ಏಕೆಂದರೆ ಒಕ್ಕೂಟ ಸರ್ಕಾರದ ಕೇಂದ್ರೀಕರಣ ಮತ್ತು ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದಿಂದ ಮೊದಲೇ ನಜ್ಜುಗುಜ್ಜಾಗಿರುವ ಆರ್ಥಿಕತೆಯ ಮೇಲೆ ಲಾಕ್‌ಡೌನ್‌ನಿಂದ ವ್ಯಾಪಾರ ವಹಿವಾಟು ನಿಂತರೆ ಮತ್ತೆ ಹೊಡೆತ ಬೀಳುವುದು ಅವುಗಳಿಗೇ. ಹೀಗಾಗಿ ಈ ಸಂದರ್ಭದಲ್ಲಿ ಸರ್ಕಾರಗಳು ಮುಂದಿಡುತ್ತಿರುವ ಅರೆಬರೆ ನಿರ್ಬಂಧಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಕೊನೆಗೆ ಉತ್ತರಪ್ರದೇಶದಲ್ಲಿ ಕೋರ್ಟು ತನ್ನ ವ್ಯಾಪ್ತಿಯನ್ನು ಮೀರಿ ಕೆಲವು ನಗರಗಳಲ್ಲಿ ಲಾಕ್‌ಡೌನ್ ಘೋಷಿಸಿದ ಪ್ರಸಂಗವೂ ನಡೆದುಬಿಟ್ಟಿತು.

ನಿರ್ಬಂಧಗಳನ್ನು ಕಠಿಣವಾಗಿ ಹೇರದೇ ಇರುವುದು, ಲಾಕ್‌ಡೌನ್‌ನಿಂದ ಆಗುವ ಆರ್ಥಿಕ ನಷ್ಟ ಮತ್ತು ಜನಸಾಮಾನ್ಯರಿಗೆ ಆಗುವ ಸಮಸ್ಯೆ ಹಾಗೂ ಅತೀ ಬಡವರು ಅಮಾನವೀಯ ಪರಿಸ್ಥಿತಿಗೆ ತಳ್ಳಲ್ಪಡುತ್ತಾರೆ ಎಂಬ ಕಾರಣಕ್ಕೆ ಮಾತ್ರವಲ್ಲ. ಬದಲಿಗೆ ಜನರು ಎಲ್ಲವನ್ನೂ ಪಕ್ಕಕ್ಕಿಟ್ಟು ಸೋಂಕು ತಡೆಗೆ ಮುಂದಾಗಬೇಕು ಎಂದು ಹೇಳುವ ಗಟ್ಟಿ ದನಿಯೇ ಆಳುವವರಿಗೆ ಇಲ್ಲ. ರಾಜಕೀಯ ಪಕ್ಷಗಳ ಸಭೆಗಳು ಚುನಾವಣೆಗಳಿಗೆ ಮುಂಚೆಯೇ ಆರಂಭವಾಗಿಬಿಟ್ಟಿದ್ದವು; ಈ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಅತೀ ಹೆಚ್ಚು (ದಿನಕ್ಕೆ 2 ಲಕ್ಷಕ್ಕೂ ಹೆಚ್ಚು) ಕೇಸುಗಳು ಪತ್ತೆಯಾದ ದಿನವೇ ದೇಶದ ಪ್ರಧಾನಿಯವರು ’ತನ್ನ ಜೀವನದಲ್ಲೇ ಕಂಡಿರದ ಅತೀ ದೊಡ್ಡ ರಾಜಕೀಯ ರ್‍ಯಾಲಿ’ಯನ್ನು ನೋಡುತ್ತಿದ್ದೇನೆಂದು ಸಂಭ್ರಮದ ಭಾಷಣ ಮಾಡಿದರು. ಅದೇ ದಿನ ಬೆಳಿಗ್ಗೆ ಕೋವಿಡ್ ಹರಡುತ್ತಿರುವುದರಿಂದ ಕುಂಭಮೇಳವನ್ನು ಸಾಂಕೇತಿಕ ಪ್ರಮಾಣಕ್ಕೆ ಇಳಿಸಬೇಕೆಂದು ಅವರೇ ಟ್ವೀಟ್ ಸಹಾ ಮಾಡಿದ್ದರು. ಯಾರಿಗೂ, ಸ್ವತಃ ಸರ್ಕಾರಕ್ಕೂ, ಪರಿಸ್ಥಿತಿಯ ಭೀಕರತೆ ಗೊತ್ತಿಲ್ಲದೇ ಇರುವಾಗ ಒಂದು ಮಸೀದಿಯಲ್ಲಿ ಪೂರ್ವನಿಗದಿತ ಕಾರ್ಯಕ್ರಮಕ್ಕೆ ಸೇರಿದ್ದ ಹಲವು ನೂರು ಮುಸ್ಲಿಮರನ್ನು ಇನ್ನಿಲ್ಲದ ಅಪಮಾನಕ್ಕೆ ಗುರಿಯಾಗಿಸಿದವರೇ, ಕೆಲವು ಲಕ್ಷ ಜನರು ಎಲ್ಲಾ ಭೀಕರತೆಯ ಸಂಪೂರ್ಣ ಅರಿವಿದ್ದಾಗಲೇ ಕುಂಭಮೇಳಕ್ಕೆ ಸೇರಿದ್ದನ್ನು ಖಂಡಿಸಲೂ ಇಲ್ಲ. ಇಂತಹ ಆಷಾಢಭೂತಿತನ ಬಯಲಾದಾಗ ಜನರಿಗೆ ದೊಡ್ಡ ಪಾಠ ಹೇಳುವ ದನಿ ಎಲ್ಲಿಂದ ಬಂದೀತು?

ಒಂದು ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಏನು ಮಾಡಬೇಕು ಎಂಬ ಬಗ್ಗೆ ಕೆಲವು ದೇಶಗಳಲ್ಲಿ ಸನ್ನದ್ಧತೆ ಕಂಡುಬರುತ್ತದೆ. ಏಕೆಂದರೆ ವಿಕೋಪವು ಸಾಮಾನ್ಯವಾಗಿ ಇದ್ದಕ್ಕಿದ್ದಂತೆ ಸಂಭವಿಸುತ್ತದೆ. ಅಂತಹ ಹೊತ್ತಿನಲ್ಲಿ ಏನು ಮಾಡಬೇಕು, ಎಷ್ಟು ತ್ವರಿತವಾಗಿ ಮಾಡಬೇಕು, ಮಾಡುವ ಬಗೆ ಹೇಗೆ ಎಂಬುದನ್ನು ಹಿಂದಿನ ಅನುಭವಗಳಿಂದ ಕಲಿತು ಸದಾಕಾಲ ಸನ್ನದ್ಧ ಸ್ಥಿತಿಯಲ್ಲಿ ಇರುವ ದೇಶಗಳವು. ಭೂಕಂಪ, ಪ್ರವಾಹ, ಸುನಾಮಿ ಇತ್ಯಾದಿಗಳ ವಿಚಾರದಲ್ಲಿ ಅಂತಹ ಸನ್ನದ್ಧತೆಯನ್ನು ಹಲವು ದೇಶಗಳು ತೋರಿವೆ. ದೇಶಗಳ ಆಡಳಿತಗಳು ಹೋಗಲಿ, ತಮಿಳು ಈಳಂ ಹೋರಾಟಗಾರರ (ಎಲ್‌ಟಿಟಿಇ) ಪ್ರಾಬಲ್ಯವಿದ್ದ ಜಾಫ್ನಾ ಪ್ರದೇಶದಲ್ಲೂ ಅಂತಹ ಪೂರ್ವಸಿದ್ಧತೆ ಇತ್ತು. ಸುನಾಮಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕೆ ಅವರು ಶ್ಲಾಘನೆಗೂ ಒಳಗಾಗಿದ್ದರು. ವಿಶ್ವಗುರುವಾಗುವುದೆಂದರೆ, ವಿಶೇಷವಾದ ಸವಾಲುಗಳನ್ನೂ ಎದುರಿಸುವ ಸಾಮರ್ಥ್ಯ ಹೊಂದುವುದು ಎಂದರ್ಥವಲ್ಲವೇ?

ಆದರೆ ಮಿಕ್ಕ ದೇಶಗಳಷ್ಟು ತೀಕ್ಷ್ಣವಾಗಿರದ ಮೊದಲನೇ ಅಲೆಯನ್ನು (ಇದಕ್ಕೆ ಹಲವು ಪ್ರಾಕೃತಿಕವಾದ, ವೈಜ್ಞಾನಿಕ ಕಾರಣಗಳಿದ್ದವೇ ಹೊರತು ಸರ್ಕಾರದ ನೀತಿ ಕಾರಣವಾಗಿರಲಿಲ್ಲ) ದಾಟಿಕೊಂಡಾಗ, ಅದೂ ತಮ್ಮದೇ ಸಾಧನೆಯೆಂಬಂತೆ ಕೊಚ್ಚಿಕೊಂಡು ಪ್ರಚಾರದಲ್ಲಿ ನಿರತವಾಗಿದ್ದ ಸರ್ಕಾರದ ಯಂತ್ರಾಂಗವು, ಮಿಕ್ಕ ದೇಶಗಳಿಂದ ಕಲಿತ ಪಾಠವೇನು ಎಂಬುದೇ ಈಗಿನ ಪ್ರಶ್ನೆ. ತಮ್ಮದು ಮಿಕ್ಕ ದೇಶಗಳಿಗಿಂತ ಅಪರೂಪದ ಸಾಮರ್ಥ್ಯ ಎಂಬಂತೆ ಕೊಚ್ಚಿಕೊಳ್ಳಲು ವ್ಯಾಕ್ಸಿನ್‌ಅನ್ನೂ ಬಳಸಿಕೊಳ್ಳಲಾಯಿತು. ಕಳೆದ ವರ್ಷವೇ ಆಗಸ್ಟ್ 15ರೊಳಗೆ ವ್ಯಾಕ್ಸಿನ್ ತಯಾರಿಸಬೇಕೆಂದು ಜುಲೈ ಮೊದಲ ವಾರದಲ್ಲಿ ಅಂತಿಮ ಗಡುವು ನೀಡಲಾಯಿತು. ಅದು ಒಂದು ಹಾಸ್ಯಾಸ್ಪದವೂ, ಅಪಾಯಕಾರಿಯೂ ಆದ ನಡೆಯಾಗಿತ್ತು. ಏಕೆಂದರೆ ದಿನವೊಂದನ್ನು (ಅದರಲ್ಲೂ ಒಂದೂವರೆ ತಿಂಗಳ ಗಡುವು) ನಿಗದಿ ಮಾಡಿ, ವ್ಯಾಕ್ಸಿನ್ ತಯಾರಿಸಲಾಗದು ಎಂದು ವಿಜ್ಞಾನಿಗಳು ಕಿಡಿಕಾರಿದರು. ತಾವು ಆ ರೀತಿ ಹೇಳಿರಲಿಲ್ಲವೆಂದು ನಂತರ ಸಂಬಂಧಪಟ್ಟ ಸಂಸ್ಥೆ ಹಿಂದೆ ಸರಿಯಿತಾದರೂ, ’ಇದನ್ನು ಜಾರಿ ಮಾಡದೇ ಇದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ’ ಎಂಬ ಎಚ್ಚರಿಕೆಯೂ ಇದ್ದ ಪತ್ರ ಅಷ್ಟರಲ್ಲಿ ಹೊರಬಿದ್ದಿತ್ತು.

PC : Al Arabiya

ಅಂತಿಮವಾಗಿ ಅರೆಬರೆಯೋ ಅಥವಾ ಅವಸರದ್ದೋ ರೀತಿಯಲ್ಲಿ ವ್ಯಾಕ್ಸಿನ್ ಹೊರಬಂದಿತು. ಇಷ್ಟರಲ್ಲಿ ಬೇರೆ ಬೇರೆ ದೇಶಗಳಲ್ಲಿ ವ್ಯಾಕ್ಸಿನ್‌ನ ಮೇಲೆ ಬಹಳ ಗಮನವಿದ್ದಿತ್ತು. ಏಕೆಂದರೆ ಅವರು ಮುಂದಿನ ಅಲೆಗಳಿಗೆ ತಯಾರಿ ನಡೆಸುತ್ತಿದ್ದರು. ಆದರೆ ಭಾರತದ ಸರ್ಕಾರವು ಈ ವ್ಯಾಕ್ಸಿನನ್ನು ಬೇರೆ ದೇಶಗಳಿಗೆ ರಫ್ತು ಮಾಡುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿತ್ತು. ಭಾರತದಲ್ಲಿ ಜನವರಿ 16ರ ಹೊತ್ತಿಗೆ ಎರಡು ವ್ಯಾಕ್ಸಿನ್‌ಗಳು ಸಿದ್ಧವಾಗಿವೆ ಎಂದು ಘೋಷಿಸಲಾಗಿತ್ತು. ಅಲ್ಲಿಂದ ಮಾರ್ಚ್ ಕೊನೆಯವರೆಗೆ ನೀಡಲಾದ ವ್ಯಕ್ತಿಗಳಲ್ಲಿ 617 ಜನರು ಗಂಭೀರ ಸಮಸ್ಯೆಗಳನ್ನು ಎದುರಿಸಿದರಲ್ಲದೇ, 180 ಸಾವುಗಳೂ ಸಂಭವಿಸಿದವು. ಇವೆಲ್ಲವೂ ಆಕಸ್ಮಿಕ ಮತ್ತು ಕಾಕತಾಳೀಯವೇ ಇರಬಹುದು ಎಂದಿಟ್ಟುಕೊಳ್ಳೋಣ. ಆದರೆ ಆಸ್ಟ್ರಾಜೆನಿಕಾದ ಕೋವಿಶೀಲ್ಡ್ ವ್ಯಾಕ್ಸಿನ್‌ನಿಂದ ಆದ ಅಡ್ಡಪರಿಣಾಮಗಳ ಕುರಿತು ವಿದೇಶಗಳಲ್ಲಿ ತಜ್ಞರು ಮತ್ತು ಸರ್ಕಾರಗಳು ತೋರಿದ ಕಾಳಜಿಯ ಕಾಲು ಭಾಗವನ್ನೂ ಭಾರತದಲ್ಲಿ ತೋರಲಿಲ್ಲ. ಭಾರತದಲ್ಲಿಂದು ತಜ್ಞರೂ ಸಹಾ ಧೈರ್ಯವಾಗಿ ಮಾತಾಡಲು ಅಂಜುವ ಪರಿಸ್ಥಿತಿ ಇದೆ. ವೈಜ್ಞಾನಿಕ ಸಂಗತಿಗಳನ್ನು ಪುರಾವೆಗಳೊಂದಿಗೆ ಮುಂದಿಟ್ಟು ಚರ್ಚಿಸಿ ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಭರವಸೆ ಬರುವಂತೆ ಈ ಸರ್ಕಾರ ಏನನ್ನೂ ಮಾಡುತ್ತಿಲ್ಲ.

ಅದೇನೇ ಇದ್ದರೂ ವ್ಯಾಕ್ಸಿನ್‌ನ ಅಗತ್ಯವಿದೆ ಎಂದು ತೀರ್ಮಾನವಾದ ಮೇಲೆ, ಭಾರತದಲ್ಲಿ ವ್ಯಾಕ್ಸಿನ್ ತಯಾರಿಸುವ ಕಂಪೆನಿಗಳಿಗೆ ಹಣ ನೀಡಿ ಭಾರತದೊಳಗಿನ ಬಳಕೆಗೆ ಅವನ್ನು ಮೀಸಲಿರಿಸಿಕೊಳ್ಳುವ ಕೆಲಸ ಆಗಲಿಲ್ಲ. ಬದಲಿಗೆ ’ವ್ಯಾಕ್ಸಿನ್ ಮೈತ್ರಿಯಡಿಯಲ್ಲಿ 60 ದೇಶಗಳಿಗೆ ನಮ್ಮಿಂದ ವ್ಯಾಕ್ಸಿನ್ ಕಳಿಸಿದ್ದೇವೆ ಎಂಬ ಹೆಗ್ಗಳಿಕೆಯನ್ನು ಭಾರತ ಸರ್ಕಾರವು ಪ್ರದರ್ಶಿಸಬಯಸಿತು. ಕೇವಲ ಒಂದು ಕೋಟಿಗೂ ಸ್ವಲ್ಪ ಹೆಚ್ಚು ಜನರಿಗೆ ವ್ಯಾಕ್ಸಿನ್ ಹಾಕಲು ಸಾಧ್ಯವಾದ ಹೊತ್ತಿನಲ್ಲಿ ಭಾರತವು 6 ಕೋಟಿಯಷ್ಟು ವ್ಯಾಕ್ಸಿನ್‌ಅನ್ನು ಹೊರದೇಶಕ್ಕೆ ಕಳಿಸಿತ್ತು. ಇದು ಹೆಚ್ಚುಕಡಿಮೆ ಭಾರತದ ಔಷಧೋದ್ದಿಮೆಗಳ ಒಂದು ತಿಂಗಳ ಉತ್ಪಾದನಾ ಸಾಮರ್ಥ್ಯವಾಗಿತ್ತು.

ಹಾಗೆಂದು ಭಾರತದ ಉದ್ದಿಮೆಗಳಿಗೆ ದೊಡ್ಡ ಪ್ರಮಾಣದ ಸಾಮರ್ಥ್ಯ ಇರಲಿಲ್ಲವೆಂದಲ್ಲ. ಪ್ರಪಂಚದಲ್ಲಿ ಉತ್ಪಾದನೆಯಾಗುವ (ಕೋವಿಡ್ ಅಂತಲ್ಲ.. ಸಾಮಾನ್ಯವಾಗಿ) ವ್ಯಾಕ್ಸಿನ್‌ಗಳಲ್ಲಿ ಶೇ.62ರಷ್ಟನ್ನು ಭಾರತ ಉತ್ಪಾದಿಸುತ್ತದೆ. ಪ್ರಪಂಚದ ಒಟ್ಟಾರೆ ಜೆನೆರಿಕ್ ಔಷಧಿಗಳಲ್ಲಿ ಶೇ.20ರಷ್ಟನ್ನು ಭಾರತ ಉತ್ಪಾದಿಸುತ್ತದೆ. ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾವು ಮಂಜೂರಾತಿ ಸಿಗುವ ಮೊದಲೇ ಪ್ರಕ್ರಿಯೆಯನ್ನು ಆರಂಭಿಸಿತ್ತು ಮತ್ತು ಸಿಕ್ಕ ಕೂಡಲೇ ಲಕ್ಷಗಟ್ಟಲೆ ಉತ್ಪಾದನೆಯಲ್ಲೂ ತೊಡಗಿತ್ತು. ಆದರೆ ಭಾರತ ಸರ್ಕಾರಕ್ಕೆ ವ್ಯಾಕ್ಸಿನ್ ಡಿಪ್ಲೊಮಸಿ ಹೆಚ್ಚು ಮುಖ್ಯವಾಗಿದ್ದುದರಿಂದ ಭಾರತದೊಳಗೆ (ಚುನಾವಣೆಗಳಿಗೆ ವ್ಯಯಿಸುವ ಬುದ್ಧಿವಂತಿಕೆಯನ್ನು ವ್ಯಯಿಸಿ) ದೊಡ್ಡ ಪ್ರಮಾಣದಲ್ಲಿ ಅದನ್ನು ನೀಡುವ ಕಡೆಗೆ ಪ್ರಯತ್ನ ನಡೆಯಲಿಲ್ಲ.

ಹಾಗಾಗಿ ಬೇರೆ ದೇಶಗಳಿಂದ ವ್ಯಾಕ್ಸಿನ್ ತರಿಸಿಕೊಳ್ಳುವ ಕುರಿತು ವಿರೋಧ ಪಕ್ಷದ ನಾಯಕರು, ನಿರ್ದಿಷ್ಟವಾಗಿ ರಾಹುಲ್‌ಗಾಂಧಿ, ಮಾತಾಡಿದಾಗ ಅವರನ್ನು ವ್ಯಂಗ್ಯ ಮಾಡಿದ ಸರ್ಕಾರವು ನಂತರ ಅದನ್ನೇ ಮಾಡಲು ಮುಂದಾಗಬೇಕಾಯಿತು. ಏಪ್ರಿಲ್ 17ರ ಹೊತ್ತಿಗೆ ಇಂಗ್ಲೆಂಡ್ ತನ್ನ ಜನಸಂಖ್ಯೆಯ ಶೇ.48.2ರಷ್ಟು, ಅಮೆರಿಕವು ತನ್ನ ದೇಶದ ಶೇ.38.2ರಷ್ಟು ಜನರಿಗೆ ವ್ಯಾಕ್ಸಿನ್ ಹಾಕಿದ್ದರೆ ವಿಶ್ವಗುರು ಭಾರತವು ಹಾಕಿರುವುದು ಜನಸಂಖ್ಯೆಯ ಶೇ.7.7ರಷ್ಟು.

ಇವೆಲ್ಲವೂ ಎರಡನೇ ಅಲೆ ಬಂದೇ ಬರುತ್ತದೆ ಎಂದು ಖಚಿತವಾಗಿ ಗೊತ್ತಿದ್ದೂ ಮಾಡಿದ ತಪ್ಪುಗಳು. ಫೆಬ್ರವರಿ 2ನೇ ವಾರದಲ್ಲೇ ವೈರಸ್ ಅಲೆ ಬೀಸಲು ಆರಂಭವಾಗುತ್ತಿದೆ ಎಂದು ಸ್ಪಷ್ಟವಾಗಿ ತಜ್ಞರು ಹೇಳಿದ್ದರು. ಈ ಎರಡನೇ ಅಲೆಗೆ ಮಾಡಿದ್ದ ತಯಾರಿಗಳೇನು? ಮೊದಲನೇ ಲಾಕ್‌ಡೌನ್ ಸಂದರ್ಭದಲ್ಲಿ ಒಂದಷ್ಟು ತುರ್ತು ತಯಾರಿಗಳನ್ನು ಮಾಡಿತ್ತಾದರೂ, ಅದನ್ನೂ ನಂತರ ಗಾಳಿಗೆ ತೂರಲಾಯಿತು. ಉದಾಹರಣೆಗೆ ಕರ್ನಾಟಕ ಸರ್ಕಾರವು ಮಾದಾವರದ ಬಳಿ ಬಿಐಇಸಿ ಬಳಿ 10,100 ಹಾಸಿಗೆಗಳುಳ್ಳ ಕೋವಿಡ್ ಕೇರ್ ಕೇಂದ್ರವನ್ನು ತೆರೆದಿತ್ತು. 10,100 ಏಕೆ, 10,000 ಏಕಲ್ಲ ಅಥವಾ 11,000 ಏಕಲ್ಲ? ಅದಕ್ಕೆ ಬೇರೇನೂ ಕಾರಣವಿರಲಿಲ್ಲ. ದೆಹಲಿ ರಾಜ್ಯ ಸರ್ಕಾರವು 10,000 ಹಾಸಿಗೆಗಳ ಕೇಂದ್ರವನ್ನು ತೆರೆದಿದ್ದರಿಂದ ಅದಕ್ಕಿಂತ ನೂರು ಹೆಚ್ಚು ಮಾಡಿ ಕೀರ್ತಿ ಸಂಪಾದಿಸಿಕೊಳ್ಳುವುದಷ್ಟೇ ಗುರಿಯಾಗಿತ್ತು. ಅಂತಿಮವಾಗಿ ಅದು ಪೂರ್ಣಗೊಳ್ಳಲಿಲ್ಲ.

ಆ ಕೇಂದ್ರಕ್ಕೆ ಬೇಕಿದ್ದ ವಸ್ತುಗಳನ್ನು ಖರೀದಿಗೆ ತೆಗೆದುಕೊಂಡಿದ್ದರೆ ಆಗುತ್ತಿದ್ದ ಖರ್ಚಿಗಿಂತ ಎಷ್ಟೋ ಪಟ್ಟು ಹೆಚ್ಚು ಬಾಡಿಗೆ ನೀಡುವ ಪ್ರಯತ್ನದಲ್ಲಿ ಸರ್ಕಾರವಿತ್ತು. ಅದು ಬಯಲಾದ ನಂತರ ಹಾಸಿಗೆ, ಮಂಚ ಇತ್ಯಾದಿಗಳನ್ನು ದುಬಾರಿ ಬೆಲೆಗೆ ಕೊಂಡರು. ಕೊಂಡಿದ್ದು ಸಂಪೂರ್ಣ ಬಳಕೆಯಾಗುವ ಮೊದಲೇ ಸೆಪ್ಟೆಂಬರ್ 15ಕ್ಕೆ ಇಡೀ ಕೇಂದ್ರವನ್ನೇ ಮುಚ್ಚಲಾಯಿತು. ಅದೇ ಕೇಂದ್ರವನ್ನು ಉಳಿಸಿಕೊಂಡು ಪ್ರತಿ ಹಾಸಿಗೆಗೂ ಆಕ್ಸಿಜೆನ್‌ನ ಸರಬರಾಜು ಇರುವ ರೀತಿ ವ್ಯವಸ್ಥೆ ಮಾಡಿದ್ದರೆ, ಇಂದು ಕರ್ನಾಟಕವು ತನ್ನೆಲ್ಲಾ ತೀವ್ರ ಅಸ್ವಸ್ಥ ರೋಗಿಗಳಿಗೆ ಇಲಾಜು ಮಾಡುವುದು ಸಾಧ್ಯವಾಗುತ್ತಿತ್ತು.

ಇನ್ನೂ ಎಲ್ಲವೂ ಮುಗಿದಿಲ್ಲ. ಏಪ್ರಿಲ್ ಕೊನೆ ಅಥವಾ ಮೇ ಮೊದಲ ಭಾಗದಲ್ಲಿ ಕೇಸುಗಳ ಸಂಖ್ಯೆ ಶಿಖರ ಮುಟ್ಟಲಿದೆ ಎಂದು ತಜ್ಞರು ಹೇಳಿದ್ದಾರೆ. ಬಯಲಲ್ಲಿ ಓಡಾಡುವುದರಿಂದ (ಗುಂಪಿನಲ್ಲಿ ಅಲ್ಲ) ವೈರಸ್ ಸೋಂಕು ತಗಲುವುದಕ್ಕಿಂತ ಕಟ್ಟಡಗಳೊಳಗೆ ಹರಡುವ ಸಾಧ್ಯತೆ ಹೆಚ್ಚೆಂದು ಗೊತ್ತಾಗಿದೆ. ಇದು ಗೊತ್ತಾಗುವ ಹೊತ್ತಿನಲ್ಲಿ ಕರ್ನಾಟಕ ಸರ್ಕಾರವು ಥಿಯೇಟರ್‌ಗಳಲ್ಲಿ ಶೇ.50ರಿಂದ ಶೇ.100ರಷ್ಟು ಸೀಟುಗಳನ್ನು ತುಂಬಿಸಲು ಅನುಮತಿ ಕೊಟ್ಟಿತ್ತು. ಕರ್ನಾಟಕದಲ್ಲಿ ಮೊದಲಿಗಿಂತ ದೊಡ್ಡ ರೀತಿಯಲ್ಲಿ ಹಬ್ಬುತ್ತಿರುವ ಕೊರೊನಾ ಸೋಂಕನ್ನು ತಡೆಯಲು ಮೊದಲಿಗಿಂತ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆಯೇ? ಇಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿಯು ಮೊದಲೇ ಅಗತ್ಯವಿರುವ ಪ್ರಮಾಣದಲ್ಲಿ ಇರಲಿಲ್ಲ; ಗುತ್ತಿಗೆ ಆಧಾರದಲ್ಲೇ ದೊಡ್ಡ ಪ್ರಮಾಣದ ನಿಯೋಜನೆಯಿತ್ತು. ಅವರ ಅಳಲನ್ನು ಕೇಳುವವರೇ ಇಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ತೊಂದರೆಗೆ ಸಿಲುಕಿಕೊಂಡ ಸಿಬ್ಬಂದಿಗೆ ಸರ್ಕಾರದ ವಿಮೆ ಹಣವೂ ಬರಲಿಲ್ಲ.

ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ ಬೆಂಗಳೂರು ಮತ್ತು ಬಿಬಿಎಂಪಿಯ ಮೇಲೆ ಎಲ್ಲಾ ಕೇಂದ್ರೀಕರಣವಿದೆ. ಯಾವ ಸರ್ಕಾರೀ ಆಸ್ಪತ್ರೆಯಲ್ಲೂ, ಖಾಸಗಿ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಇರುವ ಬೆಡ್ ಸಿಗುತ್ತಿಲ್ಲ ಎಂದು ರೋಗಿಗಳು ಒದ್ದಾಡುತ್ತಿದ್ದಾರೆ. ಈ ಪುಟ್ಟ ಲೇಖನ ಬರೆದು ಮುಗಿಸುವ ಹೊತ್ತಿನಲ್ಲಿ ಅದಕ್ಕಾಗಿ ಮೂವರು ರೋಗಿಗಳಿಗೆ ಸಂಬಂಧಿಸಿದ ಫೋನ್ ಕರೆಯಲ್ಲಿ ವ್ಯಸ್ತನಾಗುವ ಮಟ್ಟಿಗೆ ಈ ಒತ್ತಡ ಇದೆ. ಆದರೆ ಸಮಸ್ಯೆ ಇದರಾಚೆಗೆ ಇದೆ. ಮಹಾರಾಷ್ಟ್ರದಲ್ಲೂ ಮುಂಬಯಿಯ ಮೇಲೆ ಮೊದಲ ಗಮನವಿತ್ತು. ಅಂತಿಮವಾಗಿ ಸಮಸ್ಯೆ ಹೆಚ್ಚಾಗಿದ್ದು ಮುಂಬಯಿಯ ಆಚೆಗೆ. ಏಕೆಂದರೆ ಅಲ್ಲಿ ಮಹಾನಗರಗಳಲ್ಲಿರುವಂತಹ ವೈದ್ಯಕೀಯ ಸೌಲಭ್ಯಗಳೂ ಇರುವುದಿಲ್ಲ. ಈ ಅಸಮಾನತೆ ಬೇರೆಲ್ಲಾ ಕ್ಷೇತ್ರಗಳಿಗಿಂತ ಹೆಚ್ಚು ಆರೋಗ್ಯ ಕ್ಷೇತ್ರದಲ್ಲಿದೆ.

PC : Times of India

ಇವೆಲ್ಲದರ ನಡುವೆ ಮರೆಯಬಾರದ ಎರಡು ಸಂಗತಿಗಳಿವೆ. ದೇಶವು ಇಂತಹ ಸ್ಥಿತಿಯನ್ನು ಹಾದು ಹೋಗುತ್ತಿರುವಾಗ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯ ನಡವಳಿಕೆಯು ಭಾರತದಂತಹ ದೇಶದ ಘನತೆಗೆ ತಕ್ಕುನಾದ್ದಾಗಿರಲಿಲ್ಲ. ಲಾಕ್‌ಡೌನ್ ಹೇರಿದ ರೀತಿಯಿಂದ ಹಿಡಿದು ಒಂದೊಂದು ಹೆಜ್ಜೆಯಲ್ಲೂ ಎಡವಟ್ಟು ಮಾಡಿದ್ದು ಎದ್ದು ಕಾಣುತ್ತಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ದೇಶದ ಜನರು ಸ್ಪಂದಿಸಿದ ರೀತಿಗೂ ಆಡಳಿತದ ಉನ್ನತ ಸ್ಥಾನದಲ್ಲಿರುವವರ ನಡವಳಿಕೆಗೂ ಭಾರೀ ವ್ಯತ್ಯಾಸವಿತ್ತು. ಇಂತಹ ದೊಡ್ಡ ಆಪತ್ತಿಗೆ ದೇಶ ಸಿಲುಕಿಕೊಂಡಿದ್ದಾಗ, ದೇಣಿಗೆ ನೀಡುವವರು ತಮ್ಮಂತೆ ತಾವು ಕೋಟಿಗಟ್ಟಲೆ ನೀಡಿ ಜನರ ರಕ್ಷಣೆಗೆ ಬಂದರು. ಆದರೆ ಸರ್ಕಾರವು ಒಂದು ಖಾಸಗಿ ಟ್ರಸ್ಟನ್ನು ಪ್ರಧಾನಿ ಮತ್ತಿತರ ಮಂತ್ರಿಗಳನ್ನೊಳಗೊಂಡು ರಚಿಸಿ ಅದಕ್ಕೆ ಹಣ ಪಡೆದುಕೊಂಡಿತು. ಅದಕ್ಕಿಟ್ಟ ಹೆಸರು ’ಪ್ರಧಾನಿ ಕಾಳಜಿ ಮಾಡುತ್ತಾರೆ’ (PM cares) ಎಂದು.

ಅಂತಿಮವಾಗಿ ಅದಾಗಲಿಲ್ಲ. ಆದರೆ ಇದನ್ನು ಪ್ರಶ್ನಿಸಬೇಕಾದ, ಒರೆಗೆ ಹಚ್ಚಬೇಕಾದ, ವೈಜ್ಞಾನಿಕ ಸತ್ಯಗಳನ್ನು ಜನರಿಗೆ ತಲುಪಿಸಿ ವಿಶ್ವಾಸ ಮೂಡಿಸಬೇಕಾದ ಮಾಧ್ಯಮಗಳ ಪಾತ್ರ ಇನ್ನೂ ಪಾತಾಳಕ್ಕೆ ಮುಟ್ಟಿತ್ತು. ಒಂದೆಡೆ ಸರ್ಕಾರದ ನೀತಿಯ ಕುರಿತು ಅವಿಮರ್ಶಾತ್ಮಕ ಭಜನೆ; ಇನ್ನೊಂದೆಡೆ ಜನರಲ್ಲಿ ಭಯ ಹುಟ್ಟಿಸುವ ಭೀಕರ ಕಾರ್ಯಕ್ರಮಗಳು. ಇವೆರಡರಲ್ಲಿ ಒಂದಿಡೀ ವರ್ಷವನ್ನು ಕಳೆದ ಮಾಧ್ಯಮಗಳು ಸಮಾನ ಪ್ರಮಾಣದಲ್ಲಿ ಜವಾಬ್ದಾರರಾಗಿವೆ.

ಇನ್ನು ಉಳಿದ ನಾವು – ಅಂದರೆ ಸರ್ಕಾರದ ಟೀಕಾಕಾರರು ಮಾತ್ರವಲ್ಲಾ, ಸರ್ಕಾರದ ಸಮರ್ಥಕರೂ ಸೇರಿ – ಇನ್ನಷ್ಟು ತೀವ್ರವಾಗಿ ಮತ್ತು ಸಹನೆಯಿಂದ ಮಾಡಬೇಕಾದ ಕೆಲಸದ ಕಡೆಗೆ ಗಮನ ಕೊಡಬೇಕಿದೆ. ಸರ್ಕಾರದ ಕುರಿತ, ಅವೈಜ್ಞಾನಿಕ ಸಂಗತಿಗಳ ಕುರಿತ ಸಹನೆಯಲ್ಲ, ಮುಂದಿನ ದಿನಗಳಲ್ಲಿ ಸಂಭವಿಸಲಿರುವ ಸಾವು, ನೋವುಗಳನ್ನು ಎದುರಿಸಲು ಸಂಕಷ್ಟದಲ್ಲಿರುವ ಜನರೊಟ್ಟಿಗೆ ನಿಲ್ಲುವ ಸಹನೆ ಬೇಕಾಗಿದೆ. ಕರ್ನಾಟಕದ ಸಾಮಾನ್ಯ ಜನರು ಈ ಕರ್ತವ್ಯದಿಂದ ವಿಮುಖರಾಗದಿದ್ದರೆ, ಅದು ಮಾತ್ರ ಇಂದು ಭರವಸೆಯ ಆಶಾಕಿರಣವಾಗಲಿದೆ.

  • ಡಾ.ಎಚ್.ವಿ ವಾಸು

ಇದನ್ನೂ ಓದಿ: ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!

1 COMMENT

LEAVE A REPLY

Please enter your comment!
Please enter your name here