Homeಅಂಕಣಗಳುಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿರುವ ಪಕ್ಷಾಂತರ ಹಾವಳಿ

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆಯಾಗಿರುವ ಪಕ್ಷಾಂತರ ಹಾವಳಿ

- Advertisement -
- Advertisement -

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚಿಸಲು ಪಕ್ಷಾಂತರ ಮಾಡಿದ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿರುವ ಬಗ್ಗೆ ಊಹಾಪೋಹಗಳು ದಟ್ಟವಾಗಿವೆ. ಎಚ್ ವಿಶ್ವನಾಥ್ ಸೇರಿದಂತೆ ಕೆಲವರು ಈಗಾಗಲೇ ಅದನ್ನು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಪಕ್ಷಾಂತರವನ್ನೇನು ಮಾಡದ ಕೆಲವು ಬಿಜೆಪಿ ಮುಖಂಡರು ಕೂಡ ಕಾಂಗ್ರೆಸ್ ಪಕ್ಷವನ್ನು ಸೇರುವ ವದಂತಿಗಳು ಎದ್ದಿವೆ. ಎಂಎಲ್‌ಸಿ ಪುಟ್ಟಣ್ಣ ಈಗಾಗಲೇ ತಮ್ಮ ವಿಧಾನ ಪರಿಷತ್ ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಅವರು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ. ಕಾಂಗ್ರೆಸ್‌ಗೆ ಬರುತ್ತಿದ್ದೇವೆ ಎನ್ನುತ್ತಿರುವವರು ಅಥವಾ ಹಿಂದಿರುಗುತ್ತಿದ್ದೇವೆನ್ನುತ್ತಿರುವವರು ಕೂಡ ಅಂತಹ ಟಿಕೆಟ್ ಆಕಾಂಕ್ಷಿಗಳೇ ಅಥವಾ ಭ್ರಷ್ಟಾಚಾರದಿಂದ ಬಸವಳಿದಿರುವ ಸದರಿ ಸರ್ಕಾರ ಮರುಚುನಾಯಿತವಾಗುವುದು ಬಹುತೇಕ ಕಷ್ಟವೆಂದು ದೂರಾಲೋಚಿಸಿರುವವರೇ. ಅಂದರೆ ಅಧಿಕಾರ ಬದಲಾಗಬಹುದೆಂಬ ಊಹೆಯ ಮೇರೆಗೆ ಈಗ ಬೇರೆ ಪಕ್ಷದ ಜೊತೆಗೆ ಸಖ್ಯ ಬೆಳೆಸಲು ಮುಂದಾಗಿರುವವರು. ಇಂತಹ ಸಮಯದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ; ಈ ನಾಡಿನ ಸಾಮರಸ್ಯಕ್ಕೆ, ಬಹುತ್ವಕ್ಕೆ ಕಂಟಕವಾಗಿರುವ ಬಿಜೆಪಿ ಪಕ್ಷವನ್ನು ದೂರವಿಡಲು ಈ ಪಕ್ಷಾಂತರಗಳನ್ನು ತುಸು ಮೃದು ಧೋರಣೆಯಿಂದ ಕಾಣಬೇಕೇ? ಬಿಜೆಪಿ ಸರ್ಕಾರ ರಚಿಸುವಾಗ ಆಮಿಷಕ್ಕೊಳಗಾಗಿ ತಮ್ಮ ಮೂಲ ಪಕ್ಷದ ವಿಪ್ ಉಲ್ಲಂಘಿಸಿ ಮಾಡಿಸಿದ ಪಕ್ಷಾಂತರಗಳಿಗೂ, ಈ ಚುನಾವಣೆಯ ಹೊಸ್ತಿಲಿನಲ್ಲಿ ನಡೆಯುತ್ತಿರುವ ಪಕ್ಷಾಂತರಗಳಿಗೂ ಭಾರಿ ವ್ಯತ್ಯಾಸವಿದೆಯೇ? ಹಲ್ಲು ಕಿತ್ತಂತಿರುವ ಪಕ್ಷಾಂತರ ತಡೆ ಕಾಯ್ದೆಯನ್ನು ಮರುರೂಪಿಸಿ ಬದಲಿಸುವುದಕ್ಕೆ ಇದು ಸಕಾಲವೇ?

ಎಚ್ ವಿಶ್ವನಾಥ್

2019ರ ಮೈತ್ರಿ ಸರ್ಕಾರವನ್ನು ಕೆಡವಲು ನಡೆದ ಪಕ್ಷಾಂತರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕದಲೂರು ಉದಯ್ ಎಂಬ ಉದ್ಯಮಿಯನ್ನು ಕಾಂಗ್ರೆಸ್ ಹಾರ ಹಾಕಿ ಕರೆಸಿಕೊಂಡಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವಕಾಶವಾದಿ ರಾಜಕಾರಣದ ಮಾತುಗಳನ್ನಾಡಿದ್ದಾರೆ. ಮದ್ದೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಇವರು ಎನ್ನಲಾಗಿದ್ದು, ಸದ್ಯಕ್ಕೆ ಮದ್ದೂರಿನಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಉದಯ್ ಬೆಸ್ಟ್ ಬೆಟ್ ಎನ್ನಲಾಗುತ್ತಿದೆ. ಒಂದು ಕಡೆ ಟಿಪ್ಪು ಬಗ್ಗೆ ಕಪೋಲಕಲ್ಪಿತ ಸುಳ್ಳುಗಳನ್ನು ಪ್ರಚಾರ ಮಾಡಿ, ಮತ್ತೊಂದು ಕಡೆಗೆ ಎಂಪಿ ಸುಮಲತಾ ಅವರ ಬೆಂಬಲ ಪಡೆದು ಮಂಡ್ಯ ಜಿಲ್ಲೆಯಲ್ಲಿ ಕೋಮು ಧ್ರುವೀಕರಣ ಮತ್ತು ವಿಷಮತೆಗೆ ಪ್ರಯತ್ನಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಪ್ರತಿಯಾಗಿ ಇಂತಹ ರಾಜಕೀಯ ಚಾಣಾಕ್ಷ ನಡೆಗಳು ಅಗತ್ಯ ಎಂದು ಕನ್‌ಕ್ಲೂಡ್ ಮಾಡಬಹುದೇ? ಇದೇ ಸೂತ್ರ ಕೆ.ಆರ್ ಪೇಟೆ ಶಾಸಕ ಮತ್ತು ಸಚಿವ ನಾರಾಯಣ ಗೌಡರಿಗೂ ಅನ್ವಯಿಸುತ್ತದೆಯೇ? 2019ರ ಆಪರೇಷನ್ ಕಮಲ-2.0ನಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ತೆರಳಿ ಸಚಿವರಾಗಿದ್ದ ಇವರು ಈಗ ಕಾಂಗ್ರೆಸ್‌ಗೆ ಬರುತ್ತಾರೆಂಬ ಊಹಾಪೋಹ ದಟ್ಟವಾಗಿದೆ. ಹೇಮಾವತಿ ಎಡದಂಡೆ ನಾಲೆಯ ಭ್ರಷ್ಟಾಚಾರದ ಆರೋಪ ಸದರಿ ಸಚಿವರ ಮೇಲಿದೆ. 40% ಭ್ರಷ್ಟಾಚಾರದ ಬಿಜೆಪಿ ಸರ್ಕಾರ ಇದು ಎಂದು ಆರೋಪಿಸಿ ಚುನಾವಣೆಗೆ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಇಂತಹ ಭ್ರಷ್ಟಾಚಾರ ಆರೋಪ ಹೊತ್ತ ಶಾಸಕ-ಸಚಿವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರೆ ಅದು ಕೊಡುವ ಸಂದೇಶವೇನು? ಅಲ್ಲದೆ ಭ್ರಷ್ಟಾಚಾರಿಗಳ ವಿರುದ್ಧ ಇಡಿ-ತೆರಿಗೆ ದಾಳಿ ನಡೆಸಿ, ಅವರಿಗೆ ಬೆದರಿಕೆಯೊಡ್ಡಿ, ಅವರು ಪಕ್ಷಾಂತರ ಮಾಡಲು ಒಪ್ಪಿದರೆ ಅವರನ್ನು ’ವಾಶಿಂಗ್ ಮೆಶಿನ್’ನಲ್ಲಿ ಹಾಕಿದಂತೆ ಹಾಕಿ ಅವರ ಪಾಪವನ್ನು ಕ್ಷಣಮಾತ್ರದಲ್ಲಿ ತೊಳೆಯುವ ’ಮಾಂತ್ರಿಕ’ ಪಕ್ಷವಾಗಿದೆ ಬಿಜೆಪಿ ಎಂಬ ವಿಮರ್ಶೆ-ಗೇಲಿ ಮಾಡುವ ಪಕ್ಷ ತನ್ನ ವಿರುದ್ಧ ಅದೇ ಆರೋಪ ಬರದಂತೆ ನಡೆದುಕೊಳ್ಳಬೇಕಲ್ಲವೇ?

ಕಾಂಗ್ರೆಸ್‌ಗೆ ಪಕ್ಷಾಂತರ ಆಗುತ್ತಾರೆಂದು ಮತ್ತೊಬ್ಬ ಹೈ-ಪ್ರೊಫೈಲ್ ಸಚಿವ, ಬೆಂಗಳೂರಿನ ಗೋವಿಂದರಾಜನಗರದ ಶಾಸಕ ಸೋಮಣ್ಣ ಸುದ್ದಿಯಲ್ಲಿದ್ದಾರೆ. ಜನತಾ ದಳದಲ್ಲಿದ್ದು ನಂತರ ಅದನ್ನು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆ ಗೆದ್ದಿದ್ದವರು. ನಂತರ ಕಾಂಗ್ರೆಸ್ ಸೇರಿ 2004 ಮತ್ತು 2008ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದಿದ್ದರು. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಗಣಿ ಧಣಿ ಬಳ್ಳಾರಿ ಜನಾರ್ದನ ರೆಡ್ಡಿಯ ಮುಂದಾಳತ್ವದಲ್ಲಿ ನಡೆಸಿದ ’ಆಪರೇಷನ್ ಕಮಲ’ ಇಡೀ ದೇಶದಲ್ಲೇ ಚರ್ಚೆಗೆ ಗ್ರಾಸವಾಗಿತ್ತು. ಹಂತಹಂತದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಸ್ವತಂತ್ರ ಶಾಸಕರು ಬಿಜೆಪಿ ಸೇರಿದ್ದರು. ಈ ಆಪರೇಷನ್ ಕಮಲದ ಸಮಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸಿದ್ದ ಸೋಮಣ್ಣನವರಿಗೆ ಮುಜರಾಯಿ ಸಚಿವ ಸ್ಥಾನದ ಉಡುಗೊರೆ ಸಿಕ್ಕಿತ್ತು. ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರ ಮಾಡಿ, ಉಪಚುನಾವಣೆಯಲ್ಲಿ ಗೋವಿಂದರಾಜನಗರದಲ್ಲಿ ಸ್ಪರ್ಧಿಸಿದಾಗ 25 ವರ್ಷದ ಪ್ರಿಯಾಕೃಷ್ಣ (ಕಾಂಗ್ರೆಸ್) ಸೋಮಣ್ಣನವರಿಗೆ ಸೋಲಿನ ರುಚಿ ತೋರಿಸಿದರು. ಅದು ಜಾತಿ ರಾಜಕಾರಣದ ಜಿದ್ದಾಜಿದ್ದೋ, ಹಳೆಯ ಸಹೋದ್ಯೋಗಿ ವಿಜಯನಗರ ಶಾಸಕ

ಪುಟ್ಟಣ್ಣ

ಕೃಷ್ಣಪ್ಪನವರ ಪ್ರತಿಷ್ಠೆಯ ಕಾಳಗವೋ ಒಟ್ಟಿನಲ್ಲಿ ಪಕ್ಷಾಂತರ ಮಾಡಿದ್ದ ಸೋಮಣ್ಣನವರಿಗೆ ಜನರು ಪಾಠ ಕಲಿಸಿದ್ದರು. ಆದರೆ ಹೀಗೆ ಪಕ್ಷಾಂತರ ಮಾಡಿದವರನ್ನು ಪ್ರತಿ ಬಾರಿ ಜನರು ಸೋಲಿಸಿದ ಉದಾಹರಣೆಗಳಿಲ್ಲ. 2019ರಲ್ಲಿ ಮೈತ್ರಿ ಸರ್ಕಾರವನ್ನು ಕೆಡವಿ ಪಕ್ಷಾಂತರ ಮಾಡಿ 17 ಜನ ಶಾಸಕರು ಅನರ್ಹರಾಗಿದ್ದರು. ಇದರಲ್ಲಿ ಇಬ್ಬರು ಸ್ಪರ್ಧಿಸಲಿಲ್ಲ. ಕಾಂಗ್ರೆಸ್‌ಅನ್ನು ತೊರೆದಿದ್ದ ಇಬ್ಬರು ಅಭ್ಯರ್ಥಿಗಳು ಮತ್ತು ಜೆಡಿಎಸ್ ತೊರೆದಿದ್ದ ಒಬ್ಬ ಅಭ್ಯರ್ಥಿ ಬಿಜೆಪಿಯಿಂದ ನಿಂತು ಸೋತರೆ, ಉಳಿದ 12 ಪಕ್ಷಾಂತರಿಗಳು ಬಿಜೆಪಿಯಿಂದ ಸ್ಪರ್ಧಿಸಿ ಮರುಆಯ್ಕೆಯಾದರು. ಬಹುತೇಕ ಎಲ್ಲರೂ ಸಚಿವರಾದರು. ಹೀಗೆ, ಪಕ್ಷಾಂತರಿಗಳನ್ನು ಮತದಾರರು ಶಿಕ್ಷಿಸುತ್ತಾರೆಂದು ಹೇಳಲುಬರುವುದಿಲ್ಲ. 2008ರಲ್ಲಿ ಕಾಂಗ್ರೆಸ್ ತೊರೆದಿದ್ದ ಸೋಮಣ್ಣನವರನ್ನು ಈಗ ಕಾಂಗ್ರೆಸ್ ಯಾವ ನೈತಿಕತೆಯ ಆಧಾರದಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆ? ಈಗಿರುವ ಗುಲ್ಲಿನಂತೆ ಸೋಮಣ್ಣನವರಿಗೆ ರಾಜಾಜಿನಗರ ಕ್ಷೇತ್ರ ಮತ್ತು ಅವರ ಮಗ ಅರುಣ್ ಸೋಮಣ್ಣನವರಿಗೆ ಹನೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಚೌಕಾಸಿ ನಡೆಯುತ್ತಿದೆ ಎನ್ನಲಾಗುತ್ತಿದೆ. ಒಂದು ಪಕ್ಷ ಇವರು ಕಾಂಗ್ರೆಸ್‌ಗೆ ಎರಡು ಸ್ಥಾನಗಳನ್ನು ತಂದುಕೊಟ್ಟರೂ, ಈ ಸದ್ಯದ ಲಾಭದಾಚೆಗಿನ ರಾಜಕೀಯ-ಸಾಂವಿಧಾನಿಕ-ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಪಕ್ಷಗಳು ದೃಢ ನಿಲುವು ತಳೆಯಬೇಕಿರುವುದು ಮುಖ್ಯವಲ್ಲವೇ? ಮುಂದೆ ಕುದುರೆ ವ್ಯಾಪಾರಕ್ಕೆ ಇವರು ಮತ್ತೆ ಬಲಿಯಾಗಲಾರರೆಂಬ ಯಾವ ಖಚಿತತೆ ಇದೆ ಈ ಪಕ್ಷಾಂತರಿಗಳನ್ನು ಬರಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ? ಇದು ಉಳಿದ ಪಕ್ಷಗಳಿಗೂ ಅನ್ವಯವಾಗುತ್ತದೆ.

ಸಾಮಾನ್ಯ ಚುನಾವಣೆಯ ಹೊಸ್ತಿಲಲ್ಲಿ ನಡೆಯುವ, ಆದರೆ ಹೆಚ್ಚು ಟೀಕೆಗೆ ಗುರಿಯಾಗದ ಈ ’ಸಾಮಾನ್ಯ’ ಪಕ್ಷಾಂತರಗಳಿಗೂ, ಪಕ್ಷದ ವಿಪ್ ಧಿಕ್ಕರಿಸಿ ’ಕ್ರಿಟಿಕಲ್’ ಸಮಯದಲ್ಲಿ ಮಾಡುವ ಪಕ್ಷಾಂತರಗಳಿಗೂ, ತುಸು ಭಿನ್ನತೆ ಇದ್ದರೂ, ರಾಜಕಾರಣದ ಮೌಲ್ಯ ಮತ್ತು ನೈತಿಕ ದೃಷ್ಟಿಯಿಂದ ಎರಡೂ ಬಗೆಯ ಪಕ್ಷಾಂತರಗಳು ಹೆಚ್ಚುಕಮ್ಮಿ ಒಂದೇ ಎನ್ನಬಹುದು. ಸಾಮಾನ್ಯ ಚುನಾವಣೆಯ ಹೊಸ್ತಿಲಿನಲ್ಲಿ ಪಕ್ಷಾಂತರ ಮಾಡುವ ನಾಯಕರು ಹೊಸದಾಗಿ ಜನರ ಮ್ಯಾಂಡೇಟ್ ಕೇಳುವುದರಿಂದ ಇವುಗಳನ್ನು ಮೃದುವಾಗಿ ನೋಡಬೇಕಾ ಎಂಬ ಪ್ರಶ್ನೆ ಏಳುತ್ತದೆ. ಆದರೆ, ಸಾಮಾನ್ಯವಾಗಿ ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷದಿಂದ ಗೆದ್ದ ನಾಯಕರು, ಆ ಪಕ್ಷವನ್ನು ಬಳಸಿಕೊಂಡು ಕೆಲವು ವರ್ಷಗಳ ನಂತರ ಆ ಪಕ್ಷದ ವರ್ಚಸ್ಸನ್ನು ಮೀರಿದ ಪ್ರಭಾವವನ್ನು ಬೆಳೆಸಿಕೊಂಡಿರುತ್ತಾರೆ. ರಾಜಕೀಯದ ಶಿಕ್ಷಣದ ಕೊರತೆಯಿರುವ ನಮ್ಮಂತಹ ದೇಶಗಳಲ್ಲಿ ವಿಶಾಲ ದೃಷ್ಟಿಕೋನದಲ್ಲಿ ಯಾವ ಪಕ್ಷ ಯಾವುದನ್ನು ಪ್ರತಿನಿಧಿಸುತ್ತದೆಂಬ ತಿಳಿವಳಿಕೆಯ ಕೊರತೆ, ಜಾತಿ ಗುರುತುಗಳು ಮತದಾನವನ್ನು ಪ್ರಭಾವಿಸುವ ಸಂದರ್ಭದಲ್ಲಿ, ರಾಜಕೀಯ ಮುಖಂಡ ಪಕ್ಷವನ್ನು ಮೀರಿ ಬೆಳೆದು ಚುನಾಯಿತನಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಸಾಮಾನ್ಯ ಚುನಾವಣೆಗಳಲ್ಲಿ ಮಾಡುವ ಪಕ್ಷಾಂತರ ಕೂಡ ಮುಖಂಡನೊಬ್ಬ ತಾನು ಯಾವುದನ್ನು ಊರುಗೋಲು ಮಾಡಿಕೊಂಡು ಬೆಳೆದುಬಂದನೋ ಅಂತಹ ಪಕ್ಷಕ್ಕೆ ಎಸಗುವ ದ್ರೋಹವೇ ಆಗಿರುತ್ತದೆ. ಮತ್ತು ತಾನು ರಾಜಕೀಯದಲ್ಲಿ ಬೆಳೆಯುವ ಹಂತದಲ್ಲಿ ಯಾವುದನ್ನು ಪ್ರತಿನಿಧಿಸುತ್ತೇನೆಂದು ಜನರಿಗೆ ನಂಬಿಸಿರುತ್ತಾರೋ ಅದಕ್ಕೆ ಮೋಸ ಮಾಡಿದಂತೆ. ಇಂತಹ ದ್ರೋಹವನ್ನು ತಡೆಗಟ್ಟುವ ನಿಯಮ-ಕಾನೂನುಗಳು ಅಗತ್ಯ ಹೆಚ್ಚಿದೆ. ಆದರೆ ಯಾವುದೋ ಒಂದು ಪಕ್ಷ ಸಂವಿಧಾನಬಾಹಿರವಾಗಿ ಮುನ್ನುಗ್ಗುವಾಗ (ಉದಾಹರಣೆಗೆ ಸಂವಿಧಾನ ವಿರೋಧಿ ಸಿಎಎ ಜಾರಿಗೆ ತಂದ ಬಿಜೆಪಿ) ಅಂತಹ ಪಕ್ಷದಿಂದ ಹೊರನಡೆಯುವ ಮತ್ತು ಪಕ್ಷಾಂತರ ಮಾಡುವ ಅವಕಾಶ ಇರಬೇಕಲ್ಲವೇ ಎಂಬ ಪ್ರಶ್ನೆ ಮುಖ್ಯವಾದದ್ದೇ! ಆದರೆ ಈ ದೇಶದಲ್ಲಿ ಅಧಿಕಾರದ ಆಸೆಗೆ, ಹಣದ ಆಸೆಗೆ ಅಥವಾ ಬೆದರಿಕೆಯಿಂದ ಪಕ್ಷಾಂತರ ನಡೆದಿರುವುದೇ ಹೆಚ್ಚು. ಕೇವಲ ಅಧಿಕಾರದ ಆಸೆಗಲ್ಲದೆ, ತಾನು ಪ್ರತಿನಿಧಿಸುವ ಪಕ್ಷದ ಜೊತೆಗಿನ ಪ್ರಾಮಾಣಿಕ ಭಿನ್ನಾಭಿಪ್ರಾಯದಿಂದ ಮಾಡುವ ಪಕ್ಷಾಂತರವನ್ನು ಪ್ರತ್ಯೇಕಗೊಳಿಸಿ ನೋಡಲು ಯಾವುದೇ ಮಾನದಂಡವಿಲ್ಲದಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಪಕ್ಷಾಂತರಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ, ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದ, ಕನಿಷ್ಠ ಪಕ್ಷ ಇಂತಿಷ್ಟು ವರ್ಷಗಳ ಕಾಲ ಯಾವುದೇ ಸಾಂವಿಧಾನಿಕ ಅಧಿಕಾರವನ್ನು ಅವರು ಪಡೆಯುವುದನ್ನು ನಿಷೇಧಿಸಬೇಕಾದ ಪರಿಸ್ಥಿತಿ ಇಂದು ನಮ್ಮ ಮುಂದಿದೆ. ಆದರೆ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಕ್ರಮಗಳ್ಯಾವೂ ಪಕ್ಷಾಂತರಿಗಳಿಗೆ ಅಳುಕು ಹುಟ್ಟಿಸುವಂತಿಲ್ಲ.

ಸೋಮಣ್ಣ

1967ರಲ್ಲಿ ಹರ್ಯಾಣ ರಾಜಕಾರಣಿ ಗಯಾ ಲಾಲ್ ಎನ್ನುವವರು 24 ಗಂಟೆಗಳ ಅವಧಿಯಲ್ಲಿ ಮೂರು ಪಕ್ಷಗಳನ್ನು ಬದಲಿಸಿದ್ದು ’ಆಯಾ ರಾಮ್ ಗಯಾ ರಾಮ್’ (’ಬಂದ ಪುಟ್ಟ ಹೋದ ಪುಟ್ಟ’ ಎನ್ನುವ ರೀತಿಯಲ್ಲಿ) ಪ್ರಸಿದ್ಧವಾಗಿತ್ತು. ನಂತರ ಹಲವು ವರ್ಷಗಳ ಕಾಲ ಚರ್ಚೆಗಳಾಗಿ 1985ರಲ್ಲಿ ಆಂಟಿ ಡಿಫೆಕ್ಷನ್ ಲಾ ಅಥವಾ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂತು. ವಿಪ್ ಎನ್ನಲಾಗುವ ಪಕ್ಷದ ನಿರ್ದೇಶನಗಳ ವಿರುದ್ಧ ಮತ ಚಲಾಯಿಸಿದರೆ ಅಥವಾ ಪಕ್ಷಾಂತರ ಮಾಡಿದರೆ ಲೋಕಸಭೆ ಮತ್ತು ವಿಧಾನಸಭೆಗಳು ಅಂತಹ ಸದಸ್ಯನನ್ನು ಅನರ್ಹಗೊಳಿಸುವ ಶಾಸನವನ್ನು ಜಾರಿ ಮಾಡಲಾಯಿತು. ಇದು ಸ್ಪೀಕರ್ ಮತ್ತು ಗವರ್ನರ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಿತೇ ಹೊರತು ಸುಧಾರಣೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. ಅಲ್ಲದೆ, ಇದು ಹಲವು ಬಾರಿ ಸುಪ್ರೀಂ ಕೋರ್ಟ್ ಮತ್ತಿತರ ಕೋರ್ಟ್‌ಗಳನ್ನು ಸುತ್ತಿಬಂದರೂ ಪರಿಣಾಮಕಾರಿಯಾಗಿಲ್ಲ. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಶಿವಸೇನೆಯ ವಿಪ್ ಉಲ್ಲಂಘಿಸಿ ಸರ್ಕಾರವನ್ನು ಉರುಳಿಸಿದ ಪ್ರಕರಣದಿಂದ ಹಿಡಿದು, 2019ರಲ್ಲಿ ಕರ್ನಾಟಕದಲ್ಲಿ ಆದದ್ದು, ಗೋವಾದಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ದಂಡುದಂಡಾಗಿ ಎರಡೆರಡು ಬಾರಿ ಗುಳೆ ಹೋದದ್ದು, 2008ರ ಕರ್ನಾಟಕ ಆಪರೇಷನ್ ಕಮಲ ಹೀಗೆ ತಮ್ಮ ಪಕ್ಷಗಳ ’ವಿಪ್’ ಉಲ್ಲಂಘಿಸಿ ಮಾಡಿರುವ ಪಕ್ಷಾಂತರಗಳು (ಅನರ್ಹರಾಗಿ ಕೆಲವೇ ತಿಂಗಳುಗಳ ನಂತರ ಚುನಾವಣೆ ಗೆದ್ದು ಅರ್ಹರಾಗಿದ್ದು) ಪ್ರಜಾಪ್ರಭುತ್ವವನ್ನು-ಸಂವಿಧಾನವನ್ನು ಅಣಕಿಸಿ ಅವಮಾನ ಮಾಡಿವೆ. ಅನರ್ಹತೆಯ ಅಳುಕಿಲ್ಲದೆ ಪಕ್ಷಾಂತರಕ್ಕೆ ಮುಂದಾಗುವ ಪರಿಸ್ಥಿತಿಯನ್ನು ಬದಲಾಯಿಸುವ ಬಗ್ಗೆ ತುರ್ತಾಗಿ ಚಿಂತಿಸುವ ಸಮಯ ಎದುರಾಗಿದೆ.

ಸಾಮಾನ್ಯ ಪಕ್ಷಾಂತರ ಮಾಡಿದವರು ಕನಿಷ್ಠ ಐದು ವರ್ಷಗಳ ಕಾಲ ಯಾವುದೇ ಸಾಂವಿಧಾನಿಕ ಅಧಿಕಾರವನ್ನು ಹೊಂದುವಂತಿಲ್ಲ ಮತ್ತು ಅಧಿಕಾರ-ಹಣ ಮತ್ತಿತರ ಆಮಿಷಕ್ಕಾಗಿ ವಿಪ್ ಉಲ್ಲಂಘಿಸಿದವರು ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಯಾವುದೇ ಸಾಂವಿಧಾನಿಕ ಅಧಿಕಾರವನ್ನು ಹೊಂದುವಂತಿಲ್ಲ ಎಂಬ ನಿಯಮಗಳನ್ನು ಚರ್ಚಿಸಿ, ಇನ್ನಷ್ಟು ಸೂಕ್ಷ್ಮತೆಗಳೊಂದಿಗೆ ಜಾರಿಗೆ ತಂದಾಗ ಈ ಪಕ್ಷಾಂತರ ಹಾವಳಿಯನ್ನು ಒಂದು ಮಟ್ಟಕ್ಕೆ ತಹಬದಿಗೆ ತರಬಹುದಾಗಿದೆ. ಚುನಾವಣೆಗಳಲ್ಲಿ ಮತದಾನ ಮಾಡುವ ನಾಗರಿಕರ ನಂಬಿಕೆಗಳನ್ನು ಉಳಿಸುವಲ್ಲಿ ಇವು ಮಹತ್ವದ ಹೆಜ್ಜೆಯಾದಾವು.

ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆದ ಸಾಲುಸಾಲು ಭ್ರಷ್ಟಾಚಾರದ ಹಗರಣಗಳಿವು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...