Homeಕರ್ನಾಟಕ'ಯುವ ನಿಧಿ' ಯೋಜನೆ- ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ.: ರಾಹುಲ್‌ ಗಾಂಧಿ ಘೋ‍ಷಣೆ

‘ಯುವ ನಿಧಿ’ ಯೋಜನೆ- ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ.: ರಾಹುಲ್‌ ಗಾಂಧಿ ಘೋ‍ಷಣೆ

- Advertisement -
- Advertisement -

ಬೆಳಗಾವಿಯಲ್ಲಿ ಇಂದು(ಮಾ. 20) ನಡೆದ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾಗವಹಿಸಿದ್ದರು. ಈ ವೇಳೆ ಆಡಳಿತಾರೂಢ ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿರುವ 40 ಪರ್ಸೆಂಟ್ ಕಮೀಷನ್ ಸರ್ಕಾರ ರಾಜ್ಯದ ಉದ್ಯೋಗ ನೀಡದೆ ಯುವಜನರ ಬದುಕನ್ನೇ ಹಾಳುಮಾಡಿದೆ ಎಂದು ಕಿಡಿಕಾರಿದ್ದಾರೆ.

ಯುವ ಕ್ರಾಂತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್, ”ನಾನು ಭಾರತ್ ಜೋಡೋ ಯಾತ್ರೆ ಮಾಡುವ ಸಂದರ್ಭದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಾಗ ಒಂದು ವಿಚಾರವನ್ನು ಅರಿತುಕೊಂಡೆ. ಇಲ್ಲಿ ನಿರುದ್ಯೋಗ ಸಮಸ್ಯೆಯು ಯುವಕರನ್ನು ಕಾಡುತ್ತಿದೆ. ಭ್ರಷ್ಟ ಬಿಜೆಪಿ ಸರ್ಕಾರ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿದೆ. ಇದನ್ನು ಅರ್ಥಮಾಡಿಕೊಳ್ಳಲು ನಾನು ಸಾವಿರಾರು ಯುವಕರೊಂದಿಗೆ ಮಾತನಾಡಿದ್ದೆನೆ” ಎಂದು ಹೇಳಿದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ 10 ಲಕ್ಷ ಉದ್ಯೋಗಗಳನ್ನು ನೀಡುತ್ತೇವೆ. ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ವಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ” ಎಂದು ಯುವಕರಿಗೆ ರಾಹುಲ್‌ ಭರವಸೆ ನೀಡಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ನಿರುದ್ಯೋಗಿ ಯುವಕರಿಗಾಗಿ ‘ಯುವ ನಿಧಿ’ ಯೋಜನೆಯನ್ನು ಹಮ್ಮಿಕೊಳ್ಳಲಿದೆ. ಚುನಾವಣೆಯಲ್ಲಿ ಗೆದ್ದ ನಂತರ ಯುವ ನಿಧಿ ಯೋಜನೆಯನ್ನು ತಕ್ಷಣವೇ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಪದವಿ ಪಡೆದಿರುವ ನಿರುದ್ಯೋಗಿಗಳಿಗೆ 3000 ರೂ. ನೀಡಲಾಗುತ್ತದೆ. ಡಿಪ್ಲೋಮಾ ಹೊಂದಿರುವ ನಿರುದ್ಯೋಗಿಗಳಿಗೆ 1500 ರೂ. ಗಳನ್ನು ನೀಡಲಾಗುತ್ತದೆ. ಇದು ಎರಡು ವರ್ಷಗಳ ವರೆಗೆ ಮುಂದುವರಿಯುತ್ತದೆ” ಎಂದು ರಾಹುಲ್‌ ಗಾಂಧಿ ಘೋಷಿಸಿದರು.

”ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವುದನ್ನು ನಾನು ಈಗಾಗಲೇ ಗಮನಿಸಿದ್ದೇನೆ. ರಾಜ್ಯ ಘಟಕ ಬಯಸಿದರೆ ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಪ್ರವಾಸ ಮಾಡಲು ಸಿದ್ಧನಿದ್ದೇನೆ. ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದ್ದೇವೆ” ಎಂದು ಅವರು ಹೇಳಿದರು.

‘ದೇಶದ ಅತ್ಯಂತ ಭ್ರಷ್ಟ ಸರ್ಕಾರ ‘ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರ ಎಂದು ಎಲ್ಲ ವರ್ಗದ ಜನ ಹೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯದಲ್ಲಿ 40 ಪರ್ಸೆಂಟ್‌ ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರಿದ್ದಾರೆ. ಆದರೂ ಪ್ರಧಾನಿಗಳು ಈ 40 ಪರ್ಸೆಂಟ್‌ ಕಮಿಷನ್ ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ” ಎಂದರು.

ರಾಜ್ಯದ ಮಹಿಳೆಯರ ಕಷ್ಟಕ್ಕೆ ಪರಿಹಾರ ನೀಡಲು ‘ಗೃಹಲಕ್ಷ್ಮಿ’ ಯೋಜನೆ ಮೂಲಕ ಮನೆಯೊಡತಿಗೆ 2000ರೂ. ಪ್ರೋತ್ಸಾಹ ಧನ, ಅನ್ನ ಭಾಗ್ಯ ಯೋಜನೆ ಮೂಲಕ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ, ‘ಗೃಹಜ್ಯೋತಿ’ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಅಷ್ಟೇ ಅಲ್ಲದೆ, ನಿರುದ್ಯೋಗಿ ಯುವಕರಿಗಾಗಿ ‘ಯುವ ನಿಧಿ’ ಯೋಜನೆಯನ್ನು ಹಮ್ಮಿಕೊಳ್ಳಲಿದೆ. ಪದವಿ ಪಡೆದಿರುವ ನಿರುದ್ಯೋಗಿಗಳಿಗೆ 3000 ರೂ. ನೀಡಲಾಗುತ್ತದೆ. ಡಿಪ್ಲೋಮಾ ಹೊಂದಿರುವ ನಿರುದ್ಯೋಗಿಗಳಿಗೆ 1500 ರೂ. ಗಳನ್ನು ನೀಡಲಾಗುತ್ತದೆ ಎಂದು ರಾಹುಲ್ ಹೇಳಿದರು.

”ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ಕರ್ನಾಟಕದ ಮೂಲಕ ಸಾಗಿದಾಗ ಅಭೂತಪೂರ್ವ ಬೆಂಬಲ ನೀಡಿ ಯಾತ್ರೆ ಯಶಸ್ಸುಗೊಳಿಸಿದ್ದಿರಿ. ಅದಕ್ಕಾಗಿ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ದೇಶ ಯಾರೋ ಒಬ್ಬರ ಸ್ವತ್ತಲ್ಲ, ಅಧಾನಿ ಸ್ವತ್ತೂ ಅಲ್ಲ. ಈ ದೇಶ ರೈತರು, ಯುವಕರು, ಬಡವರು ಸೇರಿದಂತೆ ಎಲ್ಲರಿಗೂ ಸೇರಿದ್ದು” ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...