ವರದಿ

ಕೊರೊನಾ ಪರೀಕ್ಷೆಗೆ ಕೊಟ್ಟ ನಂತರ ವರದಿ ಬರುವುದು ತಡವಾದರೆ ಪರೀಕ್ಷೆಗೊಳಗಾದ ವ್ಯಕ್ತಿಗಳು ಪಾಸಿಟಿವ್ ವರದಿ ಬರುವುದರೊಳಗೆ ಹಲವು ಕಡೆ ಓಡಾಡುವುದರಿಂದ ಸೋಂಕು ತೀವ್ರ ರೀತಿಯಲ್ಲಿ ಬೇರೆಯವರಿಗೆ ಹರಡುತ್ತದೆ. ಹಾಗಾಗಿ ಸರ್ಕಾರ ಒಂದೇ ದಿನದಲ್ಲಿ ವರದಿ ಕೊಡುವ ರೀತಿ ಲ್ಯಾಬ್‌ಗಳನ್ನು ಮತ್ತು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಬೇಕೆಂದು ವೈದ್ಯರೊಬ್ಬರು ಒತ್ತಾಯಿಸಿರುವ ವಿಡಿಯೋ ವೈರಲ್ ಆಗಿದೆ.

ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕದ ಮಾಜಿ ಅಧ್ಯಕ್ಷ, ಸರ್ಕಾರಿ ವೈದ್ಯಾಧೀಕಾರಿಗಳ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಮಂಡ್ಯದ ಡಾ.ರವೀಂದ್ರ ಎಂಬುವವರು ಕೊರೊನಾ ಪರೀಕ್ಷೆಗೆ ಕೊಟ್ಟು ನಾಲ್ಕು ದಿನಗಳಾದರೂ ವರದಿ ಬಂದಿಲ್ಲ. ನನಗೆ ಈ ಪರಿಸ್ಥಿತಿಯಾದರೆ ಜನಸಾಮಾನ್ಯರ ಗತಿಯೇನು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾನು ನಾಲ್ಕು ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದೇನೆ. ಏಕೆಂದರೆ ಒಂದು ವೇಳೆ ವರದಿಯಲ್ಲಿ ಪಾಸಿಟಿವ್ ಬಂದಲ್ಲಿ ನಾನು ಓಡಾಡಿದ ಕಡೆಯಲ್ಲೆಲ್ಲಾ ಸೋಂಕು ಹಬ್ಬಿಸಬಹುದಾದ ಸಾಧ್ಯತೆಯಿರುವುದರಿಂದ, ನನ್ನಿಂದ ಬೇರೆಯವರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶವಾಗಿದೆ. ಆದರೆ ಜನಸಾಮಾನ್ಯರಿಗೆ ಈ ತಿಳುವಳಿಕೆ ಕೊಡುವವರು ಯಾರು? ಅವರು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ಸಾಧ್ಯವೇ? ಸರ್ಕಾರ ಏಕೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ?” ಎಂದು ಅವರು ಕಿಡಿಕಾರಿದ್ದಾರೆ.

ಸರ್ಕಾರದ ಏಕೆ ಈ ಸೂಕ್ಷ್ಮತೆ ಅರ್ಥವಾಗುತ್ತಿಲ್ಲ? ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ಸರ್ಕಾರ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೂಡಲೇ ಆದಷ್ಟು ಬೇಗ ಪರೀಕ್ಷೆಯ ವರದಿ ಬರುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೋ ನೋಡಿ;

ಕೊರೊನಾ ಪರೀಕ್ಷಾ ವರದಿ ತಡ ಮಾಡುವ ಮೂಲಕ ಸರ್ಕಾರವೇ ಹೆಚ್ಚಾಗಿ ಕೊರೊನಾ ಹರಡುತ್ತಿದೆ… ಮಂಡ್ಯದ ವೈದ್ಯರಾದ ಡಾ.ರವೀಂದ್ರರವರ ಆಕ್ರೋಶದ ನುಡಿಗಳು…

Posted by Naanu Gauri on Saturday, July 11, 2020

ರಾಜ್ಯದಲ್ಲಿ ಕೊರೊನಾ ವಾರಿಯರ್ಸ್‌ ಆಗಿ ದುಡಿಯುತ್ತಿರುವ 3 ಜನ ಸರ್ಕಾರಿ ವೈದ್ಯರು ಕೊರೊನಾ ಬಂದು ಸಾವನಪ್ಪಿದ್ದಾರೆ. ಅದರಲ್ಲಿ ಒಬ್ಬರು ಕರ್ತವ್ಯ ನಿರತರಾಗಿದ್ದಾಗಲೇ ಪ್ರಾಣಬಿಟ್ಟಿದ್ದಾರೆ. ಕರ್ತವ್ಯನಿರತರಾಗಿದ್ದಾಗ ಸಾವನಪ್ಪಿದ್ದಾರೆ ಅವರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ಕಮಿಷನರ್ ಪಂಕಜ್‌ ಕುಮಾರ್ ಪಾಂಡೆ ಹೇಳಿರುವುದು ನಾಚಿಕೆಗೇಡು. ಸರ್ಕಾರಿ ವೈದ್ಯರಿಗೆ ಪರಿಹಾರ ಕೊಡದಿದ್ದ ಮೇಲೆ ಸರ್ಕಾರ ಇದ್ದು ಏನು ಪ್ರಯೋಜನ? ನಿಮ್ಮ ಚಪ್ಪಾಳೆ, ಹೂವು ಅವರಿಗೆ ಬೇಕಿಲ್ಲ ಎಂದು ಟೀಕಿಸಿದ್ದಾರೆ.

ಕೊರೊನಾ ಟೆಸ್ಟ್‌ಗೆ ಖಾಸಗಿಯವರಿಗೆ ಸರ್ಕಾರ ದರ ನಿಗಧಿ ಮಾಡುತ್ತಿದೆ. ಜನರಿಗೆ ಉಚಿತ ಕೊರೊನಾ ಟೆಸ್ಟ್ ಮಾಡಿಸುವ ಯೋಗ್ಯತೆ ಸರ್ಕಾರಕ್ಕಿಲ್ಲವೇ? ಕೋವಿಡ್‌ ಸಮಯದಲ್ಲಿಯೂ ನೀವು ಲಂಚ ಹೊಡೆಯಬೇಕೆ? ನಿಮಗೆ ಮಾನವೀಯತೆ ಇಲ್ಲವೇ? ಮಾಸ್ಕ್ ತೆಗೆದುಕೊಳ್ಳುವಲ್ಲಿಯೂ ಭ್ರಷ್ಟಾಚಾರ ಮಾಡುತ್ತಿರಲ್ಲ ನಾಚಿಕೆಯಿಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರ ಸ್ಯಾನಿಟೈಸ್‌ ಮೇಲೆ 18% ಜಿಎಸ್‌ಟಿ ಹಾಕಿದೆ ಏಕೆ? ಆಹಾರ, ಔಷಧಿಗಳ ಮೇಲೆ 18% ಜಿಎಸ್‌ಟಿ ಹೆಚ್ಚಿಸಿದ್ದರಲ್ಲ ನಿಮಗೆ ಮಾನವೀಯತೆಯಿಲ್ಲವೇ? ಜನರು ಸಾಯುತ್ತಿರುವಾಗಲೂ ನೀವು ಹಣ ಮಾಡಬೇಕೆ? ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ಕೊಡಬೇಕಾದ ನೀವು ಏಕೆ ಅವುಗಳ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು

LEAVE A REPLY

Please enter your comment!
Please enter your name here