2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಹಿಂದಿನ ಪ್ರಮುಖ ಸಂಚುಕೋರರು ಎಂದು ಆರೋಪಿಸಿರುವ ದೆಹಲಿ ಪೊಲೀಸರು, ಕಾರಾಗೃಹದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ನಲ್ಲಿ ಬಲವಾಗಿ ವಿರೋಧಿಸಿದ್ದಾರೆ.
ಜನವರಿ 5ರ ಸುಪ್ರೀಂ ಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡರೆ, ಅವರ ಹೊಸ ಜಾಮೀನು ಅರ್ಜಿಗಳು ಕಾನೂನುಬದ್ಧವಾಗಿ ವಿಚಾರಣೆಗೆ ಅರ್ಹವಲ್ಲ ಎಂದು ಪೊಲೀಸರು ವಾದಿಸಿದ್ದಾರೆ. ಹೈಕೋರ್ಟ್ಗೆ ಸಲ್ಲಿಸಿದ ಪ್ರತ್ಯೇಕ ಅಫಿಡವಿಟ್ನಲ್ಲಿ ದೆಹಲಿ ಪೊಲೀಸರು, ಈ ಇಬ್ಬರು ಆರೋಪಿಗಳನ್ನು ಇತರ ಸಹ-ಆರೋಪಿಗಳಿಗಿಂತ ಭಿನ್ನವಾದ ವರ್ಗದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಚಿನಲ್ಲಿ ಅವರ ಪಾತ್ರಗಳು ‘ಕಮಾಂಡ್ ಅಥಾರಿಟಿ’ ಮತ್ತು ‘ಕಾರ್ಯತಂತ್ರದ ನಿರ್ದೇಶನ’ವನ್ನು ಒಳಗೊಂಡಿವೆ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಗುರುತಿಸಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.
ಖಾಲಿದ್ ಮತ್ತು ಇಮಾಮ್ ತಮ್ಮ ಜಾಮೀನು ಅರ್ಜಿಗಳನ್ನು ಪುನಃ ಸಲ್ಲಿಸಲು ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದಿಷ್ಟ ಸಂದರ್ಭಗಳನ್ನು ನಿಗದಿಪಡಿಸಿರುವುದರಿಂದ, ಪ್ರಸ್ತುತ ಜಾಮೀನು ಪ್ರಕ್ರಿಯೆಗಳು ತಪ್ಪು ಕಲ್ಪನೆಯಿಂದ ಕೂಡಿದ್ದು ಮತ್ತು ಕಾನೂನುಬಾಹಿರವಾಗಿವೆ. ಇದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಸಮಾನವಾಗಿದೆ ಎಂದು ದೆಹಲಿ ಪೊಲೀಸರು ವಾದಿಸಿದ್ದಾರೆ.
“ಕೆಳಗಿನ ಆಧಾರಗಳ ಹಿನ್ನೆಲೆಯಲ್ಲಿ ಪ್ರಸ್ತುತ ಜಾಮೀನು ಪ್ರಕ್ರಿಯೆಗಳು ತಪ್ಪು ಕಲ್ಪನೆಯಿಂದ ಕೂಡಿದ್ದು, ಕಾನೂನುಬಾಹಿರವಾಗಿವೆ. ಪ್ರಸ್ತುತ ಮೇಲ್ಮನವಿದಾರರು ದೆಹಲಿ ಗಲಭೆಯ ‘ಮುಖ್ಯ ಸಂಚುಕೋರರಲ್ಲಿ’ ಒಬ್ಬರಾಗಿದ್ದಾರೆ” ಎಂದು ಪೊಲೀಸರ ಪ್ರತ್ಯುತ್ತರದಲ್ಲಿ ತಿಳಿಸಲಾಗಿದೆ.
‘ಗುಲ್ಫಿಶಾ ಫಾತಿಮಾ ವಿರುದ್ಧ ದೆಹಲಿ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಜನವರಿ 5ರ ತೀರ್ಪನ್ನು ಪ್ರಾಸಿಕ್ಯೂಷನ್ ಹೆಚ್ಚಾಗಿ ನೆಚ್ಚಿಕೊಂಡಿದೆ. ಆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇತರ ಐದು ಜನ ಸಹ-ಆರೋಪಿಗಳಿಗೆ ರಕ್ಷಣೆ/ಜಾಮೀನು ನೀಡಿದ್ದರೆ, ಖಾಲಿದ್ ಮತ್ತು ಇಮಾಮ್ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು.
ಪ್ರಾಸಿಕ್ಯೂಷನ್ ಒದಗಿಸಿದ ಸಾಕ್ಷ್ಯಗಳ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನು ಉಲ್ಲೇಖಿಸಿದ ಪೊಲೀಸರು, ಈ ಮುಖ್ಯ ಸಂಚುಕೋರರ ವಿರುದ್ಧ ಡಿಜಿಟಲ್ ಸಂವಹನ ಸಾಕ್ಷ್ಯಗಳು, ವಶಪಡಿಸಿಕೊಂಡ ವಸ್ತುಗಳು ಮತ್ತು ನಿರ್ವಹಣಾ ಜವಾಬ್ದಾರಿಯನ್ನು ಸೂಚಿಸುವ ಹೇಳಿಕೆಗಳು ಸೇರಿದಂತೆ ನೇರ ಹಾಗೂ ಸಮಕಾಲೀನ ಸಾಕ್ಷ್ಯಗಳ ಬೆಂಬಲವಿದೆ ಎಂದು ಹೇಳಿದರು.
“ಆರೋಪಿಗಳ ಅಪಾಯದ ಮಟ್ಟಗಳು (ರಿಸ್ಕ್ ಪ್ರೊಫೈಲ್) ಸ್ಪಷ್ಟವಾಗಿ ಭಿನ್ನವಾಗಿವೆ ಎಂದು ಸುಪ್ರೀಂ ಕೋರ್ಟ್ ಕಂಡುಕೊಂಡಿದೆ. ಹೀಗಾಗಿ ಅವರ ನಿರಂತರ ಬಂಧನವು ಸಮರ್ಥನೀಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ತೀರ್ಮಾನವು, ಇದೇ ಪ್ರಕರಣದ ಇತರ ಸಹ-ಆರೋಪಿಗಳಿಗೆ ನೀಡಿರುವ ಜಾಮೀನು ಆದೇಶಗಳನ್ನು ನೆಚ್ಚಿಕೊಳ್ಳುವುದರಿಂದ ಖಾಲಿದ್ ಮತ್ತು ಇಮಾಮ್ ಅವರನ್ನು ತಡೆಯುತ್ತದೆ” ಎಂದು ಪೊಲೀಸರು ವಾದಿಸಿದ್ದಾರೆ.
ಜನವರಿ 5ರಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಸಹ ಅಫಿಡವಿಟ್ ನೆಚ್ಚಿಕೊಂಡಿದ್ದು, ಅದರಂತೆ ಪ್ರಾಸಿಕ್ಯೂಷನ್ನ ಸಂರಕ್ಷಿತ ಸಾಕ್ಷಿಗಳ (ಪ್ರೊಟೆಕ್ಟೆಡ್ ವಿಟ್ನೆಸ್) ವಿಚಾರಣೆ ಪೂರ್ಣಗೊಂಡ ನಂತರ ಅಥವಾ ತೀರ್ಪಿನ ದಿನಾಂಕದಿಂದ ಒಂದು ವರ್ಷ ಮುಗಿದ ನಂತರ ಖಾಲಿದ್ ಮತ್ತು ಇಮಾಮ್ ಹೊಸ ಜಾಮೀನು ಅರ್ಜಿ ಸಲ್ಲಿಸಲು ಅನುಮತಿಸಲಾಗಿದೆ. ಆ ಎರಡೂ ಸಂದರ್ಭಗಳು ಎದುರಾಗುವ ಮುನ್ನವೇ ಪ್ರಸ್ತುತ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಸಂರಕ್ಷಿತ ಸಾಕ್ಷಿಗಳ ವಿಚಾರಣೆಗೆ ಮೊದಲು ಅಥವಾ ಮಾನ್ಯ ಸುಪ್ರೀಂ ಕೋರ್ಟ್ ಆದೇಶದ ದಿನಾಂಕದಿಂದ ಒಂದು ವರ್ಷದ ಅವಧಿ ಮುಗಿಯುವ ಮೊದಲು (ಅಂದರೆ 05.01.2027 ಕ್ಕಿಂತ ಮೊದಲು) ಸಲ್ಲಿಸಲಾದ ಪ್ರಸ್ತುತ ಜಾಮೀನು ಪ್ರಕ್ರಿಯೆಗಳು ಮಾನ್ಯ ಸುಪ್ರೀಂ ಕೋರ್ಟ್ನ ಬಾಧ್ಯತಾರಹಿತ ನಿರ್ದೇಶನಗಳಿಗೆ ವಿರುದ್ಧವಾಗಿವೆ” ಎಂದು ಪೊಲೀಸರು ಹೇಳಿದ್ದಾರೆ.
ಖಾಲಿದ್ ಮತ್ತು ಇಮಾಮ್ ತಮ್ಮ ಜಾಮೀನು ಅರ್ಜಿಗಳನ್ನು ನವೀಕರಿಸಲು ಅನುವು ಮಾಡಿಕೊಡುವ ಸಂದರ್ಭಗಳ ಬದಲಾವಣೆಯನ್ನು ಸುಪ್ರೀಂ ಕೋರ್ಟ್ ಸ್ವತಃ ಒದಗಿಸಿದೆ. ಅಂತಹ ಅರ್ಜಿಗಳು ಯಾವಾಗ ಪರಿಗಣನೆಗೆ ಅರ್ಹವಾಗುತ್ತವೆ ಎಂಬುದನ್ನು ವ್ಯಾಖ್ಯಾನಿಸಿದೆ ಎಂದು ಪೊಲೀಸರು ವಾದಿಸಿದ್ದಾರೆ.
‘ಸೈಯದ್ ಇಫ್ತಿಕಾರ್ ಅಂದ್ರಾಬಿ v/s ಎನ್ಐಎ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಂತರದ ತೀರ್ಪನ್ನು ಆರೋಪಿಗಳು ಆಧಾರವಾಗಿ ಇಟ್ಟುಕೊಂಡಿರುವದನ್ನು ದೆಹಲಿ ಪೊಲೀಸರು ವಿರೋಧಿಸಿದ್ದಾರೆ. ಆ ತೀರ್ಪು ಸಂಬಂಧವಿಲ್ಲದ ಬೇರೊಂದು ಪ್ರಕರಣಕ್ಕೆ ಸಂಬಂಧಸಿದ್ದಾಗಿದ್ದು, ಖಾಲಿದ್ ಮತ್ತು ಇಮಾಮ್ ಅವರ ಸ್ವಂತ ಪ್ರಕರಣದಲ್ಲಿ ನೀಡಲಾದ ನಿರ್ದಿಷ್ಟ ತೀರ್ಮಾನಗಳು ಮತ್ತು ನಿರ್ದೇಶನಗಳನ್ನು ಅದು ಮೀರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ವಾದಿಸಿದ್ದಾರೆ.
“ಬೇರೊಂದು ಪ್ರಕರಣದಲ್ಲಿ ನೀಡಲಾದ ತೀರ್ಪು… ಮೇಲ್ಮನವಿದಾರರ ಸ್ವಂತ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ನೀಡಿದ ನಿರ್ದಿಷ್ಟ ತೀರ್ಮಾನಗಳು ಮತ್ತು ನಿರ್ದೇಶನಗಳನ್ನು ಮೀರಿಸಲು ಸಾಧ್ಯವಿಲ್ಲ” ಎಂದು ಪ್ರತ್ಯುತ್ತರದಲ್ಲಿ ತಿಳಿಸಲಾಗಿದೆ.
ಸೈಯದ್ ಇಫ್ತಿಕಾರ್ ಅಂದ್ರಾಬಿ ಪ್ರಕರಣದ ತೀರ್ಪು ದೆಹಲಿ ಗಲಭೆ ಪ್ರಕರಣ ಅಥವಾ ಖಾಲಿದ್ ಮತ್ತು ಇಮಾಮ್ ಅವರ ಆರೋಪಿತ ಪಾತ್ರಕ್ಕೆ ಸಂಬಂಧಿಸಿದ್ದಲ್ಲ ಎಂಬುದನ್ನು ಪೊಲೀಸರು ವಾದಿಸಿದ್ದಾರೆ. ಗುಲ್ಫಿಶಾ ಫಾತಿಮಾ ಪ್ರಕರಣದ ತೀರ್ಪಿನಲ್ಲಿ ನೀಡಲಾದ ವಾಸ್ತವಿಕ ಅಂಶಗಳು ಹಾಗೂ ಯುಎಪಿಎ ಕಾಯ್ದೆಯ ಸೆಕ್ಷನ್ 43ಡಿ(5) ಅನ್ವಯಿಸುವುದನ್ನು ನಂತರದ ತೀರ್ಪಿನಲ್ಲಿ ಸಂಶಯಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗಯೇ, ‘ತಸ್ಲೀಮ್ ಅಹಮದ್ v/s ದೆಹಲಿ ಸರ್ಕಾರ’ ಪ್ರಕರಣದಲ್ಲಿ ಮೇ 22ರಂದು ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶವನ್ನು ಆರೋಪಿಗಳು ನೆಚ್ಚಿಕೊಳ್ಳುವುದನ್ನೂ ಪೊಲೀಸರು ತಿರಸ್ಕರಿಸಿದ್ದಾರೆ. ಆ ಆದೇಶದಲ್ಲಿ, ಯುಎಪಿಎ ಜಾಮೀನು ನಿರ್ಬಂಧಗಳ ಅನ್ವಯ ಮತ್ತು ಸುದೀರ್ಘ ಜೈಲು ವಾಸಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯವನ್ನು ಲಾರ್ಜರ್ ಬೆಂಚ್ಗೆ ಉಲ್ಲೇಖಿಸಲಾಗಿತ್ತು.
ದೆಹಲಿ ಪೊಲೀಸರ ಪ್ರಕಾರ, ಕಾನೂನಾತ್ಮಕ ವಿಷಯವನ್ನು ಬೃಹತ್ ಪೀಠಕ್ಕೆ ಉಲ್ಲೇಖಿಸಿದ ಮಾತ್ರಕ್ಕೆ ಹಿಂದಿನ ತೀರ್ಪಿನಲ್ಲಿ ಘೋಷಿಸಲಾದ ಕಾನೂನು ರದ್ದಾಗುವುದಿಲ್ಲ. “ಬೃಹತ್ ಪೀಠಕ್ಕೆ ಬರಿ ಉಲ್ಲೇಖ ಮಾಡುವುದರಿಂದ ಈಗಾಗಲೇ ಘೋಷಿಸಲ್ಪಟ್ಟ ಕಾನೂನು ಬದಲಾಗುವುದಿಲ್ಲ” ಎಂದು ತೀರ್ಪು ನೀಡಿದ್ದ ‘ಲಡಾಖ್ ಕೇಂದ್ರಾಡಳಿತ ಪ್ರದೇಶ ವಿರುದ್ಧ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್’ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಪೊಲೀಸರು ಉಲ್ಲೇಖಿಸಿದ್ದಾರೆ.


