ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ವಿವಾದಿತ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸಿರುವುದಾಗಿ ಟ್ವಿಟರ್‌ನ ನೂತನ ಮಾಲಿಕ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಆದರೆ ಟ್ರಂಪ್ ತನ್ನದೆ ಟ್ರುಥ್ ಎನ್ನುವ ಸೋಷಿಯಲ್ ಮೀಡಿಯಾ ನೆಟ್‌ವರ್ಕ್ ಹೊಂದಿರುವ ಕಾರಣ ಟ್ವಿಟರ್‌ನಲ್ಲಿ ಮುಂದುವರೆಯುವುದು ಅನುಮಾನವಾಗಿದೆ.
ಕಳೆದ ತಿಂಗಳಷ್ಟೇ ಟ್ವಿಟರ್ ಸ್ವಾಧೀನಪಡಿಸಿಕೊಂಡ ಎಲಾನ್ ಮಸ್ಕ್, ಮಾಜಿ ಅಧ್ಯಕ್ಷ ಟ್ರಂಪ್‌ರವರ ಖಾತೆ ಮರುಸ್ಥಾಪಿಸಬೇಕು ಎಂದು ಟ್ವಿಟರ್ ಪೋಲ್ ನಡೆಸಿದ್ದರು. ಅದರಲ್ಲಿ ಹೌದು ಎಂದು ಶೇ. 51.8 ಮತ ಬಿದ್ದರೆ ಇಲ್ಲ ಎಂದು ಶೇ. 48.2 ರಷ್ಟು ಮತಗಳು ಬಿದ್ದಿವೆ. ಸುಮಾರು ಒಂದೂವರೆ ಕೋಟಿ ಜನ ಮತ ಚಲಾಯಿಸಿದ್ದಾರೆ. ಈ ಫಲಿತಾಂಶದ ಆಧಾರದಲ್ಲಿ ಟ್ವಿಟರ್ ಖಾತೆ ಮರುಸ್ಥಾಪಿಸಲಾಗಿದೆ.
The people have spoken.
Trump will be reinstated.
Vox Populi, Vox Dei. https://t.co/jmkhFuyfkv
— Elon Musk (@elonmusk) November 20, 2022
ಅಮೆರಿಕ ಅಧ್ಯಕ್ಷೀಯ ಚುನಾವಣಾ ಎಣಿಕೆಯಲ್ಲಿ ಸೋತ ಡೊನಾಲ್ಡ್ ಟ್ರಂಪ್, ತನ್ನ ಸೋಲನ್ನು ಒಪ್ಪಿಕೊಳ್ಳದೆ ತಾನೇ ವಿಜಯಿಯಾಗಿದ್ದೇನೆ ಎಂದು ಪ್ರತಿಪಾದಿಸಿದ್ದರು. ಚುನಾವಣಾ ಫಲಿತಾಂಶದ ವಿರುದ್ದ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಆದರೆ ಅವರು ಸಲ್ಲಿಸಿರುವ ಎಲ್ಲಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ನಂತರವೂ ತನ್ನ ಬೆಂಬಲಿಗರಿಗೆ ಸಂಸತ್ ಭವನಕ್ಕೆ ರ್‍ಯಾಲಿ ಹೊರಡಿ ಎಂದು ಕರೆ ನೀಡಿ, ಸಂಸತ್ ಮೇಲೆ ದಾಳಿ ಮಾಡಿದ್ದ ಜನರನ್ನು ಉದ್ರಿಕ್ತರನ್ನಾಗಿ ಮಾಡಿದ್ದರು. ಈ ಎಲ್ಲಾ ಆರೋಪಗಳ ಮೇಲೆ ಅವರ ಟ್ವಿಟರ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳಿಗೆ ಶಾಶ್ವತ ನೀಷೇಧ ಹೇರಲಾಗಿತ್ತು.
ಟ್ರಂಪ್ ಟ್ವಿಟರ್ ಖಾತೆಯನ್ನು ನಿರ್ಬಂಧಿಸುವ ವೇಳೆಗೆ ಅವರಿಗೆ 8 ಕೋಟಿಗೂ ಅಧಿಕ ಫಾಲೋವರ್ಸ್ ಇದ್ದರು. ಆದರೆ ಈಗ ಮಸ್ಕ್ ಮರುಸ್ಥಾಪಿಸಿದ ಖಾತೆಯಲ್ಲಿ ಕೇವಲ 14 ಲಕ್ಷ ಫಾಲೋವರ್ಸ್ ಇರುವುದನ್ನು ಗಮನಿಸಬಹುದು.
ಟ್ರಂಪ್ ಟ್ವಿಟರ್‌ಗೆ ಮರಳುವ ಸಾಧ್ಯತೆ ಕಡಿಮೆ
ಟ್ವಿಟರ್ ನಿಷೇಧದ ಬಳಿಕೆ ಟ್ರಂಪ್ ಮತ್ತೆ ಟ್ವಿಟರ್‌ಗೆ ಮರಳುವುದಿಲ್ಲ ಎಂದು ಹೇಳಿ ತಮ್ಮದೇ ಆದ ಟ್ರುಥ್ ಎಂಬ ಸೋಷಿಯಲ್ ಮೀಡಿಯಾ ನೆಟ್‌ವರ್ಕ್ ಸೃಷ್ಟಿಸಿದ್ದಾರೆ. ಶನಿವಾರ ಸಂಜೆ ಕಾರ್ಯಕ್ರಮವೊಂದಕ್ಕೆ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಾದ ಅವರು, “ನಾನು ಮಸ್ಕ್ ಅವರ ಅಭಿಮಾನಿ, ಅವರ ಟ್ವಿಟರ್ ಪೋಲ್ ಅನ್ನು ಸ್ವಾಗತಿಸುತ್ತೇನೆ. ಆದರೆ ನನಗೆ ಟ್ರುಥ್ ಸೋಷಿಯಲ್ ಇದೆ. ನಾನು ಟ್ವಿಟರ್‌ಗೆ ಮರಳು ಸಕಾರಣವಿದೆ ಎಂದು ನಾನು ಭಾವಿಸುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗೆ ಅನಿರ್ದಿಷ್ಟಾವಧಿ ತಡೆ