Homeಅಂಕಣಗಳುಚಳಿಮಳೆಗೆ ಬಗ್ಗದ ರೈತರೂ ಮತ್ತು ಬರ ಬಿದ್ದ 56 ಅಂಗುಲದ ಎದೆಯೂ: ಉಮಾಪತಿ ಡಿ

ಚಳಿಮಳೆಗೆ ಬಗ್ಗದ ರೈತರೂ ಮತ್ತು ಬರ ಬಿದ್ದ 56 ಅಂಗುಲದ ಎದೆಯೂ: ಉಮಾಪತಿ ಡಿ

- Advertisement -
- Advertisement -

ಸಕಾಲಕ್ಕೆ ಬೀಳುವ ಮಳೆಯನ್ನು ರೈತರು ಬಗೆ ಬಗೆಯಾಗಿ ಬಣ್ಣಿಸಿ ಸಂತಸಪಡುವುದುಂಟು. ಉತ್ತರ ಭಾರತದ ಕಡೆಗೆ ಇಂತಹ ಮಳೆ ಸುರಿದರೆ ತುಪ್ಪ ಸುರಿಯಿತು, ಬಂಗಾರವೇ ಭುವಿಗಿಳಿಯಿತು ಎಂದು ಉದ್ಗರಿಸುತ್ತಾರೆ. ಹಿಂದಿ-ಪಂಜಾಬಿ ಸೀಮೆಯ ಹೊಲಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಇದೀಗ ಕಾಣುವುದು ಸಾಸಿವೆ ಪೈರಿನ ಹಳದಿ ಹೂ ವಿಸ್ತಾರ. ದಕ್ಷಿಣದವರು ಒಗ್ಗರಣೆಗೆ-ಉಪ್ಪಿನಕಾಯಿಗೆ ಮಾತ್ರವೇ ಸಾಸಿವೆ ಬಳಸಿದರೆ, ಉತ್ತರಪ್ರದೇಶ, ಬಿಹಾರ, ರಾಜಸ್ತಾನ, ಹರಿಯಾಣ, ಪಂಜಾಬ್, ದೆಹಲಿ ಮಾತ್ರವಲ್ಲದೆ ಒಡಿಶಾ ಬಂಗಾಳ ಅಸ್ಸಾಮಿನಲ್ಲಿ ಅಡುಗೆ ಎಣ್ಣೆಯಾಗಿ ಸಾಸಿವೆ ಎಣ್ಣೆಯೇ ಜನಪ್ರಿಯ. ಹೀಗಾಗಿ ಸಾಸಿವೆ ಭಾರೀ ಪ್ರಮಾಣದ ಬೆಳೆ. ಕೊರೆಯುವ ಚಳಿಯಲ್ಲಿ ಮೈಯಲ್ಲಿ ಬಿಸಿ ಹುಟ್ಟಿಸುವ ಆಹಾರ ಸಾಸಿವೆ. ಸಾಸಿವೆ ಸೊಪ್ಪನ್ನು ಅರೆದು ಮಾಡಿದ ಪಲ್ಯ ಮತ್ತು ಮುಸುಕಿನ ಜೋಳದ ರೊಟ್ಟಿ ಚಳಿಯನ್ನು ಓಡಿಸುವ ಜನಪ್ರಿಯ ಮತ್ತು ರುಚಿಕರ ಖಾದ್ಯ. ರಸ್ತೆ ಬದಿಯ ಡಾಬಾಗಳಿಂದ ಹಿಡಿದು ಪಂಚತಾರಾ ಹೋಟೆಲುಗಳೂ ಉಣಬಡಿಸುವ ಊಟ ’ಸರಸೋಂ ದಾ ಸಾಗ್- ಮಕ್ಕೀ ದೀ ರೋಟಿ’.

ಉತ್ತರ ಭಾರತದುದ್ದಗಲವನ್ನು ಶೀತ ಮಾರುತಗಳು ರಾಚಿ ಬಡಿಯತೊಡಗಿವೆ. ಇಂತಹ ಜನವರಿಯಲ್ಲಿ ಅಷ್ಟಿಷ್ಟು ಮಳೆ ಬೀಳುವುದುಂಟು. ಆದರೆ ಕಳೆದ ಮೂರು ದಿನಗಳಿಂದ ಅನಿರೀಕ್ಷಿತವಾಗಿ ದೊಡ್ಡ ಮಳೆಯೇ ಸುರಿಯತೊಡಗಿದೆ ಮತ್ತು ಸತತವಾಗಿ ಸುರಿಯತೊಡಗಿದೆ. ಮೇ-ಜೂನ್-ಜುಲೈ ತಿಂಗಳುಗಳಲ್ಲಿ ಉಗ್ರ ಉಷ್ಣಮಾರುತಗಳು ನೆಲವನ್ನು ಸುಟ್ಟು, ಕಟುವಾದ ಕರಕಲು ವಾಸನೆಯನ್ನು ಗಾಳಿಗೆ ತೂರಿ ಬೆರೆಸುತ್ತವೆ. ಇವುಗಳ ಪ್ರಕೋಪಕ್ಕೆ ಕಷ್ಟಜೀವಿಗಳು ಕಣ್ಣೀರಿಟ್ಟು ಸಾವುನೋವುಗಳು ಉಂಟಾಗುವುದು ದುರಂತ ವಾರ್ಷಿಕ ವಿಧಿ. ಚಳಿಗಾಲವೂ ಅಂತೆಯೇ. ಹಿಮಾಲಯದ ತಪ್ಪಲು ಸೀಮೆಯಲ್ಲಿ ಹಿಮ ಸುರಿಯತೊಡಗಿದರೆ ಬಯಲು ಸೀಮೆ ಗಡಗಡ ನಡುಗುತ್ತದೆ. ನಿರ್ಗತಿಕರು ರಾತ್ರಿ ವೇಳೆ ಕೈ ಕಾಯಿಸಿಕೊಳ್ಳಲು ಸರ್ಕಾರಗಳೇ ಹಾದಿಬೀದಿಗಳಲ್ಲಿ ಕಟ್ಟಿಗೆ ಉರಿಸುವ ಯೋಜನೆಗಳಿದ್ದವು.

ಕಳೆದ ಗುರುವಾರ ಶುಕ್ರವಾರ ಶೀತಮಾರುತಗಳು ಉತ್ತರದ ತಾಪಮಾನವನ್ನು ಎರಡು ಡಿಗ್ರಿಗಿಂತ ಕೆಳಗಿಳಿಸಿದ್ದವು. ಹದಿನೈದು ವರ್ಷಗಳ ದಾಖಲೆಯ ಚಳಿ. ದೆಹಲಿಯ ಗಡಿಗಳ ಹೆದ್ದಾರಿಗಳ ವಿಸ್ತಾರದಲ್ಲಿ ಆಕಾಶವನ್ನೇ ಹೊದ್ದು ಮೈ ಚಾಚಿದೆ ರೈತ ಪ್ರತಿಭಟನೆ. ಮಣ್ಣಿನ ಮಕ್ಕಳಿಗೆ ಚಳಿ ಮಳೆ ಬಿಸಿಲು ಲೆಕ್ಕವೇ ಅಲ್ಲ. ’ರಾಜ್ಯಗಳಳಿಯಲಿ, ರಾಜ್ಯಗಳುದಿಸಲಿ, ಹಾರಲಿ ಗದ್ದುಗೆ ಮುಕುಟಗಳು… ಬಿತ್ತುಳುವುದ ತಾನು ಬಿಡುವುದೆ ಇಲ್ಲ ಎಂಬ ಕವಿವಾಣಿಯ ಯೋಗಿಗಳು ರೈತರು- ಕೃಷಿ ಕಾರ್ಮಿಕರು. ಆದರೆ ಒಕ್ಕಲುತನದ ಮಳೆಗಾಳಿ ಚಳಿ ಬಿಸಿಲುಗಳ ಗೇಮೆಯ ನಂತರ ತಲೆ ಮರೆಸಿಕೊಂಡು ನಿದ್ರಿಸಲು ಸೂರೊಂದು ಇರುತ್ತದೆ. ಪ್ರತಿಭಟಿಸುತ್ತಿರುವ ರೈತರಿಗೆ ಅಂತಹ ಅನುಕೂಲವಿಲ್ಲ.

ಶೀತದೊಂದಿಗೆ ಮಳೆಯೂ ಸುರಿಯುತ್ತಿದ್ದು ಪ್ರತಿಭಟನಾನಿರತ ರೈತರ ಹಿಟ್ಟು, ಕಾಳು, ಬೇಳೆಗಳು, ಕಟ್ಟಿಗೆ-ಬೆರಣಿ ಉರುವಲುಗಳು, ಹಾಸಿಗೆ ಹೊದಿಕೆ ಬಟ್ಟೆ ಬರೆಗಳು ತೋಯ್ದು ಹೋಗಿವೆ. ದಿನಗಟ್ಟಲೆ ಸೂರ್ಯನ ದರ್ಶನವಿಲ್ಲದೆ ಮುಚ್ಚಿಕೊಂಡ ಆಗಸ. ಜಲನಿರೋಧಕ ಟೆಂಟುಗಳು, ತಾಡಪಾಲುಗಳು ಎಲ್ಲರ ಬಳಿಯೂ ಇಲ್ಲ. ಇದ್ದರೂ ಅವುಗಳಿಂದ ಚಳಿಯನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಟೆಂಟಿನೊಳಗೆ ನೆಲದ ಮೇಲೆ ನೀರು ಹರಿದು ನಿಲ್ಲುವುದನ್ನು ತಡೆಯಲಾಗುವುದಿಲ್ಲ. ಉತ್ತರದ ಚಳಿಯ ಈ ಉಪಟಳದ ತೀವ್ರತೆ ಅನುಭವಿಸಿದವರಿಗಷ್ಟೇ ತಿಳಿದೀತು.

ಅನ್ನ ಬೆಳೆಯುವ ರೈತರು-ಕೂಲಿಕಾರರು ದಿನಗಟ್ಟಲೆ ಈ ಸಂಕಟಕ್ಕೆ ಸಿಲುಕಿದ್ದಾರೆ. ಆದರೆ ಅವರಲ್ಲಿಯ ಪ್ರತಿಭಟನೆಯ ಕಾವು ತುಸುವೂ ಕುಂದಿಲ್ಲ. ವಯಸ್ಸು ಸಂದ ವೃದ್ಧರು ಮಕ್ಕಳು ಕೂಡ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವ ಸಂಘರ್ಷವಿದು. ಆತ್ಮಹತ್ಯೆಗಳೂ ಸೇರಿದಂತೆ ರೈತ ಪ್ರತಿಭಟನೆಯಲ್ಲಿ ಸಾವುಗಳು ನಿತ್ಯ ಸಂಭವಿಸುತ್ತಲೇ ಇವೆ. ಈ ಸಂಖ್ಯೆ ಐವತ್ತನ್ನು ದಾಟಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಒಕ್ಕಲುತನಕ್ಕೆ ಇಳಿದಿರುವ ಜವಾನ್-ಕಿಸಾನ್‌ರು ಕೂಡ ಈ ಪ್ರತಿಭಟನೆಯಲ್ಲಿದ್ದಾರೆ. ಜೈ ಜವಾನ್-ಜೈ ಕಿಸಾನ್ ಎಂದು ಘೋಷಣೆ ಹಾಕುವವರು ತಮ್ಮ ಕಾಮಾಲೆಗೆ ಔಷಧಿ ಸೇವಿಸಿ ಈ ಚಳವಳಿಯನ್ನು ನೋಡಬೇಕಿದೆ.

ಯೋಧರನ್ನೂ ರೈತರನ್ನೂ ಆಕಾಶದೆತ್ತರಕ್ಕೆ ಹೊಗಳುವ ದೊಡ್ಡ ವರ್ಗವೊಂದು ಈ ಚಳವಳಿಯನ್ನು ಹಳಿಯುವ ನೀಚತನಕ್ಕೆ ಇಳಿದಿದೆ. ದೇಶದ ಪ್ರಧಾನಮಂತ್ರಿಯವರ ಐವತ್ತಾರು ಅಂಗುಲದ ಭಾರೀ ಎದೆಯಲ್ಲಿ ದೆಹಲಿಯ ಗಡಿಗಳ ಬಯಲಿನಲ್ಲಿ ಬೀಡು ಬಿಟ್ಟಿರುವ ಕಿಸಾನ್- ಜವಾನ್‌ರ ಕುರಿತು ತುಸುವಾದರೂ ಪಸೆ ಕಂಡಿಲ್ಲದಿರುವುದು ಅತೀವ ವ್ಯಥೆಯ ಸಂಗತಿ. ಎಂತೆಂತಹ ವಿಷಯಗಳ ಕುರಿತು ಟ್ವೀಟ್ ಮಾಡುವ ಪ್ರಧಾನಿಯವರ ಕಲ್ಲು ಗುಂಡಿಗೆಯನ್ನು ರೈತರ ದುಮ್ಮಾನ ತಾಕಿಯೇ ಇಲ್ಲ! ಅವರು ಅಲ್ಲಿ ಚಳಿಮಳೆ ಗಾಳಿಯಲ್ಲಿ ಪಾಡುಪಡುತ್ತಿದ್ದರೆ ಇತ್ತ ಕೋಟಿನ ಮೇಲೆ ಕೋಟು ಉಟ್ಟು ಬೆಚ್ಚಗಿರುವ ದೇಶ ಆಳುವವರಿಗೆ ಮನಸು ಹೇಗೆ ಬರುತ್ತದೆಯೋ ಎಂಬುದು ಸೋಜಿಗದ ಸಂಗತಿ.

ಪ್ರತಿಭಟನಾನಿರತ ರೈತರು ಮೋದಿಯವರ ಶತ್ರುಗಳಲ್ಲ. ಅವರನ್ನು ಗದ್ದುಗೆಯಿಂದ ಇಳಿಸಬೇಕೆಂದು ಕಳೆದ ಆರು ವರ್ಷಗಳಲ್ಲಿ ಒಮ್ಮೆಯೂ ಚಕಾರ ಎತ್ತಿದವರಲ್ಲ. ಆದರೂ ಪ್ರಧಾನಿಯವರು ಅವರನ್ನು ವೈರಿಗಳಂತೆ ಕಾಣುತ್ತಿರುವುದು ದುಃಖದ ಸಂಗತಿ. ಭಾಷಣಗಳಲ್ಲಿ ರೈತನನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುವವರು ಆತ ಪ್ರತ್ಯಕ್ಷನಾಗಿ ಎದುರಾದರೆ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆಯಿದು. ’ಕಲ್ಲನಾಗರೆ ಕಂಡರೆ ಹಾಲೆರೆವರು, ಉಣ್ಣದ ಲಿಂಗಕ್ಕೆ ಬೋನವನಿಕ್ಕುವರು, ಉಣುವ ಜಂಗಮ ಬಂದರೆ ಪೋ ಪೋ ಎಂಬುವರು’ ಎಂಬ ವಚನದಂತೆ ಡಂಭಾಚಾರದ ಪರಾಕಾಷ್ಠೆಯಿದು.


ಇದನ್ನೂ ಓದಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್ ರ್‍ಯಾಲಿಯ ಟ್ರೈಲರ್ ಜನವರಿ 7 ರಂದು ತೋರಿಸುತ್ತೇವೆ: ರೈತ ಒಕ್ಕೂಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...