Homeಮುಖಪುಟದೇಶದಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ತೀರ್ಪು ಪ್ರಕಟಿಸಿದ ಕೇರಳ ಹೈಕೋರ್ಟ್

ದೇಶದಲ್ಲಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ತೀರ್ಪು ಪ್ರಕಟಿಸಿದ ಕೇರಳ ಹೈಕೋರ್ಟ್

- Advertisement -
- Advertisement -

ಕೇರಳ ಹೈಕೋರ್ಟ್, ತನ್ನ ಎರಡು ತೀರ್ಪಗಳನ್ನು ಮಲಯಾಳಂ ಭಾಷೆಗೆ ಅನುವಾದಿಸಿ ಪ್ರಕಟಿಸಲು ಪ್ರಾರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ. ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠದ ಎರಡು ತೀರ್ಪುಗಳು WA 1638/2022, ಮತ್ತು WA 926/2016, ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಮಲಯಾಳಂ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ಇದರಿಂದ ದೇಶದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ತೀರ್ಪನ್ನು ಪ್ರಕಟಿಸಲು ಪ್ರಾರಂಭಿಸಿದ ಮೊದಲ ಹೈಕೋರ್ಟ್ ಎಂಬ ಹೆಗ್ಗಳಿಕೆಗೆ ಕೇರಳ ಹೈಕೋರ್ಟ್ ಪಾತ್ರವಾಗಿದೆ.

ಜನವರಿ 2023ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು, ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ದೇಶದ ನಾಲ್ಕು ಭಾಷೆಗಳಾದ ಹಿಂದಿ, ಗುಜರಾತಿ, ಒಡಿಯಾ ಮತ್ತು ತಮಿಳು ಭಾಷೆಗೆ ಅನುವಾದಿಸಲಾಗುವುದು ಎಂದು ಹೇಳಿದ್ದರು. ಏಕೆಂದರೆ 99.9% ಭಾರತೀಯ ನಾಗರಿಕರಿಗೆ ಇಂಗ್ಲೀಷ್ ಭಾಷೆಯಲ್ಲಿನ ಕಾನೂನು ಪರಿಭಾಷೆಗಳನ್ನು ಗ್ರಹಿಸಲು ಕಷ್ಟವಾಗುತ್ತದೆ ಎಂದು ಹೇಳಿದ್ದರು.

ನಾಗರಿಕರು ಮಾತನಾಡುವ ಮತ್ತು ಗ್ರಹಿಸುವ ಭಾಷೆಯಲ್ಲಿ ತೀರ್ಪು ನೀಡದಿದ್ದರೆ ಪ್ರಕರಣದ ನ್ಯಾಯವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ನಾವು ಉಚ್ಚ ನ್ಯಾಯಾಲಯಗಳಲ್ಲಿ ಅಥವಾ ಸುಪ್ರೀಂ ಕೋರ್ಟ್‌ನಲ್ಲಿನ ತೀರ್ಪುಗಳನ್ನು ನಾಲ್ಕು ಭಾಷೆಗಳಲ್ಲಿ ನೀಡುತ್ತೇವೆ ಎಂದು ಸಿಜೆಐ ಹೇಳಿದರು.

ಇದನ್ನೂ ಓದಿ: ವಿಶ್ವ ತಾಯ್ನುಡಿ ದಿನ: ಜಗತ್ತಿನ 40% ಜನ ತಾವು ಮಾತಾಡುವ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿಲ್ಲ!

ಈ ವರ್ಷ ಗಣರಾಜ್ಯೋತ್ಸವದಂದು 13 ಭಾರತೀಯ ಭಾಷೆಗಳಲ್ಲಿ ತನ್ನ 1,268 ತೀರ್ಪುಗಳನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿತ್ತು. ಅದರಲ್ಲಿ 1,091 ತೀರ್ಪುಗಳು ಹಿಂದಿಗೆ, 21 ಒಡಿಯಾಗೆ, 14 ಮರಾಠಿಗೆ, 4 ಅಸ್ಸಾಮಿಗೆ, 1 ಗಾರೊಗೆ, 17 ಕನ್ನಡಕ್ಕೆ, 1 ಖಾಸಿಗೆ, 29 ಮಲಯಾಳಂಗೆ, 28 ತೆಲುಗಿಗೆ, ಮೂರು ನೇಪಾಳಿಗೆ, 4 ಪಂಜಾಬಿಗೆ, 3 ಉರ್ದು ಭಾಷೆಗೆ ಮತ್ತು 52 ತಮಿಳಿಗೆ ಅನುವಾದಿಸಲಾಗಿದೆ.

ಈ ಪ್ರಸ್ತಾವನೆಯನ್ನು ಆರಂಭದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಡಿಸಿದ್ದರು. ತೀರ್ಪುಗಳ ಪ್ರಮಾಣೀಕೃತ ಅನುವಾದಿತ ಪ್ರತಿಗಳು ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆಯನ್ನು ವಿಕಸನಗೊಳಿಸಬಹುದು ಎಂದು ಅವರು ಹೇಳಿದ್ದರು.

“ಜನರಿಗೆ ನ್ಯಾಯವನ್ನು ನೀಡುವುದು ಮಾತ್ರವಲ್ಲ, ಆ ವ್ಯಾಜ್ಯದ ನ್ಯಾಯ ಅವರಿಗೆ ತಿಳಿದಿರುವ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಹೈಕೋರ್ಟ್‌ಗಳು ಇಂಗ್ಲಿಷ್‌ನಲ್ಲಿ ತೀರ್ಪು ನೀಡುತ್ತವೆ, ಆದರೆ ನಮ್ಮದು ವೈವಿಧ್ಯಮಯ ಭಾಷೆಗಳ ದೇಶ. ದಾವೆದಾರನು ಇಂಗ್ಲಿಷ್‌ನಲ್ಲಿ ಮಾತನಾಡದೇ ಇರಬಹುದು ಮತ್ತು ತೀರ್ಪಿನ ಸೂಕ್ಷ್ಮ ಅಂಶಗಳು ಅವನಿಗೆ  ಅಥವಾ ಅವಳಿಗೆ ಅರ್ಥವಾಗದೇ ಹೋಗಬಹುದು. ಹೀಗಾಗಿ ಮೊಕದ್ದಮೆ ಹೂಡಿದವರು ತೀರ್ಪನ್ನು ಅರ್ಥ ಮಾಡಿಕೊಳ್ಳಲು ವಕೀಲರು ಅಥವಾ ಇನ್ನೊಬ್ಬ ವ್ಯಕ್ತಿಯ ಮೇಲೆ ಅವಲಂಬಿತರಾಗಿರುತ್ತಾರೆ. ಇದು ಸಮಯ ಮತ್ತು ವೆಚ್ಚವನ್ನು ಹೆಚ್ಚಿಸುತ್ತದೆ. ಹಾಗಾಗಿ ತೀರ್ಪು ಪ್ರಕಟವಾದ 24 ಅಥವಾ 36 ಗಂಟೆಯೊಳಗೆ ತೀರ್ಪುಗಳ ಅನುವಾದಿತ ಪ್ರತಿಗಳು ಲಭ್ಯವಾಗಬೇಕು” ಎಂದು ರಾಮನಾಥ್ ಕೋವಿಂದ್ ಒತ್ತಿ ಹೇಳದ್ದರು.

2019 ರಲ್ಲಿ ಅಂದಿನ ಸಿಜೆಐ ರಂಜನ್ ಗೊಗೊಯ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಈ ಪ್ರಸ್ತಾಪವನ್ನು ಪರಿಗಣಿಸಿತ್ತು ಮತ್ತು ತೀರ್ಪುಗಳನ್ನು ಆರು ದೇಶೀಯ ಭಾಷೆಗಳಾದ ಅಸ್ಸಾಮಿ, ಹಿಂದಿ, ಕನ್ನಡ, ಮರಾಠಿ, ಒಡಿಯಾ ಮತ್ತು ತೆಲುಗು ಭಾಷೆಗಳಿಗೆ ಭಾಷಾಂತರಿಸಲು ನಿರ್ಧರಿಸಿತ್ತು.

ಜುಲೈ 2019ರ ಹೊತ್ತಿಗೆ, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಪೋರ್ಟಲ್‌ನಲ್ಲಿ ‘ವರ್ನಾಕ್ಯುಲರ್ ಜಡ್ಜ್‌ಮೆಂಟ್ಸ್’ ಶೀರ್ಷಿಕೆಯಡಿ ಪ್ರಾದೇಶಿಕ ಭಾಷೆಗಳಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿತು.  ಒಂದು ನಿರ್ದಿಷ್ಟ ರಾಜ್ಯದಿಂದ ಹುಟ್ಟಿಕೊಂಡ ಪ್ರಕರಣದ ತೀರ್ಪುಗಳನ್ನು ಆ ರಾಜ್ಯದ ಭಾಷೆಗೆ ಅನುವಾದಿಸಲಾಗಿದೆ ಮತ್ತು ಆರು ಸ್ಥಳೀಯ ಭಾಷೆಗಳಲ್ಲಿ ಅನುವಾದಿಸಿದ ತೀರ್ಪುಗಳು ಲಭ್ಯವಾಗುವಂತೆ ಮಾಡಲಾಗಿದೆ. 2020ರ ಹೊತ್ತಿಗೆ, ಮಲಯಾಳಂ, ತಮಿಳು ಮತ್ತು ಹಿಂದಿ ಸೇರಿದಂತೆ ಇನ್ನೂ ಭಾಷೆಗಳಲ್ಲಿ ತೀರ್ಪುಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಕಾಂತಾರ, ಕಾಶ್ಮೀರ್‌ ಫೈಲ್ಸ್‌ಗೆ ಸಿಕ್ಕ ದಾದಾ ಸಾಹೇಬ್‌ ಪಾಲ್ಕೆ ಪ್ರಶಸ್ತಿ ನಿಜವಾದದ್ದಲ್ಲ; ಅಸಲಿಯತ್ತೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...