Photo Courtesy: The Indian Express

ಪಶ್ಚಿಮ ಬಂಗಾಳದ ಅಸಾನ್ಸೋಲ್ ಕ್ಷೇತ್ರದ ಸಂಸದ ಸ್ಥಾನಕ್ಕೆ ಇಂದು ಬಾಬುಲ್ ಸುಪ್ರಿಯೋ ರಾಜೀನಾಮೆ ನೀಡಿದ್ದಾರೆ. 2014 ಮತ್ತು 2019ರಲ್ಲಿ ಈ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು. ಸೆಪ್ಟಂಬರ್ 18 ರಂದು ಬಿಜೆಪಿ ತ್ಯಜಿಸಿ ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು ಇಂದು ಅಧಿಕೃತವಾಗಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಮತ್ತು ಮಮತಾ ಬ್ಯಾನರ್ಜಿಯವರ ಕಟು ಟೀಕಾಕಾರರಲ್ಲಿ ಒಬ್ಬರಾಗಿದ್ದ ಬಾಬುಲ್ ಸುಪ್ರಿಯೋ ಮೋದಿಯವರ ಸಚಿವ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರು. ಗ್ರಾಮೀಣ ಅಭಿವೃದ್ದಿ ಖಾತೆಯಿಂದ ಅವರನ್ನು ಬದಲಾಯಿಸಲಾಗಿತ್ತು. ಹಾಗಾಗಿ ಅವರು ರಾಜಕೀಯ ತ್ಯಜಿಸುವುದಾಗಿ ಘೋಷಿಸಿದ್ದಾರೆ. ಆದರೆ ಸ್ವಲ್ಪ ದಿನಗಳ ನಂತರ ಅವರು ತೃಣಮೂಲ ಕಾಂಗ್ರೆಸ್ ಪಕ್ಷ ಸೇರಿ ಅಚ್ಚರಿ ಮೂಡಿಸಿದ್ದರು.

ಇಂದು ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ, “ನನ್ನ ಮನಸ್ಸು ಭಾರವಾಗಿದೆ. ನಾನು ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವರಾದ ಅಮಿತ್ ಶಾರವರು ನನ್ನ ಮೇಲೆ ವಿಶ್ವಾಸವಿಟ್ಟಿದ್ದರು. ಆದರೆ ನಾನು ಮನಪೂರ್ವಕವಾಗಿ ರಾಜಕೀಯ ತ್ಯಜಿಸಿದೆ. ನಾನು ಆ ಪಕ್ಷಕ್ಕೆ ಸೇರಿಲ್ಲದ ಸಂದರ್ಭದಲ್ಲಿ ಆ ಪಕ್ಷದ ಸಂಸದನಾಗಿ ಮುಂದುವರೆಯುವುದು ಸರಿಯಲ್ಲವೆನಿಸಿತು. ಹಾಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದಿದ್ದಾರೆ.

ಬಿಜೆಪಿ ಪಕ್ಷದ ಚಿಹ್ನೆಯಿಂದ ಗೆದ್ದಿರುವ ನಾನು ಆ ಪಕ್ಷ ತ್ಯಜಿಸಿ ಟಿಎಂಸಿ ಸೇರಿದ ಮೇಲೆ ಸಂಸದನಾಗಿ ಮುಂದುವರೆಯುವುದು ಅನೈತಿಕತೆಯಾಗಿದೆ. ಹಾಗಾಗಿ ರಾಜೀನಾಮೆ ನೀಡಿದ್ದೇನೆ. ಅದೇ ರೀತಿ ಟಿಎಂಸಿಯಿಂದ ಸುವೇಂದು ಅಧಿಕಾರಿ ಬಿಜೆಪಿಗೆ ಸೇರಿದ್ದಾರೆ. ಅವರ ಸಹೋದರ ಮತ್ತು ತಂದೆ ಟಿಎಂಸಿ ಪಕ್ಷದಿಂದ ಲೋಕಸಭಾ ಸ್ಥಾನ ಗೆದ್ದು ಈಗ ಬಿಜೆಪಿಯಲ್ಲಿದ್ದಾರೆ. ಅವರು ಸಹ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸುಪ್ರಿಯೋ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ರೈತ ಹೋರಾಟ ನೆಲದಲ್ಲಿ ಹತ್ಯೆ: ಬಿಜೆಪಿ ಸಚಿವರೊಂದಿಗೆ ಆರೋಪಿತ ನಿಹಾಂಗ್ ಗುಂಪಿನ ಮುಖ್ಯಸ್ಥ ಸಭೆ

LEAVE A REPLY

Please enter your comment!
Please enter your name here