ತ್ರಿಪುರ ಮತ್ತು ಮೇಘಾಲಯದ ಮಾಜಿ ರಾಜ್ಯಪಾಲರಾದ ತಥಾಗತ ರಾಯ್‌ರವರು ಬಿಜೆಪಿ ನಾಯಕ, ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್‌ ವಿಜಯವರ್ಗಿಯ ಅವರ ಚಿತ್ರವನ್ನು ನಾಯಿಯ ಚಿತ್ರದೊಂದಿಗೆ ಕೊಲಾಜ್‌ ಮಾಡಿ ಟ್ವಿಟರ್‌ನಲ್ಲಿ ಹಂಚಿಕೊಂಡು ಬಿಜೆಪಿ ಪಕ್ಷವನ್ನು ದಿಗ್ಭ್ರಮೆಗೆ ತಳ್ಳಿದ್ದಾರೆ.

ಹೀನಾಯ ಸೋಲಿನ ಬಳಿಕವೂ ಕೈಲಾಶ್‌ ವಿಜಯವರ್ಗಿಯ ಪಶ್ಚಿಮ ಬಂಗಾಳದ ಉಸ್ತುವಾರಿಯಾಗಿ ಮುಂದುವರೆದಿದ್ದಾರೆ ಎಂಬ ನೆಟ್ಟಿಗರೊಬ್ಬರ ಪೋಸ್ಟ್‌ಗೆ ತಥಾಗತ ರಾಯ್‌ರವರು ‘ಮತ್ತೊಮ್ಮೆ ಪಶ್ಚಿಮ ಬಂಗಾಳದಲ್ಲಿ ವೊಡಾಫೋನ್’ ಎಂಬ ಶೀರ್ಷಿಕೆಯೊಂದಿಗೆ ಕೈಲಾಶ್‌ ವಿಜಯವರ್ಗಿಯರವರನ್ನು ನಾಯಿಗೆ ಹೋಲಿಸಿ ಪೋಸ್ಟ್ ಮಾಡಿದ್ದಾರೆ.

ಸುಗತೊ ಎಂಬುವವರು “ಕೈಲಾಶ್‌ ವಿಜಯವರ್ಗಿಯರನ್ನು ಯಾರೂ ಉಲ್ಲೇಖಿಸುತ್ತಿಲ್ಲ. ಬದಲಿಗೆ ಅವರ ಹತ್ತಿರದ ಹಿರಿಯ ಬಿಜೆಪಿ ನಾಯಕರು ಅವರನ್ನು ರಕ್ಷಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಅವರಿನ್ನು ಪಶ್ಚಿಮ ಬಂಗಾಲದ ಉಸ್ತುವಾರಿಯಾಗಿರುವುದು. ಅದೇ ಸಂದರ್ಭದಲ್ಲಿ ಬಿಜೆಪಿ ಕಲ್ಕತ್ತಾದಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕೆ ವಿಜಯವರ್ಗಿಯ ಅವರ ಜೊತೆಗೆ ವೊಡಾಫೋನ್‌ನ ಪಗ್‌(ನಾಯಿ) ಇರುವ ಫೋಟೊ ಮೂಲಕ ತಥಾಗತ ರಾಯ್ ಪ್ರತಿಕ್ರಿಯಿಸಿದ್ದಾರೆ.

ಬಂಗಾಳದ ಮಾಜಿ ಬಿಜೆಪಿ ಮುಖ್ಯಸ್ಥರಾದ ತಥಾಗತ ರಾಯ್, ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಪಕ್ಷದ ನಾಯಕರನ್ನು ಟೀಕಿಸುತ್ತಾ ಬಂದಿದ್ದಾರೆ. ಮೇಘಾಲಯ ಮತ್ತು ತ್ರಿಪುರಾ ರಾಜ್ಯಪಾಲರಾಗಿದ್ದ ತಥಾಗತ ರಾಯ್ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.

ಬಂಗಾಳದಲ್ಲಿ ಬಿಜೆಪಿಯ ಸೋಲಿನ ನಂತರ ರಾಯ್ ಅವರು ಪಕ್ಷದ ಬಂಗಾಳದ ನಾಯಕರಾದ ವಿಜಯವರ್ಗಿಯ ಮತ್ತು ದಿಲೀಪ್ ಘೋಷ್ ಅವರ ಟಿಕೆಟ್ ಹಂಚಿಕೆಯ ನಿರ್ಧಾರಗಳನ್ನು ದೂಷಿಸಿದ್ದರು. ಟ್ವೀಟ್ ಒಂದರಲ್ಲಿ “ಕೈಲಾಶ್-ದಿಲೀಪ್-ಶಿವ್-ಅರವಿಂದ್‌ರವರು ಪ್ರಪಂಚದ ಅತಿ ದೊಡ್ಡ ಪಕ್ಷದ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರವರ ಹೆಸರನ್ನು ಮಣ್ಣುಪಾಲು ಮಾಡಿದ್ದಾರೆ. ಅಗರ್‌ವಾಲ್ ಭವನದಲ್ಲಿ (ಬಂಗಾಳದ ಬಿಜೆಪಿ ಕಚೇರಿ)  ಮತ್ತು 7 ಸ್ಟಾರ್ ಹೋಟೆಲ್‌ಗಳಲ್ಲಿ ಕುಳಿತು ತೃಣಮೂಲ ಕಾಂಗ್ರೆಸ್‌ನಿಂದ ಹೊರಬಂದ ಕಸಕಡ್ಡಿಗಳಿಗೆ ಟಿಕೆಟ್ ನೀಡಿ ಪಕ್ಷದ ಗೌರವನ್ನು ಹಾಳುಗೆಡವಿದರು” ಎಂದು ಬರೆದಿದ್ದರು.


ಇದನ್ನೂ ಓದಿ: ಖೇಲ್ ರತ್ನ ಪ್ರಶಸ್ತಿಯ ಮರುನಾಮಕರಣವಾಗಿದ್ದು ಮೋದಿಯವರ ಟ್ವೀಟ್‌ನಿಂದ ಹೊರತು ಸಾರ್ವಜನಿಕ ಮನವಿಯಿಂದಲ್ಲ!

LEAVE A REPLY

Please enter your comment!
Please enter your name here