Homeಅಂಕಣಗಳುನಾಯಕ - ಪ್ರತಿನಾಯಕರ ನಡುವೆ ಅಪರೂಪವಾಗುಳಿದ ಜಂಟಲ್‍ಮ್ಯಾನ್

ನಾಯಕ – ಪ್ರತಿನಾಯಕರ ನಡುವೆ ಅಪರೂಪವಾಗುಳಿದ ಜಂಟಲ್‍ಮ್ಯಾನ್

- Advertisement -
- Advertisement -

ದೇವು ಪತ್ತಾರ |

ಗಿರೀಶ ಕಾರ್ನಾಡ್ ಒಂದು ಅಸಾಧಾರಣ ಚೇತನ. ಯಾವ ದೃಷ್ಟಿಕೋನದಿಂದ ನೋಡಿದರೂ ‘ಸಣ್ಣತನ’ ಎನ್ನುವುದು ಅವರ ವ್ಯಕ್ತಿತ್ವದ ಭಾಗವಾಗಿರಲಿಲ್ಲ. ಅರ್ಥಾತ್ ಅವರು ‘ಚಿಲ್ಲರೆ’ಯಾಗಿ ವರ್ತಿಸುತ್ತಿರಲಿಲ್ಲ. ಬರಹ-ಬದುಕು ಎರಡರಲ್ಲೂ ಸಮತೋಲನ ಸಾಧಿಸಿದ ಹಿರಿಯ ಜೀವ.
ಗಿರೀಶರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭ. ಧಾರವಾಡದ ಮಲ್ಲಿಕಾರ್ಜುನ ಮನ್ಸೂರು ಕಲಾಭವನದಲ್ಲಿ ಅಭಿನಂದನಾ ಸಮಾರಂಭ. ಅದರ ಭಾಗವಾಗಿ ಗಿರೀಶರ ಎಲ್ಲ ನಾಟಕಗಳ ಪ್ರದರ್ಶನ. ಅಂದು ಅಭಿನಂದನಾ ಭಾಷಣ ಮಾಡಿದ್ದು ಗಿರೀಶರ ಪ್ರಿಯ ಗೆಳೆಯ-ಮಾರ್ಗದರ್ಶಿ-ಗುರು ಕೀರ್ತಿನಾಥ ಕುರ್ತಕೋಟಿ. ಅದಕ್ಕೂ ಮುನ್ನ ನಡೆದ ಪ್ರೇಕ್ಷಕರ ಜೊತೆಗಿನ ಸಂವಾದವನ್ನು ಗಿರೀಶರ ಮತ್ತೊಬ್ಬ ಸ್ನೇಹಿತ ಸಿದ್ಧಲಿಂಗ ಪಟ್ಟಣಶೆಟ್ಟರು ನಡೆಸಿಕೊಟ್ಟಿದ್ದರು. ಗಿರೀಶರ ವ್ಯಕ್ತಿತ್ವ-ಬರವಣಿಗೆಯ ಸ್ವರೂಪ-ಮಹತ್ವವನ್ನು ಪಟ್ಟಣಶೆಟ್ಟರು ತಮ್ಮದೇ ಆದ ಸುಲಲಿತ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದರು.
ಅಭಿನಂದನ ಭಾಷಣ ಮಾಡಿದ ಕೀರ್ತಿಯವರು ‘ಭಾರತೀಯ ಸಂಸ್ಕೃತಿಯ ನಾಯಕ-ಪ್ರತಿನಾಯಕರನ್ನು ಸೃಷ್ಟಿಸುವಂತಹದ್ದು. ಇಲ್ಲಿ ಹೀರೋಗಳಿದ್ದಾರೆ, ವಿಲನ್ಗಳಿದ್ದಾರೆ. ಆದರೆ, ಜಂಟಲ್ಮನ್ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಗಿರೀಶ ಅಂತ ಅಪರೂಪದ ‘ಜಂಟಲ್ಮನ್’ ಎಂದಿದ್ದರು. ವಿಮರ್ಶಕ ‘ಕೀರ್ತಿ’ಯಿಂದ ದೊರೆತ ಈ ಸರ್ಟಿಫಿಕೇಟ್ ಗಿರೀಶರಿಗೆ ದೊರೆತ ಬಹುದೊಡ್ಡ ಪ್ರಶಸ್ತಿ.
ಗಿರೀಶರು ‘ಜಂಟಲ್ಮನ್’ ಆಗಿರುವುದಕ್ಕೆ ಅವರ ವ್ಯಕ್ತಿತ್ವದಲ್ಲಿ ಪೂರ್ವದ ಪರಂಪರೆ ಮತ್ತು ಪಶ್ಚಿಮದ ಆಧುನಿಕತೆಗಳೆರಡೂ ಹದವಾಗಿ ಬೆಸೆದಿದ್ದವು. ಗಿರೀಶರದು ಪೂರ್ವ-ಪಶ್ಚಿಮಗಳೆರಡನ್ನೂ ಕಸಿ ಮಾಡಿದ ಅನನ್ಯ ವ್ಯಕ್ತಿತ್ವ.
ಗಿರೀಶ ಸಣ್ಣದಾಗಿ ಯೋಚಿಸುವವರೇ ಅಲ್ಲ. ಅವರದು ಕಾಸ್ಮೊಪಾಲಿಟನ್ ವ್ಯಕ್ತಿತ್ವ. ತಮ್ಮ ಹರೆಯದ ದಿನಗಳಲ್ಲಿ ಪೆನ್ಸಿಲ್ ನಲ್ಲಿ ವ್ಯಕ್ತಿಚಿತ್ರಗಳನ್ನು ಬರೆಯುವ ಹವ್ಯಾಸವನ್ನು ಗಿರೀಶರು ಇಟ್ಟುಕೊಂಡಿದ್ದರು. ತಾವು ರಚಿಸಿದ ರೇಖಾಚಿತ್ರಗಳನ್ನು ಕಳಿಸಿ ಅವರಿಂದ ಆಟೋಗ್ರಾಫ್ ಪಡೆಯುವ ಹವ್ಯಾಸ ಅವರದಾಗಿತ್ತು. ಇಪ್ಪತ್ತನೆಯ ಶತಮಾನದಲ್ಲಿ ಕಾವ್ಯದ ಚಲನೆಯ ದಿಕ್ಕನ್ನು ಬದಲಿಸಿದ ಟಿ.ಎಸ್. ಎಲಿಯಟ್, ಭಾರತೀಯ ಚಿಂತಕ-ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್, ತನ್ನ ಪ್ರಖರ ಚಿಂತನೆ-ಸಂಶೋಧನೆಗಳಿಂದ ವಿಜ್ಞಾನಲೋಕವನ್ನು ಬೆಳಗಿದ ಆಲ್ಬರ್ಟ್ ಐನ್‍ಸ್ಟೈನ್ ಹೀಗೆ ಗಿರೀಶ ಅವರು ಚಿತ್ರಿಸಲು ಆಯ್ಕೆ ಮಾಡಿಕೊಂಡ ವ್ಯಕ್ತಿಗಳೇ ಅವರು ಯೋಚನೆಯ ಎತ್ತರ-ಆಳಗಳನ್ನು ಸೂಚಿಸುತ್ತವೆ.
ಗಿರೀಶ ‘ಕವಿಯಾಗಬೇಕು’ ಎಂದು ಕೊಂಡಿದ್ದರು. ಅದೂ ಟಿ.ಎಸ್. ಎಲಿಯಟ್, ಡಬ್ಲ್ಯು.ಎಚ್. ಆಡೆನ್, ಡಬ್ಲ್ಯು.ಬಿ. ಯೇಟ್ಸ್ ತರಹದ ಇಂಟರ್ ನ್ಯಾಷನಲ್ ಕವಿ. ನೊಬೆಲ್ ಪಡೆಯುವ ಛಾತಿಯ ಕವಿಯಾಗಬೇಕು ಎಂಬ ಆಸೆ. ತಾನು ‘ಕವಿ ಆಗಲು ಆಗುವುದಿಲ್ಲ’ ಎಂದಾಗ ಗಿರೀಶ ಕಣ್ಣೀರು ಹಾಕಿದ್ದನ್ನ ಅವರು ಹಲವು ಬಾರಿ ಹೇಳಿದ್ದಾರೆ.
ಗಿರೀಶರದು ಯೋಜನಾಬದ್ಧ ಲೆಕ್ಕಾಚಾರದ ತಾರ್ಕಿಕ ಆಲೋಚನಾ ಕ್ರಮ. ಅದಕ್ಕೆ ಅವರು ಕಾಲೇಜು ವಿದ್ಯಾರ್ಥಿ ಆಗಿದ್ದಾಗ ಬಿ.ಎ.ದಲ್ಲಿ ಗಣಿತಶಾಸ್ತ್ರ ಅಧ್ಯಯನ ಮಾಡಿದ್ದು ಕಾರಣ. ಅಷ್ಟೇ ಅಲ್ಲ, ಗಣಿತವನ್ನು ಆಯ್ಕೆ ಮಾಡಿಕೊಂಡದ್ದು ಕೂಡ. ಗಿರೀಶರ ಆಧುನಿಕ ತಾರ್ಕಿಕ ಮನಸ್ಸು ಮತ್ತು ಅದಕ್ಕೆ ಇಂಬು ನೀಡುವಂತೆ ಅವರು ಕಾಣುತ್ತಿದ್ದ ದೊಡ್ಡ ಕನಸು ಅವರನ್ನು ಬಹುದೂರದವರೆಗೆ ಕರೆತಂದವು.
ಆಕ್ಸ್‍ಫರ್ಡ್‍ನಲ್ಲಿ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಗಿರೀಶ ಅವರು ಶಿಸ್ತು ಹಾಗೂ ಆಡಳಿತ-ನಿರ್ವಹಣೆಗಳನ್ನು ಕಲಿತರು. ಆಕ್ಸ್‍ಫರ್ಡ್‍ಗೆ ತೆರಳುವ ಮುನ್ನ ಬರೆದ ಹರಯದ ಹೊಯ್ದಾಟ ಮತ್ತು ಪುರಾಣದ ಕತೆಯನ್ನು ಆಧುನಿಕ ನೋಟಕ್ರಮದಿಂದ ಮುರಿದು ಕಟ್ಟಿದ ‘ಯಯಾತಿ’ ಅವರ ಬದುಕಿನ ಚಲನೆಯ ಗತಿಯನ್ನು ಬದಲಿಸಿತು. ಅದಕ್ಕೆ ಕಾರಣವಾಗಿದ್ದು ಜಿ.ಬಿ. ಜೋಶಿ, ಕೀರ್ತಿನಾಥ ಕುರ್ತಕೋಟಿ ಮತ್ತು ಮನೋಹರ ಗ್ರಂಥಮಾಲಾ. ಗಿರೀಶರ ಸ್ನೇಹ ಮತ್ತು ನಿಷ್ಠೆಗಳು ಕೊನೆಯವರೆಗೂ ಉಳಿಸಿಕೊಂಡಿದ್ದರು. ಅವರ ಎಲ್ಲ ನಾಟಕಗಳೂ ಸೇರಿದಂತೆ ಎಲ್ಲ ಕೃತಿಗಳ ಪ್ರಕಟಣೆಯನ್ನು ಮನೋಹರ ಗ್ರಂಥಮಾಲೆಗೇ ನೀಡಿದ್ದರು.
ಗಿರೀಶರ ಮತ್ತೊಬ್ಬ ಆಪ್ತಮಿತ್ರ-ಗುರು ಎ.ಕೆ. ರಾಮಾನುಜನ್ ಹಾಗೂ ರಂಗನಿರ್ದೇಶಕ ಬಿ.ವಿ. ಕಾರಂತರ ಒಡನಾಟ ಕೂಡ ಗಿರೀಶರ ವ್ಯಕ್ತಿತ್ವ ವಿಭಿನ್ನ ರೀತಿಯಲ್ಲಿ ಬೆಳೆಯಲು ಕಾರಣವಾಯಿತು. ಕನ್ನಡದಲ್ಲಿ ಕಂಬಾರರು ‘ಏನು ಬರೆಯುತ್ತಾರೆ?’ ಎಂಬ ಕುರಿತು ಕುತೂಹಲ ಅವರನ್ನು ಸದಾ ಎಚ್ಚರದಲ್ಲಿ ಇಟ್ಟಿತ್ತು. ಕಂಬಾರ- ಗಿರೀಶರ ಜುಗಲ್ ಬಂದಿ ನಾಟಕಗಳು ಅದಕ್ಕೆ ಸಾಕ್ಷಿ. ನಾಗಮಂಡಲ-ಸಿರಿಸಂಪಿಗೆ ಹಳೆಯ ಉದಾಹರಣೆ. ಇತ್ತೀಚಿನ ರಾಕ್ಷಸ ತಂಗಡಿ- ಮಹಮೂದ್ ಗಾವಾನ್ ಹೊಸ ಪ್ರಯೋಗ.
ಗಿರೀಶ ಎಂದಾಕ್ಷಣ ನನಗೆ ತಟ್ಟನೆ ಕಣ್ಮುಂದೆ ಬರುವುದು. ‘ಸಂಸ್ಕಾರ’ದ ಪ್ರಾಣೇಶಾಚಾರ್ಯ ಹಾಗೂ ‘ಸಂತ ಶಿಶುನಾಳ ಶರೀಫ’ ಚಿತ್ರದ ಗೋವಿಂದಭಟ್ಟರ ಪಾತ್ರಗಳಲ್ಲಿನ ಅಭಿನಯ. ಶ್ಯಾಮ್ ಬೆನಗಲ್ ನಿರ್ದೇಶನದ ‘ಅಂಕುರ’ ಚಿತ್ರದಲ್ಲಿನ ಅಸಾಧಾರಣ ಅಭಿನಯ. ಕಮರ್ಷಿಯಲ್ ಚಿತ್ರಗಳಲ್ಲಿ ಹೀರೋನಿಂದ ಚಚ್ಚಿಸಿಕೊಳ್ಳುವ ಪಾತ್ರಗಳಲ್ಲಿ ಅಭಿನಯಿಸಲೂ ಗಿರೀಶ ಹಿಂದೇಟು ಹಾಕುತ್ತಿರಲಿಲ್ಲ.
ದೂರದರ್ಶನ ಟೆಲಿವಿಷನ್ನಲ್ಲಿ ಪ್ರಸಾರವಾಗುತ್ತಿದ್ದ ‘ಟರ್ನಿಂಗ್ ಪಾಯಿಂಟ್’ ಅವರ ದನಿ ಹಾಗೂ ವೈಜ್ಞಾನಿಕ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ರೀತಿ ‘ಹೊಸ ಮಾಧ್ಯಮ’ಕ್ಕೆ ಹೇಳಿ ಮಾಡಿಸಿದ ಹಾಗಿತ್ತು.
ಗೆಳೆಯ ಬಿ.ವಿ. ಕಾರಂತರ ಜೊತೆ ಸೇರಿ ನಿರ್ದೇಶಿಸಿದ ಎಸ್.ಎಲ್. ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಮತ್ತು ‘ವಂಶವೃಕ್ಷ’ ಕಾದಂಬರಿ ಆಧರಿಸಿದ ಚಿತ್ರಗಳ ಬಗ್ಗೆ ಅರಿವಿರದ ಜನ ಮಾತ್ರ ಅವರನ್ನು ಟ್ರೋಲ್‍ಗೆ ಗುರಿ ಮಾಡಬಲ್ಲರು. ಮೊದಲ ಪ್ರಧಾನಿ ನೆಹರು ಅವರ ಕನಸುಗಾರಿಕೆಯನ್ನು ನಿಕಷಕ್ಕೆ ಒಡ್ಡಿದ ‘ತುಘಲಕ್’ ಗಿರೀಶರ ಮಾಸ್ಟರ್ ಪೀಸ್ ಎಂದೇ ಪರಿಗಣಿಸಲಾಗುತ್ತದೆ. ವಸ್ತು ಚಾರಿತ್ರಿಕವಾದರೂ ಅದು ಸಮಕಾಲೀನ ಆಗುವ ರೀತಿ ಅನನ್ಯವಾದದ್ದು.
ತುಘಲಕ್ ನಾಟಕದ ಒಂದು ದೃಶ್ಯ. ದೌಲತಾಬಾದ್ ಕೋಟೆಯ ಮೇಲೆ ಇಬ್ಬರು ಸೈನಿಕರು ಕಾವಲು ಕಾಯುತ್ತಿದ್ದಾರೆ. ಒಬ್ಬ ಸೈನಿಕ ‘ನಮ್ಮ ಎಂತಹ ಅಭೇದ್ಯವಾದ ಕೋಟೆ ಕಟ್ಟಿದ್ದಾನೆ ಎಂದರೆ ಅದನ್ನ ಯಾರೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಮತ್ತೊಬ್ಬ ಪಹರೆದಾರ ‘ಹೌದು. ಈ ಕೋಟೆಯನ್ನು ಯಾರೂ ಗೆಲ್ಲಲು-ಸೋಲಿಸಲು ಸಾಧ್ಯವಿಲ್ಲ. ಅದು ತನ್ನ ಭಾರಕ್ಕೇ ಕುಸಿಯಬೇಕು’ ಎನ್ನುತ್ತಾನೆ. ಈ ಕೋಟೆ ಕೇವಲ ತುಘಲಕ್ಕನದಲ್ಲ. ಅದು ಕೇವಲ, ನೆಹರೂ-ಇಂದಿರಾಗೆ ಮಾತ್ರ ಸೀಮಿತವಲ್ಲ.
ನಾಟಕಕಾರ ಗಿರೀಶ ನನ್ನ ಪ್ರಿಯ ಲೇಖಕ. ಗಿರೀಶರ ನಾಟಕಗಳ ಹಂದರ ಹಾಗೂ ಅದನ್ನ ಕಟ್ಟುವ ರೀತಿ-ಪಾತ್ರ ಚಿತ್ರಣಗಳಿಗೆ ಮಾರು ಹೋಗಿದ್ದೇನೆ. ಹಾಗೆಯೇ ಅವರ ವಸ್ತುವಿನ ಆಯ್ಕೆ ನನಗೆ ಇಷ್ಟವಾಗುತ್ತದೆ. ಹಾಗಂತ ಗಿರೀಶರ ಎಲ್ಲ ನಾಟಕಗಳನ್ನೂ ನಾನು ಇಷ್ಟಪಡುತ್ತೇನೆ. ಮೆಚ್ಚುತ್ತೇನೆ ಎಂದೇನಲ್ಲ. ‘ಅಗ್ನಿ ಮತ್ತು ಮಳೆ’, ‘ತುಘಲಕ್’, ‘ಯಯಾತಿ’, ಹಾಗೂ ನೋಯುವ ಹಲ್ಲಿನ ಕಡೆಗೆ ಹೊರಳುವ ನಾಲಗೆಯ ‘ತಲೆದಂಡ’ ಮತ್ತು ‘ರಾಕ್ಷಸ ತಂಗಡಿ’ ನಾಟಕಗಳು ಗಿರೀಶರ ಅಸಾಧಾರಣ ಪ್ರತಿಭೆಗೆ ಸಾಕ್ಷಿ. ಗಿರೀಶರ ನಾಟಕಗಳಲ್ಲಿನ ಸ್ತ್ರೀಪಾತ್ರಗಳು ಕನ್ನಡ ರಂಗಭೂಮಿಗೇ ವಿಶಿಷ್ಟವಾದವು. ಗಿರೀಶರ ನಾಟಕಗಳಲ್ಲಿನ ಹಾಗೆ ತನ್ನದೇ ವ್ಯಕ್ತಿತ್ವವುಳ್ಳ ಸ್ತ್ರೀ ಪಾತ್ರಗಳು ಕನ್ನಡದಲ್ಲಿಯಂತೂ ತೀರಾ ಅಪರೂಪ.
ಗಿರೀಶರ ಭಾಷೆ ಹಾಗೂ ಕನ್ನಡದ ಬಗ್ಗೆ ಹಲವರ ತಕರಾರಿದೆ. ಅದಕ್ಕೆ ಕಾರಣ ಇಲ್ಲದಿಲ್ಲ. ಕಾರಣ ಹೇಳಿ ಸಮರ್ಥಿಸಿಕೊಳ್ಳಬೇಕಿಲ್ಲ. ಗಿರೀಶರಿಗೆ ಯಾರ ಸಮರ್ಥನೆಯ ಅಗತ್ಯವೂ ಇಲ್ಲ. ಗಿರೀಶರ ಮನೆ ಮಾತು ಕೊಂಕಣಿ, ಬೆಳೆದದ್ದು ಮರಾಠಿ ಭಾಷಿಕ ವಾತಾವರಣದಲ್ಲಿ, ಕಲಿತದ್ದು ಇಂಗ್ಲಿಷ್ ಮಾಧ್ಯಮದಲ್ಲಿ. ಕನ್ನಡ ಅವರಿಗೆ ನಾಲ್ಕನೆಯ ಭಾಷೆ. ವ್ಯವಹಾರಿಕ-ಬಳಕೆಯ ಭಾಷೆಯ ಜೊತೆಗಿನ ಒಡನಾಟ ಮಾತ್ರ. ಅದೂ ಧಾರವಾಡದಲ್ಲಿದ್ದಷ್ಟು ದಿನ ಮಾತ್ರ. ಇಷ್ಟಿದ್ದೂ ಗಿರೀಶ ಕನ್ನಡದಲ್ಲಿಯೇ ಹಠ ಮಾಡಿ ಬರೆದರು. ಅವರಿಗೆ ಇಂಗ್ಲಿಷಿನಲ್ಲಿ ಬರೆಯಲು ಆಫರ್ ಬಂದಾಗಲೂ ಅವರು ಕನ್ನಡದಲ್ಲಿ ಬರೆದು ನಂತರ ತರ್ಜುಮೆ ಮಾಡಿ ಕೊಟ್ಟರು. ಇದು ಗಿರೀಶರ ಕನ್ನಡ ಪ್ರೀತಿ.
ಗಿರೀಶರಿಗೆ ಬರವಣಿಗೆಯಿಂದ ಅದೂ ಕನ್ನಡ ಬರವಣಿಗೆಯಿಂದ ಹಣ ಮಾಡಬೇಕಿರಲಿಲ್ಲ. ಲಂಕೇಶ್ ಈ ಬಗ್ಗೆ ಸೊಗಸಾಗಿ ಬರೆದಿದ್ದಾರೆ ಕೂಡ. ಬದುಕಿಗೆ ಅಗತ್ಯವಿರುವ ಹಣಕ್ಕಾಗಿ ಸಿನಿಮಾದಲ್ಲಿನ ನಟನೆ ಹಾಗೂ ಆಕ್ಸ್‍ಫರ್ಡ್ ಯುನಿವರ್ಸಿಟಿ ಪ್ರೆಸ್‍ನಲ್ಲಿ ಕೆಲಸ ಮಾಡಿದ್ದರು. ಪುಣೆ ಫಿಲಂ ಇನ್ಸ್‍ಟಿಟ್ಯೂಟ್, ಕೇಂದ್ರ ಸಂಗೀತ-ನೃತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿಗಳಲ್ಲಿ ಗಿರೀಶ ಕೆಲಸ ಮಾಡಿದ ರೀತಿ ‘ಮಾದರಿ’ ರೂಪದ್ದು.
ತಮ್ಮ ಖಚಿತ ನಿಲುವು ವ್ಯಕ್ತಪಡಿಸಲು ಗಿರೀಶ ಎಂದೂ ಹಿಂದೇಟು ಹಾಕಿದವರೇ ಅಲ್ಲ. ಅದು ವಿವಾದ ಆಗುತ್ತದೆ ಎಂದು ಗೊತ್ತಿದ್ದ ಸಂದರ್ಭದಲ್ಲಿಯೂ ತಾವು ಹೇಳಬೇಕಾದದ್ದನ್ನು ಹೇಳದೇ ಇದ್ದವರಲ್ಲ. ಹಾಗಂತ ವಿವಾದಕ್ಕಾಗಿಯೇ ಹೇಳಿಕೆ ನೀಡುವವರೇನಲ್ಲ. ಟಾಗೋರರ ನಾಟಕಗಳ ಬಗ್ಗೆ ಮಾತನಾಡಲು ಹಿಂಜರಿಯದ ಗಿರೀಶರು ಟಿಪ್ಪುವಿನ ಕನಸುಗಾರಿಕೆ-ಸಾಧನೆ-ದೊಡ್ಡತನಗಳನ್ನು ಮೆಚ್ಚುವುದು ಮಾತ್ರವಲ್ಲದೆ ಅದರ ಪರವಾಗಿ ದನಿ ಎತ್ತಬಲ್ಲವರಾಗಿದ್ದರು. ಕಲ್ಬುರ್ಗಿ, ಗೌರಿ ಹತ್ಯೆಯ ಸಂದರ್ಭದಲ್ಲಿ ಅವರು ತಳೆದ ನಿಲುವು ಹಾಗೂ ಆಹಾರದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ನಡೆದುಕೊಂಡ ರೀತಿ ಗಿರೀಶರ ವ್ಯಕ್ತಿತ್ವವನ್ನು ಬಿಂಬಿಸುವಂತಹದ್ದು. ಆಡಿದ ಪ್ರತಿಯೊಂದು ಮಾತಿನಲ್ಲಿಯೂ ಹುಳುಕು ಹುಡುಕುವ ಸುದ್ದಿ ಮಾಧ್ಯಮಗಳ ಬದಲಾದ ಸ್ವರೂಪ ಹಾಗೂ ತಿರುಚುವ ರೀತಿಯನ್ನು ಅರಿತಿದ್ದ ಗಿರೀಶರು ಕಳೆದ ಕೆಲವು ದಿನಗಳಿಂದ ಸುದ್ದಿವಾಹಿನಿಗಳಿಂದ ಅಂತರ ಕಾಪಾಡಿಕೊಂಡಿದ್ದರು.
ಗಿರೀಶರದು ದೋಷಗಳಿಲ್ಲದ ಪರಿಪೂರ್ಣ ವ್ಯಕ್ತಿತ್ವವೇನಲ್ಲ. ಪತ್ರಕರ್ತ- ಕವಿ ಗೋಪಾಲ ವಾಜಪೇಯಿ ಅವರು ‘ಮಾಯದ ಮನದ ಭಾರ, ತೆರೆದ್ಹಾಂಗ ಎಲ್ಲ ದ್ವಾರ’ ಎಂಬ ಹಾಡನ್ನು ಶಂಕರನಾಗ್ ನಿರ್ದೇಶಿಸಿದ ‘ನಾಗಮಂಡಲ’ಕ್ಕಾಗಿ ಬರೆದುಕೊಟ್ಟಿದ್ದರು. ಗಿರೀಶರಿಗೆ ಈ ಹಾಡು ಪ್ರಿಯವಾಗಿತ್ತು. ಅದನ್ನು ತಮ್ಮ ‘ನಾಗಮಂಡಲ’ದಲ್ಲಿ ಕ್ರೆಡಿಟ್ ನೀಡಿ ಬಳಸುವುದಾಗಿ ತಿಳಿಸಿದ್ದರು. ‘ನಾಗಮಂಡಲ’ದ ನಂತರದ ಆವೃತ್ತಿಗಳಲ್ಲಿ ‘ಮಾಯದ ಮನದ ಭಾರ’ ಹಾಡು ಸೇರಿತು. ವಾಜಪೇಯಿ ಅವರಿಗೆ ಕ್ರೆಡಿಟ್ ನೀಡದೆ ಗಿರೀಶರು ಆ ಲೋಪವನ್ನು ಪ್ರಕಾಶಕರ ಕಡೆಗೆ ವರ್ಗಾಯಿಸಲು ನೋಡಿದರು. ತಾವೇ ಹೊಣೆ ಹೊರಬೇಕಿತ್ತು. ಕ್ಷಮೆಯನ್ನೂ ಕೇಳಬಹುದಿತ್ತು. ಅದಾಗದ್ದರಿಂದ ಗೋಪಾಲ ವಾಜಪೇಯಿ ಅವರು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಯಿತು. ಅದನ್ನು ತಪ್ಪಿಸಬಹುದಿತ್ತು. ಹೀಗೆ ಲೋಪಗಳನ್ನ ಪಟ್ಟಿ ಮಾಡಬಹುದು. ಅವುಗಳು ಕೇವಲ ಲೋಪಗಳ ಪಟ್ಟಿ ಸೇರುತ್ತವೆ ಎನ್ನುವ ಕಾರಣಕ್ಕಾಗಿಯೇ ಗಿರೀಶ ‘ಜಂಟಲ್ಮನ್’.
ಗಿರೀಶರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಬಿ.ವಿ. ಕಾರಂತರು ತಮ್ಮ ಲೇಖನದಲ್ಲಿ `ನುಡಿ ಹಿಡಿಯುವ ಬದಲು ನಾಡಿ ಹಿಡಿದವರು’ ಎಂದು ಬರೆದಿದ್ದರು. ಹೌದು. ಕನ್ನಡ ರಂಗಭೂಮಿ, ನಾಟಕ- ಸಾಹಿತ್ಯ, ಸಿನಿಮಾ, ಸಂಸ್ಕೃತಿಯ ‘ನಾಡಿ’ಮಿಡಿತ ಅರಿತಿದ್ದ ‘ಚೇತನ’ ಕಾರ್ನಾಡ್.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...