Homeಅಂಕಣಗಳುಸಂಕಟಗಳ ಕಾಲದ ಸಂಗಾತಿ, ಬಹುತ್ವದ ಕಾವಲುಗಾರ ಕಾರ್ನಾಡ್

ಸಂಕಟಗಳ ಕಾಲದ ಸಂಗಾತಿ, ಬಹುತ್ವದ ಕಾವಲುಗಾರ ಕಾರ್ನಾಡ್

- Advertisement -
- Advertisement -

ಗಿರೀಶ್ ಕಾರ್ನಾಡ್ ಅವರು ಕರ್ನಾಟಕದ ಅನೇಕ ಬಿಕ್ಕಟ್ಟು, ಸಂಕಟಗಳ ಕಾಲದಲ್ಲಿ ಮತ್ತು ನಾಡಿನಲ್ಲಿ ವಿಪತ್‍ಕಾರಿ ಸಂದರ್ಭಗಳು ಸಂಭವಿಸಿದಾಗ ದನಿ ಎತ್ತಿ ನಿಷ್ಠೂರವಾಗಿ ಮಾತನಾಡಿದವರು. ನಾನು ಕಾರ್ನಾಡ್ ಅವರನ್ನು ಅರಿಯಲು ಆರಂಭಿಸಿದ್ದು ಅವರ ನಾಟಕಗಳಿಂದ. ಅವರ ಕನ್ನಡದ ವಿಶಿಷ್ಟ ಮತ್ತು ಅಪೂರ್ವ ಎನ್ನಬಹುದಾದ ನಾಟಕ ಯಯಾತಿ. ಈ ನಾಟಕವನ್ನು ನಾಲ್ಕೈದು ವರ್ಷಗಳ ಕಾಲ ಪಾಠ ಮಾಡಿದ್ದೇನೆ. ಅದರಲ್ಲಿ ಬರುವ ಒಂದು ಸಾಲು ‘ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾರೆ’ ಈ ಸಾಲು ಮತ್ತೆ ಮತ್ತೆ ನನ್ನ ಅಂತರಂಗವನ್ನು ಹೊಕ್ಕಿ ನೋಡುವಂತೆ ಮಾಡಿತ್ತು. ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ನನಗೆ ಸಾಮಾಜಿಕ ಬದಲಾವಣೆಯ ಕನಸು, ಆ ಕನಸು ಇಲ್ಲದಿದ್ದರೆ ನಡೆಯಲು ಸಾಧ್ಯವಿಲ್ಲ ಎಂಬ ಅಂಶ ತಾತ್ವಿಕವಾಗಿ ಬಹಳ ಇಷ್ಟವಾಗಿತ್ತು. ಈ ಮಾತನ್ನು ನಾನು ಸಾರ್ವಜನಿಕ ಜೀವನ ಮತ್ತು ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ನೆನಪಿಸುತ್ತಿರುತ್ತೇನೆ. ಕಾರ್ನಾಡ್ ಅವರ ಸಾಹಿತ್ಯಿಕ, ಸಾಂಸ್ಕೃತಿಕ, ರಂಗಭೂಮಿ ಹಾಗೂ ಸಿನಿಮಾ ಬದುಕು ಒಂದು ಕಡೆಯಾದರೆ ಅವರ ಸಾರ್ವಜನಿಕ ಹಾಗೂ ಹೋರಾಟದ ಬದುಕಿನ ಕೆಲವು ವಿಷಯಗಳನ್ನು ದಾಖಲಿಸುವುದು ಈ ಸಂದರ್ಭದಲ್ಲಿ ಅತಿ ಮುಖ್ಯ ಎಂದು ನಾನು ಭಾವಿಸುತ್ತೇನೆ.

ಅದು 2002-03 ರ ಸಮಯ. ಬಾಬಾ ಬುಡನ್ ಗಿರಿಯಲ್ಲಿ ವಿವಾದ ಹರಳುಗಟ್ಟುತ್ತಿತ್ತು. ಆ ವೇಳೆಗಾಗಲೇ ಬಾಬಾ ಬುಡನ್ ಗಿರಿಯನ್ನು ಇನ್ನೊಂದು ಅಯೋಧ್ಯೆಯನ್ನಾಗಿಸುವುದಾಗಿಯೂ, ಕರ್ನಾಟಕವನ್ನು ಇನ್ನೊಂದು ಗುಜರಾತ್ ಅನ್ನಾಗಿ ಮಾಡುವುದಾಗಿಯೂ ಬಿಜೆಪಿಯ ಅನಂತಕುಮಾರ್ ಆದಿಯಾಗಿ ಎಲ್ಲರೂ ಹೇಳಿಯಾಗಿತ್ತು. ಜನರ ನೆನಪಿನಲ್ಲಿ ಬೇರೂರಿದ್ದ ಬಾಬಾ ಬುಡನ್ ಗಿರಿಯ ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಎಂಬ ಸೂಫಿ ಕೇಂದ್ರವನ್ನು ‘ಸ್ವಚ್ಛ’ಗೊಳಿಸಿ ಅದನ್ನು ಹಿಂದೂ ಧರ್ಮದ ಕೇಂದ್ರವನ್ನಾಗಿಸುವುದರ ಹಿಂದಿನ ರಾಜಕೀಯ ಪ್ರೇರಣೆ ಎಲ್ಲರಿಗೂ ತಿಳಿಯುತ್ತಿತ್ತು. ಆಗ ಹುಟ್ಟಿಕೊಂಡ ‘ದತ್ತಮಾಲ’ ಇತ್ಯಾದಿ ನಕಲು ಧಾರ್ಮಿಕ ಆಚರಣೆಗಳಿಗೆ ಅಧಿಕೃತತೆಯನ್ನು ತಂದು ಕೊಡುವ ಕೆಲಸ ಭರದಿಂದ ಸಾಗುತ್ತಿತ್ತು.

ಧರ್ಮದ ಹೆಸರಿನ ಈ ರಾಜಕೀಯವನ್ನು ತಡೆಯಲು ಮತ್ತು ಅನಾಧಿಕಾಲದಿಂದಲೂ ಸೂಫಿ ಕೇಂದ್ರವಾಗಿದ್ದ ಆ ಪೂಜಾ ಸ್ಥಳದ ಬಹುಧರ್ಮೀಯ ಲಕ್ಷಣವನ್ನು ರಕ್ಷಿಸುವ ಸಲುವಾಗಿ ಬಾಬಾ ಬುಡನ್ ಸೌಹಾರ್ದ ವೇದಿಕೆ ರೂಪುಗೊಂಡಿತ್ತು. ಕುವೆಂಪು ಅವರ ಜನ್ಮದಿನವಾದ 29 ಡಿಸೆಂಬರ್ 2002ರಂದು ಚಿಕ್ಕಮಗಳೂರಿನಲ್ಲಿ ಒಂದು ‘ಸೌಹಾರ್ದ ಯಾತ್ರೆ’ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. ಅದಕ್ಕೆ ಪೂರ್ವಭಾವಿಯಾಗಿ ನಾಡಿನ ಪ್ರಮುಖ ಲೇಖಕ/ಚಿಂತಕರಿಂದ ಒಂದು ಪತ್ರಿಕಾ ಗೋಷ್ಠಿ ನಡೆಸುವ ಉದ್ದೇಶದಿಂದ ಗೋವಿಂದರಾವ್, ಪ್ರೊ.ಕೆ.ಎಂ.ಮರುಳಸಿದ್ದಪ್ಪ ಅವರನ್ನು ಭೇಟಿ ಮಾಡಿದರು. ಆಗ ಜಿ.ಕೆ.ಗೋವಿಂದರಾವ್, ಗಿರೀಶ್ ಕಾರ್ನಾಡರನ್ನು ಕೇಳೋಣವೆಂದು ಅವರನ್ನು ಸಂಪರ್ಕಿಸಿದರು.

ನಮ್ಮ ಮನವಿ ಮತ್ತು ಅದರ ಹಿಂದಿನ ಉದ್ದೇಶವನ್ನು ಮನಗಂಡ ಕಾರ್ನಾಡರು ನಾವೆಲ್ಲಾ ಯಾಕೆ ಬಾಬಾ ಬುಡನ್ ಗಿರಿಗೇ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ನಂತರ ಪತ್ರಿಕಾ ಗೋಷ್ಠಿಯನ್ನು ನಡೆಸೋಣ ಎಂದು ತಿಳಿಸಿದ್ದಲ್ಲದೆ ತಾವೇ ತಂಡವನ್ನು ದರ್ಗಾ ಭೇಟಿಗೆ ಕರೆದೊಯ್ಯುವ ಜವಾಬ್ದಾರಿಯನ್ನು ತೆಗೆದುಕೊಂಡರು. ಆಗ ಅವರೇ ಗೌರಿ ಲಂಕೇಶರಿಗೆ ಫೋನ್ ಮಾಡಿ ತಂಡದಲ್ಲಿ ಇರಬೇಕೆಂದು ತಿಳಿಸಿದರು. ಬಾಬಾ ಬುಡನ್ ಗಿರಿ ವಿಮೋಚನೆಯ ಹೋರಾಟದಲ್ಲಿ ಮುಂದೆ ಸಂಪೂರ್ಣವಾಗಿ ತೊಡಗಿಸಿಕೊಂಡರು. ನಂತರದ ದಿನಗಳಲ್ಲಿ ಕೋಮು ಸೌಹಾರ್ದ ಮತ್ತು ಜಾತ್ಯಾತೀತ ಮೌಲ್ಯಗಳ ಪರ ದಿಟ್ಟ ಹೋರಾಟಗಾರ್ತಿಯಾಗಿ ರೂಪುಗೊಂಡ ಗೌರಿ ಲಂಕೇಶರ ಮೊದಲ ಹೆಜ್ಜೆ ಅದಾಗಿತ್ತು. ಹೀಗಾಗಿ ಗೌರಿ ಲಂಕೇಶ್ ಅವರನ್ನು ಒಟ್ಟು ಕಾರ್ಯಕರ್ತೆಯಾಗಿ ರೂಪಿಸಿದವರಲ್ಲಿ ಗಿರೀಶ್ ಕಾರ್ನಾಡ ಪ್ರಮುಖ ಪ್ರೇರೇಪಣೆಯಾಗಿದ್ದರು.

2002ರಲ್ಲಿ ಕರ್ನಾಟಕದಲ್ಲಿಯೇ ವಿಶಿಷ್ಠ ಎನ್ನಬಹುದಾದ ಒಂದು ಆಂದೋಲನವನ್ನು ದಾಖಲಿಸಿದಾಗ ಅದರಿಂದ ಪ್ರೇರೇಪಿತಗೊಂಡ ಕಾರ್ನಾಡ್ ಮತ್ತು ಗೌರಿ ಲಂಕೇಶ್ ಅವರು ಹೋರಾಟಕ್ಕೆ ಬಂದಾಗ ಅದಕ್ಕಿಂತ ಮುಂಚಿತವಾಗಿ ನಾವೆಲ್ಲರೂ ಸೇರಿ ಬಾಬಾ ಬುಡನ್ ಗಿರಿಗೆ ಹೋಗಿ ಸತ್ಯಶೋಧನೆ ನಡೆಸಬೇಕೆಂದು ತೀರ್ಮಾನಿಸಿದೆವು. ಅದರಂತೆ ಗಿರೀಶ್ ಕಾರ್ನಾಡ್, ಗೌರಿ ಲಂಕೇಶ್ ಮತ್ತು ಇನ್ನಿತರ ಅನೇಕ ಕನ್ನಡದ ಸಾಹಿತಿಗಳು ಹಾಗೂ ಹೋರಾಟಗಾರರು ಚಿಕ್ಕಮಗಳೂರಿಗೆ ಧಾವಿಸಿದರು. ಆ ಸಂದರ್ಭದಲ್ಲಿ ಕಾರ್ನಾಡ್ ನಮ್ಮನ್ನು ಮುಖಾಮುಖಿಯಾದರು. ಅವರೊಂದಿಗೆ ಕಳೆದ ಒಂದೆರಡು ದಿನಗಳನ್ನು ಅವಿಸ್ಮರಣೀಯ ಎನ್ನಬಹುದು. ಅವರ ಜೊತೆಗಿನ ಒಡನಾಡ ಬಹಳ ಸಂತೋಷ ಮತ್ತು ಸ್ಫೂರ್ತಿಯನ್ನು ತುಂಬಿತ್ತು.

ಸಂಘ ಪರಿವಾರದ ಹಸಿಸುಳ್ಳುಗಳ ವಿರುದ್ಧ ಮುಖಾಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದೆವು. ಸಂಘಪರಿವಾರದ ಶೋಭಾ ಯಾತ್ರೆಗೆ ಸೌಹಾರ್ದ ನಡಿಗೆ ಮಾಡುವ ಮೂಲಕ ತಿರುಗೇಟು ನೀಡಿದೆವು. ಈ ಸಂದರ್ಭದಲ್ಲಿ ಜಯಂತ್ ಕಾಯ್ಕಣಿ ಮತ್ತು ಜಿ.ಎಸ್ ಶಿವರುದ್ರಪ್ಪನಂತಹ ಸಾಹಿತಿಗಳು ಸಹ ನಮ್ಮ ಹೋರಾಟದಲ್ಲಿ ಭಾಗವಹಿಸುವಂತೆ ಮಾಡುವಲ್ಲಿ ಗಿರೀಶ್ ಕಾರ್ನಾಡರ ಕೊಡುಗೆಯೂ ಬಹಳಷ್ಟಿತ್ತು. ನಮ್ಮ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿನಲ್ಲಿ ಸರ್ಕಾರ ಅನುಮತಿ ನಿರಾಕರಿಸಿದಾಗ ನಾವು ಸೌಹಾರ್ದ ನಡಿಗೆ ಮಾಡಿಯೇ ತೀರುತ್ತೇವೆಂದು ಘೋಷಿಸಿದೆವು. ರಾಜ್ಯದಾದ್ಯಂತ ಜನ ಇದರಲ್ಲಿ ಭಾಗವಹಿಸಲು ಕರೆನೀಡಿದೆವು. ನಮ್ಮ ಮನವಿಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತು. ಗೌರಿ ಲಂಕೇಶ್ ರವರು ಲಾರಿಯಲ್ಲಿ ಬಂದರೆ, ಅಗ್ನಿ ಶ್ರೀಧರ್ ರವರು ಮಾಧ್ಯಮದ ವಾಹನದಲ್ಲಿ ಬಂದು ತಲುಪಿದರು. ಗಿರೀಶ್ ಕಾರ್ನಾಡ್ ಮತ್ತು ಕೆ.ಮರುಳುಸಿದ್ದಪ್ಪನವರು ಹಾಸನಕ್ಕೆ ಬಂದು ಅಲ್ಲಿಂದ ಚಿಕ್ಕಮಗಳೂರಿಗೆ ಬರಬೇಕೆಂದು ಯೋಜಿಸಿದ್ದೇವೆ. ಆದರೆ ಪೊಲೀಸರು ಬಹಳ ಬಲವಂತವಾಗಿ ಅವರನ್ನು ಹಾಸನದಲ್ಲಿಯೇ ತಡೆ ಹಿಡಿದರು. ಬಹಳಷ್ಟು ಜನರನ್ನು ಗೃಹಬಂಧನದಲ್ಲಿರಸಲಾಯಿತು.

ಡಿಸೆಂಬರ್ 9 ಗೋಕಾಕ್ ಚಳವಳಿಯ ನಂತರ ಬಹುಶಃ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜೈಲಿನಲ್ಲಿಡಬೇಕಾಗಿ ಬಂದಿದ್ದು ಇದೇ ಸಂದರ್ಭವಿರಬಹುದು. ಚಿಕ್ಕಮಗಳೂರಿನಲ್ಲಿ ಸೇರಿದ್ದ ಸಾವಿರಾರು ಜನರನ್ನು ಬಂಧಿಸಲಾಗಿತ್ತು. ರೈತ, ಕಾರ್ಮಿಕ, ಮಹಿಳಾ, ಅಲ್ಪಸಂಖ್ಯಾತ ಸಂಘಟನೆಗಳು, ಬರಹಗಾರರು ಸೇರಿ 1300 ರಷ್ಟು ಜನ ಬಂಧನಕ್ಕೊಳಗಾಗಿದ್ದೆವು. ಈ ಹೋರಾಟದಲ್ಲಿಯೂ ಕಾರ್ನಾಡರು ನಮ್ಮೊಂದಿಗಿದ್ದರು. ಮುಂದುವರಿದು ಗೌರಿ ಲಂಕೇಶ್ ಹೋರಾಟದ ಮೊದಲ ಹೆಜ್ಜೆ ಇದೇ ಆಗಿತ್ತು. ಒಂದೂವರೆ ದಿನ ಅವರು ಜೈಲಿನಲ್ಲಿದ್ದರು.
ಅದರ ಮುಂದಿನ ವರ್ಷ 2003 ಡಿಸೆಂಬರ್ 29ರಂದು ಕುವೆಂಪು ಹುಟ್ಟಿದ ದಿನದಂದು ಬೃಹತ್ ಸಮಾವೇಶವನ್ನು ಆಯೋಜಿಸಿ ಅಖಿಲ ಭಾರತ ಮಟ್ಟದ ಜಾತ್ಯಾತೀತವಾದಿಗಳನ್ನು ಮತ್ತು ಹೋರಾಟಗಾರರನ್ನು ಒಂದೆಡೆ ಸೇರಿಸಿ ದೊಡ್ಡ ಸಂದೇಶ ನೀಡಲಾಗಿತ್ತು. ಹೀಗೆ ಕಾರ್ನಾಡರು ಮತ್ತು ಗೌರಿ ಲಂಕೇಶರು ಕೋಮು ಸೌಹಾರ್ದ ಹೋರಾಟದಲ್ಲಿ ಹೆಜ್ಜೆ ಹಾಕಿದರು. ಮುಂದಿನ ದಿನಗಳಲ್ಲಿ ನಿಮಗೆಲ್ಲಾ ಗೊತ್ತಿರುವ ಹಾಗೆ ಗೌರಿ ಲಂಕೇಶ್ ರವರು ತುಂಬಾ ಸಕ್ರಿಯರಾಗಿ ಅವರು ಹತ್ಯೆಯಾಗುವ ಹಿಂದಿನ ದಿನದವರೆಗೂ ಅವರು ಸಾಮಾಜಿಕ ಮತ್ತು ಮಾಧ್ಯಮ ಕ್ಷೇತ್ರದಲ್ಲಿಅವರು ಹೇಗೆ ತೊಡಗಿಸಿಕೊಂಡಿದ್ದರೆಂಬ ಅರಿವು ಕರ್ನಾಟಕ ಮತ್ತು ಭಾರತಕ್ಕೆ ಗೊತ್ತಿದೆ.
ಇನ್ನು ಕಾರ್ನಾಡರು ಬಾಬಾಬುಡನ್ ಗಿರಿ ಹೋರಾಟಕ್ಕೆ ಸಂಬಂಧಿಸಿದ ನಾನು ಕಳಿಸುತ್ತಿದ್ದ ಎಲ್ಲಾ ಸಂದೇಶಗಳಿಗೂ ಅವರಿಂದ ಪ್ರತಿಕ್ರಿಯೆ ಇದ್ದೇ ಇರುತ್ತಿತ್ತು. ಈ ಎಲ್ಲಾ ಹೋರಾಟಗಳು ಅಂತಿಮವಾಗಿ ಸುಪ್ರೀಂ ಕೋರ್ಟ್‍ನಲ್ಲಿ ನಮ್ಮ ಪರ ತೀರ್ಪು ಬಂದು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ತೀರ್ಮಾನವಾದಾಗ ಅವರು ದೀರ್ಘವಾದ ಸಂದೇಶವೊಂದನ್ನು ಕಳಿಸಿ ಶುಭಾಶಯವನ್ನು ಕೋರಿ ಹೆಮ್ಮೆ ವ್ಯಕ್ತಪಡಿಸಿದ್ದನ್ನು ಮರೆಯಲಿಕ್ಕೆ ಸಾಧ್ಯವಿಲ್ಲ.

ಆನಂತರ ಬಹುಮುಖ್ಯ ಹೋರಾಟವಾದಂತಹ ಜಾನುವಾರು ಹತ್ಯೆ ನಿಷೇಧ ವಿರೋಧಿ ಒಕ್ಕೂಟವನ್ನು ರಚಿಸಿದ್ದೆವು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಮಸೂದೆ 2012 ಎಂಬ ಇಡೀ ಭಾರತದಲ್ಲಿ ಎಲ್ಲಿಯೂ ಇಲ್ಲದ ಕರಾಳ ಮಸೂದೆಯೊಂದನ್ನು ಜಾರಿಮಾಡಲು ಹೊರಟಿತ್ತು. ಈ ಕಾನೂನನ್ನು ವಿರೋದಿಸಿ ಜಾತ್ಯಾತೀತ ಶಕ್ತಿಗಳು, ಪ್ರಗತಿಪರರು ಮತ್ತು ಮನುಷ್ಯಪರರು ಹಲವಾರು ರೀತಿಯ ಒಂದು ಒಂದೂವರೆ ವರ್ಷಗಳ ಕಾಲ ನಿರಂತರ ಜಾಗೃತಿ ಆಂದೋಲನ, ಹೋರಾಟ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಜರುಗಿಸಲಾಯಿತು. ಇದರಲ್ಲಿ ಗಿರೀಶ್ ಕಾರ್ನಾಡ್‍ರವರು ಕೂಡ ಬಹುಮುಖ್ಯ ಪಾತ್ರ ವಹಿಸಿದ್ದರು. ವಿಶೇಷವಾಗಿ ಎ.ಕೆ ಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಸಾರಸ್ವತ ಲೋಕ ಇದಕ್ಕೆ ಪ್ರತಿಕ್ರಿಯೆ ಕೊಡುವಂತೆ ಮಾಡಲಾಯಿತು. ಮುಖ್ಯವಾಗಿ ಯು.ಆರ್ ಅನಂತಮೂರ್ತಿಯವರು, ಗಿರೀಶ್ ಕಾರ್ನಾಡ್‍ರವರು ಮತ್ತು ದೇವನೂರು ಮಹಾದೇವರವರನ್ನು ಕೇಳಿಕೊಂಡೆವು. ಆಗ ಅವರೆಲ್ಲರೂ ಸೇರಿ ಅಂದರೆ ಕರ್ನಾಟಕದ ಎಲ್ಲಾ ಸಾಹಿತಿಗಳು ಒಂದು ವಿಶಿಷ್ಟ ಪತ್ರಿಕಾಗೋಷ್ಟಿ ನಡೆಸಿದೆವು. ಶಿವಾಜಿನಗರದಲ್ಲಿ ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದೆವು. ಆ ಸಮಾವೇಶದಲ್ಲಿಯೂ ಗಿರೀಶ್ ಕಾರ್ನಾಡ್‍ರವರು ಎಂದಿನಂತೆ ಅವರ ಸಮಯ ಪರಿಪಾಲನೆ ಚಾಚೂತಪ್ಪದೇ ಅನುಸರಿಸುತ್ತಿದ್ದರು. ಸಮಾವೇಶಕ್ಕೆ ಅರ್ಧ ಗಂಟೆ ಮುಂಚೆನೇ ಬಂದು ಕುಳಿತಿದ್ದರು. ನನ್ನ ಆಹಾರ ನನ್ನ ಹಕ್ಕು ಎಂಬುದನ್ನು ಅವರು ಪ್ರತಿಪಾದಿಸಿದರು. ಇದೇ ವಿಷಯಕ್ಕೆ ಟೌನ್‍ಹಾಲ್ ಮುಂದೆ ನಡೆದ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದರು.

ನಾನೀಗಾಗಲೇ ಆರಂಭದಲ್ಲಿ ಹೇಳಿದಂತೆ ಕರ್ನಾಟಕದಲ್ಲಿ ವಿನಾಶಕಾರಿ ವಿದ್ಯಮಾನಗಳು ಸಂಭವಿಸಿದಾಗ, ನಮ್ಮ ಆಹಾರ ಉಡುಗೆ ತೊಡುಗೆಯನ್ನು ಇನ್ನೊಬ್ಬರು ನಿರ್ಧರಿಸುವಂತ, ಮನುಷ್ಯರನ್ನು ಮನುಷ್ಯರೆ ಕೊಲ್ಲುವಂತ, ಏಕಸಂಸ್ಕøತಿಯ ಹೇರಿಕೆಯ ವಿರುದ್ಧ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ, ನಿಖರವಾಗಿ ವಿಚಾರ ಮಂಡಿಸಿ ದನಿ ಎತ್ತುತ್ತಿದ್ದವರು ಗಿರೀಶ್ ಕಾರ್ನಾಡರು. ಈ ನಡುವೆ ಅವರು ನಮ್ಮ ಜೊತೆಗೆ ಯೋಗೇಶ್ ಮಾಸ್ಟರ್ ರವರ ಢುಂಡಿ ಕಾದಂಬರಿ ನಿಷೇಧಕ್ಕೊಳಪಟ್ಟಾಗ ಅವರನ್ನು ಫೋನ್ ಮಾಡಿ ಕರೆದೆ. ಅವರು ಇದು ಫ್ಯಾಸಿಸ್ಟ್ ಪ್ರವೃತ್ತಿ, ಇದನ್ನು ವಿರೋಧಿಸಲು ಬರುತ್ತೇನೆ ಎಂದೇಳಿ ಬಂದರು ಮತ್ತು ನೈತಿಕ ಬೆಂಬಲ ಕೊಟ್ಟಿದ್ದರು.
ಈ 13 ವರ್ಷಗಳ ನನ್ನ ಒಡನಾಟದಲ್ಲಿ ಹತ್ತು ಹಲವಾರು ವಿಚಾರಗಳಗೆ ಸಂಬಂಧಪಟ್ಟಂತೆ ಅವರ ಸಲಹೆಗಳನ್ನು ನಾವು ಪಡೆದುಕೊಳ್ಳುತ್ತಿದ್ದೆವು. ಕೆಲವೊಮ್ಮೆ ಕಾರ್ಯಕ್ರಮಗಳಿಗೆ ಅವರು ಸರಿಯಾಗಿ ಮಾಹಿತಿ ಸಿಗದ ಕಾರಣಕ್ಕಾಗಿ ನಮ್ಮ ಮೇಲೆ ಸಿಡಿಮಿಡಿಗೊಂಡಿದ್ದರು. ಇದಾದ ನಂತರ ನಮ್ಮೆಲ್ಲರಿಗೂ ಗೊತ್ತಿರುವಂತೆ ಗೌರಿಯವರ ಹತ್ಯೆಯಾದಂತ 2017ರ ಸಂದರ್ಭದಲ್ಲಿ ಮಾರನೆಯ ದಿನವೇ ಅವರು ಫೋನ್ ಮಾಡಿ ನೋವನ್ನು ತೋಡಿಕೊಂಡರು. ತನ್ನ ಅನಾರೋಗ್ಯದಿಂದ ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ನೀವು ಮುಂದುವರೆಸಿ ಎಂದು ಧೈರ್ಯ ತುಂಬಿದರು. 2017ರ ಸೆಪ್ಟಂಬರ್ 12ರಂದು ನಾವು ಅಭಿವ್ಯಕ್ತಿ ಹತ್ಯೆ ವಿರೋಧಿಸಿ ನಡೆಸಿದ ಸಮಾವೇಶದಲ್ಲಿ ಭಾಗವಹಿಸಿದರು. ಎಂದಿನಂತೆ ಮೆರವಣಿಗೆ ಬರುವ ಮುಂಚೆಯೇ ತೀವ್ರ ಅನಾರೋಗ್ಯದ ನಡುವೆಯೂ ಬಂದು ಕುಳಿತಿದ್ದರು. ಮೂಗಿಗೆ ಪೈಪ್ ಒಂದನ್ನು ಹಾಕಿಕೊಂಡಿದ್ದರು. ಹೋರಾಟ ಶುರುವಾಗುವುದು ತಡವಾಗುತ್ತದೆ ಎಂದಾಗ ಹೋಗಿ ವಿಶ್ರಾಂತಿ ಪಡೆದು ಮತ್ತೆ ಬಂದು ಸೇರಿಕೊಂಡರು. ನನಗೆ ಆಗ ಅವರ ಸ್ಥಿತಿಯನ್ನು ನೋಡಿ ಬೇಸರ ಅನ್ನಿಸಿತ್ತು. ಇಂತ ಕಷ್ಟದಲ್ಲಿಯೂ ಬಂದು ಭಾಗವಹಿಸಬೇಕೆ ಎನ್ನುತ್ತಿದೆ. ಸಮಾವೇಶ ಮುಗಿದನಂತರ ಮೂರ್ನಾಲ್ಕು ದಿನ ಪ್ರತಿದಿನ ಫೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಹಣಕಾಸು ಸಾಕಾಯ್ತಾ? ಹೋರಾಟವನ್ನು ಮುಂದುವರೆಸೋಣ, ತನಿಖೆ ಸಮರ್ಪಕವಾಗಿ ನಡೆಯುವಂತೆ ಒತ್ತಾಯಿಸಬೇಕೆಂದು ಹುರಿದುಂಬಿಸುತ್ತಿದ್ದರು.

ಹೀಗೆ ಮುಂದುವರೆದು ಕಳೆದ ವರ್ಷ 2018ರಲ್ಲಿ ಗೌರಿಯವರ ಹತ್ಯೆಯಾದ ಒಂದು ವರ್ಷಕ್ಕೆ ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶವನ್ನು ಬೆಂಗಳೂರಿನಲ್ಲಿ ಮಾಡಿದೆವು. ಅದಕ್ಕೆ ನೀವು ಬರಬೇಕು ಎಂದಾಗ ಅವರು ಒಪ್ಪಿಕೊಂಡರು. ಸಮಾವೇಶ ಎರಡು ದಿನ ಇದ್ದಾಗ ತೀವ್ರ ಅನಾರೋಗ್ಯವಿದೆ ಬರಲಾಗುತ್ತಿಲ್ಲ ಎಂದು ಫೋನ್ ಮಾಡಿ ತಿಳಿಸಿದರು. ಅದೇ ಸಂದರ್ಭದಲ್ಲಿ ಅರ್ಬನ್ ನಕ್ಸಲ್ ಹೆಸರಿನಲ್ಲಿ ಮಾನವ ಹಕ್ಕು ಹೋರಾಟಗಾರರನ್ನು, ಸಾಹಿತಿಗಳನ್ನು ಬಂಧಿಸುವ ಪ್ರಕ್ರಿಯೆ ಶುರುವಾಗಿತ್ತು. ಆಗ ಗಿರೀಶ್ ಕಾರ್ನಾಡರು ಫೋನ್ ಮಾಡಿ ಇಲ್ಲ ನಾನು ನಾಳೆ ಕಾರ್ಯಕ್ರವiದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿ ಸಮಯ, ಸ್ಥಳ ಎಲ್ಲಾ ವಿಚಾರಿಸಿಕೊಂಡರು. ಅದರಂತೆ ತಮಗೆಲ್ಲರಿಗೂ ಗೊತ್ತಿರುವಂತೆ ತನ್ನ ಕೊರಳಿಗೆ ಮೀಟೂ ಅರ್ಬನ್ ನಕ್ಸಲ್ ಎಂಬ ಫಲಕವನ್ನು ಹಾಕಿಕೊಂಡು ಬಂದು ಭಾಗವಹಿಸಿದ್ದರು. ಅವರು ಪಾಲ್ಗೊಂಡಿದ್ದ ರೀತಿ, ಆ ಸಮಾವೇಶ ನಡೆದ ಸಂದರ್ಭ ಇಡೀ ಭಾರತದ ಸಾಕ್ಷಿಪ್ರಜ್ಞೆಗಳು ಬಂದು ಭಾಗವಹಿಸಿದ ಕಾರ್ಯಕ್ರಮ ಅದಾಗಿತ್ತು. ಭಾರತದ ಫ್ಯಾಸಿಸ್ಟ್ ರಾಜಕಾರಣ ವನ್ನು ವಿರೋಧಿಸಿ ರೀತಿ ಅಪೂರ್ವವಾಗಿತ್ತು. ಅದರ ಮಾರನೆಗೆ ಮತ್ತೆ ಫೋನ್ ಮಾಡಿ ಹಣಕಾಸಿನ ಪರಿಸ್ಥಿತಿಯ ಬಗ್ಗೆ ವಿಚಾರಿಸಿಕೊಂಡರು. ಆಗವರು ದೊಡ್ಡ ಸುದ್ದಿಯಾಗಿದ್ದರು.

ಈ ರೀತಿ ಕರ್ನಾಟಕದಲ್ಲಿ ಬಹಳ ಧೀಮಂತಿಕೆಯಿಂದ, ಎಲ್ಲಿಯೂ ರಾಜಿಯಾಗದ, ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳಿ ತಮಗೆ ಅನಿಸಿದ ರೀತಿಯಲ್ಲಿ ಬದುಕಿ ನಮ್ಮಿಂದ ದೂರವಾಗಿದ್ದಾರೆ. ತೀವ್ರ ಆರೋಗ್ಯ ಕೆಟ್ಟಾಗ ಅದು ದೇಹಕ್ಕೆ ಮಾತ್ರ ಅನಾರೋಗ್ಯ, ಸಮಾಜದ ಸ್ವಾಸ್ಥ್ಯ ಕೆಟ್ಟಾಗ ಸಮಾಜದಲ್ಲಿ ತಮ್ಮ ಆರೋಗ್ಯಕ್ಕಿಂತ ಸಮಾಜದ ಆರೋಗ್ಯ ಮುಖ್ಯ ಎಂದು ನಂಬಿದ್ದರು. ಯಾವುದೇ ಒಬ್ಬ ಸಾಹಿತಿ ಅಥವಾ ಕಲಾವಿದ ಬಹಳ ಮುಖ್ಯವಾದ ಉತ್ಕøಷ್ಟವಾಗಿ ಗ್ರಂಥವನ್ನು ಬರೆದಿದ್ದರೂ ಅದು ಸಮಾಜದಲ್ಲಿ ಬಹಳ ಮುಖ್ಯ ಅಂಶವೆ. ಆ ಉತ್ಕøಷ್ಟ ಸಾಹಿತ್ಯದ ಜೊತೆಗೆ ಸಮಾಜದ ತಲ್ಲಣಗಳಿಗೆ ಯಾವ ರೀತಿ ಮುಖಾಮುಖಿಯಾಗುತ್ತಾನೆ ಎಂಬುದು ಇನ್ನು ಮುಖ್ಯವಾದುದು. ಅದರಲ್ಲಿಯೂ ಅವರ ಕೊನೆ ಕೊನೆಯ ದಿನಗಳಲ್ಲಿ ಅನಂತಮೂರ್ತಿಯವರು ಇರಬಹುದು, ಕಾರ್ನಾಡರು ಇರಬಹುದು ದೇಶದಲ್ಲಿ ಆವರಿಸುತ್ತಿರುವ ಒಂದು ಫ್ಯಾಸಿಸ್ಟ್ ಬಿರುಗಾಳಿಯ ಕಾರ್ಮೋಡ ಏನಿದೆ ಇದರ ವಿರುದ್ಧದ ದಿಕ್ಕಿನಲ್ಲಿ, ಪ್ರವಾಹದ ವಿರುದ್ಧ ಈಜುವ ಪ್ರಯತ್ನ ಮಾಡಿದರು. ಹಾಗಾಗಿಯೇ ಅವರ ಸಾವನ್ನು ಸಂಭ್ರಮಿಸುವಂತ ಸಮಾಜದಲ್ಲಿ ಮೆರೆಯುತ್ತಿದೆ. ಆ ಕಾರಣಕ್ಕೆ ಗೌರಿಯವರು, ಅನಂತಮೂರ್ತಿಯವರು ಮತ್ತು ಕಾರ್ನಾಡರು ಬಹಳ ಮುಖ್ಯ ಆಗುತ್ತಾರೆ.

ಆ ಅರ್ಥದಲ್ಲಿ ಹೋರಾಟದ ಬೆಂಕಿ ನಮ್ಮ ಎದೆಯಾಳದಲ್ಲಿದ್ದರೆ ಅದನ್ನು ಯಾರಿಂದಲೂ ಅಳಿಸಲಿಕ್ಕೆ ಸಾಧ್ಯವಿಲ್ಲ ಎಂದು ಹೋರಾಟದ ದೀವಿಗೆಯನ್ನು ಕರ್ನಾಟಕದ ಇನ್ನಿತ್ತರ ಸಾಕ್ಷಿಪ್ರಜ್ಞೆಗಳಿಗೆ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಆ ದೀವಿಗೆ ಆರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅನ್ನಿಸುತ್ತಿದೆ. ಹಾಗಾಗಿ ಬಹುತ್ವದ ಕಾವಲನ್ನು ಕಾಯುವ ಇನ್ನು ಅನೇಕ ಜನ ಹುಟ್ಟಿಕೊಳ್ಳುವಂತೆ ಆಗಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾವೇರಿ| ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಆರೋಪಿಗಳ ಬಂಧನ

0
ಹಾವೇರಿ ಜಿಲ್ಲೆಯಲ್ಲಿ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಮಹಿಳೆಯ...