Homeಮುಖಪುಟಗೋಡ್ಸೆ ಆರಾಧನೆ, ಹಿಂದೂ ರಾಷ್ಟ್ರಕ್ಕೆ ಕರೆ; ವಿವಾದಿತ ಶಾಸಕ ರಾಜಾಸಿಂಗ್ ವಿರುದ್ಧ ಸರಣಿ ಪ್ರಕರಣ ದಾಖಲು

ಗೋಡ್ಸೆ ಆರಾಧನೆ, ಹಿಂದೂ ರಾಷ್ಟ್ರಕ್ಕೆ ಕರೆ; ವಿವಾದಿತ ಶಾಸಕ ರಾಜಾಸಿಂಗ್ ವಿರುದ್ಧ ಸರಣಿ ಪ್ರಕರಣ ದಾಖಲು

- Advertisement -
- Advertisement -

ಉಚ್ಚಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಒಂದರ ಹಿಂದೆ ಒಂದರಂತೆ ಪ್ರಕರಣಗಳನ್ನು ಕಳೆದ ಮೂರು ದಿನಗಳಿಂದ ಹೈದರಾಬಾದ್ ನಗರ ಪೊಲೀಸರು ದಾಖಲಿಸಿದ್ದಾರೆ.

ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯ ಭಾವಚಿತ್ರ ಪ್ರದರ್ಶನ ಮತ್ತು ಅಖಂಡ ಭಾರತ ನಿರ್ಮಾಣಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಗೋಶಾಮಹಲ್ ಶಾಸಕನ ವಿರುದ್ಧ ಇತ್ತೀಚಿನ ಪ್ರಕರಣ ದಾಖಲಾಗಿದೆ.

ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಟಿಬೆಟ್ ಎಲ್ಲವೂ ‘ಅಖಂಡಾ ಭಾರತ’ದ ಭಾಗವೆಂದು ಬಲಪಂಥೀಯ ಗುಂಪುಗಳು ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬರುತ್ತಿವೆ.

ಇದರ ನಡುವೆ ಮಾರ್ಚ್ 30 ರ ಗುರುವಾರದ ರಾಮನವಮಿ ಮೆರವಣಿಗೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕಾಗಿ ರಾಜಾ ಸಿಂಗ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

“ರ್‍ಯಾಲಿಯಲ್ಲಿ ನಾಥೂರಾಮ್ ಗೋಡ್ಸೆ‌ಯ ಚಿತ್ರವನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಅಖಂಡ ಭಾರತದ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೇವೆ. ಬೇಗಂ ಬಜಾರ್ ಚತ್ರಿ ಪ್ರದೇಶದಲ್ಲಿ (ಶಾಹ್ ಇನಾಯತ್ ಗುಂಜ್‌ನ ನೆರೆಹೊರೆ) ರಾಜಾ ಸಿಂಗ್ ಭಾಷಣ ಮಾಡಿದ್ದಾರೆ” ಎಂದು ಡಿಸಿಪಿ (ನೈಋತ್ಯ ವಲಯ-ಹೈದರಾಬಾದ್) ಕಿರಣ್ ಖರೆ ತಿಳಿಸಿರುವುದಾಗಿ ‘ಸೌತ್ ಫಸ್ಟ್’ ಜಾಲತಾಣ ವರದಿ ಮಾಡಿದೆ.

ರಾಜಾ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, “ಪೊಲೀಸರು ಅನಗತ್ಯವಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ತೆಲಂಗಾಣ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನಂತರ ರಾಜಾ ಸಿಂಗ್‌ ವಿರುದ್ಧ ದಾಖಲಾದ 10ನೇ ಪ್ರಕರಣ ಇದಾಗಿದೆ.

ಗೋಶಾಮಹಲ್ ಶಾಸಕ ರಾಜಾ ಸಿಂಗ್ ಗುರುವಾರ ಹೈದರಾಬಾದ್‌ನಲ್ಲಿ ರಾಮನವಮಿ ಮೆರವಣಿಗೆಗೆ ಚಾಲನೆ ನೀಡಿದರು. ಭಾರತವನ್ನು ಹಿಂದೂ ರಾಷ್ಟ್ರ (ರಾಷ್ಟ್ರ) ಮಾಡುವುದಾಗಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಜ್ಞೆ ಮಾಡಿದರು.

“ನಾನು, ರಾಜಾ ಸಿಂಗ್, ಭಾರತವನ್ನು ಅಖಂಡ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಈ ಪ್ರಮಾಣ ಮಾಡುತ್ತಿದ್ದೇನೆ. ಭಾರತ ಹಿಂದೂ ರಾಷ್ಟ್ರ ಆಗುವವರೆಗೂ ನಾನು ಸುಮ್ಮನಿರುವುದಿಲ್ಲ” ಎಂದು ತಿಳಿಸಿದರು.

ನಂತರ ರಾಜಾ ಸಿಂಗ್ ಲವ್ ಜಿಹಾದ್ ಬಗ್ಗೆ ಮಾತನಾಡಿದರು. ಲವ್‌ ಜಿಹಾದ್ ಸಂಘಪರಿವಾರ ಕಲ್ಪಿತ ಪಿತೂರಿ ಸಿದ್ಧಾಂತವೆಂದೇ ಗುರುತಿಸಲ್ಪಟ್ಟಿದೆ.

“ನಾನು ಸಂತರನ್ನು ರಕ್ಷಿಸುತ್ತೇನೆ, ಲವ್ ಜಿಹಾದ್‌ಗೆ ಧೈರ್ಯದಿಂದ ಉತ್ತರಿಸುತ್ತೇನೆ, ಗೋಹತ್ಯೆ ನಡೆಯಲು ಬಿಡುವುದಿಲ್ಲ. ನಾನು ಹಿಂದೂ ರಾಷ್ಟ್ರಕ್ಕಾಗಿ ನನ್ನ ಪ್ರಾಣವನ್ನೇ ನೀಡುತ್ತೇನೆ. ಜಾತಿ ಮತ್ತು ರಾಜಕೀಯದ ಆಧಾರದ ಮೇಲೆ (ರಾಷ್ಟ್ರವನ್ನು) ವಿಭಜಿಸುವುದಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನನಗೆ ಒಂದೇ ಒಂದು ಉದ್ದೇಶವಿದೆ: ಅದು ಹಿಂದೂ ರಾಷ್ಟ್ರ” ಎಂದು ಹೇಳಿದರು.

ಇದನ್ನೂ ಓದಿರಿ: ಮರುಕಳಿಸಿದ ದ್ವೇಷ ಭಾಷಣ: ಹೈಕೋರ್ಟ್ ಆದೇಶ ಉಲ್ಲಂಘಿಸಿ ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ರಾಜಾಸಿಂಗ್

ಹಿಂದೂ ರಾಷ್ಟ್ರದಲ್ಲಿ ರಚಿಸಲಾಗುವ ಕಾನೂನಿನ ಕುರಿತು ಮಾತನಾಡಿದ ಅವರು, “ಹಿಂದೂಗಳಿಗೆ ಮಾತ್ರ ಮತದಾನದ ಹಕ್ಕು ನೀಡಲಾಗುವುದು” ಎಂದು ಘೋಷಿಸಿದ್ದಾರೆ.

ಇದರ ನಡುವೆ ನಿರ್ದಿಷ್ಟ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಒಬ್ಬ ವ್ಯಕ್ತಿ ಮತ್ತು ನಗರ ಮೂಲದ ಸುದ್ದಿ ವಾಹಿನಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸರು ದಾಖಲಿಸಿದ್ದಾರೆ.

ವ್ಯಕ್ತಿಯನ್ನು ನಗರ ಮೂಲದ ಸಾಮಾಜಿಕ ಕಾರ್ಯಕರ್ತ ಫೈಸಲ್ ಖಾನ್ ಎಂದು ಗುರುತಿಸಲಾಗಿದೆ. ಅವರು ಎಎಸ್ ನ್ಯೂಸ್ ನೆಟ್‌ವರ್ಕ್ ಸಹಾಯದಿಂದ ರಸ್ತೆಯಲ್ಲಿ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಮತ್ತು ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...