’ದಿ ಬೆಸ್ಟ್ ಆ್ಯಕ್ಟರ್’ ಕಿರುಚಿತ್ರಕ್ಕೆ ಸುವರ್ಣಕಾಲ: ಅಮೆರಿಕ ಫಿಲ್ಮ್‌ ಫೆಸ್ಟಿವಲ್‌ಗೆ ನಾಮನಿರ್ದೇಶನ

ಕನ್ನಡ ಚಿತ್ರರಂಗದಲ್ಲಿ ಈಗ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಕಿರುಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಭಿನ್ನ ಕಥಾಹಂದರ, ನಿರೂಪಣಾ ಶೈಲಿಯ ಮೂಲಕ ಕನ್ನಡದ ಕಿರುಚಿತ್ರ ‘ದಿ ಬೆಸ್ಟ್ ಆ್ಯಕ್ಟರ್’ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಚಿತ್ರದ ಕೀರ್ತಿ ದಿನೇ ದಿನೆ ಹೆಚ್ಚುತ್ತಿದ್ದು, ಈಗ ಮತ್ತೊಂದು ಸಂತಸದ ಸುದ್ದಿ ನೀಡಿದೆ.

’ದಿ ಬೆಸ್ಟ್ ಆ್ಯಕ್ಟರ್’ ಕಿರುಚಿತ್ರ ಅಮೆರಿಕನ್ ಗೋಲ್ಡನ್ ಪಿಕ್ಚರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಚಿತ್ರೋತ್ಸವಕ್ಕೆ ನಾಮ ನಿರ್ದೇಶನಗೊಂಡಿದೆ. ನಾಗರಾಜ್ ಸೋಮಯಾಜಿ ನಿರ್ದೇಶನ ಮತ್ತು ಚಿತ್ರಕಥೆ ಹೊಂದಿರುವ ’ದಿ ಬೆಸ್ಟ್ ಆ್ಯಕ್ಟರ್’ ಕಿರುಚಿತ್ರ ದಿನೇಶ್ ವೈದ್ಯ ಅಂಪರು ಮತ್ತು ಸರ್ವಸ್ವ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ. ಈಗ ಚಿತ್ರವು ಅಮೆರಿಕನ್ ಗೋಲ್ಡನ್ ಪಿಕ್ಚರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ನಾಮ ನಿರ್ದೇಶನಗೊಂಡಿದೆ.

ಈ ಬಗ್ಗೆ ಚಿತ್ರೋತ್ಸವ ಸಂಸ್ಥೆಯು ಸರ್ವಸ್ವ ನಿರ್ಮಾಣ ಸಂಸ್ಥೆಗೆ ಪತ್ರ ಬರೆದು ಅಕ್ಟೋಬರ್‌ 2019ರ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಬಗ್ಗೆ ಮಾಹಿತಿ ನೀಡಿದೆ. ಇದು ಚಿತ್ರಕ್ಕೆ ಮತ್ತೊಂದು ಸುವರ್ಣಗರಿ ಮೂಡಿಸಿದೆ.

ಕಳೆದ ಜುಲೈನಲ್ಲಿ ’ದಿ ಬೆಸ್ಟ್ ಆ್ಯಕ್ಟರ್’ ಕಿರುಚಿತ್ರ ಬೆಂಗಳೂರಿನ ಬನಶಂಕರಿಯ ಸುಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡಿತ್ತು. ಚಿತ್ರದಲ್ಲಿ ‘ಕಟಕ’ ಪೋಷಕ ಪಾತ್ರದಲ್ಲಿ ಗಮನ ಸೆಳೆದಿದ್ದ ಮಾಧವ ಕಾರ್ಕಡ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾಧವ್‌ ಅವರ ಸ್ವಾಭಾವಿಕ ಎನಿಸುವ ನಟನೆ ಆಪ್ತವಾಗಿದ್ದು, ಚಿತ್ರದ ಯಶಸ್ಸಿಗೆ ಪೂರಕವಾಗಿದೆ ಅನ್ನೋದು ನಿರ್ದೇಶಕರ ಮಾತು. ಶ್ರೀಧರ್ ಬನವಾಸಿಯವರು ಕಥೆ ಬರೆದಿದ್ದು, ಭಾಸ್ಕರ್ ಬಂಜೆರಾ ಅವರ ಸಂಭಾಷಣೆಯಿದೆ. ಅರ್ಜುನ್ ರಾಮು ಅವರ ಹಿನ್ನೆಲೆ ಸಂಗೀತ ಮತ್ತು ಬಿ.ಎಸ್ ಸಂಕೇತ್ ಅವರ ಸಂಕಲನ ಚಿತ್ರಕ್ಕಿದೆ.

ಉತ್ತಮ ಕಥಾಹಂದರದ ಮೂಲಕ ಗಮನ ಸೆಳೆದಿರುವ ’ದಿ ಬೆಸ್ಟ್ ಆ್ಯಕ್ಟರ್’ ಕೆಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ದೆಹಲಿಯಲ್ಲಿ ನಡೆದ 10 ನೇ ದಾದಾಪಾಲ್ಕೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎಸ್.ಕೆ ರಾವ್ ಅವರು ಚಿತ್ರದ ಛಾಯಾಗ್ರಹಣಕ್ಕಾಗಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾದರು. ಕೋಲ್ಕತ್ತಾದಲ್ಲಿ ನಡೆದ ಎನ್. ಇಜೆಡ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಲಭಿಸಿದೆ. ರೋಮ್ ಇಂಡಿಪೆಂಡೆಂಟ್ ಪ್ರಿಸ್ಮಾ ಅವಾರ್ಡ್, ಆರ್ಫ್ ಬರ್ಲಿನ್ ಇಂಟರ್ ನ್ಯಾಷನಲ್ ಅವಾರ್ಡ್ ಕೂಡ ಲಭಿಸಿದೆ.

’ದಿ ಬೆಸ್ಟ್ ಆ್ಯಕ್ಟರ್’ ಕಿರುಚಿತ್ರ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಬೆಳಗಾವಿಯ ಮೂವಿಂಗ್ ಪಿಕ್ಚರ್ಸ್ ಫೆಸ್ಟಿವಲ್, ಕೋಲ್ಕತ್ತದಲ್ಲಿ ನಡೆದ ಎನ್‌.ಇಜೆಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಜೋಧಪುರದ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮತ್ತು ಲಂಡನ್ನಿನ ಇಂಟರ್ ನ್ಯಾಷನಲ್ ಫಿಲ್ಮ್ ಮೇಕರ್ ಫೆಸ್ಟಿವಲ್‌ಗಳಲ್ಲಿ ಪ್ರದರ್ಶನಗೊಂಡು ಸೈ ಎನಿಸಿಕೊಂಡಿದೆ.

ಈಗ ಈ ಸಾಲಿಗೆ ಅಮೆರಿಕನ್ ಗೋಲ್ಡನ್ ಪಿಕ್ಚರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸಹ ಸೇರಿಕೊಂಡಿದೆ.
ನಾಗರಾಜ್ ಸೋಮಯಾಜಿಯವರ ’ದಿ ಬೆಸ್ಟ್ ಆ್ಯಕ್ಟರ’ ಚಿತ್ರತಂಡವೇ ಪುಕ್ಸಟ್ಟೆ ಲೈಫು ಎಂಬ ವಿಭಿನ್ನ ಶೀರ್ಷಿಕೆಯ ಕಥೆಯನ್ನು ಹೊತ್ತು ತರುತ್ತಿದೆ. ಚಿತ್ರೀಕರಣವು ಈಗ ಮುಕ್ತಾಯವಾಗಿದ್ದು, ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಪ್ರಾರಂಭದಲ್ಲಿ ಸಂಕ್ರಾಂತಿಯ ವೇಳೆಗೆ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ನಿರ್ಧರಿಸಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here