Homeಮುಖಪುಟದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ಮುಂದಾದ ಸರ್ಕಾರ?

ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ಮುಂದಾದ ಸರ್ಕಾರ?

ಎನ್‌ಪಿಆರ್ ಹಿಂದಿದೆಯಾ ಎನ್ಅರ್‌ಸಿ ಹುನ್ನಾರ? ಸರ್ಕಾರದ ಮುಂದೆ ಗಂಭೀರ ಪ್ರಶ್ನೆ ಎತ್ತಿದ ಟಿಎಂಸಿ ಸಂಸದ

- Advertisement -
- Advertisement -

ಜನವರಿ 8, 2019ರಂದು ಲೋಕಸಭೆಯಲ್ಲಿ ಅಂಗೀಕಾರಗೊಂಡ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ನಿಯಮಗಳನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿದೆ. ಆ ಬಳಿಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಧರ್ಮೀಯರಿಗೆ ಭಾರತೀಯ ಪೌರತ್ವ ಕೊಡುವ ಪ್ರಕ್ರಿಯೆ ನಡೆಯುತ್ತಿದೆ.

ಮುಸ್ಲಿಮರನ್ನು ಕೈ ಬಿಟ್ಟು ಕಾಯ್ದೆಗೆ ತಿದ್ದುಪಡಿ ತಂದಿರುವುದರ ವಿರುದ್ಧ ಕೇರಳ ರಾಜ್ಯ ಸರ್ಕಾರ, ಮುಸ್ಲಿಂ ಲೀಗ್ ಸೇರಿದಂತೆ ನೂರಾರು ಮಂದಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಕೈಗೆತ್ತಿಕೊಂಡಿರುವ ಕೋರ್ಟ್ ಕೇಂದ್ರದ ಪ್ರತಿಕ್ರಿಯೆ ಕೇಳಿದೆ.

ಸಿಎಎ ಮಸೂದೆ ಲೋಕಸಭೆಯಲ್ಲಿ ಪರಿಚಯಿಸಿದ್ದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ ಸಿಎಎ ಬಳಿಕ ದೇಶದಾದ್ಯಂತ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಜಾರಿಗೊಳಿಸುವುದಾಗಿ ಹೇಳಿದ್ದರು. ಆ ಮಾತು ಈಗ ನಿಜವಾಗುವ ಆತಂಕ ಎದುರಾಗಿದೆ.

ಸಿಎಎ ಜಾರಿಗೊಳಿಸುವಾಗ, ಇದು ಯಾವುದೇ ಭಾರತೀಯರ ಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದು ಸರ್ಕಾರ ಹೇಳಿತ್ತು. ಈಗಲೂ ಅದನ್ನೇ ಹೇಳುತ್ತಿದೆ. ಆದರೆ, ಈಗ ಸಿಎಎ ಬಳಿಕ ಸರ್ಕಾರ ಎನ್‌ಆರ್‌ಸಿ ಜಾರಿಗೊಳಿಸುವ ಸಾಧ್ಯತೆಯಿದ್ದು, ಒಂದು ವೇಳೆ ಎನ್‌ಆರ್‌ಸಿ ಜಾರಿಯಾದರೆ ಕೋಟ್ಯಾಂತರ ಭಾರತೀಯ ಪೌರತ್ವಕ್ಕೆ ಕುತ್ತು ಬರುವುದರಲ್ಲಿ ಅನುಮಾನವಿಲ್ಲ.

ಈ ಕುರಿತು ತೃಣಮೂಲ ಕಾಂಗ್ರೆಸ್‌ ಪಕ್ಷ (ಟಿಎಂಸಿ)ಯ ರಾಜ್ಯಸಭೆ ಸಂಸದ ಸಾಕೇತ್ ಗೋಖಲೆ ಕೆಲವೊಂದು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಗಂಭೀರ ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಸಾಕೇತ್ ಗೋಖಲೆ ಪ್ರಕಾರ, ಭಾರತದಲ್ಲಿ 10 ವರ್ಷಗಳಿಗೊಮ್ಮೆ ಜನ ಗಣತಿ ನಡೆಯುತ್ತದೆ. ಕೊನೆಯದಾಗಿ 2011ರಲ್ಲಿ ಗಣತಿ ನಡೆದಿದೆ. ಆ ಬಳಿಕ 2021ರಲ್ಲಿ ಗಣತಿ ನಡೆಯಬೇಕಿತ್ತು. ಆದರೆ, ಕೋವಿಡ್ ನೆಪ ಹೇಳಿ ಸರ್ಕಾರ ಗಣತಿ ನಡೆಸಿಲ್ಲ.

ಪ್ರಸ್ತುತ ಲೋಕಸಭೆ ಚುನಾವಣೆಗೆ ದೇಶ ಸಿದ್ದವಾಗಿ ನಿಂತಿದೆ. ಚುನಾವಣೆ ಮುಗಿದ ಬಳಿಕ ಮತ್ತೊಮ್ಮೆ ಬಿಜೆಪಿ ಸರ್ಕಾರ ಬಂದರೆ ಎನ್‌ಆರ್‌ಸಿ ಮೂಲಕವೇ ಜನಗಣತಿ ನಡೆಸುವುದು ಸರ್ಕಾರದ ಹುನ್ನಾರ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಗೋಖಲೆ ಪ್ರಕಾರ, ಗೃಹ ಇಲಾಖೆಯ ಅಧೀನದ ಕೇಂದ್ರ ಸರ್ಕಾರದ ಜನಗಣತಿಯ ವೆಬ್‌ಸೈಟ್‌ ತೆರೆದರೆ ಅಲ್ಲಿ ‘National Population Register’ (NPR) ಎಂದು ಕಾಣುತ್ತದೆ. ಈ ಎನ್‌ಪಿಆರ್ ಅನ್ನು ‘ಪೌರತ್ವದ ನಿಯಮ 3 (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು-2003’ ಅಡಿಯಲ್ಲಿ ಮಾಡಲಾಗಿದೆ. ನಿಯಮಗಳ ಪ್ರಕಾರ, ಎನ್‌ಪಿಆರ್‌ ಮತ್ತು ಎನ್‌ಆರ್‌ಸಿಗೆ ವ್ಯತ್ಯಾಸವಿಲ್ಲ.

ಹಾಗಾಗಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾದರೆ ದೇಶದಾದ್ಯಂತ ಎನ್‌ಆರ್‌ಸಿ ಜಾರಿಯಾಗುವುದು ಖಂಡಿತ. ಇಲ್ಲದಿದ್ದರೆ ವೆಬ್‌ಸೈಟ್‌ನಲ್ಲಿರುವ ಎನ್‌ಪಿಆರ್ ಎಂಬುವುದನ್ನು ಯಾಕೆ ಸರ್ಕಾರ ತೆಗೆದು ಹಾಕಿಲ್ಲ?. ಮುಂದಿನ ಗಣತಿಯನ್ನು ಎನ್‌ಪಿಆರ್ ಮೂಲಕ ಮಾಡುತ್ತೇವೆ ಎಂದು ಪ್ರಧಾನಿ ಮೋದಿಯಾಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಯಾಕೆ ಯಾವುದೇ ಮಾಹಿತಿ ನೀಡಿಲ್ಲ? ಎಂದು ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

ಸಿಎಎ ಕಾಯ್ದೆ ಅಂಗೀಕಾರಗೊಂಡಾಗ ದೇಶದಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಪೌರತ್ವಕ್ಕೆ ಕುತ್ತು ಬರುವ ಆತಂಕ ವ್ಯಕ್ತಪಡಿಸಿದ ಕೋಟ್ಯಾಂತರ ಮುಸ್ಲಿಮರು ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಹಾಗಾಗಿ, ತಕ್ಷಣಕ್ಕೆ ಕಾಯ್ದೆ ಜಾರಿಗೊಳಿಸದ ಕೇಂದ್ರ ಸರ್ಕಾರ, ಚುನಾವಣೆ ಹತ್ತಿರ ಬರುವಾಗ ಕಾಯ್ದೆಯ ನಿಯಮಗಳನ್ನು ಪ್ರಕಟಿಸಿದೆ.

ಎನ್‌ಪಿಆರ್ ಅಂದರೆ ಏನು? 

ಜನಗಣತಿಯ ವೆಬ್‌ಸೈಟ್‌ನಲ್ಲಿ ಹೇಳಿದಂತೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಸಾಮಾನ್ಯವಾಗಿ ಹಳ್ಳಿ ಅಥವಾ ಗ್ರಾಮೀಣ ಪ್ರದೇಶ, ಪಟ್ಟಣ ಅಥವಾ ವಾರ್ಡ್, ಪಟ್ಟಣ ಅಥವಾ ನಗರ ಪ್ರದೇಶದ ವಾರ್ಡ್‌ನೊಳಗೆ ಗುರುತಿಸಲಾದ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗಳ ವಿವರಗಳನ್ನು ಒಳಗೊಂಡಿರುವ ನೋಂದಣಿಯಾಗಿದೆ. ಎನ್‌ಪಿಆರ್ ಅನ್ನು ಮೊದಲ ಬಾರಿಗೆ 2010 ರಲ್ಲಿ ಸಿದ್ಧಪಡಿಸಲಾಯಿತು. ಇದನ್ನು 1995ರ ಪೌರತ್ವ ಕಾಯ್ದೆಯಡಿ ಬರುವ ನಿಯಮ 3 ರ ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು- 2003, ಉಪ ನಿಯಮ (4) ಅಡಿ 2015ರಲ್ಲಿ ನವೀಕರಿಸಲಾಗಿದೆ. ನವೀಕರಣದಡಿ ಮುಂದಿನ ಗಣತಿಯಲ್ಲಿ ಜನನ, ಮರಣ, ವಲಸೆಯ ಬದಲಾವಣೆಗಳನ್ನು ಅಪ್ಡೇಟ್ ಮಾಡಲಾಗುತ್ತದೆ. ದೇಶದ ಸಾಮಾನ್ಯ ನಿವಾಸಿಗಳ ಸಮಗ್ರ ಡೇಟಾಬೇಸ್ ಅನ್ನು ರಚಿಸುವುದು ಎನ್‌ಪಿಆರ್‌ನ ಉದ್ದೇಶವಾಗಿದೆ. ಎನ್‌ಪಿಆರ್ ಅಡಿ ಗಣತಿ ಮಾಡುವಾಗ ಯಾವುದೇ ದಾಖಲೆ ಸಂಗ್ರಹಿಸುವುದಿಲ್ಲ.

ಇದನ್ನೂ ಓದಿ : ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸಿ ವಿಶ್ವ ಸಂಸ್ಥೆಯಲ್ಲಿ ನಿರ್ಣಯ ಅಂಗೀಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...