ಹಾವೇರಿಯಲ್ಲಿ ಬ್ಯಾನರ್ ವಿಚಾರಕ್ಕೆ ಪೌರ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಹೊರತುಪಡಿಸಿ ಉಳಿದವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾದ ಎಫ್‌ಐಆರ್ ಪ್ರತಿ ಪ್ರಕಾರ, ಟ್ರಾನ್ಸ್‌ಜೆಂಡರ್ ಅಕ್ಷತಾ, ಶಾಂತು, ಸುಬ್ಬು, ಅರ್ಜುನ, ಪ್ರಥಮ್, ಶಿವು ಕನಕಪುರ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ. ಅಕ್ಷತಾ ಅವರನ್ನು ಪ್ರಮುಖ ಆರೋಪಿಯನ್ನಾಗಿ ಗುರುತಿಸಲಾಗಿದೆ.
ಪೀರಪ್ಪ ಶಿರಬಾಡಗಿ ಎಂಬವರು ನೀಡಿದ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೌರ ಕಾರ್ಮಿಕರಾದ ಪೀರಪ್ಪ ಮತ್ತು ಕಾಂತೇಶ್ ಪ್ರಕರಣದ ಸಂತ್ರಸ್ತರು ಎನ್ನಲಾಗಿದೆ.
ಮತ್ತೊಂದು ದೂರನ್ನು ಸುರೇಶ್ ಎಂಬವರು ದಾಖಲಿಸಿದ್ದಾರೆ. ಈ ದೂರು ಆಧರಿಸಿ ಸುಮಾರು 10 ಜನರ ವಿರುದ್ದ ಎಫ್‌ಐಆರ್ ದಾಖಲಿಸಿರುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿರುವ ಸುರೇಶ್ ಅವರ ಪತ್ನಿ”ಶಾಂತು ಎಂಬಾತನ ಜನ್ಮದಿನದ ಹಿನ್ನೆಲೆ ಬ್ಯಾನರ್ ಹಾಕಲಾಗಿತ್ತು. ಪೌರ ಕಾರ್ಮಿಕರಾದ ಸುರೇಶ್ ಮತ್ತು ಪೀರಪ್ಪ ಪೌರಾಯುಕ್ತರ ಸೂಚನೆ ಮೇರೆಗೆ ಬ್ಯಾನರ್ ತೆರವುಗೊಳಿಸಿದ್ದರು. ಈ ಕಾರಣಕ್ಕೆ ಆರೋಪಿ ಅಕ್ಷತಾ ನಗರಸಭೆಗೆ ತೆರಳಿ ಪೌರಾಯುಕ್ತರ ಜೊತೆ ವಾಗ್ವಾದ ನಡೆಸಿದ್ದರು. ಈ ವೇಳೆ ಪೌರ ಕಾರ್ಮಿಕರೆಲ್ಲ ಪೌರಾಯುಕ್ತರ ಬೆಂಬಲಕ್ಕೆ ನಿಂತು ಅಕ್ಷತಾ ಜೊತೆ ವಾಗ್ವಾದ ನಡೆಸಿದ್ದರು ಎಂದು ತಿಳಿಸಿದ್ದಾರೆ.
ಮುಂದುವರಿದು, ಶನಿವಾರ ನಗರಸಭೆ ಸಮೀಪದ ಬಾರ್ ಒಂದರಲ್ಲಿ ಸುರೇಶ್ ಮತ್ತು ಪೀರಪ್ಪ ಕುಳಿತಿದ್ದಾಗ, ಏಕಾಏಕಿ ನುಗ್ಗಿದ ಕೆಲವರು ಪೀರಪ್ಪ ಮೇಲೆ ಮಾರಣಾಂತಿಕ ಹಲ್ಲೆ (ವೈರಲ್ ವಿಡಿಯೋದಲ್ಲಿ ಇರುವಂತೆ) ನಡೆಸಿದ್ದಾರೆ. ಅದನ್ನು ನೋಡಿ ಸುರೇಶ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗೆ ಮೂರ್ಚೆರೋಗ ಇತ್ತು. ಪ್ರಸ್ತುತ ಅವರು ಮನೆಯಲ್ಲೇ ಇದ್ದು, ಆಸ್ಪತ್ರೆಗೆ ಹೋಗಿ ಬರುವ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಸುರೇಶ್ ಮೇಲೆ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುರೇಶ್ ಅವರ ಸಂಬಂಧಿ ಗುರುರಾಜ್ ಎಂಬವರು ಮಾತನಾಡಿ, “ಬ್ಯಾನರ್ ತೆರವುಗೊಳಿಸಿದ ಕಾರಣಕ್ಕೇ ಹಲ್ಲೆ ನಡೆದಿದೆ. ಸುರೇಶ್ ಪೌರ ಕಾರ್ಮಿಕರಾಗಿ ಅವರ ಕೆಲಸ ಮಾಡಿದ್ದಾರೆ. ಆರೋಪಿಗಳಿಗೂ ಅವರಿಗೂ ಯಾವುದೇ ಹಳೆ ದ್ವೇಷ ಇರಲಿಲ್ಲ ಎಂದಿದ್ದಾರೆ. ಆರೋಪಿ ಅಕ್ಷತಾ ಬಗ್ಗೆ ವಿವರಿಸಿದಾಗ, “ಅವರು ಇಲ್ಲೇ ಓಡಾಡಿಕೊಂಡು ಇದ್ದರು. ಇದುವರೆಗೆ ಈ ರೀತಿ ಗೂಂಡಾಗಿರಿ ಮಾಡಿರುವುದು ನಮಗೆ ಗೊತ್ತಿಲ್ಲ. ಇದೇ ಮೊದಲ ಬಾರಿಗೆ ಹೀಗಾಗಿದೆ” ಎಂದಿದ್ದಾರೆ.
ಆಗಿದ್ದೇನು?
ಮಾಧ್ಯಮ ವರದಿಗಳ ಪ್ರಕಾರ, “ಕೊರವರ ಓಣಿಯ ವೃತ್ತದಲ್ಲಿ ಅಕ್ರಮವಾಗಿ ಆರೋಪಿ ಶಾಂತು ಜನ್ಮದಿನದ ಶುಭಾಷಯ ಕೋರುವ ಬ್ಯಾನರ್ ಹಾಕಲಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಪೌರಾಯುಕ್ತ ಗಂಗಾಧರ ಬೆಲ್ಲದ ಅವರು ಬ್ಯಾನರ್ ತೆರವುಗೊಳಿಸಲು ಸಿಬ್ಬಂದಿ ರಂಗಪ್ಪ ಹೆರ್ಕಲ್ ಅವರಿಗೆ ಸೂಚಿಸಿದ್ದರು. ಬ್ಯಾನರ್ ತೆರವುಗೊಳಿಸಲು ರಂಗಪ್ಪ ಅವರು ಸ್ಥಳಕ್ಕೆ ಹೋದಾಗ ಆರೋಪಿ ಕೆ.ಸಿ.ಅಕ್ಷತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ, ರಂಗಪ್ಪ ಸ್ಥಳದಿಂದ ಹೊರಟು ನಗರಸಭೆಗೆ ಬಂದಿದ್ದರು.
ಕ್ರಿಕೆಟ್ ಆಟವಾಡುತ್ತಿದ್ದ ಕೆಲ ಆರೋಪಿಗಳು, ಇತರೆ ಆರೋಪಿಗಳ ಜೊತೆ ಸೇರಿ ಬ್ಯಾಟ್‌ಗಳ ಸಮೇತ ನಗರಸಭೆ ಆವರಣಕ್ಕೆ ನುಗ್ಗಿದ್ದರು. ಸ್ಥಳದಲ್ಲಿದ್ದ ಪೌರಕಾರ್ಮಿಕರ ಜೊತೆ ಜಗಳ ತೆಗೆದಿದ್ದರು. ಗುತ್ತಿಗೆ ಪೌರಕಾರ್ಮಿಕರಾದ ಪೀರಪ್ಪ ಹಾಗೂ ಕಾಂತೇಶ್ ಅವರಿಗೆ ಹೊಡೆದು ಜೀವ ಬೆದರಿಕೆ ಹಾಕಿದ್ದರು.
ಪ್ರತಿಭಟನೆ
ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನ ಬಂಧಿಸಬೇಕು ಎಂದು ಒತ್ತಾಯಿಸಿ ನಗರಸಭೆಯ ಪೌರಕಾರ್ಮಿಕರು ಹಾವೇರಿ ಟೌನ್ ಪೊಲೀಸ್ ಠಾಣೆ ಎದುರು ಶನಿವಾರ ಪ್ರತಿಭಟನೆ ನಡೆಸಿದ್ದರು.
ನಗರಸಭೆ ಎದುರು ನಡೆದ ಗಲಾಟೆ ಸಂಬಂಧ ತಮ್ಮ ವಿರುದ್ಧ ದೂರು ನೀಡಿದರೆಂಬ ಕಾರಣಕ್ಕೆ ಪೌರ ಕಾರ್ಮಿಕರ ಮೇಲೆ ಶನಿವಾರ ಪುನಃ ಹಲ್ಲೆ ಮಾಡಲಾಗಿದ್ದು ಈ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.
ವಿಧಾನಸೌಧ ಮುಂಭಾಗ ಆರ್‌ಸಿಬಿ ತಂಡಕ್ಕೆ ಸನ್ಮಾನ: ಅಪಾಯದ ಮುನ್ನೆಚ್ಚರಿಕೆ ನೀಡಿತ್ತು ಪೊಲೀಸ್ ಇಲಾಖೆ; ವರದಿ