Homeಕರ್ನಾಟಕವೃದ್ಧ ಯಡಿಯೂರಪ್ಪನವರಿಗೆ ಕೈ ಕೊಡುತ್ತಿವೆ ಈ ಮೂರು ಸಂಗತಿಗಳು

ವೃದ್ಧ ಯಡಿಯೂರಪ್ಪನವರಿಗೆ ಕೈ ಕೊಡುತ್ತಿವೆ ಈ ಮೂರು ಸಂಗತಿಗಳು

ಬಿಎಸ್‍ವೈ ಬಹಳ ದಿನಗಳ ಕಾಲ ಸಿಎಂ ಆಗಿ ಮುಂದುವರೆಯುವುದು ಅಸಾಧ್ಯ. ಅದಕ್ಕೆ ಇರುವ ಹೊರಗಿನ ಕಾರಣಗಳಿಗಿಂತ ಸಿಎಂ ಸ್ಥಾನಕ್ಕೆ ಅಗತ್ಯವಿರುವ ಷಾರ್ಪ್‍ನೆಸ್ ಅವರು ಕಳೆದುಕೊಂಡಿರುವುದೇ ಪ್ರಮುಖ ಕಾರಣವಾಗಿದೆ.

- Advertisement -
- Advertisement -

ಯಡಿಯೂರಪ್ಪನವರ ವಿರುದ್ಧದ ಕಾರಸ್ತಾನವಂತೂ ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ನಡೆದ ಕತ್ತಿ ಔತಣಕೂಟವು ಅದರಲ್ಲಿ ಒಂದು ಭಾಗ ಅಷ್ಟೇ. ಅದಕ್ಕಿಂತಲೂ ದೊಡ್ಡ ಏಟು ಕೊಡಲು ಹೊರಟಿರುವುದು ಮೀಡಿಯಾಗಳ ಮೂಲಕ. ದಿನನಿತ್ಯ ಮೋದಿ ಭಜನೆ ಮಾತ್ರವಲ್ಲದೇ, ಬಿಜೆಪಿ ಪರ ಹಾಗೂ ಆರೆಸ್ಸೆಸ್‍ನ ದ್ವೇಷಪೂರಿತ ಅಜೆಂಡಾಕ್ಕೆ ಗಾಳಿ ಹಾಕುತ್ತಲೇ ಇರುವ ಮೀಡಿಯಾಗಳು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ವಿರುದ್ಧ ಜಿದ್ದಿಗೆ ಬಿದ್ದಂತೆ ಸ್ಟೋರಿ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಮನೆಯಲ್ಲೇ ಇರುವುದನ್ನು ಖಚಿತಪಡಿಸಿಕೊಂಡು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಮುಖ್ಯವಾದ ಸಂಗತಿಗಳನ್ನು ತಲುಪಿಸಲು ಧವಳಗಿರಿಗೆ ಬರುತ್ತಾರೆ. ಅಧಿಕಾರಿಯ ಮಟ್ಟಿಗೆ ಅದು ಸಿಎಂ ಕಿವಿಗೆ ಹಾಕಲೇಬೇಕಾದ ವಿಚಾರವಾಗಿತ್ತು. ಎದುರಿಗೆ ಬಂದು ಕೂತ ಅಧಿಕಾರಿಯು ಮೂರ್ನಾಲ್ಕು ನಿಮಿಷಗಳಲ್ಲಿ ಮುಖ್ಯವಾದ ಸಂಗತಿಗಳನ್ನು ಹೇಳುತ್ತಾರೆ. ಯಡಿಯೂರಪ್ಪನವರು ‘ಸರಿ, ಮುಗೀತಾ?’ ಎಂದು ಸೌಮ್ಯವಾಗಿಯೇ ಕೇಳಿದಾಗ, ಅಧಿಕಾರಿ ‘ಯಸ್ ಸರ್’ ಎಂದು ಹೇಳಿ ಸಿಎಂ ಪ್ರತಿಕ್ರಿಯೆಗಾಗಿ ಕಾಯುತ್ತಾರೆ. ಸಿಎಂ ಎದ್ದು ನಿಂತು ‘ಆಯ್ತು’ ಎಂದು ಬಾಗಿಲಿನ ಕಡೆ ನಡೆದುಬಿಡುತ್ತಾರೆ. ಅಷ್ಟು ಗಹನವಾದ ಸಂಗತಿಯ ಕುರಿತು ಸಿಎಂ ಒಂದೇ ಒಂದು ಪ್ರತಿಕ್ರಿಯೆ ಕೊಡದೇ, ಸೂಚನೆಗಳನ್ನು ನೀಡದೇ, ಕನಿಷ್ಠ ನಂತರ ಮಾತಾಡ್ತೀನಿ ಎಂತಲೂ ಹೇಳದೇ ಹೇಗೆ ಹೋಗುತ್ತಾರೆ ಎಂದು ಇವರಿಗೆ ಆಶ್ಚರ್ಯ. ತಾವು ವರದಿಯನ್ನು ಹೇಳುವಾಗಲೂ ಯಡಿಯೂರಪ್ಪನವರು ದೂರದಲ್ಲಿ ಏನನ್ನೋ ನಿರ್ಭಾವುಕವಾಗಿ ನೋಡುತ್ತಿದ್ದುದನ್ನು ಅಧಿಕಾರಿ ಗಮನಿಸಿದ್ದರು.

ಸಿದ್ದರಾಮಯ್ಯನವರೂ ಹಾಗೆಯೇ. ಮೂಡ್ ಚೆನ್ನಾಗಿದ್ದರೆ ಮಾತುಗಳನ್ನು ಕೇಳಿಕೊಂಡು ಮಧ್ಯೆ ತಮಾಷೆ ಮಾಡುತ್ತಾ, ಅದಕ್ಕೆ ತಮ್ಮದೇ ಪ್ರತಿಕ್ರಿಯೆಗಳನ್ನು ನೀಡುತ್ತಾ ಕೇಳಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಅಲ್ಲಿ ಕೂತಿರುವವರಲ್ಲಿ ಒಬ್ಬರ ಮುಖ ನೋಡುತ್ತಾ ಇದ್ದುಬಿಡುತ್ತಾರೆ. ಯಾರ ಮುಖ ನೋಡುತ್ತಿರುತ್ತಾರೋ ಅವರಿಗೂ ತನ್ನನ್ನು ನೋಡುತ್ತಿದ್ದಾರಾ ಇಲ್ಲವಾ ಡೌಟು. ವರದಿ ಒಪ್ಪಿಸುತ್ತಿರುವವರಿಗೂ ತಾನು ಮಾತು ಮುಂದುವರೆಸಲಾ ಬೇಡವಾ ಅಂತ ಅನುಮಾನ. ಆದರೆ ಅವರ ಜೊತೆ ಕೆಲಸ ಮಾಡಿರುವ ಎಲ್ಲರಿಗೂ ಖಚಿತವಾಗಿರುವುದೆಂದರೆ, ಈ ವರದಿಯ ಪ್ರತಿ ಪದವೂ ಅವರಿಗೆ ತಲುಪಿರುತ್ತದೆ. ಏಕೆಂದರೆ ಈಗ ಅನ್ಯಮನಸ್ಕರಾಗಿ ಕೇಳುತ್ತಿದ್ದಂತಹ ಸಿದ್ದು ಮುಂದೊಂದು ದಿನ ಅದರಲ್ಲಿನ ಅತೀ ಸಣ್ಣ ವಿವರವನ್ನೂ ಎತ್ತಿಕೊಂಡು ಮಾತಾಡುತ್ತಾರೆ. ಹಾಗಾಗಿ ಕೆಲವು ಸಂದರ್ಭಗಳಲ್ಲಿ ತನ್ನೊಂದಿಗೆ ಮಾತನಾಡುವವರ ಮುಖವನ್ನು ನೋಡದೇ ಎತ್ತಲೋ ನೋಡುವುದು ಕೇವಲ ಮ್ಯಾನರಿಸಂ ಅಥವಾ ಉದ್ದೇಶಪೂರ್ವಕ ನಡವಳಿಕೆಯೇ ಹೊರತು ಅನ್ಯಮನಸ್ಕತೆಯಲ್ಲವೆಂದು ಗೊತ್ತಾಗಿರುವ ಎಲ್ಲರೂ ಗಂಭೀರವಾಗಿಯೇ ವರದಿ ಒಪ್ಪಿಸುತ್ತಾರೆ.

ಚುರುಕು ಯಡಿಯೂರಪ್ಪನವರ ಮೊದಲ ಇನ್ನಿಂಗ್ಸ್

ಆದರೆ ಯಡಿಯೂರಪ್ಪನವರ ವಿಚಾರದಲ್ಲಿ ಆಗುತ್ತಿರುವುದೇ ಬೇರೆ. ಮೊದಲ ಸಾರಿ ಮುಖ್ಯಮಂತ್ರಿಯಾಗಿದ್ದಾಗ ಅವರು ಹೀಗಿರಲಿಲ್ಲ. ನೇರವಾಗಿ ಎಲ್ಲಕ್ಕೂ ಪ್ರತಿಕ್ರಿಯಿಸುತ್ತಿದ್ದರು. ಖಚಿತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. ಇಡೀ ಆಡಳಿತ ಯಂತ್ರದ ಮೇಲೆ ಅವರದ್ದೇ ನೇರ ಹತೋಟಿ ಇರುತ್ತಿತ್ತು. ಅವರದ್ದೊಂದು ತಂಡವಿದ್ದು ಹಲವು ಕೆಲಸಗಳನ್ನು ತೆರೆಮರೆಯಲ್ಲಿ ಮತ್ತು ಮುನ್ನೆಲೆಯಲ್ಲಿ ನಿಭಾಯಿಸುತ್ತಿತ್ತಾದರೂ ಕಮ್ಯಾಂಡರ್ ಸ್ವತಃ ಅವರೇ ಆಗಿದ್ದರು. ಅವರನ್ನು ಸಿಎಂ ಪಟ್ಟದಿಂದ ಇಳಿಸುವ ಸಂದರ್ಭ ಬಂದ ಒಂದು ಘಟನೆಯನ್ನು ಇಲ್ಲಿ ಉದಾಹರಿಸಬಹುದು. ಮಾತಾಡಬೇಕು ಎಂದು ದೆಹಲಿಗೆ ಕರೆಸಿಕೊಂಡ ಬಿಜೆಪಿಯ ಹೈಕಮ್ಯಾಂಡ್ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕೆಂದು ಸ್ಪಷ್ಟವಾಗಿ ಹೇಳಿತು. ಅಡ್ವಾಣಿಯವರ ಮನೆಯಿಂದ ಬಿಎಸ್‍ವೈ ಸೀದಾ ಏರ್‌ಪೋರ್ಟಿಗೆ ಹೋದರು. ಎಲ್ಲಾ ಟಿವಿ ಚಾನೆಲ್‍ಗಳ ಕ್ಯಾಮೆರಾಗಳು ಅವರನ್ನೇ ಹಿಂಬಾಲಿಸುತ್ತಿದ್ದವು. ವಿಮಾನ ಹತ್ತಿದ ಮೇಲೆ ಮೊಬೈಲ್ ಫೋನ್ ಸಹಾ ಇರುವುದಿಲ್ಲ. ಆದರೆ ಅಲ್ಲಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಇಳಿಯುವ ಹೊತ್ತಿಗೆ ಅವರ ಬೆಂಗಳೂರು ನಿವಾಸದಲ್ಲಿ ಅರ್ಧದಷ್ಟು ಎಂಎಲ್‍ಎಗಳು ಸೇರಿಯಾಗಿತ್ತು.

ದೆಹಲಿಯಲ್ಲಿ ವಿಮಾನ ಹತ್ತುವ ಮುಂಚೆ ಕೋಪವಿದ್ದರೂ ಹೈಕಮಾಂಡ್ ಮಾತಿಗೆ ಬಾಗಬಹುದೆಂಬ ರೀತಿ ತೋರ್ಪಡಿಸಿದ್ದ ಬಿಎಸ್‍ವೈ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಉಲ್ಟಾ ಹೊಡೆದಿದ್ದರು. 2 ಗಂಟೆಗಳ ಕಾಲ ಫೋನ್ ಇರದಿದ್ದರೂ, ಅದಕ್ಕೆ ಮುಂಚಿನ ಅರ್ಧ ಗಂಟೆಯಲ್ಲಿ ಮುಂದೇನು ಮಾಡಬೇಕೆಂಬ ಕುರಿತು ತಮ್ಮ ಹಿಂಬಾಲಕರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದರು. ಬೆಂಗಳೂರಿಗೆ ಅವರು ಬಂದಿಳಿಯುವ ಹೊತ್ತಿಗೆ ಯಡಿಯೂರಪ್ಪನವರು ಬಂಡಾಯವೇಳಲು ಬೇಕಾದ ತಯಾರಿಯಾಗಿ ಹೋಗಿದೆ ಎಂಬ ವಾತಾವರಣ ನಿರ್ಮಾಣವಾಗಿತ್ತು. ಕೆಲ ಕಾಲದ ನಂತರ ಬಿಎಸ್‍ವೈ ರಾಜೀನಾಮೆ ಕೊಟ್ಟರಾದರೂ, ಅದನ್ನೂ ಒಂದು ರೋಡ್‍ಷೋ ಮೂಲಕ ಮಾಡಿದ್ದರು. 68 ವರ್ಷದವರಾಗಿದ್ದ ಅವರು ಪ್ರತಿಯೊಂದು ವಿಚಾರದಲ್ಲೂ ಚುರುಕುತನ ಮತ್ತು ಸಾಮಥ್ರ್ಯವನ್ನು ತೋರಿದ್ದರು.

ಆ ಷಾರ್ಪ್‍ನೆಸ್ ಈಗ ಎಲ್ಲಿ ಹೋಯಿತು?

ಈಗ ಯಡಿಯೂರಪ್ಪನವರಿಗೆ 77 ವರ್ಷ ವಯಸ್ಸು. ಈ ಸದ್ಯ ದೇವೇಗೌಡರು ಮತ್ತು ಖರ್ಗೆಯವರನ್ನು ಬಿಟ್ಟರೆ ರಾಜ್ಯದ ದೊಡ್ಡ ನಾಯಕರುಗಳಲ್ಲಿ ಇವರೇ ಸೀನಿಯರ್. ಆದರೆ, ಆ ಇಬ್ಬರು ಸೀನಿಯರ್ ನಾಯಕರುಗಳ ಷಾರ್ಪ್‍ನೆಸ್‍ಗೂ ಹೋಲಿಸಲಾಗದ ಪ್ರಮಾಣಕ್ಕೆ ಬಿಎಸ್‍ವೈ ಕುಸಿದಿದ್ದಾರೆ. ಯಾವ್ಯಾವ ಅಧಿಕಾರಿ ಯಾವ್ಯಾವ ಆಯಕಟ್ಟಿನ ಸ್ಥಾನದಲ್ಲಿ ನಿಯೋಜಿತರಾಗಿದ್ದಾರೆ ಎಂಬುದೇ ಮುಖ್ಯಮಂತ್ರಿಯ ನೆನಪಿನಲ್ಲಿ ಇಲ್ಲ. ಈ ಬರಹದ ಮೊದಲಲ್ಲಿ ಹೇಳಲಾದ ಘಟನೆ ಒಬ್ಬ ಅಧಿಕಾರಿಯ ಅನುಭವವಲ್ಲ. ಹಲವಾರು ಹಿರಿಯ ಅಧಿಕಾರಿಗಳು ಇದನ್ನು ನೋಡಿದ್ದಾರೆ ಮತ್ತು ಹಿರಿಯ ಅಧಿಕಾರಿಗಳ ವಲಯದಲ್ಲಿ ಇದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿ.

ಇದಕ್ಕೆ ಮೂರು ಕಾರಣಗಳಿರಬಹುದು ಎಂಬ ಊಹೆಯನ್ನು ಬಿಜೆಪಿ ವಲಯದಲ್ಲಿ ಹಲವರು ಒಪ್ಪುತ್ತಾರೆ. ಅಧಿಕಾರಿಗಳ ಜೊತೆಗೆ ಕ್ರಾಸ್‍ಚೆಕ್ ಮಾಡಿದರೆ ಹೆಚ್ಚಿನವರು ಅದನ್ನು ಖಚಿತಪಡಿಸಿದರು ಮತ್ತು ಅದಕ್ಕೆ ಬೇಕಾದ ಪುರಾವೆಗಳನ್ನು ಒದಗಿಸಿದರು. ಆ ಪುರಾವೆಗಳ ಹಿಂದೆ ಬಿದ್ದರೆ ಕರ್ನಾಟಕದ ಇತಿಹಾಸದ ಅತೀ ದೊಡ್ಡ ಭ್ರಷ್ಟಾಚಾರದ ಲಿಂಕುಗಳು ದೊರೆಯುವುದರಲ್ಲಿ ಸಂಶಯವಿಲ್ಲ. (ಒಂದು ಸಣ್ಣ ಹಗರಣವಷ್ಟೇ ಈ ಸಾರಿಯ ಸಂಚಿಕೆಯಲ್ಲಿ ವರದಿಯಾಗಿದೆ).

ಮೊದಲನೆಯ ಕಾರಣ: ವಯಸ್ಸು ಎಲ್ಲರನ್ನೂ ಒಂದೇ ರೀತಿ ಬಾಧಿಸುವುದಿಲ್ಲ. ಆದರೆ ಯಡಿಯೂರಪ್ಪನವರನ್ನು ಅದು ಮೆತ್ತಗೆ ಮಾಡಿರುವುದರಲ್ಲಿ ಸಂಶಯವೇ ಇಲ್ಲ. ಅವರ ನಡಿಗೆ ವಿಪರೀತ ನಿಧಾನ ಆಗಿಲ್ಲವಾದರೂ, ಅವರ ಮುಖವು ಭಾವರಹಿತವಾಗಿರುವುದು ಮತ್ತು ದೇಹದ ಚಲನವಲನಗಳು ನಿಧಾನವಾಗಿರುವುದು ಎದ್ದುಕಾಣುತ್ತದೆ. ಈ ದೌರ್ಬಲ್ಯ ಎಲ್ಲರಿಗೂ ಗೋಚರವಾಗಿದ್ದರಿಂದಲೇ ಮುಖ್ಯಮಂತ್ರಿಯಾದ ಕೆಲದಿನಗಳಲ್ಲೇ ಅವರಿಗೆ ವಯಸ್ಸಾಗಿದೆ ಎಂಬ ಮಾತು ಪದೇ ಪದೇ ಕೇಳಿಬಂದಿತು.

ವರ್ಗಾವಣೆ ಮತ್ತು ಹಣ ಜಮಾವಣೆಯ ಉಸ್ತುವಾರಿ ಸೂಪರ್ ಸಿಎಂರದ್ದು

ಎರಡನೆಯ ಕಾರಣ, ಸ್ವತಃ ಯಡಿಯೂರಪ್ಪನವರು ಮುಖ್ಯಮಂತ್ರಿಗಳೇ ಮಾಡಬೇಕಾದ ಪ್ರತಿಯೊಂದನ್ನೂ ನಿಭಾಯಿಸುತ್ತಿಲ್ಲ ಎಂಬುದು. ಅದರಲ್ಲಿ ಹಲವಾರು ಸಂಗತಿಗಳನ್ನು ನೋಡಿಕೊಳ್ಳುತ್ತಿರುವುದು ಅವರ ಎರಡನೆ ಸುಪುತ್ರ ವಿಜಯೇಂದ್ರ. ದೈನಂದಿನ ಆಡಳಿತಕ್ಕೆ ಯಡಿಯೂರಪ್ಪನವರೇ ಉಸ್ತುವಾರಿಯಾದರೂ, ಅಧಿಕಾರಿಗಳ ವರ್ಗಾವಣೆ ಮತ್ತು ಹಣ ಜಮಾವಣೆ ಮಾಡುತ್ತಿರುವುದು ಮಾತ್ರ ವಿಜಯೇಂದ್ರ. ಹಣ ಕೊಡುವ ಕೇಸುಗಳು, ಕೊಡದಿರುವ ಕೇಸುಗಳು ಎಲ್ಲವೂ ವಿಜಯೇಂದ್ರರ ಮುಖಾಂತರವೇ ನಿಭಾವಣೆಯಾಗುತ್ತವೆ.

ಹಣ ಪಡೆದುಕೊಳ್ಳುವುದರಲ್ಲೂ ಎರಡು ವಿಧವಿದೆ. ಒಂದು ಪ್ರೀಪೇಯ್ಡ್, ಇನ್ನೊಂದು ಪೋಸ್ಟ್‌ಪೇಯ್ಡ್. ಮೇಯಬಲ್ಲ ಜಾಗಗಳಿಗೆ ಮೊದಲೇ ಇಂತಿಷ್ಟು ಎಂದು ನೀಡಿ ಅಲ್ಲಿಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಪ್ರೀಪೇಯ್ಡ್. ವರ್ಗಾವಣೆ ಆದ ನಂತರ ಹಣ ಮಾಡುವ ಮಾರ್ಗಗಳನ್ನು ಹುಡುಕಿಕೊಂಡು ಸಂದಾಯ ಮಾಡುವುದು ಪೋಸ್ಟ್‌ಪೇಯ್ಡ್. ಪ್ರೀಪೇಯ್ಡ್ ಮಾಡಿ ಆಯಕಟ್ಟಿನ ಜಾಗಗಳಿಗೆ ಹಾಕಿಸಿಕೊಂಡ ಭ್ರಷ್ಟ ಅಧಿಕಾರಿಗಳಲ್ಲಿ ಕನಿಷ್ಠ ಒಂದು ವರ್ಷ ತಮ್ಮಿಂದ ಹಫ್ತಾ ವಸೂಲಿ ಮಾಡಲಾರರು ಎಂಬ ಭಾವದಲ್ಲಿದ್ದವರಿಗೆ ಶಾಕ್ ಕಾದಿತ್ತು. ಎರಡನೇ ತಿಂಗಳಿಂದಲೇ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್‌ಗಳಿಗೆ ವ್ಯತ್ಯಾಸವಿಲ್ಲದಂತಾಯಿತು. ನಿರ್ದಿಷ್ಟ ಇಲಾಖೆಗಳ ಕಾಮಗಾರಿಗಳನ್ನು ನಡೆಸುವ ಇಲ್ಲವೇ ಸರಬರಾಜುಗಳಿಗೆ ಕೈ ಹಾಕುವ ಎಲ್ಲಾ ಗುತ್ತಿಗೆದಾರರೂ ಮೊದಲು ಸೂಪರ್ ಸಿಎಂರನ್ನು ಭೇಟಿ ಮಾಡಿದ ನಂತರವೇ ಅಧಿಕಾರಿಯಿಂದ ಅನುಮೋದನೆ ಪಡೆದುಕೊಳ್ಳಬೇಕು. ಇಂದಿಗೂ ಯಡಿಯೂರಪ್ಪನವರೇ ಹಣಕಾಸು, ಇಂಧನ ಖಾತೆಯಲ್ಲದೇ ಬೆಂಗಳೂರು ಅಭಿವೃದ್ಧಿಯ ಖಾತೆಯನ್ನೂ ಹೊಂದಿದ್ದಾರೆ. ಇನ್ನೊಬ್ಬ ಸಚಿವರಿಗೆ ಬೆಂಗಳೂರು ಉಸ್ತುವಾರಿ ವಹಿಸಿದರೆ ಪಾಲು ಕೊಡಬೇಕಾಗುತ್ತದೆಂದು ಮುಖ್ಯಮಂತ್ರಿಯೇ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿಬಿಟ್ಟಿದ್ದಾರೆ.

ಕರ್ನಾಟಕದಲ್ಲಿ ಇಂದು ಚಿನ್ನದ ಮೊಟ್ಟೆ ಇಡುವ ಖಾತೆಗಳೆಂದರೆ ಇಂಧನ, ಬೆಂಗಳೂರು ಅಭಿವೃದ್ಧಿ, ಲೋಕೋಪಯೋಗಿ ಮತ್ತು ಜಲಸಂಪನ್ಮೂಲ. ಇದರಲ್ಲಿ ಮೊದಲೆರಡಕ್ಕೆ ಸ್ವತಃ ವಿಜಯೇಂದ್ರರೇ ಮಂತ್ರಿ ಎಂಬುದರಲ್ಲಿ ಯಾರಿಗೂ ಸಂಶಯವಿಲ್ಲ. ಈ ಇಲಾಖೆಗಳ ಪ್ರಮುಖ ಸ್ಥಾನಗಳಲ್ಲಿ ಕುಳಿತಿರುವವರು ಗುತ್ತಿಗೆದಾರರನ್ನು ಮೊದಲು ಅಲ್ಲಿ ಹೋಗಿ ಮಾತಾಡಿಕೊಂಡು ಬನ್ನಿ ಎಂದು ಕಳಿಸುತ್ತಾರೆ. ಇನ್ನು ಜಲಸಂಪನ್ಮೂಲ ಹೊಂದಿರುವ ರಮೇಶ್ ಜಾರಕಿಹೊಳಿಗೆ ಅವರ ಪಾಲು ಸಂದಾಯವಾದರೆ ಸಾಕು ಮತ್ತು ಲೋಕೋಪಯೋಗಿ ಇಲಾಖೆಯನ್ನು ಹೊಂದಿರುವ ಗೋವಿಂದ ಕಾರಜೋಳರಿಗೆ ಈ ಖಾತೆ ಕೊಟ್ಟಿದ್ದೇ ಡಮ್ಮಿ ಮಾಡಲು. ಅವರ ಪಾಲಿಗೆ ಇರುವ ಇನ್ನೊಂದು ಖಾತೆ ಸಮಾಜ ಕಲ್ಯಾಣ ಇಲಾಖೆಯ ಆದಾಯ ಮತ್ತು ಅದು ದಲಿತ ಸಮುದಾಯದೊಳಗೆ ತಂದುಕೊಡುವ ಸಂಪರ್ಕ ಹಾಗೂ ಪ್ರಭಾವ ಸಾಕು. ಇವೆಲ್ಲಾ ಖಾತೆಗಳಿಂದ ಬರುವ ಆದಾಯ ಮಾತ್ರವಲ್ಲದೇ, ಎಲ್ಲಾ ಪ್ರಮುಖ ವರ್ಗಾವಣೆಗಳನ್ನು ವಿಜಯೇಂದ್ರರೇ ನೋಡಿಕೊಳ್ಳುತ್ತಾರೆ. ಯಾವ ಪ್ರಮಾಣಕ್ಕೆಂದರೆ ಹಲವು ಇಲಾಖೆಗಳ ಪ್ರಮುಖ ವರ್ಗಾವಣೆಗಳು ಯಡಿಯೂರಪ್ಪನವರ ಮನಸ್ಸಿನಲ್ಲಿ ರಿಜಿಸ್ಟರ್ರೇ ಆಗಿರುವುದಿಲ್ಲ.

ಬಿಎಸ್‍ವೈ ಜಾಗಕ್ಕೆ ಯಾರು?

ಯಡಿಯೂರಪ್ಪನವರು ಮೆತ್ತಗಾಗಿರುವುದು ಮತ್ತು ಒಂದು ರೀತಿಯ ಅಯೋಮಯದ ಸ್ಥಿತಿಯಲ್ಲಿರಲು ಕಾರಣವಾಗಿರುವ ಮೂರನೆಯ ಸಂಗತಿಯೆಂದರೆ ಬಿಜೆಪಿ ಹೈಕಮಾಂಡ್. ಅದು 2009-2012ರಲ್ಲಿದ್ದಂತೆ ದುರ್ಬಲವಾಗಿಲ್ಲ. ಪ್ರಬಲವಾಗಿದೆ ಮತ್ತು ಹೈಕಮ್ಯಾಂಡ್‍ನಲ್ಲಿರುವ ಕರ್ನಾಟಕದ ಬಿ.ಎಲ್.ಸಂತೋಷ್ ಇವರ ನಿದ್ದೆಗೆಡಿಸಿದ್ದಾರೆ. ಈ ಸಂಗತಿ ಈಗಾಗಲೇ ಸಾಕಷ್ಟು ಚರ್ಚೆಯಾಗಿರುವುದರಿಂದ ಅದನ್ನು ವಿವರಿಸಲು ಹೋಗುವುದಿಲ್ಲ. ಕೇಂದ್ರವು ಕರ್ನಾಟಕಕ್ಕೆ ಹಣ ನೀಡದಿರಲು ಅಲ್ಲಿ ಕೂತಿರುವವರ ‘ಕೇಂದ್ರೀಕೃತ ಆಲೋಚನೆ’ಯ ಜೊತೆಗೆ ಬಿಎಸ್‍ವೈ ನಿಯಂತ್ರಿಸುವುದೂ ಒಂದು ಕಾರಣವಾಗಿದೆ. ಯಾವಾಗ ಸಾಧ್ಯವೋ ಆಗ ಕರ್ನಾಟಕದ ಸಿಎಂ ಪಟ್ಟದಲ್ಲಿ ಸಂತೋಷ್ ಅವರ ಮನುಷ್ಯ ಬಂದು ಕೂರಬೇಕೆಂಬುದು ಅವರಿಗೆ ಆದ್ಯತೆಯ ವಿಚಾರವಾಗಿದೆ. ಆ ಮನುಷ್ಯ ಯಾರು ಎಂಬುದು ಇನ್ನೂ ಬಗೆಹರಿದಿಲ್ಲ.

ಲಕ್ಷ್ಮಣ್ ಸವದಿಯಲ್ಲಿ ಸಿಎಂ ಮೆಟೀರಿಯಲ್ ಇದೆ ಎಂದು ಅಂದುಕೊಂಡಿರುವುದು ಸಾಧ್ಯವಿಲ್ಲ. ಆದರೆ ಬಿಎಸ್‍ವೈರನ್ನು ಇಳಿಸುವ ಸಂದರ್ಭ ಬಂದರೆ ಲಿಂಗಾಯಿತರನ್ನೇ ಮುಂದಿಟ್ಟುಕೊಳ್ಳಲು ನಿಷ್ಠಾವಂತರಾದ ಲಿಂಗಾಯಿತ ನಾಯಕರ ಅಗತ್ಯ ಬಿ.ಎಲ್.ಸಂತೋಷ್‍ರಿಗಿತ್ತು. ಮೂರು ಡಿಸಿಎಂಗಳನ್ನಿಟ್ಟುಕೊಂಡು, ಸಿಎಂ ಸ್ಥಾನಕ್ಕೆ ಪ್ರಹ್ಲಾದ್ ಜೋಷಿಯನ್ನು ಈ ಸ್ಥಾನಕ್ಕೆ ತರಬೇಕೆಂಬ ಇರಾದೆಯಿದೆ ಎಂಬ ಸುದ್ದಿ ಫೆಬ್ರವರಿಯಲ್ಲಿ ಉನ್ನತ ವಲಯಗಳಲ್ಲಿ ಚಲಾವಣೆಯಲ್ಲಿತ್ತು. ಯಡಿಯೂರಪ್ಪ ತನ್ನ ಉತ್ತರಾಧಿಕಾರಿಯನ್ನು ಆರಿಸಿಕೊಳ್ಳಬೇಕಾಗಿ ಬಂದರೆ ಅದು ವಿಜಯೇಂದ್ರರಲ್ಲದೇ ಮತ್ಯಾರೂ ಆಗಿರಲು ಸಾಧ್ಯವಿಲ್ಲ. ಆದರೆ ಹೈಕಮಾಂಡ್ ಮಟ್ಟಿಗೆ ಆ ಒಬ್ಬರು ಇನ್ನೂ ಫಿಕ್ಸ್ ಆಗಿಲ್ಲ.

ಆದರೆ ಯಡಿಯೂರಪ್ಪನವರ ವಿರುದ್ಧದ ಕಾರಸ್ತಾನವಂತೂ ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ನಡೆದ ಕತ್ತಿ ಔತಣಕೂಟವು ಅದರಲ್ಲಿ ಒಂದು ಭಾಗ ಅಷ್ಟೇ. ಅದಕ್ಕಿಂತಲೂ ದೊಡ್ಡ ಏಟು ಕೊಡಲು ಹೊರಟಿರುವುದು ಮೀಡಿಯಾಗಳ ಮೂಲಕ. ದಿನನಿತ್ಯ ಮೋದಿ ಭಜನೆ ಮಾತ್ರವಲ್ಲದೇ, ಬಿಜೆಪಿ ಪರ ಹಾಗೂ ಆರೆಸ್ಸೆಸ್‍ನ ದ್ವೇಷಪೂರಿತ ಅಜೆಂಡಾಕ್ಕೆ ಗಾಳಿ ಹಾಕುತ್ತಲೇ ಇರುವ ಮೀಡಿಯಾಗಳು ಇದ್ದಕ್ಕಿದ್ದಂತೆ ಯಡಿಯೂರಪ್ಪನವರ ವಿರುದ್ಧ ಜಿದ್ದಿಗೆ ಬಿದ್ದಂತೆ ಸ್ಟೋರಿ ಮಾಡುತ್ತಾರೆ. ಅದು ಕೆಲವೊಮ್ಮೆ ಚಾನೆಲ್‍ಗಳಿಗೆ ಬಿಎಸ್‍ವೈ ಕಾಸು ಬಿಚ್ಚುತ್ತಿಲ್ಲ ಎಂಬ ಕಾರಣಕ್ಕೋ ಅಥವಾ ಯಡಿಯೂರಪ್ಪನವರ ವಿರುದ್ಧದ ಕಾರಸ್ತಾನದ ಭಾಗವಾಗಿಯೋ ಎಂಬುದು ಗೊತ್ತಾಗುವುದಿಲ್ಲವಾದರೂ, ಎರಡೂ ಕೆಲಸ ಮಾಡುತ್ತಿರುವ ಸಾಧ್ಯತೆಗಳಂತೂ ಇದ್ದೇ ಇದೆ.

ಒಟ್ಟಿನಲ್ಲಿ ಚಿತ್ರಣ ಇನ್ನೂ ಸ್ಪಷ್ಟವಾಗಿರದಿದ್ದರೂ ದಿಕ್ಕಂತೂ ಸ್ಪಷ್ಟ. ಬಿಎಸ್‍ವೈ ಬಹಳ ದಿನಗಳ ಕಾಲ ಸಿಎಂ ಆಗಿ ಮುಂದುವರೆಯುವುದು ಅಸಾಧ್ಯ. ಅದಕ್ಕೆ ಇರುವ ಹೊರಗಿನ ಕಾರಣಗಳಿಗಿಂತ ಸಿಎಂ ಸ್ಥಾನಕ್ಕೆ ಅಗತ್ಯವಿರುವ ಷಾರ್ಪ್‍ನೆಸ್ ಅವರು ಕಳೆದುಕೊಂಡಿರುವುದೇ ಪ್ರಮುಖ ಕಾರಣವಾಗಿದೆ. ಅವರಿಗೆ ಈಗಾಗಲೇ ಆಡಳಿತ ಯಂತ್ರದ ಮೇಲಿನ ಹಿಡಿತ ತಪ್ಪಿಹೋಗಿದ್ದು, ಸಂಪುಟ ಸಚಿವರು ಒಂದು ಟೀಂ ಆಗಿ ಅದನ್ನು ನಿಭಾಯಿಸಲಾಗದಂತೆ ಸೂಪರ್‌ ಸಿಎಂ ಹಿಡಿತ ಬಿಗಿಯಾಗಿದೆ. ವಿಜಯೇಂದ್ರರನ್ನೂ ನಿಭಾಯಿಸಿ ಬಿಎಸ್‍ವೈರ ಜಾಗಕ್ಕೆ ಬಂದು ಕೂರಬಹುದಾದ ವ್ಯಕ್ತಿ ಹೈಕಮ್ಯಾಂಡ್‍ಗೆ ಇನ್ನೂ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಾಗುವ ಬೆಳವಣಿಗೆಗಳು ಚಿತ್ರಣವನ್ನು ಸ್ಪಷ್ಟಪಡಿಸಬಹುದೇ ಹೊರತು ಈಗಲೇ ‘ಬದಲಾವಣೆ’ ಏನಿರಬಹುದು ಎಂದು ಹೇಳುವುದು ಕಷ್ಟ.


ಇದನ್ನು ಓದಿ: ಕಡುದ್ವೇಷದ ಕಿಚ್ಚು ಎಂಬ ಹೊಸ ಭಯೋತ್ಪಾದಕ – ಡಿ. ಉಮಾಪತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...