ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಗೆ ಹಿಜಾಬ್ ತೆಗೆಯುವಂತೆ ಶಿಕ್ಷಕರೊಬ್ಬರು ಹೇಳಿಕೊಂಡಿದ್ದಾರೆ ಎಂಬ ಆರೋಪದ ನಡುವೆ, ರಾಜ್ಯದ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಈ ವಿವಾದದ ಬಗ್ಗೆ ಮಾತನಾಡಿದ್ದು, “ದೆಹಲಿಯಲ್ಲಿ ಇಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ” ಎಂದು ಹೇಳಿದ್ದಾರೆ.
ಹಿಜಾಬ್ ವಿಚಾರವನ್ನು ಒಂದು ವಿಭಾಗದ ಜನರು ರಾಜಕೀಯಗೊಳಿಸುತ್ತಿದ್ದಾರೆ ಮತ್ತು ದೆಹಲಿ ಶಿಕ್ಷಣ ಇಲಾಖೆಯು ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಸೋಡಿಯಾ, “ಎಎಪಿ ಸರ್ಕಾರವು ಎಲ್ಲಾ ಸಂಪ್ರದಾಯಗಳನ್ನು ಗೌರವಿಸುತ್ತದೆ. ಎಲ್ಲಾ ಧರ್ಮಗಳು ಮತ್ತು ಜಾತಿಗಳ ವಿದ್ಯಾರ್ಥಿಗಳನ್ನು ತನ್ನ ಶಾಲೆಗಳಲ್ಲಿ ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ವಿಷಯವನ್ನು ರಾಜಕೀಯಗೊಳಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಆಯೋಗ ಸುಮ್ಮನೇ ಕೂರಲ್ಲ: ಮಾಧ್ಯಮಗಳಿಗೆ ಎಚ್ಚರಿಕೆ
“ನಮ್ಮ ಶಾಲೆಗಳಲ್ಲಿ ಎಲ್ಲಾ ಧರ್ಮಗಳು ಮತ್ತು ಜಾತಿಗಳ ವಿದ್ಯಾರ್ಥಿಗಳನ್ನು ಘನತೆಯಿಂದ ನಡೆಸಿಕೊಳ್ಳಲಾಗುತ್ತದೆ. ನಮ್ಮ ಕಡೆಯಿಂದ ಹಿಜಾಬ್ ಧರಿಸಲು ಯಾವುದೇ ನಿರ್ಬಂಧವಿಲ್ಲ” ಎಂದು ರಾಜ್ಯದ ಶಿಕ್ಷಣ ಖಾತೆಯನ್ನು ಹೊಂದಿರುವ ಸಿಸೋಡಿಯಾ ತಿಳಿಸಿದ್ದಾರೆ.
ಮುಸ್ತಫಾಬಾದ್‌ನಲ್ಲಿರುವ ದೆಹಲಿಯ ಸರ್ಕಾರಿ ಶಾಲೆಯ ಅಪ್ರಾಪ್ತ ಬಾಲಕಿಯೊಬ್ಬರು, ಶಾಲೆಯಲ್ಲಿ ತನ್ನ ಸ್ಕಾರ್ಫ್ ಅನ್ನು ತೆಗೆದುಹಾಕಲು ಕೇಳಿಕೊಳ್ಳಲಾಗಿದೆ ಎಂದು ಆರೋಪಿಸಿದ ನಂತರ ಸಿಸೋಡಿಯಾ ಅವರ ಈ ಹೇಳಿಕೆಗಳು ಬಂದಿವೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಬಾಲಕಿ ಈ ಆರೋಪ ಮಾಡಿದ್ದರು ಎಂದು ವರದಿಯಾಗಿದೆ.
ಹಿಜಾಬ್ ಧರಿಸಿರುವ ಬಾಲಕಿಯೊಬ್ಬರು, “ಶಿಕ್ಷಕರು ಈ ಸ್ಕಾರ್ಫ್ ಧರಿಸಿ ತರಗತಿಗೆ ಬರಬೇಡಿ ಎಂದು ಹೇಳಿದರು. ನಿಮ್ಮ ತಾಯಿಯಂತೆ ಆಗಬೇಡಿ ಮತ್ತು ಸ್ಕಾರ್ಫ್ ಧರಿಸಿ ಶಾಲೆಗೆ ಬರಬೇಡಿ. ಶಾಲೆಯಲ್ಲಿ ಎರಡು-ಮೂರು ಹುಡುಗಿಯರಿಗೂ ಸ್ಕಾರ್ಫ್ ಅನ್ನು ತೆಗೆದುಹಾಕಲು ಹೇಳಲಾಗಿದೆ” ಎಂದು ಆರೋಪಿಸಿದ್ದಾರೆ.
ವಿವಾದದ ಬಗ್ಗೆ ಶಾಲಾ ಅಧಿಕಾರಿಗಳು ಬಾಲಕಿಯ ಪೋಷಕರೊಂದಿಗೆ ಚರ್ಚಿಸಿ, ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: Hijab Live | ಹಿಜಾಬ್ ಲೈವ್ | ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್