ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್ದಾಸ್ ವಿರುದ್ಧ ತಿರುವನಂತಪುರಂ ಸಿಟಿ ಸೈಬರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ದಂಗೆಗೆ ಪ್ರಚೋದನೆ ನೀಡುವುದು, ಸಾರ್ವಜನಿಕರಲ್ಲಿ ಭಯ ಅಥವಾ ಆತಂಕವನ್ನು ಸೃಷ್ಟಿಸಿ ಶಾಂತಿಗೆ ಭಂಗ ತರುವಂತ ಹೇಳಿಕೆಗಳನ್ನು ನೀಡುವುದು ಸೇರಿದಂತೆ ವಿವಿಧ ಅಪರಾಧಗಳ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 192 ಮತ್ತು 353(1)(b), ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯ ಸೆಕ್ಷನ್ 66 ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120(o) ಅಡಿಯಲ್ಲಿ FIR ದಾಖಲಿಸಲಾಗಿದೆ.
ಜಂತರ್ ಮಂತರ್ ಪ್ರತಿಭಟನಾಕಾರರ ಕುರಿತು ಟಿ.ಜಿ. ಮೋಹನ್ದಾಸ್ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಆರ್ಎಸ್ಎಸ್ (RSS) ಅಂತರ ಕಾಯ್ದುಕೊಂಡಿದೆ.
ಬಿಜೆಪಿಯ ಬೌದ್ಧಿಕ ಪ್ರಕೋಷ್ಟದ (Intellectual Cell) ಮಾಜಿ ಮುಖ್ಯಸ್ಥರಾಗಿರುವ ಮೋಹನ್ದಾಸ್, 30 ನಿಮಿಷಗಳ ವಿಡಿಯೋದಲ್ಲಿ ನೀಟ್ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ಹಾಗೂ ಇತರ ಪ್ರಮುಖ ವಿರೋಧ ಪಕ್ಷದ ಸಂಘಟನೆಗಳು ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯನ್ನು ತಾವು ಹೇಗೆ ಹತೋಟಿಗೆ ತರುತ್ತಿದ್ದರು ಎಂಬುದರ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ.
ಯೂಟ್ಯೂಬ್ ವೀಡಿಯೊದಲ್ಲಿ ಮೋಹನ್ದಾಸ್, ದೆಹಲಿಯ ವಿದ್ಯಾರ್ಥಿ ಪ್ರತಿಭಟನೆಯು “ಸಾಮೂಹಿಕ ಅತ್ಯಾಚಾರದಂತಹ ಘಟನೆಗಳಿಗೆ ಕಾರಣವಾಗಬಹುದು” ಎಂದು ಹೇಳಿದ್ದಲ್ಲದೆ, “ಈ ಪ್ರತಿಭಟನೆಯಲ್ಲಿ ಭಾಗವಹಿಸುವವರು ಅತ್ಯಾಚಾರವನ್ನು ಇಷ್ಟಪಡುತ್ತಾರೆ ಮತ್ತು ಅತ್ಯಾಚಾರಕ್ಕೊಳಗಾಗುವುದನ್ನು ಆನಂದಿಸುವ ಹೆಣ್ಣುಮಕ್ಕಳು ಅಲ್ಲಿದ್ದಾರೆ, ಆದ್ದರಿಂದ ಯಾವುದೇ ದೂರುಗಳು ಬರುವುದಿಲ್ಲ” ಎಂಬ ಅತ್ಯಂತ ಹೀನಾಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ, “ನಾನೇನಾದರೂ ಆಡಳಿತದ ಉಸ್ತುವಾರಿ ಹೊಂದಿದ್ದರೆ, ಕರ್ಫ್ಯೂ ವಿಧಿಸಿ ಪ್ರತಿಭಟನಾಕಾರರನ್ನು ಚದುರಲು ಆದೇಶಿಸುತ್ತಿದ್ದೆ. ಅವರು ನಿರಾಕರಿಸಿದರೆ ‘ಗುಂಡಿನ ದಾಳಿ’ (Open Fire) ನಡೆಸುತ್ತಿದ್ದೆ. ಇದರಿಂದ ಕೆಲವು ಜನರು ಸಾಯಬಹುದು ಅಥವಾ ಶಾಶ್ವತವಾಗಿ ಗಾಯಗೊಳ್ಳಬಹುದು, ಆದರೆ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತದೆ ಮತ್ತು ಶವಗಳನ್ನು ಆಸ್ಪತ್ರೆಗೆ ರವಾನಿಸಬಹುದು” ಎಂದು ಅವರು ಹೇಳಿರುವುದು ವೀಡಿಯೊದಲ್ಲಿದೆ ಎನ್ನಲಾಗಿದೆ.
ಈ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ಮತ್ತು ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ (AISF) ನಾಯಕರು ಅವರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ.


